Tag: ಐಪಿಎಲ್

  • ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

    ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

    ಅಹಮದಾಬಾದ್‌: ಗುಜರಾತ್‌ ಟೈಟಾನ್ಸ್‌ (Gujarat Titans) ಐಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರ ಬಿದ್ದಿದೆ. ಗುಜರಾತ್‌ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧದ ಪಂದ್ಯ ಭಾರೀ ಮಳೆಯಿಂದ ರದ್ದಾಗಿದೆ.

    ಪ್ಲೇ ಆಫ್‌ಗೆ ಹೋಗಲು ಇಂದಿನ ಪಂದ್ಯವನ್ನು ಗುಜರಾತ್‌ಗೆ ಗೆಲ್ಲಲೇ ಬೇಕಿತ್ತು. ಆದರೆ ಭಾರೀ ಮಳೆಯಿಂದ (Rain) ಒಂದು ಎಸೆತ ಕಾಣದೇ ಪಂದ್ಯ ರದ್ದಾದ ಪರಿಣಾಮ ಗುಜರಾತ್‌ ಕನಸು ಭಗ್ನಗೊಂಡಿದೆ.

    ಪಂದ್ಯ ರದ್ದಾದ ಪರಿಣಾಮ ಕೋಲ್ಕತ್ತಾ ಮತ್ತು ಗುಜರಾತ್‌ಗೆ ತಲಾ ಒಂದೊಂದು ಅಂಕವನ್ನು ಹಂಚಲಾಗಿದೆ. ಈಗಾಲೇ ಪ್ಲೇ ಆಫ್‌ ಪ್ರವೇಶಿಸಿರುವ ಕೋಲ್ಕತ್ತಾಗೆ ಒಟ್ಟು 19 ಅಂಕ ಸಂಪಾದಿಸಿದರೆ ಗುಜರಾತ್‌ 12 ಪಂದ್ಯಗಳಿಂದ ಒಟ್ಟು 11 ಅಂಕ ಸಂಪಾದಿಸಿದೆ.

     ಚೆನ್ನೈ ಮತ್ತು ಹೈದರಾಬಾದ್‌ ತಲಾ 14 ಅಂಕ ಗಳಿಸಿ ಪ್ಲೇ ಆಫ್‌ ರೇಸ್‌ನಲ್ಲಿದೆ. ಈ ಒಂದು ವೇಳೆ ಈ ಪಂದ್ಯವನ್ನು ಉತ್ತಮ ರನ್‌ ರೇಟ್‌ನೊಂದಿಗೆ ಗೆದ್ದಿದ್ದರೆ ಗುಜರಾತ್‌ಗೆ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಈ ಪಂದ್ಯದ ರದ್ದಾದ ಪರಿಣಾಮ 2022 ಚಾಂಪಿಯನ್‌, 2023ರ ದ್ವಿತೀಯ ಸ್ಥಾನಿ ಗುಜರಾತ್‌ ಐಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.

  • IPL 2024: ಗೆದ್ದರೂ ಖುಷಿಯಿಲ್ಲ – ಶತಕ ಸಿಡಿಸಿ ಮೆರೆದಾಡಿದ ಗಿಲ್‌ಗೆ 24 ಲಕ್ಷ ರೂ. ದಂಡ!

    IPL 2024: ಗೆದ್ದರೂ ಖುಷಿಯಿಲ್ಲ – ಶತಕ ಸಿಡಿಸಿ ಮೆರೆದಾಡಿದ ಗಿಲ್‌ಗೆ 24 ಲಕ್ಷ ರೂ. ದಂಡ!

    – ತಂಡದ ಉಳಿದ ಆಟಗಾರರಿಗೆ ಪಂದ್ಯ ಶುಲ್ಕದ 25% ದಂಡ ವಿಧಿಸಿದ್ದೇಕೆ?

    ಅಹಮದಾಬಾದ್‌: 2024ರ ಐಪಿಎಲ್‌ ಆವೃತ್ತಿಯಲ್ಲಿ 12 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್‌ ರೇಸ್‌ನಲ್ಲಿರುವ ಗುಜರಾತ್‌ ಟೈಟಾನ್ಸ್‌ (Gujarat Titans) ತಂಡ ಸಿಎಸ್‌ಕೆ ವಿರುದ್ಧ ಗೆದ್ದರೂ ಖುಷಿಯಿಲ್ಲದಂತಾಗಿದೆ.

    ಹೌದು. ಸಿಎಸ್‌ಕೆ (CSK) ವಿರುದ್ಧ ಶತಕ ಸಿಡಿಸಿ ಮೆರೆದಾಡಿದ ಟೈಟಾನ್ಸ್‌ ತಂಡದ ನಾಯಕ ಶುಭಮನ್‌ ಗಿಲ್‌ (Shubman Gill) ಅವರಿಗೆ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದು ಈ ಋತುವಿನಲ್ಲಿ ಟೈಟಾನ್ಸ್‌ ತಂಡಕ್ಕೆ ವಿಧಿಸಲಾದ 2ನೇ ದಂಡ ಶುಲ್ಕವಾಗಿದೆ. ಇದನ್ನೂ ಓದಿ: ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ದೇವರ ದಾಖಲೆ ಮುರಿದ ಸಾಯಿ ಸುದರ್ಶನ್!

    ಮೊದಲ ಬಾರಿಗೆ ನಿಧಾನಗತಿಯ ಓವರ್‌ರೇಟ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. 2ನೇ ಬಾರಿ ನಿಮಯ ಉಲ್ಲಂಘಿಸಿದ್ದರಿಂದಾಗಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಇಂಪ್ಯಾಕ್ಟ್‌ ಪ್ಲೇಯರ್‌ (Impact Player) ಸೇರಿದಂತೆ ತಂಡದ ಉಳಿದ 11 ಸದಸ್ಯರಿಗೆ ವೈಯಕ್ತಿಕವಾಗಿ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25 ಪ್ರತಿಶತದಷ್ಟು ದಂಡ (IPL Fined) ವಿಧಿಸಲಾಗಿದೆ.

    ಗಿಲ್‌-ಸುದರ್ಶನ ಶತಕಗಳ ಸಾಧನೆ:
    ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಶತಗಳ ಜೊತೆಯಾಟವಾಡಿದ ಶುಭಮನ್‌ ಗಿಲ್‌ ಹಾಗೂ ಸಾಯಿಸುದರ್ಶನ್‌ ಮೊದಲ ವಿಕೆಟ್‌ಗೆ 210 ರನ್‌ಗಳ ಜೊತೆಯಾಟ ನೀಡಿದರು. ಈ ಮೂಲಕ ಮೊದಲ ವಿಕೆಟಿಗೆ ದ್ವಿಶತಕದ ಜೊತೆಯಾಟವಾಡಿದ್ದ ಕೆ.ಎಲ್‌ ರಾಹುಲ್‌ ಹಾಗೂ ಕ್ವಿಂಟನ್‌ ಡಿಕಾಕ್‌ ಅವರ ದಾಖಲೆಯನ್ನೂ ಸರಿಗಟ್ಟಿದ್ದರು. 2022ರ ಆವೃತ್ತಿಯಲ್ಲಿ ಐಪಿಎಲ್‌ ಪ್ರವೇಶಿಸಿದ ಲಕ್ನೂ ಸೂಪರ್‌ ಜೈಂಟ್ಸ್‌ ತಂಡದ ಪರ ಕ್ವಿಂಟನ್‌ ಡಿಕಾಕ್‌ ಹಾಗೂ ಕೆ.ಎಲ್‌ ರಾಹುಲ್‌ ಆರಂಭಿಕರಾಗಿ ಕಣಕ್ಕಿಳಿದು 210 ರನ್‌ಗಳ ಜೊತೆಯಾಟ ನೀಡಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು.

    ಗಿಲ್‌-ಸುದರ್ಶನ್‌ 17.2 ಓವರ್‌ಗಳಲ್ಲೇ 210 ರನ್‌ ಬಾರಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಶುಭಮನ್‌ ಗಿಲ್‌ 55 ಎಸೆತಗಳಲ್ಲಿ 104 ರನ್‌ (9 ಬೌಂಡರಿ, 6 ಸಿಕ್ಸರ್)‌ ಬಾರಿಸಿದ್ರೆ, ಸಾಯಿ ಸುದರ್ಶನ್‌ 51 ಎಸೆತಗಳಲ್ಲಿ 103 ರನ್‌ (7 ಸಿಕ್ಸರ್‌, 5 ಬೌಂಡರಿ) ಚಚ್ಚಿದರು. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

    ಶುಕ್ರವಾರ ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಟೈಟಾನ್ಸ್‌ ತಂಡ 3 ವಿಕೆಟ್‌ ನಷ್ಟಕ್ಕೆ 231 ರನ್‌ ಸಿಡಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸಿಎಸ್‌ಕೆ 8 ವಿಕೆಟ್‌ಕೆ 196 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು.

  • ಕದನದೊಳ್‌ ಕೊಹ್ಲಿ ಕೆಣಕಿ ಉಳಿದವರುಂಟೇ – ಐಪಿಎಲ್‌ನಲ್ಲಿ ಗನ್‌ಶೂಟ್‌ ಕದನ – ಕಲಾಶ್‌ ನಿಕಾವೋಗೆ ಹೋಲಿಸಿ ಟ್ರೆಂಡ್‌!

    ಕದನದೊಳ್‌ ಕೊಹ್ಲಿ ಕೆಣಕಿ ಉಳಿದವರುಂಟೇ – ಐಪಿಎಲ್‌ನಲ್ಲಿ ಗನ್‌ಶೂಟ್‌ ಕದನ – ಕಲಾಶ್‌ ನಿಕಾವೋಗೆ ಹೋಲಿಸಿ ಟ್ರೆಂಡ್‌!

    ಧರ್ಮಶಾಲಾ: ಕ್ರಿಕೆಟ್‌ ಲೋಕದ ಕಿಂಗ್‌ ಎಂದೇ ಕರೆಸಿಕೊಂಡಿರುವ ವಿರಾಟ್‌ ಕೊಹ್ಲಿ (Virat Kohli) ಮೈದಾನದಲ್ಲಿ ತಮ್ಮನ್ನಾಗಲಿ, ತಮ್ಮ ತಂಡದವರನ್ನಾಗಲಿ ಕೆಣಕಿದವರಿಗೆ ಸುಮ್ಮನೇ ಬಿಟ್ಟಿದ್ದೇ ಇಲ್ಲ. ಖಡಕ್‌ ರಿಯಾಕ್ಷನ್‌ಗಳ ಮೂಲಕ ಏಟಿಗೆ-ಎದುರೇಟು ಕೊಟ್ಟೇ ತೀರುತ್ತಾರೆ.

    ಪ್ರತಿಯೊಬ್ಬ ಅಭಿಮಾನಿಯನ್ನು (Kohli Fans) ನಕ್ಕುನಲಿಸುವ ಕೊಹ್ಲಿ, ಗೌತಮ್‌ ಗಂಭೀರ್‌, ಅವೇಶ್‌ ಖಾನ್‌, ನವೀನ್‌ ಹುಲ್‌ ಹಕ್‌ ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದರು. ಇತ್ತೀಚೆಗೆ ತಮ್ಮ ಸ್ಟ್ರೇಕ್‌ರೇಟ್‌ ಕುರಿತು ಮಾತನಾಡುತ್ತಿದ್ದ ಸುನೀಲ್‌ ಗವಾಸ್ಕರ್‌ ಅವರಿಗೂ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟ ಕಿಂಗ್‌ ಕೊಹ್ಲಿ, ಮೈದಾನದಲ್ಲಿ ಪಂಜಾಬ್‌ ಕಿಂಗ್ಸ್‌ (PBKS) ಆಟಗಾರ ರೀಲಿ ರುಸ್ಸೊ ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.

    ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ:
    ಆರ್‌ಸಿಬಿ ನೀಡಿದ 242 ರನ್‌ಗಳ ಬೃಹತ್‌ ಮೊತ್ತ ಬೆನ್ನಟ್ಟಿದ್ದ ಕಿಂಗ್ಸ್‌ ಪಂಜಾಬ್‌ ಪರ ಎಡಗೈ ಆಟಗಾರ ರೀಲಿ ರುಸ್ಸೊ (Rilee Rossouw) ಸ್ಫೋಟಕ ಅರ್ಧಶತಕ ಬಾರಿಸಿದರು. ಅರ್ಧಶತಕ ಬಾರಿಸಿದ ಬಳಿಕ ಅವರು ಗನ್‌ ಶಾಟ್‌ ರೀತಿಯ ಭಂಗಿ ಮೂಲಕ ಸಂಭ್ರಮಿಸಿದ್ದರು. ಆದರೆ, ಅರ್ಧಶತಕದ ಬಳಿಕ ಕರಣ್‌ ಶರ್ಮಾ ಎಸೆತದಲ್ಲಿ ವಿಲ್‌ ಜಾಕ್ಸ್‌ಗೆ ಕ್ಯಾಚಿತ್ತು ರುಸ್ಸೊ ಔಟಾದರು. ರುಸ್ಸೊ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಅವರೂ ಗನ್‌ನಿಂದ ಶೂಟ್‌ ಮಾಡುವ ರೀತಿ ಕುಟುಕಿದರು. ಈ ವೀಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊಹ್ಲಿ ಅಭಿಮಾನಿಗಳಂತೂ ಈ ವೀಡಿಯೋ ನೋಡಿ ಖುಷಿಪಟ್ಟಿದ್ದಾರೆ. ಇನ್ನೂ ಕೆಲವರು ಕೆಜಿಎಫ್‌-2 ಚಿತ್ರದಲ್ಲಿ ಯಶ್‌ ಅವರು ಹಿಡಿಯುವ ಕಲಾಶ್‌ನಿಕಾವೊ ಗನ್‌ಗೆ ಹೋಲಿಸಿ ಸಂಭ್ರಮಿಸಿದ್ದಾರೆ.

    ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು. ಇದರೊಂದಿಗೆ ಆರ್‌ಸಿಬಿಯು ಸತತ 4ನೇ ಜಯ ದಾಖಲಿಸಿತು.

  • ಲಕ್ನೋಗೆ ಹೀನಾಯ ಸೋಲು – ಮೈದಾನದಲ್ಲೇ ರಾಹುಲ್‌ಗೆ ಮಾಲೀಕರಿಂದ ಫುಲ್‌ ಕ್ಲಾಸ್‌

    ಲಕ್ನೋಗೆ ಹೀನಾಯ ಸೋಲು – ಮೈದಾನದಲ್ಲೇ ರಾಹುಲ್‌ಗೆ ಮಾಲೀಕರಿಂದ ಫುಲ್‌ ಕ್ಲಾಸ್‌

    ಹೈದರಾಬಾದ್‌: ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಹೀನಾಯವಾಗಿ ಸೋತ ನಂತರ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡದ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ಅವರು ನಾಯಕ ಕೆಎಲ್‌ ರಾಹುಲ್‌ (KL Rahul) ಅವರಿಗೆ ಮೈದಾನದಲ್ಲೇ ಫುಲ್‌ ಕ್ಲಾಸ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಮೊದಲು ಬ್ಯಾಟ್‌ ಮಾಡಿದ ಲಕ್ನೋ 4 ವಿಕೆಟ್‌ ನಷ್ಟಕ್ಕೆ 165 ರನ್‌ ಗಳಿಸಿತು. ಸವಾಲಿನ ಮೊತ್ತವಾದರೂ ಹೈದರಾಬಾದ್‌ ತಂಡ ಕೇವಲ 9.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 167 ರನ್‌ ಹೊಡೆದು ಭರ್ಜರಿ 10 ವಿಕೆಟ್‌ಗಳ ಜಯ ಸಾಧಿಸಿತು. ಇದನ್ನೂ ಓದಿ: 16 ಬೌಂಡರಿ, 14 ಸಿಕ್ಸರ್‌; ನೋ ಲಾಸ್‌ನಲ್ಲಿ ಸನ್‌ ರೈಸರ್ಸ್‌ ಪಾಸ್‌ – ಹೈದರಾಬಾದ್‌ಗೆ 10 ವಿಕೆಟ್‌ಗಳ ಅದ್ಧೂರಿ ಜಯ!

    ಪಂದ್ಯ ಸೋತ ನಂತರ ಡಗೌಟ್‌ಗೆ ಬಂದ ಸಂಜೀವ್‌ ಗೋಯೆಂಕಾ ಕೆಎಲ್‌ ರಾಹುಲ್‌ ಅವರಿಗೆ ಫುಲ್‌ ಕ್ಲಾಸ್‌ ಮಾಡಿದ್ದಾರೆ. ತಂಡದ ಕಳಪೆ ಸಾಧನೆ ಗೋಯೆಂಕಾ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಕೆಎಲ್‌ ರಾಹುಲ್ ಮಲೀಕರಿಗೆ ಸ್ಪಷ್ಟನೆ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ (Viral Video) ಆಗಿದ್ದು ನೆಟ್ಟಿಗರು ಸಂಜೀವ್‌ ಗೋಯೆಂಕಾ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/Ayaz56345/status/1788459506415874343

    ಲಕ್ನೋ ತಂಡ ಹೀನಾಯವಾಗಿ ಸೋತಿದೆ. ಹಾಗೆಂದ ಮಾತ್ರಕ್ಕೆ ಸೋಲಿನ ಪರಾಮರ್ಶೆಯನ್ನು ನಾಲ್ಕು ಗೋಡೆಯ ಒಳಗಡೆ ಮಾಡಬೇಕು. ಅದನ್ನು ಬಿಟ್ಟ ಮೈದಾನದಲ್ಲಿ ಎಲ್ಲರ ಮುಂದೆ ನಾಯಕನನ್ನು ತರಾಟೆಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    https://twitter.com/T_Investor_/status/1788404214739423318

    ಇನ್ನು ಕೆಲವರು ಕೆಎಲ್‌ ರಾಹುಲ್‌ ಟೀಂ ಇಂಡಿಯಾದ ಸ್ಟಾರ್‌ ಆಟಗಾರ. ಪಂದ್ಯದಲ್ಲಿ ಸೋಲು ಗೆಲುವು ಸಾಮಾನ್ಯ. ಹಾಗೆಂದ ಮಾತ್ರ ಮಾಲೀಕ ಎಂಬ ಕಾರಣಕ್ಕೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.

    2021ರಲ್ಲಿ ಸಂಜೀವ್‌ ಗೋಯೆಂಕಾ ನೇತೃತ್ವದ ಆರ್‌ಪಿಎಸ್‌ಜಿ ಗ್ರೂಪ್‌ 7,090 ಕೋಟಿ ರೂ. ಬಿಡ್‌ ಮಾಡಿ ಲಕ್ನೋ ತಂಡವನ್ನು ಖರೀದಿಸಿತ್ತು. 2022 ಮತ್ತು 2023ರಲ್ಲಿ ಲಕ್ನೋ ತಂಡ ಪ್ಲೇ ಆಫ್‌ ಪ್ರವೇಶಿಸಿತ್ತು.

  • ಐಪಿಎಲ್‌ನಲ್ಲಿ ಕೆಟ್ಟ ಅಂಪೈರಿಂಗ್‌ ಸದ್ದು: ಹಾಲಿ, ಮಾಜಿ ಕ್ರಿಕೆಟರ್ಸ್‌ ಕೆಂಡಾಮಂಡಲ – ಯಾರು ಏನ್‌ ಹೇಳ್ತಾರೆ?

    ಐಪಿಎಲ್‌ನಲ್ಲಿ ಕೆಟ್ಟ ಅಂಪೈರಿಂಗ್‌ ಸದ್ದು: ಹಾಲಿ, ಮಾಜಿ ಕ್ರಿಕೆಟರ್ಸ್‌ ಕೆಂಡಾಮಂಡಲ – ಯಾರು ಏನ್‌ ಹೇಳ್ತಾರೆ?

    ನವದೆಹಲಿ: ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡ 20 ರನ್‌ಗಳ ಅಮೋಘ ಜಯ ಸಾಧಿಸಿತ್ತು. ಆದ್ರೆ ಜಿದ್ದಾ ಜಿದ್ದಿ ಕಣದಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡದ ನಾಯಕ ಸಂಜು ಸ್ಯಾಮ್ಸನ್‌ ಔಟ್‌ ಆದ ಬಗೆ ಈಗ ವಿವಾದಕ್ಕೆ ಕಾರಣವಾಗಿದೆ.

    ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ಪರ ನಾಯಕ ಸಂಜು ಸ್ಯಾಮ್ಸನ್‌ (Sanju Samso) ಸ್ಫೋಟಕ ಬ್ಯಾಟಿಂಗ್‌ ನಡೆಸುತ್ತಿದ್ದರು. 45 ಎಸೆತಗಳಲ್ಲಿ 8 ಫೋರ್‌ ಮತ್ತು 6 ಸಿಕ್ಸರ್‌ಗಳೊಂದಿಗೆ 86 ರನ್‌ ಸಿಡಿಸಿದ್ದ ಸ್ಯಾಮ್ಸನ್‌ 86 ರನ್‌ ಗಳಿಸಿದ್ದರು. ಸಂಜು ಅವರ ಸ್ಫೋಟಕ ಇನ್ನಿಂಗ್ಸ್‌ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ, 16ನೇ ಓವರ್‌ನ 4ನೇ ಎಸೆತದಲ್ಲಿ ವೇಗದ ಬೌಲರ್‌ ಮುಕೇಶ್‌ ಕುಮಾರ್‌ ಅವರ ಎಸೆತವನ್ನು ಲಾಂಗ್‌ ಆನ್‌ ಕಡೆಗೆ ಸಿಕ್ಸರ್‌ ಬಾರಿಸಲು ಪ್ರಯತ್ನಿಸಿದರು. ಆದ್ರೆ ಬೌಂಡರಿ ಗೆರೆಯ ಬಳಿ ಫೀಲ್ಡರ್‌ ಶಾಯ್‌ ಹೋಪ್‌ (Shai Hope) ಕ್ಯಾಚ್ ತಗೆದುಕೊಂಡರು. ಆದರೆ, ಅವರ ಕಾಲು ಬೌಂಡರಿ ಗೆರೆಗೆ ತಾಕಿರುವ ಸಾಧ್ಯತೆಗಳೂ ಹೆಚ್ಚಾಗಿ ಕಂಡುಬಂದಂತೆ ಇತ್ತು. ಟಿವಿ ಅಂಪೈರ್‌ ಎರಡು ಮೂರು ಆಂಗಲ್‌ಗಳಲ್ಲಿ ಬೌಂಡರಿ ಗೆರೆಗೆ ಶೂಗಳು ಟಚ್‌ ಆಗಿದೆಯೇ ಎಂಬುದನ್ನು ಪರಿಶೀಲಿಸಿದರು. ಬಳಿಕ ಟಿವಿ ಅಂಪೈರ್‌ ಔಟ್ ತೀರ್ಪು ನೀಡಿದರು. ಇದನ್ನೂ ಓದಿ: ನೋವಿನಿಂದ ಬಳಲುತ್ತಿದ್ದರೂ ಸಿಎಸ್‌ಕೆಗಾಗಿ ಆಡ್ತಿದ್ದಾರೆ ಧೋನಿ – ಮಹಿಗೆ ಇರೋ ಆರೋಗ್ಯ ಸಮಸ್ಯೆ ಏನು?

    ಗ್ರೌಂಡ್‌ನಲ್ಲೇ ವಾಗ್ವಾದಕ್ಕಿಳಿದ ಸಂಜು:
    ಔಟ್‌ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಸಮಾಧಾನಗೊಂಡ ಸಂಜು ಅಂಪೈರ್‌ ಜೊತೆಗೆ ವಾಗ್ವಾದ ನಡೆಸಿದರು. ಬಳಿಕ ಪೆವಿಲಿಯನ್‌ಗೆ ಮರಳಿದರು. ಸಂಜು ಸ್ಯಾಮ್ಸನ್‌ ನಿರ್ಗಮನದ ಬಳಿಕ ಆರ್‌ಆರ್‌ ತಂಡದ ಮುಖ್ಯ ಕೋಚ್‌ ಕುಮಾರ ಸಂಗಕ್ಕಾರ ಕೂಡ ಡಗೌಟ್‌ನಲ್ಲಿ ಅಸಮಾಧಾನ ಹೊರಹಾಕಿದ್ದರು. ನಂತರ ಅಂಪೈರ್‌ ವಿರುದ್ಧ ನೆಟ್ಟಿಗರು ಫುಲ್‌ ಕ್ಲಾಸ್‌ ತೆಗೆದುಕೊಂಡರು. 2024 ಟೂರ್ನಿಯಲ್ಲಿ ಅಂಪೈರ್‌ಗಳಿಂದ ಆಗುತ್ತಿರುವ ಸಾಲು ಸಾಲು ತಪ್ಪುಗಳನ್ನು ಎತ್ತಿ ತೋರಿಸಿದರು. ಅಂಪೈರ್‌ ಕೇವಲ ಒಂದು ಮೂಲೆಯ ಕ್ಯಾಮೆರಾ ವಿಡಿಯೋ ಮಾತ್ರವೇ ವೀಕ್ಷಿಸಿದ್ದು, ಮತ್ತೊಂದು ತುದಿಯ ಕ್ಯಾಮೆರಾದ ವಿಡಿಯೋ ನೋಡಿದ್ದರೆ ಕಾಲು ಗೆರೆಗೆ ತಾಗಿರುವುದು ಕಾಣಿಸುತ್ತಿತ್ತು ಎಂಬುದು ಅಭಿಮಾನಿಗಳ ವಾದವಾಗಿದೆ. ಸಂಜು ವಿಕೆಟ್‌ ಪತನದ ಬಳಿಕ ರನ್‌ ವೇಗ ಕುಂಟಿತಗೊಂಡು ರಾಜಸ್ಥಾನ ತಂಡ ಸೋಲಿಗೆ ತುತ್ತಾಯಿತು.

    ಬೌಂಡರಿ ಲೈನ್‌ಗೆ ತಾಕಿತ್ತು: ಸಿಧು
    ಈ ಕುರಿತು ಮಾತನಾಡಿದ ಮಾಜಿ ಕ್ರಿಕೆಟಿಗ ನವಜ್ಯೋತ್‌ ಸಿಂಗ್‌ ಸಿಧು, ಸಂಜು ಸ್ಯಾಮ್ಸನ್‌ ಅವರ ಔಟ್‌ ನಿರ್ಧಾರ ಆಟದ ದಿಕ್ಕನ್ನೇ ಬದಲಿಸಿತು.‌ ಅಂಪೈರ್‌ ಲೈನ್‌ನ ಮತ್ತೊಂದು ಭಾಗವನ್ನೂ ಎರಡು ಬಾರಿ ನೋಡಬೇಕಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

    ಅಂಪೈರ್‌ ತೀರ್ಪಿಗೆ ಬದ್ಧರಾಗಿರಬೇಕು: ಸಂಗಕ್ಕಾರ
    ಸಂಜು ಔಟ್‌ ಕುರಿತು ಪ್ರತಿಕ್ರಿಯೆ ನೀಡಿದ ಮೆಂಟರ್‌ ಕುಮಾರ ಸಂಗಕ್ಕಾರ, ಕೆಲವೊಂದು ಪಂದ್ಯಗಳಲ್ಲಿ ಅಂಪೈರ್‌ಗಳು ನೋಡುವ ದೃಷ್ಟಿಕೋನದ ಮೇಲೆ ತೀರ್ಪು ನಿರ್ಧಾರವಾಗುತ್ತವೆ. ಕೊನೆಯಲ್ಲಿ 3ನೇ ಅಂಪೈರ್‌ ತೀರ್ಪಿಗೆ ಬದ್ಧರಾಗಿರಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: Champions Trophy: ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುತ್ತೇವೆ: ಬಿಸಿಸಿಐ

    ಕೆಟ್ಟ ಅಂಪೈರಿಂಗ್: ಸಂಜು
    ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಸಂಜು, ಗೆಲುವು ನಮ್ಮ ಕೈಲಿತ್ತು. ಓವರ್‌ಗೆ 11-12 ರನ್‌ಗಳ ಅಗತ್ಯವಿತ್ತಷ್ಟೆ. ಆದರೆ, ಐಪಿಎಲ್‌ ಪಂದ್ಯದಲ್ಲಿ ಈ ರೀತಿಯ ಸೋಲೆದುರಾಗುತ್ತವೆ. ಇಲ್ಲಿನ ಪಿಚ್‌ನಲ್ಲಿ ನಾವು 10 ರನ್‌ ಹೆಚ್ಚು ಬಿಟ್ಟುಕೊಟ್ಟೆವು. ಕೆಲ ಬೌಂಡರಿಗಳನ್ನು ತಡೆದಿದ್ದರೆ ಗುರಿ ಕಡಿಮೆ ಆಗಿರುತ್ತಿತ್ತು. ಇನ್ನು ಅಂಪೈರಿಂಗ್‌ ಕೂಡ ಕೆಟ್ಟದಾಗಿತ್ತು. ಸೋಲಿಗೆ ಕಾರಣಗಳನ್ನು ಹುಡುಕಿ ಅದನ್ನು ಸರಿಪಡಿಸಿಕೊಂಡು ಮುನ್ನುಗ್ಗುವ ಕಡೆಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

  • ಮುಂಬೈ ವಿರುದ್ಧ 24 ರನ್‌ಗಳ ಜಯ – ಎರಡನೇ ಸ್ಥಾನಕ್ಕೆ ಜಿಗಿದ ಕೋಲ್ಕತ್ತಾ

    ಮುಂಬೈ ವಿರುದ್ಧ 24 ರನ್‌ಗಳ ಜಯ – ಎರಡನೇ ಸ್ಥಾನಕ್ಕೆ ಜಿಗಿದ ಕೋಲ್ಕತ್ತಾ

    ಮುಂಬೈ: ವೆಂಕಟೇಶ್‌ ಅಯ್ಯರ್‌, ಮೈಕಲ್‌ ಸ್ಟಾರ್ಕ್‌ ಅವರ ಅತ್ಯುತ್ತಮ ಆಟದಿಂದ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) 24 ರನ್‌ಗಳ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಕೋಲ್ಕತ್ತಾ 19.5 ಓವರ್‌ಗಳಲ್ಲಿ 169 ರನ್‌ ಗಳಿಗೆ ಆಲೌಟ್‌ ಆಯ್ತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ 18.5 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್‌ ಆಯ್ತು. ಈ ಗೆಲುವಿನೊಂದಿಗೆ ಕೋಲ್ಕತ್ತಾ 14 ಅಂಕಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

    ಮುಂಬೈ ಪರ ಸೂರ್ಯಕುಮಾರ್‌ ಯಾದವ್‌ (Surya Kumar Yadav) 56 ರನ್‌(35 ಎಸೆತ, 6 ಬೌಂಡರಿ, 2 ಸಿಕ್ಸರ್‌) ಟೀಮ್‌ ಡೇವಿಡ್‌ 24 ರನ್‌ (20 ಎಸೆತ, 1 ಬೌಂಡರಿ, 1 ಸಿಕ್ಸ್‌ ) ಹೊಡೆದು ಔಟಾದರು.

    ಕೋಲ್ಕತ್ತಾ ಪರ ಸ್ಟಾರ್ಕ್‌ 33 ರನ್‌ ನೀಡಿ 4 ವಿಕೆಟ್‌ ಪಡೆದರೆ ವರುಣ್‌ ಚಕ್ರವರ್ತಿ, ಸುನಿಲ್‌ ನರೈನ್‌, ರಸೆಲ್‌ ತಲಾ 2 ವಿಕೆಟ್‌ ಪಡೆದರು.  ಇದನ್ನೂ ಓದಿ: ಸುಬ್ರಹ್ಮಣ್ಯದಲ್ಲಿ ಸಿಡಿಲಿಗೆ ನವ ವಿವಾಹಿತ ಬಲಿ

    ಕೋಲ್ಕತ್ತಾ ಪರ ವೆಂಕಟೇಶ್‌ ಅಯ್ಯರ್‌ 70 ರನ್‌ (52 ಎಸೆತ, 6 ಬೌಂಡರಿ, 3 ಸಿಕ್ಸರ್‌), ಮನೀಷ್‌ ಪಾಂಡೆ 42 ರನ್‌(31 ಎಸೆತ, 2 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು.

  • ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

    ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

    – ಅಂದು‌ ಮಹಿ ಯಡವಟ್ಟಿನಿಂದಲೇ ಇಂಗ್ಲೆಂಡ್‌ ವಿರುದ್ಧ ಸೋತಿದ್ದ ಭಾರತ

    ಚೆನ್ನೈ: ತವರಿನಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವಣ ಪಂದ್ಯದಲ್ಲಿ ಮಾಜಿ ನಾಯಕ ಮಹಿ (MS Dhoni) ನಡೆದುಕೊಂಡ ರೀತಿ ಅಭಿಮಾನಿಗಳಿಂದ ಭಾರೀ ಟೀಕೆಗೆ ಕಾರಣವಾಗಿದೆ.

    ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ನಾಡಿ, ಕ್ರಿಕೆಟ್‌ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ಲೆಜೆಂಡ್‌ ಎಂ.ಎಸ್‌ ಧೋನಿ ಬ್ಯಾಟಿಂಗ್‌ ಸರದಿಯ ಕೊನೇ ಓವರ್‌ನಲ್ಲಿ ತೋರಿದ ವರ್ತನೆ ಅಭಿಮಾನಿಗಳ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.

    ಹೌದು. ಚೆನ್ನೈನ ಎಂ.ಎ ಚಿದಂಬರಂ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 162 ರನ್‌ಗಳನ್ನು ಕಲೆ ಹಾಕಿ ಪಂಜಾಬ್‌ ಕಿಂಗ್ಸ್‌ಗೆ 163 ರನ್‌ಗಳ ಗುರಿ ನೀಡಿತ್ತು.

    ಮಿಚೆಲ್‌ಗೆ ಅವಮಾನ ಮಾಡಿದ್ರಾ ಮಹಿ?
    ಚೆನ್ನೈ ಸೂಪರ್‌ ಕಿಂಗ್ಸ್ ಇನಿಂಗ್ಸ್‌ನ ಕೊನೇ ಓವರ್‌ನ ಮೊದಲ ಎಸೆತದಲ್ಲಿ ಎಂ.ಎಸ್‌ ಧೋನಿ, ಅರ್ಷದೀಪ್‌ ಸಿಂಗ್‌ಗೆ ಬೌಂಡರಿ ಬಾರಿಸಿದ್ದರು. ನಂತರ ಮುಂದಿನ 2 ಎಸೆತಗಳನ್ನು ಡಾಟ್‌ ಮಾಡಿದ್ದರು. 3ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದ ಧೋನಿ, ಬೌಂಡರಿ ಅಥವಾ ಸಿಕ್ಸರ್‌ ಬಾರಿಸುವಲ್ಲಿ ವಿಫಲವಾಗಿದ್ದರು. ಆದ್ರೆ ಈ ವೇಳೆ ಸುಲಭವಾಗಿ ಒಂದು ರನ್‌ ಕದಿಯಬಹುದಿತ್ತು. ಆದರೆ, ಧೋನಿ ನಿರಾಕರಿಸಿದರು.

    ನಾನ್‌ಸ್ಟ್ರೈಕ್‌ ತುದಿಯಲ್ಲಿದ್ದ ಡೇರಿಲ್‌ ಮಿಚೆಲ್‌ (Daryl Mitchell) ರನ್‌ ಪಡೆಯಲು ಸ್ಟ್ರೈಕರ್‌ ತುದಿಗೆ ಓಡಿ ಬಂದರು. ಆದರೆ, ಧೋನಿ ನಿಂತಲ್ಲಿಯೇ ಡೇರಿಲ್‌ ಮಿಚೆಲ್‌ಗೆ ವಾಪಸ್‌ ಹೋಗುವಂತೆ ಹೇಳಿದರು. ಪುನಃ ಮಿಚೆಲ್‌ ನಾನ್‌ಸ್ಟ್ರೈಕ್‌ ತುದಿಗೆ ಓಡಿಬಂದರು ಈ ವೇಳೆ ಕೂದಲೆಳೆ ಅಂತರದಲ್ಲಿ ರನ್‌ಔಟ್‌ ಆಗುವುದನ್ನು ತಪ್ಪಿಸಿಕೊಂಡಿದ್ದರು. ನಂತರ 4ನೇ ಎಸತವನ್ನೂ ಡಾಟ್‌ ಮಾಡಿಕೊಂಡ ಧೋನಿ, 5ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರು. ಕೊನೆಯ ಎಸೆತದಲ್ಲಿ 2ನೇ ರನ್‌ ಓಡುವ ವೇಳೆ ಧೋನಿ ತಾನೇ ರನ್‌ಔಟ್‌ ಆದರು.

    ಅಂದು ಇದೇ ತಪ್ಪಿನಿಂದ ಭಾರತಕ್ಕೆ ಸೋಲಾಗಿತ್ತು:
    2014ರ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮಹಿ ಇದೇ ತಪ್ಪು ಮಾಡಿದ್ದರು. ಅಂದು 181ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 177 ರನ್‌ಗಳಿಸಿ, ಕೇವಲ 3 ರನ್‌ಗಳ ಅಂತರದಲ್ಲಿ ಸೋಲು ಕಂಡಿತ್ತು. ಕೊನೇ ಓವರ್‌ನಲ್ಲಿ ಭಾರತದ ಗೆಲುವಿಗೆ 16 ರನ್‌ ಬೇಕಿತ್ತು. ಮೊದಲ 2 ಎಸೆತಗಳಲ್ಲೇ 8 ರನ್‌ ಬಾರಿಸಿದ ಮಹಿ, 3ನೇ ಎಸೆತವನ್ನು ಡಾಟ್‌ ಮಾಡಿಕೊಂಡಿದ್ದರು. 4ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ್ದರು. ಇನ್ನೆರಡು ಎಸೆತಗಳಲ್ಲಿ 5 ರನ್‌ ಬೇಕಿತ್ತು. 4ನೇ ಎಸೆತದಲ್ಲಿ ಮಹಿ ಹೊಡೆದರು, ಆದ್ರೆ ಸಿಂಗಲ್‌ ತೆಗೆದುಕೊಳ್ಳಲು ನಿರಾಕರಿಸಿದ್ದರು. ಅಲ್ಲದೇ ಇದು ನಾನ್‌ಸ್ಟ್ರೈಕ್‌ನಲ್ಲಿದ್ದ ಅಂಬಟಿ ರಾಯುಡು ಅವರನ್ನೂ ಟೀಕೆಗೆ ಗುರಿಯಾಗುವಂತೆ ಮಾಡಿತ್ತು. ಆದ್ರೆ ಕೊನೆ ಎಸೆತದಲ್ಲಿ ಬೌಂಡರಿ ಸಿಡಿಸುವಲ್ಲಿ ವಿಫಲರಾದ ಮಹಿ ಒಂದು ರನ್‌ ಮಾತ್ರವೇ ಗಳಿಸಿದ್ದರು. ಇದರಿಂದ ಭಾರತ ತಂಡ ವಿರೋಚಿತ ಸೋಲಿಗೆ ತುತ್ತಾಗಿತ್ತು. ಇದೀಗ ಧೋನಿ ಮತ್ತೆ ಅಂತಹದ್ದೇ ತಪ್ಪು ಮಾಡಿದ್ದಾರೆ.

    ಧೋನಿ ವಿರುದ್ಧ ಫ್ಯಾನ್ಸ್ ಗರಂ:
    ಡ್ಯಾರಿಲ್ ಮಿಚೆಲ್‌ ಬಗ್ಗೆ ನನಗೆ ನೋವಾಗಿದೆ, ಅವರು ಬ್ಯಾಟಿಂಗ್‌ ಗೊತ್ತಿಲ್ಲದ ಆಟಗಾರನೇನು ಅಲ್ಲ. ಅವರಿಗೆ ಸಿಂಗಲ್‌ ರನ್‌ ನಿರಾಕರಿಸಿರುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮಿಚೆಲ್‌ ಅವರೇ 2 ರನ್‌ ಓಡಿದ್ದಾರೆ. ಧೋನಿ ಜಾಗದಲ್ಲಿ ಬೇರೆ ಯಾವುದೇ ಆಟಗಾರನಿದ್ದಿದ್ದರೇ ಅವರ ಜನ್ಮವನ್ನು ಜಾಲಾಡಲಾಗುತ್ತಿತ್ತು ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿ ಎಂಎಸ್‌ ಧೋನಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಕೆಲವರು ಧೋನಿ ಅಂತಹ ಆಟಗಾರರಿಂದ ಇಂತಹ ವರ್ತನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಆಟಗಾರನೊಬ್ಬನಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ.

  • ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ಚೆನ್ನೈ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವನ್ನು ಕಟ್ಟಿ ಹಾಕಿದ ಪಂಜಾಬ್‌ ಕಿಂಗ್ಸ್‌ (Punjab Kings) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 7 ವಿಕೆಟ್‌ ನಷ್ಟಕ್ಕೆ 162 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಪಂಜಾಬ್‌ ಇನ್ನೂ 13 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 163 ರನ್‌ ಹೊಡೆದು ಜಯಗಳಿಸಿತು.

    ಪಂಜಾಬ್‌ ಪರ ಜಾನಿ ಬೈರ್ಸ್ಟೋವ್ 46 ರನ್‌ (30 ಎಸೆತ, 7 ಬೌಂಡರಿ, 1 ಸಿಕ್ಸರ್‌) ಹೊಡೆದರೆ ರಿಲೀ ರೋಸೌವ್ 43 ರನ್(23‌ ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಶಶಾಂಕ್‌ ಸಿಂಗ್‌ ಔಟಾಗದೇ 25 ರನ್‌(26 ಎಸೆತ, 1 ಬೌಂಡರಿ, 1 ಸಿಕ್ಸರ್‌), ನಾಯಕ ಸ್ಯಾಮ್‌ ಕರ್ರನ್‌ ಔಟಾಗದೇ 16 ರನ್‌ (20 ಎಸೆತ, 3 ಬೌಂಡರಿ) ಹೊಡೆದರು.

    ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ 50 ಎಸೆತಗಳಲ್ಲಿ64 ರನ್‌ ಬಂದಿತ್ತು. ಅಜಿಂಕ್ಯಾ ರಹಾನೆ 29 ರನ್‌(24 ಎಸೆತ, 5 ಬೌಂಡರಿ) ಋತುರಾಜ್‌ ಗಾಯಕ್‌ವಾಡ್‌ 62 ರನ್‌ (48 ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬಾರದ ಕಾರಣ ಚೆನ್ನೈ ಸೋಲನ್ನು ಅನುಭವಿಸಿತು. ಇತರ ರೂಪದಲ್ಲಿ ಪಂಜಾಬ್‌ 18 ರನ್‌ ಬಿಟ್ಟುಕೊಟ್ಟಿದ್ದರಿಂದ ಚೆನ್ನಯ ತಂಡದ ಸ್ಕೋರ್‌ 160 ರನ್‌ಗಳ ಗಡಿ ದಾಟಿತ್ತು. ಹರ್‌ಪ್ರೀತ್‌ ಬ್ರಾರ್‌ ಮತ್ತು ರಾಹುಲ್‌ ಚಹರ್‌ ತಲಾ ಎರಡು ವಿಕೆಟ್‌ ಪಡೆದರು.

  • IPL 2024: ಐಪಿಎಲ್ ಜಾಹೀರಾತಿನಲ್ಲಿ ನಟ ಪ್ರಭಾಸ್ ‘ಕಲ್ಕಿ’ ಲುಕ್

    IPL 2024: ಐಪಿಎಲ್ ಜಾಹೀರಾತಿನಲ್ಲಿ ನಟ ಪ್ರಭಾಸ್ ‘ಕಲ್ಕಿ’ ಲುಕ್

    ಪಿಎಲ್ 2024ರ (IPL) ಜಾಹೀರಾತು ತಯಾರಾಗಿದ್ದು, ದಕ್ಷಿಣದ ಹೆಸರಾಂತ ನಟ ಪ್ರಭಾಸ್ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ತಮ್ಮ ಕಲ್ಕಿ ಸಿನಿಮಾವನ್ನೂ ಅವರು ಪ್ರಮೋಟ್ ಮಾಡಿದ್ದಾರೆ. ಕಲ್ಕಿ ಸಿನಿಮಾದ ಲುಕ್ ಅನ್ನೇ ಜಾಹೀರಾತಿನಲ್ಲೂ (Advertisement) ತಂದಿದ್ದಾರೆ. ಹಾಗಾಗಿ ಸಹಜವಾಗಿಯೇ ಪ್ರಭಾಸ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಒಂದು ಕಡೆ ಐಪಿಎಲ್ ಜಾಹೀರಾತು ಮತ್ತೊಂದು ಕಡೆ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಜೊತೆಗೆ ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ. ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

     

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

  • ಡೆಲ್ಲಿ ವಿರುದ್ಧ ಆಲ್‌ರೌಂಡರ್‌ ಪ್ರದರ್ಶನ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    ಡೆಲ್ಲಿ ವಿರುದ್ಧ ಆಲ್‌ರೌಂಡರ್‌ ಪ್ರದರ್ಶನ – ಕೋಲ್ಕತ್ತಾಗೆ 7 ವಿಕೆಟ್‌ಗಳ ಭರ್ಜರಿ ಜಯ

    ಕೋಲ್ಕತ್ತಾ: ಆರಂಭದಲ್ಲಿ ಬೌಲರ್‌ ನಂತರ ಬ್ಯಾಟರ್‌ಗಳ ಅತ್ಯುತ್ತಮ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ 9 ವಿಕೆಟ್‌ ನಷ್ಟಕ್ಕೆ 153 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಡೆಲ್ಲಿ ಇನ್ನೂ 21 ಎಸೆತ ಬಾಕಿ ಇರುವಂತೆಯೇ 157 ರನ್‌ ಹೊಡೆದು ಜಯಗಳಿಸಿತು.

    ಕೋಲ್ಕತ್ತಾ ಆರಂಭಿಕ ಆಟಗಾರ ಫಿಲ್‌ ಸಾಲ್ಟ್‌ (Phil Salt) ಆರಂಭದಲ್ಲೇ ಅಬ್ಬರಿಸಲು ಆರಂಭಿಸಿದ್ದರು. 68 ರನ್‌(33 ಎಸೆತ, 7 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಔಟಾದರು. ಕೊನೆಯಲ್ಲಿ ಮುರಿಯದ 4ನೇ ವಿಕೆಟಿಗೆ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ 43 ಎಸೆತಗಳಲ್ಲಿ 57 ರನ್‌ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಶ್ರೇಯಸ್‌ ಅಯ್ಯರ್‌ ಔಟಾಗದೇ 33 ರನ್‌(23 ಎಸೆತ, 3 ಬೌಂಡರಿ, 1 ಸಿಕ್ಸ್‌) ವೆಂಕಟೇಶ್‌ ಅಯ್ಯರ್ ಔಟಾಗದೇ 26 ರನ್‌(23‌ ಎಸೆತ, 2 ಬೌಂಡರಿ,1 ಸಿಕ್ಸ್‌) ಹೊಡೆದರು.  ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ – ಊಟಿ, ಕೊಡೈಕೆನಾಲ್‌ಗೆ ಹೋಗಬೇಕಾದ್ರೆ ಇ-ಪಾಸ್‌ ಕಡ್ಡಾಯ

    ಡೆಲ್ಲಿ ಪರ ನಾಯಕ ರಿಷಭ್‌ ಪಂತ್‌ 27 ರನ್ ಹೊಡೆದರೆ ಕೊನೆಯಲ್ಲಿ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಔಟಾಗದೇ 35 ರನ್‌ (26 ಎಸೆತ, 5 ಬೌಂಡರಿ, 1 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡ 150 ರನ್‌ಗಳ ಗಡಿಯನ್ನು ದಾಟಿತು.

    ಕೋಲ್ಕತ್ತಾ ಪರ ವರುಣ್‌ ಚಕ್ರವರ್ತಿ 16 ರನ್‌ ನೀಡಿ 3 ವಿಕೆಟ್‌ ಕಿತ್ತರೆ ವೈಭವ್‌ ಅರೋರಾ ಮತ್ತು ಹರ್ಷಿತ್‌ ರಾಣಾ ತಲಾ 2 ವಿಕೆಟ್‌ ಪಡೆದರು.