Tag: ಒಕ್ಕಲಿಗರ ಸಂಘ

  • ಒಕ್ಕಲಿಗರನ್ನು ಎದುರು ಹಾಕೊಂಡ್ರೆ ಸರ್ಕಾರ ಬಿದ್ದಿರೋದಕ್ಕೆ ಇತಿಹಾಸವಿದೆ: ಕೆಂಚಪ್ಪ ಗೌಡ

    ಒಕ್ಕಲಿಗರನ್ನು ಎದುರು ಹಾಕೊಂಡ್ರೆ ಸರ್ಕಾರ ಬಿದ್ದಿರೋದಕ್ಕೆ ಇತಿಹಾಸವಿದೆ: ಕೆಂಚಪ್ಪ ಗೌಡ

    – ಸಿಎಂ ಹೇಳಿಕೆ ಬೆನ್ನಲ್ಲೇ ಜಾತಿಗಣತಿ ವಿರುದ್ಧ ವಾರ್ ಶುರು ಮಾಡಿದ ಒಕ್ಕಲಿಗರ ಸಂಘ

    ಬೆಂಗಳೂರು: ಒಕ್ಕಲಿಗರನ್ನು ಎದುರು ಹಾಕಿಕೊಂಡರೆ ಎಷ್ಟು ಸರ್ಕಾರ ಬಿದ್ದಿದೆ ಎಂಬ ಇತಿಹಾಸವಿದೆ. ಇಲ್ಲದಿದ್ದರೆ ನಾವು ಕಾನೂನು ರೀತಿಯಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಡಿಸಿಎಂ ಡಿಕೆಶಿ ಬೆಂಬಲಿಗ, ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ (Kenchappa Gowda)  ಎಚ್ಚರಿಕೆ ನೀಡಿದ್ದಾರೆ.

    ಸಿಎಂ ಸಿದ್ದರಾಮಯ್ಯ ಜಾತಿಗಣತಿಗೆ ವರದಿ ಹಾಗೂ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಕುರಿತು ನೀಡಿದ ಹೇಳಿಕೆ ಬೆನ್ನಲ್ಲೇ ಜಾತಿಗಣತಿ ವಿರುದ್ಧ ಒಕ್ಕಲಿಗ ಸಂಘ ವಾರ್ ಶುರು ಮಾಡಿದೆ.ಇದನ್ನೂ ಓದಿ: ‘ಪುಷ್ಪ 2’ ವಿವಾದದ ನಡುವೆ ಬನ್ಸಾಲಿ ಕಚೇರಿಯಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್

    ನಗರದಲ್ಲಿ ಒಕ್ಕಲಿಗ ಸಂಘದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವೂ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಹತ್ತು ವರ್ಷ ಆಗಿದೆ. ಜಾತಿಗಣತಿಗೆ ವರದಿ ಹಾಗೂ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊನ್ನೆ ಹೇಳಿಕೆ ಕೊಟ್ಟಿದ್ದಾರೆ. ಇವರು ಮನೆ ಮನೆ ಸಮೀಕ್ಷೆ ಸರಿಯಾಗಿ ಮಾಡಿಲ್ಲ. ಜಾತಿಗಣತಿ ಸಮೀಕ್ಷೆ ಲೋಪದೋಷದಿಂದ ಕೂಡಿದೆ. 5 ಕೋಟಿ 98 ಲಕ್ಷ ಜನ ಇದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಆದರೆ ಈಗ 7 ಕೋಟಿ ಜನಸಂಖ್ಯೆ ಇದೆ ಎಂದು ಮಾಧ್ಯಮದಲ್ಲಿ ಬರುತ್ತಿದೆ. 114 ಉಪಪಂಗಡಗಳು ನಮ್ಮಲ್ಲಿದೆ. ಆದರೆ ಇವುಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಜ.12 ರಂದು ಭಾನುವಾರ 12 ಗಂಟೆಗೆ ಬೆಂಗಳೂರು ಕಿಮ್ಸ್ ಆವರಣದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಸಮುದಾಯದ ಎಲ್ಲಾ ಶಾಸಕರು ಹಾಗೂ ಸಚಿವರ ಸಭೆ ನಡೆಯಲಿದೆ. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ನಂಜಾವದೂತ ಸ್ವಾಮೀಜಿ ಕೂಡ ಭಾಗಿಯಾಗಲಿದ್ದಾರೆ. ಒಕ್ಕಲಿಗ ಸ್ವಾಮೀಜಿ, ಎಲ್ಲಾ ರಾಜಕೀಯ ಮುಖಂಡರು ಸೇರಿ ಸಭೆ ನಡೆಸಲಿದ್ದೇವೆ ಎಂದರು.

    ವೀರಶೈವ ಮಹಾಸಭಾ ಕೂಡ ಒಟ್ಟಿಗೆ ಇದೆ. ಅವರ ಜೊತೆಯೂ ನಾವು ಮಾತಾನಾಡಿದ್ದೇವೆ. ಒಟ್ಟಾಗಿ ಹೋರಾಟ ಮಾಡುತ್ತೇವೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಆಗಬೇಕು. ಆದರೆ ಈ ಸಮೀಕ್ಷೆ ನಡೆದು ಈಗ ಹತ್ತು ವರ್ಷ ಆಗಿದೆ. ಇದು ಕಾನೂನುಬಾಹಿರ. ಸಭೆಯಲ್ಲಿ ನಿರ್ಮಲಾನಂದ ಸ್ವಾಮೀಜಿ ಕೂಡ ಭಾಗಿಯಾಗಲಿದ್ದಾರೆ. ನಮ್ಮ ನಾಯಕರು ಚಕಾರವೆತ್ತುತ್ತಿಲ್ಲ ಹೀಗಾಗಿ ಒಕ್ಕಲಿಗ ನಾಯಕರು ಪ್ರಶ್ನೆ ಮಾಡಬೇಕು ಎಂಬ ಕಾರಣಕ್ಕೆ ಸಭೆ ಕರೆದಿದ್ದೇವೆ. ವೀರಶೈವ ಮುಖಂಡರು, ಸ್ವಾಮೀಜಿ ಜೊತೆ ಕೂಡ ಮಾತಾನಾಡಿ, ಶೀಘ್ರದಲ್ಲಿಯೇ ಜಂಟಿ ಸಭೆಯನ್ನು ಕರೆಯಲಿದ್ದೇವೆ ಎಂದರು.

    ಜಾತಿಗಣತಿ ಬಗ್ಗೆ ಸಿಎಂ ಪಟ್ಟು ಹಿಡಿದಿರಬಹುದು ಆದರೆ ನಮ್ಮ ನಾಯಕರ ಧ್ವನಿಯೂ ಮಂಕಾಗಿಲ್ಲ. ನಿರ್ಮಲಾನಂದ ಸ್ವಾಮೀಜಿ ಮುಖಂಡತ್ವದಲ್ಲಿ ಜ.12 ರಂದು ಸಭೆ ನಡೆಯಲಿದ್ದು, ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ಡಿಸಿಎಂ ಡಿಕೆಶಿ, ಆರ್.ಅಶೋಕ್ ,ಅಶ್ಚಥ್ ನಾರಾಯಣ್ ಸೇರಿದಂತೆ ಎಲ್ಲಾ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಪದಚ್ಯುತಿ ಮಾಡ್ತೀವಿ, ಇಳಿಸ್ತೀವಿ ಅಂದ್ರೆ ನಡೆಯಲ್ಲ: ರಾಜಣ್ಣ ಗುಡುಗು

  • ಈ ಬಾರಿ ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು: ಉಮಾಪತಿ ಶ್ರೀನಿವಾಸ ಗೌಡ

    ಈ ಬಾರಿ ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು: ಉಮಾಪತಿ ಶ್ರೀನಿವಾಸ ಗೌಡ

    ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಸಿಎಂ ಆಗಲು ಬಯಸಿದರೆ ಅವರು ಒಬ್ಬೊಂಟಿಯಲ್ಲ ಜೊತೆಗೆ ನಾವು ನಿಲ್ಲುತ್ತೇವೆ ಎಂದು ರಾಜ್ಯ ಒಕ್ಕಲಿಗರ ಸಂಘದ (Vokkaliga Sangha ) ನಿರ್ದೇಶಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

    ಈ ಬಾರಿ ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು. ಅದಕ್ಕಾಗಿ ಡಿ.ಕೆ ಶಿವಕುಮಾರ್ ಅವರಿಗೆ ಬೆಂಬಲ ಸೂಚಿಸುತ್ತೇವೆ. ಅವರಿಗೆ ಸಿಎಂ ಆಗಲು ಅವಕಾಶ ಇದುವರೆಗೂ ಸಿಕ್ಕಿಲ್ಲ. ಕಾಂಗ್ರೆಸ್ (Congress) ಪಕ್ಷದ ಏಳಿಗೆಗಾಗಿ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಈಗಾಗಲೇ ಸಿಎಂ ಆಗಿದ್ದಾರೆ. ಆದರೆ ಡಿಕೆಶಿ ಇದುವರೆಗೂ ಸಿಎಂ ಆಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

    ಶಿವಕುಮಾರ್ ಅವರು ನಮ್ಮ ಸಮುದಾಯದ ಧ್ವನಿಯಾಗಿದ್ದಾರೆ. ನಮ್ಮ ಸಮುದಾಯಕ್ಕೆ ಗೌರವ ಸಿಗಬೇಕಾದರೆ, ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯಲೇ ಬೇಕು. ಇದು ಮನವಿಯೇ ಹೊರತು ಬೇಡಿಕೆ ಅಲ್ಲ. ಅವರಿಗೆ ಸಿಎಂ ಸ್ಥಾನ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಮುದಾಯದ ಐವರಿಗೆ ಸಚಿವ ಸ್ಥಾನ, 1 ಡಿಸಿಎಂ ಕೊಡಿ – ಮುಸ್ಲಿಂ ಮುಖಂಡರ ಆಗ್ರಹ

  • ಉರಿಗೌಡ, ನಂಜೇಗೌಡ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

    ಉರಿಗೌಡ, ನಂಜೇಗೌಡ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

    ಬೆಂಗಳೂರು: ಇತ್ತೀಚೆಗೆ ಕೆಲವರು ಉರಿಗೌಡ ಮತ್ತು ನಂಜೇಗೌಡ (Urigowda-Nanjegowda) ಎಂಬ ಒಕ್ಕಲಿಗರ ಹೆಸರು ತೆಗೆದುಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ (C.N.Balakrishna) ಖಂಡಿಸಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತಿಹಾಸದಲ್ಲಿ ಎಲ್ಲಿಯೂ ಇಲ್ಲದ ವ್ಯಕ್ತಿಗಳನ್ನು ಸೃಷ್ಟಿಸಿ ಈಗ ಪ್ರಚಾರ ಮಾಡುತ್ತಿರುವುದರ ಹುನ್ನಾರವೇನು ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ʻಉರಿಗೌಡ-ನಂಜೇಗೌಡʼ ಕಾಲ್ಪನಿಕ ಪಾತ್ರ ಅಂದೋರು ನಮ್ಮನ್ನ ಕ್ಷಮೆ ಕೇಳಬೇಕು – ಸಿ.ಟಿ ರವಿ

    ಈ ರೀತಿಯ ಸುಳ್ಳಿನ ಮೂಲಕ ಒಕ್ಕಲಿಗ ಸಮುದಾಯವನ್ನು ಅವಮಾನಿಸುವ ಪ್ರಯತ್ನವನ್ನು ಒಕ್ಕಲಿಗ ಸಮುದಾಯ ಸಹಿಸುವುದಿಲ್ಲ. ಬಹುಶಃ ಹತ್ತಿರದಲ್ಲಿರುವ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಹೀಗೆ ಮಾಡುತ್ತಿರುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಸ್ವಾಭಿಮಾನಿ ಒಕ್ಕಲಿಗ ಸಮುದಾಯ ಸುಳ್ಳುಗಳಿಗೆ ಮಾರುಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

    ಈ ಸುಳ್ಳು ಪ್ರಚಾರದ ಮೂಲಕ ಒಕ್ಕಲಿಗರನ್ನು ಅವಮಾನಿಸುವ ಕುತಂತ್ರದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಸರ್ಕಾರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ರಾಜ್ಯ ಸರ್ಕಾರವು ಈ ರೀತಿ ಸುಳ್ಳು ಸುದ್ದಿ ಹಬ್ಬುವಿಕೆಯನ್ನು ತಡೆಯದಿದ್ದರೆ ಆದಿಚುಂಚನಗಿರಿ ಸ್ವಾಮೀಜಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಮತ್ತು ಸ್ಪಟಿಕಪುರಿ ಸ್ವಾಮೀಜಿ ಶ್ರೀ ನಂಜಾವಧೂತ ಸ್ವಾಮೀಯವರ ನೇತೃತ್ವದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ನಗರದಲ್ಲಿನ ಬಡ ಒಕ್ಕಲಿಗರಿಗೆ ಇಡಬ್ಲ್ಯೂಎಸ್‌ ಪ್ರಮಾಣ ಪತ್ರ ಕೊಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ ಸಿ.ಎನ್.ಬಾಲಕೃಷ್ಣ ಅವರು, ಇದೇ ವೇಳೆಯಲ್ಲಿ ಒಕ್ಕಲಿಗರಿಗೆ ಅವರ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ಜಾರಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

    ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ರಾಜ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡ ಹೆಸರು ರಾಜಕೀಯ ಸ್ವರೂಪ ಪಡೆದುಕೊಂಡಿವೆ. ಈ ಇಬ್ಬರೂ ಟಿಪ್ಪುವನ್ನು ಹತ್ಯೆ ಮಾಡಿದ್ದರು ಎಂದು ಬಿಜೆಪಿ ನಾಯಕರು ಬಿಂಬಿಸಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಗಿಮಿಕ್‌. ವೋಟ್‌ ಬ್ಯಾಂಕ್‌ಗಾಗಿ ಉರಿಗೌಡ-ನಂಜೇಗೌಡ ಹೆಸರನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

  • ರಾಜ್ಯ ಒಕ್ಕಲಿಗ ಸಂಘದಿಂದಲೇ ಅಧ್ಯಕ್ಷ ಬೆಟ್ಟೇಗೌಡ ಪದಚ್ಯುತಿ

    ರಾಜ್ಯ ಒಕ್ಕಲಿಗ ಸಂಘದಿಂದಲೇ ಅಧ್ಯಕ್ಷ ಬೆಟ್ಟೇಗೌಡ ಪದಚ್ಯುತಿ

    ಬೆಂಗಳೂರು: ರಾಜ್ಯ ಒಕ್ಕಲಿಗ ಸಂಘದ 19 ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ ಹಿನ್ನೆಲೆಯಲ್ಲಿ ಸಂಘದಿಂದಲೇ ಅಧ್ಯಕ್ಷ ಬೆಟ್ಟೇಗೌಡ ಅವರನ್ನು ಪದಚ್ಯುತಿಗೊಳಿಸಲಾಗಿದೆ.

    ಚಾಮರಾಜಪೇಟೆಯಲ್ಲಿರುವ ಒಕ್ಕಲಿಗ ಸಂಘದಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕರು, ಪದಾಧಿಕಾರಿಗಳು ಸೇರಿ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದಾರೆ. ಇದೇ ತಿಂಗಳ 18 ರಂದು ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಂಘದ ನಿರ್ದೇಶಕರು ಸಹಿ ಹಾಕಿದ್ದರು.

    ರಾಜ್ಯ ಒಕ್ಕಲಿಗ ಸಂಘಕ್ಕೆ 35 ನಿರ್ದೇಶಕರಿದ್ದು 7 ದಿನಗಳೊಳಗೆ ವಿಶ್ವಾಸಮತ ಸಾಬೀತಿಗೆ ವಿರೋಧಿ ಬಣ ಪಟ್ಟು ಹಿಡಿದಿತ್ತು. ಹೀಗಾಗಿ ಇಂದು ವಿಶ್ವಾತಮತ ಸಾಬೀತು ಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಬೆಟ್ಟೇಗೌಡ ಅವರನ್ನು ಪದಚ್ಯುತಿಗೊಳಿಸಲಾಗಿದೆ. ಅಗಸ್ಟ್ 7ರಂದು ಹೊಸ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು ಹಂಗಾಮಿ ಕಾರ್ಯಧ್ಯಕ್ಷರಾಗಿ ನಾರಾಯಣ ಮೂರ್ತಿ ನೇಮಕಗೊಂಡಿದ್ದಾರೆ.

    ಹಿಂದಿನ ಅಧ್ಯಕ್ಷರಾಗಿದ್ದ ಡಾ. ಅಪ್ಪಾಜಿಗೌಡ ಅವರನ್ನು 2017ರಲ್ಲಿ ಹುದ್ದೆಯಿಂದ ಪದಚ್ಯುತಗೊಳಿಸಿ ನಿರ್ಣಯ ಕೈಗೊಂಡ ಪರಿಣಾಮ ಬೆಟ್ಟೇಗೌಡ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆದರೆ ಈಗ ಬೆಟ್ಟೇಗೌಡ ಪದಚ್ಯುತಿಗೊಳ್ಳುವುದರೊಂದಿಗೆ ಒಂದುವರೆ ವರ್ಷದ ಆಡಳಿತ ಅಂತ್ಯಗೊಂಡಿದೆ.

  • ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಹಾಬಿರುಕು!

    ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಹಾಬಿರುಕು!

    ಬೆಂಗಳೂರು: ಸದಾ ಒಂದಲ್ಲೊಂದು ವಿಚಾರದಲ್ಲಿ ಸುದ್ದಿಯಾಗಿರೊ ರಾಜ್ಯ ಒಕ್ಕಲಿಗರ ಸಂಘದಲ್ಲಿ ಇದೀಗ ಮಹಾಬಿರುಕು ಬಿಟ್ಟಿದೆ.

    ಅಂದು ಸಂಘದ ಅಧ್ಯಕ್ಷರಾಗಿದ್ದ ಡಾ.ಅಪ್ಪಾಜಿಗೌಡರನ್ನ ಕೆಳಗಿಸಲು ಬಳಸಿದ ರಣತಂತ್ರ, ಈಗಿನ ಅಧ್ಯಕ್ಷರಿಗೆ ಮುಳುವಾಗಿ ಪರಿಣಮಿಸಿದೆ ಎನ್ನಲಾಗಿದೆ. ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಜ್ಜಾಗಿದ್ದು, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಬೆಟ್ಟೇಗೌಡ ಮತ್ತು ಅವರ ತಂಡದ ವಿರುದ್ಧ ತಿರುಗಿಬಿದ್ದಿದ್ದಾರೆ.

    ಸಂಘದ ಅಧ್ಯಕ್ಷ ಡಿಎನ್ ಬೆಟ್ಟೇಗೌಡ, ಕಾರ್ಯದರ್ಶಿ ಪ್ರೋ ಎಂ ನಾಗರಾಜ್, ಖಜಾಂಚಿ ಡಿಸಿಕೆ ಕಾಳೇಗೌಡರಿಂದಲೇ ಒಕ್ಕಲಿಗ ಸಂಘದಲ್ಲಿ ಭಾರಿ ಸಮಸ್ಯೆ ಎದುರಾಗಲು ಕಾರಣವಾಗುತ್ತಿದೆಯಂತೆ. 270 ಜನರನ್ನು ಸಂಘಕ್ಕೆ ನೇಮಕ ಮಾಡಿಕೊಳ್ಳಲು ಸಂಘದ ಸಭೆಯಲ್ಲಿ ತೀರ್ಮಾನವಾಗಿತ್ತು. ಆದ್ರೆ 700ಕ್ಕೂ ಹೆಚ್ಚು ಜನರನ್ನು ಬೆಟ್ಟೇಗೌಡ ಮತ್ತು ಅವರ ತಂಡ ನೇಮಕ ಮಾಡಿಕೊಂಡಿದ್ದಾರೆ. ಈಗಲೇ ಇರೋ ಸಿಬ್ಬಂದಿ, ನೌಕರರುಗಳಿಗೆ ಸಂಬಳವನ್ನು ತಿಂಗಳ ಮಧ್ಯದಲ್ಲಿ ನೀಡುತ್ತಿದ್ದಾರೆ. ಇದರಿಂದಾಗಿ ಸಂಘದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು, ನಿರ್ದೇಶಕರು ಒಕ್ಕಲಿಗರ ಸಂಘಕ್ಕೆ ಇಂದು ಅವಿಶ್ವಾಸ ಪತ್ರ ನೀಡಿ ಆರೋಪಿಸಿದ್ದಾರೆ.

    ಒಕ್ಕಲಿಗ ಸಂಘದ ನಾಲ್ಕು ಜನ ಪದಾಧಿಕಾರಿಗಳು ಸೇರಿದಂತೆ 19 ಜನ ನಿರ್ದೇಶಕರು ಅವಿಶ್ವಾಸ ನಿರ್ಣಯಕ್ಕೆ ಸಹಮತವಿದೆ ಎಂದು ಸಂಘಕ್ಕೆ ಪತ್ರವನ್ನು ಬರೆದಿದ್ದರು. ಇನ್ನೂ ಈ ಬಗ್ಗೆ ಒಕ್ಕಲಿಗರ ಸಂಘ ಕಾರ್ಯದರ್ಶಿ ಪ್ರೊ. ನಾಗರಾಜ್ ಮಾತನಾಡಿದ್ದು, ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿ, ಇದು ಪ್ರಜಾಪ್ರಭುತ್ವ ಸಂಘದ ಬೈಲಾ ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆಗೆ ಏಳು ದಿನ ಕಾಲಾವಕಾಶವಿದೆ. ಅಷ್ಟರೊಳಗೆ ಅವಿಶ್ವಾಸ ಸಾಬೀತು ಪಡಿಸಬೇಕು. ಇಲ್ಲವಾದಲ್ಲಿ ಕೂಡಲೆ ಸ್ಥಾನ ಬಿಟ್ಟು ಕೊಡುತ್ತೇನೆ. ಅಲ್ಲಿಯವರೆಗೂ ಏನ್ ಬೇಕಾದ್ರೂ ಆಗಬಹುದು, ಕಾದುನೋಡಿ ಎಂದಿದ್ದಾರೆ.

    ಒಕ್ಕಲಿಗರ ಸಂಘದ ಈ ಹಿಂದಿನ ಅಧ್ಯಕ್ಷ ಡಾ ಅಪ್ಪಾಜಿಗೌಡರ ವಿರುದ್ಧ ಬೆಟ್ಟೇಗೌಡ ಅವಿಶ್ವಾಸ ನಿರ್ಣಯ ಮಂಡಿಸಿ ನೂತನವಾಗಿ ಅಧ್ಯಕ್ಷರಾಗಿದ್ದರು. ಈಗ ಅದೇ ಮಾದರಿಯಲ್ಲಿ ಮತ್ತೆ ಬೆಟ್ಟೇಗೌಡರನ್ನು ಇಳಿಸಲು ಸಜ್ಜಾಗುತ್ತಿದೆ. ಡಿಸೆಂಬರ್‍ನಲ್ಲಿ ಸಂಘದ ಚುನಾವಣಾ ನಡೆಯಲಿದ್ದು, ಈ ಹೊತ್ತಿನಲ್ಲಿ ಅವಿಶ್ವಾಸ ನಿರ್ಣಯ ಪತ್ರ ಕುತೂಹಲ ಮೂಡಿಸಿದೆ ಎಂದು ಸಂಘದ ಕಾರ್ಯದರ್ಶಿ ಪ್ರೋ. ನಾಗರಾಜು ಹೇಳಿದ್ದಾರೆ.

  • ಡಿಕೆಶಿ ಮೇಲೆ ಸಿಬಿಐ, ಐಟಿ ದಾಳಿ ನಿಲ್ಲದೇ ಹೋದ್ರೆ ಒಕ್ಕಲಿಗ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ!

    ಡಿಕೆಶಿ ಮೇಲೆ ಸಿಬಿಐ, ಐಟಿ ದಾಳಿ ನಿಲ್ಲದೇ ಹೋದ್ರೆ ಒಕ್ಕಲಿಗ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ!

    ಬೆಂಗಳೂರು: ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ, ಐಟಿ ದಾಳಿ ನಿಲ್ಲದೇ ಹೋದ್ರೆ ರಾಜ್ಯಾದ್ಯಂತ ಒಕ್ಕಲಿಗರ ಸಂಘ ಪ್ರತಿಭಟನೆಗೆ ನಿರ್ಧಾರ ಮಾಡಿದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಹೇಳಿದ್ದಾರೆ.

    ಮೋದಿ ವಿರುದ್ದ ಪ್ರತಿಭಟನೆ ಗೆ ನಿರ್ಧಾರ ಮಾಡಿರುವ ರಾಜ್ಯ ಒಕ್ಕಲಿಗರ ಸಂಘ ಇದೇ ರೀತಿ ದಾಳಿ ಮುಂದುವರಿದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಮಾಡಿದರು.

    ನೋಟು ನಿಷೇಧಗೊಂಡ ಸಂದರ್ಭದಲ್ಲಿ ಅವ್ಯವಹಾರ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ನಿನ್ನೆ ಬೆಂಗಳೂರು ಸೇರಿದಂತೆ ರಾಜ್ಯದ 11 ಕಡೆ ದಾಳಿ ನಡೆಸಿದ್ದರು. ರಾಮನಗರ ಕಾರ್ಪೋರೇಶನ್ ಬ್ಯಾಂಕ್ ಮ್ಯಾನೇಜರ್ ಬಿ ಪ್ರಕಾಶ್ ಮನೆ ಹಾಗೂ ಕಚೇರಿಗಳ ಮೇಲೆ ಕೂಡ ದಾಳಿ ಮಾಡಿದ್ದರು.

  • ಅನೈತಿಕ ಚಟುವಟಿಕೆ ತಾಣದಲ್ಲೇ ಕೆಂಪೇಗೌಡರ ಪುತ್ಥಳಿ ಸ್ಥಾಪನೆ- ಸರ್ಕಾರದ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ಅನೈತಿಕ ಚಟುವಟಿಕೆ ತಾಣದಲ್ಲೇ ಕೆಂಪೇಗೌಡರ ಪುತ್ಥಳಿ ಸ್ಥಾಪನೆ- ಸರ್ಕಾರದ ವಿರುದ್ಧ ಸಿಡಿದೆದ್ದ ಒಕ್ಕಲಿಗರು

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರ ಸರ್ಕಾರ ಒಂದೊಂದು ಜಾತಿಯ ಸಮುದಾಯಕ್ಕೆ ಒಂದೊಂದು ಭಾಗ್ಯವನ್ನು ಕೊಟ್ಟಿದೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಭಾಗ್ಯ, ಅಲ್ಪ ಸಂಖ್ಯಾತರಿಗೆ ಶಾದಿ ಭಾಗ್ಯ, ಹಿಂದುಳಿದವರಿಗೆ ಲ್ಯಾಪ್ ಟಾಪ್ ಭಾಗ್ಯ ನೀಡಿದೆ. ಆದರೆ ಇದೀಗ ರಾಜ್ಯದ ದೊಡ್ಡ ಸಮುದಾಯವಾದ ಒಕ್ಕಲಿಗರಿಗೆ ಕಾಂಡೊಮ್ ಭಾಗ್ಯ ದಯಾಪಾಲಿಸಿದೆ.

    ಹೌದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಹೆಬ್ಬಾಳ ಜಂಕ್ಷನ್ ನಲ್ಲಿರೋ ಕಗ್ಗತ್ತಲ ಕಾಡಿನಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಅನಾವರಣಗೊಳಿಸಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಾಗಿ ಗಿಮಿಕ್ ಮಾಡಲು ಹೋದ ಕೃಷಿ ಸಚಿವ ಕೃಷ್ಣೆಭೈರೇಗೌಡ, ಬಿಡಿಎ ಕೆಂಪೇಗೌಡರಿಗೆ ಅಪಮಾನ ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿದೆ.

    ಬೆಂಗಳೂರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಲು ಕಾರಣಿಕರ್ತರಾದ ನಾಡುಪ್ರಭು ಕೆಂಪೇಗೌಡರ ಅಶ್ವರೂಢನ ಪುತ್ಥಳಿಯನ್ನು, ಬಿಡಿಎ ಅಭಿವೃದ್ಧಿಯನ್ನೇ ಕಾಣದ, ಅನೈತಿಕ ಚಟುವಟಿಕೆಗಳ ಗೂಡಾಗಿರೋ ಪಾರ್ಕ್‍ನಲ್ಲಿ ಅನಾವರಣಗೊಳಿಸಿದೆ. ಜೊತೆಗೆ ಈ ಜಾಗ ಅನೈತಿಕ ಹಾಗೂ ಅಸಭ್ಯ ವರ್ತನೆಗಳ ತಾಣವಾಗಿದೆ. ಬಿಡಿಎ ಈ ಜಾಗದಲ್ಲಿ ಪುತ್ಥಳಿ ಅನಾವರಣಕ್ಕೂ ಮುನ್ನ ಸ್ವಚ್ಛತೆ ಮಾಡದೇ, ಇಲ್ಲಿನ ಚಟುವಟಿಕೆಗಳಿಗೆ ಬ್ರೇಕ್ ಹಾಕದೇ ಕಾಂಡೊಮ್ ಗಳ ರಾಶಿ ಮಧ್ಯಯೇ ಪುತ್ಥಳಿಯನ್ನಟ್ಟಿದೆ. ಚುನಾವಣೆಯ ತರಾತುರಿಗೆ ಬಿದ್ದ ಬಿಡಿಎ, ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟನೆ ಮಾಡಿದ್ದಾರೆ. ಯಾರ ಬೇಡಿಕೆಯೂ ಇಲ್ಲದೇ ಬೆಂಗಳೂರಿಗರನ್ನು ಸೆಳೆಯಲು ಹೋಗಿ ಮಹಾ ಎಡವಟ್ಟು ಮಾಡಿದೆ. ಹೀಗಾಗಿ ರಾಜ್ಯ ಒಕ್ಕಲಿಗರ ಸಂಘ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ ಎಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೋ.ಎಂ.ನಾಗರಾಜ್ ಹೇಳಿದ್ದಾರೆ.

    ಹೆಬ್ಬಾಳ ಜಂಕ್ಷನಲ್ಲಿ ನಿರ್ಮಾಣವಾಗಿರೋ ನಾಡಪ್ರಭುವಿನ ಪುತ್ಥಳಿ ಜಾಗವನ್ನು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪಾರ್ಕ್ ಅಂತಾ ಕರೆಯುತ್ತಿದೆ. ಅಸಲಿಗೆ ಇದು ಪಾರ್ಕ್ ಅಲ್ಲ, ಕಸದ ಡಂಪಿಂಗ್ ಯಾರ್ಡ್ ಆಗಿದೆ. ಈ ಜಾಗದಲ್ಲಿ ಯಾವುದೇ ಸೆಕ್ಯುರಿಟಿ ಇಲ್ಲ. ಸ್ವಚ್ಫತೆಯಂತೂ ಮೊದಲೇ ಇಲ್ಲ. ಸುಮಾರು 3 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರೋ ಕೆಂಪೇಗೌಡರ ಅಶ್ವರೂಢನ ಪುತ್ಥಳಿಗೆ ಒಂದೇ ಒಂದು ವಿದ್ಯುತ್ ದೀಪವನ್ನು ಹಾಕಿಲ್ಲ. ಕಲ್ಲಿನಿಂದ ಕೋಟೆ ಆಕಾರದಲ್ಲಿ 30 ಅಡಿ ಎತ್ತರ ಕಟ್ಟಲಾಗಿದೆ. ಅದರ ಮೇಲೆ ಕೆಂಪೇಗೌಡರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದು ಬಿಟ್ಟರೆ ಪುತ್ಥಳಿ ಸುತ್ತಲೂ ಪಾರ್ಕ್ ನಿರ್ಮಾಣ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಅದು ಹೋಗಲಿ ಅಲ್ಲಿ ಬಿದ್ದಿರೋ ಕಾಂಡೊಮ್ ತೆರವು ಮಾಡೋದು, ಅಲ್ಲಿರೋ ಮಂಗಳಮುಖಿಯರ ಉಪಟಳಕ್ಕೆ ಬ್ರೇಕ್ ಕೂಡ ಹಾಕುತ್ತಿಲ್ಲ ಎಂದು ಪ್ರೋ.ಎಂ.ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಅಸಲಿಗೆ ಬೆಂಗಳೂರಿನ್ನು ಕಟ್ಟಿದ ನಾಡದೊರೆ ಕೆಂಪೇಗೌಡರಿಗೆ ನಗರದಲ್ಲಿ ಜಾಗವೇ ಇಲ್ಲದೇ ಇದ್ರೆ ಇಂಥ ಕಸದ ತೊಟ್ಟಿಯಲ್ಲಿ, ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ಇಡೋದೆ ಬೇಡ, ಪುತ್ಥಳಿಯನ್ನು ತೆರವುಗೊಳಿಸಲಿ. ಇಂಥಹ ಜಾಗದಲ್ಲಿ ಧೀಮಂತ ನಾಯಕನ ಪುತ್ಥಳಿಯನ್ನು ಇಡೋ ದರ್ದು ಸಿಎಂ ಸಿದ್ದರಾಮಯ್ಯರಿಗೆ ಏನಿತ್ತು ಅಂತ ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.