Tag: ಐಪಿಎಲ್

  • ಬಿಎಂಟಿಸಿ ಬಸ್‍ನಲ್ಲಿ ಸ್ಟೇಡಿಯಂಗೆ ಆಗಮಿಸಿದ ಆರ್‍ಸಿಬಿ ಆಟಗಾರರು

    ಬಿಎಂಟಿಸಿ ಬಸ್‍ನಲ್ಲಿ ಸ್ಟೇಡಿಯಂಗೆ ಆಗಮಿಸಿದ ಆರ್‍ಸಿಬಿ ಆಟಗಾರರು

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‍ನ ಭಾನುವಾರದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರು ಖಾಸಗಿ ಹೋಟೆಲ್ ನಿಂದ ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸಿ ಚಿನ್ನಸ್ವಾಮಿ ಸ್ಟೇಡಿಯಂ ಆಗಮಿಸಿದ್ದು ವಿಶೇಷವಾಗಿತ್ತು.

    ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸುವಂತೆ ಜನರಿಗೆ ತಿಳಿಸುವುದು ಮತ್ತು ದಿನೇ ದಿನೇ ಹೆಚ್ಚಾಗುತ್ತಿರುವ ವಾಯುಮಾಲಿನ್ಯವನ್ನ ಅದಷ್ಟು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚು ಹೆಚ್ಚು ಬಳಸುವ ಉದ್ದೇಶದಿಂದ ಇವತ್ತು ನಮ್ಮ ಬಸ್ ನಲ್ಲಿ ಆಟಗಾರರು ಪ್ರಯಾಣಿಸಿದರು ಎಂದು ಬಿಎಂಟಿಸಿಯ ಅಧ್ಯಕ್ಷ ನಾಗರಾಜ್ ಯಾದವ್ ತಿಳಿಸಿದರು.

    ಗ್ರೀನ್ ಜರ್ಸಿ: ಇವತ್ತಿನ ಪಂದ್ಯದಲ್ಲಿ ಆರ್‍ಸಿಬಿ ಬಾಯ್ಸ್ ಗ್ರೀನ್ ಜರ್ಸಿ ಹಾಕಿ ಆಡುತ್ತಿದ್ದಾರೆ. ಪ್ರಕೃತಿ ಉಳಿಸಿ ಗಿಡ ಮರಗಳನ್ನ ಬೆಳೆಸಿ ಎನ್ನುವ ಸಂದೇಶ ಸಾರುವ ಉದ್ದೇಶದಿಂದ ಆರ್‍ಸಿಬಿ ಬಾಯ್ಸ್ ಈ ಗ್ರೀನ್ ಜರ್ಸಿಯನ್ನು ತೊಟ್ಟಿದ್ದಾರೆ.

  • ವೈರಲ್ ಆಯ್ತು ಹರ್ಭಜನ್ ಸಿಂಗ್ ಮಗಳ ಜೊತೆಗಿನ ಕೊಹ್ಲಿಯ ಕ್ಯೂಟ್ ಸೆಲ್ಫೀ

    ವೈರಲ್ ಆಯ್ತು ಹರ್ಭಜನ್ ಸಿಂಗ್ ಮಗಳ ಜೊತೆಗಿನ ಕೊಹ್ಲಿಯ ಕ್ಯೂಟ್ ಸೆಲ್ಫೀ

    ನವದೆಹಲಿ: ಸೋಮವಾರದಂದು ವಾಂಖೇಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಎದುರು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್‍ಗಳ ಸೋಲನುಭವಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹರ್ಭಜನ್ ಸಿಂಗ್ ಅವರ ಕುಟುಂಬದೊಂದಿಗೆ ಸಮಯ ಕಳೆದು, ಸಿಂಗ್ ಮಗಳ ಜೊತೆ ಒಂದು ಕ್ಯೂಟ್ ಸೆಲ್ಫೀ ಕ್ಲಿಕ್ಕಿಸಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ಗಡ್ಡ ತೆಗೆಯುವಂತೆ ಕೊಹ್ಲಿಗೆ ಜಡೇಜಾ ಚಾಲೆಂಜ್- ಅನುಷ್ಕಾ ಹೀಗಂದ್ರು

    ಹರ್ಭಜನ್ ಸಿಂಗ್ ಅವರ ಪುಟ್ಟ ಮಗಳು ಹಿನಾಯಾ ಜೊತೆ ಸೆಲ್ಫೀ ಕ್ಲಿಕ್ಕಿಸಿರೋ ಕೊಹ್ಲಿ, ಬೇಬಿ ಹಿನಾಯಾ ನನ್ನ ಗಡ್ಡದಲ್ಲಿ ಏನೋ ಹುಡುಕುತ್ತಿದ್ದಾಳೆ. ಯಾರಾದ್ರೂ ಇಷ್ಟು ಕ್ಯೂಟ್ ಹಾಗೂ ಸುಂದರವಾಗಿರಲು ಹೇಗೆ ಸಾಧ್ಯ ಎಂದು ನನಗೆ ಅಚ್ಚರಿಯಾಗ್ತಿದೆ. ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ ನಿಜಕ್ಕೂ ಧನ್ಯರು. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಝೀವಾ ಜೊತೆಗೆ ಕೂಡ ಕೊಹ್ಲಿ ಸೆಲ್ಫೀ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದರು. ಈ ಫೋಟೋ ಕೂಡ ವೈರಲ್ ಆಗಿತ್ತು.


    ಐಪಿಎಲ್‍ನ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ರಾಯಲ್ ಚಾಲೆಂಜರ್ಸ್ ತಂಡ, ಈ ಬಾರಿ ಪಾಯಿಂಟ್ಸ್ ಟೇಬಲ್‍ನಲ್ಲಿ 7 ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 5 ಅಂಕ ಗಳಿಸಿದೆ.

  • ಬಾಲಿವುಡ್ ನಟಿಯೊಂದಿಗೆ ಜಹೀರ್ ಖಾನ್ ನಿಶ್ಚಿತಾರ್ಥ

    ಬಾಲಿವುಡ್ ನಟಿಯೊಂದಿಗೆ ಜಹೀರ್ ಖಾನ್ ನಿಶ್ಚಿತಾರ್ಥ

    ನವದೆಹಲಿ: ಕ್ರಿಕೆಟ್ ಆಟಗಾರ ಜಹೀರ್ ಖಾನ್ ಬಾಲಿವುಡ್ ನಟಿ ಸಾಗರಿಕ ಘಟ್ಗೆ ಅವರ ಬೆರಳಿಗೆ ಉಂಗುರ ತೊಡಿಸಿದ್ದಾರೆ.

    ಸಾಗರಿಕ ಜೊತೆ ನಿಶ್ಚಿತಾರ್ಥದ ಬಗ್ಗೆ ಸ್ವತಃ ಜಹೀರ್ ಖಾನ್ ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ. ನಟಿ ಸಾಗರಿಕಾ ಘಟ್ಗೆ ಶಾರೂಖ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಚಿತ್ರದಲ್ಲಿ ಪ್ರೀತಿ ಸಬರ್‍ವಾಲ್ ಎಂಬ ಹಾಕಿ ಆಟಗಾರ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಡೆಲ್ಲಿ ಡೇರ್ ಡೆವಿಲ್ಸ್ ತಂಡ, ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಈ ಜೋಡಿಗೆ ಶುಭ ಹಾರೈಸಿದ್ದಾರೆ.

    ಜಹೀರ್ ಖಾನ್ ಸದ್ಯ ಐಪಿಎಲ್‍ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕರಾಗ ತಂಡವನ್ನ ಮುನ್ನಡೆಸುತ್ತಿದ್ದಾರೆ. ಜಹೀರ್ ಖಾನ್ 92 ಟೆಸ್ಟ್ ಪಂದ್ಯಗಳನ್ನಾಡಿದ್ದು 311 ವಿಕೆಟ್‍ಗಳನ್ನ ಪಡೆದಿದ್ದಾರೆ. 200 ಏಕದಿನಪಂದ್ಯಗಳನ್ನಾಡಿದ್ದು, 282 ವಿಕೆಟ್‍ಗಳನ್ನು ಪಡೆದಿದ್ದಾರೆ. ಜಹೀರ್ ಖಾನ್ 2015ರಲ್ಲಿ ಅಂತರಾಷ್ಟ್ರೀಯ ಕ್ರಿಕಕೆಟ್‍ನಿಂದ ನಿವೃತ್ತಿ ಹೊಂದಿದ್ರು.

     

  • ಗೇಲ್ 10 ಸಾವಿರ ರನ್- ಹೋಟೆಲ್‍ನಲ್ಲಿ ಆರ್‍ಸಿಬಿ ಸಂಭ್ರಮಾಚರಣೆ ಹೀಗಿತ್ತು: ವಿಡಿಯೋ ನೋಡಿ

    ಗೇಲ್ 10 ಸಾವಿರ ರನ್- ಹೋಟೆಲ್‍ನಲ್ಲಿ ಆರ್‍ಸಿಬಿ ಸಂಭ್ರಮಾಚರಣೆ ಹೀಗಿತ್ತು: ವಿಡಿಯೋ ನೋಡಿ

    ರಾಜ್‍ಕೋಟ್‍: ಟಿ 20 ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್‍ನ ಟಾಪ್ ಆಟಗಾರ, ಆರ್‍ಸಿಬಿಯ ಓಪನಿಂಗ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಐತಿಹಾಸಿಕ ಮೇಲಿಗಲ್ಲನ್ನು ಬರೆದಿದ್ದಾರೆ. ಚುಟುಕು ಕ್ರಿಕೆಟ್‍ನಲ್ಲಿ 10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕಿಗೆ ಗೇಲ್ ಈಗ ಪಾತ್ರರಾಗಿದ್ದಾರೆ.

    ಮಂಗಳವಾರ ಗುಜರಾತ್ ಲಯನ್ಸ್ ವಿರುದ್ಧ ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ 63 ರನ್ ಗಳಿಸಿದ ವೇಳೆ ಗೇಲ್ ಈ ಮೈಲಿಗಲ್ಲನ್ನು ಬರೆದಿದ್ದಾರೆ. ಈ ಪಂದ್ಯವನ್ನು ಆರ್‍ಸಿಬಿ 21 ರನ್‍ಗಳಿಂದ ಗೆದ್ದುಕೊಂಡಿದ್ದು, 38 ಎಸೆತದಲ್ಲಿ 77 ರನ್(5 ಬೌಂಡರಿ, 7 ಸಿಕ್ಸರ್) ಚಚ್ಚಿದ್ದ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಈ ಪಂದ್ಯಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಗೇಲ್ 32, 6, 22 ರನ್‍ಗಳನ್ನು ಹೊಡೆದಿದ್ದರು. ಎರಡು ಪಂದ್ಯಗಳಿಂದ ಹೊರಗಡೆ ಉಳಿದಿದ್ದ ಕಾರಣ ಈ ಮೈಲಿಗಲ್ಲನ್ನು ಬರೆಯಲು ವಿಳಂಬವಾಗಿತ್ತು.

    ಗೇಲ್ ನಂತರದ ಸ್ಥಾನದಲ್ಲಿ 7,596 ರನ್ ಹೊಡೆದ ನ್ಯೂಜಿಲೆಂಡಿನ ಬ್ರೆಂಡಮ್ ಮೆಕ್ಕಲಂ ಇದ್ದರೆ 7,338 ರನ್‍ಗಳಿಸುವ ಮೂಲಕ ಬ್ರಾಡ್ ಹಾಡ್ಜ್ ಮೂರನೇ ಸ್ಥಾನದಲ್ಲಿ ಇದ್ದಾರೆ.

    ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕಗೆ ಸಚಿನ್ ಪಾತ್ರವಾಗಿದ್ದರೆ, ಟೆಸ್ಟ್ ನಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಸುನೀಲ್ ಗವಾಸ್ಕರ್ ಭಾಜನರಾಗಿದ್ದಾರೆ.

    10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಆರ್‍ಸಿಬಿ ತಂಗಿದ್ದ ಹೊಟೇಲ್‍ನಲ್ಲಿ ಸಂಭ್ರಮ ಮನೆ ಮಾಡಿತ್ತು. ಗೇಲ್ ಕೇಕ್ ಕತ್ತರಿಸಿ ಈ ಸಂಭ್ರಮವನ್ನು ಆಚರಿಸಿದರು.

    https://www.youtube.com/watch?v=nbJmczErrtM

  • ಆರ್‍ಪಿಎಸ್ ತಂಡದ ಆಟಗಾರರೊಂದಿಗೆ ಧೋನಿ ಡ್ಯಾನ್ಸ್ – ವಿಡಿಯೋ ವೈರಲ್

    ಆರ್‍ಪಿಎಸ್ ತಂಡದ ಆಟಗಾರರೊಂದಿಗೆ ಧೋನಿ ಡ್ಯಾನ್ಸ್ – ವಿಡಿಯೋ ವೈರಲ್

    ಮುಂಬೈ: ರೈಸಿಂಗ್ ಪುಣೆ ಸೂಪರ್‍ಜೇಂಟ್ಸ್ ತಂಡದ ತನ್ನ ಸಹ ಆಟಗಾರರೊಂದಿಗೆ ಎಂಎಸ್ ಧೋನಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

    ನಾಯಕತ್ವ ಸ್ಥಾನದಿಂದ ಕೆಳಗಿಳಿದ ಮೇಲೆ ಧೋನಿ ಕೆಲಸದ ಒತ್ತಡಗಳಿಂದ ಹೊರ ಬಂದು ಡ್ಯಾನ್ಸ್ ಮಾಡಿರುವ ಚಿಕ್ಕ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 7.5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 4 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.

    ಆರ್‍ಪಿಎಸ್ ತಂಡದ ಡ್ರೆಸ್‍ನಲ್ಲಿ ಡ್ಯಾನ್ಸ್ ಮಾಡಿರುವ ಧೋನಿಗೆ ಅಜ್ಯಿಂಕ್ಯ ರಹಾನೆ ಸಾಥ್ ನೀಡಿದ್ದಾರೆ. ಧೋನಿ ಡ್ಯಾನ್ಸ್ ಮಾಡ್ತಿದ್ದು, ಬೆನ್ ಸ್ಟ್ರೋಕ್ಸ್ ಹಿಂದೆ ನಿಂತು ಇವರ ಸ್ಟೆಪ್ ನೋಡಿ ಖುಷಿ ಪಡ್ತಿರೋದನ್ನ ವಿಡಿಯೋದಲ್ಲಿ ನೋಡಬಹುದು.

    10ನೇ ಆವೃತ್ತಿಯ ಐಪಿಎಲ್ ಹರಾಜಿನ 1 ದಿನ ಹಿಂದಷ್ಟೆ ಆರ್‍ಪಿಎಸ್ ತಂಡದ ನಾಯಕರಾಗಿ ಧೋನಿ ಬದಲಿಗೆ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಅವರನ್ನ ಆಯ್ಕೆ ಮಾಡಲಾಗಿತ್ತು. ಕಳೆದ 9 ಆವೃತ್ತಿಗಳಲ್ಲೂ ಧೋನಿ ಐಪಿಎಲ್ ತಂಡದ ನಾಯಕರಾಗಿದ್ದರು. 2008 ರಿಂದ 2015ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಮಾನತ್ತಾದ ನಂತರ 2016ರಲ್ಲಿ ಪುಣೆ ಸೂಪರ್‍ಜೇಂಟ್ಸ್ ತಂಡವನ್ನ ಧೋನಿ ಮುನ್ನಡೆಸಿದ್ದರು.

    https://www.instagram.com/p/BSq5ZmUlPwC/

     

  • ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಧೋನಿಗೂ ಸಂಬಂಧ ಸರಿ ಇಲ್ವೇ?

    ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಧೋನಿಗೂ ಸಂಬಂಧ ಸರಿ ಇಲ್ವೇ?

    ಪುಣೆ: ರೈಸಿಂಗ್ ಪುಣೆ ಸೂಪರ್‍ಜೈಂಟ್ಸ್ ತಂಡದ ಮಾಲೀಕರಿಗೂ ಮಾಜಿ ನಾಯಕ ಧೋನಿಗೂ ಸಂಬಂಧ ಸರಿ ಇಲ್ಲವೇ ಹಿಗೊಂದು ಪ್ರಶ್ನೆ ಈಗ ಎದ್ದಿದೆ.

    ಪುಣೆ ತಂಡದ ಮಾಲೀಕರಾಗಿರುವ ಸಂಜಯ್ ಗೋಯಂಕಾ ಅವರ ಸಹೋದರ ಹರ್ಷ ಗೋಯಂಕಾ ಅವರು ಧೋನಿ ಕುರಿತಾಗಿ ಮಾಡಿರುವ ಟ್ವೀಟ್‍ನಿಂದಾಗಿ ಈ ಪ್ರಶ್ನೆ ಎದ್ದಿದೆ.

    ಗುರುವಾರ ಮುಂಬೈ ಇಂಡಿಯನ್ಸ್ ಜೊತೆಗಿನ ಪಂದ್ಯದಲ್ಲಿ ಪುಣೆ 7 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು, ಈ ಪಂದ್ಯದಲ್ಲಿ ನಾಯಕ ಆಸ್ಟ್ರೇಲಿಯಾದ ಸ್ಮಿತ್ 84 ರನ್(54 ಎಸೆತ, 7 ಬೌಂಡರಿ, 3 ಸಿಕ್ಸರ್) ಸಿಡಿಸಿ ಜಯಕ್ಕೆ ಕಾರಣವಾಗಿದ್ದರು. ಈ ಜಯದ ಬಳಿಕ ಟ್ವೀಟ್ ಮಾಡಿರುವ ಹರ್ಷ ಗೋಯಂಕಾ, ಕಾಡಿನ ರಾಜ ಯಾರು ಎನ್ನುವುದನ್ನು ಸ್ಮಿತ್ ನಿರೂಪಿಸಿದ್ದಾರೆ. ನಾಯಕನಾಗಿ ಉತ್ತಮವಾಗಿ ಆಡಿದ್ದಾರೆ. ಅವರನ್ನು ನಾಯಕರನ್ನಾಗಿ ನೇಮಿಸಿದ್ದು ಉತ್ತಮ ಬೆಳವಣಿಗೆ ಎಂದು ಬರೆದುಕೊಂಡಿದ್ದಾರೆ.

    ಧೋನಿ ನಾಯಕತ್ವವನ್ನು ತೆಗಳಿದ್ದಕ್ಕೆ ಧೋನಿ ಅಭಿಮಾನಿಗಳು ಹರ್ಷ ಅವರನ್ನ ಟ್ರಾಲ್‍ಮಾಡಿದ್ದಾರೆ. ಇದಕ್ಕೆ ಹರ್ಷ ಧೋನಿ ಅತ್ಯುತ್ತಮ ಬ್ಯಾಟ್ಸ್ ಮನ್ ಹೌದು. ಆದರೆ ಇಂದು ಸ್ಮಿತ್ ಅವರ ದಿನ ಎಂದು ಹೇಳುವ ಮೂಲಕ ತಮ್ಮ ಟ್ವೀಟನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ಟ್ವೀಟ್‍ಗೆ ಧೋನಿ ಅಭಿಮಾನಿಗಳು, ಇವತ್ತು ಸ್ಮಿತ್ ಅವರ ದಿನ ಆಗಿರಬಹುದು. ಆದರೆ ಬೇರೆ ವ್ಯಕ್ತಿಗಳಿಗೆ ಹೋಲಿಸುವ ಮುನ್ನ ಕ್ರಿಕೆಟ್ ದಂತಕಥೆಗೆ ಗೌರವ ನೀಡುವುದನ್ನು ಕಲಿತುಕೊಳ್ಳಿ. ದೇಶಕ್ಕಾಗಿ ಧೋನಿ ಎಲ್ಲ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಯಾಗಿ ಹರ್ಷ ಅವರು ಪುಣೆ ತಂಡದ ಬ್ಯಾಟ್ಸ್ ಮನ್‍ಗಳ ಸರಾಸರಿ ಪಟ್ಟಿಯನ್ನು ಪ್ರಕಟಿಸಿದ್ದಾರೆ.

    ಮುನ್ನಾ ದಿನ ನಾಯಕ ಪಟ್ಟ: ಐಪಿಎಲ್ 2017ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಮುನ್ನಾ ದಿನ ನಾಯಕ ಸ್ಥಾನದಿಂದ ಧೋನಿ ಅವರನ್ನು ಕಿತ್ತುಹಾಕಿ, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್‍ಗೆ ಪಟ್ಟ ಕಟ್ಟಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪುಣೆ ಸೂಪರ್ ಜೈಂಟ್ಸ್ ಮಾಲೀಕ ಸಂಜಯ್ ಗೋಯಂಕಾ, ಧೋನಿ ನಾಯಕತ್ವದಿಂದ ಕೆಳಗಡೆ ಇಳಿಯಲಿಲ್ಲ. ಕಳೆದ ಆವೃತ್ತಿಯಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಕಿರಿಯ ಆಟಗಾರನ ನೇತೃತ್ವದಲ್ಲಿ ತಂಡವನ್ನು ಮುನ್ನಡೆಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

    ಐಪಿಎಲ್ 9ರ ಆವೃತ್ತಿಯ 14 ಪಂದ್ಯದಲ್ಲಿ ಪುಣೆ 5 ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿತ್ತು. ಧೋನಿ 12 ಇನ್ನಿಂಗ್ಸ್ ಒಂದು ಅರ್ಧಶತಕ ಸಹಿತ 284 ರನ್‍ಗಳಿಸಿದ್ದರು.

    ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ಶಿಫಾರಸಿನಂತೆ ಐಪಿಎಲ್‍ನಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳನ್ನು 2 ವರ್ಷಗಳ ಅಮಾನತುಗೊಂಡಿತ್ತು. ಈ ಹಿನ್ನೆಲೆಯಲ್ಲಿ 2015ರವರೆಗೆ ಚೆನ್ನೈ ತಂಡವನ್ನು ಮುನ್ನಡೆಸಿದ್ದ ಧೋನಿ 2016ರ ಆವೃತ್ತಿಯಲ್ಲಿ ಪುಣೆ ತಂಡವನ್ನು ಮುನ್ನಡೆಸಿದ್ದರು.

    ಸತತ 8 ಆವೃತ್ತಿಯಲ್ಲಿ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿದ್ದರು. 2010 ಮತ್ತು 2011ರಲ್ಲಿ ಚೆನ್ನೈ ತಂಡ ಚಾಂಪಿಯನ್ ಆಗಿತ್ತು. 2008, 2012, 2013, 2015 ರಲ್ಲಿ ರನ್ನರ್ ಅಪ್ ಆಗಿತ್ತು.

    https://twitter.com/hvgoenka/status/850688162615656448?

  • ಸಚಿನ್‍ರಂತೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ದೆಹಲಿಯ ರಿಷಭ್ ಪಂತ್!

    ಸಚಿನ್‍ರಂತೆ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದ ದೆಹಲಿಯ ರಿಷಭ್ ಪಂತ್!

    ಬೆಂಗಳೂರು: ಐಪಿಎಲ್‍ನ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಆರ್‍ಸಿಬಿಗೆ ಶರಣಾಗಿದೆ. ಆದರೆ ಡೆಲ್ಲಿ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ರಿಷಭ್ ಪಂತ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ರಂತೆ ಕ್ರೀಡಾಭಿಮಾನಿಗಳ ಮನ ಗೆದ್ದಿದ್ದಾರೆ.

    ಮೂರು ದಿನಗಳ ಹಿಂದಷ್ಟೇ ರಿಷಭ್ ತಂದೆ ರಾಜೇಂದ್ರ ಪಂತ್ ಹೃದಾಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ರಿಷಭ್ ಡೆಲ್ಲಿ ಡೇರ್‍ಡೆವಿಲ್ಸ್ ಕ್ಯಾಂಪ್‍ನಲ್ಲಿ ಐಪಿಎಲ್‍ಗಾಗಿ ಕಠಿಣ ತಾಲೀಮಿನಲ್ಲಿದ್ದರು. ತಂದೆಯ ನಿಧನ ಸುದ್ದಿ ತಿಳಿಯುತ್ತಲೇ ರಿಷಭ್ ಹರಿದ್ವಾರಕ್ಕೆ ದೌಡಾಯಿಸಿದ್ರು. ತಾಯಿ ಸರೋಜ, ಸಹೋದರಿ ಸಾಕ್ಷಿ ಜೊತೆಗೆ ತಂದೆಯ ಅಂತಿಮ ವಿಧಿವಿಧಾನ ಪೂರೈಸಿದ್ದ ರಿಷಭ್‍ಗೆ, ಈ ವೇಳೆ ಕಾಲಿಗೆ ಸುಟ್ಟ ಗಾಯವಾಗಿತ್ತು.

    ಈ ಎಲ್ಲಾ ಕಾರಣಗಳಿಂದಾಗಿ ರಿಷಭ್ ಚೊಚ್ಚಲ ಐಪಿಎಲ್ ಪ್ರವೇಶ ಸಂಶಯವಾಗಿತ್ತು. ಆದರೆ ತಂದೆಯ ಅಕಾಲಿಕ ಅಗಲುವಿಕೆಯ ಆಘಾತ ಜೊತೆಗೆ ಸುಟ್ಟ ಗಾಯದ ನಡುವೆಯೇ ರಿಷಭ್ ಶುಕ್ರವಾರ ಬೆಂಗಳೂರಿಗೆ ಪ್ರಯಾಣ ಬೆಳಸಿದ್ದರು.

    ತಂದೆಯ ನಿಧನದ ಆಘಾತ ಅನುಭವಿಸಿದ್ದ ರಿಷಭ್ ತಮ್ಮ ದುಃಖವನ್ನು ಬದಿಗಿಟ್ಟು ತಂಡ ಗೆಲುವಿಗೆ ಪ್ರಯತ್ನಿಸಿದ ರೀತಿ ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಆರ್‍ಸಿಬಿ ನೀಡಿದ್ದ 157 ರನ್‍ಗಳ ಗುರಿ ಬೆನ್ನತ್ತಿದ್ದ ಡೆಲ್ಲಿ ತಂಡದಲ್ಲಿ ಏಕಾಂಗಿ ಹೋರಾಟ ನಡೆಸಿದ ರಿಷಭ್ ಆಕರ್ಷಕ ಅರ್ಧಶತಕ ದಾಖಲಿಸಿದ್ರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಬಂದ ರಿಷಭ್ 4 ಸಿಕ್ಸರ್, 3 ಬೌಂಡರಿಗಳನ್ನು ಒಳಗೊಂಡ 57 ರನ್ ಬಾರಿಸಿ ಅಂತಿಮ ಓವರ್‍ನಲ್ಲಿ ನೇಗಿಗೆ ಬೌಲ್ಡ್ ಆದ್ರು.

    ಕಣ್ಣಂಚಿನಲ್ಲಿ ಕಣ್ಣೀರು: ಕೊನೆಯ ಓವರ್‍ನಲ್ಲಿ 19 ರನ್‍ಗಳಷ್ಟೇ ಗೆಲುವಿಗೆ ಬೇಕಾಗಿತ್ತು. ರಿಷಬ್ ಅದನ್ನು ಸಾಧಿಸುವ ನಿರೀಕ್ಷೆ ಇತ್ತು. ಆದರೆ ಪವನ್ ನೇಗಿಯ ಪ್ರಥಮ ಎಸೆತದಲ್ಲಿಯೇ ಬೌಲ್ಡ್ ಆಗಿ ಪೆವಿಲಿಯನ್‍ನತ್ತ ಒಲ್ಲದ ಮನಸ್ಸಿನಿಂದ ಹೆಜ್ಜೆ ಹಾಕಿದರು. ಅವರ ಕಣ್ಣಂಚಿನಲ್ಲಿ ಜಿನುಗಿದ ಹನಿಗಳು, ಹಣೆಯ ಮೇಲಿನ ಬೆವರು, ಹೊನಲು ಬೆಳಕಿನಲ್ಲಿ ಕ್ಯಾಮರಾ ಕಣ್ಣಲ್ಲಿ ಸ್ಪಷ್ಟವಾಗಿತ್ತು.

    1.90 ಕೋಟಿಗೆ ಖರೀದಿ: ರಿಷಭ್ ಪಂತ್ ಹೆಸರು ಮೊದಲ ಬಾರಿ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದು 2016ರಲ್ಲಿ. 10 ಲಕ್ಷ ಮೂಲಬೆಲೆ ಹೊಂದಿದ್ದ ರಿಷಭ್ ಪಂತ್‍ರನ್ನು 10 ಪಟ್ಟು ಹೆಚ್ಚು ಮೊತ್ತ ಕೊಟ್ಟು ಅಂದರೆ 1.90 ಕೋಟಿಗೆ ಡೆಲಿ ಡೇರ್ ಡೆವಿಲ್ಸ್ ಖರೀದಿಸಿತ್ತು.

    ಕಿರಿಯ ಆಟಗಾರ: 19 ವರ್ಷ ವಯಸ್ಸಿನ ರಿಷಭ್ ಕಳೆದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯ ವೇಳೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಚುಟಕು ಫಾರ್ಮೆಟ್‍ನಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ ಕಿರೀಯ ಆಟಗಾರ ಎಂಬ ಕೀರ್ತಿಗೆ ಪಂತ್ ಪಾತ್ರರಾಗಿದ್ದರು.

    ರಣಜಿಯಲ್ಲೂ ದಾಖಲೆ: ಕಳೆದ ಬಾರಿಯ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ 67 ಎಸೆತದಲ್ಲಿ ಶತಕ ದಾಖಲಿಸಿದ್ದ ಪಂತ್, ಅದೇ ಅವಧಿಯಲ್ಲಿ ತ್ರಿಶತಕದ ಗಡಿಯನ್ನೂ ದಾಟಿದ್ದರು. ಇತ್ತೀಚಿಗಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೌತಮ್ ಗಂಭೀರ್ ಬದಲಿಗೆ ರಿಷಭ್ ದೆಹಲಿ ತಂಡವನ್ನು ಮುನ್ನಡೆಸಿ ಗಮನ ಸೆಳೆದಿದ್ದರು.

    ಸಚಿನ್ ಶತಕ ಹೊಡೆದಿದ್ರು: 1998ರ ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ವೇಳೆ ಸಚಿನ್ ತೆಂಡೂಲ್ಕರ್ ಅವರ ತಂದೆ ನಿಧನರಾಗಿದ್ದರು. ಈ ಸಂದರ್ಭದಲ್ಲಿ ಅರ್ಧದಲ್ಲೇ ಭಾರತಕ್ಕೆ ಬಂದ ಸಚಿನ್ ತಂದೆಯ ಅಂತ್ಯಕ್ರಿಯೆ ನಡೆಸಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಅಜೇಯ 140 ರನ್(101 ಎಸೆತ, 16 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು. ಈ ಪಂದ್ಯವನ್ನು ಭಾರತ 94 ರನ್‍ಗಳಿಂದ ಗೆದ್ದುಕೊಂಡಿತ್ತು.

    https://twitter.com/Rohitraje_wai/status/850740036236660736

    https://twitter.com/jhalli_arti/status/850936280649269248

    https://twitter.com/TheTimeChor/status/850755672253792258

  • ಐಪಿಎಲ್ ಬೆಟ್ಟಿಂಗ್ ತಡೆಗೆ ಸಿದ್ಧವಾಗಿದೆ ಸಿಸಿಬಿ ತಂಡ

    ಐಪಿಎಲ್ ಬೆಟ್ಟಿಂಗ್ ತಡೆಗೆ ಸಿದ್ಧವಾಗಿದೆ ಸಿಸಿಬಿ ತಂಡ

    ಬೆಂಗಳೂರು: ಜೂಜಾಟದಲ್ಲಿ ತೊಡಗೋ ಕೆಲವರು ಐಪಿಎಲ್ ಆರಂಭವಾಗೋದನ್ನೇ ಕಾಯ್ತಿರ್ತಾರೆ. ಸಾವಿರದಿಂದ ಹಿಡಿದು ಲಕ್ಷಗಟ್ಟಲೇ ಬೆಟ್ಟಿಂಗ್‍ನಲ್ಲಿ ಹಣ ಕಟ್ತಾರೆ. ಅಂತವರ ವಿರುದ್ಧ ನಿಗಾ ಇಡೋಕೆ ಕ್ರೈಮ್ ಬ್ರಾಂಚ್‍ನ ವಿಶೇಷ ತಂಡ ಸಿದ್ಧವಾಗಿದೆ.

    ಇಂದಿನಿಂದ ಐಪಿಎಲ್‍ನ 10ನೇ ಆವೃತ್ತಿ ಆರಂಭವಾಗಲಿದೆ. ಹೈದ್ರಾಬಾದ್‍ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸನ್‍ರೈಸರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯ ಮೇಲೆ ಬೆಟ್ಟಿಂಗ್ ಭೂತದ ಕಾರ್ಮೋಡ ಆವರಿಸಿದೆ. ಈ ಬಾರಿ ಬೆಂಗಳೂರೇ ಕಪ್ ಗೆಲ್ಲೋ ಹಾಟ್ ಫೇವರಿಟ್ ಎನ್ನಲಾಗ್ತಿದೆ. ಇನ್ನು ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಳ ಮೇಲೆ ಕೋಟ್ಯಂತರ ರೂಪಾಯಿ ಬಾಜಿ ವ್ಯವಹಾರ ನಡೆಯೋ ನಿರೀಕ್ಷೆಯಿದೆ. ಆದ್ರೆ ಈ ಎಲ್ಲದಕ್ಕೂ ಬ್ರೇಕ್ ಹಾಕಲು ಸಿಸಿಬಿ ರೆಡಿಯಾಗಿದೆ.

    ರಾಜಧಾನಿಯಲ್ಲಿ ಬೆಟ್ಟಿಂಗ್ ದಂಧೆಗೆ ಅವಕಾಶ ಕೊಡದಂತೆ ಕ್ರೈಂ ಬ್ರಾಂಚ್ ಪೊಲೀಸರು ತಯಾರಿ ನಡೆಸಿದ್ದಾರೆ. ಬೆಟ್ಟಿಂಗ್ ದಂಧೆಕೋರರನ್ನ ಬಗ್ಗು ಬಡಿಯಲು ಸಿಸಿಬಿ ವಿಶೇಷ ತಂಡ ರಚನೆ ಮಾಡಲಾಗಿದೆ. ಅದಾಗಲೇ ಬೆಟ್ಟಿಂಗ್ ವೀರರ ಎಲ್ಲಾ ಮೊಬೈಲ್‍ಗಳನ್ನ ಟ್ರ್ಯಾಕ್ ಮಾಡಲಾಗಿದೆ. ಜೊತೆಗೆ ಒಂದೇ ಮೊಬೈಲ್‍ಗೆ ಹೆಚ್ಚು ಕರೆಗಳು ಹೋಗೋದರ ಮೇಲೂ ನಿಗಾ ವಹಿಸಲಾಗಿದೆ.

    ಕ್ರಿಕೆಟ್ ಬೆಟ್ಟಿಂಗ್ ನಡೆಸೋಕೆ ಈಗ ಆನ್‍ಲೈನ್ ಆ್ಯಪ್‍ಗಳು ಸೃಷ್ಟಿಯಾಗಿಬಿಟ್ಟಿವೆ. ಈವರೆಗೆ ಇಂಥ 31 ಆಪ್‍ಗಳನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಸೈಬರ್ ತಂಡವೂ ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

     

  • ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು?

    ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು?

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‍ನ 10ನೇ ಆವೃತ್ತಿಯ ಪಂದ್ಯಾಟಗಳು ಏಪ್ರಿಲ್ 5ರಿಂದ ಆರಂಭವಾಗಲಿದೆ. ಸನ್‍ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಮೊದಲ ಪಂದ್ಯ ಬುಧವಾರ ಹೈದರಾಬಾದ್‍ನಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿಯ ಐಪಿಎಲ್‍ನಲ್ಲಿ ಜಯಗಳಿಸುವ ತಂಡಕ್ಕೆ ಎಷ್ಟು ಹಣ ಸಿಗುತ್ತದೆ? ಫ್ರಾಂಚೈಸಿಗಳಿಗೆ ಏನು ಲಾಭ? 10 ಸೆಕೆಂಡ್ ಜಾಹಿರಾತಿಗೆ ಎಷ್ಟು ರೂ.? ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ನಗದು ಬಹುಮಾನ ಎಷ್ಟು?
    ಪ್ರತಿಬಾರಿಯೂ ಐಪಿಎಲ್‍ನಲ್ಲಿ ನಗದು ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಈ ಬಾರಿ ಚಾಂಪಿಯನ್ ತಂಡಕ್ಕೆ 21 ಕೋಟಿ ರೂ. ನಿಗದಿ ಪಡಿಸಿದರೆ, ರನ್ನರ್ ಅಪ್ ತಂಡಕ್ಕೆ 12 ಕೋಟಿ ಸಿಗಲಿದೆ. ಮೂರನೇ ಮತ್ತು ನಾಲ್ಕನೇಯ ಸ್ಥಾನವನ್ನು ಪಡೆದ ತಂಡಗಳಿಗೆ 8 ಕೋಟಿ ರೂ. ಸಿಗಲಿದೆ.

    2016ರಲ್ಲಿ ಬಹುಮಾನ ಎಷ್ಟಿತ್ತು?
    ಚಾಂಪಿಯನ್ ಆಗಿದ್ದ ಹೈದರಾಬಾದ್ ತಂಡಕ್ಕೆ 20 ಕೋಟಿ ಸಿಕ್ಕಿದ್ದರೆ, ಆರ್‍ಸಿಬಿಗೆ 11 ಕೋಟಿ ಸಿಕ್ಕಿತ್ತು. ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಿಗೆ ತಲಾ 7.5 ಕೋಟಿ ರೂ. ಹಣ ಸಿಕ್ಕಿತ್ತು.

    ಬಿಸಿಸಿಐಗೆ ಎಷ್ಟು ಹಣ ಸಿಗುತ್ತೆ?
    ಪ್ರತಿವರ್ಷ 1200 ಕೋಟಿ ರೂ ಆದಾಯ ಐಪಿಎಲ್‍ನಿಂದ ಬರುತ್ತದೆ. ಈ ಆದಾಯದಲ್ಲಿ ಬಿಸಿಸಿಐಗೆ ಶೇ. 40 ರಷ್ಟು ಲಾಭ ಸಿಗಲಿದೆ. 2007ರಲ್ಲಿ ಬಿಸಿಸಿಐಗೆ 235 ಕೋಟಿ ರೂ. ಲಾಭ ಸಿಕ್ಕಿತ್ತು. 2016 ರಲ್ಲಿ ಬಿಸಿಸಿಐ ಬೌಂಡರಿ ಲೈನಿನಲ್ಲಿನ ಜಾಹಿರಾತಿನಿಂದ ಒಟ್ಟು 250 ಕೋಟಿ ರೂ. ಹಣವನ್ನು ಗಳಿಸಿತ್ತು.

    ಚಾನೆಲ್‍ಗೆ ಎಷ್ಟು ಹಣ ಸಿಗುತ್ತೆ?
    ಐಪಿಎಲ್ ಪಂದ್ಯಾಟಗಳು ಪ್ರೈಮ್ ಟೈಂನಲ್ಲಿ ನಡೆಯಲಿರುವುದರಿಂದ ಹೆಚ್ಚಿನ ಪ್ರಮಾಣದ ವೀಕ್ಷಕರು ಕ್ರಿಕೆಟ್ ವೀಕ್ಷಿಸುತ್ತಾರೆ. 2008 ರಿಂದ 2017ರವರೆಗಿನ ಅವಧಿ ವರೆಗಿನ ನೇರ ಸಾರದ ಹಕ್ಕನ್ನು ಸೋನಿ, ಇಎಸ್‍ಪಿಎನ್ ಚಾನೆಲ್ ಖರೀದಿಸಿದೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ ಐಪಿಎಲ್ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಆದಾಯಗಳಿಸುವ ಪ್ರಮಾಣ ಶೇ.5.7 ರಿಂದ ಶೇ.28.8ಕ್ಕೆ ಏರಿಕೆ ಆಗುತ್ತದೆ. ಸೋನಿಯ ವಾರ್ಷಿಕ ಆದಾಯ 9 ಸಾವಿರ ಕೋಟಿ ರೂ. ಇದ್ದರೆ, ಈ ಆದಾಯದ ಶೇ.7ರಷ್ಟನ್ನು ಐಪಿಎಲ್‍ನ 45 ದಿನಗಳಲ್ಲಿ ಗಳಿಸುತ್ತದೆ.

    ಇದನ್ನೂ ಓದಿ: ಟೀಂ ಇಂಡಿಯಾದ ಆಟಗಾರರಿಗೆ ಮತ್ತು ಕೋಚ್‍ ಗಳಿಗೆ ಎಷ್ಟು ಹಣ ಸಿಗುತ್ತೆ?

    10 ಸೆಕೆಂಡ್ ಜಾಹಿರಾತಿಗೆ ಎಷ್ಟು ರೂ.?
    ಟೂರ್ನಿಯ ಆರಂಭಿಕ ದಿನಗಳಲ್ಲಿ 10 ಸೆಕೆಂಡ್‍ನ ಜಾಹಿರಾತಿಗೆ ಅಂದಾಜು 5 ಲಕ್ಷ ರೂ. ಇದ್ದರೆ, ಫೈನಲ್ ವೇಳೆಗೆ ಈ ಮೊತ್ತ 10 ಲಕ್ಷ ರೂ. ಏರಿಕೆಯಾಗುತ್ತದೆ. ಟಿ20 ವಿಶ್ವಕಪ್‍ನ ಫೈನಲ್ ಪಂದ್ಯದ ವೇಳೆ 10 ಸೆಕೆಂಡ್ ಜಾಹಿರಾತಿಗೆ 8 ಲಕ್ಷ ರೂ. ಇತ್ತು.

    10 ಸೆಕೆಂಡಿನ ಜಾಹೀರಾತಿನಲ್ಲೂ ವಿಭಾಗಗಳಿವೆ. ಒಂದು ಕಂಪೆನಿ ಒಂದು ಪಂದ್ಯದ 300 ಸೆಕಂಡ್‍ಗಳನ್ನು ಖರೀದಿ ಮಾಡಿದರೆ ಪ್ರತಿ 10 ಸೆಕೆಂಡಿಗೆ 5.2 ಲಕ್ಷ ರೂ. ನೀಡಬೇಕಾಗುತ್ತದೆ. ಇದಕ್ಕಿಂತಲೂ ಕಡಿಮೆ ಅವಧಿಯನ್ನು ಖರೀದಿಸಿದರೆ ಅವರಿಗೆ 10 ಸೆಕೆಂಡ್‍ಗೆ 5.75 ಲಕ್ಷ ರೂ. ಇದರುತ್ತದೆ. ಇನ್ನು ಸ್ಪಾಟ್ ಜಾಹಿರಾತು ಖರೀದಿ ಮಾಡಿದರೆ ಅವರು 6 ಲಕ್ಷ ರೂ. ನೀಡಬೇಕಾಗುತ್ತದೆ.

    ಒಟ್ಟಿನಲ್ಲಿ 30 ಸೆಕಂಡ್ ಜಾಹಿರಾತಿನಲ್ಲಿ ವಾಹಿನಿ ಅಂದಾಜು 18 ಲಕ್ಷ ರೂ. ಹಣವನ್ನು ಒಂದು ಪಂದ್ಯದಿಂದ ಗಳಿಸುತ್ತದೆ. ಒಂದು ಪಂದ್ಯದಿಂದ ಅಂದಾಜು 12 ಕೋಟಿ ಹಣ ಬಂದರೆ ಎಲ್ಲ ಐಪಿಎಲ್ ಪಂದ್ಯಗಳಿಂದ ಒಟ್ಟು 720 ಕೋಟಿ ರೂ. ಹಣ ಜಾಹಿರಾತಿನಿಂದಲೇ ಬರುತ್ತದೆ.

    ಇದನ್ನೂ ಓದಿ: ಐಪಿಎಲ್ ಮ್ಯಾಚ್‍ಗಳಲ್ಲಿ ಅಂಪೈರ್‍ಗಳಿಗೆ ಎಷ್ಟು ಸಂಬಳ ಸಿಗುತ್ತೆ? ಇಲ್ಲಿದೆ ಮಾಹಿತಿ

    ಫ್ರಾಂಚೈಸಿಗಳಿಗೆ ಎಷ್ಟು ಲಾಭ ಸಿಗುತ್ತೆ?
    ಬಿಸಿಸಿಐ ನೇರಪ್ರಸಾರದಿಂದ ಸಿಗುವ ಲಾಭವನ್ನು ಫ್ರಾಂಚೈಸಿಗಳಿಗೆ ಹಂಚುತ್ತದೆ. ಇದರ ಜೊತೆಗೆ ಟಿಕೆಟ್ ಮಾರಾಟದಲ್ಲೂ ಫ್ರಾಂಚೈಸಿಗಳಿಗೆ ಹೆಚ್ಚಿನ ಪಾಲು ಸಿಗುತ್ತದೆ. ಅತಿಥೇಯ ಮೈದಾನದಲ್ಲಿ ಪಂದ್ಯ ನಡೆದರೆ ಶೇ.80 ಎಷ್ಟು ಹಣ ಫ್ರಾಂಚೈಸಿಗೆ ಸಿಗಲಿದೆ.

    ಪ್ರಾಯೋಜಕರಿಗೂ ಏನು ಲಾಭ?
    ಬೌಂಡರಿ, ಸಿಕ್ಸರ್, ಗರಿಷ್ಠ ಸಿಕ್ಸರ್ ಹೊಡೆದವರಿಗೆ ಪ್ರಶಸ್ತಿಯನ್ನು ಪ್ರಯೋಜಕರು ನೀಡುತ್ತಾರೆ. ಮೂರನೇ ಅಂಪೈರ್ ತೀರ್ಪಿನಲ್ಲೂ ಪ್ರಾಯೋಜಕರ ಲೋಗೋ ಇರುತ್ತದೆ. ಐಪಿಎಲ್ ಅನ್ನು ಹೆಚ್ಚು ಜನ ವೀಕ್ಷಿಸುವ ಕಾರಣ ಕಂಪೆನಿಗಳಿಗೂ ಚೆನ್ನಾಗಿ ಪ್ರಚಾರ ಸಿಗುತ್ತದೆ.

    ಇದನ್ನೂ ಓದಿ: ಆರ್‍ಸಿಬಿ 12 ಕೋಟಿ ನೀಡಿ ಟೈಮಲ್ ಮಿಲ್ಸ್ ಅವರನ್ನೇ ಖರೀದಿಸಿದ್ದು ಯಾಕೆ?

  • ಶಿಖರ್ ಧವನ್‍ಗೆ ಯುವರಾಜ್ ಸಿಂಗ್ ಏಪ್ರಿಲ್ ಫೂಲ್ ಮಾಡಿದ್ದನ್ನು ನೋಡಿ

    ಶಿಖರ್ ಧವನ್‍ಗೆ ಯುವರಾಜ್ ಸಿಂಗ್ ಏಪ್ರಿಲ್ ಫೂಲ್ ಮಾಡಿದ್ದನ್ನು ನೋಡಿ

    ನವದೆಹಲಿ: ಡ್ರೆಸಿಂಗ್ ರೂಮ್‍ನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಒಬ್ಬರಿಗೊಬ್ಬರು ಮೋಜು ಮಸ್ತಿ ಮಾಡುತ್ತಿರುತ್ತಾರೆ. ನಿನ್ನೆ ಏಪ್ರಿಲ್ 1, ಹೀಗಾಗಿ ಯುವರಾಜ್ ಸಿಂಗ್ ತನ್ನ ಸನ್ ರೈಸರ್ಸ್ ತಂಡದ ಸಹ ಆಟಗಾರ ಶಿಖರ್ ಧವನ್‍ಗೆ ಏಪ್ರಿಲ್ ಫೂಲ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಸನ್ ರೈಸರ್ಸ್ ತಂಡದ ಆಟಗಾರರು ಹೋಟೆಲ್‍ನಲ್ಲಿರುವಾಗ, ಶಿಖರ್ ಧವನ್ ಸ್ವಿಮಿಂಗ್ ಮಾಡುತ್ತಿದ್ದರು. ಈ ವೇಳೆ ಯುವಿ, ನಿಮ್ಮ ಪತ್ನಿ ಆಯೇಶಾ ಮುಖರ್ಜಿ ಕರೆ ಮಾಡಿದ್ರು. ಏನೋ ಎಮರ್ಜೆನ್ಸಿ ಅಂತೆ ಎಂದು ಧವನ್‍ಗೆ ಹೇಳಿದ್ದಾರೆ. ತಕ್ಷಣವೇ ಸ್ವಿಮಿಂಗ್ ಪೂಲ್‍ನಿಂದ ಹೊರಬಂದ ಧವನ್ ಪತ್ನಿಗೆ ಕರೆ ಮಾಡಲು ಬ್ಯಾಗ್‍ನಲ್ಲಿ ಮೊಬೈಲ್‍ಗಾಗಿ ಹುಡಿಕಿದ್ದಾರೆ. ಹಿಂದಿನಿಂದ ಬಂದ ಯುವಿ ಏಪ್ರಿಲ್ ಪೂಲ್ ಎಂದು ಹೇಳಿ ನಕ್ಕಿದ್ದಾರೆ.

    ಈ ವಿಡಿಯೋವನ್ನು ಯುವಿ ಟ್ವಿಟರ್ ನಲ್ಲಿ ಅಪಲೋಡ್ ಮಾಡಿದ್ದು, ಏಪ್ರಿಲ್ 1 ರಂದು ಫೂಲ್ ಮಾಡದಿದ್ದರೆ ಹೇಗೆ? ಇದು ತುಂಬಾ ತಮಾಷೆಯಾಗಿತ್ತು. ಎಲ್ಲರಿಗೂ ಏಪ್ರಿಲ್ ಫೂಲ್ಸ್ ಡೇ ಶುಭಾಶಯ ಎಂದು ಬರೆದುಕೊಂಡಿದ್ದಾರೆ.

    ಈ ಬಾರಿ ಯುವರಾಜ್ ಸಿಂಗ್ ಮತ್ತು ಶಿಖರ್ ಧವನ್ ಇಬ್ಬರೂ ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಆಡಲಿದ್ದಾರೆ. ಏಪ್ರಿಲ್ 5 ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಗೊಳ್ಳಲಿದೆ.

    https://twitter.com/YUVSTRONG12/status/848121660595220481

    https://www.facebook.com/yuvirajsinghofficial/videos/10155120939354254/