Tag: ಐಪಿಎಲ್

  • IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೊಕ್​!

    IPL ಟ್ರೋಫಿ ತಂದುಕೊಡದಿದ್ದಕ್ಕೆ ತಲೆದಂಡ – ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಹುದ್ದೆಯಿಂದ ರಿಕಿ ಪಾಂಟಿಂಗ್​ಗೆ ಕೊಕ್​!

    ನವದೆಹಲಿ: 7 ಆವೃತ್ತಿ ಕಳೆದರೂ ಐಪಿಎಲ್‌ ಟ್ರೋಫಿ (IPL Trophy) ತಂದುಕೊಡುವಲ್ಲಿ ವಿಫಲರಾದ ರಿಕಿ ಪಾಟಿಂಗ್‌ (Ricky Ponting) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ ಮುಖ್ಯ ಕೋಚ್‌ ಹುದ್ದೆಯಿಂದ ವಜಾಗೊಳಿಸಿದೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿಯಿಂದ ಪಾಂಟಿಂಗ್‌ ಡೆಲ್ಲಿ ತಂಡದ ಮುಖ್ಯ ಕೋಚ್‌ ಆಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಿರ್ದೇಶಕ ಸೌರವ್‌ ಗಂಗೂಲಿ ಖಚಿತಪಡಿಸಿದ್ದಾರೆ.

    ಆಸ್ಟ್ರೇಲಿಯಾ ತಂಡದ ಮಾಜಿ ನಾಯಕರೂ ಆಗಿರುವ ರಿಕಿ ಪಾಂಟಿಂಗ್‌ ಕಳೆದ 7 ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ಮುಖ್ಯಕೋಚ್‌ (Delhi Capitals Head Coach) ಆಗಿ ಸೇವೆ ಸಲ್ಲಿಸುತ್ತಿದ್ದರು. ಡೆಲ್ಲಿ ಕ್ಯಾಪಿಟಲ್ಸ್‌ ಸೇರುವ ಮುನ್ನ ಪಾಂಟಿಂಗ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಿದ್ದರು. ಪಾಂಟಿಂಗ್‌ ನೇತೃತ್ವದಲ್ಲಿ 2020ರಲ್ಲಿ ಪಾಂಟಿಂಗ್‌ ಅವರ ಸಾರಥ್ಯದಲ್ಲೇ ಡೆಲ್ಲಿ ತಂಡ ಫೈನಲ್‌ ಪ್ರವೇಶಿಸಿತ್ತು. ಆದ್ರೆ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ಸೋತು ಪ್ರಶಸ್ತಿ ಗೆಲ್ಲಲು ವಿಫಲವಾಯಿತು.

    2024ರ ಆವೃತ್ತಿಯಲ್ಲಿ ಆರಂಭದಲ್ಲಿ ಸತತ ಮೂರು ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬಳಿಕ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿತ್ತು. 14 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್‌ನಿಂದ ಹೊರಗುಳಿಯಿತು. ಇದನ್ನೂ ಓದಿ: ಯಶಸ್ವಿ ಕೈ ತಪ್ಪಿದ ಚೊಚ್ಚಲ T20I ಶತಕ – 10 ವಿಕೆಟ್‌ ಜಯದೊಂದಿಗೆ ಸರಣಿ ಗೆದ್ದ ಭಾರತ!

    ಇದೀಗ ತಂಡದ ಅದೃಷ್ಟ ಬದಲಾಯಿಸುವ ಪ್ರಯತ್ನದಲ್ಲಿ ನಿರಾಸೆ ಮೂಡಿಸಿದ ರಿಕಿ ಪಾಂಟಿಂಗ್ ಅವರನ್ನು ಮುಂದುವರಿಸರಿದಲು ಫ್ರಾಂಚೈಸಿ ನಿರ್ಧರಿಸಿದೆ. ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಇದನ್ನು ದೃಢಪಡಿಸಿದ್ದಾರೆ.

    ಪಾಂಟಿಂಗ್‌ ಅವರನ್ನು ಮುಖ್ಯಕೋಚ್‌ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಮುಖ್ಯಕೋಚ್‌ ಹುದ್ದೆಗೆ ಗಂಗೂಲಿ ಅವರ ಹೆಸರು ಕೇಳಿಬಂದಿದೆ. 2025ರ ಆವೃತ್ತಿಯಿಂದ ಗಂಗೂಲಿ ಅವರು ಡೆಲ್ಲಿ ತಂಡದ ಮುಖ್ಯಕೋಚ್‌ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್‌ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ! 

  • ಎರಡು ಮಹತ್ವದ ಜವಾಬ್ದಾರಿ – ಆರ್‌ಸಿಬಿಗೆ ದಿನೇಶ್‌ ಕಾರ್ತಿಕ್‌ ರಿಎಂಟ್ರಿ

    ಎರಡು ಮಹತ್ವದ ಜವಾಬ್ದಾರಿ – ಆರ್‌ಸಿಬಿಗೆ ದಿನೇಶ್‌ ಕಾರ್ತಿಕ್‌ ರಿಎಂಟ್ರಿ

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಬ್ಯಾಟಿಂಗ್ ಕೋಚ್ (Batting Coach) ಮತ್ತು ಮೆಂಟರ್ (Mentor) ಆಗಿ ದಿನೇಶ್‌ ಕಾರ್ತಿಕ್‌ (Dinesh Karthik) ಆಯ್ಕೆಯಾಗಿದ್ದಾರೆ.

    ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ನಂತರ ದಿನೇಶ್‌ ಕಾರ್ತಿಕ್‌ ಹೊಸ ಜವಾಬ್ದಾರಿಯೊಂದಿಗೆ ಆರ್‌ಸಿಬಿಗೆ ರಿಎಂಟ್ರಿಯಾಗಿದ್ದಾರೆ.

    ದಿನೇಶ್ ಕಾರ್ತಿಕ್ ಹೊಸ ಅವತಾರದಲ್ಲಿ ಆರ್‌ಸಿಬಿ ಮರಳಿದ್ದಾರೆ. ಡಿಕೆ ಆರ್‌ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರುತ್ತಾರೆ ಎಂದು ಆರ್‌ಸಿಬಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: ವಿಶ್ವಕಪ್‌ ಗೆಲ್ಲಲು ಕಾರಣವಾಗಿದ್ದು 3 ಮಹತ್ವದ ನಿರ್ಧಾರ – ಟೀಂ ಇಂಡಿಯಾ ಸಿದ್ಧಗೊಂಡಿದ್ದು ಹೇಗೆ?

    ವಿಕೆಟ್‌ಕೀಪರ್ ಬ್ಯಾಟರ್ ಆಗಿರುವ ದಿನೇಶ್‌ ಕಾರ್ತಿಕ್‌ ಐಪಿಎಲ್‌ನಲ್ಲಿ (IPL) 257 ಪಂದ್ಯಗಳನ್ನು ಆಡಿದ್ದಾರೆ. 26.32 ಸರಾಸರಿಯಲ್ಲಿ 22 ಅರ್ಧಶತಕಗಳೊಂದಿಗೆ 4,842 ರನ್ ಗಳಿಸಿದ್ದಾರೆ. ಕಾರ್ತಿಕ್ ಆರ್‌ಸಿಬಿ ಹೊರತಾಗಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು.

     

    ಅಹಮದಾಬಾದ್​ನಲ್ಲಿ ನಡೆದ ಐಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲನುಭವಿಸಿದ ಬೆನ್ನಲ್ಲೇ ಆರ್​ಸಿಬಿ ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಐಪಿಎಲ್‌ಗೆ ನಿವೃತ್ತಿ ಹೇಳಿದ್ದರು.

    ಐಪಿಎಲ್​ನಲ್ಲಿ ಒಟ್ಟು 257 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 22 ಅರ್ಧಶತಕಗಳೊಂದಿಗೆ ಒಟ್ಟು 4842 ರನ್ ಕಲೆಹಾಕಿದ್ದಾರೆ. ಈ ವೇಳೆ 97 ರನ್ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್. 2019 ರಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದ ಇವರು 97 ರನ್‌(50 ಎಸೆತ,7 ಬೌಂಡರಿ, 9 ಸಿಕ್ಸ್‌ ) ಸಿಡಿಸಿದ್ದರು. ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ಡಿಕೆ ಹೆಸರಿನಲ್ಲಿದೆ.

  • ರಾಜಸ್ಥಾನಕ್ಕೆ ಹೀನಾಯ ಸೋಲು – 36 ರನ್‌ಗಳ ಜಯ, ಫೈನಲಿಗೆ ಹೈದರಾಬಾದ್‌

    ರಾಜಸ್ಥಾನಕ್ಕೆ ಹೀನಾಯ ಸೋಲು – 36 ರನ್‌ಗಳ ಜಯ, ಫೈನಲಿಗೆ ಹೈದರಾಬಾದ್‌

    ಚೆನ್ನೈ: ಅತ್ಯುತ್ತಮ ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ನಿಂದಾಗಿ ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ 36 ರನ್‌ಗಳಿಂದ ಜಯ ಸಾಧಿಸಿದ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ಮೂರನೇ ಬಾರಿ ಐಪಿಎಲ್‌ ಫೈನಲ್‌ (IPL Final) ಪ್ರವೇಶಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 9 ವಿಕೆಟ್‌ ನಷ್ಟಕ್ಕೆ 175 ರನ್‌ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಜಸ್ಥಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 139 ರನ್‌ ಹೊಡೆದು ಸೋಲನ್ನು ಒಪ್ಪಿಕೊಂಡಿತು.

    ರಾಜಸ್ಥಾನ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 42 ರನ್(‌ 21 ಎಸೆತ, 4 ಬೌಂಡರಿ, 3 ಸಿಕ್ಸರ್‌) ಧ್ರುವ್‌ ಜುರೇಲ್‌ ಔಟಾಗದೇ 56 ರನ್‌ (35 ಎಸೆತ, 7 ಬೌಂಡರಿ, 2 ಸಿಕ್ಸರ್‌) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಶಹಬಾಜ್ ಅಹಮದ್ 3 ವಿಕೆಟ್‌, ಅಭಿಷೇಕ್‌ ಶರ್ಮಾ 2 ವಿಕೆಟ್‌ ಪಡೆದರು.

    ಹೈದರಾಬಾದ್‌ ಪರ ಆರಂಭಿಕ ಆಟಗಾರ ಅಭಿಷೇಕ್‌ ಶರ್ಮಾ 5 ಎಸೆತಗಳಲ್ಲಿ 12 ರನ್‌ ಸಿಡಿಸಿ ಔಟಾದರು. ಟ್ರಾವಿಸ್‌ ಹೆಡ್‌ 34 ರನ್‌(28 ಎಸೆತ, 3 ಬೌಂಡರಿ, 1 ಸಿಕ್ಸರ್‌) ಹೊಡೆದರೆ ರಾಹುಲ್‌ ತ್ರಿಪಾಠಿ 37 ರನ್‌(15 ಎಸೆತ, 5 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ವಿಕೆಟ್‌ ಉರುಳುತ್ತಿದ್ದರೂ ಹೆನ್ರಿಕ್ ಕ್ಲಾಸೆನ್ ಅವರು ಗಟ್ಟಿಯಾಗಿ ನಿಂತು 50 ರನ್‌ (34 ಎಸೆತ, 4 ಸಿಕ್ಸರ್)‌ ಸಿಡಿಸಿ ವಿಕೆಟ್‌ ಒಪ್ಪಿಸಿದರು.

    ಚೆನ್ನೈ ಸ್ಟೇಡಿಯಂನಲ್ಲಿ ಮೇ 26 ಭಾನುವಾರ ಫೈನಲ್‌ ಪಂದ್ಯ ನಡೆಯಲಿದ್ದು ಇಂದು ಜಯಗಳಿಸಿದ ಹೈದರಾಬಾದ್‌ ಮತ್ತು ಕೋಲ್ಕತ್ತಾ ಕಪ್‌ಗಾಗಿ ಹೋರಾಟ ನಡೆಸಲಿವೆ.

    ಮೊದಲ ಕ್ವಾಲಿಫೈಯರ್‌ನಲ್ಲಿ ಕೋಲ್ಕತ್ತಾ (Kolkata Knight Riders) ಮತ್ತು ಹೈದರಾಬಾದ್‌ ಸೆಣಸಾಡಿದ್ದವು. ಈ ಪಂದ್ಯವನ್ನು ಕೋಲ್ಕತ್ತಾ 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಹೈದರಾಬಾದ್‌ 159 ರನ್‌ಗಳಿಗೆ ಆಲೌಟ್‌ ಆಗಿತ್ತು. ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆದು ಫೈನಲ್‌ ಪ್ರವೇಶಿಸಿತ್ತು.

  • RCB ಗೆದ್ದರೆ ಬಿಕಿನಿ ಫೋಟೋ ಹಂಚಿಕೊಳ್ತೀನಿ ಎಂದಿದ್ದ ಹನಿ ರೋಸ್‌, ಈಗ ಒಡೆದ ಹೃದಯ!

    RCB ಗೆದ್ದರೆ ಬಿಕಿನಿ ಫೋಟೋ ಹಂಚಿಕೊಳ್ತೀನಿ ಎಂದಿದ್ದ ಹನಿ ರೋಸ್‌, ಈಗ ಒಡೆದ ಹೃದಯ!

    ಅಹಮದಾಬಾದ್‌: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಎಲಿಮಿನೇಟರ್-1‌ (Eliminator) ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಗೆದ್ದರೆ, ಬಿಕಿನಿ ಫೋಟೋ ಪೋಸ್ಟ್‌ ಮಾಡುತ್ತೇನೆ ಎಂದು ಹೇಳಿದ್ದ ಸೌತ್‌ನ ಹಾಟ್‌ ಬ್ಯೂಟಿ ಹನಿ ರೋಸ್‌ (Honey Rose) ಈಗ ಒಡೆದ ಹೃದಯದ ಎಮೋಜಿ ಹಂಚಿಕೊಂಡಿದ್ದಾರೆ.

    ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಹನಿ ರೋಸ್‌, ಆರ್‌ಸಿಬಿ ಗೆದ್ದರೆ ನಾನು ಪಂದ್ಯದ ನಂತರ ನನ್ನ ಬಿಕಿನಿ ಚಿತ್ರವನ್ನು ಪೋಸ್ಟ್ ಮಾಡುತ್ತೇನೆ. ʻAAARRRRR CEEEEE BEEEEE!!!!!!!!ʼ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಆರ್‌ಸಿಬಿ ಪಂದ್ಯದ ಸೋಲಿನ ಬಳಿಕ ʻಆರ್‌ಸಿಬಿ ಎಂಬ ಹೆಸರಿನೊಂದಿಗೆʼ ಮೂರು ಒಡೆದ ಹೃದಯದ ಎಮೋಜಿಯನ್ನ ಹಂಚಿಕೊಂಡಿದ್ದಾರೆ.

    ನಟಿಯ ಪೋಸ್ಟ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ʻಸದ್ಯ ಆ ದೇವರು ನಮ್ಮನ್ನು ಬದುಕಿಸಿದ ಅಂತ ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಒಂದೇ ಒಂದು ಫೋಟೋವನ್ನಾದರೂ ಪೋಸ್ಟ್‌ ಅಂತ ಕೇಳಿಕೊಂಡಿದ್ದಾರೆ.

    ಸೌಂದರ್ಯಕ್ಕೆ ಮತ್ತೊಂದು ಹೆಸರಾಗಿರುವ ಹಾಟ್‌ ಬ್ಯೂಟಿ ಹನಿ ರೋಸ್‌, ಇವರು ಮಾಡಿದ ಸಿನಿಮಾಗಳಿಗಿಂತ (Honey Rose Cinema) ಇವರ ಹಾಟ್ ಹಾಟ್ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಮಾನ್ಸ್ಟರ್‌, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ.

    ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್‌ನ ಎಲಿಮಿನೇಟ್‌-1 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, 8 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು. 173 ರನ್‌ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ (Rajasthan Royals) ಇನ್ನು 6 ಎಸೆತ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 174 ರನ್‌ ಹೊಡೆದು ಜಯ ಸಾಧಿಸಿತು.

  • ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ಭಗ್ನ – ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ

    ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ಭಗ್ನ – ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ

    – ಬ್ಯಾಟ್ಸ್‌ಮನ್‌ಗಳ ವೈಫಲ್ಯಕ್ಕೆ ಬೆಲೆ ತೆತ್ತ ಆರ್‌ಸಿಬಿ

    ಅಹಮದಾಬಾದ್‌: ಕೋಟ್ಯಂತರ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಭಗ್ನಗೊಂಡಿದೆ. ಇಂದು ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್‌ (Rajasthan Royals) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    173 ರನ್‌ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ ಇನ್ನು 6 ಎಸೆತ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 174 ರನ್‌ ಹೊಡೆದು ಜಯ ಸಾಧಿಸಿತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳ ವೈಫಲ್ಯ, ಕಳಪೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ಗೆ ಆರ್‌ಸಿಬಿ ಬೆಲೆ ತೆತ್ತಿದೆ.

     

     

    ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್‌ ಮತ್ತು ಟಾಮ್ ಕ್ಯಾಡ್ಮೋರ್ 33 ಎಸೆತಗಳಲ್ಲಿ 46 ರನ್‌ ಹೊಡೆದರು. ಟಾಮ್ ಕ್ಯಾಡ್ಮೋರ್ 20 ರನ್‌ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್‌ 45 ರನ್‌(30 ಎಸೆತ, 8 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್‌ 17 ರನ್‌ ಸಿಡಿಸಿ ಔಟಾದರು.  ಇದನ್ನೂ ಓದಿ: ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    112 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ರಾಜಸ್ಥಾನ ವಿರಾಟ್‌ ಕೊಹ್ಲಿ (Virat Kohli) ಅವರ ಅತ್ಯುತ್ತಮ ಥ್ರೋನಿಂದಾಗಿ 4ನೇ ವಿಕೆಟ್‌ ಕಳೆದುಕೊಂಡಿತು. 8 ರನ್‌ ಗಳಿಸಿದ್ದ ಧ್ರುವ್ ಜುರೆಲ್ ಎರಡನೇ ರನ್‌ ಓಡುವಾಗ ರನೌಟ್‌ಗೆ ಬಲಿಯಾದರು. ಕೊನೆಯಲ್ಲಿ ಹೆಟ್ಮೇಯರ್‌ 26 ರನ್‌(14 ಎಸೆತ, 3 ಬೌಂಡರಿ, 1 ಸಿಕ್ಸರ್‌) ಮತ್ತು ಪೊವೆಲ್‌ ಔಟಾಗದೇ 16 ರನ್‌ ಹೊಡೆದ ಪರಿಣಾಮ ರಾಜಸ್ಥಾನ ಪಂದ್ಯವನ್ನು ಗೆದ್ದುಕೊಂಡಿತು.

     

    ಶುಕ್ರವಾರ ರಾಜಸ್ಥಾನ ಮತ್ತು ಹೈದರಾಬಾದ್‌ ಮಧ್ಯೆ  ಎರಡನೇ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದವರು ಫೈನಲ್‌ನಲ್ಲಿ ಕೋಲ್ಕತ್ತಾವನ್ನು ಎದುರಿಸಲಿದ್ದಾರೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್‌ ಮೊದಲ ವಿಕೆಟಿಗೆ 37 ರನ್‌ ಕಲೆ ಹಾಕಿದರು. 17 ರನ್‌ ಗಳಿಸಿದ್ದಾಗ ಈ ವೇಳೆ ಸಿಕ್ಸ್‌ ಸಿಡಿಸಲು ಹೋಗಿ ಡುಪ್ಲೇಸಿಸ್‌ ಪೊವೆಲ್‌ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಬಲಿಯಾದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 33 ರನ್‌ (24 ಎಸೆತ, 3 ಬೌಂಡರಿ, 1 ಸಿಕ್ಸ್‌) ಸಿಕ್ಸ್‌ ಸಿಡಿಸಲು ಹೋಗಿ ವಿಕೆಟ್‌ ಒಪ್ಪಿಸಿದರು.

    ಮೂರನೇ ವಿಕೆಟಿಗೆ ರಜತ್‌ ಪಾಟೀದರ್‌ ಮತ್ತು ಕ್ಯಾಮರೂನ್‌ ಗ್ರೀನ್‌ 31 ಎಸೆತಗಳಲ್ಲಿ 41 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಮ್ಯಾಕ್ಸ್‌ವೆಲ್‌ ಮತ್ತೆ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.  ಕ್ಯಾಮರೂನ್‌ ಗ್ರೀನ್‌ 27 ರನ್‌ (21 ಎಸೆತ, 2 ಬೌಂಡರಿ, 1 ಸಿಕ್ಸ್‌), ರಜತ್‌ ಪಾಟೀದರ್‌ 34 ರನ್‌ (22 ಎಸೆತ, 2 ಬೌಂಡರಿ, 2 ಸಿಕ್ಸ್‌), ಮಹಿಪಾಲ್ ಲೋಮ್ರೋರ್ 32 ರನ್‌(17 ಎಸೆತ, 2 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು. ಅಂತಿಮವಾಗಿ 8 ವಿಕೆಟ್‌ ನಷ್ಟಕ್ಕೆ 172 ರನ್‌ಗಳಿಸಿತು.

  • ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    ಅಹಮದಾಬಾದ್‌: ವಿರಾಟ್‌ ಕೊಹ್ಲಿ (Virat Kohli) ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 8000 ರನ್‌ ಹೊಡೆದ ಏಕೈಕ ಬ್ಯಾಟರ್‌ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ಒಟ್ಟು 252 ಪಂದ್ಯಗಳಿಂದ ಈ ಸಾಧನೆ ನಿರ್ಮಾಣವಾಗಿದೆ. ಐಪಿಎಲ್‌ (IPL) ಒಟ್ಟು 8 ಶತಕ ಮತ್ತು 55 ಅರ್ಧಶತಕವನ್ನು ಕೊಹ್ಲಿ ಸಿಡಿಸಿದ್ದಾರೆ.

    ಈ ವರ್ಷದ ಐಪಿಎಲ್‌ಲ್ಲಿ 15 ಪಂದ್ಯಗಳ 15 ಇನ್ನಿಂಗ್ಸ್‌ನಿಂದ ಕೊಹ್ಲಿ 741 ರನ್‌ ಹೊಡೆದಿದ್ದಾರೆ. 1 ಶತಕ, 5 ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಆರೆಂಜ್‌ ಕ್ಯಾಪ್‌ ಧರಿಸಿದ್ದಾರೆ.


    ಪಂಜಾಬ್‌ ಕಿಂಗ್ಸ್‌ನ ನಾಯಕ ಶಿಖರ್‌ ಧವನ್‌ (Shikar Dhawan) ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಶಿಖರ್‌ ಧವನ್‌ 222 ಪಂದ್ಯಗಳಿಂದ 6,769 ರನ್‌ ಹೊಡೆದಿದ್ದಾರೆ. ರೋಹಿತ್‌ ಶರ್ಮಾ (Rohit Sharma) 257 ಪಂದ್ಯಗಳಿಂದ 6,628 ರನ್‌ ಸಿಡಿಸಿದ್ದಾರೆ.

    ರಾಜಸ್ಥಾನ ವಿರುದ್ಧ ಇಂದು ನಡೆಯುತ್ತಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಕೊಹ್ಲಿ 33 ರನ್‌(24 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.

  • ನಾಲ್ವರು ಶಂಕಿತ ಉಗ್ರರು ಅರೆಸ್ಟ್‌ – ಆರ್‌ಸಿಬಿ ಅಭ್ಯಾಸ ರದ್ದು, ಕೊಹ್ಲಿಗೆ ಬೆದರಿಕೆ

    ನಾಲ್ವರು ಶಂಕಿತ ಉಗ್ರರು ಅರೆಸ್ಟ್‌ – ಆರ್‌ಸಿಬಿ ಅಭ್ಯಾಸ ರದ್ದು, ಕೊಹ್ಲಿಗೆ ಬೆದರಿಕೆ

    ಅಹಮದಾಬಾದ್‌: ಭದ್ರತಾ ಕಾರಣಗಳಿಂದಾಗಿ (Security Reasons) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ತನ್ನ ಏಕೈಕ ಅಭ್ಯಾಸವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

    ಇಂದು ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ನಡೆಯಲಿರುವ ಎಲಿಮಿನೇಟರ್‌ ಪಂದ್ಯಕ್ಕೆ ಮಂಗಳವಾರ ಆರ್‌ಸಿಬಿ (RCB) ಅಹಮಾದಾಬಾದ್‌ನಲ್ಲಿರುವ ಗುಜರಾತ್‌ ಕಾಲೇಜ್‌ ಅಂಗಳದಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ ಯಾವುದೇ ಅಧಿಕೃತ ಕಾರಣ ನೀಡದೇ ಅಭ್ಯಾಸವನ್ನು ರದ್ದುಗೊಳಿಸಿತ್ತು. ಇನ್ನೊಂದು ಕಡೆ ರಾಜಸ್ಥಾನ್ ರಾಯಲ್ಸ್ ಅದೇ ಸ್ಥಳದಲ್ಲಿ ಅಭ್ಯಾಸ ನಡೆಸಿದೆ.

    ವಿರಾಟ್ ಕೊಹ್ಲಿಗೆ (Virat Kohli) ಬೆದರಿಕೆ ಇದ್ದ ಕಾರಣ ಆರ್‌ಸಿಬಿ ಅಭ್ಯಾಸವನ್ನು ಮಂಗಳವಾರ ನಡೆಸಿಲ್ಲ ಎಂದು ಪೊಲೀಸ್‌ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಭಯೋತ್ಪಾದನಾ ಚಟುವಟಿಕೆಗಳ ಶಂಕೆಯ ಮೇಲೆ ಗುಜರಾತ್ ಪೊಲೀಸರು (Gujarat Police) ಸೋಮವಾರ ರಾತ್ರಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ (Ahmedabad Airport) ನಾಲ್ವರನ್ನು ಬಂಧಿಸಿದ್ದರು.

    ನಾಲ್ವರು ಆರೋಪಿಗಳ ಅಡಗುತಾಣವನ್ನು ಶೋಧಿಸಿದ ನಂತರ ಪೊಲೀಸರು ಶಸ್ತ್ರಾಸ್ತ್ರಗಳ ವಶಪಪಡಿಸಿಕೊಂಡಿದ್ದಾರೆ. ಈ ವೇಳೆ ವೀಡಿಯೊಗಳು ಮತ್ತು ಪಠ್ಯ ಸಂದೇಶಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ವಿಚಾರವನ್ನು ರಾಜಸ್ಥಾನ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ತಿಳಿಸಲಾಗಿತ್ತು. ಅಹಮದಾಬಾದ್‌ಗೆ ವಿರಾಟ್‌ ಕೊಹ್ಲಿ ಬಂದ ನಂತರ ಈ ವಿಚಾರವನ್ನು ತಿಳಿಸಲಾಗಿದೆ. ವಿರಾಟ್‌ ಕೊಹ್ಲಿ ದೇಶದ ಸಂಪತ್ತು ಮತ್ತು ಅವರ ಭದ್ರತೆ ನಮ್ಮ ಅತ್ಯಂತ ಆದ್ಯತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದರು.

    ಆರ್‌ಸಿಬಿ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಯಾವುದೇ ಅಭ್ಯಾಸದ ಅವಧಿ ಇರುವುದಿಲ್ಲ ಎಂದು ಅವರು ನಮಗೆ ತಿಳಿಸಿದರು. ರಾಜಸ್ಥಾನ್ ರಾಯಲ್ಸ್‌ಗೆ ಈ ವಿಚಾರವನ್ನು ತಿಳಿಸಲಾಗಿತ್ತು. ಆದರೆ ಅವರು ಅಭ್ಯಾಸದಲ್ಲಿ ತೊಡಗಿಕೊಂಡರು ಎಂದು ಹೇಳಿದರು.

    ಆರ್‌ಸಿಬಿ ಆಟಗಾರರು ತಂಗಿದ್ದ ಹೋಟೆಲಿನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆರ್‌ಸಿಬಿ ಆಟಗಾರರಿಗೆ ಹೋಟೆಲಿನಲ್ಲಿ ಪ್ರತ್ಯೇಕ ಪ್ರವೇಶ ದ್ವಾರವನ್ನು ಕಲ್ಪಿಸಲಾಗಿದೆ. ಐಪಿಎಲ್‌ (IPL) ಮಾಧ್ಯಮ ಪಾಸ್‌ ಹೊಂದಿರುವ ಪ್ರತಿನಿಧಿಗಳಿಗೂ ಹೋಟೆಲ್‌ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ರಾಜಸ್ಥಾನ ರಾಯಲ್ಸ್‌ ತಂಡ ಬಸ್‌ ಮೂಲಕ ಮೈದಾನ ಪ್ರವೇಶಿಸಿತ್ತು. ಅಭ್ಯಾಸಕ್ಕೆ ಬರುವಾಗ ಮತ್ತು ಅ‍ಭ್ಯಾಸದ ವೇಳೆ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೈದಾನದ ಉದ್ದಕ್ಕೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಗಸ್ತು ತಿರುಗುತ್ತಿದ್ದರು. ಭದ್ರತಾ ಕಾರಣಕ್ಕೆ ರಾಜಸ್ಥಾನ ಮತ್ತು ಬೆಂಗಳೂರು ತಂಡಗಳು ಪಂದ್ಯಕ್ಕೆ ಮುನ್ನ ನಿಗದಿಯಾಗಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಿದೆ ಎಂದು ವರದಿಯಾಗಿದೆ.

    ನಾಲ್ವರು ಅರೆಸ್ಟ್‌:
    ಇಸ್ಲಾಮಿಕ್ ಸ್ಟೇಟ್‌ನ (ಐಸಿಸ್) ನಾಲ್ವರು ಉಗ್ರರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ಪೊಲೀಸರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಿದ್ದರು. ಈ ನಾಲ್ವರು ಶ್ರೀಲಂಕಾ ಪ್ರಜೆಗಳಾಗಿದ್ದು ಮೊದಲು ಚೆನ್ನೈಗೆ ಆಗಮಿಸಿ ನಂತರ ಅಹಮದಾಬಾದ್‌ನಲ್ಲಿ ಲ್ಯಾಂಡ್‌ ಆಗಿದ್ದರು.

    ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಂದ ಸಂದೇಶಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅರೆಸ್ಟ್‌ ಆಗಿದ್ದಾರೆ. ಬಂಧಿತರನ್ನು ಮೊಹಮದ್ ನುಸ್ರತ್, ಮೊಹಮದ್ ನಫ್ರಾನ್, ಮೊಹಮದ್ ಫಾರಿಸ್ ಮತ್ತು ಮೊಹಮದ್ ರಸ್ದೀನ್ ಎಂದು ಗುರುತಿಸಲಾಗಿದೆ.

  • 4ನೇ ಬಾರಿಗೆ ಫೈನಲ್‌ಗೆ – ಕೋಲ್ಕತ್ತಾ ಅಬ್ಬರಕ್ಕೆ ಮುಳುಗಿದ ಸನ್‌ ರೈಸರ್ಸ್‌

    4ನೇ ಬಾರಿಗೆ ಫೈನಲ್‌ಗೆ – ಕೋಲ್ಕತ್ತಾ ಅಬ್ಬರಕ್ಕೆ ಮುಳುಗಿದ ಸನ್‌ ರೈಸರ್ಸ್‌

    ಅಹಮದಾಬಾದ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಮೊದಲ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ8  ವಿಕೆಟ್‌ಗಳ ಭರ್ಜರಿ ಜಯಗಳಿಸಿ ನಾಲ್ಕನೇ ಬಾರಿ ಐಪಿಎಲ್ ಫೈನಲ್‌ (IPL Final) ಪ್ರವೇಶಿಸಿದೆ.

    ಗೆಲ್ಲಲು 160 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆಯುವ ಮೂಲಕ ಜಯಗಳಿಸಿತು.‌ ಇಲ್ಲಿಯವರೆಗೆ 2012, 2014, 2021ರಲ್ಲಿ ಕೋಲ್ಕತ್ತಾ ಫೈನಲ್‌ ಪ್ರವೇಶಿಸಿತ್ತು. 2012 ಮತ್ತು 2014ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

    ಸುಲಭದ ಸವಾಲನ್ನು ಬೆನ್ನಟ್ಟಿದ ಕೋಲ್ಕತ್ತಾ ಆರಂಭಿಕ ಆಟಗಾರರು ಆರಂಭದಿಂದಲೇ ಆಕ್ರಮಣಕ್ಕೆ ಇಳಿದಿದ್ದರು. ಮೊದಲ ವಿಕೆಟಿಗೆ 20 ಎಸೆತಗಳಲ್ಲಿ 44 ರನ್‌ ಬಂದಿತ್ತು. ರಹಮಾನುಲ್ಲಾ ಗುರ್ಬಾಜ್ 23 ರನ್‌ (14 ಎಸೆತ, 2 ಬೌಂಡರಿ, 2 ಸಿಕ್ಸರ್)‌, ಸುನಿಲ್‌ ನರೈನ್‌ 21 ರನ್‌ (16 ಎಸೆತ, 4 ಬೌಂಡರಿ) ಹೊಡೆದು ಔಟಾದರು.

    ನಂತರ ಜೊತೆಯಾದ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಮುರಿಯದ 3ನೇ ವಿಕೆಟಿಗೆ 44 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಶ್ರೇಯಸ್‌ ಅಯ್ಯರ್‌ 58 ರನ್‌ (24 ಎಸೆತ, 5 ಬೌಂಡರಿ, 4 ಸಿಕ್ಸರ್‌), ವೆಂಕಟೇಶ್‌ ಅಯ್ಯರ್‌ 51 ರನ್‌(28 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿದರು.

    ಹೈದರಾಬಾದ್‌ ಬೌಲಿಂಗ್‌ ಕಳಪೆಯಾಗಿತ್ತು. ಉತ್ತಮ ಬೌಲಿಂಗ್‌ ಮಾಡುತ್ತಿದ್ದ ನಾಯಕ ಪ್ಯಾಟ್‌ ಕಮ್ಮಿನ್ಸ್‌ 3 ಓವರ್‌ ಎಸೆದು 38 ರನ್‌ ನೀಡಿದ್ದರು. ಅಷ್ಟೇ ಅಲ್ಲದೇ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಹೈದರಾಬಾದ್‌ ಸೋಲನ್ನು ಅನುಭವಿಸಿತು.

    ಕಳಪೆ ಬ್ಯಾಟಿಂಗ್‌: ಟಾಸ್‌ ಗೆದ್ದ ಕೋಲ್ಕತ್ತಾ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಫೀಲ್ಡಿಂಗ್‌ ಆಯ್ಕೆ ಮಾಡಿದರು. ಈ ನಿರ್ಧಾರ ಮೊದಲ ಓವರ್‌ನಲ್ಲಿ ಫಲ ನೀಡಿತು. ಲೀಗ್‌ನಲ್ಲಿ ಅಬ್ಬರಿಸಿದ್ದ ಟ್ರಾವಿಸ್‌ ಹೆಡ್‌ ಅವರನ್ನು ಮಿಚೆಲ್‌ ಸ್ಟಾರ್ಕ್‌ ಶೂನ್ಯಕ್ಕೆ ಬೌಲ್ಡ್‌ ಮಾಡಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಓವರ್‌ನಲ್ಲಿ ಸಿಕ್ಸರ್‌ ವೀರ ಅಭಿಷೇಕ್‌ ಶರ್ಮಾ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. 39 ರನ್‌ಗಳಿಸುವಷ್ಟರಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಸಹ ಔಟಾದರು.

    ಈ ಹಂತದಲ್ಲಿ ಜೊತೆಯಾದ ರಾಹುಲ್‌ ತ್ರಿಪಾಠಿ ಮತ್ತು ಕ್ಲಾಸೆನ್‌ 37 ಎಸೆತಗಳಲ್ಲಿ 62 ರನ್‌ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು.

     

    ಸಿಕ್ಸ್‌ ಸಿಡಿಸಲು ಹೋಗಿ ಕ್ಲಾಸೆನ್‌ 32 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌), ರಾಹುಲ್‌ ತ್ರಿಪಾಠಿ 55 ರನ್‌ (35 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಸಿಡಿಸಿ ರನೌಟ್‌ಗೆ ಬಲಿಯಾರು.

    ನಾಯಕ ಪ್ಯಾಟ್‌ ಕಮ್ಮಿನ್ಸ್‌ 30 ರನ್‌ (24 ಎಸೆತ, 2 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ನಡೆಯದ ಕಾರಣ ಅಂತಿಮವಾಗಿ 19.3 ಓವರ್‌ಗಳಲ್ಲಿ 159 ರನ್‌ಗಳಿಗೆ ಹೈದರಾಬಾದ್‌ ಆಲೌಟ್‌ ಆಯ್ತು. ಹೈದರಾಬಾದ್‌ 8 ಆಟಗಾರರು ಎರಡಂಕಿಯನ್ನು ದಾಟಲಿಲ್ಲ.  4 ಆಟಗಾರರು ಶೂನ್ಯಕ್ಕೆ ಔಟಾಗಿದ್ದರು.

  • IPL Playoffs: ತಗ್ಗೋದೇ ಇಲ್ಲ – 18ರ ನಂಟು ಮುಂದುವರಿಸಿದ ಆರ್‌ಸಿಬಿ!

    IPL Playoffs: ತಗ್ಗೋದೇ ಇಲ್ಲ – 18ರ ನಂಟು ಮುಂದುವರಿಸಿದ ಆರ್‌ಸಿಬಿ!

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB vs CSK) ತಂಡ ಅದ್ಭುತ ಜಯದೊಂದಿಗೆ 9ನೇ ಬಾರಿಗೆ ಐಪಿಎಲ್‌ ಪ್ಲೇ ಆಫ್‌ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಮೇ 18ರೊಂದಿಗೆ ಹೊಂದಿದ್ದ ನಂಟನ್ನು ಆರ್‌ಸಿಬಿ ಮುಂದುವರಿಸಿದೆ.

    18ರ ಜೊತೆಗೆ ಏಕೆ ವಿಶೇಷ ನಂಟು?
    ಆರ್‌ಸಿಬಿ vs ಸಿಎಸ್‌ಕೆ ನಡುವಣ ಮುಖಾಮುಖಿ ಇತಿಹಾಸದಲ್ಲಿ ಮೊದಲ ಬಾರಿ 18ರ ನಂಟು ಶುರುವಾಗಿದ್ದು 2013ರಲ್ಲಿ. ಅಂದು ಆರ್‌ಸಿಬಿ ತಂಡ ಸಿಎಸ್‌ಕೆ ಎದುರು 24 ರನ್‌ಗಳ ಜಯ ದಾಖಲಿಸಿತ್ತು. ವಿರಾಟ್‌ ಕೊಹ್ಲಿ ಆ ಪಂದ್ಯದಲ್ಲಿ 29 ಎಸೆತಗಳಲ್ಲಿ ಅಜೇಯ 56 ರನ್‌ ಸಿಡಿಸಿ ಅಬ್ಬರಿಸಿದ್ದರು. ಬಳಿಕ 2014ರಲ್ಲೂ ಸಿಎಸ್‌ಕೆ ಎದುರು ಮೇ 18ರಂದೇ ನಡೆದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳ ಜಯ ದಾಖಲಿಸಿತ್ತು. ಆ ಪಂದ್ಯದಲ್ಲೂ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಮಾಡಿದ್ದರು.

    ಇದರೊಂದಿಗೆ 2016ರ ಮೇ 18ರಂದು ಕಿಂಗ್ಸ್‌ ಪಜಾಬ್‌ ವಿರುದ್ಧ, 2023ರ ಮೇ 18ರಂದು ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧವೂ ಆರ್‌ಸಿಬಿ ಗೆದ್ದಿತ್ತು. 2024ರಲ್ಲಿ ಮತ್ತೊಮ್ಮೆ ಸಿಎಸ್‌ಕೆ ವಿರುದ್ಧ ಗೆದ್ದು ಮೇ 18ರ ನಂಟು ಮುಂದುವರಿಸಿದೆ. ಅಲ್ಲದೇ ಕಿಂಗ್‌ ಕೊಹ್ಲಿ ಅವರ ಜೆರ್ಸಿ ನಂಬರ್‌ ಸಹ 18 ಆಗಿರುವುದು ವಿಶೇಷವಾಗಿದ್ದು, ಇದೇ ಆರ್‌ಸಿಬಿ ಗೆಲುವಿಗೆ ಕಾರಣ ಎಂದು ಅಭಿಮಾನಿಗಳು ಭಾವಿಸಿದ್ದಾರೆ.

    ಈ ಬಗ್ಗೆ ಆರ್‌ಸಿಬಿ ಸಹ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ, 18 ಎಂದೆಂದಿಗೂ ನಮ್ಮ ನೆಚ್ಚಿನ ಸಂಖ್ಯೆ, ಮೇ 18 ರಂದು (18th May Game) ನಾವು ಎಂದಿಗೂ ಪಂದ್ಯವನ್ನು ಸೋತಿಲ್ಲ ಎಂದು ಬರೆದುಕೊಂಡಿದೆ.

    ಕೊಹ್ಲಿ ಮೇ 18ರಂದು ನೀಡಿರುವ ಬ್ಯಾಟಿಂಗ್‌ ಪ್ರದರ್ಶನ:
    56* (29) – ಸಿಎಸ್‌ಕೆ ವಿರುದ್ಧ 2013ರಲ್ಲಿ (ಆರ್‌ಸಿಬಿಗೆ ಜಯ)
    27 (29) – ಸಿಎಸ್‌ಕೆ ವಿರುದ್ಧ 2014ರಲ್ಲಿ (ಆರ್‌ಸಿಬಿಗೆ ಜಯ)
    113 (50) – ಪಂಜಾಬ್ ಕಿಂಗ್ಸ್‌ ವಿರುದ್ಧ 2016ರಲ್ಲಿ (ಆರ್‌ಸಿಬಿಗೆ ಜಯ)
    100 (63) – ಎಸ್‌ಆರ್‌ಎಚ್‌ ವಿರುದ್ಧ 2023ರಲ್ಲಿ (ಆರ್‌ಸಿಬಿಗೆ ಜಯ)
    47 (29) – ಸಿಎಸ್‌ಕೆ ವಿರುದ್ಧ 2024ರಲ್ಲಿ (ಆರ್‌ಸಿಬಿಗೆ ಜಯ)

    ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ಕಿಂಗ್‌:
    ಸದ್ಯ ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿರುವ ವಿರಾಟ್‌ ಕೊಹ್ಲಿ 14 ಲೀಗ್‌ ಪಂದ್ಯಗಳಲ್ಲಿ 64.36 ಸರಾಸರಿ, 155.6 ಸ್ಟ್ರೈಕ್‌ರೇಟ್‌ನೊಂದಿಗೆ 708 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

    ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಆರ್‌ಸಿಬಿ 218 ರನ್‌ ಸಿಡಿಸಿ, ಸಿಎಸ್‌ಕೆ ಗೆಲುವಿಗೆ 219 ರನ್‌ಗಳ ಗುರಿ ನೀಡಿತ್ತು. ಆದ್ರೆ ಸಿಎಸ್‌ಕೆ ಪ್ಲೇ ಆಫ್‌ ತಲುಪಲು 201 ರನ್‌ಗಳ ಅಗತ್ಯವಿತ್ತು. ಕೊನೆಯವರೆಗೂ ಹೋರಾಡಿದ ಸಿಎಸ್‌ಕೆ 27 ರನ್‌ ಗಳ ಅಂತರದಿಂದ ಸೋತು ಪ್ಲೇ ಆಫ್‌ ಪ್ರವೇಶಿಸುವ ಅರ್ಹತೆಯನ್ನೇ ಕಳೆದುಕೊಂಡಿತು.

  • RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

    RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

    ಬೆಂಗಳೂರು: ಆರ್‌ಸಿಬಿ (RCB) ಕ್ರಿಕೆಟ್ ಅಭಿಮಾನಿಗಳಿಗೆ ಇಂದು ರಸದೌತಣ. ಫ್ಲೇಆಫ್ ಹಂತಕ್ಕೆ ಆರ್‌ಸಿಬಿ ಹೋಗಬೇಕಾದರೆ ಸಿಎಸ್‌ಕೆಯನ್ನು (CSK) ಟೂರ್ನಿಯಿಂದ ಹೊರಕ್ಕೆ ಹಾಕಲು ಇರುವ ಕೊನೆಯ ಅವಕಾಶ. ಚಿನ್ನಸ್ವಾಮಿಯಲ್ಲಿ (Chinnaswamy Stadium) ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ (Ticket) ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ ಎಂದು ಹೇಳಿ ಸೈಬರ್ ಕಳ್ಳರು ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ.

    ಇವತ್ತಿನ ಪಂದ್ಯದ ಮೇಲೆ ಎಲ್ಲರ ಚಿತ್ತವಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ಆನ್‌ಲೈನ್‌ನಲ್ಲಿ ಮ್ಯಾಚ್‌ ಟಿಕೆಟ್‌ ಬೇಕಾದರೆ ಲಿಂಕ್ ಓಪನ್ ಮಾಡಿ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂಬ ಪೋಸ್ಟ್‌ ಕಳುಹಿಸುತ್ತಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

     

    ನಕಲಿ ಲಿಂಕ್‌ನಿಂದ ಟಿಕೆಟ್ ಬುಕ್ ಮಾಡಿಕೊಂಡವರು ಹಣವನ್ನ ಕಳೆದುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಬಂದ ಲಿಂಕ್‌ಮೇಲೆ ಕ್ಲಿಕ್ ಮಾಡಿ 3 ಟಿಕೆಟ್‌ಗೆ 3,600 ರೂ. ಪಾವತಿ ಮಾಡಿದ್ದ ಆಕಾಶ್ ಕುಮಾರ್‌ ಈಗ ಸೈಬರ್‌ ಠಾಣೆಗೆ ದೂರು ನೀಡಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ

    ಸೈಬರ್ ಖದೀಮರು ರಿಯಲ್ ವೆಬ್‌ಸೈಟ್‌ಗೆ ಹೇಗೆ ಇದೆಯೇ ಅದೇ ರೀತಿ ಸೈಟ್‌ ಸೃಷ್ಟಿ ಮಾಡಿ ಟಿಕೆಟ್ ಬುಕ್ ಮಾಡುವವರ ಬಳಿ ಹಣ ಪೀಕುತ್ತಿದ್ದಾರೆ. ಅದೆಷ್ಟೋ ಜನ ಮ್ಯಾಚ್ ನೋಡುವ ಆತುರದಲ್ಲಿ ಹಣ ಕಳೆದುಕೊಂಡಿದ್ದಾರೆ. ಹೀಗೆ ಯಾರು ವಂಚನೆಗೊಳಗಾಗಬೇಡಿ ಆಕಾಶ್ ಮನವಿ ಮಾಡಿದ್ದಾರೆ.