Tag: ಐಟಿ ಕಂಪನಿಗಳು

  • ಮತ್ತೆ ಕ್ಯಾಂಪಸ್‌ ನೇಮಕಾತಿ ಆರಂಭಿಸಿದ ಭಾರತೀಯ ಐಟಿ ಕಂಪನಿಗಳು

    ಮತ್ತೆ ಕ್ಯಾಂಪಸ್‌ ನೇಮಕಾತಿ ಆರಂಭಿಸಿದ ಭಾರತೀಯ ಐಟಿ ಕಂಪನಿಗಳು

    ನವದೆಹಲಿ: ಸುಮಾರು ವರ್ಷಗಳ ವಿರಾಮದ ನಂತರ ಭಾರತೀಯ ಐಟಿ ಕಂಪನಿಗಳು (Indian IT companies) ಕ್ಯಾಂಪಸ್‌ ನೇಮಕಾತಿ (Campus Hiring) ಆರಂಭಿಸಿವೆ.

    IT ಕಂಪನಿಗಳು ಈಗ ಕ್ಲೌಡ್ ಕಂಪ್ಯೂಟಿಂಗ್, ಡೇಟಾ ಅನಾಲಿಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ನಂತಹ ಕ್ಷೇತ್ರಗಳಲ್ಲಿ ನುರಿತ ಪ್ರೋಗ್ರಾಮರ್‌ಗಳು ಮತ್ತು ಡಿಜಿಟಲ್ ತಜ್ಞರನ್ನು ಹುಡುಕುತ್ತಿವೆ. ಈ ಹುದ್ದೆಗಳಿಗೆ 6 ರಿಂದ 9 ಲಕ್ಷ ರೂ. ವರೆಗೆ ವೇತನದ (Salary) ಆಫರ್‌ ಅನ್ನು ಕಂಪನಿಗಳು ಪ್ರಕಟಿಸಿವೆ.

    IBM, Infosys, TCS, ಮತ್ತು LTIMindtree ನಂತಹ ಐಟಿ ಸಂಸ್ಥೆಗಳು ಜುಲೈನಲ್ಲಿ ಕ್ಯಾಂಪಸ್‌ಗಳಿಗೆ ಭೇಟಿ ನೀಡಿ ನೇಮಕಾತಿ ಪ್ರಕ್ರಿಯೆ ಆರಂಭಿಸಿವೆ. ಟಿಸಿಎಸ್ 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಇನ್ಫೋಸಿಸ್ ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಡ್ರೈವ್‌ಗಳ ಮೂಲಕ 15,000 ರಿಂದ 20,000 ಹೊಸ ಪದವೀಧರರನ್ನು ನೇಮಿಸಲು ಮುಂದಾಗಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಚನ್ನಪಟ್ಟಣವನ್ನು ಚಿನ್ನದ ಪಟ್ಟಣ ಮಾಡುತ್ತೇವೆ : ಡಿಕೆಶಿ ಘೋಷಣೆ

    ವಿಪ್ರೋ ಈ ಹಣಕಾಸು ವರ್ಷದಲ್ಲಿ 10,000 ರಿಂದ 12,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಯೋಜನೆಯೊಂದಿಗೆ ಮರಳುತ್ತಿದೆ. ಒಂದು ವರ್ಷದ ವಿರಾಮದ ನಂತರ, ನಾವು ಪಾಲುದಾರಿಕೆ ಹೊಂದಿರುವ ಕ್ಯಾಂಪಸ್‌ಗಳಿಗೆ ಮರಳುತ್ತಿದ್ದೇವೆ ಎಂದು ವಿಪ್ರೋ ಎಚ್‌ಆರ್ ಮುಖ್ಯಸ್ಥ ಸೌರಭ್ ಗೋವಿಲ್ ಹೇಳಿದ್ದಾರೆ. ಇದನ್ನೂ ಓದಿ: ರೈಲು ಹಳಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು- ಫಿಶ್‌ ಪ್ಲೇಟ್‌ ಕತ್ತರಿಸಿದ ದುಷ್ಕರ್ಮಿಗಳು

    ಈ ಹಿಂದೆ ಕಟ್‌ ಆಫ್‌ ಸ್ಕೋರ್‌ 60% ಇತ್ತು ಈಗ ಇದು 70% ಏರಿಕೆಯಾಗಿದೆ. ಕೋಡಿಂಗ್‌ ಅಲ್ಲದೇ ಅವರ ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣ ಪ್ರೊಫೈಲ್‌, ಅವರು ಪಡೆದಿರುವ ಪ್ರಮಾಣಪತ್ರಗಳ ಮೌಲ್ಯಮಾಪನ ಮಾಡುವ ಮೂಲಕ ಆಯ್ಕೆ ಮಾಡಲು ಮುಂದಾಗಿವೆ.

  • ಕೊರೊನಾ ವೈರಸ್ ಎಫೆಕ್ಟ್ – ವರ್ಕ್ ಫ್ರಮ್ ಹೋಂ ಮಂತ್ರ ಜಪಿಸುತ್ತಿದ್ದಾರೆ ಟೆಕ್ಕಿಗಳು

    ಕೊರೊನಾ ವೈರಸ್ ಎಫೆಕ್ಟ್ – ವರ್ಕ್ ಫ್ರಮ್ ಹೋಂ ಮಂತ್ರ ಜಪಿಸುತ್ತಿದ್ದಾರೆ ಟೆಕ್ಕಿಗಳು

    ಬೆಂಗಳೂರು: ತೆಲಂಗಾಣ ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದ ಬೆನ್ನಲ್ಲೇ  ಸಿಲಿಕಾನ್ ಸಿಟಿಯ ವಿವಿಧ ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳು ‘ವರ್ಕ್ ಫ್ರಮ್ ಹೋಂ’ ಮಂತ್ರ ಜಪಿಸುತ್ತಿದ್ದಾರೆ.

    ಟೆಕ್ಕಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟ ಸುದ್ದಿ ತಿಳಿದ ಬಳಿಕ ಐಟಿ ಕಂಪನಿಗಳಲ್ಲಿ ‘ವರ್ಕ್ ಪ್ರಮ್ ಹೋಂ’ ಟ್ರೆಂಡ್ ಶುರುವಾಗಿದೆ. ಕೆಲವು ಐಟಿ ಕಂಪನಿಗಳು ತಮ್ಮ ಉದ್ಯೊಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿವೆ. ಇನ್ನೂ ಕೆಲವು ಕಂಪನಿ ಉದ್ಯೋಗಿಗಳು ಸ್ವತಃ ತಾವಾಗಿಯೇ ಮುಂದೆ ಬಂದು, ನಾವು ಮನೆಯಿಂದಲೇ ಕೆಲಸ ಮಾಡುತ್ತೇವೆ. ನಮಗೆ ಅವಕಾಶ ನೀಡಿ ಎಂದು ಮೇಲಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಇದು ಐಟಿ ಕಂಪನಿಗಳ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯಿದೆ.

    ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಗೆ ಮಾರಣಾಂತಿಕ ಕೊರೊನಾ ವೈರಸ್ ತಗುಲಿರುವ ಕಾರಣ ಐಟಿ ಉದ್ಯೋಗಿಗಳು ಕೆಲಸಕ್ಕೆ ಹೋಗಲು ಹೆದರುತ್ತಿದ್ದಾರೆ. ಸೋಂಕಿತ ಟೆಕ್ಕಿ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಇನ್ನೂ ಆರೋಗ್ಯ ಇಲಾಖೆ ಬಹಿರಂಗ ಪಡಿಸಿಲ್ಲ. ಇದರಿಂದ ಟೆಕ್ಕಿಗಳು ಆತಂಕಕ್ಕೀಡಾಗಿದ್ದಾರೆ. ಹೀಗಾಗಿ ನಾವು ಕಂಪನಿಗೆ ಬಂದು ಕೆಲಸ ಮಾಡಲ್ಲ, ಮನೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಕಂಪನಿಗೆ ತಿಳಿಸುತ್ತಿದ್ದಾರೆ. ಜೊತೆಗೆ ಹಲವರು ಕೊರೊನಾ ಭೀತಿಗೆ ರಜೆ ಪಡೆಯುತ್ತಿದ್ದಾರೆ.

    ಇತ್ತ ರಜೆ ಸಿಗದವರು ವರ್ಕ್ ಫ್ರಮ್ ಹೋಂ ಮಾಡುತ್ತಿದ್ದಾರೆ. ಆದ್ದರಿಂದ ಐಟಿ ಕಂಪನಿಗಳು ಇನ್ನೂ ಮೂನಾಲ್ಕು ದಿನ ಪರಿಸ್ಥಿತಿ ಹೇಗಿರುತ್ತೆ ಎಂದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಅಲ್ಲದೇ ಈ ಬಗ್ಗೆ ಟೆಕ್ಕಿಯೊಬ್ಬರು ಪ್ರತಿಕ್ರಿಯಿಸಿ, ಕಂಪನಿಯಲ್ಲಿ ಯಾರಿಗಾದರು ಶೆಕ್‍ಹ್ಯಾಂಡ್ ಕೊಡಲು, ಲಿಫ್ಟ್ ಬಟನ್, ವಾಷ್ ರೂಮಿನಲ್ಲಿ ವಸ್ತುಗಳನ್ನು ಮುಟ್ಟಲು ಭಯ ಆಗುತ್ತೆ. ಕೊರೊನಾ ಬಗ್ಗೆ ಕೇಳಿದಾಗಿನಿಂದ ಸದಾ ನನ್ನ ಜೊತೆ ಸ್ಯಾನಿಟೈಸರ್ ಇಟ್ಟುಕೊಂಡೇ ತಿರುಗುತ್ತಿದ್ದೇನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ವಿದೇಶಿ ಕಾನ್ಫರೆನ್ಸ್‌ಗಳು ರದ್ದು:
    ಹೌದು. ಕೊರೊನಾ ವೈರಸ್ ಭೀತಿಗೆ ಹಲವು ಐಟಿ ಕಂಪನಿಗಳು ವಿದೇಶಿ ಕಾನ್ಫರೆನ್ಸ್‌ಗಳನ್ನು ರದ್ದುಗೊಳಿಸಿವೆ. ಅದೇ ರೀತಿ ವಿದೇಶದಿಂದ ಬರಬೇಕಿದ್ದ ಪ್ರತಿನಿಧಿಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಅಷ್ಟೇ ಅಲ್ಲದೇ ಚೀನಾ, ಸಿಂಗಪುರದಲ್ಲಿ ಕೊರೊನಾ ಎಫೆಕ್ಟ್ ನಿಂದ ಐಟಿ ಉದ್ಯಮ ಬಿದ್ದಿದೆ. ಇದರಿಂದ ಸಾಫ್ಟ್‌ವೇರ್‌ಗಳ ರಫ್ತಿನಲ್ಲೂ ವ್ಯತ್ಯಾಸವಾಗುತ್ತಿದೆ.

    ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?
    ಟೆಕ್ಕಿ ಫೆ. 17 ರಂದು ದುಬೈಗೆ ಕೆಲಸದ ಸಂಬಂಧ ತೆರಳಿದ್ದರು. ಅಲ್ಲಿ ಹಾಕಾಂಗ್ ಗೆಳೆಯರ ಜೊತೆ ಎರಡು ಮೂರು ದಿನ ಕೆಲಸ ಮಾಡಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ದುಬೈನಿಂದ ಫೆ.20ರಂದು ಬೆಂಗಳೂರಿಗೆ ಬಂದವರಿಗೆ ಜ್ವರ ಕಾಣಿಸಿಕೊಂಡಿತ್ತು. ಪಿ.ಜಿಯಲ್ಲಿ ವಾಸ್ತವ್ಯ ಮಾಡಿದ್ದ ಟೆಕ್ಕಿ ನಗರದ ವಿವಿಧೆಡೆ ಓಡಾಡಿದ್ದರು. ಫೆ.22 ರಂದು ಬಸ್ ಮೂಲಕ ಹೈದರಾಬಾದ್‍ಗೆ ತೆರಳಿ ಸಿಕಂದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಸೋಂಕು ಇರುವುದು ಖಚಿತವಾಗಿತ್ತು.

    ಟೆಕ್ಕಿ ಈಗ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತೆಲಂಗಾಣ ಆರೋಗ್ಯ ಸಚಿವ ಈಟಾಲ ರಾಜೇಂದ್ರ ತಿಳಿಸಿದ್ದಾರೆ. ಟೆಕ್ಕಿಯ ಸಂಪರ್ಕಕ್ಕೆ ಬಂದಿದ್ದ ಜನರನ್ನು ಗುರುತಿಸುವ ಮತ್ತು ಅವರನ್ನು ಪ್ರತ್ಯೇಕ ವಾರ್ಡ್‍ಗಳಿಗೆ ಶಿಫ್ಟ್ ಮಾಡುವ ಕೆಲಸದಲ್ಲಿ ತೆಲಂಗಾಣ ಆರೋಗ್ಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಟೆಕ್ಕಿ ಸಿಕಂದರಾಬಾದ್‍ನ ಅವಿಭಕ್ತ ಕುಟುಂಬಕ್ಕೆ ಸೇರಿದ್ದು, ಕುಟುಂಬಸ್ಥರು, ಬಸ್‍ನಲ್ಲಿ ಬೆಂಗಳೂರಿನಿಂದ ಹೈದರಾಬಾದ್‍ಗೆ ಪ್ರಯಾಣಿಸಿದ್ದ 27 ಪ್ರಯಾಣಿಕರು, ಸಿಕಂದರಾಬಾದ್‍ನ ಅಪೊಲೋ ಆಸ್ಪತ್ರೆಯ 20 ಸಿಬ್ಬಂದಿಗಳನ್ನು ಗುರುತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟು 80 ಮಂದಿಯ ಮೇಲೆ ನಿಗಾ ಇಡಲಾಗಿದ್ದು ತೆಲಂಗಾಣ ಸರ್ಕಾರ ಈಗಾಗಲೇ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ.

  • ಸಂಘ, ಸಂಸ್ಥೆಗಳಿಗೇ ರಸ್ತೆಗಳ ಸ್ವಚ್ಛ, ಸಂಪೂರ್ಣ ನಿರ್ವಹಣೆ ಹೊಣೆ

    ಸಂಘ, ಸಂಸ್ಥೆಗಳಿಗೇ ರಸ್ತೆಗಳ ಸ್ವಚ್ಛ, ಸಂಪೂರ್ಣ ನಿರ್ವಹಣೆ ಹೊಣೆ

    – ಬಿಬಿಎಂಪಿಯ ‘ಅಡಾಪ್ಟ್-ಎ ಸ್ಟ್ರೀಟ್’ ಯೋಜನೆ ಮೂಲಕ ಹೊಣೆ

    ಬೆಂಗಳೂರು: ನಗರದ ರಸ್ತೆಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ `ಅಡಾಪ್ಟ್-ಎ ಸ್ಟ್ರೀಟ್’ ಹೆಸರಿನಲ್ಲಿ ರಸ್ತೆ ದತ್ತು ಪಡೆಯುವ ಯೋಜನೆಗೆ ಬಿಬಿಎಂಪಿ ಚಾಲನೆ ನೀಡಿದೆ.

    ಈ ಸಂಬಂಧ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಂದು ವಿಶೇಷ ಆಯುಕ್ತ ರಂದೀಪ್ ನೇತೃತ್ವದಲ್ಲಿ ವಿವಿಧ 25 ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಜೊತೆ 30ಕ್ಕೂ ಹೆಚ್ಚು ರಸ್ತೆಗಳನ್ನು ದತ್ತು ಪಡೆಯುವ ಕುರಿತು ಸಭೆ ನಡೆಯಿತು.

    ಬೆಂಗಳೂರನ್ನು ಸ್ವಚ್ಛ, ಸುಂದರ ನಗರವನ್ನಾಗಿಸುವ ಉದ್ದೇಶದಿಂದ ರಸ್ತೆ ದತ್ತು ಪಡೆಯುವ ಯೋಜನೆಗೆ ಪಾಲಿಕೆ ಚಾಲನೆ ನೀಡಿದ್ದು, ಈಗಾಗಲೇ ಇಂಡಿಯಾ ರೈಸಿಂಗ್ ಟ್ರಸ್ಟ್ 10 ರಸ್ತೆಗಳನ್ನು ದತ್ತು ಪಡೆದು ಆ ರಸ್ತೆಗಳನ್ನು ಸ್ವಚ್ಛವಾಗಿಡುವ ಕಾರ್ಯ ನಡೆಯುತ್ತಿದೆ.

    ಪಾಲಿಕೆ ವ್ಯಾಪ್ತಿಯಲ್ಲಿನ ಯಾವುದೇ ರಸ್ತೆಯನ್ನಾಗಲಿ `ಅಡಾಪ್ಟ್ ಎ ಸ್ಟ್ರೀಟ್’ ಹೆಸರಿನಲ್ಲಿ ದತ್ತು ಪಡೆಯಬಹುದಾಗಿದೆ. ದತ್ತು ಪಡೆದ ಸಂಸ್ಥೆ ಆ ರಸ್ತೆಯಲ್ಲಿ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ) ತೆರವುಗೊಳಿಸುವುದು, ಪೌರಕಾರ್ಮಿಕರ ಸಹಯೋಗದಲ್ಲಿ ಬ್ಲಾಕ್ ಸ್ಪಾಟ್ ಸ್ಥಳದಲ್ಲಿ ರಂಗೋಲಿ ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಗೋಡೆ, ಮರಕ್ಕೆ ಅಂಟಿಸಿರುವ ಬಿತ್ತಿಪತ್ರಗಳನ್ನು ತೆರವುಗೊಳಿಸುವುದು, ಗೋಡೆಗಳ ಮೇಲೆ ಬಣ್ಣ ಬಳಿಯುವುದು, ಪಾದಚಾರಿ ಮಾರ್ಗ ಸರಿಪಡಿಸುವುದು, ಒಣ ಮರ ಅಥವಾ ಮರಕ್ಕೆ ಅಳವಡಿಸಿರುವ ಗ್ರಿಲ್ ತೆರವುಗೊಳಿಸಬೇಕು. ಬೀದಿ ದೀಪ ನಿರ್ವಹಣೆಯ ಮೇಲೆ ಉಸ್ತುವಾರಿ ವಹಿಸುವುದು, ರಸ್ತೆ ಮದ್ಯೆಯ ಮೀಡಿಯನ್ಸ್ ನಲ್ಲಿ ವಿವಿಧ ರೀತಿಯ ಸಸಿಗಳನ್ನು ನೆಡುವುದು, ಉದ್ಯಾನ ಸ್ವಚ್ಛಗೊಳಿಸುವುದು, ರಸ್ತೆಯಲ್ಲಿ ಬ್ಯಾನರ್, ಫ್ಲೆಕ್ಸ್, ಒಎಫ್‍ಸಿ ಕೇಬಲ್, ಬೀದಿ ದೀಪ, ರಸ್ತೆ ಗುಂಡಿ ಕಂಡು ಬಂದರೆ `ಸಹಾಯ’ ಅಪ್ಲಿಕೇಷನ್ ಅಥವಾ `ಪಿಕ್ಸ್ ಮೈ ಸ್ಟ್ರೀಟ್’ ಅಪ್ಲಿಕೇಷನ್‍ನಲ್ಲಿ ದೂರು ದಾಖಲಿಸುವುದು ಸೇರಿದಂತೆ ಒಟ್ಟಾರೆ ರಸ್ತೆಯನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಯೋಜನೆಯಡಿ ಪಾಲಿಕೆ ಯಾವುದೇ ರೀತಿ ಅನುದಾನ ನೀಡುವುದಿಲ್ಲ.

    ಒಮ್ಮೆ ರಸ್ತೆ ದತ್ತು ಪಡೆದರೆ ಅದರ ಸ್ವಚ್ಛತಾ ಜವಾಬ್ದಾರಿ ಆ ಸಂಸ್ಥೆಯದ್ದೇ ಆಗಿರುತ್ತದೆ. ಒಂದು ತಿಂಗಳಿಗೊಮ್ಮೆಯಾದರೂ ರಸ್ತೆಯನ್ನು ಸ್ವಚ್ಛ ಮಾಡುತ್ತಿರಬೇಕು. ದತ್ತು ಪಡೆದ ಸಂಘ-ಸಂಸ್ಥೆ ಹಾಗೂ ರಸ್ತೆಯ ಹೆಸರಿರುವ ನಾಮಫಲಕವನ್ನು ಪಾಲಿಕೆ ವತಿಯಿಂದ ಅಳವಡಿಸಲಾಗವುದು. ಸಂಸ್ಥೆಯ ಕುರಿತ ಜಾಹೀರಾತು ಅಳವಡಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ರಸ್ತೆಯ ನಿರ್ವಹಣೆ ಮಾಡುವುದರಲ್ಲಿ ಸಂಸ್ಥೆ ವಿಫಲವಾದಲ್ಲಿ ದತ್ತು ನೀಡಿರುವ ರಸ್ತೆಯನ್ನು ಪಾಲಿಕೆ ಹಿಂಪಡೆಯಲಿದೆ.

    ಈಗಾಗಲೇ ಕೆಲವು ಸಂಸ್ಥೆಗಳು ಪ್ರಾಯೋಗಿಕವಾಗಿ ಕೋರಮಂಗಲ, ಜೆ.ಪಿ.ನಗರ, ಸದಾಶಿವನಗರ ಸೇರಿದಂತೆ ಕೆಲವು ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದೀಗ ಅಭ್ಯೂದಯ, ಡೆಲ್, ಸಿಡಬ್ಲೂಎ, ಸಿ.ಜಿ.ಐ ಇಂಡಿಯಾ, ಎಸ್.ಡಬ್ಲೂ.ಎ.ಆರ್, ಸೇವ್ ಗ್ರೀನ್, ಒನ್ ಡ್ರೀಮ್ ಪೌಂಡೇಷನ್, ವಿಪರ್ವ ಸೇರಿದಂತೆ 25 ಸಂಸ್ಥೆಗಳು 30ಕ್ಕೂ ಹೆಚ್ಚು ರಸ್ತೆಗಳನ್ನು ದತ್ತು ಪಡೆಯಲು ಆಸಕ್ತಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.

    ಬಿಬಿಎಂಪಿ ವೆಬ್‍ಸೈಟ್‍ನಲ್ಲಿ `ಅಡಾಪ್ಟ್ ಎ ಸ್ಟ್ರೀಟ್’ಗೆ ಸಂಬಂಧಿಸಿದಂತೆ ಅರ್ಜಿ ಸಿದ್ಧಪಡಿಸಲಾಗಿದ್ದು, ಆಸಕ್ತರು ಅರ್ಜಿ ಭರ್ತಿ ಮಾಡಿ adoptastreetbbmpgmail.com ಗೆ ಕಳುಹಿಸುವ ಅವಕಾಶ ಪಾಲಿಕೆ ಕಲ್ಪಿಸಿದೆ. ದತ್ತು ನೀಡುವ ಮುನ್ನ ಸಂಘ-ಸಂಸ್ಥೆಗೆ ಪ್ರಾಯೋಗಿಕವಾಗಿ ರಸ್ತೆ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಲಾಗುತ್ತದೆ. ಆ ಬಳಿಕ ಪಾಲಿಕೆ ಜೊತೆ ಒಡಂಬಡಿಕೆ ಮಾಡಿಕೊಂಡು ದತ್ತು ನೀಡಲಾಗುತ್ತದೆ.

    ಇಂಡಿಯಾ ರೈಸಿಂಗ್ ಟ್ರಸ್ಟ್ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್ ಸ್ಟ್ರೀಟ್, ರಿಚ್ಮಂಡ್ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೆಂಟ್ ಮಾಕ್ರ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕ್ಯಾಮೆಸೆರಿಯೆಟ್(ಮೇಯೋಹಾಲ್ ರಿಂದ ಗುರುಡಾಮಾಲ್ ರವರಿಗಿನ ರಸ್ತೆ), ಮದ್ರಾಸ್ ರಸ್ತೆ ಒಟ್ಟು 10 ರಸ್ತೆಗಳನ್ನು ದತ್ತು ಪಡೆದಿದೆ.