Tag: ಐಪಿಎಲ್ 2021

  • ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    – ಯುಎಇನಲ್ಲಿ ನಡೆಸಲು ಬಿಸಿಸಿಐ ನಿರ್ಧಾರ

    ನವದೆಹಲಿ: ಕೆಲ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ 2021ರ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು. ಇದೀಗ ಉಳಿದ ಪಂದ್ಯಗಳ ದಿನಾಂಕವನ್ನು ಬಿಸಿಸಿಐ ಪ್ರಕಟಿಸಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

    ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಬಿಸಿಸಿಐ ಸ್ಪೆಷಲ್ ಜನರಲ್ ಮೀಟಿಂಗ್(ಎಸ್‍ಜಿಎಂ) ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದಲ್ಲಿ ಮಳೆಗಾಲ ಆರಂಭವಾಗುವ ಹಿನ್ನೆಲೆ ಯುಎಇನಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಇದೇ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಐಪಿಎಲ್‍ನ ಉಳಿದ ಪಂದ್ಯಗಳು ನಡೆಯಲಿವೆ. ಇದನ್ನೂ ಓದಿ: ಐಪಿಎಲ್ ದ್ವಿತೀಯಾರ್ಧದಲ್ಲಿ ಧೋನಿ ಬ್ಯಾಟ್‍ನಿಂದ ರನ್ ಮಳೆ ಸುರಿಯಲಿದೆ: ದೀಪಕ್ ಚಹರ್

    ಈ ಕುರಿತು ಶನಿವಾರವೇ ಘೊಷಿಸಿರುವ ಬಿಸಿಸಿಐ, ವಿವೋ ಐಪಿಎಲ್-2021 ಸೀಸನ್‍ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್‍ನಲ್ಲಿ ಪಂದ್ಯಗಳು ನಡೆಯಲಿದ್ದು, ಭಾರತದಲ್ಲಿ ಮಾನ್ಸೂನ್ ಆರಂಭವಾಗುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಕೆಲ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ಮೇ 4ರಂದು ಐಪಿಎಲ್-2021ನ್ನು ಮುಂದೂಡಲಾಗಿತ್ತು. ಪಂದ್ಯಾವಳಿ ಮುಂದೂಡುವುದಕ್ಕೂ ಮುನ್ನ 29 ಪಂದ್ಯಗಳು ನಡೆದಿವೆ. ಕೆಕೆಆರ್‍ನ ಇಬ್ಬರು ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಇತರೆ ತಂಡಗಳ ಕೆಲ ಆಟಗಾರರಲ್ಲಿ ಸಹ ಕೋವಿಡ್ ಪತ್ತೆಯಾಗಿತ್ತು. ಹೀಗಾಗಿ ಪಂದ್ಯವನ್ನು ಮುಂದೂಡಲಾಗಿತ್ತು.

  • ಚೆನ್ನೈ ಅದ್ಭುತ ಆಟ, ಆರ್‌ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು: ಕಿಚ್ಚ

    ಚೆನ್ನೈ ಅದ್ಭುತ ಆಟ, ಆರ್‌ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು: ಕಿಚ್ಚ

    ಬೆಂಗಳೂರು: ಐಪಿಎಲ್‍ನ ಹೈ ವೋಲ್ಟೇಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಜಡೇಜಾ ಮ್ಯಾಜಿಕ್‍ನಿಂದಾಗಿ 69 ರನ್ ಗಳಿಂದ ಚೆನ್ನೈ ಭರ್ಜರಿ ಜಯ ಸಾಧಿಸಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ವೆಲ್ ಪ್ಲೇಯ್ಡ್ ಚೆನ್ನೈ ಸೂಪರ್ ಕಿಂಗ್ಸ್, ಇಲ್ಲಿಂದ ಇನ್ನೂ ಹೆಚ್ಚು ಆಸಕ್ತಿದಾಕವಾಗಿದೆ. ಅಲ್ಲದೆ ಆರ್ ಸಿಬಿಯ ಕೆಟ್ಟ ದಿನಗಳಲ್ಲಿ ಇದೂ ಒಂದು. ನಮ್ಮ ಹೃದಯ ಹಾಗೂ ಶುಭಾಶಯ ಯಾವತ್ತೂ ಆರ್ ಸಿಬಿ ಜೊತೆಗೆ ಇರುತ್ತದೆ. ಮುಂದಿನ ಪಂದ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: 1 ಓವರ್‌ನಲ್ಲಿ  5 ಸಿಕ್ಸ್, 1 ಮೇಡನ್ 3 ವಿಕೆಟ್ – ಜಡೇಜಾ ಜಾದೂ, ಚೆನ್ನೈಗೆ 69 ರನ್‍ಗಳ ಭರ್ಜರಿ ಜಯ

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಮೋಡಿ ಕುರಿತು ಸಹ ಮೆಚ್ಚುಗೆ ವ್ಯಕ್ತಪಡಿಸಿರುವ ಕಿಚ್ಚ, ತುಂಬಾ ಅದ್ಭುತವಾಗಿ ಆಡಿದ್ದೀರಿ, ಇಂದು ನಿಜವಾಗಿಯೂ ನೀವು ಸೂಪರ್ ಮ್ಯಾನ್ ರೀತಿ ಕಂಡಿರಿ, ಸರ್ವಶಕ್ತ ಎಂದು ಹಾಡಿ ಹೊಗಳಿದ್ದಾರೆ.

    ಇಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ 69 ರನ್‍ಗಳಿಂದ ಚೆನ್ನೈ ಗೆದ್ದು ಬೀಗಿದೆ. ರವೀಂದ್ರ ಜಡೇಜಾ ಅವರ ಆಲ್‍ರೌಂಡರ್ ಆಟದಿಂದ ಈ ಭರ್ಜರಿ ಗೆಲುವು ಸಾಧ್ಯವಾಗಿದ್ದು, ಗೆಲ್ಲಲು 192 ರನ್‍ಗಳ ಕಠಿಣ ಗುರಿಯನ್ನು ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ಈ ಮೂಲಕ ಸತತ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಬೆಂಗಳೂರು, ಈಗ ಎರಡನೇ ಸ್ಥಾನಕ್ಕೆ ಜಾರಿದೆ. ಚೆನ್ನೈ ಮೊದಲ ಸ್ಥಾನಕ್ಕೆ ಏರಿದೆ.

    ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಜಡೇಜಾ ಇಂದು ವಾಷಿಂಗ್ಟನ್ ಸುಂದರ್ ಅವರನ್ನು ಕ್ಯಾಚ್ ಔಟ್ ಮಾಡಿದ್ದರೆ ಮ್ಯಾಕ್ಸ್ ವೆಲ್ ಮತ್ತು ಎಬಿಡಿ ವಿಲಿಯರ್ಸ್ ಅವರನ್ನು ಬೌಲ್ಡ್ ಮಾಡಿದರು. ಅಷ್ಟೇ ಅಲ್ಲದೇ ಡೇನಿಯಲ್ ಕ್ರಿಸ್ಟಿಯನ್ ಅವರನ್ನು ರನೌಟ್ ಮಾಡಿದರು. ಅಂತಿಮವಾಗಿ ಜಡೇಜಾ 4 ಓವರ್‍ಗಳ ಕೋಟಾದಲ್ಲಿ 1 ಮೇಡನ್ ಮಾಡಿ 13 ರನ್ ನೀಡಿ 4 ವಿಕೆಟ್ ಕಿತ್ತರು.

  • ಡು’ಪ್ಲೆಸಿಸ್, ಗಾಯಕ್ವಾಡ್ ಮಿಂಚಿನಾಟ- ಕೋಲ್ಕತ್ತಾ ವಿರುದ್ಧ ಚೆನ್ನೈಗೆ 18 ರನ್‍ಗಳ ಗೆಲುವು

    ಡು’ಪ್ಲೆಸಿಸ್, ಗಾಯಕ್ವಾಡ್ ಮಿಂಚಿನಾಟ- ಕೋಲ್ಕತ್ತಾ ವಿರುದ್ಧ ಚೆನ್ನೈಗೆ 18 ರನ್‍ಗಳ ಗೆಲುವು

    – ಅಂಕಪಟ್ಟಿಯಲ್ಲಿ ಆರ್ ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಚೆನ್ನೈ

    ಮುಂಬೈ: ಫಾಫ್ ಡು’ಪ್ಲೆಸಿಸ್ ಭರ್ಜರಿ 95 ರನ್ ಹಾಗೂ ಋತುರಾಜ್ ಗಾಯಕ್ವಾಡ್ ಅರ್ಧ ಶತಕದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 18 ರನ್‍ಗಳಿಂದ ಜಯ ಸಾಧಿಸಿದೆ.

    ಗೆಲ್ಲಲು 221 ರನ್‍ಗಳ ಕಠಿಣ ಸವಾಲು ಪಡೆದ ಕೋಲ್ಕತ್ತಾ, 20 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ಆರಂಭದಿಂದಲೂ ಮುಗ್ಗರಿಸಿದ್ದರಿಂದ ಕೋಲ್ಕತ್ತಾಗೆ ಕಠಿಣ ಸವಾಲನ್ನು ಸರಿಗಟ್ಟುವಲ್ಲಿ ಸಾಧ್ಯವಾಗಲಿಲ್ಲ. ಆಂಡ್ರೆ ರಸೆಲ್, ಪ್ಯಾಟ್ ಕಮ್ಮಿನ್ಸ್, ದಿನೇಶ್ ಕಾರ್ತಿಕ್ ಹೊರತುಪಡಿಸಿ ಉಳಿದ ಯಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದ ಕಾರಣ ಕೋಲ್ಕತ್ತಾ ಸೋಲನುಭವಿಸುವಂತಾಯಿತು. ಸತತವಾಗಿ ಪಂದ್ಯಗಳನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೇಲಕ್ಕೆ ಜಿಗಿದಿದ್ದು, ಆರ್ ಸಿಬಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ.

     

    ಆಂಡ್ರೆ ರಸೆಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, 54 ರನ್ (22 ಎಸೆತ, 3 ಬೌಂಡರಿ, 6 ಸಿಕ್ಸ್) ಸಿಡಿಸಿ ತಂಡಕ್ಕೆ ಉತ್ತಮ ರನ್‍ಗಳ ಕೊಡುಗೆ ನೀಡಿದರು. ಆದರೆ 11.2ನೇ ಓವರ್‍ನಲ್ಲಿ ಔಟಾದರು. ದಿನೇಶ್ ಕಾರ್ತಿಕ್ ಸಹ 40 ರನ್ (24 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ 14ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್ ಔಟಾಗದೇ 66 ರನ್(34 ಎಸೆತ, 4 ಬೌಂಡರಿ, 6 ಸಿಕ್ಸ್) ಹೊಡೆದರು. ದೀಪಕ್ ಚಹರ್ 4 ವಿಕೆಟ್ ಕಿತ್ತರೆ, ಲುಂಗಿ ಎನ್ಗಿಡಿ 3 ಹಾಗೂ ಸ್ಯಾಮ್ ಕರ್ರನ್ 1 ವಿಕೆಟ್ ಪಡೆದರು.

    ಕೋಲ್ಕತ್ತಾ ಪರವಾಗಿ ಶುಭಮನ್ ಗಿಲ್ ಮೊದಲ ಓವರ್‍ನಲ್ಲೇ ಕೇವಲ ಒಂದು ಬಾಲ್ ಎದುರಿಸಿ ಸೊನ್ನೆಗೆ ಔಟಾದರೆ, ನಿತೀಶ್ ರಾಣಾ 9 ರನ್(12 ಎಸೆತ, 2 ಬೌಂಡರಿ) ಹೊಡೆದು 2ನೇ ಓವರ್ ಕೊನೆಯಲ್ಲಿ ಪೆವಿಲಿಯನ್ ಸೇರಿದರು. ತಂಡದ ನಾಯಕ ಐಯಾನ್ ಮಾರ್ಗನ್ ಸಹ 7 ರನ್(7 ಎಸೆತ, 1 ಬೌಂಡರಿ) ಸಿಡಿಸಿ 4.3ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಸುನಿಲ್ ನರೇನ್ 4 ರನ್ (3 ಎಸೆತ, 1 ಬೌಂಡರಿ) ಹೊಡೆದು ಇದೇ ಓವರ್ ಕೊನೆಯಲ್ಲಿ ಔಟಾದರು. ಈ ಮೂಲಕ ಕೋಲ್ಕತ್ತಾ ಮುಗ್ಗರಿಸಿತು. ಇನ್ನು ರಾಹುಲ್ ತ್ರಿಪಾಠಿ 8 ರನ್, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ ಸೊನ್ನೆಗೆ ಔಟಾಗಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಮಿಂಚಿನಾಟ
    ಚೆನ್ನೈ ಕಟ್ಟಿ ಹಾಕಿ ಬಳಿಕ ಸುಲಭವಾಗಿ ಚೇಸ್ ಮಾಡಬಹುದೆಂದು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ನಿರೀಕ್ಷೆ ಹುಸಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್‍ಮ್ಯಾನ್‍ಗಳು ಕೋಲ್ಕತ್ತಾ ಬೌಲರ್‍ಗಳ ಬೆವರಿಳಿಸಿದ್ದಾರೆ. ಚೆನ್ನೈ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡು’ಪ್ಲೆಸಿಸ್ ಆರಂಭಿಕ ಹಂತದಿಂದಲೇ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗಾಯಕ್ವಾಡ್ ಅರ್ಧ ಶತಕ ಬಾರಿಸಿದರೆ, ಡು’ಪ್ಲೆಸಿಸ್ ಔಟಾಗದೆ ಬರೋಬ್ಬರಿ 95 ರನ್ ಪೇರಿಸುವ ಮೂಲಕ ಶತಕ ವಂಚಿತರಾದರು.

    ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ ಋತುರಾಜ್ ಗಾಯಕ್ವಾಡ್, 64 ರನ್ (42 ಎಸೆತ, 6 ಬೌಂಡರಿ, 4 ಸಿಕ್ಸರ್) ಪೇರಿಸುವ ಮೂಲಕ ತಂಡದ ರನ್‍ಗಳ ಮೊತ್ತ ಹೆಚ್ಚಲು ಕೊಡುಗೆ ನೀಡಿದರು. 2ನೇ ಓವರ್‍ನಿಂದಲೂ ಬೌಂಡರಿ ಸಿಕ್ಸ್ ಬಾರಿಸುತ್ತಲೇ ಆಟವಾಡಿದ್ದು, ಚೆನ್ನೈ ಅಭಿಮಾನಿಗಳನ್ನು ಖುಷಿಯಲ್ಲಿ ತೇಲಿಸಿದರು. ಆದರೆ 12.2ನೇ ಓವರ್‍ನಲ್ಲಿ ಕ್ಯಾಚ್ ನೀಡಿ ಬೇಸರ ಮೂಡಿಸಿದರು.

     

    ಶತಕ ವಂಚಿತ ಡು’ಪ್ಲೆಸಿಸ್
    ಫಾಫ್ ಡು’ಪ್ಲೆಸಿಸ್ ಕೋಲ್ಕತ್ತಾ ಬಾಲರ್‍ಗಳ ಬೆವರಿಳಿಸಿದ್ದು, ಅಮೋಘ 95 ರನ್ (60 ಎಸೆತ, 9 ಬೌಂಡರಿ, 4 ಸಿಕ್ಸ್) ಚಚ್ಚಿ ತಂಡಕ್ಕೆ ಬೃಹತ್ ರನ್‍ಗಳ ಮೊತ್ತವನ್ನು ಕೊಡುಗೆಯಾಗಿ ನೀಡಿದರು. ಸಿಕ್ಸ್ ಫೋರ್‍ಗಳ ಸುರಿಮಳೆಗೈದಿದ್ದು, ಚೆನ್ನೈ ತಂಡದ ಅಭಿಮಾನಿಗಳಲ್ಲಿ ರೋಮಾಂಚವನ್ನುಂಟುಮಾಡಿದರು. ಆದರೆ ಶತಕ ವಂಚಿತರಾಗುವ ಮೂಲಕ ಬೇಸರ ಮೂಡಿಸಿದರು.

    ಗಾಯಕ್ವಾಡ್ ಅರ್ಧ ಶತಕ
    ಋತುರಾಜ್ ಗಾಯಕ್ವಾಡ್ ಸಹ ಆರಂಭಿಕ ಆಟಗಾರರಾಗಿ ಡು’ಪ್ಲೆಸಿಸ್ ಗೆ ಉತ್ತಮ ಸಾಥ್ ನೀಡಿದ್ದು, ಇಬ್ಬರೂ ತಾಮುಂದು ನಾ ಮುಂದು ಎಂದು ರನ್ ಚಚ್ಚುವ ಮೂಲಕ ಕೋಲ್ಕತ್ತಾ ಬೌಲರ್‍ಗಳ ನೀರಿಳಿಸಿದರು. ಭರ್ಜರಿ 64 ರನ್ (42 ಎಸೆತ, 6 ಬೌಂಡರಿ, 4 ಸಿಕ್ಸ್) ಸಿಡಿಸಿ, 12.2ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು.

     

    ನಾಯಕ ಮಹೇಂದ್ರ ಸಿಂಗ್ ಧೋನಿ ಮಿಂಚಿನಾಟಕ್ಕೆ ಮುಂದಾದರೂ ಹೆಚ್ಚು ಕಾಲ ನಿಲ್ಲಲಾಗಲಿಲ್ಲ. 17 ರನ್ (8 ಎಸೆತ, 2 ಬೌಂಡರಿ, 1 ಸಿಕ್ಸ್) ಪೇರಿಸಿ 18ನೇ ಓವರ್ ಕೊನೆಯಲ್ಲಿ ಕ್ಯಾಚ್ ನೀಡಿದರು. ಇದರಿಂದಾಗಿ ಅವರ ಅಭಿಮಾನಿಗಳಿಗೆ ಕೊಂಚ ಬೇಸರ ಮೂಡಿತು. ಮೊಯೀನ್ ಅಲಿ ಸಹ ಉತ್ತಮ ರನ್‍ಗಳ ಮೊತ್ತ ದಾಖಲಿಸಿದ್ದು, 25 ರನ್(12 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ 16.3 ನೇ ಓವರ್‍ನಲ್ಲಿ ಪೆವಿಲಿಯನ್ ಸೇರಿದರು. ಧೋನಿ ಔಟಾಗುತ್ತಿದ್ದಂತೆ ಆಗಮಿಸಿದ ರವೀಂದ್ರ ಜಡೇಜಾ ಒಂದೇ ಬಾಲ್ ಆಡಿ ಸಿಕ್ಸ್ ಚಚ್ಚಿ ಔಟಾಗದೆ ಉಳಿದರು.

  • ವಾರ್ನರ್, ಜಾನಿ ಬೈರ್‌ಸ್ಟೋವ್ ತಾಳ್ಮೆಯ ಆಟ- ಹೈದರಾಬಾದ್‍ಗೆ 9 ವಿಕೆಟ್‍ಗಳ ಭರ್ಜರಿ ಜಯ

    ವಾರ್ನರ್, ಜಾನಿ ಬೈರ್‌ಸ್ಟೋವ್ ತಾಳ್ಮೆಯ ಆಟ- ಹೈದರಾಬಾದ್‍ಗೆ 9 ವಿಕೆಟ್‍ಗಳ ಭರ್ಜರಿ ಜಯ

    ಚೆನ್ನೈ: ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ತಾಳ್ಮೆಯ ಆಟದಿಂದಾಗಿ ಸನ್‍ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೊದಲ ಜಯ ದಾಖಲಿಸಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, ಇನ್ನೂ 2 ಬಾಲ್ ಇರುವಾಗಲೇ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 120 ರನ್ ಪೇರಿಸಲಷ್ಟೇ ಶಕ್ತವಾಯಿತು. ಸುಲಭ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್, ಇನ್ನೂ 8 ಬಾಲ್ ಇರುವಾಗಲೇ ಕೇವಲ 1 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ 9 ವಿಕೆಟ್‍ಗಳ ಭರ್ಜರಿ ವಿಜಯ ಸಾಧಿಸಿದೆ.

    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್, ತಾಳ್ಮೆಯ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಾರ್ನರ್, 37 ರನ್ (37 ಎಸೆತ, 3 ಬೌಂಡರಿ, 1 ಸಿಕ್ಸ್) ಚಚ್ಚುವ ಮೂಲಕ ತಂಡಕ್ಕೆ ಭರ್ಜರಿ ರನ್‍ಗಳ ಮೊತ್ತದ ಕೊಡುಗೆ ನೀಡಿದರು. ಆದರೆ 10ನೇ ಓವರ್ ಆರಂಭದಲ್ಲಿ ವಾರ್ನರ್ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿದರು.

    ಅಲ್ಪ ಗುರಿಯಾಗಿದ್ದರಿಂದ ಕೂಲ್ ಆಗಿಯೇ ಆಡಿದ ಸನ್‍ರೈಸರ್ಸ್ ಹೈದರಾಬಾದ್, ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲೇ ರನ್ ಪೇರಿಸಿತು. ವಾರ್ನರ್ ಬಳಿಕ ಜಾನಿ ಬೈರ್‌ಸ್ಟೋವ್ ಗೆ ಜೊತೆಯಾದ ಕೇನ್ ವಿಲಿಯಮ್ಸನ್ ವಿಕೆಟ್ ಕಾಯ್ದುಕೊಂಡು ಪಂದ್ಯ ಮುಗಿಯುವ ವರೆಗೆ ಆಡಿದರು. ಜಾನಿ ಬೈರ್‌ಸ್ಟೋವ್ ಔಟಾಗದೆ 63 ರನ್(56 ಎಸೆತ, 4 ಬೌಂಡರಿ, 3 ಸಿಕ್ಸ್) ಚಚ್ಚಿದರೆ, ಕೇನ್ ವಿಲಿಯಮ್ಸನ್ 16 ರನ್ (19 ಎಸೆತ) ಬಾರಿಸಿ ತಂಡವನ್ನು ಗೆಲ್ಲಿಸಿದರು.

    ವಾರ್ನರ್, ಜಾನಿ ಬೈರ್ ಸ್ಟೋವ್ ಜೊತೆಯಾಟ:
    ತಾಳ್ಮೆಯ ಜೊತೆಯಾಟವಾಡುತ್ತಿದ್ದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ 73 ರನ್ (64 ಎಸೆತ) ಚಚ್ಚುವ ಮೂಲಕ ತಂಡಕ್ಕೆ ಬೃಹತ್ ರನ್‍ಗಳ ಮೊತ್ತವನ್ನು ಕೊಡುಗೆಯಾಗಿ ನೀಡಿದರು. ವಾರ್ನರ್ ಪೆವಿಲಿಯನ್ ಸೇರುತ್ತಿದ್ದಂತೆ. ಜಾನಿ ಬೈರ್‍ಸ್ಟೋವ್ ಗೆ ಸಾಥ್ ನೀಡಿದ ಕೇನ್ ವಿಲಿಯಮ್ಸನ್ ವಿಕೆಟ್ ಕಾಯ್ದುಕೊಂಡರು. ಇಬ್ಬರ ಜೊತೆಯಾಟದಲ್ಲಿ 48 ರನ್ (52 ಎಸೆತ) ಸಿಡಿಸಿದರು.

    ಯುವ ಬೌಲರ್ ಖಲೀಲ್ ಅಹ್ಮದ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದು, 4 ಓವರ್ ಬೌಲಿಂಗ್‍ನಲ್ಲಿ 21 ರನ್ ನೀಡಿ, 3 ವಿಕೆಟ್ ಪಡೆದು ಮಿಂಚಿದ್ದಾರೆ. ಅಹ್ಮದ್ ಬೌಲಿಂಗ್ ದಾಳಿಯಿಂದಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಕಡಿಮೆ ರನ್‍ಗಳ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಿದೆ.

    ಪಂಜಾಬ್ ಕಿಂಗ್ಸ್ ಪರವಾಗಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ತಾಳ್ಮೆಯ ಆಟಕ್ಕೆ ಮುಂದಾದರು. ಹೀಗಿರುವಾಗಲೇ 3ನೇ ಓವರ್ ಆರಂಭದಲ್ಲಿ ಕೆ.ಎಲ್.ರಾಹುಲ್ ಕೇವಲ 4 ರನ್ (6 ಎಸೆತ) ಗಳಿಸಿ ಕ್ಯಾಚ್ ನೀಡಿದರು.

    ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಮಾಯಾಂಕ್ ಅಗರ್ವಾಲ್ ಸಹ 22 (25 ಎಸೆತ, 2 ಬೌಂಡರಿ) ಸಿಡಿಸಿ 6ನೇ ಓವರ್ ಕೊನೆಯಲ್ಲಿ ಪೆವಿಲಿಯನ್ ಸೇರಿದರು. ನಿಕೋಲಸ್ ಪೂರನ್ ಸಹ 7ನೇ ಓವರ್ ಮೊದಲ ಬಾಲ್‍ಗೆ ವಿಕೆಟ್ ಒಪ್ಪಿಸಿ ಸೊನ್ನೆ ಸುತ್ತಿದರು. ಎರಡು ಪ್ರಮುಖ ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್‍ಗೆ ಭಾರೀ ಆಘಾತವಾಯಿತು. ಕ್ರಿಸ್ ಗೇಲ್ ಸಹ 15 ರನ್(17 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.

    11ನೇ ಓವರ್‍ನಲ್ಲಿ ತಂಡದ ಆಪತ್ಬಾಂಧವನಂತೆ ಆಗಮಿಸಿದ ಶಾರುಖ್ ಖಾನ್, ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲು ಯತ್ನಿಸಿದರು. ಆದರೆ 22 ರನ್(17 ಎಸೆತ, 2 ಸಿಕ್ಸ್) ಚಚ್ಚಿ 18ನೇ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು.

    19ನೇ ಓವರ್ ನಲ್ಲಿ 2 ವಿಕೆಟ್
    ದೀಪಕ್ ಹೂಡ 13 ರನ್ (11 ಎಸೆತ, 2 ಬೌಂಡರಿ) ಸಿಡಿಸಿ 11.3ನೇ ಓವರ್ ನಲ್ಲಿ ಪೆವಿಲಿಯನ್ ಸೇರಿದರು. ಮೊಯ್ಸೆಸ್ ಹೆನ್ರಿಕ್ಸ್ 14 ರನ್(17 ಎಸೆತ) ಹೊಡೆದು ವಿಕೆಟ್ ಒಪ್ಪಿಸಿದರು. ಫೇಬಿಯೆನ್ ಆಲೆನ್ 6 ರನ್ (11 ಎಸೆತ) ಹೊಡೆದು ಔಟಾದರು. ಮುರುಗನ್ ಅಶ್ವಿನ್ 9 ರನ್ (10 ಎಸೆತ, 1 ಬೌಂಡರಿ) ಹೊಡೆದು 19ನೇ ಓವರ್ ಆರಂಭದಲ್ಲಿ ಔಟಾದರು. ಬಳಿಕ ಮೊಹಮ್ಮದ್ ಶಮಿ ಸಹ 3 ರನ್ (3 ಎಸೆತ) ಬಾರಿಸಿ ಇದೇ ಓವರ್‍ನಲ್ಲಿ ರನ್ ಔಟ್ ಆದರು. ಈ ಮೂಲಕ ಪಂಜಾಬ್ ಇನ್ನೂ 2 ಬಾಲ್ ಇರುವಾಗಲೇ ಆಲ್‍ಔಟ್ ಆಗಿ 120 ರನ್ ಮಾತ್ರ ದಾಖಲಿಸಿತು.

  • ಮಿಶ್ರಾ ಸ್ಪಿನ್ ದಾಳಿ, ಧವನ್, ಸ್ಮಿತ್ ತಾಳ್ಮೆಯ ಆಟ- ಡೆಲ್ಲಿಗೆ 6 ವಿಕೆಟ್‍ಗಳ ಜಯ

    ಮಿಶ್ರಾ ಸ್ಪಿನ್ ದಾಳಿ, ಧವನ್, ಸ್ಮಿತ್ ತಾಳ್ಮೆಯ ಆಟ- ಡೆಲ್ಲಿಗೆ 6 ವಿಕೆಟ್‍ಗಳ ಜಯ

    ಚೆನ್ನೈ: ಡೆಲ್ಲಿ ತಂಡವನ್ನು ಎಷ್ಟೇ ಕಟ್ಟಿಹಾಕಲು ಯತ್ನಿಸಿದರೂ ಮುಂಬೈ ತಂಡಕ್ಕೆ ಸಾಧ್ಯವಾಗಿಲ್ಲ. ಸ್ಪಿನ್ನರ್ ಅಮಿತ್ ಮಿಶ್ರಾ ಬಾಲಿಂಗ್ ದಾಳಿ ಹಾಗೂ ಶಿಖರ್ ಧವನ್, ಸ್ಟೀವನ್ ಸ್ಮಿತ್ ತಾಳ್ಮೆಯಾಟದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಗಳ ಜಯವನ್ನು ಸಾಧಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, ಭಾರೀ ರನ್‍ಗಳ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (24ಕ್ಕೆ 4) ಸ್ಪಿನ್ ದಾಳಿಗೆ ನಲುಗಿ ಇನಿಂಗ್ಸ್ ಮಧ್ಯದಲ್ಲಿ ಸತತ ವಿಕೆಟ್ ಕಳೆದುಕೊಂಡ ಪರಿಣಾಮ 20 ಓವರ್ ಗಳಲ್ಲಿ 9 ವಿಕೆಟ್‍ಗೆ 137 ರನ್‍ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು. 138 ರನ್‍ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಇನ್ನೂ 5 ಎಸೆತ ಇರುವಾಗಲೇ 4 ವಿಕೆಟ್ ನಷ್ಟಕ್ಕೆ 138 ರನ್ ಗಳಿಸುವ ಮೂಲಕ ವಿಜಯಿಯಾಗಿದೆ.

    ಡೆಲ್ಲಿ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಸ್ಟೀವ್ ಸ್ಮಿತ್, ಬಂದಷ್ಟೇ ವೇಗವಾಗಿ ಪೃಥ್ವಿ ಶಾ 7 ರನ್ (5 ಎಸೆತ, 1 ಬೌಂಡರಿ) ಸಿಡಿಸಿ ಮೊದಲ ಓವರ್‍ನ 3ನೇ ಬಾಲ್‍ಗೆ ಕ್ಯಾಚ್ ನೀಡಿದರು. ಈ ಮೂಲಕ ತಂಡಕ್ಕೆ ಆರಂಭದಲ್ಲೇ ಆಘಾತ ನೀಡಿದರು. ತಾಳ್ಮೆಯ ಆಟವಾಡಲು ಮುಂದಾದ ಸ್ಮಿತ್, 33 ರನ್ (29 ಎಸೆತ, 4 ಬೌಂಡರಿ) ಚಚ್ಚಿ 9.2ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.

    ಸ್ಕೋರ್ ಕಡಿಮೆ ಇದ್ದಿದ್ದರಿಂದ ಶಿಖರ್ ಧವನ್ ಸಹ ವಿಕೆಟ್ ಕಾಯ್ದುಕೊಂಡು ನಿಧಾನವಾಗಿ ಆಟವಾಡಿದರು. 45 ರನ್ (42 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ 14ನೇ ಓವರ್ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಧವನ್ ಅರ್ಧ ಶತಕ ವಂಚಿತರಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆಯುಂಟುಮಾಡಿದರು.

    ತಂಡದ ನಾಯಕ ರಿಷಭ್ ಪಂತ್ ಸಹ 7 ರನ್ (8 ಎಸೆತ, 1 ಬೌಂಡರಿ) ಹೊಡೆದು 16ನೇ ಓವರ್ ಮುಕ್ತಾಯದ ವೇಳೆ ವಿಕೆಟ್ ಒಪ್ಪಿಸಿದರು. ನಂತರ ಶಿಮ್ರಾನ್ ಹೆಟ್ಮಾಯೆರ್ ಹಾಗೂ ಲಲಿತ್ ಯಾದವ್ ತಾಳ್ಮೆಯ ಜೊತೆಯಾಟವಾಡಿ ಸಿಂಗಲ್ ರನ್ ತೆಗೆಯುತ್ತಲೇ ನಿಧಾನವಾಗಿ ಪಂದ್ಯವನ್ನು ದಡ ಸೇರಿಸಿದರು.

    ಕೊನೆಗೆ ಶಿಮ್ರಾನ್ ಹೆಟ್ಮಾಯೆರ್ ಒಂದು ಬೌಂಡರಿ ಬಾರಿಸಿದರು, ಒಂದು ರನ್ ಉಳಿದಾಗ ಪೊಲಾರ್ಡ್ ನೋ ಬಾಲ್ ಎಸೆಯುವ ಮೂಲಕ ಡೆಲ್ಲಿಗೆ ಜಯ ತಂದುಕೊಟ್ಟರು. ಲಲಿತ್ ಯಾದವ್ ಔಟಾಗದೆ 22 ರನ್ (25 ಎಸೆತ, 1 ಬೌಂಡರಿ) ಹಾಗೂ ಶಿಮ್ರಾನ್ ಹೆಟ್ಮಾಯೆರ್ 14 ರನ್ (9 ಎಸೆತ, 2 ಬೌಂಡರಿ) ಸಿಡಿಸಿ ಪಂದ್ಯವನ್ನು ಗೆಲ್ಲಿಸಿದರು.

    ಕಡಿಮೆ ಸ್ಕೋರ್ ಇದ್ದರೂ ಈ ಹಿಂದಿನ ಪಂದ್ಯದಂತೆ ಡೆಲ್ಲಿ ತಂಡವನ್ನು ಮುಂಬೈ ಕಟ್ಟಿ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಸಿತು. ಆದರೆ ಡೆಲ್ಲಿ ಬ್ಯಾಟ್ಸ್ ಮೆನ್‍ಗಳ ತಾಳ್ಮೆಯ ಆಟದ ಫಲವಾಗಿ ಈ ಪ್ರಯತ್ನ ಸಫಲವಾಗಲಿಲ್ಲ.

    ಮುಂಬೈ ಪರವಾಗಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಕ್ವಿಂಟನ್ ಡಿ’ಕಾಕ್ ಹಾಗೂ ತಂಡದ ನಾಯಕ ರೋಹಿತ್ ಶರ್ಮಾ, ವಿಕೆಟ್ ಕಾಯ್ದುಕೊಂಡು ನಿಧಾನವಾಗಿ ಆಡಲು ಯತ್ನಿಸಿದರು. ಆದರೆ 2ನೇ ಓವರ್‍ನಲ್ಲಿ ಮೊದಲ ಬಾಲ್‍ಗೆ ಕ್ವಿಂಟನ್ ಡಿ’ಕಾಕ್ ಕೇವಲ 2 ರನ್(4 ಎಸೆತ) ಹೊಡೆದು ವಿಕೆಟ್ ಒಪ್ಪಿಸಿದರು. ಈ ಮೂಲಕ ಆರಂಭದ ಹಂತದಲ್ಲೇ ತಂಡಕ್ಕೆ ಆಘಾತವನ್ನುಂಟುಮಾಡಿದರು.

    ರೋಹಿತ್ ಶರ್ಮಾ ಜೊತೆಯಾದ ಸೂರ್ಯಕುಮಾರ್ ಯಾದವ್, ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಹೆಚ್ಚು ಕಾಲ ನಿಲ್ಲಲಿಲ್ಲ 6ನೇ ಓವರ್ ಕೊನೆಯಲ್ಲಿ 24 ರನ್(15 ಎಸೆತ, 4 ಬೌಂಡರಿ) ಸಿಡಿಸಿ ಕ್ಯಾಚ್ ನೀಡಿದರು.

    ವಿಕೆಟ್ ಕಾಯ್ದುಕೊಂಡು ಆಡುತ್ತಿದ್ದ ರೋಹಿತ್ ಶರ್ಮಾ 44 ರನ್(30 ಎಸೆತ, 3ಬೌಂಡರಿ, 3 ಸಿಕ್ಸ್) ಚಚ್ಚಿ 8.4ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು. ಇದರಿಂದಾಗಿ ಉತ್ತಮ ಸ್ಕೋರ್ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರೀ ಆಘಾತವಾಯಿತು. ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಇಬ್ಬರ ಜೊತೆಯಾಟದಲ್ಲಿ 29 ಎಸೆತಕ್ಕೆ 58 ಚಚ್ಚಿದ್ದರು. ಆದರೆ ಬೇಗ ವಿಕೆಟ್ ಕಳೆದುಕೊಂಡಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ತಂಡದ ಮೊತ್ತ ಹೆಚ್ಚಿಸಲು ಸಾಧ್ಯವಾಗಲಿಲ್ಲ.

    ಇಶಾನ್ ಕಿಶನ್ ತಾಳ್ಮೆಯಾಟ ಆಡುವ ಮೂಲಕ ತಕ್ಕಮಟ್ಟಿಗೆ ತಂಡಕ್ಕೆ ರನ್‍ಗಳ ಕೊಡುಗೆ ನೀಡಿದರು. 26 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ 17.3ನೇ ಓವರ್‍ನಲ್ಲಿ ವಿಕೆಟ್ ಒಪ್ಪಿಸಿದರು. ಜಯಂತ್ ಯಾದವ್ ಕಿಶನ್ ಸಹ ವಿಕೆಟ್ ಕಾಯ್ದುಕೊಂಡು ಆಟವಾಡಿದ್ದು, 23 ರನ್ (22 ಎಸೆತ, 1 ಬೌಂಡರಿ) ಗಳಿಸಿ 18ನೇ ಓವರ್ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು.

    ರೋಹಿತ್ ಶರ್ಮಾ ಔಟಾಗುತ್ತಿದ್ದಂತೆ ಮುಂಬೈ ತಂಡದ ಬ್ಯಾಟ್ಸ್‍ಮನ್‍ಗಳು ನಿಧಾನಗತಿಯಲ್ಲಿ ಆಡ ತೊಡಗಿದರು. ಹಾರ್ದಿಕ್ ಪಾಂಡ್ಯ ಮೊದಲ ಬಾಲ್‍ಗೇ ಕ್ಯಾಚ್ ನೀಡಿ, ಸೊನ್ನೆ ಸುತ್ತಿದರೆ, ಕೃಣಾಲ್ ಪಾಂಡ್ಯ ಕೇವಲ 1 ರನ್ (5 ಎಸೆತ) ಹೊಡೆದು 10.4ನೇ ಓವರ್ ನಲ್ಲಿ ಪೆವಿಲಿಯನ್ ಸೇರಿದರು.

    ಕೈರೊನ್ ಪೊಲಾರ್ಡ್ 2 ರನ್ (5 ಎಸೆತ) ಗಳಿಸಿ 11ನೇ ಓವರ್ ಕೊನೆಯಲ್ಲಿ ಔಟಾದರು. ರಾಹುಲ್ ಚಹರ್ ಸಹ 6 ರನ್ (6 ಎಸೆತ, 1 ಬೌಂಡರಿ) ಬಾರಿಸಿ 19.4ನೇ ಓವರ್‍ನಲ್ಲಿ ಕ್ಯಾಚ್ ನೀಡಿದರು. ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತಂಡ 137 ರನ್‍ಗಳ ಅಲ್ಪ ಮೊತ್ತ ದಾಖಲಿಸುವಂತಾಯಿತು.

  • 35 ರನ್ ಗಳಿಗೆ 7 ವಿಕೆಟ್ ಪತನ – ಮುಂಬೈಗೆ 13 ರನ್‍ಗಳ ಜಯ

    35 ರನ್ ಗಳಿಗೆ 7 ವಿಕೆಟ್ ಪತನ – ಮುಂಬೈಗೆ 13 ರನ್‍ಗಳ ಜಯ

    ಚೆನ್ನೈ: ರಾಹುಲ್‌ ಚಹರ್‌ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಕಮಾಲ್‌ ಮಾಡಿದ್ದು ಮುಂಬೈ ಇಂಡಿಯನ್ಸ್‌ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 13 ರನ್‌ಗಳಿಂದ ಜಯಗಳಿಸಿದೆ.

    ಗೆಲ್ಲಲು 151 ರನ್‌ಗಳ ಗುರಿಯನ್ನು ಪಡೆದಿದ್ದ ಹೈದರಾಬಾದ್‌ ಅಂತಿಮವಾಗಿ 20 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್‌ ಆಯ್ತು. ಈ ಮೂಲಕ ಹೈದರಾಬಾದ್ ತಂಡ ಲೀಗ್ ಹಂತದ ಸತತ ಮೂರನೇ ಸೋಲಿನ ಕಹಿ ಅನುಭವಿಸಿತು.

    ಮುಂಬೈ ಗೆದ್ದಿದ್ದು ಹೇಗೆ?
    ಕೊನೆಯ 36 ಎಸೆತಗಳಲ್ಲಿ 49 ರನ್‌ಗಳ ಅಗತ್ಯವಿತ್ತು. ಈ ವೇಳೆ ಹೈದರಾಬಾದ್‌ 3 ವಿಕೆಟ್‌ ನಷ್ಟಕ್ಕೆ 102 ರನ್‌ ಗಳಿಸಿತ್ತು. ರಾಹುಲ್‌ ಚಹರ್‌ ಎಸೆದ 15ನೇ ಓವರ್‌ನಲ್ಲಿ ವಿರಾಟ್‌ ಸಿಂಗ್‌ ಮತ್ತು ಅಭಿಷೇಕ್‌ ಶಮಾ ಔಟಾದರು. ಇಲ್ಲಿಂದ ಪಂದ್ಯ ಮುಂಬೈ ಕಡೆ ವಾಲಿತು. ಕೊನೆಯಲ್ಲಿ ವಿಜಯ್‌ ಶಂಕರ್‌ ಕೃನಾಲ್‌ ಪಾಂಡ್ಯಗೆ 2 ಸಿಕ್ಸರ್‌ ಸಿಡಿಸಿದರೂ ಬುಮ್ರಾ ಓವರ್‌ನಲ್ಲಿ 28 ರನ್‌ ಗಳಿಸಿ ಔಟಾದರು. ವಿಜಯ್‌ ಶಂಕರ್‌ ಔಟಾದ ಬೆನ್ನಲ್ಲೇ ಭುವನೇಶ್ವರ್‌ ಕುಮಾರ್‌, ಕಲೀಲ್‌ ಅಹ್ಮದ್‌ ಸಹ ಔಟಾದರು. 35 ರನ್‌ಗಳಿಗೆ ಕೊನೆಯ 7 ವಿಕೆಟ್‌ಗಳ ಪತನಗೊಂಡಿದ್ದರಿಂದ ಹೈದರಾಬಾದ್‌ ತಂಡ ಸೋಲನ್ನು ಅನುಭವಿಸಿದೆ.

    ಮೊದಲ 7 ಓವರ್‌ಗಳಲ್ಲಿ 62 ರನ್‍ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ ತಂಡ ಮೊದಲು ಜಾನೀ ಬೈರ್‍ಸ್ಟೋವ್ 43 ರನ್( 22 ಎಸೆತ, 3 ಬೌಂಡರಿ, 4 ಸಿಕ್ಸರ್) ‌ ವಿಕೆಟ್‌ ಕಳೆದುಕೊಂಡಿತು.  ನಾಯಕ ಡೇವಿಡ್‌ ವಾರ್ನರ್‌ 36 ರನ್‌(34 ಎಸೆತ, 2 ಬೌಂಡರಿ, 2 ಸಿಕ್ಸರ್‌) ಸಿಡಿಸಿದರೆ, ವಿಜಯ್‌ ಶಂಕರ್‌ 28 ರನ್‌(25 ಎಸೆತ, 2 ಬೌಂಡರಿ) ಹೊಡೆದರು.

    ರಾಹುಲ್‌ ಚಹರ್‌ ಮತ್ತು ಟ್ರೆಂಟ್‌ ಬೌಲ್ಟ್‌ 3 ವಿಕೆಟ್‌ ಪಡೆದರೆ ಬುಮ್ರಾ 4 ಓವರ್‌ ಎಸೆದು 14 ರನ್‌ ನೀಡಿ 1 ವಿಕೆಟ್‌ ಪಡೆದು ರನ್‌ ನಿಯಂತ್ರಣ ಮಾಡಿದರು.

    ಸಾಧಾರಣ ಮೊತ್ತ:
    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಮೊದಲ ವಿಕೆಟ್‍ಗೆ ರೋಹಿತ್ ಶರ್ಮ ಮತ್ತು ಕ್ವಿಂಟನ್ ಡಿ ಕಾಕ್ ಸೇರಿ 51 ರನ್‍ಗಳ ಜೊತೆಯಾಟ ವಾಡಿದ್ದರು. ರೋಹಿತ್ ಶರ್ಮ 32 ರನ್ (25 ಎಸೆತ,5 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ 10 ರನ್(6 ಎಸೆತ, 1 ಬೌಂಡರಿ, 1 ಸಿಕ್ಸರ್) ಮತ್ತು ಇಶಾನ್ ಕಿಶಾನ್ 12 ರನ್ (21 ಎಸೆತ) ಬಾರಿಸಿ ನಿರಾಸೆ ಮೂಡಿಸಿದರು.

    ಇತ್ತ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಕ್ವಿಂಟನ್ ಡಿ ಕಾಕ್ ಕೂಡ 40 ರನ್( 39 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಅಂತಿಮವಾಗಿ ಕೀರನ್ ಪೊಲಾರ್ಡ್ 35 ರನ್( 22 ಎಸೆತ, 1 ಬೌಂಡರಿ ಮತ್ತು 3 ಸಿಕ್ಸರ್) ಸಿಡಿಸಿ ಮುಂಬೈ ಮೊತ್ತವನ್ನು 150ಕ್ಕೆ ತಂದು ನಿಲ್ಲಿಸಿದರು.

    ಹೈದರಾಬಾದ್ ಪರ ಶಿಸ್ತಿನ ದಾಳಿ ನಡೆಸಿದ ವಿಜಯ್ ಶಂಕರ್ ಮತ್ತು ಮುಜಿದ್ ಉಲ್ ರೆಹಮಾನ್ 2 ವಿಕೆಟ್ ಪಡೆದರೆ, ಕಲೀಲ್ ಅಹಮದ್ 1 ವಿಕೆಟ್ ಕಬಳಿಸಿದರು.

  • 46 ರನ್ ಗಳಿಗೆ 8 ವಿಕೆಟ್ ಪತನ – ಆರ್ಸಿಬಿಗೆ 6 ರನ್ ಗಳ ಜಯ

    46 ರನ್ ಗಳಿಗೆ 8 ವಿಕೆಟ್ ಪತನ – ಆರ್ಸಿಬಿಗೆ 6 ರನ್ ಗಳ ಜಯ

    ಚೆನ್ನೈ: ಕೊನೆಯ ಸ್ಲಾಗ್ ಓವರ್ ಗಳಲ್ಲಿ ಬೌಲರ್ ಗಳ ಅತ್ಯುತ್ತಮ ಪ್ರದರ್ಶನದಿಂದ ಆರ್ ಸಿಬಿ ಹೈದರಾಬಾದ್ ವಿರುದ್ಧ 6 ರನ್‍ಗಳಿಂದ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿದೆ.

    ಗೆಲ್ಲಲು 150 ರನ್ ಗಳ ಸವಾಲು ಪಡೆದ ಹೈದರಾಬಾದ್ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲನ್ನು ಅನುಭವಿಸಿತು. 96 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ 46 ರನ್ ಗಳಿಸುಷ್ಟರಲ್ಲಿ 8 ವಿಕೆಟ್ ಪತನಗೊಂಡಿದ್ದರಿಂದ ಈ ಪಂದ್ಯವನ್ನು ಸೋತಿದೆ.

    17ನೇ ಓವರ್ ಎಸೆದ ಶಹಬಾಜ್ ಜಾನಿ ಬೈರ್‌ಸ್ಟೋವ್, ಮನೀಷ್ ಪಾಂಡೆ, ಅಬ್ದುಲ್ ಸಮಾದ್ ಅವರನ್ನು ಔಟ್ ಮಾಡಿದ ಪರಿಣಾಮ ಪಂದ್ಯ ಬೆಂಗಳೂರಿನತ್ತ ತಿರುಗಿತು. 18ನೇ ಓವರಿನಲ್ಲಿ ಹರ್ಷಲ್ ಪಟೇಲ್ 7 ರನ್ ನೀಡಿದರೆ, 19ನೇ ಓವರಿನಲ್ಲಿ ಸಿರಾಜ್ 11 ರನ್ ನೀಡಿದರು. ಕೊನೆಯ ಓವರಿನಲ್ಲಿ 16 ರನ್ ಬೇಕಿತ್ತು. ಹರ್ಷಲ್ ಪಟೇಲ್ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದು ಜಯವನ್ನು ತಂದುಕೊಟ್ಟರು.

    13ನೇ ಓವರ್ ವರೆಗೆ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, 13ನೇ ಓವರ್ನಲ್ಲಿ ವಾರ್ನರ್ ವಿಕೆಟ್ ಒಪ್ಪಿಸಿದರು. ಬಳಿಕ ಸನ್‍ರೈಸರ್ಸ್ ದಾಂಡಿಗರು ಮೇಲಿಂದ ಮೇಲೆ ವಿಕೆಟ್ ಒಪ್ಪಿಸುವ ಮೂಲಕ ತಂಡದ ಸೋಲಿಗೆ ಕಾರಣರಾದರು.

    ಒಂದೇ ಓವರಿನಲ್ಲಿ 3 ವಿಕೆಟ್
    ಶಹಬಾಝ್ ಅಹ್ಮದ್ 3, ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಬಳಿಸುವ ಮೂಲಕ ಸನ್ ರೈಸರ್ಸ್ ದಾಂಡಿಗರನ್ನು ಕಟ್ಟಿಹಾಕಿದರು. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಗೆಲುವು ಸಾಧಿಸಲು ಸಾಧ್ಯವಾಯಿತು. 16ನೇ ಓವರ್ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಸನ್‍ರೈಸರ್ಸ್ ತಂಡದಲ್ಲಿ ನಡುಕ ಹುಟ್ಟಿಸಿದರು. ಬಳಿಕ ಮೇಲಿಂದ ಮೇಲೆ ವಿಕೆಟ್ ಉರುಳಿದವು.

    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗಲಿಲ್ಲ. ತಂಡದ ಮೊತ್ತ 19 ಇದ್ದಾಗ ಪಡಿಕ್ಕಲ್ ಔಟಾದರು. ಬಳಿಕ 6ನೇ ಓವರ್ ಆರಂಭದಲ್ಲಿ ತಂಡ 47 ರನ್‍ಗಳ ಮೊತ್ತವನ್ನು ಕಲೆ ಹಾಕಿದಾಗ ಶಹಬಾಝ್ ಅಹ್ಮದ್ ಔಟಾದರು. ಮೂರನೇ ವಿಕೆಟಿಗೆ ವಿರಾಟ್ ಕೊಹ್ಲಿ ಹಾಗೂ ಮ್ಯಾಕ್ಸ್ ವೆಲ್ ಉತ್ತಮ ಜೊತೆಯಾಟವಾಡಿ 38 ಎಸೆತಗಳಿಗೆ 44 ರನ್ ಸಿಡಿದರು.

    ಮ್ಯಾಕ್ಸ್ ವೆಲ್ ತಾಳ್ಮೆಯಾಟ
    ಗ್ಲೆನ್ ಮ್ಯಾಕ್ಸ್ ವೆಲ್ ವಿಕೆಟ್ ಕಾಯ್ದುಕೊಂಡು ಕೊನೆಯವರಿಗೂ ತಾಳ್ಮೆಯಿಂದ ಆಡುವ ಮೂಲಕ ತಂಡದ ರನ್ ಹೆಚ್ಚಿಸಲು ಶ್ರಮಿಸಿದರು. 59 ರನ್ (41 ಎಸೆತ, 5 ಬೌಂಡರಿ, 3 ಸಿಕ್ಸ್) ಚಚ್ಚಿ ತಂಡಕ್ಕೆ ಬೃಹತ್ ಮೊತ್ತದ ರನ್‍ಗಳ ಕೊಡುಗೆ ನೀಡಿದರು. ಆದರೆ 19ನೇ ಓವರ್ನ ಕೊನೇಯ ಬಾಲ್‍ನಲ್ಲಿ ಕ್ಯಾಚ್ ನೀಡಿದರು.

    ವಿಕೆಟ್ ಕಾಯ್ದುಕೊಂಡು ಆಟವಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ 33 ರನ್(29 ಎಸೆತ, 4 ಬೌಂಡರಿ) ಚಚ್ಚಿ 12ನೇ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು. ಎಬಿ ಡಿ’ವಿಲಿಯರ್ಸ್ ಸಹ 13.4ನೇ ಓವರ್ನಲ್ಲಿ ಕೇವಲ 1 ರನ್(5 ಬಾಲ್) ಹೊಡೆದು ಔಟಾದರು. ಈ ಮೂಲಕ ಆರ್ ಸಿಬಿ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತು.

    2ನೇ ಓವರ್ ಮುಕ್ತಾಯದ ವೇಳೆಗೆ ದೇವದತ್ ಪಡಿಕ್ಕಲ್ 11 ರನ್ (13 ಎಸೆತ, 2 ಬೌಂಡರಿ) ಹೊಡೆದು ಕ್ಯಾಚ್ ನೀಡಿದರು. ಶಹಬಾಝ್ ಅಹ್ಮದ್ ಸಹ 14 ರನ್ (10 ಎಸೆತ, 1 ಸಿಕ್ಸ್) ಗಳಿಸಿ 6ನೇ ಓವರ್ ಆರಂಭದಲ್ಲಿ ಔಟಾದರು. ವಾಶಿಂಗ್ಟನ್ ಸುಂದರ್ 8 ರನ್(11 ಎಸೆತ, 1 ಬೌಂಡರಿ) ಸಿಡಿಸಿ 15.5ನೇ ಓವರ್ನಲ್ಲಿ ಕ್ಯಾಚ್ ನೀಡಿದರು. ಡ್ಯಾನ್ ಕ್ರಿಸ್ಟಿಯನ್ 1 ರನ್(2 ಎಸೆತ) ಹೊಡೆದು 16.4ನೇ ಓವರ್ನಲ್ಲಿ ಔಟಾದರು. ಕೈಲ್ ಜೇಮಿಸನ್ 12ರನ್ (9 ಎಸೆತ, 4 ಬೌಂಡರಿ) ಸಿಡಿಸಿ ಕೊನೇಯ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು.

    ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್, 54 ರನ್(37 ಎಸೆತ, 7 ಬೌಂಡರಿ, 1 ಸಿಕ್ಸ್) ಚಚ್ಚುವ ಮೂಲಕ ತಂಡಕ್ಕೆ ಭರ್ಜರಿ ರನ್‍ಗಳ ಕೊಡುಗೆ ನೀಡಿದರು. ಆದರೆ 13.2ನೇ ಓವರ್ನಲ್ಲಿ ಕ್ಯಾಚ್ ನೀಡಿದರು. ಬಳಿಕ ಜಾನಿ ಬೈರ್ಸ್ಟೋವ್ ಸಹ 12 ರನ್(13 ಎಸೆತ, 1 ಬೌಂಡರಿ) ಹೊಡೆದು 16ನೇ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು. ಆರಂಭದಿಂದಲೂ ತಾಳ್ಮೆಯ ಆಟವಾಡಿದ್ದ ಮನೀಶ್ ಪಾಂಡೆ 38(39 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿ ಇದೇ ಓವರ್ನಲ್ಲಿ ಕ್ಯಾಚ್ ನೀಡಿದರು. ಅಬ್ದುಲ್ ಸಮದ್ ಸಹ 2 ಎಸೆತ ಎದುರಿಸಿ ರನ್ ಗಳಿಸದೆ ಔಟಾದರು.

    ವಿಜಯ್ ಶಂಕರ್ 3 ರನ್ (5 ಎಸೆತ) ಹೊಡೆದು 17ನೇ ಓವರ್ನ ಕೊನೇಯ ಬಾಲ್‍ನಲ್ಲಿ ಕ್ಯಾಚ್ ನೀಡಿದರು. ಜೇಸನ್ ಹೋಲ್ಡರ್ 4 ರನ್(5 ಎಸೆತ) ಬಾರಿಸಿ 18.3ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ರಶೀದ್ ಖಾನ್ 17 ರನ್(9 ಎಸೆತ, 1ಬೌಂಡರಿ, 1 ಸಿಕ್ಸ್) ಚಚ್ಚಿ ತಂಡವನ್ನು ಮೇಲೆತ್ತಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. 19 ಓವರ್ ಕೊನೆಯಲ್ಲಿ ರನ್ ಔಟ್ ಆದರು. ಶಹಬಾಝ್ ನದೀಮ್ ಸಹ ಇದೇ ಓವರ್ನಲ್ಲಿ ಕ್ಯಾಚ್ ನೀಡುವ ಮೂಲಕ ಸೊನ್ನೆಗೆ ಔಟಾದರು.

  • ಶತಕ ಸಿಡಿಸಿ ಸ್ಯಾಮ್ಸನ್ ದಾಖಲೆ – ಪಂಜಾಬ್‍ಗೆ ರೋಚಕ 4 ರನ್ ಗೆಲುವು

    ಶತಕ ಸಿಡಿಸಿ ಸ್ಯಾಮ್ಸನ್ ದಾಖಲೆ – ಪಂಜಾಬ್‍ಗೆ ರೋಚಕ 4 ರನ್ ಗೆಲುವು

    – ಎರಡು ತಂಡದ ನಾಯಕರ ಅತ್ಯುತ್ತಮ ಆಟ
    – ಕೊನೆಯ ಎಸೆತದಲ್ಲಿ ಸ್ಯಾಮ್ಸನ್ ಔಟ್

    ಮುಂಬೈ: ಸ್ಫೋಟಕ ಶತಕ ಸಿಡಿಸಿ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವಲ್ಲಿ ನಾಯಕ ಸಂಜು ಸ್ಯಾಮ್ಸನ್ ವಿಫಲರಾದ ಕಾರಣ ರಾಜಸ್ಥಾನ ವಿರುದ್ಧದ ಪಂದ್ಯವನ್ನು ಪಂಜಾಬ್ ಕಿಂಗ್ಸ್ 4 ರನ್‍ನಿಂದ ರೋಚಕವಾಗಿ ಗೆದ್ದುಕೊಂಡಿದೆ.

    ಗೆಲ್ಲಲು 222 ರನ್‍ಗಳ ಕಠಿಣ ಗುರಿಯನ್ನು ಪಡೆದಿದ್ದ ರಾಜಸ್ಥಾನ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟದಿಂದ ಗೆಲುವಿನ ಹತ್ತಿರಕ್ಕೆ ಬಂದಿತ್ತು. ಆದರೆ ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಿಕ್ಸರ್‌ಗೆ ಅಟ್ಟುವ ಪ್ರಯತ್ನದಲ್ಲಿ ಸ್ಯಾಮ್ಸನ್ ವಿಫಲರಾಗಿ ಔಟ್ ಆದರು. ಈ ಮೂಲಕ ರಾಜಸ್ಥಾನ ರಾಯಲ್ಸ್  7 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿ ಸೋಲನ್ನು ಅನುಭವಿಸಿತು.

    ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಸ್ಯಾಮ್ಸನ್ ಅವರು ದಿಟ್ಟ ಹೋರಾಟವನ್ನು ನಡೆಸಿದ್ದರು. ಬೆನ್ ಸ್ಟೋಕ್ಸ್ 0, ಜೋಸ್ ಬಟ್ಲರ್ 25 ರನ್, ಶಿವಂ ದುಬೆ 15 ರನ್ ಗಳಿಸಿ ಔಟಾದರು.

    12.4 ಓವರಿನಲ್ಲಿ ಶಿವಂ ದುಬೆ ಔಟಾದಾಗ ರಾಜಸ್ಥಾನ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 123 ಆಗಿತ್ತು. ನಂತರ ಜೊತೆಯಾದ ರಿಯಾನ್ ಪರಾಗ್ ಮತ್ತು ಸ್ಯಾಮ್ಸನ್ 23 ಎಸೆತಗಳಲ್ಲಿ 52 ರನ್ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಪರಾಗ್ 25 ರನ್(11 ಎಸೆತ, 1 ಬೌಂಡರಿ, 3 ಸಿಕ್ಸರ್) ಹೊಡೆದು ಕ್ಯಾಚ್ ನೀಡಿ ಔಟಾದರು.

    ಸ್ಯಾಮ್ಸನ್ ದಾಖಲೆ: ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಐಪಿಎಲ್‍ನಲ್ಲಿ ಸಂಜು ಸ್ಯಾಮ್ಸನ್ ದಾಖಲೆ ನಿರ್ಮಿಸಿದ್ದಾರೆ.  ಈ ಮೊದಲು ಸ್ಟೀವ್ ಸ್ಮಿತ್ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. ಸ್ಯಾಮ್ಸನ್ 54 ಎಸೆತದಲ್ಲಿ ಶತಕ ಸಿಡಿಸಿದರೆ ಅಂತಿಮವಾಗಿ 119 ರನ್(63 ಎಸೆತ, 12 ಬೌಂಡರಿ, 7 ಸಿಕ್ಸರ್) ಸಿಡಿಸಿ ಔಟಾದರು.

    ಸೋತಿದ್ದು ಹೇಗೆ?
    ಕೊನೆಯ 24 ಎಸೆತಗಳಲ್ಲಿ ರಾಜಸ್ಥಾನ ತಂಡಕ್ಕೆ 48 ರನ್ ಬೇಕಿತ್ತು. 17ನೇ ಓವರಿನಲ್ಲಿ 8 ರನ್, 18ನೇ ಓವರಿನಲ್ಲಿ 19 ರನ್, 19ನೇ ಓವರಿನಲ್ಲಿ 8 ರನ್ ಬಂತು. 20ನೇ ಓವರಿನ ಮೊದಲ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ನಂತರ ಎರಡು ಎಸೆತದಲ್ಲಿ 1, 1 ರನ್ ಬಂತು. ಅರ್ಷದೀಪ್ ಎಸೆದ 4ನೇ ಎಸೆತವನ್ನು ಸ್ಯಾಮ್ಸನ್ ಸಿಕ್ಸರ್‍ಗೆ ಅಟ್ಟಿದರು. 5ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಕೊನೆಯ ಎಸೆತವನ್ನು ಸಿಕ್ಸರ್‌ ಸಿಡಿಸುವ ಪ್ರಯತ್ನ ಮಾಡಿದರೂ ಬಾಲ್ ಹೂಡಾ ಕೈ ಸೇರಿತು. ಪಂಜಾಬ್ ತಂಡ ಪಂದ್ಯವನ್ನು ಗೆದ್ದುಕೊಂಡಿತು.

    ರಾಜಸ್ಥಾನ ರನ್ ಏರಿದ್ದು ಹೇಗೆ?
    50 ರನ್ – 31 ಎಸೆತ
    100 ರನ್ – 63 ಎಸೆತ
    150 ರನ್ – 89 ಎಸೆತ
    200 ರನ್ – 108 ಎಸೆತ
    217 ರನ್ – 120 ಎಸೆತ

    ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಪಂಜಾಬ್ 22 ರನ್ ಗಳಿಸಿದ್ದಾಗ ಮಯಾಂಕ್ ಅಗರ್‍ವಾಲ್ ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್ ಜೊತೆ ಸೇರಿದ ಕ್ರಿಸ್ ಗೇಲ್ 40 ರನ್(28 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.

    ಮೂರನೇ ವಿಕೆಟ್‍ಗೆ ಒಂದಾದ ರಾಹುಲ್ ಮತ್ತು ದೀಪಕ್ ಹೂಡಾ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಲು ಆರಂಭಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಚಚ್ಚಿದ ಈ ಜೋಡಿ ಕೇವಲ 47 ಎಸೆತದಲ್ಲಿ 105 ರನ್ ಪೇರಿಸಿತು.

    ಕ್ರೀಸ್‍ಗೇಲ್ ಔಟಾದಾಗ ತಂಡದ ಮೊತ್ತ 9.5 ಓವರ್‍ಗೆ 2 ವಿಕೆಟ್ ನಷ್ಟಕ್ಕೆ 89 ರನ್ ಆಗಿತ್ತು. 17.3 ಓವರ್‍ನಲ್ಲಿ ದೀಪಕ್ ಹೂಡಾ ಔಟಾದಾಗ ಪಂಜಾಬ್ ತಂಡದ ರನ್ 194 ಆಗಿತ್ತು. ದೀಪಕ್ ಹೂಡಾ 20 ಎಸೆತಗಳಿಗೆ ಅರ್ಧಶತಕ ಹೊಡೆದು ಅಂತಿಮವಾಗಿ 64 ರನ್(28 ಎಸೆತ, 4 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು.

    ಇತ್ತ ರಾಹುಲ್ 30 ಎಸೆತದಲ್ಲಿ ಅರ್ಧಶತಕ ಪೂರ್ಣಗೊಳಿಸಿದರೆ ಅಂತಿಮವಾಗಿ 91 ರನ್(50 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ತೆವಾಟಿಯಾ ಬೌಂಡರಿ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಔಟಾದರು. ದೀಪಕ್ ಹೂಡಾ ಮತ್ತು ಕೆಎಲ್ ರಾಹುಲ್ ಆರ್ಭಟವನ್ನು ನಿಯಂತ್ರಿಸಲು 8 ಮಂದಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 39 ಎಸೆತ
    100 ರನ್ – 65 ಎಸೆತ
    150 ರನ್ – 84 ಎಸೆತ
    200 ರನ್ – 107 ಎಸೆತ
    221 ರನ್ – 120 ಎಸೆತ

  • 47 ಎಸೆತಗಳಿಗೆ 105 ರನ್ – ರಾಹುಲ್, ಹೂಡಾ ಸ್ಫೋಟಕ ಆಟ

    47 ಎಸೆತಗಳಿಗೆ 105 ರನ್ – ರಾಹುಲ್, ಹೂಡಾ ಸ್ಫೋಟಕ ಆಟ

    – ರಾಜಸ್ಥಾನಕ್ಕೆ 222 ರನ್ ಗುರಿ

    ಮುಂಬೈ: ನಾಯಕ ಕೆಎಲ್ ರಾಹುಲ್ ಮತ್ತು ದೀಪಕ್ ಹೂಡಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದಾಗಿ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದೆ.

    ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಪಂಜಾಬ್ 22 ರನ್ ಗಳಿಸಿದ್ದಾಗ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ನಂತರ ರಾಹುಲ್ ಜೊತೆ ಸೇರಿದ ಕ್ರಿಸ್ ಗೇಲ್ 40 ರನ್(28 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು.

    ಮೂರನೇ ವಿಕೆಟ್‍ಗೆ ಒಂದಾದ ರಾಹುಲ್ ಮತ್ತು ದೀಪಕ್ ಹೂಡಾ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಲು ಆರಂಭಿಸಿದರು. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಚಚ್ಚಿದ ಈ ಜೋಡಿ ಕೇವಲ 47 ಎಸೆತದಲ್ಲಿ 105 ರನ್ ಪೇರಿಸಿತು.

    ಕ್ರೀಸ್‍ಗೇಲ್ ಔಟಾದಾಗ ತಂಡದ ಮೊತ್ತ 9.5 ಓವರ್‍ಗೆ 2 ವಿಕೆಟ್ ನಷ್ಟಕ್ಕೆ 89 ರನ್ ಆಗಿತ್ತು. 17.3 ಓವರ್‌ನಲ್ಲಿ ದೀಪಕ್ ಹೂಡಾ ಔಟಾದಾಗ ಪಂಜಾಬ್ ತಂಡದ ರನ್ 194 ಆಗಿತ್ತು. ದೀಪಕ್ ಹೂಡಾ 20 ಎಸೆತಗಳಿಗೆ ಅರ್ಧಶತಕ ಹೊಡೆದು ಅಂತಿಮವಾಗಿ 64 ರನ್(28 ಎಸೆತ, 4 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು.

    ಇತ್ತ ರಾಹುಲ್ 30 ಎಸೆತದಲ್ಲಿ ಅರ್ಧಶತಕ ಪೂರ್ಣಗೊಳಿಸಿದರೆ ಅಂತಿಮವಾಗಿ 91 ರನ್(50 ಎಸೆತ, 7 ಬೌಂಡರಿ, 5 ಸಿಕ್ಸರ್) ಹೊಡೆದು ತೆವಾಟಿಯಾ ಬೌಂಡರಿ ಬಳಿ ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಔಟಾದರು.

    ದೀಪಕ್ ಹೂಡಾ ಮತ್ತು ಕೆಎಲ್ ರಾಹುಲ್ ಆರ್ಭಟವನ್ನು ನಿಯಂತ್ರಿಸಲು 8 ಮಂದಿ ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 39 ಎಸೆತ
    100 ರನ್ – 65 ಎಸೆತ
    150 ರನ್ – 84 ಎಸೆತ
    200 ರನ್ – 107 ಎಸೆತ
    221 ರನ್ – 120 ಎಸೆತ

  • ಸೊನ್ನೆ ಸುತ್ತಿದ ಧೋನಿ, ಪೃಥ್ವಿ ಶಾ, ಧವನ್ ಮಿಂಚಿನಾಟ- ಡೆಲ್ಲಿ ಕ್ಯಾಪಿಟಲ್ಸ್‌ಗೆ 7 ವಿಕೆಟ್‍ಗಳ ಜಯ

    ಸೊನ್ನೆ ಸುತ್ತಿದ ಧೋನಿ, ಪೃಥ್ವಿ ಶಾ, ಧವನ್ ಮಿಂಚಿನಾಟ- ಡೆಲ್ಲಿ ಕ್ಯಾಪಿಟಲ್ಸ್‌ಗೆ 7 ವಿಕೆಟ್‍ಗಳ ಜಯ

    ಮುಂಬೈ: ಶಿಖರ್ ಧವನ್, ಪೃಥ್ವಿ ಶಾ ಮಿಂಚಿನ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸುಲಭವಾಗಿ ಜಯಗಳಿಸಿತು. ಆರಂಭಿಕ ಆಟಗಾರರು ಶತಕದ ಜೊತೆಯಾಟದ ಮೂಲಕ ಸ್ಫೋಟಕ ಆರಂಭ ನೀಡಿದರು.

    ಪೃಥ್ವಿ, ಧವನ್ ಸ್ಫೋಟಕ ಬ್ಯಾಟಿಂಗ್: ಡೆಲ್ಲಿ ಆರಂಭಿಕ ಆಟಗಾರರಾಗಿ ಇಳಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕಠಿಣ ಗುರಿಯನ್ನು ಸುಲಭವಾಗಿ ತಲುಪುವಂತಾಯಿತು. ಪೃಥ್ವಿ ಶಾ 38 ಬಾಲ್‍ಗೆ 72(3 ಸಿಕ್ಸ್, 9 ಬೌಂಡರಿ) ರನ್ ಸಿಡಿಸುವ ಮೂಲಕ ಮಿಂಚಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ 13.3 ನೇ ಓವರಿನಲ್ಲಿ ಮೊಯೀನ್ ಅಲಿಗೆ ಕ್ಯಾಚ್ ನೀಡಿದರು.

    ಶಿಖರ್ ಧವನ್ ಸಹ 54 ಬಾಲ್‍ಗೆ ಬರೋಬ್ಬರಿ 85(2 ಸಿಕ್ಸ್, 10 ಬೌಂಡರಿ) ರನ್ ಚಚ್ಚುವ ಮೂಲಕ ತಂಡವನ್ನು ಗೆಲುವಿನ ಬಾಗಿಲಿಗೆ ತಂದು ನಿಲ್ಲಿಸಿದರು. ಆದರೆ 16.3 ನೇ ಓವರಿನಲ್ಲಿ ಶಾರ್ದುಲ್ ಠಾಕೂರ್ ಬಾಲ್‍ಗೆ ಎಲ್‍ಬಿಡಬ್ಲ್ಯೂ ಔಟ್ ಆದರು. ಧವನ್ ಹಾಗೂ ಪೃಥ್ವಿ ಶಾ ಸ್ಫೋಟಕ ಜೊತೆಯಾಟವಾಡಿ 82 ಬಾಲ್‍ಗೆ 138 ರನ್ ಪೇರಿಸುವ ಮೂಲಕ ಚೆನ್ನೈ ತಂಡ ದಂಗಾಗುವಂತೆ ಮಾಡಿದರು.

    ನಾಯಕ ರಿಷಭ್ ಪಂತ್ ಔಟಾಗದೆ 12 ಬಾಲ್‍ಗೆ 15(2 ಬೌಂಡರಿ) ರನ್ ಸಿಡಿಸಿದರೆ, ಮಾರ್ಕಸ್ ಸ್ಟೋಯ್ನಿಸ್ 9 ಬಾಲ್‍ಗೆ 14(3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಶಿಮ್ರಾನ್ ಹೆಟ್ಮಾಯೆರ್ ಕ್ರೀಸ್‍ಗೆ ಬರುವಷ್ಟರಲ್ಲಿ ಪಂತ್ ತಂಡವನ್ನೇ ಗೆಲ್ಲಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ 3 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ವಿಜಯದ ನಗೆ ಬೀರಿತು.

    ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಚೆನ್ನೈ, 5 ಓವರ್ ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿ ಕೇವಲ 30ರನ್ ಮಾತ್ರ ಗಳಿಸಿತ್ತು. ಸುರೇಶ್ ರೈನಾ(54), ಮೊಯೀನ್ ಅಲಿ(36) ಹಾಗೂ ಸ್ಯಾಮ್ ಕರ್ರನ್(34) ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಹೆಚ್ಚು ಕಾಲ ನಿಲ್ಲಲಿಲ್ಲ. ಎರಡನೇ ಓವರ್ ಕೊನೆಯಲ್ಲಿ ಅವೇಶ್ ಖಾನ್ ಬಾಲಿಗೆ ಡುಪ್ಲೆಸಿಸ್ ಎಲ್‍ಬಿಡಬ್ಲ್ಯೂ ಆದರು. ಈ ಮೂಲಕ 3 ಬಾಲ್ ಎದುರಿಸಿ ಒಂದೂ ರನ್ ಗಳಿಸದೆ ಡಕ್ ಔಟ್ ಆದರು. ಗಾಯಕ್ವಾಡ್ ಸಹ 8 ಬಾಲ್ ಎದುರಿಸಿ 5 (1 ಬೌಂಡರಿ) ರನ್ ಗಳಿಸಿ ವಿಕೆಟ್ 2ನೇ ಓವರ್ ಆರಂಭದಲ್ಲಿ ಶಿಖರ್ ಧವನ್‍ಗೆ ಕ್ಯಾಚ್ ನೀಡಿದರು.

    ಮೊಯೀನ್ ಅಲಿ, ರೈನಾ ಮೋಡಿ: ನಂತರ ಆಗಮಿಸಿದ ಮೊಯೀನ್ ಅಲಿ 24 ಬಾಲ್‍ಗೆ 36 (2 ಸಿಕ್ಸ್, 4 ಬೌಂಡರಿ)ರನ್ ಸಿಡಿಸಿದರು. ಈ ಮೂಲಕ ಸುರೇಶ್ ರೈನಾಗೆ ಸಾಥ್ ನೀಡಿದರು. ಆದರೆ 8.3 ನೇ ಓವರ್‍ನಲ್ಲಿ ಶಿಖರ್ ಧವನ್‍ಗೆ ಕ್ಯಾಚ್ ನೀಡಿದರು. ಸುರೇಶ್ ರೈನಾ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಅರ್ಧ ಶತಕ ಸಿಡಿಸಿದರು. 36 ಬಾಲ್‍ಗೆ 54(4 ಸಿಕ್ಸ್, 4 ಬೌಂಡಿ) ರನ್ ಚಚ್ಚುವ ಮೂಲಕ ಮಂಕಾಗಿದ್ದ ತಂಡವನ್ನು ಮತ್ತೆ ಪುಟಿದೇಳುವಂತೆ ಮಾಡಿದರು. ಆದರೆ 15ನೇ ಓವರ್ ಆರಂಭದಲ್ಲಿ ರನ್ ಔಟ್ ಆಗುವ ಮೂಲಕ ನಿರಾಸೆಯನ್ನುಂಟು ಮಾಡಿದರು. ಇಬ್ಬರ ಜೊತೆಯಾಟದಲ್ಲಿ 38 ಬಾಲ್‍ಗೆ 53 ರನ್ ಸಿಡಿಸುವ ಮೂಲಕ ಉತ್ತಮ ಜೊತೆಯಾಟದ ಪ್ರದರ್ಶನ ನೀಡಿದರು.

    ಸ್ಯಾಮ್ ಕರ್ರನ್ 15 ಬಾಲ್‍ಗೆ 34(2 ಸಿಕ್ಸ್, 4 ಬೌಂಡರಿ) ರನ್ ಸಿಡಿಸುವ ಮೂಲಕ ಮಿಂಚಿನಾಟ ಆಡಿದರು. ಆದರೆ ಕೊನೆಯ ಬಾಲ್‍ಗೆ ಕ್ಲೀನ್ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಅಂಬಾಟಿ ರಾಯುಡು ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ರೈನಾಗೆ ಸಾಥ್ ನೀಡಿದರು. 16 ಬಾಲ್‍ಗೆ 23(2 ಸಿಕ್ಸ್, 1 ಬೌಂಡರಿ) ಗಳಿಸಿ ಕ್ಯಾಚ್ ನೀಡಿದರು. ರಾಯುಡು ಹಾಗೂ ಸುರೇಶ್ ರೈನಾ ಜೊತೆಯಾಟದಲ್ಲಿ 33 ಬಾಲ್ ಗೆ 63 ರನ್ ಸಿಡಿಸಿ ಮಿಂಚಿದರು.

    15.3ನೇ ಓವರಿನಲ್ಲ ನಾಯಕ ಎಂ.ಎಸ್.ಧೋನಿ 2 ಬಾಲ್ ಎದುರಿಸಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದರು.