Tag: ಐಪಿಎಲ್ ಕ್ರಿಕೆಟ್

  • ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ

    ಕನ್ನಡಿಗ ಅಗರ್ವಾಲ್ ಸ್ಫೋಟಕ ಆಟ – ಸೂಪರ್ ಓವರ್‌ನಲ್ಲಿ ಡೆಲ್ಲಿಗೆ ಜಯ

    – ಗೆಲುವಿನ ಹತ್ತಿರ ಬಂದು ಸೋತ ಪಂಜಾಬ್
    – ಐಪಿಎಲ್ ಇತಿಹಾಸದಲ್ಲಿ 10ನೇ ಸೂಪರ್ ಓವರ್

    ದುಬೈ: ಕನ್ನಡಿಗ ಮಯಾಂಕ್ ಅಗರ್ವಾಲ್ ಸ್ಫೋಟಕವಾಗಿ ಆಡಿದ್ದರೂ ವಿಜಯ ಲಕ್ಷ್ಮಿ ಪಂಜಾಬ್ ತಂಡದ ಕೈ ಹಿಡಿಯಲಿಲ್ಲ. ಸೂಪರ್ ಓವರಿನಲ್ಲಿ  ಡೆಲ್ಲಿ ತಂಡ ಪಂಜಾಬ್ ತಂಡವನ್ನು ಸೋಲಿಸಿ ಶುಭಾರಂಭ ಮಾಡಿದೆ.

    ಗೆಲ್ಲಲು 157 ರನ್‍ಗಳ ಸುಲಭ ಸವಾಲನ್ನು ಪಡೆದಿದ್ದರೂ ಪಂಜಾಬ್ ತಂಡ ಬೇಗನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ಒಂದು ಕಡೆ ಮಾಯಾಂಕ್ ಅಗರ್ವಾಲ್ ಬಂಡೆಯಂತೆ ನಿಂತು 89 ರನ್(60 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದು ತಂಡವನ್ನು ವಿಜಯದ ಬಾಗಿಲ ಬಳಿ ತಂದು ನಿಲ್ಲಿಸಿದ್ದರು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟ ಪರಿಣಾಮ ಪಂದ್ಯ ಸೂಪರ್ ಓವರಿಗೆ ಹೋಯ್ತು.

    ಟೈ ಹೇಗಾಯ್ತು?
    ಕೊನೆಯ 18 ಎಸೆತಗಳಲ್ಲಿ ಪಂಜಾಬ್ 42 ರನ್ ಗಳಿಸಬೇಕಿತ್ತು. 18ನೇ ಓವರಿನಲ್ಲಿ 17 ರನ್ ಬಂದಿದ್ದರೆ, 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ  13 ರನ್ ಬೇಕಿತ್ತು. ಮಾರ್ಕಸ್ ಸ್ಟೊಯಿನಿಸ್ ಎಸೆದ ಮೊದಲ ಎಸೆತವನ್ನು ಅಗರ್ವಾಲ್ ಸಿಕ್ಸರ್ ಗೆ ಅಟ್ಟಿದ್ದರೆ ಎರಡನೇ ಎಸೆತದಲ್ಲಿ 2 ರನ್ ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತವನ್ನು ಬಲವಾಗಿ ಹೊಡೆದರೂ ಕ್ಯಾಚ್ ನೀಡಿ ಔಟಾದರು. ಕೊನೆಯ ಎಸೆತವನ್ನು ಎಡಗಡೆಗೆ ಜೋರ್ಡಾನ್ ಹೊಡೆದರೂ ಅದು ಕ್ಯಾಚ್ ಆಗಿತ್ತು. ಹೀಗಾಗಿ ಪಂದ್ಯ ಸೂಪರ್ ಓವರಿಗೆ  ಹೋಯ್ತು.

    ಸೂಪರ್ ಓವರಿನಲ್ಲಿ ರಬಾಡ ಎಸೆದ ಮೊದಲ ಓವರ್‍ನಲ್ಲಿ 2 ರನ್ ಬಂದರೆ ಎರಡನೇ ಎಸೆತದಲ್ಲಿ ಕೆಎಲ್ ರಾಹುಲ್ ಕ್ಯಾಚ್ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಪೂರನ್ ಬೌಲ್ಡ್ ಆದರು. ಸೂಪರ್ ಓವರ್‍ನಲ್ಲಿ ಎರಡು ವಿಕೆಟ್ ಕಳೆದುಕೊಂಡರೆ ತಂಡ ಆಲೌಟ್ ಎಂದು ಘೋಷಿಸಲಾಗುತ್ತದೆ. ನಂತರ ಶಮಿ ಪಂಜಾಬ್ ಪರವಾಗಿ ಬೌಲಿಂಗ್ ಮಾಡಿದರು. ಒಂದು ವೈಡ್ ಜೊತೆಗೆ ರಿಷಬ್ ಪಂತ್ 2 ರನ್ ಹೊಡೆಯುವ ಮೂಲಕ ಡೆಲ್ಲಿ ತಂಡ ಪಂದ್ಯವನ್ನು ಜಯಗಳಿಸಿತು. ಐಪಿಎಲ್ ಇತಿಹಾಸದಲ್ಲಿ 10ನೇ ಸೂಪರ್ ಓವರ್ ಪಂದ್ಯ ಇದಾಗಿತ್ತು.

    ಆರಂಭದಲ್ಲೇ ಕುಸಿತ:
    ಕಿಂಗ್ಸ್ ಇಲೆವನ್ ಪಂಜಾಬ್ ತಂಡ 35 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ನಾಯಕ ಕೆಎಲ್ ರಾಹುಲ್ ಅವರು 19 ಬಾಲಿಗೆ 21 ರನ್ ಸಿಡಿಸಿ ಮೋಹಿತ್ ಶರ್ಮಾಗೆ ನಾಲ್ಕನೇ ಓವರಿನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಕ್ರಿಸ್‍ಗೆ ಬಂದ ಮತ್ತೋರ್ವ ಆಟಗಾರ ಕರುಣ್ ನಾಯರ್ ಕೇವಲ ಒಂದು ರನ್ ಗಳಿಸಿ ಆರ್ ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ಬಂದ ನಿಕೋಲಸ್ ಪೂರನ್ ಅವರ ಕೂಡ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸೊನ್ನೆ ಸುತ್ತಿ ವಾಪಸ್ ಹೋದರು. ಅಶ್ವಿನ್ ಅವರ ಒಂದೇ ಓವರಿನಲ್ಲಿ ಎರಡು ವಿಕೆಟ್ ಕಿತ್ತರು.

    ನಾಲ್ಕನೇ ಬ್ಯಾಟ್ಸ್ ಮ್ಯಾನ್ ಆಗಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ ವೆಲ್ ಒಂದು ರನ್ ಗಳಿಸಿ ಕಗಿಸೊ ರಬಾಡ ಅವರ ಬೌಲಿಂಗ್‍ನಲ್ಲಿ ಶ್ರೇಯಾಸ್ ಅಯ್ಯರ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಇದಾದ ನಂತರ ಕೆಲ ಕಾಲ ಕ್ರಿಸ್‍ನಲ್ಲಿ ಉಳಿದುಕೊಳ್ಳುವ ಮುನ್ಸೂಚನೆ ನೀಡಿದ ಸರ್ಫರಾಜ್ ಖಾನ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕೇವಲ 12 ರನ್ ಗಳಿಸಿ ಆಕ್ಸಾರ್ ಪಟೇಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು.

    ಈ ವೇಳೆ ಜೊತೆಯಾದ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ಉತ್ತಮ ಜೊತೆಯಾಟವಾಡಿದರು. 15 ಓವರ್ ಮುಕ್ತಾಕ್ಕೆ ಪಂಜಾಬ್ ತಂಡ 98 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮಯಾಂಕ್ ಅಗರ್ವಾಲ್ ಮತ್ತು ಗೌತಮ್ 6ನೇ ವಿಕೆಟಿಗೆ 46 ರನ್, ಅಗರ್ವಾಲ್ ಮತ್ತು ಜೋರ್ಡಾನ್ 7ನೇ ವಿಕೆಟಿಗೆ 56 ರನ್ ಜೊತೆಯಾಟವಾಡಿದ ಪರಿಣಾಮ ವಿಜಯದತ್ತ ಪಂಜಾಬ್ ಬಂದಿತ್ತು.

    ಅಶ್ವಿನ್‍ಗೆ ಗಾಯ:
    ಸ್ಪಿನ್ನರ್ ಆರ್. ಅಶ್ವಿನ್ ಫಿಲ್ಡಿಂಗ್ ವೇಳೆ ಕೈಗೆ ಗಾಯಗೊಂಡ ಪರಿಣಾಮ ಕ್ರೀಡಾಂಗಣವನ್ನು ತೊರೆದಿದ್ದರು. ಅಶ್ವಿನ್ 1 ಓವರ್ ಎಸೆದು 2 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದ್ದರು.

  • ಹೋಳಿ ಆಡುತ್ತಾ ಕ್ರಿಕೆಟ್ ನೋಡುತ್ತಾರಂತೆ ತಾರೆಯರು!

    ಹೋಳಿ ಆಡುತ್ತಾ ಕ್ರಿಕೆಟ್ ನೋಡುತ್ತಾರಂತೆ ತಾರೆಯರು!

    ನಟಿ ಹರ್ಷಿಕಾ ಪೂಣಚ್ಚ, ಗಾಯಕ ನವೀನ್ ಸಜ್ಜು, ಚಂದನಾ ಗೌಡ ಸೇರಿದಂತೆ ಕನ್ನಡದ ನವ ನಟ-ನಟಿಯರು, ಹೊಸಾ ಸೆಲೆಬ್ರೆಟಿಗಳೆಲ್ಲಾ ಹೋಳಿ ಹಬ್ಬ ಆಚರಿಸಲು ಮುಂದಾಗಿದ್ದಾರೆ. ನಾಗರಬಾವಿ ಬಳಿ ಮೀಡಿಯ ಸ್ಟೇಷನ್ ಆಯೋಜಿಸಿರುವ ಈ ಈವೆಂಟ್‍ನಲ್ಲಿ ಐಪಿಎಲ್ ಕ್ರಿಕೆಟ್ ನೋಡುತ್ತಲೇ ಹೋಳಿ ಹಬ್ಬ ಆಚರಿಸುವ ವಿನೂತನ ಐಡಿಯಾ ಮಾಡಲಾಗಿದೆಯಂತೆ. ಇದೇ ಮಾರ್ಚ್ 23ರಂದು ಬೆಳಿಗ್ಗೆ 11ರಿಂದ ರಾತ್ರಿ 11ರ ತನಕ ನಡೆಯುವ `ರಂಗ್ ದೆ ಬೆಂಗಳೂರು 2019′ ಹೆಸರಿನ ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದ ಅನೇಕರು ಪಾಲ್ಗೊಳ್ಳಲಿದ್ದಾರೆ.

    ದಿನನಿತ್ಯದ ಒತ್ತಡದ ಬದುಕಿನಲ್ಲಿ ಜನ ಸಾಕಷ್ಟು ಹೈರಾಣಾಗಿರುತ್ತಾರೆ. ಕ್ರಿಕೆಟ್ ಮ್ಯಾಚ್ ಶುರುವಾಯಿತೆಂದರೆ, ಟೀವಿ ಮುಂದಷ್ಟೇ ಕೂತು ಎಂಜಾಯ್ ಮಾಡುತ್ತಾರೆ. ಇಷ್ಟಪಟ್ಟ ಆಟವನ್ನು ಓಕುಳಿಯಾಟದೊಂದಿಗೆ ಬ್ಲೆಂಡ್ ಮಾಡಿದರೆ ಸುಂದರವಾಗಿರುತ್ತದೆ ಅನ್ನಿಸಿತು. ಮನೆಮಂದಿಯೆಲ್ಲಾ ಪೂಲ್ ಪಾರ್ಟಿ, ರೈನ್ ಡ್ಯಾನ್ಸ್ ಜೊತೆಗೆ ಕ್ರಿಕೆಟ್ ನೋಡುತ್ತಾ ಥ್ರಿಲ್ ಅನುಭವಿಸುವ ಹೊಸಾ ಕಾನ್ಸೆಪ್ಟ್ ಇದು ಎನ್ನುವುದು ಈ ಕಾರ್ಯಕ್ರಮವನ್ನು ಆಯೋಜಿಸಿರುವ ಮೀಡಿಯಾ ಸ್ಟೇಷನ್‍ನ ವರುಣ್ ಅವರ ಅಭಿಪ್ರಾಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡೌಟ್ ಬೇಡ.. ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯುತ್ತೆ

    ಡೌಟ್ ಬೇಡ.. ಈ ಬಾರಿ ಐಪಿಎಲ್ ಭಾರತದಲ್ಲೇ ನಡೆಯುತ್ತೆ

    ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಟೂರ್ನಿ ಎಲ್ಲಿ ನಡೆಯುತ್ತದೆ ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. 12ನೇ ಆವೃತ್ತಿಯ ಐಪಿಎಲ್ ಪಂದ್ಯ ಭಾರತದಲ್ಲಿ ನಡೆಯಲಿದೆ.

    ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಸಮಿತಿ ಮಂಗಳವಾರ ನವದೆಹಲಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಾಟವನ್ನು ಎಲ್ಲಿ ನಡೆಸಬೇಕು ಎನ್ನುವುದರ ಬಗ್ಗೆ ಸಭೆ ನಡೆಸಿತು. ಅಂತಿಮವಾಗಿ ಭಾರತದಲ್ಲೇ ಟೂರ್ನಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.

    ಮಾರ್ಚ್ 23 ರಿಂದ ಐಪಿಎಲ್ ಆರಂಭವಾಗಲಿದ್ದು ಮೇ ಕೊನೆಯವರೆಗೆ ನಡೆಯಲಿದೆ. ಆರಂಭದ ದಿನ ಮಾತ್ರ ಪ್ರಕಟವಾಗಿದ್ದು ಉಳಿದ ದಿನ ಮತ್ತು ಎಲ್ಲಿ ಪಂದ್ಯಗಳು ನಡೆಯಲಿದೆ ಎನ್ನುವ ವಿವರ ಪ್ರಕಟವಾಗಿಲ್ಲ. ಇದನ್ನೂ ಓದಿ:  ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಆರ್‌ಸಿಬಿ ಕೋಚ್ – ಯಾರಿಗೆ ಎಷ್ಟು ಸಂಭಾವನೆ? ಇಲ್ಲಿದೆ ಮಾಹಿತಿ

    12 ನೇ ಆವೃತ್ತಿಗಾಗಿ ಈಗಾಗಲೇ ಆಟಗಾರರ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾರ್ವತ್ರಿಕ ಚುನಾವಣೆಯ ದಿನಾಂಕಗಳು ಪ್ರಕಟವಾದ ಬಳಿಕ ಯಾವ ರಾಜ್ಯದಲ್ಲಿ, ಯಾವ ದಿನ ಐಪಿಎಲ್ ಕ್ರಿಕೆಟ್ ನಡೆಯಲಿದೆ ಎನ್ನುವುದು ಪ್ರಕಟವಾಗಲಿದೆ.  ಇದನ್ನೂ ಓದಿ: 2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿರುವ ಕಾರಣ ಕ್ರಿಕೆಟ್ ಮತ್ತು ಚುನಾವಣೆ ಎರಡಕ್ಕೂ ರಾಜ್ಯ ಸರ್ಕಾರಗಳು ಭದ್ರತೆ ಕಲ್ಪಿಸುವುದು ಕಷ್ಟವಾಗುತ್ತದೆ. ಭದ್ರತಾ ಕಾರಣ ಮತ್ತು ಕೇಂದ್ರ ಸರ್ಕಾರ ಭಾರತದಲ್ಲೇ ಆಯೋಜನೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಐಪಿಎಲ್ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿತ್ತು.

    2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ಪಂದ್ಯಗಳು ನಡೆದಿತ್ತು. 2014ರಲ್ಲಿ ಏಪ್ರಿಲ್ 16 ರಿಂದ ಏಪ್ರಿಲ್ 30ರ ವರೆಗಿನ ಪಂದ್ಯಗಳು ದುಬೈ, ಅಬುದಾಬಿ, ಶಾರ್ಜಾದಲ್ಲಿ ನಡೆದಿದ್ದರೆ ನಂತರ ಜೂನ್ 1ರವರೆಗಿನ ಪಂದ್ಯಗಳು ಭಾರತದಲ್ಲಿ ನಡೆದಿತ್ತು.

    ಚುನಾವಣಾ ಆಯೋಗ ಈಗಾಗಲೇ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದು, ಏಪ್ರಿಲ್ ಎರಡನೇ ವಾರ ಮೊದಲ ಹಂತದ ಚುನಾವಣೆ ನಡೆಯುವ ಸಾಧ್ಯತೆಯಿದೆ. 2014ರಲ್ಲಿ ಏಪ್ರಿಲ್ 7 ರಿಂದ ಆರಂಭಗೊಂಡು ಮೇ 12 ರವರೆಗೆ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆದು ಮೇ 16 ರಂದು ಫಲಿತಾಂಶ ಪ್ರಕಟವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv