Tag: ಐಪಿಎಲ್ ಬಿಡ್

  • ಐಪಿಎಲ್‌ ಬಿಡ್‌ –  ಬಿಕರಿಯಾಗದ ಟಾಪ್‌ ಆಟಗಾರರು

    ಐಪಿಎಲ್‌ ಬಿಡ್‌ – ಬಿಕರಿಯಾಗದ ಟಾಪ್‌ ಆಟಗಾರರು

    ವಚೆನ್ನೈ: ಐಪಿಎಲ್‌ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ದುಬಾರಿ ಬೆಲೆಗೆ ಬಿಡ್‌ ಆಗಿದ್ದರೆ ಹಲವು ತಾರಾ ಆಟಗಾರರು ಬಿಕರಿ ಆಗಲಿಲ್ಲ.

    ಇಂಗ್ಲೆಂಡಿನ ಜೇಸನ್‌ ರಾಯ್, ಅಲೆಕ್ಸ್‌ ಹೇಲ್ಸ್‌, ಆದಿಲ್‌ ರಶೀದ್‌,  ಆಸ್ಟ್ರೇಲಿಯಾ ಆರೋನ್‌ ಫಿಂಚ್‌, ನ್ಯೂಜಿಲೆಂಡಿನ ಆಟಗಾರರಾದ ಕೋರೆ ಆಂಡರ್‌ಸನ್‌, ಮಾರ್ಟಿ ಗಪ್ಟಿಲ್‌, ಟಿಮ್‌ ಸೌಥಿ, ವೆಸ್ಟ್‌ ಇಂಡೀಸಿನ ಎವಿನ್‌ ಲೆವಿಸ್‌ ಅವರನ್ನು ಯಾರೂ ಖರೀದಿಸುವ ಮನಸ್ಸು ಮಾಡಲಿಲ್ಲ. ಕಳೆದ ಐಪಿಎಲ್‌ನಲ್ಲಿ ಆರೋನ್‌ ಫಿಂಚ್‌ ಬೆಂಗಳೂರು ಪರ ಆಡಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ.

    ಕನ್ನಡಿಗರ ಪೈಕಿ ಕೆ. ಗೌತಮ್‌ 9.25 ಕೋಟಿಗೆ ಚೆನ್ನೈ ತಂಡದ ಪಾಲಾಗಿದ್ದರೆ, ಕರಣ್‌ ನಾಯರ್‌ 50 ಲಕ್ಷಕ್ಕೆ ಕೆಕೆಆರ್‌, ಜೆ. ಸುಚಿತ್‌ 30 ಲಕ್ಷಕ್ಕೆ ಹೈದರಬಾದ್‌, ಕರಿಯಪ್ಪ 20 ಲಕ್ಷಕ್ಕೆ ರಾಜಸ್ಥಾನಕ್ಕೆ ಮಾರಾಟವಾಗಿದ್ದಾರೆ.

    ಈ ಬಾರಿ ಬಿಡ್‌ನಲ್ಲಿ ಆಲ್‌ರೌಂಡರ್‌ ಮತ್ತು ವೇಗದ ಬೌಲರ್‌ಗಳಿಗೆ ಬೇಡಿಕೆ ಇತ್ತು. 2020-21 ಬಿಗ್‌ ಬ್ಯಾಶ್‌ ಲೀಗ್‌ನಲ್ಲಿ ಗರಿಷ್ಟ ವಿಕೆಟ್‌ ಪಡೆದಿದ್ದ ಜಾಯ್‌ ರಿಚರ್ಡ್‌ಸನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ಖರೀದಿ ಮಾಡಿದೆ.

    ಕಳೆದ ವರ್ಷ 10 ಕೋಟಿ ರೂ. ನೀಡಿ ಆರ್‌ಸಿಬಿ ಮೋರಿಸ್‌ ಅವರನ್ನು ಖರೀದಿಸಿತ್ತು. ಈ ಬಾರಿ 75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ನೊಂದಾಯಿಸಿಕೊಂಡಿದ್ದ ಮೋರಿಸ್‌ ಅವರನ್ನು ಖರೀದಿಸಲು ರಾಜಸ್ಥಾನ, ಮುಂಬೈ, ಪಂಜಾಬ್‌ ಪೈಪೋಟಿ ನಡೆಸಿದ್ದವು. ಕೊನೆಗೆ ಮೋರಿಸ್‌ ಅವರನ್ನು 16.25 ಕೋಟಿ ರೂ.ಗೆ ಬಿಡ್‌ ಮಾಡಿ ರಾಜಸ್ಥಾನ ಖರೀದಿಸಿತು.

  • ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

    ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ಇಂಡಿಯಾ ಪಾಲು: ಎಷ್ಟು ಕೋಟಿ ಬಿಡ್? ಇನ್ನು ಮುಂದೆ 1 ಪಂದ್ಯದ ಟಿವಿ ಶುಲ್ಕ ಎಷ್ಟು ಗೊತ್ತಾ?

    ಮುಂಬೈ: 2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

    ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

    ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತು.

    ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು.

    ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‍ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.

    ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ  15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದಾರೆ.

    2008ರಲ್ಲಿ ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಐಪಿಎಲ್ ಬಿಡ್ ಗೆದ್ದುಕೊಂಡಿತ್ತು. ಇದು 10 ವರ್ಷ ಅವಧಿಯದ್ದಾಗಿದ್ದು, ಒಟ್ಟು 8200 ಕೋಟಿ ರೂ. ನೀಡಿ ಬಿಡ್ ಗೆದ್ದಿತ್ತು. ಮೂರು ವರ್ಷ ಐಪಿಎಲ್ ಡಿಜಿಟಲ್ ಹಕ್ಕನ್ನು ನೋವಿ ಡಿಜಿಟಲ್ 2015 ರಲ್ಲಿ 302.2 ಕೋಟಿ ರೂ. ನೀಡಿ ಪಡೆದುಕೊಂಡಿತ್ತು.

    ಬೇರೆ ದೇಶಗಳಿಗೆ ನಡೆಯುವ ಕೂಟಗಳಿಗೆ ಹೋಲಿಕೆ ಮಾಡಿದರೆ ಐಪಿಎಲ್ ಬಿಡ್ ಕಡಿಮೆ ಇದ್ದು, ಅಮೆರಿಕದಲ್ಲಿ ನಡೆಯುತ್ತಿರುವ ನ್ಯಾಷನಲ್ ಫುಟ್‍ಬಾಲ್ ಲೀಗ್(ಎನ್‍ಎಫ್‍ಎಲ್)  ಒಂದು ವರ್ಷಕ್ಕೆ 6 ಶತಕೋಟಿ ಡಾಲರ್(ಅಂದಾಜು 38,442 ಸಾವಿರ ಕೋಟಿ ರೂ.) ಬಿಡ್ ಆಗುತ್ತಿದೆ.

    ಇದನ್ನೂ ಓದಿ: ಐಪಿಎಲ್‍ನ ಜಸ್ಟ್ 10 ಸೆಕೆಂಡ್ ಜಾಹಿರಾತಿಗೆ ಎಷ್ಟು ಹಣ? ನಗದು ಬಹುಮಾನ ಎಷ್ಟು?

    https://twitter.com/IPL/status/904620781354631168