Tag: ಒಕ್ಕಲಿಗ ಸಮುದಾಯ

  • ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ: ಬೊಮ್ಮಾಯಿ

    ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ: ಬೊಮ್ಮಾಯಿ

    ಬೆಂಗಳೂರು: ಇಂದು ಒಕ್ಕಲಿಗ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

    ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರು ಸಹ ಶಾಂತಿ ಕಾಪಾಡಿದ್ದಾರೆ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

    ನಮ್ಮ ನಗರದ ಪೊಲೀಸ್ ಇಲಾಖೆ ಪ್ರತಿಭಟನೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದೆ. ಇದು ನಮ್ಮ ಪೊಲೀಸ್ ಇಲಾಖೆಯ ದಕ್ಷತೆಯನ್ನು ತೋರಿಸುತ್ತದೆ. ಅಶೋಕ ಪಿಲ್ಲರ್ ಬಳಿ ಕಲ್ಲೆಸೆತ ಆಗಿದೆ ಎನ್ನುತ್ತಾರೆ. ಆದರ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಒಟ್ಟಿನಲ್ಲಿ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಇದೇ ವೇಳೆ ಬಿಜೆಪಿಯಿಂದ ಒಕ್ಕಲಿಗ ನಾಯಕರ ಟಾರ್ಗೆಟ್ ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಸಮುದಾಯದವರೂ ಈಗ ಮೆಚ್ಯೂರ್ ಆಗಿದ್ದಾರೆ. ಯಾವ ಸಮುದಾಯವನ್ನೂ ತಪ್ಪು ದಾರಿಗೆ ಎಳೆಯಕ್ಕಾಗಲ್ಲ. ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳು ಆಗುತ್ತಿರುತ್ತವೆ. ಆದರೆ ಸಮಾಜ ಜಾಗೃತವಾಗಿದೆ. ಈ ರೀತಿಯ ಪ್ರಯತ್ನಗಳಿಗೆ ಸಮಾಜ ಬಲಿಯಾಗಲ್ಲ. ಸಮಾಜ ಎಲ್ಲವನ್ನೂ ಎದುರಿಸುವ ಶಕ್ತಿ ಹೊಂದಿದೆ. ಯಾರೂ ಯಾರನ್ನೂ ಯಾರ ಮೇಲೂ ಎತ್ತಿ ಕಟ್ಟೋಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಗುಜರಾತ್‍ನಲ್ಲಿ ಸಂಚಾರಿ ನಿಯಮಗಳಿಗೆ ದಂಡದ ಪ್ರಮಾಣ ಇಳಿಕೆ ವಿಚಾರವಾಗಿ ಮಾತನಾಡಿದ ಬೊಮ್ಮಾಯಿ, ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಚಾರ ಸಿಎಂ ಗಮನದಲ್ಲಿದೆ. ಆ ಎಲ್ಲದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಾರೆ. ದುಬಾರಿ ದಂಡ ಕಡಿತದ ಬಗ್ಗೆ ಸಿಎಂ ಚಿಂತನೆ ಮಾಡುತ್ತಿದ್ದಾರೆ. ಅದರ ಬಗ್ಗೆ ಅವರೇ ಸ್ಪಷ್ಟನೆ ಕೊಡಲಿದ್ದಾರೆ ಎಂದು ತಿಳಿಸಿದರು.

  • ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶವಾಗಬೇಕು ತೀರ್ಮಾನ ಮಾಡಲಿ: ಸಿ.ಟಿ ರವಿ

    ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶವಾಗಬೇಕು ತೀರ್ಮಾನ ಮಾಡಲಿ: ಸಿ.ಟಿ ರವಿ

    ಮೈಸೂರು: ಒಕ್ಕಲಿಗ ಸಮುದಾಯದವರಿಗೆ ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದವರಿಗೆ ಶಾಂತವೇರಿ ಗೋಪಾಲಗೌಡರು, ಕುವೆಂಪು, ಕೆಂಗಲ್ ಹನುಮಂತಯ್ಯ ಅವರಂಥ ಮಹನೀಯರು ಆದರ್ಶರಾಗಬೇಕೋ ಅಥವಾ ಇನ್ಯಾರು ಆದರ್ಶ ಆಗಬೇಕು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಪ್ರತಿಭಟನಾಕಾರರಿಗೆ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.

    ಸತ್ಯವಂತರಿಗೆ ಇದು ಕಾಲವಲ್ಲ. ನಾನು ಸತ್ಯ ಹೇಳಿದರೆ ಕೆಲವರಿಗೆ ಅಪಥ್ಯವಾಗುತ್ತದೆ. ಇ.ಡಿ.ಗೆ ಯಾವ ಜಾತಿ ಇದೆ, ಯಾವ ಪಕ್ಷ ಇದೆ. ಇಡಿ ಹುಟ್ಟಿಹಾಕಿದವರು ಯಾರು? ಇಡಿ ಹುಟ್ಟುಹಾಕಿದ್ದು ಭಾರತೀಯ ಜನತಾ ಪಾರ್ಟಿ ಅಲ್ಲ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಬಂಧ ಇಡಿ ತನಿಖೆ ಮಾಡುತ್ತಿದೆ. ತನಿಖೆ ಮಾಡೋದೇ ತಪ್ಪು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

    ಇದೇ ವೇಳೆ ಟ್ರಾಫಿಕ್ ರೂಲ್ಸ್ ಬಗ್ಗೆ ಮಾತನಾಡಿ, ತಪ್ಪು ಮಾಡದೇ ಇರುವವರಿಗೆ ದಂಡದ ಪ್ರಶ್ನೆ ಬರೋದಿಲ್ಲ. ತಪ್ಪು ಮಾಡುವವರಿಗೆ ಟ್ರಾಫಿಕ್ ದಂಡ ಬೀಳುತ್ತೆ. ನಾನೂ ಮೊದಲು ಸೀಟ್ ಬೆಲ್ಟ್ ಹಾಕುತ್ತಿರಲಿಲ್ಲ. ಟ್ರಾಫಿಕ್ ಫೈನ್ ಜಾಸ್ತಿಯಾದ ಮೇಲೆ ಕಡ್ಡಾಯವಾಗಿ ಹಾಕುತ್ತಿದ್ದೇನೆ. ನಾನು ತಪ್ಪು ಮಾಡಿದರೆ ಮೊದಲು ನನ್ನಂಥವರಿಗೆ ದಂಡ ಹಾಕಬೇಕು. ಮಿನಿಸ್ಟರ್ ಇರಲಿ, ಸಿಎಂ ಇರಲಿ ಎಲ್ಲರಿಗೂ ದಂಡ ಹಾಕಬೇಕು ಎಂದು ತಿಳಿಸಿದರು.

    ದಂಡದ ಹಣದಲ್ಲಿ ರಸ್ತೆ ರಿಪೇರಿ ಮಾಡಬೇಕೆಂಬ ಕೂಗು ಎದ್ದಿದೆ. ಈಗ ಕೂಗು ಎತ್ತಿರುವವರು ಮೊದಲು ದೇಶದಲ್ಲಿ ಎಷ್ಟು ಜನ ತೆರಿಗೆ ಕಟ್ಟುತ್ತಿದ್ದಾರೆ ಎಂದು ನೋಡಿಕೊಳ್ಳಲಿ. ಅಮೆರಿಕಾದಲ್ಲಿ ಶೇ. 97ರಷ್ಟು ಜನ ತೆರಿಗೆ ಕಟ್ಟುತ್ತಾರೆ. ನಮ್ಮಲ್ಲಿ ತೆರಿಗೆ ಕದಿಯುವುದು ಹೇಗೆ ಎಂದು ನೂರು ಮಾರ್ಗ ಹುಡುಕುತ್ತಾರೆ. ಆದರೂ ಅಮೆರಿಕಾದಂತಹ ರಸ್ತೆಗಳನ್ನು ಬಯಸುತ್ತಾರೆ. ಮನಸ್ಥಿತಿ ಬದಲಾಗದ ಹೊರತು ಪರಿಸ್ಥಿತಿ ಬದಲಾಗಲ್ಲ ಎಂದು ಕೇಂದ್ರ ಸರ್ಕಾರದ ದಂಡ ಪರಿಷ್ಕರಣೆಯನ್ನು ಸಿಟಿ ರವಿ ಸಮರ್ಥಿಸಿಕೊಂಡರು.