Tag: ಐಸ್ ಪಿಕ್

  • ಬಿಯರ್ ಶೇರ್ ಮಾಡದ್ದಕ್ಕೆ ಐಸ್ ಪಿಕ್‍ನಿಂದ ಸ್ನೇಹಿತನನ್ನೇ ಕೊಂದ

    ಬಿಯರ್ ಶೇರ್ ಮಾಡದ್ದಕ್ಕೆ ಐಸ್ ಪಿಕ್‍ನಿಂದ ಸ್ನೇಹಿತನನ್ನೇ ಕೊಂದ

    ಮುಂಬೈ: ಬಿಯರ್ ಬಾಟಲ್ ಶೇರ್ ಮಾಡದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಮುಂಬೈನ ಜೋಗೇಶ್ವರಿ ಪ್ರದೇಶದಲ್ಲಿ ನಡೆದಿದೆ.

    ಅಜಯ್ ದ್ರಾವಿಡ್ (29) ಕೊಲೆಯಾದ ಸ್ನೇಹಿತ. ಮೇಘವಾಡಿ ಪೊಲೀಸರು ಆರೋಪಿ ಸೋನು ಅಲಿಯಾಸ್ ಷಣ್ಮುಗ ರಾಜೇಂದ್ರನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಮೃತ ಅಜಯ್ ದ್ರಾವಿಡ್ ಮತ್ತು ಆತನ ಸಹೋದರ ಬಿಯರ್ ತರಿಸಿಕೊಂಡು ತಮ್ಮ ಮನೆಯ ಸಮೀಪವಿರುವ ಮೀನು ಮಾರುಕಟ್ಟೆಯಲ್ಲಿ ಕುಳಿತು ಕುಡಿಯುತ್ತಿದ್ದರು. ಅದೇ ಸಮಯದಲ್ಲಿ ಇಬ್ಬರ ಸ್ನೇಹಿತನಾಗಿದ್ದ ಆರೋಪಿ ಸೋನು ಆಗಮಿಸಿದ್ದಾನೆ. ಈ ವೇಳೆ ಆರೋಪಿ ತನಗೂ ಬಿಯರ್ ಕೊಟ್ಟು ಹಂಚಿಕೊಂಡು ಕುಡಿಯುವಂತೆ ಕೇಳಿಕೊಂಡಿದ್ದಾನೆ. ಆದರೆ ಬಿಯರ್ ಬಾಟಲ್ ಕಡಿಮೆ ಇದ್ದುದ್ದರಿಂದ ಅಜಯ್ ಸ್ನೇಹಿತನ ಜೊತೆ ಬಿಯರ್ ಹಂಚಿಕೊಳ್ಳಲು ನಿರಾಕರಿಸಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ.

    ಇಬ್ಬರ ಜಗಳದ ಮಧ್ಯೆ ಅಜಯ್ ಸಹೋದರ ಬಂದಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ಸೋನು ಐಸ್ ಪಿಕ್ ಹಿಡಿದು ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನು ನೋಡಿದ ಇತರ ಸ್ನೇಹಿತರು ಜಗಳ ಬಿಡಿಸಲು ಬಂದಿದ್ದಾರೆ. ಅಷ್ಟರಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ತಕ್ಷಣ ಇಬ್ಬರು ಸಹೋದರರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಪಡೆಯುತ್ತಿದ್ದಾಗ ಅಜಯ್ ಮೃತಪಟ್ಟಿದ್ದಾನೆ..

    ಸದ್ಯಕ್ಕೆ ಅಜಯ್ ಸಹೋದರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಪರಾರಿಯಾಗಿದ್ದ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಸ್ಥಳೀಯ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಯನ್ನು ಕೆಲವು ದಿನಗಳವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ಹಲ್ಲೆ ಮಾಡಲು ಬಳಸಿದ್ದ ಐಸ್ ಪಿಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಸ್ಥಳದಲ್ಲಿದ್ದ ಜನರ ಹೇಳಿಕೆಗಳನ್ನು ಸಹ ನಾವು ದಾಖಲಿಸಿದ್ದೇವೆ. ಬಿಯರ್ ಬಾಟಲಿ ಕೊಡದಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಇನ್ಸ್ ಪೆಕ್ಟರ್ ಸುಧೀರ್ ನಿಗುಡ್ಕರ್ ಹೇಳಿದ್ದಾರೆ.