Tag: ಐಟಿ ದಾಲಿ

  • ಬಿಜೆಪಿಯ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದೆ: ಕೈ ಆರೋಪಕ್ಕೆ ಸಿಟಿ ರವಿ ಸಮರ್ಥನೆ

    ಬಿಜೆಪಿಯ ಸಿದ್ದೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದೆ: ಕೈ ಆರೋಪಕ್ಕೆ ಸಿಟಿ ರವಿ ಸಮರ್ಥನೆ

    ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ಡಿಕೆಶಿ ಸೇರಿದಂತೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಸಿದ್ದಕ್ಕೆ ಕಾಂಗ್ರೆಸ್ ನಾಯಕರು ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರೆ, ಬಿಜೆಪಿ ನಾಯಕರು ಇದು ಸಹಜ ಪ್ರಕ್ರಿಯೆ ಎಂದು ದಾಳಿಯನ್ನು ಸಮರ್ಥಿಸಿದ್ದಾರೆ.

    ಕೈ ನಾಯಕರ ಆರೋಪಕ್ಕೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಸಿಟಿ ರವಿ, ಸ್ವಾತಂತ್ರ್ಯ ಬಂದ 70 ವರ್ಷದಲ್ಲಿ 50 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಹಾಗೆಯೇ ದೇಶದಲ್ಲಿ ಐಟಿ ದಾಳಿಗಳು ಕಾಂಗ್ರೆಸ್ ಆಡಳಿತದ ಹಲವು ಬಾರಿ ಆಗಿದೆ. ಆ ಎಲ್ಲಾ ಐಟಿ ದಾಳಿಗಳು ಇದೇ ರೀತಿ ಅಂತ ಅಂದುಕೊಳ್ಳುವುದಾದರೆ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದವರು ಮಾತಾಡುವಂತಹ ಮಾತುಗಳು ಇವು. 2012ರಲ್ಲಿ ನಮ್ಮ ಸಂಬಂಧಿಕರನ್ನು ಗುರಿಯಾಗಿಸಿ ಐಟಿ ದಾಳಿ ನಡೆದಿದೆ. ಆ ಸಂದರ್ಭದಲ್ಲಿ ನಾನೇನು ಹೇಳಿಕೆ ನೀಡಲಿಲ್ಲ. ಲೋಕಸಭಾ ಉಪಚುನಾವಣೆ ಮುಂಚೆ ನನ್ನನ್ನೇ ಗುರಿಯಾಗಿಸಿ ಐಟಿ ದಾಳಿ ನಡೆಸಲಾಗಿತ್ತು. ಸಹಜ ಪ್ರಕ್ರಿಯೆ ಅಂತ ಅಂದುಕೊಂಡಿದ್ದೇನೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಗುಜರಾತ್ ಕಾಂಗ್ರೆಸ್ ಶಾಸಕರಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ – ಸಚಿವ ಡಿಕೆಶಿ ನಿವಾಸಗಳ ಮೇಲೂ ರೇಡ್

    ಕೈ ನಾಯಕರ ಆರೋಪ ಸುಳ್ಳು, ಬಿಜೆಪಿ ಮುಖಂಡ ಸಿದ್ದೇಶ್ವರ್ ಅವರ ನಿವಾಸ, ಕಂಪನಿ ಮೇಲೂ ದಾಳಿ ನಡೆದಿತ್ತು. ಆದಾಯ ಇಲಾಖೆಯ ದಾಳಿಯನ್ನು ಕಾಂಗ್ರೆಸ್ ರಾಜಕೀಯ ದಾಳಿ ಎಂದು ಆರೋಪಿಸುವುದು ಸರಿಯಲ್ಲ ಎಂದರು.

    ಐಟಿ ದಾಳಿ ಮಾಡುವ ವೇಳೆ ನಾಯಕರ ಮನೆಯಲ್ಲಿ ಏನೂ ಸಿಕ್ಕಿಲ್ಲವೆಂದ್ರೆ ಬರೀಗೈಯಲ್ಲಿ ಹೋಗ್ತಾರೆ. ಸಿಕ್ಕಿದ್ರೆ ತಾನೇ ತೆರಿಗೆ ಕಟ್ಟಬೇಕಾಗಿರೋದು. ಹೀಗಾಗಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಮಾತ್ರ ಭಯಪಡಬೇಕು. ತೆರಿಗೆ ವಂಚಿಸದವರ ಮನೆ ಮೇಲೆ 100 ಸಲ ಐಟಿ ದಾಳಿಯಾದ್ರೂ ಅವರು ತಲೆ ಕೆಡಿಸೋ ಅಗತ್ಯವಿಲ್ಲ ಎಂದು ಉತ್ತರಿಸಿದರು.

    ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇಷ್ಟು ವರ್ಷ ಯಾರ ಕಣ್ಣಿಗೂ ಬೀಳದ ಈಗಲ್ ಟನ್ ರೆಸಾರ್ಟ್ ಮೇಲೆ ಈಗಲೇ ಯಾಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಅನ್ನೋ ಪಬ್ಲಿಕ್ ಟಿವಿ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವೊಮ್ಮೆ ಕಾಕತಾಳೀಯವೂ ಇರಬಹುದು, ಸೊಹ್ರಾಬುದ್ದೀನ್ ಎನ್ ಕೌಂಟರ್ ನಲ್ಲಿ ಸಿಬಿಐ ಒಂದು ರಾಜ್ಯದ ಗೃಹ ಸಚಿವ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕೇಸ್ ಹಾಕಿರೋದು ಅದು ರಾಜಕೀಯ ಪ್ರೇರಿತವಾಗಿದ್ದು, ಐಟಿ ಅಲ್ಲ. ಅದಕ್ಕೆ ನಾಚಿಕೆಯಿಂದ ತಲೆ ತಗ್ಗಿಸದೇ ಇರೋ ಜನ ಆಡಳಿತ ವ್ಯವಸ್ಥೆಲ್ಲಿರೋ ಒಂದು ಐಟಿ ದಾಳಿ ರಾಜಕೀಯ ಪ್ರೇರಿತ ಅನ್ನೋದು ನಾಚಿಕೆಗೇಡಿನ ಸಂಗತಿ ಅಂತ ಹೇಳಿದ್ದಾರೆ.

    ಇದನ್ನೂ ಓದಿ: ದಾಳಿ ನಡೆದಿರುವುದು ಸಚಿವ ಡಿಕೆಶಿ ಮೇಲೆ ಮಾತ್ರ, ಗುಜರಾತ್ ಶಾಸಕರಿಗೂ ಇದಕ್ಕೂ ಸಂಬಂಧವಿಲ್ಲ: ಐಟಿ

    ಕಾಂಗ್ರೆಸ್‍ನ ಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ಇದು ನಿಶ್ಚಿತವಾಗಿಯೂ ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಸಿಟಿ ರವಿ ಕೇಸರಿ, ಕನ್ನಡಕ ತೆಗೆದು ಮಾತನಾಡಿದಾಗ ಅವರಿಗೆ ಗೊತ್ತಾಗುತ್ತದೆ. ಇಡೀ ದೇಶದಲ್ಲಿ ಅವರ ಸರ್ಕಾರ ಬಂದ ಬಳಿಕ ವಿರೋಧ ಪಕ್ಷದ ನಾಯಕರ ಮೇಲೆ ಐಟಿ ದಾಳಿಗಳು ಆಗಿದೆ. ಇತ್ತೀಚೆಗೆ ದೇಶದಲ್ಲಿ ನಡೆದಂತಹ ದಾಳಿಗಳಲ್ಲಿ ಎಷ್ಟು ಬಿಜೆಪಿ ಹಾಗೂ ಬೇರೆ ಪಕ್ಷದ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ ಎಂಬುವುದನ್ನು ನೋಡಿ. ಈಗಲೇ ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿ ಅದರಲ್ಲೂ ಶಾಸಕರು ಉಳಿದಿದ್ದ ರೂಮ್ ನ್ನು ಪರಿಶೀಲನೆ ನಡೆಸಬೇಕು ಅಂದ್ರೆ ಏನು ಅರ್ಥ ಅಂತ ಅವರು ಪ್ರಶ್ನಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ರವಿ, ಚುನಾವಣಾ ಸಮಯದಲ್ಲಿ ಅಭ್ಯರ್ಥಿಗಳ ಮನೆ ಮೇಲೆ ದಾಳಿ ನಡೆಯುತ್ತದೆ. ಯಾಕಂದ್ರೆ ಐಟಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರುತ್ತೆ. ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವ ಮನೋಭಾವನೆಯೇ ಕೈ ನಾಯಕರದ್ದು. ಇವರಿಗೆ ದೇಶ ಕಟ್ಟುವ ಮನೋಭಾವನೆ ಅಲ್ಲ ಬದಲಾಗಿ ರಾಜಕೀಯ ದೃಷ್ಟಿಯಿಂದ ಎಲ್ಲವನ್ನೂ ಆಲೋಚನೆ ಮಾಡುವ ದೃಷ್ಟಿ ಇದೆ ಎನ್ನುವುದು ಇದರಿಂದ ಗೊತ್ತಾಗುತ್ತೆ ಅಂತ ಹೇಳಿದ್ರು.

    ಇದನ್ನೂ ಓದಿ: ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಎಷ್ಟು ಕೋಟಿ ಹಣ ಸಿಕ್ಕಿದೆ ಗೊತ್ತಾ?