Tag: ಐಪಿಎಸ್ ಅಧಿಕಾರಿ

  • ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ

    ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಇನ್ನಿಲ್ಲ

    ಹೈದರಾಬಾದ್: ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರು ಶುಕ್ರವಾರ ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

    ಹೆಚ್1ಎನ್1 ಸೋಂಕು ತಗುಲಿ, ಶ್ವಾಸಕೋಶ ಹಾಗೂ ಜೀರ್ಣಾಂಗ ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸಿದ್ದ ಮಧುಕರ್ ಶೆಟ್ಟಿ ಅವರು ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಉಡುಪಿ ಮೂಲದ ಮಧುಕರ್ ಶೆಟ್ಟಿ ಅವರು, ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿಯವರ ಪುತ್ರ. 1999ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ, ಚಿಕ್ಕಮಗಳೂರಿನ ಎಸ್‍ಪಿಯಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಡಕ್ ಅಧಿಕಾರಿ ಎನಿಸಿಕೊಂಡಿದ್ದ ಅವರು ಭ್ರಷ್ಟಾಚಾರವನ್ನು ಹಾಗೂ ಭ್ರಷ್ಟರನ್ನು ಬೇಟೆಯಾಡಿದ್ದರು. ಬಳಿಕ ಹೈದರಾಬಾದ್ ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿ ಉಪನಿರ್ದೇಶಕರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಸ್ ಅಧಿಕಾರಿಯ ಮೊಬೈಲ್ ಎಗರಿಸಿದ ಕಳ್ಳರು!

    ಐಪಿಎಸ್ ಅಧಿಕಾರಿಯ ಮೊಬೈಲ್ ಎಗರಿಸಿದ ಕಳ್ಳರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಈಗ ಐಪಿಎಸ್ ಅಧಿಕಾರಿಯೊಬ್ಬರ ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾರೆ.

    ಕಂಪ್ಯೂಟರ್ ವಿಂಗ್ ಎಡಿಜಿಪಿ ಸಂಜಯ್ ಸಹಾಯ್ ಮೊಬೈಲ್ ಕಳೆದುಕೊಂಡ ಪೊಲೀಸ್ ಅಧಿಕಾರಿ. ನಗರದ ಎಚ್.ಎಸ್.ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಕಳ್ಳತನ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಸಂಜಯ್ ಸಹಾಯ್ ಅವರು ಎಚ್‍ಎಸ್‍ಆರ್ ಲೇಔಟ್ ನಾಲ್ಕನೇ ಸೆಕ್ಟರ್ ನಲ್ಲಿ ಶುಕ್ರವಾರ ಸಂಜೆ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಕಳ್ಳರು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಕುರಿತು ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಡಿಯೋದಲ್ಲಿ ಏನಿದೆ?:
    ಬೈಕ್ ಮೇಲೆ ಬಂದ ಇಬ್ಬರು ವ್ಯಕ್ತಿಗಳು ಸಂಜಯ್ ಸಹಾಯ್ ಅವರ ಕೈಯಲ್ಲಿ ಮೊಬೈಲ್ ಇರುವುದನ್ನು ನೋಡುತ್ತಾರೆ. ಬಳಿಕ ಬೈಕ್ ನಿಲ್ಲಿಸಿ ಒಬ್ಬ ಕಳ್ಳ ವಾಪಾಸ್ ಹೋಗಿ ಮೊಬೈಲ್ ಕಿತ್ತುಕೊಂಡು ಓಡಲು ಆರಂಭಿಸುತ್ತಾನೆ. ತಕ್ಷಣವೇ ಸಂಜಯ್ ಅವರು ಕಳ್ಳನ ಹಿಂದೆ ಓಡುತ್ತಾರೆ. ಆದರೆ ಬೈಕ್ ಮೇಲೆ ಬಂದ ವ್ಯಕ್ತಿಯು ಮೊಬೈಲ್ ಹಿಡಿದು ಓಡುತ್ತಿದ್ದ ಕಳ್ಳನನ್ನು ಹತ್ತಿಸಿಕೊಂಡು ಪರಾರಿಯಾಗುತ್ತಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಸೇವಿಸಿ ಜೀವನ್ಮರಣದ ಹೋರಾಡುತ್ತಿದ್ದ ಯುಪಿ ಐಪಿಎಸ್ ಅಧಿಕಾರಿ ಸಾವು

    ವಿಷ ಸೇವಿಸಿ ಜೀವನ್ಮರಣದ ಹೋರಾಡುತ್ತಿದ್ದ ಯುಪಿ ಐಪಿಎಸ್ ಅಧಿಕಾರಿ ಸಾವು

    ಲಕ್ನೋ: ವಿಷ ಸೇವಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಸುರೇಂದ್ರ ಕುಮಾರ್ ದಾಸ್ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

    ಪತ್ನಿಯೊಂದಿಗೆ ಜಗಳವಾಡಿದ್ದ ಸುರೇಂದ್ರ ಅವರು, ಜೀವನ ಅಂತ್ಯಗೊಳಿಸುವ ದಾರಿಗಳ ಬಗ್ಗೆ ತಮ್ಮ ಮೊಬೈಲ್ ಹಾಗೂ ಲ್ಯಾಪ್ ಟಾಪ್‍ನಲ್ಲಿ ಕೆಲ ದಿನಗಳಿಂದ ಗೂಗಲ್ ಸರ್ಚ್ ಮಾಡಿದ್ದರು ಎನ್ನುವುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು. 30 ವರ್ಷದ ಅಧಿಕಾರಿ ಸುರೇಂದ್ರ ಕುಮಾರ ದಾಸ್ ಅವರು ಆಗಸ್ಟ್ 9ರಂದು ಕಾನ್ಪುರ ಪೂರ್ವ ವಿಭಾಗದ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

    ಸೆಪ್ಟೆಂಬರ್ 5 ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ದಾಸ್ ಅವರನ್ನು ಪೇದೆಯೊಬ್ಬರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಅವರನ್ನು ಬದುಕಿಸಲು ಮುಂಬೈನಿಂದ ವೈದ್ಯರ ತಂಡವನ್ನು ಕರೆಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಾಸ್ ಅವರು ಮೃತಪಟ್ಟಿದ್ದಾರೆ.

    ವಿಷ ಕಿಡ್ನಿಯ ಮೇಲೆ ಪ್ರಭಾವ ಬೀರಿದ್ದು, ದೇಹದ ಎಲ್ಲ ಅಂಗಗಳೂ ಬಹುತೇಕ ಕಾರ್ಯ ಸ್ಥಗಿತಗೊಳಿಸಿವೆ ಎಂದು ಶನಿವಾರವೇ ಆಸ್ಪತ್ರೆಯ ಹಿರಿಯ ವೈದ್ಯ ರಾಜೇಸ್ ಅಗರವಾಲ್ ತಿಳಿಸಿದ್ದರು.

    ಶನಿವಾರ ಉತ್ತರ ಪ್ರದೇಶ ರಾಜ್ಯದ ಡಿಜಿಪಿ ಓ.ಪಿ.ಸಿಂಗ್ ಕೂಡಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇನ್ನು ಸುರೇಂದ್ರ ಅವರ ಸಾವಿನ ಸುದ್ದಿ ತಿಳಿಸಿಯುತ್ತಿದ್ದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೃಷ್ಣಜನ್ಮಾಷ್ಟಮಿಯಂದು ಪತ್ನಿಯ ನಾನ್ ವೆಜ್ ಪಿಜ್ಜಾ ಆರ್ಡರ್ – ಗೂಗಲ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಐಪಿಎಸ್ ಅಧಿಕಾರಿ!

    ಕೃಷ್ಣಜನ್ಮಾಷ್ಟಮಿಯಂದು ಪತ್ನಿಯ ನಾನ್ ವೆಜ್ ಪಿಜ್ಜಾ ಆರ್ಡರ್ – ಗೂಗಲ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಐಪಿಎಸ್ ಅಧಿಕಾರಿ!

    – ಪತ್ನಿ ಜೊತೆ ಗಲಾಟೆ ಬಳಿಕ ಖಿನ್ನತೆಗೆ ಜಾರಿದ್ದ ಎಸ್‍ಪಿ
    – ವೈದ್ಯಕೀಯ ವಿದ್ಯಾಭ್ಯಾಸ ನಡೆಸುತ್ತಿರುವ ಪತ್ನಿ

    ಕಾನ್ಪುರ: ಕೃಷ್ಣಾಷ್ಟಮಿಯಂದು ಪತ್ನಿ ನಾನ್ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದಕ್ಕೆ ಶುರುವಾದ ಗಲಾಟೆ ಐಪಿಎಸ್ ಅಧಿಕಾರಿಯೊಬ್ಬರ ಆತ್ಮಹತ್ಯೆ ಯತ್ನದಲ್ಲಿ ಅಂತ್ಯವಾಗಿದೆ. ಉತ್ತರ ಪ್ರದೇಶದ ಈ ಐಪಿಎಸ್ ಅಧಿಕಾರಿ ಸದ್ಯ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಜೀವನ ಅಂತ್ಯಗೊಳಿಸುವ ದಾರಿಗಳ ಬಗ್ಗೆ ಈ ಅಧಿಕಾರಿ ತನ್ನ ಮೊಬೈಲ್ ಹಾಗೂ ಲ್ಯಾಪ್ ಟಾಪ್‍ನಲ್ಲಿ ಕೆಲ ದಿನಗಳಿಂದ ಗೂಗಲ್ ಸರ್ಚ್ ಮಾಡಿದ್ದರು ಎಂಬ ವಿಚಾರವೂ ಪೊಲೀಸ್ ತನಿಖೆ ವೇಳೆ ಬಯಲಾಗಿದೆ. 30 ವರ್ಷದ ಅಧಿಕಾರಿ ಸುರೇಂದ್ರ ಕುಮಾರ ದಾಸ್ ಅವರು ಕಳೆದ 1 ತಿಂಗಳ ಹಿಂದಷ್ಟೇ ಅಂದರೆ ಆಗಸ್ಟ್ 9ರಂದು ಕಾನ್ಪುರ ಪೂರ್ವ ವಿಭಾಗದ ಎಸ್‍ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

    ಆಗಿದ್ದೇನು?
    ಉತ್ತರಪ್ರದೇಶದ ಕಾನ್ಪುರ ಜಿಲ್ಲೆಯ ಐಪಿಎಸ್ ಅಧಿಕಾರಿ ಸುರೇಂದ್ರ ದಾಸ್ ಕಳೆದ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲೇ ಕೃಷ್ಣಾಷ್ಟಮಿ ಆಚರಣೆ ಬಳಿಕ ತಮ್ಮ ಮೊಬೈಲ್ ಹಾಗೂ ಲ್ಯಾಪ್‍ಟಾಪಲ್ಲಿ ವಿಷವನ್ನು ತೆಗೆದುಕೊಳ್ಳುವುದು ಹೇಗೆ, ರೇಜರ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಇತ್ಯಾದಿ ವೀಡಿಯೋಗಳನ್ನು ನೋಡಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದ್ದು, ಈ ವೇಳೆ ಈ ಮಹತ್ವದ ಅಂಶಗಳು ಬಯಲಾಗಿವೆ ಎಂದು ಕಾನ್ಪುರರ ಎಸ್‍ಎಸ್‍ಪಿ ಅನಂತ್ ದೇವ್ ಹೇಳಿದ್ದಾರೆ.

    ಸದ್ಯ ದಾಸ್ ಅವರನ್ನು ಉಳಿಸಿಕೊಳ್ಳಲು ವೈದ್ಯಾಧಿಕಾರಿಗಳ ತಂಡ ಶತಾಯಗತಾಯ ಪ್ರಯತ್ನ ನಡೆಯುತ್ತಿದ್ದು, ಮುಂಬೈನಿಂದ ವಿಶೇಷ ವೈದ್ಯಕೀಯ ತಂಡ ದೌಡಾಯಿಸಿದೆ. ಎಲ್ಲರೂ ದಾಸ್ ಉಳಿವಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಪೂರ್ವ ಕಾನ್ಪುರ ಎಸ್‍ಪಿಯಾಗಿ ಸುರೇಂದ್ರ ಕುಮಾರ್ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಬುಧವಾರ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಆತ್ಮಹತ್ಯೆಗೆ ಯತ್ನಿಸಿದ್ದು ಯಾಕೆ?
    ದಾಸ್ ಹಾಗೂ ಅವರ ಪತ್ನಿ ರವೀನಾ ಸಿಂಗ್ ಮಧ್ಯೆ ಆಹಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ ಅಂತ ದಾಸ್ ಮನೆಯ ಹತ್ತಿರದ ನಿವಾಸಿಯೊಬ್ಬರು ತಿಳಿಸಿದ್ದಾರೆ. ದಾಸ್ ಪತ್ನಿ ರವೀನಾ ಅವರು ಜಿಎಸ್‍ವಿಎಂ ಮೆಡಿಕಲ್ ಕಾಲೇಜಿನಲ್ಲಿ ಮಾಸ್ಟರ್ಸ್ ಇನ್ ಸರ್ಜರಿ ವ್ಯಾಸಂಗ ಮಾಡುತ್ತಿದ್ದಾರೆ.

    ಕೃಷ್ಣ ಜನ್ಮಾಷ್ಟಮಿಯಂದು ದಾಸ್ ಪತ್ನಿ ನಾನ್ ವೆಜ್ ಪಿಜ್ಜಾ ಆರ್ಡರ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಅವರ ಸಂಬಂಧಿಕರು ಮನೆಗೆ ಬಂದು ಸಂಧಾನ ಮಾತುಕತೆ ನಡೆಸಿದ್ದರು. ಇದಾದ ಬಳಿಕ ದಾಸ್ ಖಿನ್ನತೆಗೆ ಜಾರಿದ್ದರು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಸ್ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ವೈದ್ಯರು ಹೇಳುತ್ತಿದ್ದಾರೆ. ಅಲ್ಲದೇ ವಿಷಕಾರಿ ಅಂಶ ಸೇವಿಸಿದ್ದರಿಂದ ಅದು ದಾಸ್ ಕಿಡ್ನಿ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಅಂತ ಆಸ್ಪತ್ರೆಯ ವೈದ್ಯಕೀಯ ಮುಖ್ಯ ಅಧೀಕ್ಷಕ ಡಾ. ರಾಜೇಶ್ ಅಗರ್‍ವಾಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

    ಐಪಿಎಸ್ ಅಧಿಕಾರಿ ಡಿ. ರೂಪರಿಂದ ಫ್ಯಾಷನ್ ಫೋಟೋಶೂಟ್

    ಬೆಂಗಳೂರು: ಐಪಿಎಸ್ ಅಧಿಕಾರಿ ಡಿಐಜಿ ಡಿ ರೂಪ ಅವರು ಫ್ಯಾಷನ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಖ್ಯಾತ ಮಹಿಳಾ ಫ್ಯಾಶನ್ ಡಿಸೈನರ್ ಮೀನು ಸರವಣನ್ ಅವರು ಡಿಸೈನ್ ಮಾಡಿದ್ದ ಕಡು ನೀಲಿ ಬಣ್ಣದ ಗೌನ್ ಧರಿಸಿ ಮಾಡೆಲ್ ರೀತಿಯಾಗಿ ಮಿಂಚಿದ್ದಾರೆ. ರೂಪಾ ಅವರ ಮನೆಯಲ್ಲೇ ಈ ಫೋಟೋ ಶೂಟ್ ನಡೆದಿದ್ದು, ಯಾವ ಮಾಡೆಲ್‍ಗೂ ಕಡಿಮೆ ಇಲ್ಲದಂತೆ ಐಪಿಎಸ್ ಅಧಿಕಾರಿ ಮಿಂಚುತ್ತಿದ್ದಾರೆ. ಈ ವೇಳೆ ರೂಪ ಅವರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಂದು ರೂಪ ಅವರು 1998 ರಲ್ಲಿ ಮಿಸ್ ಬೆಂಗಳೂರು ಯುನಿವರ್ಸಿಟಿ ಕಿರೀಟ ಮತ್ತು ಮಿಸ್ ದಾವಣಗೆರೆ ಪ್ರಶಸ್ತಿಯನ್ನು ಗೆದ್ದಿದ್ದರು.

    ನಾನು ಪೊಲೀಸ್ ಕೆಲಸ ಬಿಟ್ಟು ಮಾಡೆಲಿಂಗ್ ಗೆ ಹೋಗಿಲ್ಲ. ಈ ಮೂಲಕ ಒಬ್ಬ ಸಬಲೀಕೃತ ಮಹಿಳೆ ಕೂಡ ಫ್ಯಾಷನ್ ಆಗಿ ಇರಬಲ್ಲಳು. ಕೇವಲ ಮಾಡೆಲ್ ಮತ್ತು ಚಿತ್ರ ತಾರೆಯರು ಮಾತ್ರ ಫ್ಯಾಷನ್ ಮಾಡಬಲ್ಲರು, ಸಾಮಾನ್ಯ ಜನರು ಕೂಡ ಫ್ಯಾಷನ್ ಮಾಡಬಲ್ಲರು ಎಂಬ ಸಂದೇಶವನ್ನು ತಿಳಿಸಲು ಈ ರೀತಿ ಮಾಡಿದ್ದೇನೆ. ನನ್ನ ಜೊತೆಗೆ ಮೂರು-ನಾಲ್ಕು ಸಾಮಾನ್ಯ ಮಹಿಳೆಯರು ಫೋಟೋ ಶೂಟ್ ಮಾಡಿಸಿದ್ದಾರೆ ಎಂದು ರೂಪ ಅವರು ಹೇಳಿದ್ದಾರೆ.

    “ನಾನು ಮೊದಲಿಗೆ ನಾಗರಿಕ ಸೇವೆಗಳಲ್ಲಿ ಸೇರಿಕೊಂಡಾಗ, ನಾನು ಕಾಲೇಜಿನಲ್ಲಿ ನನ್ನ ಸಾಧನೆಗಳ ಬಗ್ಗೆ ಯಾರಿಗೂ ಹೇಳಲಿಲ್ಲ. ಯಾಕೆಂದರೆ ಜನರು ನನ್ನನ್ನು ಅಧಿಕಾರಿ ಎಂದು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ನಾನು ಭಾವಿಸಿದ್ದೆ. ಆದರೆ ಮೀನು ಸರವಣನ್ ಅವರು ನನಗೆ ಸುಮಾರು 10 ತಿಂಗಳುಗಳ ಕಾಲ ಸಲಹೆ ನೀಡುತ್ತಿದ್ದರು. ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಅವರ ಒತ್ತಾಯಪೂರ್ವಕವಾಗಿ ನಾನು ಯೋಚಿಸಿ ಫೋಟೋಶೂಟ್ ಮಾಡಿಸಿಕೊಂಡೆ ಎಂದು ಹೇಳಿದ್ದಾರೆ.

    ರೂಪ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳನ್ನು ಸಾಕ್ಷಿ ಸಮೇತ ಬಯಲಿಗೆಳೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಿತಿ ಮೀರಬೇಡ ಎಂದು ಬಿಜೆಪಿ ಶಾಸಕ ಅವಾಜ್ – ಕಣ್ಣೀರಿಟ್ಟ ಮಹಿಳಾ ಐಪಿಎಸ್ ಅಧಿಕಾರಿ

    ಮಿತಿ ಮೀರಬೇಡ ಎಂದು ಬಿಜೆಪಿ ಶಾಸಕ ಅವಾಜ್ – ಕಣ್ಣೀರಿಟ್ಟ ಮಹಿಳಾ ಐಪಿಎಸ್ ಅಧಿಕಾರಿ

    ಲಕ್ನೋ: ಉತ್ತರ ಪ್ರದೇಶದಲ್ಲಿ ಗೋರಖ್‍ಪುರದ ಹಿರಿಯ ಬಿಜೆಪಿ ಶಾಸಕ ಡಾ. ರಾಧಾ ಮೋಹನ್ ಅಗರ್‍ವಾಲ್ ಮಹಿಳಾ ಪೊಲೀಸ್ ಅಧಿಕಾರಿಗೆ ಕಣ್ಣೀರು ಹಾಕಿಸಿದ್ದಾರೆ.

    ಇಲ್ಲಿನ ಕೋಯಿಲ್ವಾ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಮಹಿಳೆಯರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾನಿರತ ಮಹಿಳೆಯರು ಕಲ್ಲು ತೂರಾಟ ನಡೆಸಿದ ಕಾರಣ ಲಾಠಿ ಚಾರ್ಜ್ ಮಾಡಿದ್ದು, ಕೆಲವು ಮಹಿಳೆಯರು ಗಾಯಗೊಂಡರು ಎಂದು ಪೊಲೀಸರು ಹೇಳಿದ್ದಾರೆ.

    ನಂತರ ಸ್ಥಳಕ್ಕೆ ಆಗಮಿಸಿದ ಹಿರಿಯ ಶಾಸಕ ಅಗರ್‍ವಾಲ್, ಸದ್ಯ ಗೋರಖ್‍ಪುರ್‍ನಲ್ಲಿ ತರಬೇತಿಯಲ್ಲಿರುವ 2013ರ ಬ್ಯಾಚ್‍ನ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರೊಂದಿಗೆ ವಾದಕ್ಕೆ ಇಳಿದರು. ಬೆರಳು ತೋರಿಸಿ ಎಚ್ಚರಿಕೆ ನೀಡಿದರು. ನಾನು ನಿನ್ನೊಂದಿಗೆ ಮಾತಾಡ್ತಿಲ್ಲ, ನನಗೆ ಏನೂ ಹೇಳಬೇಡ, ನೀನು ಸುಮ್ಮನಿರು, ನಿನ್ನ ಮಿತಿ ಮೀರಬೇಡ ಅಂತಾ ಅವಾಜ್ ಹಾಕಿದ್ರು.

    ಆಗ ಚಾರು ನಿಗಮ್, ನಾನು ಇಲ್ಲಿನ ಅಧಿಕಾರಿ. ನಾನು ಏನು ಮಾಡ್ತಿದ್ದೀನಿ ಎಂಬುದು ನನಗೆ ಗೊತ್ತು ಎಂದಿದ್ದಾರೆ. ನಂತರ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ಬಂದಿದ್ದು, ಈ ವೇಳೆ ಚಾರು ನಿಗಮ್ ಕಣ್ಣೀರು ಹಾಕಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ರಾಧಾ ಮೋಹನ್, ನಾನು ಅಧಿಕಾರಿಯೊಂದಿಗೆ ಕೆಟ್ಟದಾಗಿ ನಡೆದಕೊಂಡಿಲ್ಲ ಎಂದಿದ್ದಾರೆ. ನಾವು ಮದ್ಯದಂಗಡಿಗಳ ಚಟುವಟಿಕೆಯ ವಿರುದ್ಧ ಇದ್ದೇವೆ. ಮಹಿಳೆಯರು ಶಾಂತಿಯುತವಾಗಿ ಮದ್ಯದಂಗಡಿಗಳ ವರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಮಹಿಳಾ ಪೊಲೀಸ್ ಅಧಿಕಾರಿ ಬಲವಂತವಾಗಿ ಅವರನ್ನ ಚದುರಿಸಿದ್ರು. 80 ವರ್ಷದ ವೃದ್ಧೆಯೊಬ್ಬರನ್ನು ಎಳೆದಾಡಿ ಹೊಡೆದಿದ್ದಾರೆ. ಇದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮದ್ಯ ಮಾಫಿಯಾದವರೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ. 15 ದಿನಗಳ ಹಿಂದೆ ಮುಚ್ಚಲಾಗಿದ್ದ ಮದ್ಯದಂಗಡಿಗಳು ಈಗ ಇದ್ದಕ್ಕಿದಂತೆ ಮತ್ತೆ ಕಾರ್ಯಾರಂಭ ಮಾಡಿವೆ ಎಂದು ಅಗರ್‍ವಾಲ್ ಆರೋಪಿಸಿದ್ದಾಗಿ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

  • ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಐಪಿಎಸ್ ರೂಪಾ, ಪ್ರತಾಪ್ ಸಿಂಹ ನಡುವೆ ಟ್ವಿಟ್ಟರ್ ವಾರ್

    ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಐಪಿಎಸ್ ರೂಪಾ, ಪ್ರತಾಪ್ ಸಿಂಹ ನಡುವೆ ಟ್ವಿಟ್ಟರ್ ವಾರ್

    ಬೆಂಗಳೂರು: ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಐಪಿಎಸ್ ಅಧಿಕಾರಿ ರೂಪಾ ಮೌದ್ಗೀಲ್ ನಡುವೆ ಟ್ವೀಟ್ ವಾರ್ ಶುರುವಾಗಿದೆ.

    ಐಪಿಎಸ್ ಅಧಿಕಾರಿಗಳಾದ ಮಧುಕರ್ ಶೆಟ್ಟಿ, ಸಿಸಿಬಿ ಡಿಸಿಪಿ ಕೌಶಲೇಂದ್ರ ಕುಮಾರ್, ಉತ್ತರ ವಲಯ ಡಿಸಿಪಿ ಲಾಭೂರಾಂ ಹಾಗೂ ಡಿಐಜಿ ಸೋನಿಯಾ ನಾರಂಗ್ ಕೇಂದ್ರ ಸೇವೆಗೆ ವರ್ಗಾವಣೆಯಾಗಿರುವ ಬಗ್ಗೆ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನ ಪ್ರತಾಪ್ ಸಿಂಹ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಶೇರ್ ಮಾಡಿದ್ರು.

    ಸಂಸದ ಪ್ರತಾಪ್ ಸಿಂಹ ವರದಿ ಶೇರ್ ಮಾಡಿದ್ದರ ಬಗ್ಗೆ ಆಕ್ಷೇಪ ಎತ್ತಿರುವ ಐಪಿಎಸ್ ರೂಪ, ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಹಲವಾರು ಪ್ರಶ್ನೆಗಳನ್ನ ಎತ್ತಿದ್ದಾರೆ. ಅಧಿಕಾರಿಗಳನ್ನ ರಾಜಕೀಯದಿಂದ ದೂರವಿಡಿ ಎಂದು ಹೇಳಿದ್ದಾರೆ.

    ಕೇಂದ್ರದಲ್ಲಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಯ ಅಗತ್ಯ ಮತ್ತು ಆಸೆಯಾಗಿರುತ್ತದೆ. ಹಾಗೇ ಯಾವುದೇ ಒಬ್ಬ ಅಥವಾ ಇಬ್ಬರು ಅಧಿಕಾರಿಯನ್ನ ಹೀರೋ ಮಾಡುವುದು ಸರಿಯಲ್ಲ. ಕೆಲವು ಅಧಿಕಾರಿಗಳ ಮೇಲೆ ಮಾತ್ರ ಅವಲಂಬಿತವಾದ್ರೆ ಇಡೀ ವ್ಯವಸ್ಥೆಯೇ ದುರ್ಬಲವಾಗುತ್ತದೆ. ಆ ಅಧಿಕಾರಿಗೆ ವರ್ಗಾವಣೆ ಅಥವಾ ನಿವೃತ್ತಿಯಾದ್ರೆ ಆಗ ಇಡೀ ವ್ಯವಸ್ಥೆಯೇ ಕುಸಿಯುತ್ತದೆ. ಅದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ ಎಂದೆಲ್ಲಾ ರೂಪಾ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.

    ರೂಪಾ ಅವರ ಪೋಸ್ಟ್ ಗೆ ಸ್ಪಷ್ಟನೆ ನೀಡಿರುವ ಪ್ರತಾಪ್ ಸಿಂಹ, ಪಬ್ಲಿಕ್ ಟಿವಿ ವರದಿಯನ್ನಷ್ಟೇ ಶೇರ್ ಮಾಡಿದ್ದೇನೆ. ನಿಮಗೆ ಸಮಯವಿದ್ದರೆ ಈ ಸುದ್ದಿಯನ್ನು ಓದಿ ಎಂದು ಪಬ್ಲಿಕ್ ಟಿವಿ ವರದಿಯ ಲಿಂಕ್ ಹಾಕಿ ಟ್ವೀಟ್ ಮಾಡಿದ್ದಾರೆ.

    https://www.facebook.com/roopad.moudgil/posts/1046017038837211

    ಇದನ್ನೂ ಓದಿ: ನಾಲ್ವರು ಐಪಿಎಸ್ ಅಧಿಕಾರಿಗಳು ರಾಜ್ಯದಿಂದ ಕೇಂದ್ರ ಸೇವೆಗೆ