– ಸ್ಲೆಡ್ಜ್ ಮಾಡಿ ಟೀಕೆಗೆ ಗುರಿಯಾದ ಕೊಹ್ಲಿ
ಅಬುಧಾಬಿ: ಸೂರ್ಯಕುಮಾರ್ ಯಾದವ್ ಐಪಿಎಲ್ 2020ರ ಆವೃತ್ತಿಯಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಹೆಸರು. ಇತ್ತ ಇದೇ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಆಯ್ಕೆ ಮಾಡದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಸ್ಲೆಡ್ಜಿಂಗ್ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಕೊಹ್ಲಿ ಸ್ಲೆಡ್ಜಿಂಗ್ ಮಾಡುತ್ತಿದಂತೆ ಸೂರ್ಯಕುಮಾರ್ ಯಾದವ್ ಅವರ ಹಳೆಯ ಟ್ವೀಟ್‍ಗಳನ್ನು ಬೆಳಕಿಗೆ ತರುತ್ತಿರುವ ಅಭಿಮಾನಿಗಳು ಟ್ವೀಟ್‍ಗಳನ್ನು ವೈರಲ್ ಮಾಡುತ್ತಿದ್ದಾರೆ. 2016 ರಿಂದ ಸೂರ್ಯಕುಮಾರ್ ವಿರಾಟ್ ಕೊಹ್ಲಿ ಕುರಿತು ಟ್ವೀಟ್ ಮಾಡುತ್ತಿದ್ದಾರೆ. ನಂಬರ್ 3ನೇ ಕ್ರಮಾಂಕದಲ್ಲಿ ಕ್ರಿಕೆಟ್ ದೇವರು ಭಾರತ ತಂಡ ಸಂಕಷ್ಟದಲ್ಲಿದ್ದರೆ ಪ್ರತಿ ಬಾರಿ ಕಾಪಾಡುತ್ತಾರೆ ಎಂದು 2016 ಮಾರ್ಚ್ 20 ರಂದು ಟ್ವೀಟ್ ಮಾಡಿದ್ದರು. ಇತ್ತ 2019ರ ಡಿಸೆಂಬರ್ 5 ರಂದು ಮತ್ತೊಂದು ಟ್ವೀಟ್ ಮಾಡಿದ್ದ ಅವರು, ವಿಶ್ವ ಕ್ರಿಕೆಟ್‍ನಲ್ಲಿ ಕೊಹ್ಲಿ ಅತ್ಯುನ್ನತ ಸ್ಥಾನವನ್ನು ತಲುಪಿದ್ದಾರೆ ಎಂದು ಬರೆದುಕೊಂಡಿದ್ದರು.
ಕೊಹ್ಲಿ ಪರ ಇಷ್ಟು ಅಭಿಮಾನವನ್ನು ಹೊಂದಿರುವ ಯುವ ಆಟಗಾರನ ವಿರುದ್ಧ ಕೊಹ್ಲಿ ಸ್ಲೆಡ್ಜಿಂಗ್ ಮಾಡಿರುವುದು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ವಿರಾಟ್ ಕೊಹ್ಲಿರನ್ನು ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಕೆ ಮಾಡಿ ಟೀಕೆ ಮಾಡಿದ್ದಾರೆ. ಯಾವುದೇ ಕಾರಣವಿಲ್ಲದೇ ಕೊಹ್ಲಿ ಏಕೆ ಸೂರ್ಯಕುಮಾರ್ ಯಾದವ್ ಮೇಲೆ ಗರಂ ಆಗಿದ್ದರು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

ನಡೆದಿದ್ದೇನು?
ಅಬುಧಾಬಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಬೆಂಗಳೂರು, ಮುಂಬೈ ನಡುವಿನ ಪಂದ್ಯದಲ್ಲಿ ಘಟನೆ ನಡೆದಿದೆ. ಪ್ಲೇ ಆಫ್ ಸೇರುವ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ ಪಡೆ ನಿರೀಕ್ಷೆ ಮಟ್ಟದಲ್ಲಿ ಮಿಂಚಲು ವಿಫಲವಾಗಿತ್ತು. ಪಂದ್ಯದಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣವಾದ ಸೂರ್ಯಕುಮಾರ್ ಯಾದವ್, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ 79 ರನ್ ಗಳ ಕಾಣಿಕೆ ನೀಡಿದ್ದರು.
ಮುಂಬೈ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್ ಯಾದವ್, ಬೆಂಗಳೂರು ಬೌಲರ್ ಗಳನ್ನು ಸುಲಭಗಾಗಿ ಎದುರಿಸುತ್ತಿದ್ದರು. ಆದರೆ ಇತ್ತ ತಂಡದ ಬೌಲರ್ ಗಳು ಎದುರಾಳಿ ತಂಡದ ವಿಕೆಟ್ ಪಡೆಯಲು ವಿಫಲರಾಗಿದ್ದು, ಕೊಹ್ಲಿ ಅವರಿಗೆ ಸೂರ್ಯಕುಮಾರ್ ಅವರನ್ನು ಪ್ರಚೋದನೆ ಮಾಡುವಂತೆ ಮಾಡಿತ್ತು. 13ನೇ ಓವರಿನ ಅಂತಿಮ ಎಸೆತದ ಚೆಂಡನ್ನು ಎಕ್ಸ್ಟ್ರಾ ಕವರ್ ನತ್ತ ಸೂರ್ಯಕುಮಾರ್ ಯಾದವ್ ಬಾರಿಸಿದ್ದರು. ಈ ಚೆಂಡನ್ನು ಕೊಹ್ಲಿ ತಡೆದಿದ್ದರು. ಓವರ್ ಮುಕ್ತಾಯವಾದ ಕಾರಣ ಸೂರ್ಯಕುಮಾರ್ ಯಾದವ್ ಕ್ರಿಸ್‍ನಲ್ಲೇ ಕೊಹ್ಲಿರನ್ನು ನೋಡುತ್ತಾ ನಿಂತರು. ಕೂಡಲೇ ಚೆಂಡನ್ನು ಪಡೆದ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬಳಿ ಗರಂ ಆಗಿ ಹೋಗಿ ನಿಂತರು. ಇತ್ತ ಸೂರ್ಯಕುಮಾರ್ ಸಮಯದ ಬಳಿಕ ನಾನ್ ಸ್ಟ್ರೈಕರ್ ಬ್ಯಾಟ್ಸ್ ಮನ್ ಬಳಿಗೆ ತೆರಳಿದ್ದರು. ಯಾದವ್ ಅಲ್ಲಿಂದ ಮುಂದೆ ಸಾಗಿದರೆ ಕೊಹ್ಲಿ ಮಾತ್ರ ಕೆಲ ಸಮಯ ಆತನನ್ನೇ ನೋಡುತ್ತಾ ನಿಂತರು.
ಇತ್ತ ಪಂದ್ಯದಲ್ಲಿ 43 ಎಸೆತಗಳಲ್ಲಿ ಮೂರು ಸಿಕ್ಸರ್, 10 ಬೌಂಡರಿಗಳೊಂದಿಗೆ ಸೂರ್ಯಕುಮಾರ್ ಯಾದವ್ 79 ರನ್ ಗಳಿಸಿದ್ದಾರೆ. ಟೀಂ ಇಂಡಿಯಾಗೆ ಆಯ್ಕೆಯಾಗದೆ ಹೋದರೂ ಸೂರ್ಯಕುಮಾರ್ ತಮ್ಮದೇ ಶೈಲಿ ಆಯ್ಕೆ ಸಮಿತಿಗೆ ಸಂದೇಶ ರವಾನಿಸಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿರುವ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ದೃಢವಾಗಿ, ತಾಳ್ಮೆಯಿಂದ ಇರುವಂತೆ ತಿಳಿಸಿದ್ದಾರೆ.