Tag: ಐಸಿಯೂ

  • ಸರಿಯಾದ ಸಮಯಕ್ಕೆ ಸಿಗದ ಆಸ್ಪತ್ರೆ ಐಸಿಯು ಕೀ – ವೃದ್ಧೆ ಸಾವು

    ಸರಿಯಾದ ಸಮಯಕ್ಕೆ ಸಿಗದ ಆಸ್ಪತ್ರೆ ಐಸಿಯು ಕೀ – ವೃದ್ಧೆ ಸಾವು

    – ಐಸಿಯು ಬೀಗ ಮುರಿದು ಚಿಕಿತ್ಸೆ

    ಭೋಪಾಲ್: ಸರಿಯಾದ ಸಮಯಕ್ಕೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಕೀ ಸಿಗದೇ ಹೋಗಿದ್ದಕ್ಕೆ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.

    ಉಸಿರಾಟದ ತೊಂದರೆ ಮತ್ತು ಅಧಿಕ ರಕ್ತದೊತ್ತಡದಿಂದ ವೃದ್ಧೆಯನ್ನು ಗುರುವಾರ ರಾತ್ರಿ ಉಜ್ಜಯಿನಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದರಿಂದ ಅಲ್ಲಿನ ವೈದ್ಯರು ಆಕೆಯ ಕೊರೊನಾ ಪರೀಕ್ಷೆಗೆ ಮಾದರಿಯನ್ನು ತೆಗೆದುಕೊಂಡ ನಂತರ ಮಾಧವ್ ನಗರದ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.

    ಆಕೆಯನ್ನು ಅಲ್ಲಿನಿಂದ ಆರ್.ಡಿ ಗಾರ್ಡಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ ಎಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. 55 ವರ್ಷ ವಯಸ್ಸಿನ ವೃದ್ಧೆಯನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು) ಲಾಕ್ ಆಗಿದ್ದು, ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿ ಕೂಡ ಆಸ್ಪತ್ರೆಯಲ್ಲಿ ಇರಲಿಲ್ಲ.

    ಅಲ್ಲಿದ್ದ ಆಸ್ಪತ್ರೆ ಸಿಬ್ಬಂದಿ ಕೀಯನ್ನು ಹುಡುಕಿದ್ದಾರೆ ಆದರೆ ಸಿಕ್ಕಿಲ್ಲ. ಹಾಗಾಗಿ ಐಸಿಯುನ ಬೀಗ ಮುರಿಯಲಾಗಿದೆ. ಬೀಗ ಮುರಿಯಲು ತಡವಾದ ಕಾರಣ ರೋಗಿಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬೀಗ ಮುರಿದ ನಂತರ ಆಕೆಯನ್ನು ಐಸಿಯುಗೆ ಸ್ಥಳಾಂತರಿಸಿ ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಜ್ಜಯಿನಿ ಮುಖ್ಯ ವೈದ್ಯಾಧಿಕಾರಿ ಅನುಸುಯಾ ಗವ್ಲಿ ಅವರು, ವೃದ್ಧೆ ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದರು. ನಮ್ಮ ತಜ್ಞರು ಕೊರೊನಾ ಪರೀಕ್ಷೆಗಾಗಿ ಮಾದರಿಗಳನ್ನು ತೆಗೆದುಕೊಂಡಿದ್ದಾರೆ. ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಆರೋಗ್ಯದ ಸ್ಥಿತಿ ಹದಗೆಟ್ಟಿದ್ದ ಕಾರಣ ವೃದ್ಧೆ ನಿಧನರಾಗಿದ್ದಾರೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

  • ಸಿದ್ದಗಂಗಾ ಶ್ರೀಗಳಿಗೆ ಐಸಿಯೂನಲ್ಲೇ ಚಿಕಿತ್ಸೆ ಮುಂದುವರಿಕೆ

    ಸಿದ್ದಗಂಗಾ ಶ್ರೀಗಳಿಗೆ ಐಸಿಯೂನಲ್ಲೇ ಚಿಕಿತ್ಸೆ ಮುಂದುವರಿಕೆ

    ಚೆನ್ನೈ: ತುಮಕೂರು ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆದು 9 ದಿನಗಳು ಆಗಿದ್ದು, ನಿಧಾನವಾಗಿ ಗಾಯ ವಾಸಿಯಾಗುತ್ತಿದೆ. ಆದರೆ ಅವರಿಗೆ ನ್ಯೂಟ್ರಿಷನ್ ಕೊರತೆ ಇರುವುದರಿಂದ ಐಸಿಯೂನಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ವೈದ್ಯ ಡಾ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ವೈದ್ಯರು, ಶ್ರೀಗಳ ಆರೋಗ್ಯ ಉತ್ತಮವಾಗಿದೆ. ಶಸ್ತ್ರ ಚಿಕಿತ್ಸೆಯಿಂದ ಆಗಿರುವ ಗಾಯ ವಾಸಿಯಾಗುತ್ತಿದೆ. ಶ್ರೀಗಳಿಗೆ ನ್ಯೂಟ್ರಿಷನ್ ಕೊರತೆ ಇದೆ. ಈ ಕುರಿತು ಹೆಚ್ಚಿನ ಗಮನ ನೀಡಲಾಗುತ್ತಿದೆ. ಅಲ್ಲದೇ ಫಿಸಿಯೋಥೆರಪಿ ಚಿಕಿತ್ಸೆಯ ಅಗತ್ಯವಿದ್ದು, ಸದ್ಯ ಶ್ರೀಗಳಿಗೆ ವಾಕ್ ಕೂಡ ಮಾಡಿಸಲಾಗುತ್ತಿದೆ. ಅವರಿಗೆ ಯಾವುದೇ ಬೇಯಿಸಿದ ಆಹಾರ ನೀಡದೆ ವೈದ್ಯರ ಸೂಚನೆ ಮೇರೆಗೆ ನ್ಯೂಟ್ರಿಷನ್ ನೀಡಲಾಗುತ್ತಿದೆ. ಶ್ರೀಗಳು ಆತ್ಮಲಿಂಗ ಪೂಜೆಯನ್ನು ಮಾಡುತ್ತಿದ್ದು, ಬಹುಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ ಸೂಚನೆಯಂತೆ ಚಿಕಿತ್ಸೆ ಹಾಗೂ ಆಹಾರವನ್ನು ನೀಡಲಾಗುತ್ತಿದೆ ಎಂದರು.

    ಇಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಳಿಕ ಮಾತನಾಡಿದ ಅವರು, ಶ್ರೀಗಳು ಆರೋಗ್ಯವಾಗಿದ್ದಾರೆ. ಆದಷ್ಟು ಬೇಗ ಗುಣಮುಖರಾಗುತ್ತಾರೆ. ನನ್ನನ್ನು ಗುರುತು ಹಚ್ಚಿ ಮಾತನಾಡಿಸಿದ್ದಾರೆ. ಯಾವಾಗ ಬಂದಿದ್ದು, ಪ್ರಸಾದ ಸ್ವೀಕರಿಸಿದೆಯಾ ಎಂದು ವಿಚಾರಿಸಿದರು ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ಶ್ರೀಗಳು ಐಸಿಯೂನಿಂದ ಸ್ಪೆಷಲ್  ವಾರ್ಡ್ ಗೆ ಶಿಫ್ಟ್

    ನಡೆದಾಡುವ ಶ್ರೀಗಳು ಐಸಿಯೂನಿಂದ ಸ್ಪೆಷಲ್ ವಾರ್ಡ್ ಗೆ ಶಿಫ್ಟ್

    – ಆಸ್ಪತ್ರೆಗೆ ಯಾರೂ ಬರಬೇಡಿ ಕಿರಿಯ ಶ್ರೀ ಮನವಿ

    ಚೆನ್ನೈ: ಇಲ್ಲಿನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದ್ದು, ಇಂದು ಸ್ಪೆಷಲ್ ವಾರ್ಡ್‍ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

    ವೈದ್ಯ ಡಾ.ಪರಮೇಶ್ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆಯಾಗಿದೆ. ಬುಧವಾರ ರಾತ್ರಿಯಿಂದ ಇಡ್ಲಿ ಹಾಗೂ ಬೇಯಿಸಿದ ಬೆಳೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.

    ಕಿರಿಯ ಶ್ರೀಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಶ್ರೀಗಳನ್ನ ಭೇಟಿ ಮಾಡಲು 4 ದಿನಗಳು ಅವಕಾಶವಿಲ್ಲ. ಏಕೆಂದರೆ ಶ್ರೀಗಳನ್ನು ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಐಸಿಯೂನಲ್ಲಿ ಇದ್ದಂತೆ ವಾರ್ಡ್ ನಲ್ಲಿಯೂ ಎಚ್ಚರಿಕೆ ನೀಡಬೇಕು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದ್ದರಿಂದ ಶ್ರೀಗಳನ್ನು ನೋಡಲು ಯಾರೂ ಬರಬೇಡಿ. ಮತ್ತೊಮ್ಮೆ ಶ್ರೀಗಳಿಗೆ ಸೋಂಕಾದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವಾರದಿಂದ ಭಕ್ತರು ಶ್ರೀಗಳನ್ನು ಮಠದಲ್ಲೇ ನೋಡಬಹುದು. ಶ್ರೀಗಳನ್ನು ನೋಡಲು ಬರೋರ ಸಂಖ್ಯೆ ಹೆಚ್ಚಾದರೆ ಅಕ್ಕಪಕ್ಕದ ರೋಗಿಗಳಿಗೂ ತೊಂದರೆಯಾಗುತ್ತೆ. ಹೀಗಾಗಿ ಯಾರೂ ಬರಬೇಡಿ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಮನವಿ ಮಾಡಿದ್ದಾರೆ.

    ವೈದ್ಯರೊಂದಿಗೆ ಚರ್ಚೆ ನಡೆಸಿ ಶ್ರೀಗಳನ್ನು ಯಾವಾಗ ಡಿಸ್ಚಾರ್ಜ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಶ್ರೀಗಳ ಆರೋಗ್ಯ ಚೇತರಿಕೆ ಬಗ್ಗೆ ಭಕ್ತರು ದೇವರಲ್ಲಿ ಮನವಿ ಮಾಡಿಕೊಳ್ಳಿ. ಶೀಘ್ರವೇ ದರ್ಶನಕ್ಕೆ ಅವಕಾಶ ಲಭಿಸುತ್ತದೆ ಎಂದು ಸ್ಪಷ್ಟಪಡಿಸಿದರು.

    ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಡಿ.08 ರಂದು ಪಿತ್ತಕೋಶ ಸೋಂಕಿನ ಆಪರೇಷನ್‍ಗೆ ಸಿದ್ದಗಂಗಾ ಶ್ರೀಗಳು ಒಳಗಾಗಿದ್ದರು. ಬಳಿಕ ಅವರಿಗೆ ಐಸಿಯೂನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಮಂಗಳವಾರದಿಂದ ಶ್ರೀಗಳಿಗೆ ದ್ರವರೂಪದ ಆಹಾರ ನೀಡಲಾಗಿತ್ತು. ಸದ್ಯ ಶ್ರೀಗಳು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಆದರೆ ವಾಕಿಂಗ್ ಮಾಡುವ ಸಾಧ್ಯತೆಗಳು ಇದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv