Tag: ಐಡಿಯಾ

  • ಟೆಲಿಕಾಂ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ- ಕಾಂಗ್ರೆಸ್

    ಟೆಲಿಕಾಂ ಕಂಪನಿಗಳು ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ- ಕಾಂಗ್ರೆಸ್

    – ದರ ಏರಿಕೆಯ ಮೂಲಕ ದರೋಡೆಗೆ ನಿಂತಿವೆ
    – ಮೊದಲು ಡೇಟಾ ದರ ಕಡಿಮೆ ಮಾಡಿದ್ಯಾಕೆ?

    ನವದೆಹಲಿ: ಟೆಲಿಕಾಂ ಕಂಪನಿಗಳ ದರ ಏರಿಕೆ ಸಮರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದೆ.

    ಈ ಕುರಿತು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ ಪ್ರತಿಕ್ರಿಯಿಸಿದ್ದು, ಟೆಲಿಕಾಂ ಕಂಪನಿಗಳು ಟಾರಿಫ್ ಪ್ಲಾನ್‍ಗಳ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಈ ಮೂಲಕ ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ. ಇದನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.

    ವೋಡಾಫೋನ್-ಐಡಿಯಾ, ಭಾರ್ತಿ ಏರ್‍ಟೆಲ್ ಡಿಸೆಂಬರ್ 3 ರಿಂದ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಡಿಸೆಂಬರ್ 6ರಿಂದ ಕರೆ ಹಾಗೂ ಡೇಟಾ ದರವನ್ನು ಶೇ.15ರಿಂದ 47 ರಷ್ಟು ಹೆಚ್ಚಳ ಮಾಡುವ ಕುರಿತು ತಿಳಿಸಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

    ಇದ್ದಕ್ಕಿದ್ದಂತೆ ಟಾರಿಫ್ ದರ ಹೆಚ್ಚಿಸುವುದು ಸುಲಿಗೆಗಿಂತ ಕಡಿಮೆಯೇನಲ್ಲ. ಮೊದಲು ಕರೆ ಹಾಗೂ ಡೇಟಾ ದರವನ್ನು ಕಡಿಮೆ ಮಾಡಿದ್ದರು. ಇದೀಗ ಅವರ ಜೇಬಿಗೆ ಹಣ ಬರುತ್ತಿದ್ದಂತೆ ದರ ಹೆಚ್ಚಿಸುವ ಮೂಲಕ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಬಿಜ್ವಾ ಆರೋಪಿಸಿದ್ದಾರೆ.

    ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಟೆಲಿಕಾಂ ವಲಯ ಏಕೆ 8 ಲಕ್ಷ ಕೋಟಿ ರೂ. ಸಾಲ ಹೊಂದಿದೆ. ಟೆಲಿಕಾಂ ಕಂಪನಿಗಳ ಈ ನಿರ್ಧಾರಕ್ಕೆ ಸರ್ಕಾರವೇ ಕಾರಣ. ರಿಲಾಯನ್ಸ್‍ನ ಜಿಯೋ ಕಾಲಿಟ್ಟ ನಂತರ ಈ ಬೆಲೆ ವಾರ್ ಶುರುವಾಗಿದೆ ಎಂದರು.

    ಐಡಿಯಾ ವೊಡಾಫೋನ್ ಮತ್ತು ಏರ್‍ಟೆಲ್ ಕಂಪನಿಗಳು ಡಿ.3 ರಿಂದ ಹಾಗೂ ರಿಲಾಯನ್ಸ್ ಜಿಯೋ ಡಿಸೆಂಬರ್ 6ರಿಂದ ಮೊಬೈಲ್ ಕರೆ ಮತ್ತು ಡೇಟಾ ದರಗಳನ್ನು ಹೆಚ್ಚಿಸುವುದಾಗಿ ತಿಳಿಸಿವೆ. ಈ ಹಿಂದಿನ ದರಗಳಿಗೆ ಹೋಲಿಸಿದರೆ ಶೇ.42 ರಷ್ಟು ದರ ಹೆಚ್ಚಳವಾಗಲಿದೆ.

    ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸುತ್ತಿವೆ. ವೊಡಾಫೋನ್ ಐಡಿಯಾ, ಏರ್‍ಟೆಲ್ ಕಳೆದ ವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿತ್ತು.

    ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದವು.

  • ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಮುಂಬೈ: ರಿಲಯನ್ಸ್ ಜಿಯೋ ಟೆಲಿಕಾಂ ಪ್ರವೇಶಿಸಿದ ಮೇಲೆ ಭಾರತದಲ್ಲಿದ್ದ ಟೆಲಿಕಾಂ ಕಂಪೆನಿಗಳ ಆದಾಯಕ್ಕೆ ಹೊಡೆತ ಬಿದ್ದಿರುವುದು ಹಳೆಯ ಸುದ್ದಿ. ಈಗ ಈ ಕ್ಷೇತ್ರದಲ್ಲಿ ಆರಂಭವಾಗಿರುವ ಭಾರೀ ಸ್ಪರ್ಧೆಯಿಂದಾಗಿ ಉದ್ಯೋಗಿಗಳ ಉದ್ಯೋಗಕ್ಕೂ ಕುತ್ತು ಬಂದಿದ್ದು, ಒಟ್ಟು 75 ಸಾವಿರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.

    ಕೆಲ ಕಂಪೆನಿಗಳು ವಿಲೀನಗೊಳ್ಳುತ್ತಿದ್ದರೆ, ಕೆಲವೊಂದು ಸಂಪೂರ್ಣವಾಗಿ ಮುಚ್ಚುತ್ತಿದೆ. ಇವುಗಳಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿರುವ ಒಟ್ಟು ಅಂದಾಜು 3 ಲಕ್ಷ ಉದ್ಯೋಗಿಗಳ ಪೈಕಿ ಶೇ. 25 ರಷ್ಟು ಮಂದಿ ಉದ್ಯೋಗವನ್ನು ತೊರೆದಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಈಗಾಗಲೇ ಕೆಲ ಕಂಪೆನಿಗಳು ಸಂಬಳವನ್ನು ಹೆಚ್ಚಿಸದ ಕಾರಣ ಕೆಲ ಉದ್ಯೋಗಿಗಳು ತೊರೆದಿದ್ದಾರೆ. ಈ ಕ್ಷೇತ್ರವನ್ನು ಬಿಟ್ಟವರಲ್ಲಿ ಶೇ.30ರಷ್ಟು ಮಧ್ಯಮ ಮ್ಯಾನೇಜ್‍ಮೆಂಟ್ ವಿಭಾಗದವರು. ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು ಶೇ.50ರಷ್ಟು ಮಂದಿ ಈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

    ಎಮಾ ಪಾರ್ಟ್ ನರ್ಸ್ ಕಂಪೆನಿಯ ಎ ರಾಮಚಂದ್ರನ್ ಎಂಬವರು ಪ್ರತಿಕ್ರಿಯಿಸಿ, ಒಂದು ವರ್ಷದ ಹಿಂದೆ ಟೆಲಿಕಾಂ ಕ್ಷೆತ್ರದಲ್ಲಿ 3 ಲಕ್ಷ ಮಂದಿ ಉದ್ಯೋಗಿಗಳಿದ್ದರು. ಆದರೆ ಈಗ ಇದರಲ್ಲಿ 25% ಮಂದಿ ಈ ಕ್ಷೇತ್ರವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.

    ಹೆಚ್ಚಿನ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನು ಕಂಪೆನಿಗಳು ಮುಂದುವರೆಸುತ್ತಿದ್ದು, ಕೆಲವರಿಗೆ ಮೊದಲೇ ಪ್ಯಾಕೇಜ್ ನೀಡಿ ತೊರೆಯುವಂತೆ ಹೇಳುತ್ತಿದೆ. ಕಂಪೆನಿಯ ಮಾನವ ಸಂಪನ್ಮೂಲಕ್ಕೆ ಒಟ್ಟು 4% ರಿಂದ 5% ರಷ್ಟು ಖರ್ಚಾಗುತ್ತದೆ. ಈ ಖರ್ಚನ್ನು ಭರಿಸುವ ಸಾಮರ್ಥ್ಯ ಇಲ್ಲದೇ ಇರುವ ಕಾರಣ ಕಂಪೆನಿಗಳು ಉದ್ಯೋಗನ್ನು ಕಡಿತಗೊಳಿಸುತ್ತಿದೆ.

    ಟೆಲಿಕಾಂ ಕಂಪೆನಿಯೊಂದರ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಉದ್ಯೋಗಿಗಳಿಂದ ತೆರವಾದ ಜಾಗವನ್ನು ಶೀಘ್ರವೇ ಭರ್ತಿ ಮಾಡುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.

    ಟೆಲಿಕಾಂ ಕ್ಷೇತ್ರವನ್ನು ತೊರೆದು ಉದ್ಯೋಗಿಗಳು ಬೇರೆ ಕಡೆ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದು, ಈ ಪ್ರಮಾಣ 35 – 40% ಹೆಚ್ಚಾಗಿದೆ ಎಂದು ಉದ್ಯೋಗಾತ ಸಂಸ್ಥೆಗಳು ತಿಳಿಸಿವೆ.

    2016ರ ಸೆಪ್ಟೆಂಬರ್ ನಲ್ಲಿ ಭಾರತದ ಮಾರುಕಟ್ಟೆಯನ್ನು ಜಿಯೋ ಪ್ರವೇಶಿಸಿದ ಬಳಿಕ ದೇಶದ ನಂ 2 ಮತ್ತು ನಂ 3 ಕಂಪೆನಿಗಳಾದ ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ವಿಲೀನಗೊಂಡಿತ್ತು. ಇದಕ್ಕೂ ಮೊದಲು ಏರ್ ಟೆಲ್ ಕಂಪೆನಿ ಟೆಲಿನಾರ್ ಇಂಡಿಯಾ ಕಂಪೆನಿಯನ್ನು ಖರೀದಿಸಿತ್ತು.

    ಈಗಾಗಲೇ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ ಈಗಾಗಲೇ ಡಿಸೆಂಬರ್ 1 ರಿಂದ 2ಜಿ ಕರೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

    ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಐಡಿಯಾ ಸೆಲ್ಯುಲರ್ ಕಂಪನಿಯು 1,107 ಕೋಟಿ ರೂ. ನಷ್ಟ ಅನುಭವಿಸಿತ್ತು. ಏರ್‍ಟೆಲ್‍ನ ನಿವ್ವಳ ಲಾಭವು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.76ರಷ್ಟು ಕುಸಿದಿದ್ದು 343 ಕೋಟಿ ರೂ. ತಲುಪಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ತ್ರೈಮಾಸಿಕ ಫಲಿತಾಂಶ ಪ್ರಕಟವಾಗಿದ್ದು, 2,709 ಕೋಟಿ ರೂ. ನಷ್ಟ ದಾಖಲಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

     

     

     

     

  • ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ಜಿಯೋ ಎಫೆಕ್ಟ್: 7 ವರ್ಷದಲ್ಲಿ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳ ಆದಾಯ ಭಾರೀ ಇಳಿಕೆ

    ನವದೆಹಲಿ: ರಿಲಯನ್ಸ್ ಜಿಯೋ ಆಫರ್‍ಗಳಿಂದಾಗಿ 7 ವರ್ಷದಲ್ಲಿ ಮೊದಲ ಬಾರಿಗೆ 9 ಟೆಲಿಕಾಂ ಕಂಪೆನಿಗಳ ಆದಾಯ 2016-17ರಲ್ಲಿ 18.8 ಲಕ್ಷ ಕೋಟಿ ರೂ.ಗೆ ಕುಸಿತವಾಗಿದೆ ಎಂದು ಹೂಡಿಕೆ ಮಧ್ಯಸ್ಥಿಕೆ ಸಂಸ್ಥೆ ಸಿಎಲ್‍ಎಸ್‍ಎ ಅಂಕಿಅಂಶಗಳನ್ನು ಆಧಾರಿಸಿ ಲೈವ್‍ಮಿಂಟ್ ವರದಿ ಮಾಡಿದೆ.

    ಟೆಲಿಕಾಂ ಕಂಪೆನಿಗಳು 2015- 16ನೇ ಸಾಲಿನಲ್ಲಿ 19.3 ಲಕ್ಷ ಕೋಟಿ ರೂ. ಆದಾಯಗಳಿಸಿದ್ದರೆ, ಮುಂದಿನ ವರ್ಷಗಳಲ್ಲಿ ಈ ಆದಾಯ ಮತ್ತಷ್ಟು ಕಡಿಮೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    2017-18ನೇ ಸಾಲಿನಲ್ಲಿ 1.84 ಲಕ್ಷ ಕೋಟಿ ರೂ. 2018-19ನೇ ಸಾಲಿನಲ್ಲಿ 18.7 ಲಕ್ಷ ಕೋಟಿ ರೂ. ಆದಾಯ ಬರಬಹುದೆಂದು ಈ ಹಿಂದೆ ಲೆಕ್ಕಾಚಾರ ಹಾಕಲಾಗಿತ್ತಾದರೂ ಅದೂ ಸಹ ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಮುಕ್ತಾಯವಾದ ತ್ರೈಮಾಸಿಕ ಅವಧಿಯಲ್ಲಿ 9 ದೂರಸಂಪರ್ಕ ಕಂಪೆನಿಗಳ ಆದಾಯ ಶೇ. 1.1ರಷ್ಟು ಕುಸಿತವಾಗಿತ್ತು. ಇದು ಕಳೆದ 6 ತ್ರೈಮಾಸಿಕಗಳಲ್ಲೇ ದಾಖಲಾಗಿರುವ ಕಡಿಮೆ ಲಾಭದ ಪ್ರಮಾಣ ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಡಿಸೆಂಬರ್‍ನಲ್ಲಿ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ಏರ್‍ಟೆಲ್ ಆದಾಯದಲ್ಲಿ ಶೇ. 10.4ರ ಕುಸಿತವಾಗಿದ್ದರೆ, ಐಡಿಯಾದ ಆದಾಯದಲ್ಲಿ ಶೇ. 10.8ರಷ್ಟು ಇಳಿಕೆಯಾಗಿತ್ತು ಎಂದು ಕೇರ್ ರೇಟಿಂಗ್ ಏಜೆನ್ಸಿ ತಿಳಿಸಿದೆ.

    ಮೆಸೇಜ್, ಕರೆ, ಆಪ್ ಗಳನ್ನು ಉಚಿತವಾಗಿ ನೀಡಿ, ಡೇಟಾಗೆ ಮಾತ್ರ ಜಿಯೋ ದರ ನಿಗದಿ ಪಡಿಸಿದ ಕಾರಣ ಟೆಲಿಕಾಂ ಕಂಪೆನಿಗಳ ಆದಾಯದಲ್ಲಿ ಭಾರೀ ಇಳಿಕೆಯಾಗಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಜಿಯೋಗೆ ಸ್ಪರ್ಧೆ ನೀಡಲು ಫೆಬ್ರವರಿಯಲ್ಲಿ ಏರ್‍ಟೆಲ್ ನಾರ್ವೆಯ ಟೆಲಿನಾರ್ ಕಂಪೆನಿಯ ಭಾರತದ ಘಟಕವನ್ನು ಖರೀದಿಸಿತ್ತು. ಮಾರ್ಚ್‍ನಲ್ಲಿ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಘೋಷಿಸಿತ್ತು. ಐಡಿಯಾ ಹಾಗೂ ವೊಡಾಫೋನ್  ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಲಿದೆ.

    ಸೆಪ್ಟೆಂಬರ್‍ನಲ್ಲಿ ಆರಂಭಗೊಂಡಿದ್ದ ಜಿಯೋ ಆರಂಭದಲ್ಲಿ ಡಿಸೆಂಬರ್ ವರೆಗೆ ಗ್ರಾಹಕರಿಗೆ ವೆಲಕಂ ಆಫರ್ ನೀಡಿತ್ತು. ಇದಾದ ಬಳಿಕ ಮಾರ್ಚ್ 31ರವರೆಗೆ ಹ್ಯಾಪಿ ನ್ಯೂ ಇಯರ್ ಪ್ಲಾನ್ ಬಿಡುಗಡೆ ಮಾಡಿತ್ತು. ಇದಾದ ಬಳಿಕ 99 ರೂ. ನೀಡಿ ಪ್ರೈಮ್ ಸದಸ್ಯರಾದವರಿಗೆ ಸಮ್ಮರ್ ಸರ್‍ಪ್ರೈಸ್ ಆಫರನ್ನು ಪ್ರಕಟಿಸಿ ಬಳಿಕ ಟ್ರಾಯ್ ನಿರ್ದೇಶನ ಮೇಲೆ ಈ ಆಫರ್‍ಗಳನ್ನು ಜಿಯೋ ಹಿಂದಕ್ಕೆ ಪಡೆದುಕೊಂಡಿದೆ. ಇದಾದ ಬಳಿಕ ಏಪ್ರಿಲ್ 11 ರಂದು ಧನ್ ಧನ ಧನ್ ಹೆಸರಿನಲ್ಲಿ ಮೂರು ತಿಂಗಳು ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್‍ಗಳನ್ನು ಪರಿಚಯಿಸಿದೆ.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಪ್ರಸ್ತುತ ಜಿಯೋಗೆ 10 ಕೋಟಿ ಗ್ರಾಹಕರಿದ್ದಾರೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ಸಂಪಾದಿಸುವ ಮೂಲಕ ಜಿಯೋ ವಿಶ್ವದಾಖಲೆ ನಿರ್ಮಿಸಿದೆ.

    ಇದನ್ನೂ ಓದಿ:ಸಿಮ್ ಆಯ್ತು ಜಿಯೋ ಸೆಟ್‍ಟಾಪ್ ಬಾಕ್ಸ್: ವಿಶೇಷತೆ ಏನು? ಬೆಲೆ ಎಷ್ಟು? ಆರಂಭ ಯಾವಾಗ?

    ಇದನ್ನೂ ಓದಿ: ಜಿಯೋದಿಂದ ಈಗ ಧನ್ ಧನಾ ಧನ್ ಹೊಸ ಆಫರ್

  • ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ನವದೆಹಲಿ: ದೇಶದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಮ್ ಸಂಸ್ಥೆ ವೊಡಾಫೋನ್‍ನ ಭಾರತದ ಘಟಕ ವಿಲೀನಗೊಳ್ಳುತ್ತಿರುವ ಬಗ್ಗೆ ಇಂದು ಘೋಷಿಸಿವೆ.

    ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ನಿರ್ಮಾಣವಾಗಲಿದೆ. ಟೆಲಿಕಾಮ್ ಮಾರುಕಟ್ಟೆಗೆ ಜಿಯೋ ಎಂಟ್ರಿಯಾದ ನಂತರ ಸ್ಪರ್ಧೆ ಹೆಚ್ಚಾಗಿದ್ದು, ಸಂಸ್ಥೆಗಳ ವಿಲೀನಕ್ಕೆ ಉತ್ತೇಜಿಸಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

    ಡೀಲ್ ಪ್ರಕಾರ ಹೊಸ ಕಂಪೆನಿಯಲ್ಲಿ ವೋಡಫೋನ್ ಶೇ.45 ರಷ್ಟು ಪಾಲು ಹೊಂದಲಿದ್ದು, ಶೇ. 26 ರಷ್ಟು ಪಾಲುದಾರಿಕೆ ಮೇಲೆ ಐಡಿಯಾ ಕಂಪೆನಿಗೆ ಹಕ್ಕು ಇರಲಿದೆ.

    ಮಾರ್ಚ್ 16ರಂದು ವೊಡಾಫೋನ್ ನ ಅಧಿಕಾರಿಗಳು ಸಭೆ ನಡೆಸಿ ನಿಯಮಗಳನ್ನು ಪರಿಶೀಲಿಸಿ ಕಂಪೆನಿಗಳ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದರು. ತಜ್ಞರ ಪ್ರಕಾರ ಐಡಿಯಾ ಮತ್ತು ವೊಡಾಫೋನ್ ಇಂಡಿಯಾದ ವಿಲೀನದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ರಿಲಯನ್ಸ್ ಜಿಯೋ ಹಾಗೂ ಭಾರತಿ ಏರ್‍ಟೆಲ್ ಜೊತೆಗೆ ಸ್ಪರ್ಧಿಸಲು ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ಕಂಪೆನಿಗಳು ವಿಲೀನವಾಗುತ್ತಿರುವುದು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಈ ವಿಲೀನದೊಂದಿಗೆ ಆದಿತ್ಯಾ ಬಿರ್ಲಾ ಗ್ರೂಪ್ ದೇಶದಲ್ಲಿ ಉತ್ತಮ ಗುಣಮಟ್ಟದ ಡಿಜಿಟಲ್ ಸೇವೆಯನ್ನ ಒದಗಿಸಲಿದೆ. ಇದು ಭಾರತೀಯರನ್ನ ಡಿಜಿಟಲ್ ಜೀವನಶೈಲಿಯತ್ತ ಕೊಂಡಯ್ಯಲಿದ್ದು, ಸರ್ಕಾರದ ಡಿಜಿಟಲ್ ಇಂಡಿಯಾ ಉದ್ದೇಶ ಸಾಕಾರವಾಗಲಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‍ನ ಅಧ್ಯಕ್ಷರಾದ ಮಂಗಳಂ ಬಿರ್ಲಾ ಹೇಳಿದ್ದಾರೆ. ಮುಂದಿನ ವರ್ಷದ ವೇಳೆಗೆ ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ವಿಲೀನ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

    ಇದೇ ತಿಂಗಳ ಆರಂಭದಲ್ಲಿ ದೇಶದ 6 ರಾಜ್ಯಗಳಲ್ಲಿ ಭಾರತಿ ಏರ್‍ಟೆಲ್ ಸಂಸ್ಥೆ ನಾರ್ವೇ ಯ ಟೆಲಿನಾರ್ ಸಂಸ್ಥೆಯನ್ನ ಖರೀದಿಸಲು ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿತ್ತು.

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

  • ಜಿಯೋದಲ್ಲಿ 303 ರೂ.ಗೆ ಫ್ರೀ ಕಾಲ್ 30 ಜಿಬಿ ಡೇಟಾ: ಬೇರೆ ಕಂಪೆನಿಗಳಲ್ಲಿ 10 ಜಿಬಿ ಡೇಟಾಗೆ ಎಷ್ಟು ರೂ. ರಿಚಾರ್ಜ್ ಮಾಡಬೇಕು?

    ಜಿಯೋದಲ್ಲಿ 303 ರೂ.ಗೆ ಫ್ರೀ ಕಾಲ್ 30 ಜಿಬಿ ಡೇಟಾ: ಬೇರೆ ಕಂಪೆನಿಗಳಲ್ಲಿ 10 ಜಿಬಿ ಡೇಟಾಗೆ ಎಷ್ಟು ರೂ. ರಿಚಾರ್ಜ್ ಮಾಡಬೇಕು?

    ನವದೆಹಲಿ: ಮಂಗಳವಾರದಂದು ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. 99 ರೂ. ರೀಚಾರ್ಜ್ ಮಾಡಿ ಜಿಯೋ ಪ್ರೈಮ್ ಸದಸ್ಯರಾಗಿ ನಂತರ ತಿಂಗಳಿಗೆ 303 ರೂ. ರಿಚಾರ್ಜ್ ಮಾಡೋ ಮೂಲಕ ಗ್ರಾಹಕರು 30 ಜಿಬಿ ಡೇಟಾ ಮತ್ತು ಉಚಿತ ಕರೆಯನ್ನು ಪಡೆಯುವ ಹೊಸ ಸೇವೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಬೇರೆ ಕಂಪೆನಿಗಳು ಈ ದರಕ್ಕೆ ಏನು ಆಫರ್ ನೀಡಿದ್ದಾರೆ ಎನ್ನುವ ಪ್ರಶ್ನೆಗೆ ಇಲ್ಲಿ ಉತ್ತರವನ್ನು ನೀಡಲಾಗಿದೆ.

    ಏರ್‍ಟೆಲ್ ಗ್ರಾಹಕರು 345 ರೂ. ರಿಚಾರ್ಜ್ ಮಾಡಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‍ಲಿಮಿಟೆಡ್ ಕಾಲಿಂಗ್ ಹಾಗೂ 1 ಜಿಬಿ 4ಜಿ ಡೇಟಾ ಪಡೆಯಬಹುದು. ಹಾಗೆ 30 ಜಿಬಿ ಡೇಟಾ ಬೇಕಾದ್ರೆ 1495 ರೂ. ರೀಚಾರ್ಜ್ ಮಾಡಬೇಕು. ಇದಕ್ಕೆ 90 ದಿನಗಳ ವ್ಯಾಲಿಡಿಟಿ ಇರುತ್ತದೆ.

    ವೋಡಫೋನ್ ಗ್ರಾಹಕರು 349 ರೂ. ರೀಚಾರ್ಜ್ ಮಾಡಿ ಅನ್‍ಲಿಮಿಟೆಡ್ ಕಾಲಿಂಗ್‍ನೊಂದಿಗೆ 4ಜಿ ಹ್ಯಾಂಡ್‍ಸೆಟ್‍ಗಳಿಗೆ 1ಜಿಬಿ 4ಜಿ ಡೇಟಾ ಪಡೆಯಬಹುದು. ಇನ್ನು 1500 ರೂ. ರೀಚಾರ್ಜ್ ಮಾಡಿದ್ರೆ 35 ಜಿಬಿ ಡೇಟಾ ಪಡೆಯಬಹುದು. ಇದಕ್ಕೆ 30 ದಿನಗಳ ವ್ಯಾಲಿಡಿಟಿ ಇರುತ್ತದೆ.

    ಐಡಿಯಾ ಗ್ರಾಹಕರು 348 ರೂ. ರೀಚಾರ್ಜ್ ಮಾಡಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‍ಲಿಮಿಟೆಡ್ ಕಾಲಿಂಗ್ ಹಾಗೂ 4ಜಿ ಹ್ಯಾಂಡ್‍ಸೆಟ್ ಇರುವವರು 1ಜಿಬಿ 4ಜಿ/3ಜಿ ಡೇಟಾ ಪಡೆಯಬಹುದು. 4ಜಿ ಹ್ಯಾಂಡ್‍ಸೆಟ್‍ಗೆ ಅಪ್‍ಗ್ರೇಡ್ ಆಗುತ್ತಿರುವವವರು ಅನ್‍ಲಿಮಿಟೆಡ್ ಕಾಲಿಂಗ್ ಜೊತೆಗೆ 4 ಜಿಬಿ 3ಜಿ/4ಜಿ ಡೇಟಾ ಪಡೆಯಬಹುದು. ಇನ್ನೂ 298 ರೂ. ರಿಚಾರ್ಜ್ ಮಾಡಿದ್ರೆ 28 ದಿನಗಳ ವ್ಯಾಲಿಡಿಟಿಯೊಂದಿಗೆ 1.2 ಜಿಬಿ ಡೇಟಾ ಸಿಗುತ್ತದೆ. ಈ ಮ್ಯಾಜಿಕ್ ರಿಚಾರ್ಜ್ ಆಫರ್‍ನಲ್ಲಿ ಗ್ರಾಹಕರಿಗೆ ಅದೃಷ್ಟ ಇದ್ದರೆ 1.2 ಜಿಬಿ ಯಿಂದ 10 ಜಿಬಿವರೆಗೆ ಡೇಟಾ ಉಚಿತವಾಗಿ ಸಿಗುತ್ತದೆ. ಇನ್ನು 1349 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 10 ಜಿಬಿ 4ಜಿ ಡೇಟಾ ಸಿಗುತ್ತದೆ.

    ಡೊಕೊಮೋದಲ್ಲಿ 350 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 3ಜಿಬಿ ಡೇಟಾ ಮತ್ತು 150 ರೂ. ಟಾಕ್ ಟೈಮ್ ಸಿಗುತ್ತದೆ. 995 ರೂ. ರಿಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ 10 ಜಿಬಿ ಡೇಟಾ ಸಿಗುತ್ತದೆ.

    ಇನ್ನು ಬಿಎಸ್‍ಎನ್‍ಎಲ್ ಕೂಡ ಇಂಟರ್ನೆಟ್ ದರವನ್ನು ಪರಿಷ್ಕರಿಸಿದ್ದು 292 ರೂ. ರೀಚಾರ್ಜ್‍ಗೆ 30 ದಿನಗಳ ವ್ಯಾಲಿಡಿಟಿಯೊಂದಿಗೆ 8 ಜಿಬಿ ಡೇಟಾ ಆಫರ್ ನೀಡಿದೆ. 3099 ರೂ. ರೀಚಾರ್ಜ್ ಮಾಡಿದ್ರೆ 60 ದಿನಗಳವರೆಗೆ 20 ಜಿಬಿ ಡೇಟಾ ಜೊತೆಗೆ ಅನ್‍ಲಿಮಿಟೆಡ್ ಲೋಕಲ್ ಹಾಗೂ ಎಸ್‍ಟಿಡಿ ಕಾಲಿಂಗ್ ಜೊತೆಗೆ 3000 ಉಚಿತ ಎಸ್‍ಎಮ್‍ಎಸ್ ಪಡೆಯಬಹುದಾಗಿದೆ.

    ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

    ಇದನ್ನೂ ಓದಿ: ಮತ್ತೊಂದು ಇತಿಹಾಸ ಸೃಷ್ಟಿಸಿದ ಜಿಯೋ

    ಇದನ್ನೂ ಓದಿ: ಜಿಯೋ 4ಜಿ ಇಂಟರ್‍ನೆಟ್ ಅಪ್‍ಗ್ರೇಡ್ ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ