Tag: ಐಸಿಸಿ ವಿಶ್ವಕಪ್

  • U19 World Cup: ಮತ್ತೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್‌ ಎದುರಾಳಿ – ಫೆ.11ರಂದು ಫೈನಲ್‌

    U19 World Cup: ಮತ್ತೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಆಸೀಸ್‌ ಎದುರಾಳಿ – ಫೆ.11ರಂದು ಫೈನಲ್‌

    – ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ 1 ವಿಕೆಟ್‌ ಜಯ, ಪಾಕ್‌ಗೆ ವಿರೋಚಿತ ಸೋಲು

    ಕ್ಯಾನ್ಬೆರಾ: 2023ರ ಏಕದಿನ ವಿಶ್ವಕಪ್‌ ಫೈನಲ್‌(World Cup 2023) ರೋಚಕ ಹಣಾ-ಹಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ಅಂಡರ್‌-19 ವಿಶ್ವಕಪ್‌ (Under-19 World Cup )ಟೂರ್ನಿಯಲ್ಲೂ ಮತ್ತೆ ಭಾರತಕ್ಕೆ ಆಸೀಸ್‌ ಎದುರಾಳಿಯಾಗಿದ್ದು, ವಿಶ್ವಕಪ್‌ ಕ್ಷಣಗಳನ್ನು ನೆನಪಿಸುವಂತೆ ಮಾಡಿದೆ.

    ಇಲ್ಲಿನ ಬೆನೋನಿಯಲ್ಲಿರುವ ವಿಲೋಮೂರ್ ಪಾರ್ಕ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia Under 19s) ತಂಡ ಒಂದು ವಿಕೆಟ್‌ಗಳಿಂದ ಪಾಕ್ ತಂಡವನ್ನು ಸೋಲಿಸಿ, ಫೈನಲ್‌ ಪ್ರವೇಶಿಸಿದೆ. ಭಾನುವಾರ (ಫೆ.11)‌ ಮಧ್ಯಾಹ್ನ 1:30ರ ವೇಳೆಗೆ ಆಸ್ಟ್ರೇಲಿಯಾ ಸಹಾರಾ ಪಾರ್ಕ್ ವಿಲೋಮೂರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು, ಭಾರತ – ಆಸೀಸ್‌ ಯುವಕರ ತಂಡ ಸೆಣಸಲಿವೆ. ಇದನ್ನೂ ಓದಿ: India vs England 2nd Test: 255 ಕ್ಕೆ ಭಾರತ ಆಲೌಟ್‌, ಇಂಗ್ಲೆಂಡ್‌ಗೆ 399 ರನ್‌ ಗುರಿ

    ಆಸೀಸ್‌ ವಿರುದ್ಧ ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನ ತಂಡ 48.5 ಓವರ್‌ಗಳಲ್ಲಿ ಕೇವಲ 179 ರನ್‌ಗಳಿಗೆ ಸರ್ವಪತನ ಕಂಡಿತು. 180 ರನ್‌ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 49.1 ಓವರ್‌ಗಳಲ್ಲಿ 9 ವಿಕೆಟ್‌ನಷ್ಟಕ್ಕೆ 181 ರನ್‌ ಗಳಿಸಿ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ಪರ ಅಜಾನ್ ಅವೈಸ್ 91 ಎಸೆತಗಳಲ್ಲಿ 52 ರನ್‌, ಅರಾಫತ್ ಮಿನ್ಹಾಸ್ 61 ಎಸೆತಗಳಲ್ಲಿ 51 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ವಿಫಲರಾದ ಕಾರಣ ಪಾಕ್‌ ಅಲ್ಪಮೊತ್ತಕ್ಕೆ ಔಟಾಗಿ ಸೋಲನುಭವಿಸಿತು. ಇದನ್ನೂ ಓದಿ: ಡೇವಿಸ್ ಕಪ್‍ನಲ್ಲಿ ಕೊಡಗಿನ ಯುವಕನ ಸಾಧನೆ – ವರ್ಲ್ಡ್‌‌ ಕಪ್ 1ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಭಾರತ

    ಟಾಮ್ ಸ್ಟ್ರಾಕರ್‌ಗೆ 6 ವಿಕೆಟ್‌:
    ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಆಸೀಸ್‌ ಆರಂಭದಿಂದಲೇ ಪಾಕ್‌ ಬ್ಯಾಟರ್‌ಗಳನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಆಸೀಸ್‌ ಪರ 9.5 ಓವರ್‌ಗಳಲ್ಲಿ ಕೇವಲ 24 ರನ್‌ ಬಿಟ್ಟುಕೊಟ್ಟ ಟಾಮ್ ಸ್ಟ್ರಾಕರ್ 6 ವಿಕೆಟ್‌ ಪಡೆದು ಮಿಂಚಿದರು. ಇನ್ನುಳಿದಂತೆ ಮಾಹ್ಲಿ ಬಿಯರ್ಡ್‌ಮನ್, ಕ್ಯಾಲಮ್ ವಿಡ್ಲರ್, ರಾಫ್ ಮ್ಯಾಕ್‌ಮಿಲನ್, ಟಾಮ್ ಕ್ಯಾಂಪ್‌ಬೆಲ್ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇನ್ನೂ ಪಾಕಿಸ್ತಾನ ಪರ ಬೌಲಿಂಗ್‌ನಲ್ಲಿ ಅಲಿ ರಾಝಾ 10 ಓವರ್‌ಗಳಲ್ಲಿ 34 ರನ್‌ ಬಿಟ್ಟುಕೊಟ್ಟು ನಾಲ್ಕು ವಿಕೆಟ್‌ ಪಡೆದು ಆಸೀಸ್‌ ಪಡೆಯನ್ನ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ಮೊಹಮ್ಮದ್ ಜೀಶಾನ್ ಅವರ ದುಬಾರಿ ಓವರ್‌ನಿಂದಾಗಿ ಪಾಕ್‌ ವಿರೋಚಿತ ಸೋಲಿಗೆ ತುತ್ತಾಯಿತು. ಪಾಕ್‌ ಪರ ಅರಾಫತ್ ಮಿನ್ಹಾಸ್ 2 ವಿಕೆಟ್‌ ಕಿತ್ತರೆ, ಉಬೈದ್ ಶಾ, ನವೀದ್ ಅಹ್ಮದ್ ಖಾನ್ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಡಿಕ್ಸನ್‌ ಜವಾಬ್ದಾರಿಯುತ ಅರ್ಧಶತಕ :
    180 ರನ್‌ಗಳ ಗುರಿ ಬೆನ್ನತಿದ್ದ ಆಸೀಸ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಶುರು ಮಾಡಿತು. ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ಹ್ಯಾರಿ ಡಿಕ್ಸನ್ 75 ಎಸೆತಗಳಲ್ಲಿ ಜವಾಬ್ದಾರಿಯುತ ಅರ್ಧಶತಕ ಗಳಿಸಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಆಲಿವರ್ ಪೀಕ್ 49 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಇದನ್ನೂ ಓದಿ: 

  • World Cup 2023: ಇಂದಿನಿಂದ ಸೆಮಿಫೈನಲ್‌, ಫೈನಲ್‌ ಪಂದ್ಯ ಆನ್‌ಲೈನ್‌ ಟಿಕೆಟ್‌ ಮಾರಾಟ – ಬುಕ್‌ ಮಾಡೋದು ಹೇಗೆ?

    World Cup 2023: ಇಂದಿನಿಂದ ಸೆಮಿಫೈನಲ್‌, ಫೈನಲ್‌ ಪಂದ್ಯ ಆನ್‌ಲೈನ್‌ ಟಿಕೆಟ್‌ ಮಾರಾಟ – ಬುಕ್‌ ಮಾಡೋದು ಹೇಗೆ?

    ನವದೆಹಲಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ (World Cup 2023) ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಿಗಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ಗಳ ಮಾರಾಟ ಇಂದಿನಿಂದ (ಶುಕ್ರವಾರ) ಆರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

    ಶುಕ್ರವಾರ, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಅಧಿಕೃತ ಟಿಕೆಟಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳು ವಿಶ್ವಕಪ್ 2023 ರ ಸೆಮಿ-ಫೈನಲ್ ಮತ್ತು ಫೈನಲ್‌ ಪಂದ್ಯಗಳ ವೀಕ್ಷಣೆಗೆ ಟಿಕೆಟ್‌ ಬುಕ್‌ ಮಾಡಬಹುದು. ಐಸಿಸಿ ವಿಶ್ವಕಪ್‌ ಅಧಿಕೃತ ವೆಬ್‌ಸೈಟ್‌ https://tickets.cricketworldcup.com ನಲ್ಲಿ ಟಿಕೆಟ್‌ ಮಾರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇದನ್ನೂ ಓದಿ: ಕೊಹ್ಲಿಯ ಪೇಂಟಿಂಗ್ ಚಿತ್ರಿಸಿ ಉಡುಗೊರೆ ನೀಡಿದ ಕಲಾವಿದೆ

    ಪಂದ್ಯಗಳು ಯಾವಾಗ, ಎಲ್ಲಿ ನಡೆಯುತ್ತೆ?
    ನವೆಂಬರ್‌ 15 (ಬುಧವಾರ) – ಸೆಮಿಫೈನಲ್ 1, ಮುಂಬೈನ ವಾಂಖೆಡೆ ಕ್ರೀಡಾಂಗಣ.

    ನವೆಂಬರ್ 16 (ಗುರುವಾರ) – ಸೆಮಿಫೈನಲ್ 2, ಕೋಲ್ಕತ್ತಾದ ಈಡನ್ ಗಾರ್ಡನ್ಸ್.

    ನವೆಂಬರ್ 19 (ಭಾನುವಾರ) – ಫೈನಲ್‌, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ.

    ಬುಕ್‌ ಮಾಡೋದು ಹೇಗೆ?
    ಹಂತ-1: https://tickets.cricketworldcup.com ಗೆ ಲಾಗಿನ್‌ ಮಾಡಿ

    ಹಂತ-2: ನೀವು ಟಿಕೆಟ್ ಖರೀದಿಸಲು ಬಯಸುವ ಪಂದ್ಯದ ಹೆಸರನ್ನು ಆಯ್ಕೆ ಮಾಡಿ. ಸೆಮಿಫೈನಲ್ 1, ಸೆಮಿಫೈನಲ್ 2 ಮತ್ತು ಫೈನಲ್. ಮತ್ತಷ್ಟು ಬುಕಿಂಗ್‌ಗಾಗಿ ಬುಕ್ ಮೈ ಶೋ ವೆಬ್‌ಸೈಟ್‌ಗೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ. ಇದನ್ನೂ ಓದಿ: ಶಾದಾಬ್‌ ವಿರುದ್ಧ ಅಂಗಳದಲ್ಲೇ ಸಿಟ್ಟು ಹೊರ ಹಾಕಿದ ಬಾಬರ್‌ ಅಜಂ, ಅಫ್ರಿದಿ

    ಸೆಮಿಫೈನಲ್‌ 1https://in.bookmyshow.com/sports/mumbai-icc-mens-cwc-2023/ET00367212
    ಸೆಮಿಫೈನಲ್‌ 2https://in.bookmyshow.com/sports/kolkata-icc-mens-cwc-2023/ET00367510
    ಫೈನಲ್‌ – https://in.bookmyshow.com/sports/ahmedabad-icc-mens-cwc-2023/ET00367204

    ಹಂತ-4: ಬುಕ್ಕಿಂಗ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

    ಹಂತ-5: ವಿವಿಧ ಬೆಲೆ ವರ್ಗಗಳ ಆಧಾರದ ಮೇಲೆ ನೀವು ಖರೀದಿಸಲು ಬಯಸುವ ಟಿಕೆಟ್‌ಗಳ ಅಗತ್ಯವಿರುವ ಸಂಖ್ಯೆಯನ್ನು ಆಯ್ಕೆ ಮಾಡಿ.

    ಹಂತ-6: ‘Book’ ಮೇಲೆ ಕ್ಲಿಕ್‌ ಮಾಡಿ ಮತ್ತು ವಿತರಣಾ ವಿಳಾಸವನ್ನು ಸೇರಿಸಿ.

    ಹಂತ-7: Proceed to Pay ಮೇಲೆ ಕ್ಲಿಕ್ ಮಾಡಿ ಮತ್ತು ಹಣ ಪಾವತಿ ಮಾಡಿ. ಆ ಮೂಲಕ ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC WorldCup 2023: ಭಾರತ-ಪಾಕಿಸ್ತಾನ ಮ್ಯಾಚ್‌ ದುಬಾರಿ – ಒಂದು ಟಿಕೆಟ್‌ 56 ಲಕ್ಷ ರೂ.ವರೆಗೆ ಮಾರಾಟ

    ICC WorldCup 2023: ಭಾರತ-ಪಾಕಿಸ್ತಾನ ಮ್ಯಾಚ್‌ ದುಬಾರಿ – ಒಂದು ಟಿಕೆಟ್‌ 56 ಲಕ್ಷ ರೂ.ವರೆಗೆ ಮಾರಾಟ

    ಮುಂಬೈ: ಇದೇ ಮೊದಲಬಾರಿಗೆ ಭಾರತ (India) ಸಂಪೂರ್ಣ ಆತಿಥ್ಯದಲ್ಲಿ 2023ರ ವಿಶ್ವಕಪ್‌ (ICC WorldCup) ಟೂರ್ನಿ ಆಯೋಜಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಭಾರತ – ಪಾಕಿಸ್ತಾನ ಕದನಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೆಲ ಅಭಿಮಾನಿಗಳಂತೂ ಮೂರು ತಿಂಗಳಿಗೆ ಮುಂಚೆಯೇ ಇಂಡೋ-ಪಾಕ್‌ (IND vs Pak) ಕದನ ವೀಕ್ಷಿಸಲೆಂದೇ ಅಹಮದಾಬಾದ್‌ನಲ್ಲಿ ಹೋಟೆಲ್‌ ರೂಂಗಳನ್ನ ಕಾಯ್ದಿರಿಸಿದ್ದಾರೆ, ಟ್ವಿಟ್ಟರ್‌ನಲ್ಲೂ ಟ್ರೆಂಡ್ ಅಲೆ ಎದ್ದಿದೆ.

    ಇಂಡೋ ಪಾಕ್‌ ಕದನ ಯಾವಾಗಲೂ ರಣ ರೋಚಕತೆಯಿಂದ ಕೂಡಿರುತ್ತದೆ. ಅದಕ್ಕಾಗಿ ಅತ್ಯಂತ ದುಬಾರಿ ಬೆಲೆಗೆ ಟಿಕೆಟ್‌ಗಳನ್ನ ಮಾರಾಟ ಮಾಡಲಾಗುತ್ತಿದೆ. ಆದರೂ ಹಿಂದೆಂದಿಗಿಂತಲೂ ಅತ್ಯಧಿಕ ಬೆಲೆಗೆ ಟಿಕೆಟ್‌ಗಳನ್ನ ಖರೀದಿಸುವಲ್ಲಿ ಅಭಿಮಾನಿಗಳು ನಿರತರಾಗಿದ್ದಾರೆ. ವಿವಿಧ ಹಂತಗಳಲ್ಲಿ 60 ಸಾವಿರದಿಂದ 1 ಲಕ್ಷ ರೂ, 18 ರಿಂದ 22 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದ್ರೆ ಆನ್‌ಲೈನ್ ಸ್ಫೋರ್ಟ್ಸ್‌ ಟಿಕೆಟ್ ಪ್ಲಾಟ್‌ಫಾರ್ಮ್ ವಿಯಾಗೊದಲ್ಲಿ 56 ಲಕ್ಷ ರೂ.ವರೆಗೆ ಟಿಕೆಟ್‌ ಮಾರಾಟವಾಗಿದ್ದು, ಅಭಿಮಾನಿಗಳನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೆಲವರು ಹಣ ಕೊಟ್ಟರೂ ಟಿಕೆಟ್‌ ಸಿಗದೇ ನಿರಾಸೆ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: Asia Cup 2023: ಬ್ಯಾಟಿಂಗ್‌ ಮಾಡದೆಯೇ ಟೀಂ ಇಂಡಿಯಾ ವಿರುದ್ಧ ದಾಖಲೆ ಬರೆದ ಪಾಕಿಸ್ತಾನ

    ಅಕ್ಟೋಬರ್‌ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಇಂಡೋ ಪಾಕ್‌ ಕದನ ಭದ್ರತಾ ಕಾರಣಗಳಿಂದ ಅಕ್ಟೋಬರ್‌ 14ಕ್ಕೆ ಬದಲಾವಣೆಗೊಂಡಿದೆ. ಸ್ಟೇಡಿಯಂನಲ್ಲಿ ಸೌತ್‌ ಪ್ರೀಮಿಯಂನ ವೆಸ್ಟ್‌-2 ಬ್ಲಾಕ್‌ನ ಪ್ರತಿ ಟಿಕೆಟ್‌ ಬೆಲೆ 19 ಲಕ್ಷ ರೂ.ಗಿಂತಲೂ ಹೆಚ್ಚಿಗೆಗೆ ಮಾರಾಟವಾಗ್ತಿದೆ. ಇದಕ್ಕೆ ಆಕ್ರೋಶಗೊಂಡಿರುವ ಕೆಲವು ಅಭಿಮಾನಿಗಳು 1.32 ಲಕ್ಷ ಟಿಕೆಟ್‌ಗಳಲ್ಲಿ ಎಷ್ಟು ಟಿಕೆಟ್‌ ಮಾರಾಟವಾಗಿದೆ ಎಂಬುದನ್ನ ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: Asia Cup 2023: ಟೀಂ ಇಂಡಿಯಾ ಸೋಲಿಸಲು ರಣತಂತ್ರ ರೂಪಿಸಿದ್ದೇವೆ – ನೇಪಾಳ ಕ್ಯಾಪ್ಟನ್‌ ಎಚ್ಚರಿಕೆ

    ಬ್ಲಾಕ್‌ ಮಾರ್ಕೆಟ್‌ನಲ್ಲೂ ಟಿಕೆಟ್‌ ಖರೀದಿ ಭರಾಟೆ ಜೋರಾಗಿದ್ದು 1.5 ಲಕ್ಷ ರೂ.ನಿಂದ ಆರಂಭಗೊಂಡು 15 ಲಕ್ಷ ರೂ.ಗಳಿಗೆ ಮಾರಾಟವಾಗ್ತಿದೆ. ಈ ಬಾರಿ ಟೀಂ ಇಂಡಿಯಾದ ಎಲ್ಲ ಪಂದ್ಯಗಳಿಗೂ ಟಿಕೆಟ್‌ ಬೇಡಿಕೆ ದರ ಹೆಚ್ಚಾಗಿದೆ. ಚೆನ್ನೈನ ಚಿದರಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಟಿಕೆಟ್‌ಗಳು 2.85 ಲಕ್ಷ ರೂ.ವರೆಗೆ, ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರೋ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಪಂದ್ಯದ ಟಿಕೆಟ್‌ 2.35 ಲಕ್ಷ ರೂ.ವರೆಗೆ ಹಾಗೂ ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಪಂದ್ಯದ ಟಿಕೆಟ್‌ 2.35 ಲಕ್ಷ ರೂ.ವರೆಗೆ ಮಾರಾಟವಾಗ್ತಿದೆ.

    ಸದ್ಯ ಏಷ್ಯಾಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ಆದ್ರೆ ಸೂಪರ್‌ ಫೋರ್‌ ಹಂತ ತಲುಪಿರುವ ಭಾರತ ಮತ್ತು ಪಾಕ್‌ ತಂಡಗಳ ನಡುವಿನ 2ನೇ ಪಂದ್ಯ ಸೆಪ್ಟೆಂಬರ್‌ 10ಕ್ಕೆ ನಿಗದಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ವಿರಾಟ್‌ – ಕಿಂಗ್‌ ಆದ ಕೊಹ್ಲಿಯ ರೋಚಕ ಜರ್ನಿ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ವಿರಾಟ್‌ – ಕಿಂಗ್‌ ಆದ ಕೊಹ್ಲಿಯ ರೋಚಕ ಜರ್ನಿ

    ಚೇಸ್‌ ಮಾಸ್ಟರ್‌, ಸೂಪರ್‌ ಸ್ಟಾರ್‌ ಕ್ರಿಕೆಟಿಗ, ಕ್ರಿಕೆಟ್‌ ಲೋಕದ ಕಿಂಗ್‌ ಎಂದೇ ಖ್ಯಾತಿ ಗಳಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ (Virat Kohli) ಇಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 15 ವರ್ಷ ಕಳೆದಿದೆ. 2018ರ ಆಗಸ್ಟ್‌ 18ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ಎಂಟ್ರಿ ಕೊಟ್ಟ ಇತಿಹಾಸ ಪುಟ ಸೇರಿದ್ದಾರೆ.

    ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿ ಕೋಟ್ಯಂತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾಜಿ ಹಾಗೂ ಹಾಲಿ ಕ್ರಿಕೆಟರ್‌ಗಳು ಶುಭಾಶಯದ ಹೂಮಳೆಗರೆದಿದ್ದಾರೆ. ಪ್ಲೇಯರ್‌ ಆಗಿ, ನಾಯಕನಾಗಿ, ಉಪನಾಯಕನಾಗಿ ಟೀಂ ಇಂಡಿಯಾಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತನಗಿಂತಲೂ ಕ್ರಿಕೆಟ್‌ ಲೋಕಕ್ಕೆ ಎಂಟ್ರಿಕೊಟ್ಟ ಅನೇಕ ದಿಗ್ಗಜರ ದಾಖಲೆಯನ್ನ ಮುರಿದು ಧೂಳೆಬ್ಬಿಸಿರುವ ವಿರಾಟ್‌ ಕೊಹ್ಲಿ ಇದೀಗ ವೃತ್ತಿ ಜೀವನದ ನಿರ್ಣಾಯಕ ಹಂತದಲ್ಲಿದ್ದಾರೆ. ಅಂದು ಸಾಮಾನ್ಯ ಹುಡುಗನಾಗಿ ಕ್ರಿಕೆಟ್‌ ಅಂಗಳಕ್ಕಿಳಿದ ಕೊಹ್ಲಿ ಇಂದು ಕಿಂಗ್‌ ಆಗಿ ಮೆರೆದಾಡುತ್ತಿದ್ದಾರೆ. ಇದನ್ನೂ ಓದಿ: ಸೋಲುವುದು ಕೂಡ ಒಳ್ಳೆಯದೇ, ಒಂದು ಸರಣಿ ಮ್ಯಾಟರ್‌ ಅಲ್ವೇ ಅಲ್ಲ – ಪಾಂಡ್ಯ ಸಮರ್ಥನೆ

    ಕೊಹ್ಲಿ ಎಂಟ್ರಿ ಕೊಟ್ಟಿದ್ದು ಯಾವಾಗ?

    2008ರ ಆಗಸ್ಟ್ 18ರಂದು ಶ್ರೀಲಂಕಾದ ಡಂಬುಲ್ಲಾ ಮೈದಾನದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕೊಹ್ಲಿ, ಇಂದು ನಿರ್ಣಾಯಕ ಹಂತದಲ್ಲಿದ್ದಾರೆ. ಜೊತೆಗೆ 2023ರ ಏಕದಿನ ವಿಶ್ವಕಪ್‌ ಬಳಿಕ ಕೊಹ್ಲಿ ನಿವೃತ್ತಿ ಹೊಂದುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ತಮ್ಮ ಮೊದಲ ಪಂದ್ಯದಲ್ಲಿ ಗೌತಮ್ ಗಂಭೀರ್​ ಅವರೊಂದಿಗೆ ಇನ್ನಿಂಗ್ಸ್​ ಆರಂಭಿಸಿದ್ದ ಕೊಹ್ಲಿ, ಕೇವಲ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಈ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಸೋಲು ಕಂಡಿತ್ತು. ಅಂದು 12 ರನ್​ಗಳಿಂದ ಆರಂಭವಾದ ಕೊಹ್ಲಿ ಇನ್ನಿಂಗ್ಸ್‌ ಇಂದು 25 ಸಾವಿರಕ್ಕೂ ಹೆಚ್ಚು ರನ್ ಕಲೆ ಹಾಕುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಇದನ್ನೂ ಓದಿ: ಇಂದಿನಿಂದ IND vs IRE ಟಿ20 ಸರಣಿ ಆರಂಭ – 11 ತಿಂಗಳ ಬಳಿಕ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ ಬುಮ್ರಾ

    76 ಅಂತಾರಾಷ್ಟ್ರೀಯ ಶತಕ

    ಅಂತಾರಾಷ್ಟ್ರೀಯ ಕ್ರಿಕೆಟ್​​​ನಲ್ಲಿ ಅತಿ ಹೆಚ್ಚು ಶತಕಗಳ ಸಾಧನೆ ಮಾಡಿದವರ ಪಟ್ಟಿಯಲ್ಲಿ 100 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್​ ಅಗ್ರಸ್ಥಾನದಲ್ಲಿದ್ದಾರೆ. ಅವರನ್ನು ಹಿಂದಿಕ್ಕುವ ಸಾಮರ್ಥ್ಯ ಕೊಹ್ಲಿಗಿದೆ ಎಂಬುದು ತಜ್ಞರ ಅಭಿಪ್ರಾಯ. ಏಕೆಂದರೆ 76 ಅಂತಾರಾಷ್ಟ್ರೀಯ ಶತಕ ಸಿಡಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದು, 24 ಶತಕ ಸಿಡಿಸಿದರೆ ಸಾಕು ಸಚಿನ್​ ಸಾಧನೆ ಸರಿಗಟ್ಟಲಿದ್ದಾರೆ ಎಂಬ ನಿರೀಕ್ಷೆ ಇದೆ. ಏಕದಿನದಲ್ಲಿ 46 ಶತಕ, ಟೆಸ್ಟ್​​​ನಲ್ಲಿ 29 ಶತಕ, ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.

    ನಾಯಕನಾಗಿ ಕೊಹ್ಲಿ ಸಾಧನೆ

    ಬ್ಯಾಟ್ಸ್‌ಮ್ಯಾನ್‌ ಆಗಿ ದಿಗ್ಗಜರ ದಾಖಲೆಗಳನ್ನ ಉಡೀಸ್‌ ಮಾಡಿರುವ ಕೊಹ್ಲಿ ನಾಯಕನಾಗಿಯೂ ಅಮೋಘ ಸಾಧನೆ ಮಾಡಿದ್ದಾರೆ. ಟೆಸ್ಟ್​​ ಕ್ರಿಕೆಟ್​​ನಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಎನಿಸಿದ್ದಾರೆ. ವಿದೇಶಿ ನೆಲದಲ್ಲಿ ಟೆಸ್ಟ್​ ಗೆಲ್ಲುವುದೇ ಕಷ್ಟ ಎನ್ನುವಂತಿದ್ದ ಕಾಲದಲ್ಲಿ ಕೊಹ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್‌ ನೆಲದಲ್ಲಿ ಅವಿಸ್ಮರಣೀಯ ಟೆಸ್ಟ್​ ಸರಣಿಗಳನ್ನ ಗೆದ್ದು ಟೀಂ ಇಂಡಿಯಾದ ಘನತೆ ಮೆರೆದಿದ್ದಾರೆ.

    68 ಟೆಸ್ಟ್​ ಪಂದ್ಯಗಳನ್ನು ಮುನ್ನಡೆಸಿರುವ ಕೊಹ್ಲಿ, ಬರೋಬ್ಬರಿ 40ರಲ್ಲಿ ಗೆಲುವು ದಾಖಲಿಸಿದ್ದಾರೆ. ಕೇವಲ 17 ಪಂದ್ಯಗಳಲ್ಲಿ ಸೋತಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ 11 ಪಂದ್ಯಗಳಲ್ಲಿ ಡ್ರಾ ನಲ್ಲಿ ಫಲಿತಾಂಶ ಅಂತ್ಯಕಂಡಿವೆ. ಗೆಲುವಿನ ಪ್ರಮಾಣ ಶೇ.58.82 ರಷ್ಟಿದೆ. ಏಕದಿನ ಕ್ರಿಕೆಟ್​​ನಲ್ಲೂ 95 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. 65 ಪಂದ್ಯಗಳಲ್ಲಿ ಗೆಲುವು, ಕೇವಲ 27 ಸೋಲು ಕಂಡಿದ್ದಾರೆ. ಗೆಲುವಿನ ಪ್ರಮಾಣ 68.42ರಷ್ಟಿದೆ. ಇನ್ನೂ 50 ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ ಕೊಹ್ಲಿ, 30 ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. 16 ಪಂದ್ಯಗಳಲ್ಲಿ ಸೋಲು ಕಂಡಿದ್ದು, 60ರಷ್ಟು ಗೆಲುವಿನ ಪ್ರಮಾಣ ಹೊಂದಿದ್ದಾರೆ.

    ಕೊಹ್ಲಿ ವೃತ್ತಿಜೀವನ

    2008ರಿಂದ ಒಟ್ಟು ಈವರೆಗೆ 275 ಏಕದಿನ ಪಂದ್ಯಗಳನ್ನ ಆಡಿರುವ ಕೊಹ್ಲಿ, 57.32ರ ಸರಾಸರಿಯಲ್ಲಿ, 46 ಶತಕ, 65 ಅರ್ಧಶತಕಗಳ ನೆರವಿನಿಂದ 12,898 ರನ್ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ 111 ಪಂದ್ಯಗಳಲ್ಲಿ 29 ಶತಕ, 7 ದ್ವಿಶತಕ, 29 ಅರ್ಧಶತಕಗಳ ನೆರವಿನಿಂದ 8,676 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್​ 254 ರನ್. 115 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 4,008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ, 1 ಶತಕ ಕೂಡ ಸೇರಿದೆ.

    ಐಸಿಸಿ ಟ್ರೋಫಿ ಗೆದ್ದಿಲ್ಲ ಅನ್ನೋದೆ ಚಿಂತೆ

    ಹಲವು ವಿಶೇಷ ಸಾಧನೆಗಳನ್ನು ಮಾಡಿರುವ ಕೊಹ್ಲಿ ನಾಯಕತ್ವದಲ್ಲಿ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ ಎಂಬ ಕೊರಗು ಕಾಡುತ್ತಿದೆ. ದೇಶ-ವಿದೇಶಗಳಲ್ಲಿ ದ್ವಿಪಕ್ಷೀಯ ಸರಣಿಗಳಲ್ಲಿ ಧೂಳೆಬ್ಬಿಸಿದ ಕಿಂಗ್​ ಕೊಹ್ಲಿ, ಎರಡು ಬಾರಿ ಭಾರತ ತಂಡವನ್ನು ಐಸಿಸಿ ಫೈನಲ್​ಗೇರಿಸಿದ್ದರು. 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2021ರ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​​ನಲ್ಲಿ ಭಾರತ ಮುಗ್ಗರಿಸಿತ್ತು. ಇನ್ನುಳಿದಂತೆ ಸೆಮಿಫೈನಲ್​​​ನಲ್ಲಿ ಹೆಚ್ಚಾಗಿ ಐಸಿಸಿ ಟೂರ್ನಿಗಳಲ್ಲಿ ಸೋಲು ಕಂಡಿದೆ. 2013ರ ಬಳಿಕ ಭಾರತ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿ ವಿಶ್ವಕಪ್‌ ಟೂರ್ನಿ ಕೊಹ್ಲಿಗೆ ಕೊನೆಯ ವಿಶ್ವಕಪ್‌ ಟೂರ್ನಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಟೀಂ ಇಂಡಿಯಾ ಕೊಹ್ಲಿಗಾಗಿ ಕಪ್‌ ಗೆಲ್ಲಲ್ಲೇಬೇಕೆಂಬುದು ಎಲ್ಲರ ಆಶಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್‌ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ

    ಇಸ್ಲಾಮಾಬಾದ್‌: ಪ್ರತಿಷ್ಠಿತ ಏಕದಿನ ಏಷ್ಯಾಕಪ್‌ (AsiaCup 2023) ಟೂರ್ನಿಗೆ ಇನ್ನೂ ಮೂರು ವಾರಗಳಷ್ಟೇ ಬಾಕಿಯಿದ್ದು, ಸೆ.2ರಂದು ನಡೆಯಲಿರುವ ಇಂಡೋಪಾಕ್‌ ರೋಚಕ ಕದನಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಪಾಕ್‌ ತಂಡದ ಮಾಜಿ ವೇಗಿ ಸರ್ಫರಾಜ್‌ ನವಾಜ್‌, ಟೀಂ ಇಂಡಿಯಾ (Team India) ವಿನಾಶದತ್ತ ಸಾಗುತ್ತಿದೆ ಎಂದು ಹೇಳುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟ್‌ ಅಭಿಮಾನಿಗಳಿಂದಲೂ ಟೀಕೆಗೆ ಗುರಿಯಾಗಿದ್ದಾರೆ.

    ಪಾಕಿಸ್ತಾನ (Pakistan) ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸರ್ಫರಾಜ್‌ ನವಾಜ್‌, ಟೀಂ ಇಂಡಿಯಾ ಇತ್ತೀಚೆಗೆ ವಿಂಡೀಸ್‌ (West Indies) ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ನಡೆಸಿದ ಪ್ರಯೋಗಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತ ತಂಡಕ್ಕೆ ಹೋಲಿಸಿದ್ರೆ ಪಾಕಿಸ್ತಾನ ತಂಡ 100% ಸ್ಥಿರವಾಗಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​ ಟೂರ್ನಿಗಳಿಗೆ ಅತ್ಯಂತ ಸ್ಥಿರವಾದ ತಂಡವನ್ನ ಹೊಂದಿದೆ. ಆದ್ರೆ ಭಾರತ ಇನ್ನೂ ಅಂತಿಮ ತಂಡವನ್ನ ಸಂಯೋಜನೆ ಮಾಡೋದಕ್ಕೆ ಹೆಣಗಾಡುತ್ತಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇನ್ಸ್ಟಾದಿಂದ ಅತಿ ಹೆಚ್ಚು ಹಣ – ಜಸ್ಟ್ 1 ಪೋಸ್ಟ್‌ಗೆ ಕೊಹ್ಲಿಗೆ ಸಿಗುತ್ತೆ ಕೋಟಿ ಕೋಟಿ

    ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಭಾರತ ತಂಡದ ಪರಿಸ್ಥಿತಿ ಅರ್ಥವಾಗುತ್ತಿದೆ. ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್​ಗೆ ತಮ್ಮ ತಂಡವನ್ನು ಸಂಯೋಜಿಸಲು ಪರದಾಡುತ್ತಿದೆ. ಯಾರನ್ನ ಯಾವ ಜಾಗದಲ್ಲಿ ಆಡಿಸಿದ್ರೆ ಉತ್ತಮ ಅನ್ನೋದೇ ಗೊಂದಲವಾಗಿ ಕಾಡುತ್ತಿದೆ. ಪದೆ ಪದೇ ನಾಯಕರು ಬದಲಾಗುತ್ತಿದ್ದಾರೆ. ಹೊಸ ಆಟಗಾರರನ್ನ ಕರೆ ತರುತ್ತಿದ್ದಾರೆ. ಮತ್ತೊಂದೆಡೆ ಆಟಗಾರರಿಗೆ ಗಾಯದ ಸಮಸ್ಯೆಗಳು. ಇದೆಲ್ಲಾ ನೋಡುತ್ತಿದ್ದರೆ, ಸರಿಯಾದ ಸಂಯೋಜನೆಗೆ ಸಿದ್ಧವಾಗಲು ಕಷ್ಟವಾಗುತ್ತಿದೆ ಎಂದೆನಿಸುತ್ತದೆ ಎಂದಿದ್ದಾರೆ.

    ಇದೇ ವೇಳೆ ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ ಕಂಬ್ಯಾಕ್‌ ಕುರಿತು ಕಳವಳ ವ್ಯಕ್ತಪಡಿಸಿದ ನವಾಜ್‌, ಟೀಂ ಇಂಡಿಯಾ ತನ್ನ ಅಭಿವೃದ್ಧಿಗೆ ಯಾವುದೇ ಪ್ರಯತ್ನ ನಡೆಸುತ್ತಿಲ್ಲ. ಬೆಂಚ್​ ಬಲವನ್ನ ಹೆಚ್ಚಿಸುವಲ್ಲಿ ವಿಫಲವಾಗುತ್ತಿದ್ದು, ವಿನಾಶದತ್ತ ಸಾಗುತ್ತಿದೆ. ಪ್ರಮುಖ ಟೂರ್ನಿಗಳು ಹತ್ತಿರದಲ್ಲಿರುವಾಗ ಯಾವ ರೀತಿ ಸಂಯೋಜನೆ ಮಾಡಬೇಕು ಎಂಬುದೇ ತಿಳಿದಿಲ್ಲ. ಈ ಅವಧಿಯಲ್ಲೂ ಪ್ರಯೋಗಗಳು ಅಗತ್ಯವೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ICC WorldCup 2023: ಭಾರತ-ಪಾಕ್‌ ಸೇರಿದಂತೆ ಪ್ರಮುಖ ಪಂದ್ಯಗಳ ವೇಳಾಪಟ್ಟಿ ಬದಲು

    ಐಸಿಸಿ ಟ್ರೋಫಿ ಗೆಲ್ಲುವ ಒತ್ತಡಕ್ಕೂ ಭಾರತ ಸಿಲುಕಿದೆ. ಏಕೆಂದರೆ ಕಳೆದ 10 ವರ್ಷಗಳಲ್ಲಿ ಟೀಂ ಇಂಡಿಯಾ ಐಸಿಸಿಯ ಯಾವುದೇ ಟ್ರೋಫಿ ಗೆದ್ದಿಲ್ಲ ಎಂದು ನವಾಜ್ ವಿವರಿಸಿದ್ದಾರೆ.

    ಇದೇ ಆಗಸ್ಟ್‌ 30 ರಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಕದಿನ ಏಷ್ಯಾಕಪ್‌ ಟೂರ್ನಿ ಆಯೋಜನೆಗೊಂಡಿದೆ. ಆ ನಂತರ ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ಭಾರತದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ICC WorldCup 2023: ಪಾಕಿಸ್ತಾನ ತಂಡ ಭಾರತಕ್ಕೆ ಬರೋದು ಫಿಕ್ಸ್

    ಇಸ್ಲಾಮಾಬಾದ್: ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡವು (Pakistan Cricket Team) 2023ರ ವಿಶ್ವಕಪ್ ಟೂರ್ನಿಗೆ ಭಾರತಕ್ಕೆ ಪ್ರಯಾಣಿಸಲಿದೆ ಎಂದು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಖಚಿತಪಡಿಸಿದೆ.

    2023ರ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗಾಗಿ ಪಾಕಿಸ್ತಾನ ತಂಡವು ಭಾರತಕ್ಕೆ ಪ್ರಯಾಣಿಸಲಿದೆ. ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಕ್ರೀಡೆಗೆ ಅಡ್ಡಿಯಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ಪಾಕ್ ತಂಡ ಭಾರತದ ವಿರುದ್ಧ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಆದ್ರೆ ಅಕ್ಟೋಬರ್ 15 ರಂದು ನವರಾತ್ರಿ ಉತ್ಸವದ ಆರಂಭದ ದಿನ ಆಗಿರುವುದರಿಂದ ದಿನಾಂಕ ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾರು ಅಪಘಾತ – ಇಬ್ಬರು ಮಕ್ಕಳು ಸೇರಿ 6 ಮಂದಿ ನೇಪಾಳಿ ಪ್ರಜೆಗಳು ದುರ್ಮರಣ

    ಕ್ರೀಡೆಯನ್ನು (Sports) ರಾಜಕೀಯದಿಂದೊಗೆ ಬೆರಸಬಾರದು ಎಂಬುದನ್ನ ಪಾಕಿಸ್ತಾನ ನಿರಂತರವಾಗಿ ಸಮರ್ಥಿಸಿಕೊಂಡಿದೆ. ಆದ್ದರಿಂದ ಮುಂಬರುವ ಐಸಿಸಿ ಟೂರ್ನಿಯಲ್ಲಿ ಕ್ರಿಕೆಟ್ ತಂಡವನ್ನು ಭಾರತಕ್ಕೆ ಕಳುಹಿಸಲು ನಿರ್ಧರಿಸಿದೆ ಎಂದು ಹೇಳಿದೆ.

    ಏಕದಿನ ಏಷ್ಯಾಕಪ್ (ODI AsiaCup) ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದ್ರೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತು. ಆದ್ದರಿಂದ ಶ್ರೀಲಂಕಾದಲ್ಲಿ ನಿಗದಿಯಾಗಿದೆ. ಭಾರತ ಕಠಿಣ ನಿರ್ಧಾರ ತೋರಿದ ಹೊರತಾಗಿಯೂ ಪಾಕಿಸ್ತಾನದ ಈ ನಿರ್ಧಾರ ತನ್ನ ಜವಾಬ್ದಾರಿಯನ್ನ ತೋರಿಸಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಕಳೆದ ಕೆಲವು ದಿನಗಳಲ್ಲಿ ಪಾಕಿಸ್ತಾನದ ಅಧಿಕಾರಿಗಳ ಸಮಿತಿ ಭಾರತಕ್ಕೆ ಭೇಟಿ ನೀಡಿತ್ತು. ಇಲ್ಲಿ ಪಾಕ್ ತಂಡಕ್ಕೆ ನೀಯೋಜಿಸಲಾದ ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಲು ವಿವಿಧ ಸ್ಥಳಗಳಿಗೆ ಅಧಿಕಾರಿಗಳ ತಂಡ ಪ್ರಯಾಣಿಸಿತ್ತು. 2016ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಸೆಣಸಾಟ ನಡೆಸಿತ್ತು. ಆ ನಂತರ ಇದೇ ಮೊದಲಿಗೆ ಭಾರತಕ್ಕೆ ಪಾಕ್ ತಂಡ ಪ್ರಯಾಣಿಸುತ್ತಿದೆ.


    ಭಾರತದಲ್ಲಿ ಪಾಕ್‌ ತಂಡದ ವೇಳಾಪಟ್ಟಿ ಹೀಗಿದೆ…

    ಪಾಕಿಸ್ತಾನ vs ಕ್ವಾಲಿಫೈಯರ್ 1, ಅಕ್ಟೋಬರ್ 6 – ಹೈದರಾಬಾದ್
    ಪಾಕಿಸ್ತಾನ vs ಕ್ವಾಲಿಫೈಯರ್ 2, ಅಕ್ಟೋಬರ್ 12 – ಹೈದರಾಬಾದ್
    ಪಾಕಿಸ್ತಾನ vs ಭಾರತ, ಅಕ್ಟೋಬರ್ 15 – ಅಹಮದಾಬಾದ್
    ಪಾಕಿಸ್ತಾನ vs ಆಸ್ಟ್ರೇಲಿಯಾ, ಅಕ್ಟೋಬರ್ 20 – ಬೆಂಗಳೂರು
    ಪಾಕಿಸ್ತಾನ vs ಅಫ್ಘಾನಿಸ್ತಾನ, ಅಕ್ಟೋಬರ್ 23- ಚೆನ್ನೈ
    ಪಾಕಿಸ್ತಾನ vs ದಕ್ಷಿಣ ಆಫ್ರಿಕಾ, ಅಕ್ಟೋಬರ್ 27- ಚೆನ್ನೈ
    ಪಾಕಿಸ್ತಾನ vs ಬಾಂಗ್ಲಾದೇಶ, ಅಕ್ಟೋಬರ್ 31 – ಕೋಲ್ಕತ್ತಾ
    ಪಾಕಿಸ್ತಾನ vs ನ್ಯೂಜಿಲೆಂಡ್, ನವೆಂಬರ್ 4 – ಬೆಂಗಳೂರು
    ಪಾಕಿಸ್ತಾನ vs ಇಂಗ್ಲೆಂಡ್, ನವೆಂಬರ್ 12- ಕೋಲ್ಕತ್ತಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC WorldCup 2023: ಈಡನ್‌ ಗಾರ್ಡನ್ಸ್‌ನ ಲೀಗ್‌, ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌‌ ದರ ನಿಗದಿ

    ICC WorldCup 2023: ಈಡನ್‌ ಗಾರ್ಡನ್ಸ್‌ನ ಲೀಗ್‌, ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌‌ ದರ ನಿಗದಿ

    ಕೋಲ್ಕತ್ತಾ: 2023ರ ಏಕದಿನ ವಿಶ್ವಕಪ್‌ (ICC World Cup 2023) ಟೂರ್ನಿಗೆ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ (Eden Gardens) ಕ್ರೀಡಾಂಗಣದಲ್ಲಿ ನಡೆಯುವ ಲೀಗ್‌ ಹಾಗೂ ಸೆಮಿಫೈನಲ್‌ ಪಂದ್ಯಗಳಿಗೆ ಟಿಕೆಟ್‌ ದರವನ್ನು ಬಹಿರಂಗಪಡಿಸಲಾಗಿದೆ.

    ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರೀಡಾಂಗಣವು 1 ಸೆಮಿಫೈನಲ್‌ ಸೇರಿದಂತೆ 5 ಪಂದ್ಯಗಳಿಗೆ ಆತಿಥ್ಯ ವಹಿಸಲಿದ್ದು, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್​ (CAB) ಮುಖ್ಯಸ್ಥ ಸ್ನೇಹಶಿಶ್ ಗಂಗೂಲಿ (Snehashis Ganguly) ವಿಶ್ವಕಪ್ ಪಂದ್ಯಗಳ ಟಿಕೆಟ್​ಗಳ ಬೆಲೆಯನ್ನ ಘೋಷಿಸಿದ್ದಾರೆ. ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಎಲ್ಲ ಪಂದ್ಯಗಳಿಗೆ 650 ರೂ.ಗಳಿಂದ 3,000 ರೂ.ಗಳವರೆಗೆ ಬೆಲೆಗಳು ಇರಲಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಐತಿಹಾಸಿಕ ಮೈದಾನವು ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ಭಾರತ-ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ಮತ್ತು 2ನೇ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ಯಾವ ಪಂದ್ಯಕ್ಕೆ ಎಷ್ಟು ಶುಲ್ಕ?
    ಮೊದಲ ಪಂದ್ಯಕ್ಕೆ (ನೆದರ್ಲ್ಯಾಂಡ್ಸ್ ವಿರುದ್ಧ ಬಾಂಗ್ಲಾದೇಶ) 650 ರೂ., 4ನೇ ಪಂದ್ಯಕ್ಕೆ (ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ) ಮತ್ತು 2ನೇ ಪಂದ್ಯಕ್ಕೆ (ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ) 800 ರೂ.ಗಳಿಂದ ಪ್ರಾರಂಭವಾಗಿ 2,200 ರೂ.ಗಳವರೆಗೆ ಟಿಕೆಟ್ ದರ ನಿಗದಿಮಾಡಲಾಗಿದೆ. ಮತ್ತೊಂದೆಡೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಸೆಮಿಫೈನಲ್ ಪಂದ್ಯದ ಟಿಕೆಟ್ ದರ 900-3,000 ರೂ.ವರೆಗೆ ಇರಲಿದೆ.

    ಅಕ್ಟೋಬರ್ 28 ರಂದು ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಆರಂಭಿಕ ಪಂದ್ಯಕ್ಕೆ ಮೇಲಿನ ಹಂತದ ಸೀಟುಗಳಿಗೆ ಕನಿಷ್ಠ ಟಿಕೆಟ್ ದರ 650 ರೂ. ಡಿ ಮತ್ತು ಹೆಚ್ ಬ್ಲಾಕ್ ಟಿಕೆಟ್‌ಗಳ ಬೆಲೆ 1,000 ರೂ ಆಗಿದ್ದರೆ, ಬಿ, ಸಿ, ಕೆ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳ ಬೆಲೆ 1500 ರೂ. ನಿಗದಿಯಾಗಿದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ, ಹಾಗೆಯೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಟಿಕೆಟ್ ದರವು ಮೇಲಿನ ಹಂತಗಳಿಗೆ 800 ರೂ. ಡಿ ಮತ್ತು ಎಚ್ ಬ್ಲಾಕ್ ಟಿಕೆಟ್‌ಗಳು ರೂ 1200, ಸಿ ಮತ್ತು ಕೆ ಬ್ಲಾಕ್ ಟಿಕೆಟ್‌ಗಳು ರೂ 2,000 ಮತ್ತು ಬಿ ಮತ್ತು ಎಲ್ ಬ್ಲಾಕ್ ಟಿಕೆಟ್‌ಗಳು ಗರಿಷ್ಠ ರೂ 2,200ಗೆ ಲಭ್ಯವಿರುತ್ತವೆ.

    2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಸಮಯದಲ್ಲಿ, ಕೋಲ್ಕತಾದಲ್ಲಿ ಅಪೂರ್ಣ ನಿರ್ಮಾಣ ಕಾಮಗಾರಿಗಳಿಂದಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಳ ಮುಖಾಮುಖಿ ಪಂದ್ಯಕ್ಕೆ ಆತಿಥ್ಯ ವಹಿಸಲು ವಿಫಲಗೊಂಡಿತ್ತು. ಇದನ್ನೂ ಓದಿ: ನಾಕೌಟ್ ಪಂದ್ಯಗಳಲ್ಲೇ ಟೀಂ ಇಂಡಿಯಾ ಕೈ ಕೊಡ್ತಿರೋದೇಕೆ – ಕಾರಣ ತಿಳಿಸಿದ ದಾದಾ

    ಇಂಡೋ-ಪಾಕ್ ಕದನ ಕೂಡ ನಡೆಯಬಹುದು:
    ಈಡನ್‌ ಗಾರ್ಡನ್ಸ್‌ನ 5 ಪಂದ್ಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಮಿಫೈನಲ್ ಪಂದ್ಯವೂ ಸೇರಬಹುದು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆದರೆ ನವೆಂಬರ್ 16ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಈ ಪಂದ್ಯ ನಿಗದಿಯಾಗಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • PublicTV Explainer: ಇಂಡೋ-ಪಾಕ್‌ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..

    PublicTV Explainer: ಇಂಡೋ-ಪಾಕ್‌ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..

    ಪ್ರತಿಷ್ಠಿತ ಐಸಿಸಿ ವಿಶ್ವಕಪ್‌ (ICC World Cup 2023) ಟೂರ್ನಿಗೆ ಇನ್ನು ಎರಡೂವರೆ ತಿಂಗಳಷ್ಟೇ ಸಮಯ ಬಾಕಿಯಿದ್ದರೂ ಪಾಕಿಸ್ತಾನ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ದಿನಕ್ಕೊಂದು ಕ್ಯಾತೆ ತೆಗೆಯುತ್ತಿದೆ. ಏಕೆಂದರೆ ಇನ್ನೆರಡು ತಿಂಗಳ ಒಳಗೆ ಚುನಾವಣೆ ನಡೆಯಲಿದ್ದು, ವಿಶ್ವಕಪ್​ ವೇಳೆ ಹೊಸ ಸರ್ಕಾರ ರಚನೆಯಾಗಲಿದೆ. ಹೀಗಾಗಿ ಹಾಲಿ ಸರ್ಕಾರಕ್ಕಿಂತ ಹೊಸ ಸರ್ಕಾರದ ನಿಲುವೇ ವಿಶ್ವಕಪ್​ನಲ್ಲಿ ಪಾಕ್​ ತಂಡ ಆಡುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎನ್ನಲಾಗಿದೆ. ಈ ನಡುವೆ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯಲ್ಲೂ (PCB) ಹೊಸ ಆಡಳಿತ ಮಂಡಳಿ ಬರಲಿದೆ. ಸದ್ಯ ಪಿಸಿಬಿ ಚುನಾವಣೆ ಜುಲೈ 17ರ ವರೆಗೆ ಮುಂದೂಡಿಕೆಯಾಗಿದೆ.

    ಬಾಬರ್​ ಅಜಮ್​ ಸಾರಥ್ಯದ ಪಾಕಿಸ್ತಾನ ತಂಡವನ್ನು ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಕಳುಹಿಸುವ ಬಗ್ಗೆ ಪಿಸಿಬಿ ಈಗಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದರೂ, ಪಾಕ್​ ತಂಡ ವಿಶ್ವಕಪ್​ನಲ್ಲಿ ಭಾಗವಹಿಸುವ ಬಗ್ಗೆ ಐಸಿಸಿ (ICC) ವಿಶ್ವಾಸ ವ್ಯಕ್ತಪಡಿಸಿದೆ. ಇನ್ನು ಪಾಕ್​ ತಂಡ ರಾಜಕೀಯ ಕಾರಣಗಳಿಂದಾಗಿ ವಿಶ್ವಕಪ್​ನಲ್ಲಿ ಮುಂಬೈನಲ್ಲಿ ಯಾವುದೇ ಪಂದ್ಯ ಆಡದಂತೆ ವೇಳಾಪಟ್ಟಿ ರೂಪಿಸಲಾಗಿದೆ, ಅದಕ್ಕೆ ಕಾರಣವೂ ಇದೆ. ಇದನ್ನೂ ಓದಿ: ವಿಶ್ವಕಪ್‌ ಟೂರ್ನಿ ಆಡಲು ಪಾಕ್‌ ತಂಡ ಭಾರತಕ್ಕೆ ಬರಲ್ಲ – ಮತ್ತೆ ಕ್ಯಾತೆ ತೆಗೆದ ಪಾಕ್‌ ಸಚಿವ

    2023ರ ಏಕದಿನ ಏಷ್ಯಾಕಪ್‌ ಟೂರ್ನಿಯನ್ನಾಡಲು ಭಾರತ ತಂಡವನ್ನು ಪಾಕ್‌ಗೆ ಕಳುಹಿಸಲು ಬಿಸಿಸಿಐ ನಿರಾಕರಿಸಿದ ನಂತರ ACC (ಏಷ್ಯನ್‌ ಕ್ರಿಕೆಟ್‌ ಸಮಿತಿ) ಹೈಬ್ರಿಡ್‌ ಮಾದರಿಯಲ್ಲಿ ಆಡಿಸಲು ನಿರ್ಧರಿಸಿತು. ಏಷ್ಯಾಕಪ್‌ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯಿದ್ದರೂ ಪಾಕ್‌ನಲ್ಲಿ ಕೇವಲ 4 ಪಂದ್ಯಗಳನ್ನಾಡಲು ಮಾತ್ರವೇ ಅನುಮತಿ ನೀಡಿತು. ಉಳಿದ 9 ಪಂದ್ಯಗಳನ್ನ ಶ್ರೀಲಂಕಾದಲ್ಲಿ ಆಡಿಸಲು ನಿರ್ಧರಿಸಿತು. ಇದೇ ಕಾರಣಕ್ಕಾಗಿ ಪಾಕಿಸ್ತಾನ ಕೂಡ ವಿಶ್ವಕಪ್‌ ಆಡುವ ವಿಚಾರದಲ್ಲಿ ಅಂತಿಮ ನಿರ್ಧಾರ ಪ್ರಕಟಿಸದೇ ದಿನಕ್ಕೊಂದು ತಗಾದೆ ತೆಗೆದುಕೊಂಡು ಕುಳಿತಿದೆ. ಇದೀಗ ಭಾರತಕ್ಕೆ ವಿಶ್ವಕಪ್‌‌ ಟೂರ್ನಿಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲು ಪ್ರತ್ಯೇಕ ಸಮಿತಿಯನ್ನೂ ರಚನೆ ಮಾಡಿ, ಚರ್ಚಿಸುತ್ತಿದೆ.

    1987 ಮತ್ತು 1996ರಲ್ಲಿ ಪಾಕಿಸ್ತಾನದ ಜೊತೆಗೆ 2011ರಲ್ಲಿ ಬಾಂಗ್ಲಾದೇಶದ ಜೊತೆಗೆ ಸಹ ಆತಿಥ್ಯದೊಂದಿಗೆ ವಿಶ್ವಕಪ್‌ ಟೂರ್ನಿ ಆಯೋಜಿಸಿದ್ದ ಭಾರತ ಈ ಬಾರಿ ಪೂರ್ಣ ಆತಿಥ್ಯ ವಹಿಸಿಕೊಂಡಿದೆ. ಈಗಾಗಲೇ ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ದೇಶದ ವಿವಿಧ ರಾಜ್ಯಗಳ 12 ಕ್ರೀಡಾಂಗಣದಲ್ಲಿ ಟೂರ್ನಿ ನಿಗದಿ ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತ-ಪಾಕಿಸ್ತಾನ ಅಕ್ಟೋಬರ್‌ 15ರಂದು ಅಹಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಕಾದಾಟ ನಡೆಸಲಿವೆ.

    ಇಂಡೋ-ಪಾಕ್‌ ಕದನ ಯಾಕಿಷ್ಟು ರೋಚಕ? 

    ಭಾರತ ಮತ್ತು ಪಾಕಿಸ್ತಾನ  ತಂಡಗಳು ಎದುರಾಗುತ್ತಿವೆ ಅಂದ್ರೆ ಸಾಕು ಅದೊಂದು ರೋಚಕ ಕ್ಷಣವಾಗಿಯೇ ಮಾರ್ಪಟ್ಟಿರುತ್ತದೆ. ದೇಶದ ಮೂಲೆ ಮೂಲೆಯಲ್ಲಿರುವ ಕ್ರಿಕೆಟ್‌ ಅಭಿಮಾನಿಗಳು ಈ ಪಂದ್ಯಗಳನ್ನು ಕಣ್ತುಂಬಿಕೊಳ್ಳದೇ ಇರಲಾರರು. ಏಕೆ ಇಂಡೋ ಪಾಕ್‌ ಕದನ ಇಷ್ಟೊಂದು ಕೂತುಹಲ? ಭಾರತ ತಂಡವನ್ನ ಏಕೆ ಪಾಕಿಸ್ತಾನಕ್ಕೆ ಕಳುಹಿಸುತ್ತಿಲ್ಲ? ವಿಶ್ವಕಪ್‌ ಟೂರ್ನಿಗೆ ಪಾಕ್‌ ಏಕೆ ಹಿಂದೇಟು ಹಾಕುತ್ತಿದೆ? ಎಂಬುದನ್ನಿಲ್ಲಿ ತಿಳಿಯೋಣ. ಇದನ್ನೂ ಓದಿ: ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್‌ – ಇಲ್ಲಿದೆ ಡಿಟೇಲ್ಸ್‌

    ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಗಿ ಬೇರ್ಪಟ್ಟ ನಂತರ ಭಾರತದ ವಿರುದ್ಧ ದ್ವೇಷ ಸಾಧಿಸುತ್ತಲೇ ಬಂದಿತು. 1947-48ರಲ್ಲಿ ರಾಜ ಹರಿಸಿಂಗ್‌ ಭಾರತದೊಂದಿಗೆ ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇಂಡೋ ಪಾಕ್‌ ಯುದ್ಧ (Indo Pak War) ನಡೆಯಿತು. ಆ ನಂತರ 1965ರಲ್ಲಿ ಕಾಶ್ಮೀರಕ್ಕಾಗಿ ನಡೆದ ಯುದ್ಧ, 1971ರಲ್ಲಿ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ವಿಮೋಚನೆಗಾಗಿ ನಡೆದ ಯುದ್ಧ, 1999 ರಲ್ಲಿ ನಡೆದ ಕಾರ್ಗಿಲ್‌ ಯುದ್ಧ ಇವೆಲ್ಲವೂ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನ ಮತ್ತಷ್ಟು ಹದಗೆಡಿಸುತ್ತಾ ಹೋಯಿತು. ಆದ್ರೆ ಕ್ರೀಡೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕಾರ್ಗಿಲ್‌ ಯುದ್ಧದ ನಂತರವೂ ಭಾರತ ಮತ್ತು ಪಾಕ್‌ ತಂಡಗಳು ದ್ವಿಪಕ್ಷಿಯ ಸರಣಿ, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡವು ಸಹ ಪಾಕಿಸ್ತಾನದಲ್ಲೇ ದ್ವಿಪಕ್ಷಿಯ ಸರಣಿಗಳನ್ನಾಡಿದೆ. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿ (Mumbai Attack) ಎರಡು ರಾಷ್ಟ್ರಗಳ ಮೇಲೆ ಭಾರೀ ಪರಿಣಾಮ ಬೀರಿತು.

    ನೆನಪಿದೆಯಾ ಮುಂಬೈ ದಾಳಿ:

    2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.

    ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದ್ರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ. ಇದನ್ನೂ ಓದಿ: ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್‌ ರೆಡಿ – ಪಾಕ್‌ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್‌ ಆಜಂ

    2016ರ‌ಲ್ಲಿ ಕೊನೆಯದ್ದಾಗಿ ಭಾರತಕ್ಕೆ ಬಂದಿದ್ದ ಪಾಕ್‌ ಈಡನ್‌ ಗಾರ್ಡನ್‌ನಲ್ಲಿ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿದಿತ್ತು. ಅಂದು ಮಳೆ ಅಡ್ಡಿಯಾದ್ದರಿಂದ ಪಾಕ್‌ ತಂಡ ನೀಡಿದ್ದ 119 ರನ್‌ಗಳ ಗುರಿಯನ್ನು 18 ಓವರ್‌ಗಳಲ್ಲಿ ತಲುಪಲು ಭಾರತಕ್ಕೆ ಟಾರ್ಗೆಟ್‌ ನೀಡಲಾಗಿತ್ತು. ಆದ್ರೆ ಬಲಿಷ್ಠ ಭಾರತ ತಂಡ 15.5 ಓವರ್‌ಗಳಲ್ಲೇ ಈ ಗುರಿ ಪೂರೈಸಿತ್ತು. ಈ ಬಾರಿ ಪಾಕ್‌ ತಂಡಕ್ಕೆ ಮುಂಬೈನಲ್ಲಿ ಯಾವುದೇ ಪಂದ್ಯವನ್ನು ನಿಗದಿಪಡಿಸಿಲ್ಲ.

    1992ರಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 1992ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 7 ಬಾರಿ ಮುಖಾಮುಖಿಯಾಗಿವೆ. 1992, 1999, 2003, 2011, 2015 ಹಾಗೂ 2019ರಲ್ಲಿ ಇತ್ತಂಡಗಳು ಮುಖಾಮುಖಿಯಾಗಿವೆ. ಅಲ್ಲದೇ ಟಿ20 ವಿಶ್ವಕಪ್‌ನಲ್ಲಿ 7 ಬಾರಿ, ಚಾಂಪಿಯನ್ಸ್‌ ಟ್ರೋಫಿಯಲ್ಲಿ 5 ಬಾರಿ ಒಟ್ಟು 19 ಬಾರಿ ಇತ್ತಂಡಗಳು ಮುಖಾಮುಖಿಯಾಗಿವೆ. ಭಾರತ ಇದುವರೆಗೆ ಏಷ್ಯಾಕಪ್‌ ಟೂರ್ನಿಯಲ್ಲಿ ಪಾಕ್‌ ವಿರುದ್ಧ ಸೋತಿದೆಯೇ ಹೊರತು ವಿಶ್ವಕಪ್‌ ಟೂರ್ನಿಯಲ್ಲಿ ಸೋತಿಲ್ಲ. ಈ ಬಾರಿಯೂ ಪಾಕ್‌ ವಿರುದ್ಧ ಗೆಲ್ಲುವ ವಿಶ್ವಾಸದಲ್ಲೇ ಮುಂದುವರಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಕಪ್‌ ಟೂರ್ನಿ ಆಡಲು ಪಾಕ್‌ ತಂಡ ಭಾರತಕ್ಕೆ ಬರಲ್ಲ – ಮತ್ತೆ ಕ್ಯಾತೆ ತೆಗೆದ ಪಾಕ್‌ ಸಚಿವ

    ವಿಶ್ವಕಪ್‌ ಟೂರ್ನಿ ಆಡಲು ಪಾಕ್‌ ತಂಡ ಭಾರತಕ್ಕೆ ಬರಲ್ಲ – ಮತ್ತೆ ಕ್ಯಾತೆ ತೆಗೆದ ಪಾಕ್‌ ಸಚಿವ

    ಇಸ್ಲಾಮಾಬಾದ್‌: ಏಕದಿನ ಏಷ್ಯಾಕಪ್‌ (Asia Cup 2023) ಟೂರ್ನಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ದರೆ ಪಾಕ್‌ ತಂಡ ಕೂಡ ವಿಶ್ವಕಪ್‌ ಟೂರ್ನಿ (ICC World Cup 2023) ಆಡೋದಕ್ಕೆ ಬರೋದಿಲ್ಲ ಎಂದು ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಹೇಳಿಕೆ ನೀಡಿದ್ದಾರೆ.

    ಈ ವರ್ಷ ಭಾರತದಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ಭಾಗವಹಿಸುವ ಕುರಿತು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ (Shehbaz Sharif), ಸಮಿತಿ ರಚಿಸಿದ ಒಂದು ದಿನದ ನಂತರ ಸಚಿವ ಮಜಾರಿ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಏಕದಿನ ವಿಶ್ವಕಪ್‌ನಲ್ಲೂ ಬುಮ್ರಾ ಕಣಕ್ಕಿಳಿಯೋದು ಡೌಟ್‌ – ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ

    ವಿಶ್ವಕಪ್‌ಗೆ ಇನ್ನೂ 3 ತಿಂಗಳು ಬಾಕಿಯಿದೆ. ಅದಕ್ಕೂ ಮುನ್ನ ಟೀಂ ಇಂಡಿಯಾ (Team India) ಸಾಲು-ಸಾಲು ಸರಣಿಗಳನ್ನ ಎದುರಿಸಬೇಕಿದೆ. ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌, ಏಕದಿನ ಹಾಗೂ ಟಿ20 ಸರಣಿ, ನಂತರ ಐರ್ಲೆಂಡ್‌ ವಿರುದ್ಧ ಟಿ20 ಸರಣಿ ಆಡಲಿದೆ. ಆ ಬಳಿಕ ಆಗಸ್ಟ್‌ 31 ರಿಂದ ಸೆಪ್ಟಂಬರ್‌ 17ರ ವರೆಗೆ ನಡೆಯುವ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳಲಿದೆ. ಇದನ್ನೂ ಓದಿ: ಆ.31 ರಿಂದ ಏಕದಿನ ಏಷ್ಯಾಕಪ್; ಲಂಕಾ, ಪಾಕ್ ಆತಿಥ್ಯ – ಬುಮ್ರಾ, ಅಯ್ಯರ್ ಕಂಬ್ಯಾಕ್ ಸಾಧ್ಯತೆ

    ಏಷ್ಯಾಕಪ್‌ ಟೂರ್ನಿಯು ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಈ ಬಾರಿ ಏಷ್ಯಾಕಪ್ ಟೂರ್ನಿಯ ಹಕ್ಕು ಪಾಕಿಸ್ತಾನದ ಬಳಿಯೇ ಇದ್ದರೂ, ಭಾರತ-ಪಾಕಿಸ್ತಾನದಲ್ಲಿ ಆಡಲು ಬಿಸಿಸಿಐ ಒಪ್ಪಿಗೆ ನಿರಾಕರಿಸಿದ ನಂತರ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾಕಪ್ ಕ್ರಿಕೆಟ್ ಸಮಿತಿ ನಿರ್ಧರಿಸಿದೆ. ಇದರಿಂದ ಪಾಕ್‌ ಅಸಮಾಧಾನಗೊಂಡಿದೆ. ಭಾರತವು ತಮ್ಮ ಏಷ್ಯಾಕಪ್ ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಡಬೇಕೆಂದು ಒತ್ತಾಯಿಸಿದೆ. ನಾವೂ ಕೂಡ ವಿಶ್ವಕಪ್‌ ಟೂರ್ನಿಗೆ ಅದೇ ಬೇಡಿಕೆಯನ್ನ ಮುಂದಿಡುತ್ತೇವೆ ಎಂದು ಹೇಳಿದ್ದಾರೆ.

    ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ನಾನೂ ಸಹ 11 ಸಚಿವರ ಪೈಕಿ ಒಬ್ಬನಿದ್ದೇನೆ. ಈ ಸಮಸ್ಯೆ ಚರ್ಚಿಸಿ ಪ್ರಧಾನಿಗೆ ಪಾಕ್‌ ತಂಡವನ್ನು ಭಾರತಕ್ಕೆ ಕಳುಹಿಸದಂತೆ ಶಿಫಾರಸು ಮಾಡುತ್ತೇನೆ. ಅವರು ಅಂತಿಮ‌ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ವಿಶ್ವಕಪ್‌ ಟೂರ್ನಿಗೆ ಬಾರದಿದ್ರೆ ICC ಬಳಿಯಿದೆ ಮಾಸ್ಟರ್‌ ಪ್ಲ್ಯಾನ್‌ – ಇದರಿಂದ ಯಾರಿಗೆ ನಷ್ಟ?

    ಭಾರತವು ಕ್ರೀಡೆಯನ್ನ ರಾಜಕೀಯಕ್ಕೆ ತರುತ್ತಿದೆ. ಕೆಲ ದಿನಗಳ ಹಿಂದೆ ಭಾರತದಿಂದ ಬೇಸ್‌ ಬಾಲ್‌ ಟೂರ್ನಿಗೆ ಕ್ರೀಡಾಪಟುಗಳ ತಂಡ ಆಗಮಿಸಿತ್ತು. ಸುಮಾರು 60 ಮಂದಿ ಇದ್ದರು. ಇಲ್ಲಿ ಆಡಿ ಟೂರ್ನಿ ಗೆದ್ದುಕೊಂಡು ಹೋಗಿದ್ದಾರೆ. ಆ ನಂತರ ನಮ್ಮ ಪಾಕಿಸ್ತಾನ ತಂಡವು ಸಾಫ್‌ ಫುಟ್ಬಾಲ್‌ ಟೂರ್ನಿಗೆ ಭಾರತಕ್ಕೆ ಆಗಮಿಸಿದೆ. ಆದರೂ ಬಿಸಿಸಿಐ ಏಕೆ ಒಪ್ಪುತ್ತಿಲ್ಲ ಅನ್ನೋದೇ ಆರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಭಾರತ ಏಕೆ ಪಾಕ್‌ಗೆ ಹೋಗ್ತಿಲ್ಲ: ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. ಆದರೆ 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ (ICC) ಟೂರ್ನಿ ಅಥವಾ ಏಷ್ಯಾ ಕಪ್ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • MSDಗೆ 42ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಂದ KGF ರೇಂಜ್‌ನ ಟ್ರೈಲರ್‌ ರಿಲೀಸ್‌!

    MSDಗೆ 42ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಂದ KGF ರೇಂಜ್‌ನ ಟ್ರೈಲರ್‌ ರಿಲೀಸ್‌!

    – ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಮಹಿ ನಡೆದು ಬಂದ ಹಾದಿ ನಿಮಗೆಷ್ಟು ಗೊತ್ತು.?

    ಮುಂಬೈ: ಭಾರತ ಕ್ರಿಕೆಟ್‌ ತಂಡದ ಮೋಸ್ಟ್​ ಸಕ್ಸಸ್​ ಫುಲ್​ ಕ್ಯಾಪ್ಟನ್ ಎಂ.ಎಸ್‌ ಧೋನಿ (MS Dhoni) ಅವರು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿಯಾಗಿರುವ ಧೋನಿ ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಮಹತ್ವದ ದಾಖಲೆಗಳನ್ನು ಬರೆದಿದೆ.

    ವಿಶ್ವ ಶ್ರೇಷ್ಠ ನಾಯಕ ʻದಿ ಲೆಜೆಂಡ್‌ʼ (The Legend)ಎಂದೇ ಪರಿಗಣಿತವಾಗಿರುವ ಕ್ಯಾಪ್ಟನ್ ಕೂಲ್​ ಮಹೇಂದ್ರ ಸಿಂಗ್ ಧೋನಿ ಅವರಿಗೆ ಹಾಲಿ-ಮಾಜಿ, ಅಭಿಮಾನಿಗಳು ಸೇರಿದಂತೆ ವಿಶ್ವಾದ್ಯಂತ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಜಾಲತಾಣದಲ್ಲೂ ಟಾಪ್​ ಟ್ರೆಂಡ್​​​ ಮಹಿ ಇದ್ದಾರೆ. ಅಭಿಮಾನಿಗಳು ಕೆಜಿಎಫ್‌ ಟ್ರೇಲರ್‌ ಮ್ಯೂಸಿಕ್‌ ಹಾಗೂ ಡೈಲಾಗ್‌ ಬಳಸಿಕೊಂಡು ಮಹಿಗಾಗಿ ವಿಶೇಷ ಟ್ರೈಲರ್‌ ಸಹ ಬಿಡುಗಡೆ ಮಾಡಿದ್ದಾರೆ. ಇನ್ನೂ ಕೆಲವರು ವಿಶೇಷ ಪೇಯಿಂಟಿಗ್‌ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಟೀಂ ಇಂಡಿಯಾದಲ್ಲಿ ಮಹಿ ನಡೆದು ಬಂದ ಹಾದಿ:
    ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಭಾರತ ತಂಡ 2007 ಐಸಿಸಿ ಟಿ20 ವಿಶ್ವಕಪ್‌ ಗೆದ್ದಿತ್ತು. ನಂತರ, 2011ರಲ್ಲಿ ತವರಿನಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿಯೂ ಭಾರತಕ್ಕೆ 2ನೇ ವಿಶ್ವಕಪ್‌ ತಂದುಕೊಟ್ಟಿದ್ದರು. 2013ರಲ್ಲಿ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟಿದ್ದರು. ಆ ಮೂಲಕ ಐಸಿಸಿ ಹೆಚ್ಚು ಟ್ರೋಫಿಗಳನ್ನು ಗೆದ್ದ ಭಾರತದ ಏಕೈಕ ನಾಯಕ ಎಂಬ ಖ್ಯಾತಿಗೆ ಧೋನಿ ಭಾಜನರಾಗಿದ್ದರು.

    2004ರ ಡಿಸೆಂಬರ್‌ 24 ರಂದು ಬಾಂಗ್ಲಾದೇಶ ವಿರುದ್ಧ ಎಂ.ಎಸ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಸರಣಿಯಲ್ಲಿ ವಿಫಲರಾದ ಧೋನಿ, 2005ರ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕ್ಲಿಕ್‌ ಆದರು. ವಿಶಾಖಪಟ್ಟಣಂನಲ್ಲಿ ನಡೆದಿದ್ದ 5ನೇ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದರು. ಆನಂತರ ಮಹಿ ಒಂದೊಂದೇ ಮೈಲುಗಲ್ಲು ಸಾಧಿಸುತ್ತಾ ಹೋದರು. ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ನಲ್ಲಿನ ಸಾಧನೆ ಪರಿಗಣಿಸಿ ಭಾರತ ಸರ್ಕಾರ ರಾಜೀವ್‌ ಗಾಂಧಿ ಖೇಲ್‌ ರತ್ನ (2007), ಪದ್ಮ ಶ್ರೀ (2009) ಹಾಗೂ ಪದ್ಮ ಭೂಷಣ್‌ (2018) ನೀಡಿ ಗೌರವಿಸಿದೆ. ಇದನ್ನೂ ಓದಿ: ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್‌ ರೆಡಿ – ಪಾಕ್‌ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್‌ ಆಜಂ

    ಮಹೇಂದ್ರ ಸಿಂಗ್‌ ತಮ್ಮ ವೃತ್ತಿ ಜೀವನದಲ್ಲಿ 90 ಟೆಸ್ಟ್ ಪಂದ್ಯಗಳಿಂದ 38.1 ಸರಾಸರಿಯಲ್ಲಿ 4,876 ರನ್‌ ಗಳಿಸಿದ್ದಾರೆ. ಕ್ಯಾಪ್ಟನ್‌ ಆಗಿ ಪ್ರತಿನಿಧಿಸಿದ 60 ಟೆಸ್ಟ್‌ ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. 18 ಪಂದ್ಯಗಳಲ್ಲಿ ಸೋಲಾಗಿದ್ದು, 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಇದರಲ್ಲಿ 6 ಶತಕಗಳು ಹಾಗೂ 33 ಅರ್ಧಶತಕಗಳನ್ನು ಗಳಿಸಿದ್ದಾರೆ. 350 ಏಕದಿನ ಪಂದ್ಯಗಳಿಂದ 50.6 ಸರಾಸರಿಯಲ್ಲಿ 10,773 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 10 ಶತಕಗಳು ಹಾಗೂ 73 ಅರ್ಧಶತಕಗಳು ಒಳಗೊಂಡಿವೆ. 98 ಟಿ20 ಪಂದ್ಯಗಳಿಂದ 1617 ರನ್‌ ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ. 2010-11 ಮತ್ತು 2012-13ರ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಟ್ರೋಫಿ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ವೈಟ್‌ವಾಶ್ ಮಾಡಿದ ಏಕೈಕ ಭಾರತೀಯ ನಾಯಕ ಸಹ ಎನಿಸಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ 200 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಮಹಿ ಅದರಲ್ಲಿ 110 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದಾರೆ. 74 ಪಂದ್ಯಗಳಲ್ಲಿ ಭಾರತ ಸೋತಿದ್ದು, 5 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. 11 ಪಂದ್ಯಗಳಲ್ಲಿ ಯಾವುದೇ ಫಲಿತಾಂಶವಿಲ್ಲದೇ ಹೋಯಿತು. 72 ಅಂತಾರಾಷ್ಟ್ರೀಯ ಟಿ20 ಗಳಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿ 41ರಲ್ಲಿ ಜಯ ತಂದುಕೊಟ್ಟಿದ್ದಾರೆ. 28 ಪಂದ್ಯಗಳಲ್ಲಿ ಭಾರತ ಸೋತಿದೆ. 2 ಪಂದ್ಯಗಳು ಫಲಿತಾಂಶ ನೀಡಲು ವಿಫಲವಾಗಿದ್ದು, ಒಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದನ್ನೂ ಓದಿ: ICC World Cup 2023: ಟೀಂ ಇಂಡಿಯಾ ಪರಿಷ್ಕೃತ ವೇಳಾಪಟ್ಟಿ ರಿಲೀಸ್‌ – ಇಲ್ಲಿದೆ ಡಿಟೇಲ್ಸ್‌

    IPL ನಲ್ಲಿ 5 ಬಾರಿ ಚಾಂಪಿಯನ್‌:

    ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನ ಮುನ್ನಡೆಸುತ್ತಿರುವ ಎಂ.ಎಸ್‌ ಧೋನಿ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್‌ ಟ್ರೋಫಿ ಗೆದ್ದಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲೂ ಯಶಸ್ವಿ ನಾಯಕ ಎನಿಸಿಕೊಂಡಿದ್ದು, 250 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ. 38.79 ಸರಾಸರಿಯಲ್ಲಿ 5,082 ರನ್‌ ಪೂರೈಸಿದ್ದಾರೆ. ಐಪಿಎಲ್‌ನಲ್ಲಿ 24 ಅರ್ಧಶತಕಗಳನ್ನ ಬಾರಿಸಿದ್ದಾರೆ. ಅವರು 142 ಕ್ಯಾಚ್‌ಗಳು, 42 ಸ್ಟಂಪಿಂಗ್‌ಗಳನ್ನು ಸಹ ಹೊಂದಿದ್ದಾರೆ.

    ಧೋನಿ ನಾಯಕತ್ವದಲ್ಲಿ ಗೆದ್ದ ಪ್ರಮುಖ ಟ್ರೋಫಿಗಳು:

    2007ರ ಐಸಿಸಿ ಟಿ20 ವಿಶ್ವಕಪ್‌.
    2008ರ ಸಿಬಿ ಸೀರೀಸ್‌ (ಆಸ್ಟ್ರೇಲಿಯಾ-ಶ್ರೀಲಂಕಾ ವಿರುದ್ಧ)
    2009ರ ಕಾಂಪ್ಯಾಕ್‌ ಕಪ್‌
    2010ರ ಏಷ್ಯಾ ಕಪ್‌
    2011ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌
    2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ
    2013ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ತ್ರಿಕೋನ ಸರಣಿ
    2016ರ ಏಷ್ಯಾಕಪ್‌ ಟೂರ್ನಿ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹಿ ಸಾಧನೆ:

    538 ಪಂದ್ಯಗಳು
    17,266 ರನ್‌ಗಳು
    16 ಶತಕಗಳು
    108 ಅರ್ಧಶತಕಗಳು
    359 ಸಿಕ್ಸರ್ಸ್‌
    634 ಕ್ಯಾಚಸ್‌
    195 ಸ್ಟಂಪಿಂಗ್ಸ್‌
    224 ಟೆಸ್ಟ್‌ನಲ್ಲಿ ಗರಿಷ್ಠ ಸ್ಕೋರ್‌
    183 ಒಡಿಐನಲ್ಲಿ ಗರಿಷ್ಠ ಸ್ಕೋರ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]