Tag: ಐಪಿಎಲ್ 2019

  • ಧೋನಿಗೆ ಮಂಕಡ್ ವರ್ನಿಂಗ್ ನೀಡಿದ ಕೃನಾಲ್ ಪಾಂಡ್ಯ – ನೆಟ್ಟಿಗರು ಗರಂ

    ಧೋನಿಗೆ ಮಂಕಡ್ ವರ್ನಿಂಗ್ ನೀಡಿದ ಕೃನಾಲ್ ಪಾಂಡ್ಯ – ನೆಟ್ಟಿಗರು ಗರಂ

    ಮುಂಬೈ: ಐಪಿಎಲ್ 12ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ಸೋಲಿನ ಅನುಭವ ಪಡೆದಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೃನಾಲ್ ಪಾಂಡ್ಯ ಧೋನಿ ಬ್ಯಾಟಿಂಗ್ ವೇಳೆ ಮಂಕಡ್ ಚಮಕ್ ಕೊಟ್ಟಿದ್ದಾರೆ.

    ಟೂರ್ನಿಯಲ್ಲಿ ಮೊದಲ ಬಾರಿಗೆ ಮಂಕಡ್ ರನೌಟ್ ಮಾಡಿ ಕಿಂಗ್ಸ್ ಇಲೆವೆನ್ ತಂಡದ ಆರ್ ಅಶ್ವಿನ್ ಭಾರೀ ಚರ್ಚೆಗೆ ಒಳಗಾಗಿದ್ದರು. ಆ ಬಳಿಕ ಇಂತಹದ್ದೇ ಪ್ರಯತ್ನವನ್ನು ಕೃನಾಲ್ ಮಾಡಿದ್ದಾರೆ. ಕ್ರಿಕೆಟ್ ವೃತ್ತಿಜೀವನದಲ್ಲಿ 15 ವರ್ಷಗಳನ್ನು ಪೂರ್ಣಗೊಳಿಸಿರುವ ಧೋನಿ ಯಾವುದೇ ಸಂದರ್ಭದಲ್ಲಿ ಫೀಲ್ಡ್ ನಲ್ಲಿ ಮೈಮರೆಯುವುದಿಲ್ಲ ಎಂಬುವುದು ಇದೇ ಸಂದರ್ಭದಲ್ಲಿ ಸಾಬೀತಾಗಿದೆ. ಪಂದ್ಯದಲ್ಲಿ ಬೌಲ್ ಮಾಡಲು ಯತ್ನಿಸಿದ ಅವರು ಕೊನೆ ಕ್ಷಣದಲ್ಲಿ ಚೆಂಡು ಎಸೆಯದೆ ಪೂರ್ಣಗೊಳಿಸಿದ್ದರು. ಆದರೆ ಈ ಸಮಯದಲ್ಲಿ ಧೋನಿ ಕ್ರಿಸಿನಲ್ಲೇ ಇದ್ದರು.

    ಮಂಕಡ್ ರನೌಟ್ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆದಿದ್ದು, ಸದ್ಯ ಧೋನಿ ಅಭಿಮಾನಿಗಳು ಕೂಡ ಕೃನಾಲ್ ಪಾಂಡ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಧೋನಿ ಸ್ಮಾರ್ಟ್ ಆಟಗಾರರಾಗಿದ್ದಾರೆ ಎಂದು ತಿಳಿಸಿ ಟ್ರೋಲ್ ಮಾಡಿದ್ದಾರೆ.

    ಟೂರ್ನಿಯಲ್ಲಿ ಮೊದಲ ಸೋಲುಂಡ ಬಳಿಕ ಮಾತನಾಡಿದ ಧೋನಿ, ಪಂದ್ಯದ 10ರಿಂದ 12 ಓವರಿಗೆ ಎದುರಾಳಿ ತಂಡವನ್ನು ಸಮರ್ಥವಾಗಿ ಬೌಲಿಂಗ್ ಮಾಡಿ ನಿಯಂತ್ರಿಸಿದೆವು. ಆದರೆ ಅಂತಿಮ ಓವರ್ ಗಳಲ್ಲಿ ಹೆಚ್ಚು ರನ್ ನೀಡಲಾಯಿತು. ಕೆಲ ಕ್ಯಾಚ್‍ಗಳನ್ನು ಮಿಸ್ ಮಾಡಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು. ತಂಡದ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಬ್ರಾವೋ ಕೂಡ ಲಭ್ಯರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಸರಿಯಾದ ಕಂಬಿನೇಷನ್ ನೊಂದಿಗೆ ಕಣಕ್ಕೆ ಇಳಿಯುತ್ತೇವೆ ಎಂದು ತಿಳಿಸಿದ್ದಾರೆ.

  • ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಐಪಿಎಲ್ ಕಿರಿಯ ಆಟಗಾರ – ಆರ್‌ಸಿಬಿ ಪರ ಪ್ರಯಾಸ್ ಪಾದಾರ್ಪಣೆ

    ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಆರ್ ಸಿಬಿ ತಂಡದ ಪ್ರಯಾಸ್ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದು, ಆ ಮೂಲಕ ಐಪಿಎಲ್ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಪ್ರಯಾಸ್ ಪಾದಾರ್ಪಣೆ ಮಾಡಿದ್ದಾರೆ. 16 ವರ್ಷ 157 ದಿನಗಳ ವಯಸ್ಸಿಗೆ ಪ್ರಯಾಸ್ ಐಪಿಎಲ್ ಆಡುವ ಅವಕಾಶ ಪಡೆದಿದ್ದು, ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಸ್ಪಿನ್ನರ್ ಮುಜೀಬ್ ರೆಹಮಾನ್ ಯಂಗೆಸ್ಟ್ ಪ್ಲೇಯರ್ ಎಂಬ ಹೆಗ್ಗಳಿಕೆ ಪಡೆದಿದ್ದರು.

    ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ತಂಡದಲ್ಲಿ ಬದಲಾವಣೆ ಮಾಡುವ ಮೂಲಕ ಪ್ರಯಾಸ್‍ಗೆ ಅವಕಾಶ ನೀಡಿ, ಉತ್ತಮ ಆಟಗಾರ ಎಂದು ಹೇಳಿದ್ದಾರೆ. ಅಂದಹಾಗೇ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಪ್ರಯಾಸ್ ರೇ ಬರ್ಮನ್‍ರನ್ನ ಬರೋಬ್ಬರಿ 1.5 ಕೋಟಿ ರೂ ನೀಡಿ ಆರ್ ಸಿಬಿ ಖರೀದಿ ಮಾಡಿತ್ತು.

    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದರು. ‘ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

    ಇದುವರೆಗೂ 9 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿರುವ ಪ್ರಯಾಸ್ ಯಾವುದೇ ವಿಕೆಟ್ ಪಡೆಯದೆ 56 ರನ್ ನೀಡಿದ್ದರು.

  • ಈ ಬಾರಿಯ ಐಪಿಎಲ್‍ನಲ್ಲಿ ಕೊಹ್ಲಿ ಆಡೋದು ಡೌಟ್!

    ಈ ಬಾರಿಯ ಐಪಿಎಲ್‍ನಲ್ಲಿ ಕೊಹ್ಲಿ ಆಡೋದು ಡೌಟ್!

    ಮುಂಬೈ: ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‍ನಲ್ಲಿ ಆಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಬಿಸಿಸಿಐ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಕೊಹ್ಲಿ ಆಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಈಗ ಎದ್ದಿದೆ.

    2019ರ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಪ್ರಮುಖ ವೇಗಿಗಳಾದ ಬುಮ್ರಾ, ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡುವ ಕುರಿತು ಬಿಸಿಸಿಐ ಚಿಂತನೆ ನಡೆಸಿರುವ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಅವರಿಗೂ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಟೀಂ ಇಂಡಿಯಾ ಆಟಗಾರರು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದು, ಆಟಗಾರರ ಮೇಲಿನ ಹೆಚ್ಚಿನ ಒತ್ತಡವನ್ನು ನಿಭಾಯಿಸುವ ಸಲುವಾಗಿ ಮೊದಲಿಗೆ ಬೌಲರ್ ಗಳಿಗೆ ವಿಶ್ರಾಂತಿ ಅಗತ್ಯವಿರುವ ಕುರಿತು ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಕೊಹ್ಲಿ ಕೂಡ ನಿರಂತರ ಕ್ರಿಕೆಟ್ ಆಡುತ್ತಿದ್ದು, ಅವರಿಗೂ ವಿಶ್ರಾಂತಿ ನೀಡುವ ಪ್ರಸ್ತಾಪವನ್ನು ಬಿಸಿಸಿಐ ಮುಂದಿಡಲಾಗಿದೆ.

    ಒಂದೊಮ್ಮೆ ಬಿಸಿಸಿಐ ಈ ಕುರಿತು ನಿರ್ಧಾರ ಕೈಗೊಂಡಲ್ಲಿ 2019 ಐಪಿಎಲ್ ಟೂರ್ನಿಯಲ್ಲಿ ಆರ್‍ಸಿಬಿ ನಾಯಕತ್ವ ವಹಿಸಿರುವ ಕೊಹ್ಲಿ ಕೆಲ ಪಂದ್ಯಗಳಿಂದ ವಿಶ್ರಾಂತಿಯ ಮೊರೆ ಹೋಗಬೇಕಾಗುತ್ತದೆ. ಆದರೆ ಈ ಕುರಿತು ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬಿಸಿಸಿಐ ಕಾರ್ಯದರ್ಶಿ ಮಾತ್ರ ಬೌಲರ್ ಗಳಿಗೆ ವಿಶ್ರಾಂತಿ ಅಗತ್ಯವಾದರೆ ತಂಡದ ನಾಯಕನಿಗೂ ಅಗತ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊಹ್ಲಿ ಕೂಡ ಈ ಹಿಂದೆ ಹಲವು ಸಂದರ್ಭಗಳಲ್ಲಿ ಭುಜದ ನೋವಿಗೆ ಒಳಗಾಗಿದ್ದರು. ಯಾವುದೇ ಒಬ್ಬ ಬೌಲರ್ ಗಿಂತ ತಂಡದ ನಾಯಕನೇ ಹೆಚ್ಚು ಸಮಯ ಮೈದಾನದಲ್ಲಿ ಇರಬೇಕಾಗುತ್ತದೆ. ಟಿ20ಯಲ್ಲಿ ಗರಿಷ್ಟ 4 ಓವರ್ ಬೌಲ್ ಮಾಡಲು ಅವಕಾಶವಿದ್ದು, ಬೌಲರ್ ಗಳಿಗೆ ಆಟದ ಮಧ್ಯೆ ವಿಶ್ರಾಂತಿ ಪಡೆಯಲು ಅವಕಾಶವಿದೆ. ಆದರೆ ತಂಡದ ನಾಯಕನಿಗೆ ಅದು ಸಾಧ್ಯವಾಗುವುದಿಲ್ಲ ಎಂಬುದು ಅವರ ವಾದವಾಗಿದೆ.

    ಬುಮ್ರಾ ಅವರಿಗೆ ತವರಿನ ಟೆಸ್ಟ್ ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿತ್ತು. ಅಲ್ಲದೇ ಇಂಗ್ಲೆಂಡ್ ವಿರುದ್ಧ ಸಿಮೀತ ಓವರ್ ಗಳ ಸರಣಿಗೂ ವಿಶ್ರಾಂತಿ ನೀಡಲಾಗಿತ್ತು. ಮಾರ್ಚ್ 29 ರಿಂದ ಮೇ 19ರವರೆಗೆ ಐಪಿಎಲ್ ಟೂರ್ನಿ ನಡೆದರೆ ಮೇ 31 ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv