Tag: ಐಶ್ವರ್ಯಾ

  • ಮುಂಗಾರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾಳೆ `ದೇವಕಿ’!

    ಮುಂಗಾರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾಳೆ `ದೇವಕಿ’!

    ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸಿರೋ ಹೌರಾಬ್ರಿಡ್ಜ್ ಎಂಬ ಚಿತ್ರ ದೇವಕಿಯಾಗಿ ಶೀರ್ಷಿಕೆ ಬದಲಾಯಿಸಿಕೊಂಡಿರೋದು ಗೊತ್ತೇ ಇದೆ. ಲೋಹಿತ್ ನಿರ್ದೇಶನದ ಈ ಚಿತ್ರ ಆರಂಭ ಕಾಲದಿಂದಲೂ ಸಕಾರಾತ್ಮಕವಾಗಿ ಸುದ್ದಿಯಾಗುತ್ತಾ ಬಂದಿದೆ. ಈ ಹಿಂದೆ ಮಮ್ಮಿ ಎಂಬ ಹಿಟ್ ಚಿತ್ರ ನೀಡಿದ್ದ ಲೋಹಿತ್ ಮತ್ತು ಪ್ರಿಯಾಂಕಾ ಉಪೇಂದ್ರ ದೇವಕಿಯ ಮೂಲಕ ಮತ್ತೊಂದು ಗೆಲುವು ದಾಖಲಿಸುವ ಉತ್ಸಾಹದಿಂದಿದ್ದಾರೆ.

    ಯುವ ನಿರ್ದೇಶಕ ಲೋಹಿತ್ ಮಮ್ಮಿ ಎಂಬ ಹಾರರ್ ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದರು. ಈ ಮೂಲಕವೇ ಖುದ್ದು ರಿಯಲ್ ಸ್ಟಾರ್ ಉಪೇಂದ್ರ ಅವರಿಂದಲೂ ಮೆಚ್ಚುಗೆ ಗಳಿಸಿಕೊಂಡಿದ್ದರು.

    ಪ್ರಿಯಾಂಕಾ ಎರಡನೇ ಸಲವೂ ಲೋಹಿತ್ ನಿರ್ದೇಶನದ ದೇವಕಿಯಲ್ಲಿ ಪ್ರಧಾನ ಪಾತ್ರ ನಿರ್ವಹಿಸಲು ಮನಸು ಮಾಡಿರೋದೇ ಕಥೆಯ ಕಾರಣಕ್ಕಾಗಿಯಂತೆ. ಅವರು ಯಾವ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡಿದ್ದರೋ, ಅದನ್ನು ನಿವಾಳಿಸಿ ಎಸೆಯುವಂಥಾ ವಿಶೇಷತೆಗಳೊಂದಿಗೇ ದೇವಕಿ ಚಿತ್ರ ರೂಪುಗೊಂಡಿದೆ.

    ಕಥೆಯ ವಿಚಾರ ಹಾಗಿರಲಿ. ಚಿತ್ರೀಕರಣಗೊಂಡ ದೃಷ್ಟಿಯಿಂದಲೂ ದೇವಕಿ ಹಲವಾರು ವಿಶೇಷತೆಗಳು, ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡು ಉಳಿಕೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರೋ ದೇವಕಿ ಚಿತ್ರ ಉಳಿದೆಲ್ಲ ಅಂಶಗಳೊಂದಿಗೆ ಮನಮಿಡಿಯುವ ಕಥಾನಕವೊಂದನ್ನು ಹೊಂದಿದೆ.

    ವಿಶೇಷ ಅಂದರೆ, ಉಪೇಂದ್ರ ಮತ್ತು ಪ್ರಿಯಾಂಕಾ ದಂಪತಿಯ ಪುತ್ರಿ ಐಶ್ವರ್ಯಾ ಈ ಚಿತ್ರದ ಮೂಲಕ ಮೊದಲ ಸಲ ಬಣ್ಣ ಹಚ್ಚಿದ್ದಾರೆ. ಅವರು ಈ ಸಿನಿಮಾದಲ್ಲಿಯೂ ಪ್ರಿಯಾಂಕಾ ಮಗಳಾಗಿಯೇ ನಟಿಸಿದ್ದಾರಂತೆ. ಮಗಳನ್ನು ಕಳೆದುಕೊಂಡ ತಾಯಿಯೊಬ್ಬಳು ಆಕೆಗಾಗಿ ಹೇಗೆಲ್ಲ ಹಂಬಲಿಸುತ್ತಾಳೆಂಬ ಕಥಾನಕ ಇಲ್ಲಿದೆ. ಆದರೆ ಥ್ರಿಲ್ಲರ್ ಜಾಡಿನಲ್ಲಿ ಸಾಗೋ ಈ ಕಥೆ ಕ್ಷಣ ಕ್ಷಣವೂ ಪ್ರೇಕ್ಷಕರನ್ನು ಕಾಡುತ್ತಾ, ಎಲ್ಲ ಅಂದಾಜುಗಳನ್ನೂ ತಲೆ ಕೆಳಗಾಗಿಸುತ್ತಾ ರೋಚಕ ವಾಗಿ ಸಾಗುತ್ತದೆಯಂತೆ.

    ಇನ್ನುಳಿದಂತೆ ದೇವಕಿಯ ಇನ್ನಷ್ಟು ವಿಶೇಷತೆಗಳು ಚಿತ್ರೀಕರಣ ನಡೆದ ರೀತಿಯಲ್ಲಿಯೇ ಇದೆಯಂತೆ. ದೇವಕಿಯ ಹೆಚ್ಚಿನ ಭಾಗದ ಚಿತ್ರೀಕರಣ ಕೊಲ್ಕತ್ತಾದಲ್ಲಿಯೇ ನಡೆದಿದೆ. ಇಲ್ಲಿರೋ ನೂರು ವರ್ಷಗಳಷ್ಟು ಹಳೆಯದಾದ ಸೌತ್ ಪಾರ್ಕ್ ಸಿಮೆಸ್ಟ್ರಿಯಲ್ಲಿ ದೇವಕಿಯ ಚಿತ್ರೀಕರಣ ನಡೆದಿದೆ. ಎಪ್ಪತ್ತರ ದಶಕದಲ್ಲಿಯೇ ಮುಚ್ಚಲ್ಪಟ್ಟಿದ್ದ ಈ ಸ್ಥಳದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಸತ್ತಾಗ ಸಮಾಧಿ ಮಾಡಲಾಗುತ್ತಿತ್ತಂತೆ.

    ಈ ಸ್ಥಳದಲ್ಲಿ ಈವರೆಗೂ ಕೆಲವೇ ಕೆಲ ಚಿತ್ರಗಳ ಚಿತ್ರೀಕರಣ ನಡೆದಿದೆಯಷ್ಟೆ. ಸತ್ಯಜಿತ್ ರೇ ಮತ್ತು ಅಮಿತಾಭ್ ಬಚ್ಚನ್ ಅವರ ಒಂದೊಂದು ಚಿತ್ರಗಳಿಗಷ್ಟೇ ಇಲ್ಲಿ ಚಿತ್ರೀಕರಣ ನಡೆಸಲು ಅವಕಾಶ ಸಿಕ್ಕಿತ್ತಂತೆ. ಆದರೆ ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಈ ಸ್ಥಳದಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಮೊದಲ ಚಿತ್ರವಾಗಿಯೂ ದೇವಕಿ ದಾಖಲೆ ಬರೆದಿದೆ.

  • ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ರವಿ ಹಿಸ್ಟರಿಯಲ್ಲಿ ಸಿಕ್ಕ ಕನ್ನಡದ ‘ಐಶ್ವರ್ಯ’!

    ಬೆಂಗಳೂರು: ಒಂದು ಹೊಸಾ ಬಗೆಯ ಚಿತ್ರ ಹಲವಾರು ಹೊಸಾ ಪ್ರತಿಭೆಗಳನ್ನೂ ಪರಿಚಯಿಸುತ್ತೆ. ಇದೇ ವಾರ ಬಿಡುಗಡೆಯಾಗುತ್ತಿರೋ ಮಧುಚಂದ್ರ ನಿರ್ದೇಶನದ ರವಿ ಹಿಸ್ಟರಿ ಚಿತ್ರವೂ ಈ ಸಾಲಿನಲ್ಲಿ ಸೇರಿಕೊಳ್ಳುತ್ತೆ. ಈ ಸಿನಿಮಾದ ನಾಯಕಿಯಾಗಿ ನಟಿರುವ ಐಶ್ವರ್ಯಾ ರಾವ್ ಕೂಡಾ ಹೊಸಾ ಪ್ರತಿಭೆಯೇ. ಕಾಲೇಜು ದಿನಗಳಲ್ಲಿ ನೃತ್ಯದತ್ತ ಕದಲಿದ ಹೆಜ್ಜೆಗಳೇ ಐಶ್ವರ್ಯಾರನ್ನು ನಟಿಯಾಗಿ ರೂಪುಗೊಳ್ಳುವಂತೆ ಮಾಡಿದ್ದೊಂದು ಚೆಂದದ ಕಥೆ. ಅದನ್ನು ರವಿ ಹಿಸ್ಟರಿಯಲ್ಲಿನ ಪಾತ್ರವೇ ಮತ್ತಷ್ಟು ರೋಚಕವಾಗಿಸೋ ಭರವಸೆ ಐಶ್ವರ್ಯಾರದ್ದು.

    ಹೀಗೆ ರವಿಹಿಸ್ಟರಿಯ ನಾಯಕಿಯಾಗಿ ಎಂಟ್ರಿ ಕೊಡುತ್ತಿರೋ ಐಶ್ವರ್ಯಾ ಮೂಲವಿರೋದು ಉಡುಪಿಯಲ್ಲಿ. ಕನ್ನಡದ ಕವಯತ್ರಿ ಸುಜಾತಾ ಅವರ ಪುತ್ರಿಯಾದ ಐಶ್ವರ್ಯಾ ಬೆಳೆದದ್ದೆಲ್ಲ ಮೈಸೂರಿನಲ್ಲಿಯೇ. ಡಾಲಿ ಧನಂಜಯ್ ಥರದ ಪ್ರತಿಭೆಗಳು ಅರಳಿಕೊಂಡ ಸಂಸ್ಥೆಯಲ್ಲಿಯೇ ನಟನಾ ತರಬೇತಿಯನ್ನೂ ಪಡೆದುಕೊಂಡಿರೋ ಐಶ್ವರ್ಯಾ ಮೂಲತಃ ನೃತ್ಯಗಾರ್ತಿ. ಇವರ ಪಾಲಿಗೆ ರವಿ ಹಿಸ್ಟರಿಯ ನಾಯಕಿಯಾಗೋ ಅವಕಾಶ ಕೂಡಿ ಬಂದಿದ್ದೇ ಆಕಸ್ಮಿಕವಾಗಿ.

    ರವಿ ಹಿಸ್ಟರಿ ಚಿತ್ರಕ್ಕೆ ಐಶ್ವರ್ಯಾ ಆಡಿಷನ್ ಮೂಲಕವೇ ಆಯ್ಕೆಯಾಗಿದ್ದರು. ಚಿತ್ರೀಕರಣಕ್ಕೂ ಮುಂಚೆ ವರ್ಕ್ ಶಾಪ್ ಗೆ ಹಾಜರಾಗಿ ಅಲ್ಲಿ ಸಂಪೂರ್ಣ ತರಬೇತಿಯನ್ನೂ ಕೂಡಾ ಐಶ್ವರ್ಯಾ ಪಡೆದುಕೊಂಡಿದ್ದರು. ನಿರ್ದೇಶಕರು ಸೇರಿದಂತೆ ಎಲ್ಲರೂ ಪ್ರತೀ ಹಂತದಲ್ಲಿಯೂ ಆತ್ಮೀಯವಾಗಿಯೇ ತಿದ್ದುತ್ತಾ ಈ ಪಾತ್ರಕ್ಕೆ ಪರಿಣಾಮಕಾರಿಯಾಗಿ ಜೀವ ತುಂಬಲು ಸಹಕರಿಸಿದರೆಂಬ ಧನ್ಯತಾಭಾವ ಐಶ್ವರ್ಯಾಗಿದೆ.

    ಈ ಚಿತ್ರದಲ್ಲಿ ಐಶ್ವರ್ಯಾರದ್ದು ಕಾಲೇಜು ಹುಡುಗಿಯ ಪಾತ್ರ. ಇಂಜಿನಿಯರಿಂಗ್ ಓದುತ್ತಿರೋ ಹುಡುಗಿಯಾಗಿ ಅವರು ನಟಿಸಿದ್ದಾರೆ. ಪಕ್ಕಾ ಬೋಲ್ಡ್ ಶೇಡಿನ ಈ ಪಾತ್ರ ಯಾವುದೇ ಸನ್ನಿವೇಶಕ್ಕಾದರೂ ಹಿಂದೆ ಮುಂದೆ ನೋಡದೇ ರಿಯಾಕ್ಟ್ ಮಾಡುತ್ತೆ. ಎಂಥಾ ಸಂದರ್ಭವಿದ್ದರೂ ಮುನ್ನುಗ್ಗುತ್ತೆ. ಅಂಥಾದ್ದೊಂದು ಪಾತ್ರವನ್ನು ಎಂಜಾಯ್ ಮಾಡುತ್ತಲೇ ನಿಭಾಯಿಸಿರುವ ಐಶ್ವರ್ಯಾ ಈ ಮೂಲಕ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದಾರೆ.

    ಸಾಮಾನ್ಯವಾಗಿ ಯಾರೇ ಹೆಣ್ಣುಮಕ್ಕಳು ನಟಿಯಾಗ ಬೇಕೆಂಬ ಆಸೆಯಿಟ್ಟುಕೊಂಡರೆ ಮೊದಲು ವಿರೋಧ ವ್ಯಕ್ತವಾಗೋದೇ ಮನೆ ಮಂದಿಯಿಂದ. ಆದರೆ ಈ ವಿಚಾರದಲ್ಲಿ ಐಶ್ವರ್ಯಾ ಅದೃಷ್ಟವಂತೆ. ಯಾಕೆಂದರೆ ಬಾಲ್ಯದಿಂದಲೂ ಮಗಳಿಗೆ ಅಪ್ಪಟ ಸಾಹಿತ್ಯಕ ವಾತಾವರಣವನ್ನು ಸೃಷ್ಟಿ ಮಾಡಿಕೊಟ್ಟಿದ್ದವರು ಅವರಮ್ಮ ಸುಜಾತ. ಸ್ವತಃ ಕವಯತ್ರಿ, ಕಥೆಗಾರ್ತಿಯೂ ಆಗಿರುವ ಸುಜಾತಾ ಅವರು ಚೌಕಟ್ಟುಗಳಾಚೆಗೆ ಆಲೋಚಿಸುತ್ತಾ ಬದುಕುವ ಕ್ರಮವನ್ನು ಮಗಳಿಗೂ ಕಲಿಸಿದ್ದರು. ಸ್ವತಃ ನಟಿಯಾಗಬೇಕೆಂದು ಆಸೆ ಹೊಂದಿದ್ದ ಸುಜಾತಾರಿಗೆ ಕೆಲ ಕಟ್ಟುಪಾಡುಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದಲೇ ಮಗಳ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಿಂದಲೇ ಐಶ್ವರ್ಯಾರ ಆಸಕ್ತಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದರು.

    ಅಮ್ಮನ ಇಂಥಾ ಪ್ರೋತ್ಸಾಹದಿಂದಲೇ ಮರಿಮಲ್ಲಪ್ಪ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಶ್ವರ್ಯಾ ನೃತ್ಯಪಟುವಾಗಿ ಹೊರಹೊಮ್ಮಿದ್ದರು. ಸಾಲ್ಸಾ, ಬೆಲ್ಲಿ ಡ್ಯಾನ್ಸ್ ಮುಂತಾದ ನೃತ್ಯ ಪ್ರಾಕಾರಗಳಲ್ಲಿ ಪಾರಂಗತೆಯಾಗಿರುವ ಐಶ್ವರ್ಯಾ ಇದುವರೆಗೂ ಐವತ್ತಕ್ಕೂ ಹೆಚ್ಚು ಯಶಸ್ವೀ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ಐಶ್ವರ್ಯಾ ನೃತ್ಯ ಪ್ರದರ್ಶನವೊಂದನ್ನು ನೋಡಿದವರೊಬ್ಬರು ಸಿನಿಮಾ ಆಫರ್ ಕೊಟ್ಟಿದ್ದರಂತೆ. ಐಶ್ವರ್ಯಾ ಮನೇಲಿ ಬಂದು ಮಾತಾಡಿ ಅಂದಾಗ ಅಮ್ಮ ಸುಜಾತಾರಿಗೂ ಕಥೆ ಹೇಳಿದ್ದರಂತೆ. ಆ ಮೂಲಕವೇ ಐಶ್ವರ್ಯಾ ನಟಿಯಾಗಿ ಪಾದಾರ್ಪಣೆ ಮಾಡಿದ್ದರು. ವಿಶೇಷವೆಂದರೆ, ರವಿ ಹಿಸ್ಟರಿಗಿಂತಲೂ ಮೊದಲೇ ಅವರು ಒಂದಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ರಣಹೇಡಿ, ಬಡ್ಡಿ ಮಗಂದ್ ಲೈಫು, ಮೈಸೂರ್ ಡೈರೀಸ್ ಮುಂತಾದ ಚಿತ್ರಗಳಲ್ಲಿ ಐಶ್ವರ್ಯಾ ನಾಯಕಿಯಾಗಿದ್ದಾರೆ.

    ಆದರೆ ರವಿ ಹಿಸ್ಟರಿಯೇ ಅವರ ಮೊದಲ ಚಿತ್ರವಾಗಿ ದಾಖಲಾಗೋ ಲಕ್ಷಣಗಳಿವೆ. ರಣಹೇಡಿ ಮುಂತಾದ ಚಿತ್ರಗಳಲ್ಲಿ ಸವಾಲಿನ ಪಾತ್ರಗಳಲ್ಲಿ ನಟಿಸಿರೋ ಐಶ್ವರ್ಯಾಗೆ ಅಂಥಾ ಪಾತ್ರಗಳ ಮೂಲಕವೇ ಜನರ ಮನಸು ಗೆಲ್ಲೋ ಆಸೆ. ಈಗಾಗಲೇ ಅವರ ಮುಂದೆ ಸಾಲು ಸಾಲು ಅವಕಾಶಗಳಿವೆ. ಅದೆಲ್ಲವನ್ನೂ ಎಚ್ಚರದಿಂದಲೇ ಪರಾಮರ್ಶಿಸಿ ಒಪ್ಪಿಕೊಳ್ಳುತ್ತಿರೋ ಐಶ್ವರ್ಯಾ ಕನ್ನಡ ಚಿತ್ರರಂಗದ ಐಶ್ವರ್ಯದಂಥಾ ನಟಿಯಾಗೋ ಲಕ್ಷಣಗಳೇ ಹೆಚ್ಚಾಗಿವೆ.

  • ದೇವಕಿಯ ಮಗಳಾಗಿ ಬಂದಳು ಉಪ್ಪಿ ಪುತ್ರಿ ಐಶ್ವರ್ಯಾ!

    ದೇವಕಿಯ ಮಗಳಾಗಿ ಬಂದಳು ಉಪ್ಪಿ ಪುತ್ರಿ ಐಶ್ವರ್ಯಾ!

    ಹಿಂದೆ ಮಮ್ಮಿ ಚಿತ್ರದ ಮೂಲಕ ಸೆಳೆದಿದ್ದ ಲೋಹಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಎರಡನೇ ಚಿತ್ರ ದೇವಕಿ. ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರಕ್ಕೆ ಈ ಹಿಂದೆ ಹೌರಾ ಬ್ರಿಡ್ಜ್ ಅನ್ನೋ ಹೆಸರಿತ್ತು. ಈಗ ಅದನ್ನು ಬದಲಿಸಿ ದೇವಕಿ ಎಂದು ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಮಗಳಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದು, ಐಶ್ವರ್ಯಾಳ ಫಸ್ಟ್ ಲುಕ್ ಮತ್ತು ಪೋಸ್ಟರನ್ನು ನಟಿ ಪಾರೂಲ್ ಯಾದವ್ ಮತ್ತು ರಿಯಲ್ ಸ್ಟಾರ್ ರಿಲೀಸ್ ಮಾಡಿದ್ದಾರೆ.

    ಈ ಮೂಲಕ ನಿರ್ದೇಶಕ ಲೋಹಿತ್ ಮತ್ತು ಪ್ರಿಯಾಂಕಾ ಉಪೇಂದ್ರ ಕಾಂಬಿನೇಷನ್ ಎರಡನೇ ಬಾರಿ ಮೋಡಿ ಮಾಡಲು ಸಜ್ಜಾಗಿದೆ. ಬಿಡುಗಡೆಯಾಗಿರೋ ಫಸ್ಟ್ ಲುಕ್ ಪೋಸ್ಟರ್ ಚಿತ್ರ ಪ್ರೇಮಿಗಳ ಗಮನ ಸೆಳೆಯುವಂತಿದೆ. ಮಮ್ಮಿ ಚಿತ್ರದಂತೆಯೇ ಇಲ್ಲಿಯೂ ಮೈನವಿರೇಳಿಸೋ ಥ್ರಿಲ್ಲರ್ ಕಥಾ ಎಳೆ ಇರೋದರ ಸೂಚನೆಯನ್ನೂ ನೀಡಿದೆ. ಮಮ್ಮಿ ಚಿತ್ರದ ಮೂಲಕ ಆರಂಭಿಕವಾಗಿಯೇ ತಮ್ಮ ಪ್ರತಿಭೆಯನ್ನ ಸಾಬೀತು ಮಾಡಿದ್ದವರು ಲೋಹಿತ್.

    ಮಮ್ಮಿ ಚಿತ್ರ ಒಂದು ಮಟ್ಟಿಗೆ ಗೆಲುವು ದಾಖಲಿಸಿತ್ತು. ಈಗ ಬಿಡುಗಡೆಯಾಗಿರುವ ದೇವಕಿಯ ಟೀಸರ್ ಆ ಗೆಲುವು ಪುನರಾವರ್ತನೆಯಾಗೋ ಲಕ್ಷಣಗಳನ್ನು ಹೊಮ್ಮಿಸುವಂತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv