Tag: ಐಪಿಎಲ್ 2020

  • ಯಶಸ್ಸನ್ನು ತಲೆಗೇರಿಸಿಕೊಳ್ಳಬೇಡ- ಪಡಿಕ್ಕಲ್‍ಗೆ ಕೊಹ್ಲಿ ಸಲಹೆ

    ಯಶಸ್ಸನ್ನು ತಲೆಗೇರಿಸಿಕೊಳ್ಳಬೇಡ- ಪಡಿಕ್ಕಲ್‍ಗೆ ಕೊಹ್ಲಿ ಸಲಹೆ

    ಮುಂಬೈ: ಯಶಸ್ಸನ್ನು ಯಾವುದೇ ಕಾರಣಕ್ಕೂ ತಲೆಗೇರಿಸಿಕೊಳ್ಳದೆ ಶ್ರಮವಹಿಸಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅವರು ಸಲಹೆ ನೀಡಿದ್ದರು ಎಂದು ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ತಿಳಿಸಿದ್ದಾರೆ.

    ಐಪಿಎಲ್ 2020ರ ಆವೃತ್ತಿ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿರುವ ಪಡಿಕ್ಕಲ್, ಮಾಧ್ಯಮಗಳೊಂದಿಗೆ ಮಾತನಾಡಿ ಇದು ಆರಂಭ ಮಾತ್ರ. ನನ್ನ ಆಟ ಮತ್ತಷ್ಟು ಸುಧಾರಿಸಿಕೊಳ್ಳಬೇಕಿದೆ. ಇನ್ನಿಂಗ್ಸ್ ಆರಂಭ ಮಾಡುವ ವಿಚಾರದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಯಶಸ್ಸನ್ನು ತಲೆಗೇರಿಕೊಳ್ಳದೆ ಶ್ರಮವಹಿಸಿಬೇಕು. ದೇಶಕ್ಕಾಗಿ ಆಡಬೇಕು ಎಂಬ ಅಲೋಚನೆಗಳನ್ನು ಬಿಟ್ಟು ಕೇವಲ ನಿನ್ನ ಆಟವನ್ನು ಎಂಜಾಯ್ ಮಾಡುತ್ತಾ ಮುಂದೇ ಸಾಗು. ಎಲ್ಲವೂ ನಡೆಯಬೇಕಾದ ಸಂದರ್ಭದಲ್ಲಿ ನಡೆಯುತ್ತದೆ ಎಂದು ಸಲಹೆ ನೀಡಿದ್ದರು ಎಂದು ಪಡಿಕ್ಕಲ್ ತಿಳಿಸಿದ್ದಾರೆ.

    ಹಿರಿಯ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ. ಸಂಕಷ್ಟದ ಸಂದರ್ಭಗಳನ್ನು ಎದುರಿಸುವ ವಿಚಾರದಲ್ಲಿ ನನ್ನ ದೃಷ್ಟಿಕೋನವೂ ಬದಲಾಗಿದೆ. ಹಿರಿಯ ಆಟಗಾರರು ಪಂದ್ಯದ ಫಲಿತಾಂಶದ ಬಗ್ಗೆ ಸಂಬಂಧವಿಲ್ಲದೇ ಸ್ಥಿರ ಪ್ರದರ್ಶನ ನೀಡುವತ್ತ ಗಮನ ನೀಡುತ್ತಾರೆ. ಗೆಲುವು ಪಡೆದರೆ ಹೆಮ್ಮೆ ಪಟ್ಟು ಹಿಗ್ಗಿ ಹೋಗುವುದಿಲ್ಲ, ಸೋತರೆ ಕುಗ್ಗುವುದಿಲ್ಲ. ಇದು ನನಗೆ ಪ್ರೇರಣೆಯಾಗಿದೆ ಎಂದು ಪಡಿಕ್ಕಲ್ ಹೇಳಿದ್ದಾರೆ.

    2020ರ ಆವೃತ್ತಿಯಲ್ಲಿ ಪ್ಲೇ ಆಫ್ ಪ್ರವೇಶಿಸಿದ ಆರ್ ಸಿಬಿ ತಂಡದಲ್ಲಿ ಪಡಿಕ್ಕಲ್ ಹೆಚ್ಚು ಗಮನ ಸೆಳೆದರು. 15 ಪಂದ್ಯಗಳನ್ನು ಟೂರ್ನಿಯಲ್ಲಿ ಆಡಿರುವ ಯುವ ಆಟಗಾರ 473 ರನ್ಸ್ ಗಳಿಸಿದ್ದು, ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅತ್ಯಧಿಕ ರನ್ ಗಳಿಸಿದ ಶ್ರೇಯಸ್ ಅಯ್ಯರ್ ದಾಖಲೆಯನ್ನು ಅಳಿಸಿ ಹಾಕಿದ್ದರು.

  • ಕೊಹ್ಲಿ ಇಲ್ಲದ ಟೆಸ್ಟ್ ಟೂರ್ನಿಯಲ್ಲಿ ಆಸೀಸ್ ಸುಲಭ ಜಯ ಪಡೆಯಲಿದೆ- ಮೈಕಲ್ ವಾನ್ ಭವಿಷ್ಯ

    ಕೊಹ್ಲಿ ಇಲ್ಲದ ಟೆಸ್ಟ್ ಟೂರ್ನಿಯಲ್ಲಿ ಆಸೀಸ್ ಸುಲಭ ಜಯ ಪಡೆಯಲಿದೆ- ಮೈಕಲ್ ವಾನ್ ಭವಿಷ್ಯ

    ಮುಂಬೈ: ಐಪಿಎಲ್ 2020ರ ಟೂರ್ನಿ ಮುಕ್ತಾಯದೊಂದಿಗೆ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಗೆ ಪ್ರವಾಸ ಕೈಗೊಂಡಿದ್ದಾರೆ. ಕೊರೊನಾ ಬಳಿಕ ಟೀಂ ಇಂಡಿಯಾ, ಆಸೀಸ್ ವಿರುದ್ಧ ತನ್ನ ಮೊದಲ ಅಂತಾರಾಷ್ಟ್ರೀಯ ಟೂರ್ನಿಯನ್ನು ಆಡುತ್ತಿದೆ.

    ಆಸ್ಟ್ರೇಲಿಯಾ ನೆಲದಲ್ಲಿ ಮೂರು ತಿಂಗಳ ಕಾಲ ಟೀಂ ಇಂಡಿಯಾ ಏಕದಿನ, ಟಿ20, ಟೆಸ್ಟ್ ಟೂರ್ನಿಗಳನ್ನು ಆಡಲಿದ್ದು, ಇದರಲ್ಲಿ ಒಂದು ಡೇ ಅಂಡ್ ನೈಟ್ ಪಂದ್ಯವೂ ಸೇರಿದೆ. ಆದರೆ ಟೆಸ್ಟ್ ಟೂರ್ನಿಯ ಅಂತಿಮ ಮೂರು ಪಂದ್ಯಗಳಿಂದ ಕೊಹ್ಲಿ ದೂರವಾಗಿದ್ದು, ಕೌಟುಂಬಿಕ ಕಾರಣದಿಂದ ಕೊಹ್ಲಿ ಭಾರತಕ್ಕೆ ವಾಪಸ್ ಆಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್, ಕೊಹ್ಲಿ ಇಲ್ಲದ ಭಾರತದ ತಂಡದ ವಿರುದ್ಧ ಆಸ್ಟ್ರೇಲಿಯಾ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ಹೇಳಿದ್ದಾರೆ.

    ವಿರಾಟ್ ಕೊಹ್ಲಿ ಇಲ್ಲದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಗೆಲ್ಲುವುದು ಕಷ್ಟ. ಕೊಹ್ಲಿ ತನ್ನ ಮೊದಲ ಮಗುವಿಗಾಗಿ ತೆಗೆದುಕೊಂಡ ನಿರ್ಣಯ ಉತ್ತಮವಾಗಿದೆ. ಆದರೆ ಇದು ಆಸೀಸ್ ತಂಡಕ್ಕೆ ವರದಾನವಾಗುವ ಸಾಧ್ಯತೆ ಇದೆ. ನನ್ನ ಪ್ರಕಾರ ಆಸೀಸ್ ಟೆಸ್ಟ್ ಟೂರ್ನಿಯಲ್ಲಿ ಸುಲಭ ಜಯ ಪಡೆಯಲಿದೆ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಉಳಿದಂತೆ ಬಿಸಿಸಿಐ ಸದ್ಯ ರೋಹಿತ್ ಶರ್ಮಾ ಅವರಿಗೆ ಸೀಮಿತ ಓವರ್ ಗಳ ಕ್ರಿಕೆಟ್ ಟೂರ್ನಿಯಿಂದ ಸಂಪೂರ್ಣವಾಗಿ ವಿಶ್ರಾಂತಿ ನೀಡಿದ್ದು, ಟೆಸ್ಟ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದ ಬಳಿಕ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

    ಇತ್ತ ಐಪಿಎಲ್ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಶುಭಕೋರಿದ್ದ ಮೈಕಲ್ ವಾನ್, ರೋಹಿತ್ ಶರ್ಮಾರನ್ನು ಹಾಡಿಹೊಗಳಿದ್ದರು. ಅಲ್ಲದೇ ಟೀಂ ಇಂಡಿಯಾ ಟಿ20 ನಾಯಕನನ್ನಾಗಿ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದರು.

  • ಐಪಿಎಲ್ 2020ರ ತಂಡ ಪ್ರಕಟಿಸಿದ ಸೆಹ್ವಾಗ್- ಕನ್ನಡಿಗರಿಗೆ ಆರಂಭಿಕ ಸ್ಥಾನ

    ಐಪಿಎಲ್ 2020ರ ತಂಡ ಪ್ರಕಟಿಸಿದ ಸೆಹ್ವಾಗ್- ಕನ್ನಡಿಗರಿಗೆ ಆರಂಭಿಕ ಸ್ಥಾನ

    ಮುಂಬೈ: ಟೀ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಐಪಿಎಲ್ 2020ರ ತಂಡವನ್ನು ಪ್ರಕಟಿಸಿದ್ದು, ಈ ಆವೃತ್ತಿಯಲ್ಲಿ ಕ್ರಿಕೆಟಿಗರು ತೋರಿದ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಿದ್ದಾರೆ. ಪ್ರಮುಖವಾಗಿ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ದೇವ್‍ದತ್ ಪಡಿಕ್ಕಲ್ ಅವರಿಗೆ ಆರಂಭಿಕ ಆಟಗಾರರ ಸ್ಥಾನವನ್ನು ನೀಡಿದ್ದಾರೆ.

    ಐಪಿಎಲ್ 2020ರ ಆವೃತ್ತಿಯಲ್ಲಿ ಕೆಎಲ್ ರಾಹುಲ್ 670 ರನ್ ಗಳೊಂದಿಗೆ ಆರೆಂಜ್ ಕ್ಯಾಪ್ ಪಡೆದಿದ್ದು, ಇತ್ತ ಯುವ ಆಟಗಾರ ಪಡಿಕ್ಕಲ್ 473 ರನ್ ಗಳೊಂದಿಗೆ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ತಂಡದ ಒನ್ ಡೌನ್ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದ್ದು, ಕಳೆದ ಮೂರು ಆವೃತ್ತಿಗಳಲ್ಲಿ ಸೂರ್ಯಕುಮಾರ್ ಯಾದವ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

    ಸೆಹ್ವಾಗ್ ತಂಡದ ನಾಯಕತ್ವ ಜವಾಬ್ದಾರಿಯನ್ನು ಆರ್ ಸಿಬಿ ಕ್ಯಾಪ್ಟನ್ ಕೊಹ್ಲಿಗೆ ನೀಡಿದ್ದು, ಬ್ಯಾಟಿಂಗ್ ಕ್ರಮಾಂಕದಲ್ಲಿ 4ನೇ ಸ್ಥಾನ ನೀಡಿದ್ದಾರೆ. 5ನೇ ಸ್ಥಾನದಲ್ಲಿ ಹೈದರಾಬಾದ್ ತಂಡದ ನಾಯಕ ವಾರ್ನರ್ ಅವರನ್ನು ಆಯ್ಕೆ ಮಾಡಲಾಗಿದೆ. ತಂಡದಲ್ಲಿ ಕೊಹ್ಲಿ ಆರಂಭಿಕ ಹಾಗೂ ಮಾಧ್ಯಮ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯವಿರುವ ಕಾರಣ ನಾಯಕತ್ವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ. ಉಳಿದಂತೆ 6ನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಅವರಿಗೆ ಸ್ಥಾನ ನೀಡಲಾಗಿದೆ. 6ನೇ ಸ್ಥಾನಕ್ಕೆ ಪೋಲಾರ್ಡ್, ಪಾಂಡ್ಯ ರಂತಹ ಆಟಗಾರರಿದ್ದರೂ, ಡೆತ್ ಓವರ್ ಗಳಲ್ಲಿ ಈ ಆವೃತ್ತಿಯಲ್ಲಿ ಡಿವಿಲಿಯರ್ಸ್ ಹೆಚ್ಚು ರನ್ ಗಳಿಸಿದ ಕಾರಣ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.

    ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಗಳಾಗಿ ರಬಡಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿರುವ ಸೆಹ್ವಾಗ್, ಚಹಲ್, ರಶೀದ್ ಖಾನ್‍ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಿದ್ದಾರೆ. ಇನ್ನು ಇಶಾನ್ ಕಿಶಾನ್, ಜೋಫ್ರಾ ಅರ್ಚರ್ ಅವರನ್ನು 12 ಮತ್ತು 13ನೇ ಆಟಗಾರರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸೆಹ್ವಾಗ್ ತಂಡದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಜೋಫ್ರಾ ಅರ್ಚರ್ ಗೆ 13ನೇ ಸ್ಥಾನ ನೀಡಿದ್ದು, ಚೆನ್ನೈ, ಕೋಲ್ಕತ್ತಾ ತಂಡದ ಯಾವುದೇ ಆಟಗಾರನಿಗೆ ಸೆಹ್ವಾಗ್ ತಂಡದಲ್ಲಿ ಸ್ಥಾನ ಲಭಿಸಿಲ್ಲ.

  • ವಿರುಷ್ಕಾರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪರದಾಡಿದ ಆರ್‌ಸಿಬಿ ಫೋಟೋಗ್ರಾಫರ್

    ವಿರುಷ್ಕಾರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪರದಾಡಿದ ಆರ್‌ಸಿಬಿ ಫೋಟೋಗ್ರಾಫರ್

    ಅಬುಧಾಬಿ: 2020ರ ಐಪಿಎಲ್ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರ ನಡೆದಿದೆ. ಇದರ ನಡುವೆಯೇ ನವೆಂಬರ್ 5 ರಂದು ನಾಯಕ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಪರದಾಡಿದ ಸಂಗತಿಯನ್ನು ಸ್ವತಃ ತಂಡದ ಫೋಟೋಗ್ರಾಫರ್ ಬಿಚ್ಚಿಟ್ಟಿದ್ದಾರೆ.

    ಸತತ 4 ಸೋಲುಗಳ ನಡುವೆಯೂ ಪ್ಲೇ ಆಫ್ ಪ್ರವೇಶ ಮಾಡಿದ್ದು ಬೆಂಗಳೂರು ತಂಡದ ಸಾಧನೆಯಾಗಿದೆ. ಆದರೆ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ನಾಯಕ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪಾರ್ಟಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ಲಿಕ್ಕಿಸಲಾಗಿದ್ದ ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ ಅವರ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಉತ್ತಮ ಫೋಟೋಗಳನ್ನು ಸೆರೆ ಹಿಡಿದ ಫೋಟೋಗ್ರಾಫರ್ ಮಾತ್ರ ವಿರುಷ್ಕಾ ಜೋಡಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಸಮಸ್ಯೆ ಎದುರಿಸಿದ್ದರು.

    ಈ ಕುರಿತಂತೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿರುವ ಆರ್‌ಸಿಬಿ ತಂಡದ ಫೋಟೋಗ್ರಾಫರ್ ಮೋಹಿತ್ ಕಶ್ಯಪ್, ವಿಶೇಷ ಫೋಟೋವೊಂದರನ್ನು ಹಂಚಿಕೊಂಡು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಚೆನ್ನಾಗಿರೋ ನಿನ್ನ ಫೋಟೋಗಳು ಏಕಿಲ್ಲ ಎಂದು ಜನರು ಪ್ರಶ್ನಿಸಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಒಂದೇ ಉತ್ತರ ನೀಡುತ್ತೇನೆ. ಯಾರೂ ನನ್ನ ಉತ್ತಮ ಫೋಟೋಗಳನ್ನು ಸೆರೆಹಿಡಿಯುವುದಿಲ್ಲ ಎಂದು ಹೇಳುತ್ತೇನೆ. ಇದು ಮತ್ತೊಮ್ಮೆ ಸಾಬೀತಾಗಿದೆ. ಈ ಫೋಟೋ ಸಂಬಂಧಿಸಿದ ರಿಪೇರಿ ಕೆಲಸವನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಮೋಹಿತ್ ಕಶ್ಯಪ್ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ಕ್ಯಾಮೆರಾ ಫ್ಲಾಶ್ ಲೈಟ್‍ಯಿಂದ ಯಾರ ಮುಖವೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಈ ಫೋಟೋಗೆ ವರ್ಕ್ ಮಾಡಿರುವ ಕಶ್ಯಪ್, ಮುಖ ಕಾಣುವಂತೆ ಮಾಡಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ 32ನೇ ಹುಟ್ಟುಹಬ್ಬವನ್ನು ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಹಾಗೂ ಆರ್‌ಸಿಬಿ ಆಟಗಾರರು, ಸಿಬ್ಬಂದಿಯೊಂದಿಗೆ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿರನ್ನು ಬಿಗಿದಪ್ಪಿಕೊಂಡು ಕಿಸ್ ಮಾಡಿರುವ ಅನುಷ್ಕಾ ಅವರ ರೊಮ್ಯಾಟಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

     

    View this post on Instagram

     

    ❤️

    A post shared by AnushkaSharma1588 (@anushkasharma) on

  • 13 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

    13 ವರ್ಷಗಳಾದ್ರೂ ಕಪ್ ಗೆಲ್ಲದ ಆರ್‌ಸಿಬಿ – ಕಾರಣ ಬಿಚ್ಚಿಟ್ಟ ಡರೇನ್ ಸ್ಯಾಮಿ

    ಅಬುಧಾಬಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೈಫಲ್ಯ ಅನುಭವಿಸಿದ್ದು, 2020ರ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿದೆ. ಆರ್‌ಸಿಬಿ ತಂಡ ಐಪಿಎಲ್ ಆರಂಭವಾಗಿ 13 ವರ್ಷಗಳು ಕಳೆದರೂ ಕಪ್ ಗೆಲ್ಲದ ಹಿಂದಿನ ಕಾರಣವನ್ನು ವೆಸ್ಟ್ ಇಂಡೀಸ್ ಆಟಗಾರ ಡರೇನ್ ಸ್ಯಾಮಿ ಬಿಚ್ಚಿಟ್ಟಿದ್ದಾರೆ.

    ಬಹುವರ್ಷಗಳ ಬಳಿಕ ಆರ್‌ಸಿಬಿ ಪ್ಲೇ ಆಫ್‍ಗೆ ಪ್ರವೇಶ ಪಡೆದರೂ ಬೆಂಗಳೂರು ಆಟಗಾರರ ಕಪ್ ಗೆಲ್ಲುವ ಕನಸು ಈಡೇರಲಿಲ್ಲ. ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‍ರೈಸರ್ಸ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನಿರಸ ಪ್ರದರ್ಶನ ತೋರಿದ ಆರ್‌ಸಿಬಿ ಸೋಲುಂಡಿತ್ತು.

    ಐಪಿಎಲ್ ಟೂರ್ನಿಗಳಲ್ಲಿ ಬೆಂಗಳೂರು ತಂಡ ಪ್ರದರ್ಶನವನ್ನು ಗಮನಿಸಿದರೆ ತಂಡದ ಬೌಲಿಂಗ್ ಪಡೆಯೇ ಹೆಚ್ಚು ಸಮಸ್ಯೆಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡರೇನ್ ಸ್ಯಾಮಿ, ಬ್ಯಾಟ್ಸ್ ಮನ್‍ಗಳು ಪಂದ್ಯಗಳನ್ನು ಗೆಲ್ಲಿಸಿ ಕೊಡುತ್ತಾರೆ. ಆದರೆ ಬೌಲಿಂಗ್ ಪಡೆ ಟೂರ್ನಿಯನ್ನೇ ಗೆಲ್ಲಿಸುತ್ತದೆ. ಇದು ಬದಲಾವಣೆಯಾಗದ ಹೊರತು ಕಪ್ ಗೆಲ್ಲಲು ಆಗಲ್ಲ ಎಂದು ಟ್ವೀಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ವರ್ಷದ ಆರ್‌ಸಿಬಿ ಬೌಲಿಂಗ್ ಪ್ರದರ್ಶನವನ್ನು ಗಮನಿಸುವುದಾದರೆ, ಯಜುವೇಂದ್ರ ಚಹಲ್ ಮಾತ್ರ ಸ್ಥಿರ ಪ್ರದರ್ಶನ ನೀಡಿದ್ದಾರೆ. ಪ್ರತಿ ಪಂದ್ಯದಲ್ಲೂ ತಂಡಕ್ಕಾಗಿ ವಿಕೆಟ್ ಪಡೆದ ಚಹಲ್, ಆವೃತ್ತಿಯ ಟಾಪ್ ವಿಕೆಟ್ ಕಿತ್ತ ಆಟಗಾರರ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದಿದ್ದಾರೆ. ಚಹಲ್ 15 ಪಂದ್ಯಗಳಿಂದ 21 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ಬೇರೆ ಯಾವುದೇ ಬೌಲರ್ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಯುವ ವೇಗಿ ನವದೀಪ್ ಸೈನಿ ಕೂಡ ನಿರಾಸೆ ಮೂಡಿಸಿದ್ದಾರೆ.

    ಸತತ ನಾಲ್ಕು ಪಂದ್ಯ ಸೋತರೂ ಪ್ಲೇ ಆಫ್ ಪ್ರವೇಶಿಸಿದ್ದ ಆರ್‌ಸಿಬಿ ನಿರ್ಣಾಯಕ ಪಂದ್ಯದಲ್ಲಿಯೂ ಸೋತು ಟೂರ್ನಿಯಿಂದ ಹೊರ ನಡೆದಿದೆ. ನಿನ್ನೆಯ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತ್ತು. ಸುಲಭದ ಗುರಿ ಬೆನ್ನತ್ತಿದ್ದ ಸನ್‍ರೈಸರ್ಸ್ ಕೇನ್ ವಿಲಿಯಮ್ಸನ್‍ರ ಅರ್ಧ ಶತಕ ನೆರವಿನಿಂದ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಗೆಲುವು ಪಡೆಯಿತು. ಆ ಮೂಲಕ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಪ್ರವೇಶ ಪಡೆಯಿತು. ಭಾನುವಾರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಡೆಲ್ಲಿ ಮತ್ತು ಸನ್‍ರೈಸರ್ಸ್ ನಡುವೆ ಹಣಾಹಣಿ ನಡೆಯಲಿದೆ.

  • ಯಾರ್ಕರ್‌ನೊಂದಿಗೆ ಎಬಿಡಿ ವಿಕೆಟ್ ಕಿತ್ತ ನಟರಾಜನ್‍ಗೆ ಗುಡ್ ನ್ಯೂಸ್

    ಯಾರ್ಕರ್‌ನೊಂದಿಗೆ ಎಬಿಡಿ ವಿಕೆಟ್ ಕಿತ್ತ ನಟರಾಜನ್‍ಗೆ ಗುಡ್ ನ್ಯೂಸ್

    ಅಬುಧಾಬಿ: ಐಪಿಎಲ್ 2020ರ ಎಲಿಮಿನೇಟರ್ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮೂಲಕ ಗಮನ ಸೆಳೆದ ಸನ್‍ರೈಸರ್ಸ್ ಆಟಗಾರ ನಟರಾಜನ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 29 ವರ್ಷದ ಎಡಗೈ ವೇಗಿ ಟಿ.ನಟರಾಜನ್ ಪತ್ನಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ ಯಾರ್ಕರ್ ಎಸೆತದ ಮೂಲಕ ಎಬಿ ಡಿವಿಲಿಯರ್ಸ್ ವಿಕೆಟ್ ಪಡೆದ ನಟರಾಜನ್ ಪಂದ್ಯಕ್ಕೆ ತಿರುವು ನೀಡಿದ್ದರು. ಬೆಂಗಳೂರು ಪರ ಏಕಾಂಗಿ ಹೋರಾಟ ಮಾಡುತ್ತಿದ್ದ ಎಬಿಡಿ ಔಟಾಗುತ್ತಿದಂತೆ ಭಾರೀ ಸ್ಕೋರ್ ಗಳಿಸಿರುವ ಅವಕಾಶವನ್ನು ತಂಡ ಕಳೆದುಕೊಂಡಿತ್ತು.

    ಪಂದ್ಯದ ಬಳಿಕ ಮಾತನಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ನಟರಾಜನ್ ಹಾಗೂ ಅವರ ಪತ್ನಿಗೆ ಶುಭಾಶಯ ಕೋರಿದ್ದರು. ನಟರಾಜನ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟರಾಜನ್ ಮಗು ಜನಿಸಿದ ಸಂತಸದಲ್ಲಿದ್ದಾರೆ. ಅವರಿಗೆ ಫೈನಲ್ ಪಂದ್ಯಕ್ಕೂ ಮುನ್ನ ವಿಶೇಷ ಗಿಫ್ಟ್ ಲಭಿಸಿದೆ ಎಂದು ವಾರ್ನರ್ ತಿಳಿಸಿದ್ದರು.

    ತಮಿಳುನಾಡಿನ ಚೆನ್ನೈನಿಂದ ಸುಮಾರು 340 ಕಿಮೀ ದೂರದ ಸೇಲಂ ಜಿಲ್ಲೆಯ ಸಣ್ಣ ಹಳ್ಳಿ ಚೆನ್ನಪ್ಪಂಪಟ್ಟಿ ಗ್ರಾಮದವರು. ಟೆನ್ನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ನಟರಾಜನ್ ಅಲ್ಲಿಯೇ ತಮ್ಮ ಬೌಲಿಂಗ್ ಕೌಶಲ್ಯಗಳನ್ನು ಮೆರೆಗುಗೊಳಿಸಿದ್ದರು. ಉಳಿದಂತೆ ನಟರಾಜನ್ ತಾಯಿ ಹಾಗೂ ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. 2017ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದ ನಟರಾಜನ್ ಅವರನ್ನು  ಬಳಿಕ ಸನ್‍ರೈಸರ್ಸ್ ಹೈದಾರಾಬಾದ್ ತಂಡ ಖರೀದಿ ಮಾಡಿತ್ತು. ಸದ್ಯ ನಟರಾಜನ್ ಯಾರ್ಕರ್ ಗೆ ಫಿದಾ ಆಗಿರುವ ಕ್ರಿಕೆಟ್ ವಿಶ್ಲೇಷಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನೂ ಆತನನ್ನು ಯಾರ್ಕರ್ ನಟರಾಜನ್ ಎಂದು ಕರೆದರೆ ಉತ್ತಮವಾಗಿರುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ಟ್ವೀಟ್ ಮಾಡಿದ್ದಾರೆ.

  • ಪಂತ್ ಎಂದಿಗೂ ಧೋನಿ ಆಗಲು ಸಾಧ್ಯವಿಲ್ಲ: ಗಂಭೀರ್

    ಪಂತ್ ಎಂದಿಗೂ ಧೋನಿ ಆಗಲು ಸಾಧ್ಯವಿಲ್ಲ: ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಅವರನ್ನು ಧೋನಿಗೆ ಹೋಲಿಕೆ ಮಾಡಿ ಮಾತನಾಡುವುದನ್ನು ನಿಲ್ಲಿಸಬೇಕಿದೆ. ಏಕೆಂದರೆ ಪಂತ್ ಎಂದಿಗೂ ಧೋನಿ ಆಗಲೂ ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

    2020ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಧೋನಿ ನಿವೃತ್ತಿ ಘೋಷಿಸಿದ್ದರು. ಧೋನಿ ಸ್ಥಾನವನ್ನು ತಂಡದಲ್ಲಿ ತುಂಬುವ ಯುವ ಆಟಗಾರರ ಹುಡುಕಾಟವನ್ನು ನಡೆಸಿದ್ದ ಬಿಸಿಸಿಐ ಆಯ್ಕೆ ಸಮಿತಿ ರಿಷಬ್ ಪಂತ್ ಅವರಿಗೆ ಅವಕಾಶ ನೀಡಿತ್ತು. ಐಪಿಎಲ್ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪಂತ್ ಕೂಡ ಬೇಗ ತಂಡವನ್ನು ಸೇರಿಕೊಂಡಿದ್ದರು.

    ಆದರೆ 2019 ಮತ್ತು 2020ರ ಐಪಿಎಲ್ ಆವೃತ್ತಿ ಮತ್ತು ಟೀಂ ಇಂಡಿಯಾ ಪರ ಪಂತ್ ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಇದರೊಂದಿಗೆ ಟೀಂ ಇಂಡಿಯಾ ಪರ ಸಿಮೀತ ಓವರ್ ಗಳ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂತ್ ಬ್ಯಾಟಿಂಗ್ ಕುರಿತು ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಧೋನಿ ವಾರಸುದಾರ ಪಂತ್ ಎಂದು ಕರೆಯುವುದನ್ನು ನಿಲ್ಲಿಸಬೇಕಿದೆ. ಮಾಧ್ಯಮಗಳು ಇಂದಿಗೂ ಧೋನಿ, ಪಂತ್ ನಡುವೆ ಹೋಲಿಕೆ ಮಾಡುತ್ತವೆ. ಆದರೆ ಪಂತ್ ಎಂದಿಗೂ ಧೋನಿ ಆಗಲು ಸಾಧ್ಯವಿಲ್ಲ. ಆತ ರಿಷಬ್ ಪಂತ್‍ನಂತೆಯೇ ಉಳಿಯುತ್ತಾರೆ ಎಂದು ಹೇಳಿದ್ದಾರೆ.

    ಭಾರೀ ಸಿಕ್ಸರ್ ಸಿಡಿಸುವ ಸಾಮರ್ಥ್ಯವಿರುವುದರಿಂದ ಹೋಲಿಕೆ ಮಾಡಲಾಗುತ್ತಿದೆ. ಆದರೆ ಪಂತ್ ಇನ್ನು ಕೀಪಿಂಗ್, ಬ್ಯಾಟಿಂಗ್ ಎರಡಲ್ಲೂ ಸಾಕಷ್ಟು ಸುಧಾರಿಸಿಬೇಕಿದೆ ಎಂದು ಗಂಭೀರ್ ವಿವರಿಸಿದ್ದಾರೆ. 2020ರ ಆವೃತ್ತಿಯಲ್ಲಿ 12 ಪಂದ್ಯಗಳನ್ನು ಆಡಿರುವ ಪಂತ್ ಕೇವಲ 109 ಸ್ಟ್ರೈಕ್ ರೇಟ್‍ನೊಂದಿಗೆ 285 ರನ್ ಮಾತ್ರ ಗಳಿಸಿದ್ದಾರೆ. ಟೂರ್ನಿಯ ಆರಂಭದ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದ್ದ ಸಂಜು ಸ್ಯಾಮ್ಸನ್ ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್, ಧೋನಿಗೆ ಹೋಲಿಕೆ ಮಾಡಿದ್ದರು. ಈ ವೇಳೆಯೂ ಗಂಭೀರ್ ಪ್ರತಿಕ್ರಿಯೆ ನೀಡಿ, ಆತ ಎಂದಿಗೂ ಸಂಜು ಸ್ಯಾಮ್ಸನ್ ಆಗಿಯೇ ಇರಬೇಕು. ಬೇರೆ ಆಟಗಾರನಂತೆ ಬದಲಾಗುವ ಅಗತ್ಯವಿಲ್ಲ ಎಂದಿದ್ದರು.

  • ವೈರಲ್ ಆಯ್ತು ಮುಂಬೈ ಇಂಡಿಯನ್ಸ್ ‘ಪ್ರೇಯರ್ ಆಂಟಿ’ ಫೋಟೋ-ಯಾರಿವರು?

    ವೈರಲ್ ಆಯ್ತು ಮುಂಬೈ ಇಂಡಿಯನ್ಸ್ ‘ಪ್ರೇಯರ್ ಆಂಟಿ’ ಫೋಟೋ-ಯಾರಿವರು?

    ಅಬುಧಾಬಿ: 2020ರ ಐಪಿಎಲ್ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡದ ವಿರುದ್ಧ ಭರ್ಜರಿ ಜಯ ಪಡೆದ ಮುಂಬೈ ಇಂಡಿಯನ್ಸ್ ತಂಡ 6ನೇ ಬಾರಿಗೆ ಟೂರ್ನಿಯಲ್ಲಿ ಫೈನಲ್ ಪ್ರವೇಶ ಮಾಡಿದೆ. ಇದರೊಂದಿಗೆ ಪಂದ್ಯದ ಸಂದರ್ಭ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರೇಯರ್ ಆಂಟಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕ್ರೀಡಾಂಗಣದ ಗ್ಯಾಲರಿಯಲ್ಲಿ ಕಾಣಿಸಿಕೊಂಡ ಪ್ರೇಯರ್ ಆಂಟಿ ಅವರನ್ನು ಅಭಿಮಾನಿಗಳು ಮುಂಬೈ ಇಂಡಿಯನ್ಸ್ ತಂಡದ ಲಕ್ಕಿ ಚಾರ್ಮ್ ಎಂದೇ ಕರೆಯುತ್ತಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆಂಬಲ ನೀಡಲು ಕ್ರೀಡಾಂಗಣಕ್ಕೆ ಆಗಮಿಸುವ ಇವರು ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಂಡು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸುವುದು ಸಾಮಾನ್ಯ ದೃಶ್ಯವಾಗಿದೆ.

    ಕೋವಿಡ್ ಕಾರಣದಿಂದ 2020ರ ಟೂರ್ನಿಯಲ್ಲಿ ಇದುವರೆಗೂ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಡೆಲ್ಲಿ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. 2017 ರಲ್ಲಿ ಮೊದಲ ಬಾರಿಗೆ ಅಭಿಮಾನಿಗಳು ಇವರನ್ನ ಗುರುತಿಸಿದ್ದರು. ಅಂದು ಪುಣೆ ವಿರುದ್ಧ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. ಪಂದ್ಯದಲ್ಲಿ ಪುಣೆ ಗೆಲುವಿಗೆ 5 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಈ ವೇಳೆ ಕಣ್ಣು ಮುಚ್ಚಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ರೋಚಕ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಪಡೆದಿತ್ತು. ಆ ಬಳಿಕ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    ವೈರಲ್ ಫೋಟೋ ಹಂಚಿಕೊಂಡು ಮಾಹಿತಿ ನೀಡಿದ್ದ ನಟ ಅಭಿಷೇಕ್ ಬಚ್ಚನ್, ಇವರು ನೀತಾ ಅಂಬಾನಿ ಅವರ ಅಮ್ಮ ಪೂರ್ಣಿಮಾ ದಲಾಲ್, ನೀತಾ ಅಂಬಾನಿ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ತಂಡವನ್ನು ಬೆಂಬಲಿಸಲು ಆಗಮಿಸಿದ್ದರು ಎಂದು ಮಾಹಿತಿ ನೀಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಫೋಟೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಫೈನಲ್ ಪಂದ್ಯದಲ್ಲಿ ಕೂಡ ಇವರ ಅಗತ್ಯವಿದೆ. ಪ್ರೇಯರ್ ಆಂಟಿ ಬಂದಿರುವುದರಿಂದ ಪಂದ್ಯದಲ್ಲಿ ಮುಂಬೈ ತಂಡ ಗೆಲುವು ಪಡೆಯಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.

  • ಪ್ರೈವೇಟ್ ಬೋಟ್‍ನಲ್ಲಿ ಕಿಂಗ್ ಕೊಹ್ಲಿ ಬರ್ತ್ ಡೇ ಪಾರ್ಟಿ

    ಪ್ರೈವೇಟ್ ಬೋಟ್‍ನಲ್ಲಿ ಕಿಂಗ್ ಕೊಹ್ಲಿ ಬರ್ತ್ ಡೇ ಪಾರ್ಟಿ

    -ಕನ್ನಡದಲ್ಲೇ ವಿಶ್ ಮಾಡಿದ ಪವನ್ ದೇಶಪಾಂಡೆ

    ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಪ್ಟನ್ ವಿರಾಟ್ ಕೊಹ್ಲಿ, ತಂಡದ ಆಟಗಾರರು ಹಾಗೂ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ತಮ್ಮ 32ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಅಬುಧಾಬಿಯ ಪ್ರೈವೇಟ್ ಬೋಟ್‍ನಲ್ಲಿ ಆರ್ ಸಿಬಿ ತಂಡದ ಮಾಲೀಕರು ಪಾರ್ಟಿ ಏರ್ಪಡಿಸಿದ್ದು, ಗರ್ಭಿಣಿಯಾಗಿರುವ ಅನುಷ್ಕಾ, ಕೊಹ್ಲಿಗೆ ಕೇಕ್ ತಿನ್ನಿಸಿ, ಅಪ್ಪುಗೆ ಕೊಟ್ಟು ಹುಟ್ಟಹಬ್ಬದ ಶುಭಾಶಯ ಕೋರಿದ್ದಾರೆ. ಈ ಕುರಿತ ವಿಡಿಯೋ ಹಾಗೂ ಫೋಟೋಗಳನ್ನು ಆರ್ ಸಿಬಿ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

    ಕೊಹ್ಲಿ 32ನೇ ವರ್ಷದ ಹುಟ್ಟುಹಬ್ಬದ ಪಾರ್ಟಿ ಹಿನ್ನೆಲೆಯಲ್ಲಿ ಉಮೇಶ್ ಯಾದವ್‍ರೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಮೊಹಮ್ಮದ್ ಸಿರಾಜ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಮುಖಕ್ಕೆ ಬಳಿದು ಸಂಭ್ರಮಿಸಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ವಿಡಿಯೋದಲ್ಲಿ ಆರ್ ಸಿಬಿ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಕೊಹ್ಲಿ ಅವರಿಗೆ ಶುಭಾಶಯ ತಿಳಿಸಿದ್ದಾರೆ. ವಿಶೇಷ ಎಂದರೇ, ಪವನ್ ದೇಶಪಾಂಡೆ ಕನ್ನಡದಲ್ಲೇ ಕೊಹ್ಲಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಗಮನಸೆಳೆದಿದ್ದಾರೆ.

    ಶುಕ್ರವಾರ ಅಬುಧಾಬಿಯಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಆರ್ ಸಿಬಿ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ. ಐಪಿಎಲ್ 2020ರ ಟೂರ್ನಿಯಲ್ಲಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಕೊಹ್ಲಿ ಪಡೆ ಪ್ಲೇ ಆಫ್ ಪ್ರವೇಶ ಮಾಡಿದೆ. ನಾಲ್ಕು ವರ್ಷಗಳ ಬಳಿಕ ಪ್ಲೇ ಆಫ್ ತಲುಪಿರುವ ಕೊಹ್ಲಿ ಪಡೆಗೆ ಕಪ್ ಗೆಲ್ಲಲು ಇನ್ನು ಮೂರು ಗೆಲುವು ಬೇಕಿದೆ. ಸರಣಿಯಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವನ್ನ ಕೊಹ್ಲಿ ಪಡೆ 2 ಬಾರಿ ಎದುರಿಸಿದ್ದು, ಟೂರ್ನಿಯ 3ನೇ ಪಂದ್ಯದಲ್ಲಿ ಆರ್ ಸಿಬಿ 10 ರನ್ ಗೆಲುವು ಪಡೆದರೆ, 52ನೇ ಪಂದ್ಯದಲ್ಲಿ ಹೈದರಾಬಾದ್ ತಂಡ 52 ರನ್ ಗಳ ಗೆಲುವು ಪಡೆದಿತ್ತು.

    2020ರ ಟೂರ್ನಿಯಲ್ಲಿ ಕೊಹ್ಲಿ ಇದುವರೆಗೂ 122ರ ಸ್ಟ್ರೈಕ್ ರೇಟ್‍ನಲ್ಲಿ 460* ರನ್ ಗಳಿಸಿದ್ದು, ಆರೆಂಜ್ ಕ್ಯಾಪ್ ರೇಸ್‍ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಟೂರ್ನಿಯಲ್ಲಿ 23 ಬೌಂಡರಿ, 11 ಸಿಕ್ಸರ್ ಸಿಡಿಸಿದ್ದು, 3 ಅರ್ಧ ಶತಕಗಳು ದಾಖಲಾಗಿದೆ.

  • 13 ವರ್ಷಗಳ ಇತಿಹಾಸದಲ್ಲಿ ಐಪಿಎಲ್ 2020 ದಿ ಬೆಸ್ಟ್ ಏಕೆ?

    13 ವರ್ಷಗಳ ಇತಿಹಾಸದಲ್ಲಿ ಐಪಿಎಲ್ 2020 ದಿ ಬೆಸ್ಟ್ ಏಕೆ?

    ಅಬುಧಾಬಿ: ಐಪಿಎಲ್ 2020ರ ಟೂರ್ನಿ ಇತಿಹಾಸದಲ್ಲಿ ಅತ್ಯುತ್ತಮ ಟೂರ್ನಿ ಎನಿಸಿಕೊಂಡಿದೆ. ಟೂರ್ನಿ ಲೀಗ್ ಹಂತದ ಪಂದ್ಯಗಳು ಮಂಗಳವಾರ ಅಂತ್ಯವಾಗಲಿದ್ದು, ಮುಂಬೈ ಇಂಡಿಯನ್ಸ್ ತಂಡ ಮಾತ್ರ ಇದುವರೆಗೂ ಪ್ಲೇ ಆಫ್ ಪ್ರವೇಶ ಮಾಡಿದೆ. ಉಳಿದ ಮೂರು ಪ್ಲೇ ಆಫ್ ಸ್ಥಾನಗಳಿಗಾಗಿ ನಾಲ್ಕು ತಂಡಗಳು ಪೈಪೋಟಿ ನಡೆಸುತ್ತಿವೆ. ಇದರೊಂದಿಗೆ ಭಾನುವಾರ 3 ತಂಡಗಳು ಟೂರ್ನಿಯಿಂದ ನಡೆದಿದೆ.

    ಐಪಿಎಲ್ ಟೂರ್ನಿಗಳಲ್ಲಿ ಇದೇ ಮೊದಲ ಬಾರಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವ ತಂಡ 12 ಅಂಕಗಳನ್ನು ಪಡೆದಿದೆ. 2019ರ ಐಪಿಎಲ್ ಆವೃತ್ತಿಯಲ್ಲಿ ಕೇವಲ 12 ಅಂಕಗಳೊಂದಿಗೆ ಸನ್‍ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶ ಪಡೆದಿದ್ದು ವಿಶೇಷವಾಗಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಪ್ರವೇಶ ಮಾಡದೆ ಟೂರ್ನಿಯಿಂದ ಹೊರ ನಡೆದಿದೆ.

    ಶನಿವಾರದವರೆಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರತು ಪಡಿಸಿ ಉಳಿದೆ ಎಲ್ಲಾ ತಂಡಗಳು ಪ್ಲೇ ಆಫ್ ರೇಸ್‍ನಲ್ಲಿ ಸ್ಥಾನ ಪಡೆದಿದ್ದವು. ಆದರೆ ಭಾನುವಾರ ನಡೆದ ಡಬಲ್ ಧಮಾಕಾ ಪಂದ್ಯಗಳಲ್ಲಿ ನಾಲ್ಕು ತಂಡಗಳು ಪೈಪೋಟಿ ನಡೆಸಿದ್ದವು. ಇದರಲ್ಲಿ ಚೆನ್ನೈ ತಂಡ ಗೆಲುವು ಪಡೆದು ತನ್ನೊಂದಿಗೆ ಪಂಜಾಬ್ ತಂಡವನ್ನು ತವರಿಗೆ ಮರಳುವಂತೆ ಮಾಡಿತ್ತು. ಇತ್ತ ಕೋಲ್ಕತ್ತಾ ತಂಡದ ರಾಜಸ್ಥಾನ ವಿರುದ್ಧ ಗೆಲುವು ಪಡೆದು ಆ ತಂಡವನ್ನು ಟೂರ್ನಿಯಿಂದ ಹೊರ ನಡೆಯುವಂತೆ ಮಾಡಿತ್ತು. ಆದರೆ ಈಗಲೂ ಕೋಲ್ಕತ್ತಾ ತಂಡಕ್ಕೆ ಪ್ಲೇ ಆಫ್ ಪ್ರವೇಶ ಮಾಡುವ ಅವಕಾಶವಿದೆ.

    ಲೀಗ್ ಹಂತದಲ್ಲಿ ಅರ್ಧ ಪಂದ್ಯಗಳು ಮುಗಿಯುವ ವೇಳೆ ಟಾಪ್ 3 ರಲ್ಲಿ ಸ್ಥಾನ ಪಡೆದಿದ್ದ ಬೆಂಗಳೂರು, ಡೆಲ್ಲಿ ತಂಡಗಳು ಸತತ ಸೋಲುಗಳೊಂದಿಗೆ ಹಿನ್ನಡೆ ಅನುಭವಿಸಿವೆ. ಉಳಿದಂತೆ ಮುಂಬೈ ತಂಡದ ಸತತ ಗೆಲುವುಗಳೊಂದಿಗೆ ಮೊದಲ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಟೂರ್ನಿಯಲ್ಲಿ ಮುಂಬೈ ತಂಡ ಹೊರತು ಪಡಿಸಿ ಬೇರಾವುದೇ ತಂಡದ ಜರ್ನಿ ಸುಲಭವಾಗಿರಲಿಲ್ಲ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂತಿಮ 4 ತಂಡಗಳು ಕೂಡ 12 ಅಂಕಗಳನ್ನು ಪಡೆದಿರುವುದು ಪ್ರಮುಖ ಸಾಕ್ಷಿಯಾಗಿದೆ.

    ಸದ್ಯ ಮುಂಬೈ ಇಂಡಿಯನ್ಸ್ ತಂಡ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದ್ದು, ಪ್ಲೇ ಆಫ್ ಪಂದ್ಯಗಳ ಆರಂಭದ ಬಳಿಕ ಟೂರ್ನಿ ಮತ್ತಷ್ಟು ಹೈ ವೋಲ್ಟೇಜ್ ಪಂದ್ಯಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.