ಲಂಡನ್: ಆಂಗ್ಲರ ನಾಡಿನಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.
ಹೌದು. ಐಸಿಸಿಯ ಆಯೋಜಿಸಿದ್ದ ಏಕದಿನ ಟೂರ್ನಿಗಳಲ್ಲಿ ಕೇವಲ 16 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್‍ಗಳನ್ನು ಪೂರ್ಣಗೊಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ 1 ಸಾವಿರ ರನ್ ಪೂರ್ಣಗೊಳಿಸಲು 18 ಇನ್ನಿಂಗ್ಸ್ ಆಡಿದ್ದರು.
ಸೌರವ್ ಗಂಗೂಲಿ, ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಮತ್ತು ಆಸ್ಟ್ರೇಲಿಯಾದ ಮಾರ್ಕ್ ವೋ 20 ಇನ್ನಿಂಗ್ಸ್ ಮೂಲಕ 1 ಸಾವಿರ ರನ್ ಗಳಿಸಿದ್ದರು.
ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ 78 ರನ್ ಗಳಿಸಿದ್ದರು. ಪಾಕ್ ವಿರುದ್ಧದ ಪಂದ್ಯದಲ್ಲಿ 68 ರನ್ ಗಳಿಸಿದ್ದರೆ, ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ 125 ರನ್ ಹೊಡೆದಿದ್ದರು. ಒಟ್ಟು ಈ ಟೂರ್ನಿಯಲ್ಲಿ 271 ರನ್‍ಗಳಿಸುವ ಮೂಲಕ ಶಿಖರ್ ಧವನ್ ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್ ಮನ್ ಎನ್ನುವ ಪಟ್ಟ ಸಿಕ್ಕಿದೆ.
ಲಂಡನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸಲು ಬಂದ ವಿಜಯ ಮಲ್ಯರನ್ನು ಕ್ರಿಕೆಟ್ ಅಭಿಮಾನಿಗಳು ಕಳ್ಳ…. ಕಳ್ಳ…. ಎಂದು ಕರೆದಿದ್ದಾರೆ.
ಭಾನುವಾರದಂದು ಲಂಡನ್‍ನ ಓವಲ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದ ವೇಳೆ ಗಣ್ಯರ ಪ್ರವೇಶದ್ವಾರದ ಸರ್ ಜ್ಯಾಕ್ ಹಾಬ್ಸ್ ಗೇಟ್ ಮೂಲಕ ಒಳ ಪ್ರವೇಶಿಸುತ್ತಿದ್ದಾಗ ಅಲ್ಲಿದ್ದ ಕೆಲವು ಜನರು ಚೋರ್ ಗಯಾ ಚೋರ್(ಕಳ್ಳ ಹೋಗ್ತಿದ್ದಾನೆ) ಚೋರ್… ಚೋರ್… (ಕಳ್ಳ..ಕಳ್ಳ) ಎಂದು ಕೂಗಿದ್ರು. ಮೊಬೈಲ್ ತೆಗೆದು ವಿಡಿಯೋ ಮಾಡತೊಡಗಿದ್ರು. ಆದ್ರೆ ಮಲ್ಯ ಇದ್ಯಾವುದಕ್ಕೂ ಕಿವಿಗೊಡದಂತೆ ಒಳಗೆ ಹೋದ್ರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ವಿವಿಧ ಬ್ಯಾಂಕ್‍ಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದಿರುವ ಮಲ್ಯ, ಕಳೆದ ವರ್ಷ ಮಾರ್ಚ್‍ನಲ್ಲಿ ಲಂಡನ್‍ಗೆ ಹೋಗಿ ನೆಲೆಸಿದ್ದಾರೆ.
ಇತ್ತೀಚೆಗೆ ವಿರಾಟ್ ಕೊಹ್ಲಿ ಫೌಂಡೇಷನ್ ವಿಶೇಷ ಭೋಜನ ಕಾರ್ಯಕ್ರಮಕ್ಕೆ ಮಲ್ಯ ಆಗಮಿಸಿದ್ದರು. ಈ ವೇಳೆ ಟೀಂ ಇಂಡಿಯಾ ಆಟಗಾರರು ಮಲ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಈ ಮುಜಗುರದ ಸನ್ನಿವೇಶದ ನಂತರ ಈಗ ಮತ್ತೊಂದು ಅಂತಹದ್ದೇ ಘಟನೆಯಾಗಿದೆ.
ಲಂಡನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಇವತ್ತು ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಪಾಕಿಸ್ತಾನ ವಿರುದ್ಧ ದಾಖಲೆ ರನ್‍ಗಳಲ್ಲಿ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಇವತ್ತು ಲಂಕಾ ವಿರುದ್ಧ ಅಂಗಳಕ್ಕೆ ಇಳಿಯಲಿದೆ.
ಪಾಕಿಸ್ತಾನ ವಿರುದ್ಧ ಗೆದ್ದ ಪಡೆಯನ್ನೇ ಕೊಹ್ಲಿ ಉಳಿಸಿಕೊಂಡಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿ ಮ್ಯಾಥ್ಯೂ ಬೌಲಿಂಗ್ ಅನುಮಾನ ಎಂದು ಹೇಳಲಾಗುತ್ತಿದೆ. ಶ್ರೀಲಂಕಾ ಇತ್ತೀಚೆಗೆ ನಡೆದ 23 ಪಂದ್ಯಗಳಲ್ಲಿ ಗೆದ್ದಿರೋದು ಕೇವಲ 8 ಪಂದ್ಯಗಳನ್ನು ಮಾತ್ರ.
ಲಂಡನ್‍ನ ಓವಲ್ಸ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಭೇರಿ ಕಂಡ್ರೆ ಕೊಹ್ಲಿ ಪಡೆ ಸೆಮಿಫೈನಲ್‍ಗೆ ತಲುಪುತ್ತೆ ಅನ್ನೋದು ಕ್ರಿಕೆಟ್ ತಜ್ಞರ ಲೆಕ್ಕಾಚಾರ ಆಗಿದೆ. ಆದರೆ ಮಳೆ ಬಂದರೆ ಪಂದ್ಯವನ್ನು ಯಾವ ದಿಕ್ಕಿಗಾದ್ರೂ ಬದಲಿಸಬಹುದು.
Chamara Kapugedara has been ruled out of the rest of #CT17 after hurting his knee during a training session
ಬೆಂಗಳೂರು: ಬಹು ದಿನಗಳ ನಂತರ ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
ಈಗಾಗಲೇ ಐಸಿಸಿ ಚಾಂಪಿಯನ್ ಟ್ರೋಪಿ ಪಂದ್ಯಾವಳಿಗಳು ಲಂಡನ್‍ನಲ್ಲಿ ಆರಂಭಗೊಂಡಿವೆ. 2016ರ ವಿಶ್ವ ಟಿ-ಟ್ವೆಂಟಿಯ ನಂತರ ಭಾರತ ಮತ್ತು ಪಾಕ್ ಎರಡು ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಹ ಇಂದಿನ ಪಂದ್ಯಕ್ಕೆ ಮಹತ್ವ ನೀಡಿದೆ.
ಭಾರತ ಹಾಗೂ ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಟ್ರೋಫಿಗೆ ಸೆಣಸಿದ್ದು, ಒಂದು ಬಾರಿ ಭಾರತ ಗೆದ್ರೆ ಪಾಕಿಸ್ತಾನ 2 ಬಾರಿ ಗೆದ್ದಿದೆ. ಈಗ 2ನೇ ಜಯಕ್ಕೆ ಭಾರತ ಕಾತರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್ ಬ್ಯಾಟಿಂಗ್ ಫಾರ್ಮ್‍ನಲ್ಲಿದ್ರೆ, ಹಾರ್ದಿಕ್ ಪಾಂಡ್ಯ, ಜಸ್ಪೀತ್ ಬೂಮ್ರಾ ಬಾಲ್ ದಾಳಿಗೆ ಸಜ್ಜಾಗಿದ್ದಾರೆ.
ಅತ್ತ ಪಾಕಿಸ್ತಾನ ತಂಡದ ಆಟಗಾರರು ಸಹ ನಾವೇನು ಕಡಿಮೆಯಿಲ್ಲ ಎಂದು ಅವರು ಅಖಾಡಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಬರ್ಮಿಂಗ್ ಹ್ಯಾಮ್‍ನಲ್ಲಿ ರಿಯಲ್ ವಾರ್ ನಡೆಯಲಿದೆ.
ಲಂಡನ್: ಇಲ್ಲಿಯವರೆಗೆ ಬೌಲಿಂಗ್ ಸ್ಪೀಡ್ ಎಷ್ಟಿದೆ ಎನ್ನುವ ಮಾಹಿತಿ ಸಿಗುತಿತ್ತು. ಆದರೆ ಇನ್ನು ಮುಂದೆ ಬ್ಯಾಟ್ಸ್ ಮನ್ ಎಷ್ಟು ವೇಗದಲ್ಲಿ ಬ್ಯಾಟ್ ಬೀಸಿದ್ದಾನೆ. ಎಷ್ಟು ಡಿಗ್ರಿಯಲ್ಲಿ ಬ್ಯಾಟ್ ಹಿಡಿದಿದ್ದಾನೆ ಎನ್ನುವ ಎಲ್ಲ ಮಾಹಿತಿಗಳು ಸಿಗಲಿದೆ.
ಹೌದು. ಹಲವಾರು ದೇಶಗಳಲ್ಲಿ ಕ್ರಿಕೆಟ್ ಜಪ್ರಿಯವಾಗುತ್ತಿದೆ. ಈಗ ಕ್ರಿಕೆಟನ್ನು ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ ಮುಂದಾಗುತ್ತಿದ್ದು, ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆನ್ಸರ್ ಹೊಂದಿರುವ ಬ್ಯಾಟ್ ಗಳನ್ನು ಬಳಸಲು ಅನುಮತಿ ನೀಡಿದೆ.
ಕ್ರಿಕೆಟ್ ಇತಿಹಾಸಲ್ಲಿ ಮೊದಲ ಬಾರಿಗೆ ಈ ರೀತಿಯ ಚಿಪ್ ಬ್ಯಾಟ್ ನಲ್ಲಿ ಅಳವಡಿಸಲಾಗುತ್ತಿದೆ. ಟೆಕ್ ಕಂಪೆನಿ ಇಂಟೆಲ್ ಈ ಚಿಪ್ ಅನ್ನು ತಯಾರಿಸಿದೆ.
ಎಲ್ಲಿರಲಿದೆ ಚಿಪ್?
ಇಂಟೆಲ್ ಕ್ಯೂರಿ ಟೆಕ್ನಾಲಜಿಯ ‘ಬ್ಯಾಟ್ ಸೆನ್ಸ್’ ಚಿಪ್ ಬ್ಯಾಟಿನ ಮೇಲ್ಬಾಗದಲ್ಲಿ ಇರಲಿದೆ. ಅಂದರೆ ಹ್ಯಾಂಡಲ್ ತುದಿಯಲ್ಲಿ ಇರುವ ವೃತ್ತಾಕಾರದ ಜಾಗದಲ್ಲಿ ಈ ಚಿಪ್ ಅಳವಡಿಸಲಾಗುತ್ತದೆ.
ಚಿಪ್ ಅಳವಡಿಸುವುದು ಹೇಗೆ?
ಬ್ಯಾಟಿನ ಹ್ಯಾಂಡಲ್ ಕವರ್ ಮೊದಲು ಹಾಕಿ, ಬಳಿಕ ಅದನ್ನು ಕೆಳಗೆ ಸರಿಸಬೇಕಾಗುತ್ತದೆ. ಇದಾದ ಬಳಿಕ ಚಿಪ್ ಫಿಕ್ಸ್ ಆಗಿರುವ ಸಣ್ಣ ಹ್ಯಾಂಡಲ್ ಕವರ್ ಅನ್ನು ಹಾಕಬೇಕು. ನಂತರ ಕೆಳಗಡೆ ಸರಿಸಲಾಗಿರುವ ಹ್ಯಾಂಡಲ್ ಕವರ್ ಮೇಲಕ್ಕೆ ಸರಿಸಿದಾಗ ಸೆನ್ಸರ್ ಚಿಪ್ ಫಿಕ್ಸ್ ಆಗಿ ಗಟ್ಟಿಯಾಗಿ ಮೇಲ್ಬಾಗದಲ್ಲಿ ಕುಳಿತುಕೊಳ್ಳುತ್ತದೆ.
ಲಾಭ ಏನು?
ಬ್ಯಾಟಿನ ಆಂಗಲ್ ಹೇಗೆ ಬದಲಾಗುತ್ತದೆ? ಬ್ಯಾಟ್ ಸ್ಪೀಡ್ ಎಷ್ಟಿರಲಿದೆ? ಹೀಗೆ ಬ್ಯಾಟ್ ಪ್ರತಿಯೊಂದು ಚಲನೆ ಕೂಡ ಚಿಪ್ ನಲ್ಲಿ ದಾಖಲಾಗಿರುತ್ತದೆ. ಇದರಲ್ಲಿ ದಾಖಲಾಗಿರುವ ಮಾಹಿತಿಯನ್ನು ಕಂಪ್ಯೂಟರ್ ಹಾಕಿ ಬ್ಯಾಟ್ಸ್ ಮನ್ ತನ್ನ ತಪ್ಪನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಬ್ಯಾಟ್ಸ್ ಮನ್ ಸಂಪೂರ್ಣ ಗ್ರೌಂಡ್ ರಿಪೋರ್ಟ್ ದಾಖಲಾಗುವುದರಿಂದ ವಿಶೇಷವಾಗಿ ಕೋಚ್ ಗಳಿಗೂ ನೆರವಾಗಲಿದೆ.
ಯಾರ ಬ್ಯಾಟಲ್ಲಿ ಚಿಪ್ ಇರಲಿದೆ?
ಸದ್ಯಕ್ಕೆ ಐಸಿಸಿ ಒಂದು ತಂಡದ ಮೂವರು ಆಟಗಾರರಿಗೆ ಚಿಪ್ ಬ್ಯಾಟಿನೊಂದಿಗೆ ಆಡಲು ಅನುಮತಿ ನೀಡಿದೆ. ಭಾರತದ ಪರ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಹಾಗೂ ಆರ್ ಅಶ್ವಿನ್ ಚಿಪ್ ಇರುವ ಬ್ಯಾಟ್ ನಲ್ಲಿ ಆಡಲಿದ್ದಾರೆ.
ವಿಆರ್ ಟೆಕ್ನಾಲಜಿ ಬಳಕೆ
ಬ್ಯಾಟ್ ಸೆನ್ಸರ್ ಅಲ್ಲದೇ ಪ್ರೆಕ್ಷಕರಿಗೆ ಮುದ ನೀಡಲು ವರ್ಚುಯಲ್ ರಿಯಾಲಿಟಿ(ವಿಆರ್) ಈ ಬಾರಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೇ ಪಂದ್ಯಕ್ಕೂ ಪಿಚ್ ಸಂಪೂರ್ಣ ಮಾಹಿತಿ ಪಡೆಯಲು, ಎಚ್‍ಡಿ ಮತ್ತುಇನ್‍ಫ್ರಾರೆಡ್ ಕ್ಯಾಮೆರಾ ಹೊಂದಿರುವ 8 ಡ್ರೋನ್ ಗಳು ಪಿಚ್ ಮೇಲೆ ಹಾರಾಟ ನಡೆಸಲಿದೆ.
ದುಬೈ: ಈ ಬಾರಿಯ ಐಸಿಸಿ ಚಾಂಪಿಯನ್ ಟ್ರೋಫಿ ವಿಜೇತ ತಂಡಕ್ಕೆ 2.2 ದಶಲಕ್ಷ ಡಾಲರ್ ಹಣ(ಅಂದಾಜು 14 ಕೋಟಿ ರೂ.) ಬಹುಮಾನ ರೂಪದಲ್ಲಿ ಸಿಗಲಿದೆ.
ಈ ಟೂರ್ನಿಗೆ ಐಸಿಸಿ ಒಟ್ಟು 4.5 ದಶಲಕ್ಷ ಡಾಲರ್(ಅಂದಾಜು 28 ಕೋಟಿ ರೂ.) ಬಹುಮಾನ ನೀಡಲಿದ್ದು, ದ್ವಿತೀಯ ಸ್ಥಾನಿ ತಂಡಕ್ಕೆ 1.1 ದಶಲಕ್ಷ ಡಾಲರ್(ಅಂದಾಜು 7ಕೋಟಿ ರೂ.)ಬಹುಮಾನ ಸಿಗಲಿದೆ.
ಸೆಮಿಫೈನಲ್‍ನಲ್ಲಿ ಸೋತ ಎರಡೂ ತಂಡಗಳಿಗೆ 4.50 ಲಕ್ಷ ಡಾಲರ್(ಅಂದಾಜು 2.8 ಕೋಟಿ ರೂ.) ಸಿಕ್ಕಿದರೆ, ಗುಂಪಿನಲ್ಲಿ ಮೂರನೇ ಸ್ಥಾನವನ್ನು ಪಡೆಯುವ ಎರಡು ತಂಡಕ್ಕೆ 90 ಸಾವಿರ ಡಾಲರ್(ಅಂದಾಜು 57 ಲಕ್ಷ ರೂ.), ಗುಂಪಿನಲ್ಲಿ ಕೊನೆಯ ಸ್ಥಾನವನ್ನು ಪಡೆದ ತಂಡಕ್ಕೆ 60 ಸಾವಿರ ಡಾಲರ್( ಅಂದಾಜು 38 ಲಕ್ಷ ರೂ.) ಬಹುಮಾನ ಸಿಗಲಿದೆ.
2013ರ ಟೂರ್ನಿಗೆ ಹೋಲಿಸಿದರೆ ಈ ಬಾರಿಯ ಐಸಿಸಿ ಬಹುಮಾನದ ಮೊತ್ತವನ್ನು ಹೆಚ್ಚಿಸಿದ್ದು, ಒಟ್ಟು 5 ಲಕ್ಷ ಡಾಲರ್(ಅಂದಾಜು 3 ಕೋಟಿ ರೂ.) ಹೆಚ್ಚಿನ ಅನುದಾನವನ್ನು ನೀಡಿದೆ. ಜೂನ್1 ರಿಂದ ಜೂನ್ 18ರವರೆಗೆ ಇಂಗ್ಲೆಂಡಿನಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಯಲಿದೆ.
2013ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಪಂದ್ಯಾಟದಲ್ಲಿ ಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು 5 ರನ್ ಗಳಿಂದ ಸೋಲಿಸಿ ಭಾರತ ಚಾಂಪಿಯನ್ ಪಟ್ಟವನ್ನು ಆಲಂಕರಿಸಿತ್ತು.
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ (ಐಪಿಎಲ್) ಹಣದ ಹೊಳೆ ಹರಿಯುವುದು ನಿಮಗೆ ಗೊತ್ತೆ ಇರುವ ವಿಚಾರ. ಆಟಗಾರರು ಕೋಟಿಗಟ್ಟಲೇ ಹಣಕ್ಕೆ ಸೇಲ್ ಆದರೆ ಅಂಪೈರ್‍ಗಳಿಗೂ ಲಕ್ಷಗಟ್ಟಲೇ ಹಣ ಸಂಬಳ ರೂಪದಲ್ಲಿ ಸಿಗುತ್ತಿದೆ.
2016ರಲ್ಲಿ ಸಿ.ಕೆ.ನಂದನ್, ಅನಿಲ್ ಚೌಧರಿ ಮತ್ತು ಸಿ.ಸಂಶುದ್ದೀನ್ ಐಪಿಎಲ್ ಪಂದ್ಯಗಳ ಅಂಪೈರ್‍ಗಳಾಗಿ ಕಾರ್ಯನಿರ್ವಹಿಸಿದ್ದು ಇವರು ಹತ್ತಿರ ಹತ್ತಿರ ಒಟ್ಟು 40 ಲಕ್ಷ ರೂ. ಸಂಬಳವನ್ನು ಪಡೆದಿದ್ದಾರೆ.
2016 ರಲ್ಲಿ ಅನಿಲ್ ಚೌಧರಿ ಅವರು ಸರಿಸುಮಾರು 39.63 ಲಕ್ಷ ಸಂಭಾವನೆಯನ್ನು ಪಡೆದಿದ್ದರೆ, ನಂದನ್ ಸಂಶುದ್ದೀನ್ ಕೂಡ ಸರಿ ಸುಮಾರು 40.83 ಲಕ್ಷ ರೂ. ಸಂಬಳವನ್ನು ಐಪಿಎಲ್‍ನಿಂದ ಪಡೆದಿದ್ದರು.
ರೆಫ್ರಿಗಳಿಗೂ ಐಪಿಎಲ್ ಒಳ್ಳೆಯ ಸಂಭಾವನೆಯನ್ನ ನೀಡುತ್ತಿದೆ. ಜಾವಗಲ್ ಶ್ರೀನಾಥ್ ಹಲವು ವರ್ಷಗಳಿಂದ ಮ್ಯಾಚ್ ರೆಫ್ರಿಯಾಗಿದ್ದು, ಐಪಿಎಲ್ ನಿಂದ ಬರೋಬ್ಬರಿ 26.42 ಲಕ್ಷ ರೂ. ಸಂಬಳವನ್ನು ಪಡೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶ್ರೀನಾಥ್ ಅವರನ್ನು ಹತ್ತು ವರ್ಷಗಳ ಹಿಂದೆ ಮ್ಯಾಚ್ ರೆಫ್ರಿಯಾಗಿ ನೇಮಕ ಮಾಡಿಕೊಂಡಿತ್ತು. ಇದೂವರೆಗೂ 24 ಟೆಸ್ಟ್, 122 ಅಂತರಾಷ್ಟ್ರೀಯ ಏಕದಿನ ಮತ್ತು 25 ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಶ್ರೀನಾಥ್ ಮ್ಯಾಚ್ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತೊಬ್ಬ ಅಂಪೈರ್ ಕೆ.ಎನ್. ಅನಂತಪದ್ಮನಾಭನ್ ಅವರಿಗೆ 26.65 ಲಕ್ಷ ರೂ.ಸಂಬಳವನ್ನು ಬಿಸಿಸಿಐ ನೀಡಿದೆ.
ದೆಹಲಿ ಮೂಲದವರಾದ ಅನಿಲ್ ಚೌಧರಿ ವಿಶ್ವ ಕ್ರಿಕೆಟ್‍ನ ಅಂಪೈರ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನಿಲ್ ಈಗಾಗಲೇ 39 ಐಪಿಎಲ್ ಮ್ಯಾಚ್‍ಗಳಿಗೆ ನಿರ್ಣಾಯಕರಾಗಿ ಕೆಲಸ ಮಾಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 17 ಏಕದಿನ ಪಂದ್ಯಗಳು ಮತ್ತು 16 ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ಅಂಪೈರಾಗಿ ಕೆಲಸ ಮಾಡಿದ್ದಾರೆ.
ಸಿ.ಕೆ.ನಂದನ್ ಇವರು ಹುಟ್ಟಿದ್ದು ದೆಹಲಿ ಆದರೆ ರಣಜಿ ಕ್ರಿಕೆಟ್‍ನಲ್ಲಿ ಕರ್ನಾಟಕ ರಾಜ್ಯದ ಪರವಾಗಿ ಆಡಿದ್ದಾರೆ. ನಂದನ್ 6 ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು 7 ಅಂತರಾಷ್ಟ್ರೀಯ ಟಿ-20 ಪಂದ್ಯಗಳಿಗೆ ನಿರ್ಣಾಯಕರಾಗಿದ್ದರು.
ಹೈದರಾಬಾದ್ ನಿವಾಸಿಯಾಗಿರುವ ಸಿ.ಸಂಶುದ್ದೀನ್ ಇದೂವರೆಗೂ 17 ಅಂತರಾಷ್ಟ್ರೀಯ ಏಕದಿನ ಪಂದ್ಯ ಮತ್ತು 11 ಟಿ-20 ಪಂದ್ಯಗಳಿಗೆ ನಿರ್ಣಾಯಕರಾಗಿ ಕೆಲಸ ಮಾಡಿರುವ ಅನುಭವವಿದೆ.
ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರವೀಂದ್ರ ಜಡೇಜಾ ಬೌಲಿಂಗ್‍ನಲ್ಲಿ ಆರ್.ಅಶ್ವೀನ್‍ರನ್ನು ಹಿಂದಿಕ್ಕುವ ಮೂಲಕ ಮೊದಲ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಎರಡನೇ ಸ್ಥಾನದಲ್ಲಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಾಲ್ಕನೇಯ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ 941 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಪೂಜಾರ 861 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ನಾಯಕ ವಿರಾಟ್ ಕೊಹ್ಲಿ 826 ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇಯ ಸ್ಥಾನದಲ್ಲಿದ್ದಾರೆ. ಅಜಿಂಕ್ಯಾ ರೆಹಾನೆ 704 ಅಂಕಗಳನ್ನು ಪಡೆಯುವ ಮೂಲಕ 17ನೇ ಸ್ಥಾನದಲ್ಲಿದ್ದಾರೆ.
ಆಲ್ ರೌಂಡರ್ ವಿಭಾಗದಲ್ಲಿ ನೆರೆಯ ಬಾಂಗ್ಲಾದೇಶದ ಶಕೀಬ್-ಅಲ್-ಹಸನ್ 431 ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಏಕದಿನ ಪಂದ್ಯಗಳ ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮೊದಲ ಸ್ಥಾನ, ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನೂ ರೋಹಿತ್ ಶರ್ಮಾ, ಎಂ.ಎಸ್.ಧೋನಿ ಮತ್ತು ಶಿಖರ್ ಧವನ್ ಕ್ರಮವಾಗಿ 12, 13 ಮತ್ತು 15ನೇ ಸ್ಥಾನದಲ್ಲಿದ್ದಾರೆ.
ಏಕದಿನ ಪಂದ್ಯಗಳ ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಅಕ್ಷರ್ ಪಟೇಲ್, ಅಮೀತ್ ಮಿಶ್ರಾ ಮತ್ತು ಅಶ್ವಿನ್ ಕ್ರಮವಾಗಿ 11, 13 ಮತ್ತು 20 ನೇ ಸ್ಥಾನದಲ್ಲಿದ್ದಾರೆ. ಆಲ್ ರೌಂಡರ್ ವಿಭಾಗದಲ್ಲಿ ಬಾಂಗ್ಲಾ ದೇಶದ ಶಕೀಬ್-ಅಲ್-ಹಸನ್ ಮೊದಲ ಸ್ಥಾನದಲ್ಲಿದ್ದು. ಭಾರತದ ರವೀಂದ್ರ ಜಡೇಜಾ 10 ನೇ ಸ್ಥಾನದಲ್ಲಿದ್ದಾರೆ.