Tag: ಐಜಿ

  • ಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ

    ಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ

    ನವದೆಹಲಿ: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಯುವತಿಯ ಮೇಲೆ ಕಾಮುಕರ ಅಟ್ಟಹಾಸ ಮೆರೆದು ಸಾವಿಗೆ ಕಾರಣವಾಗಿರುವ ಕುರಿತು ದೇಶಾದ್ಯಂತ ಆಕ್ರೋಶ ಹೊರಹಾಕುತ್ತಿರುವ ಬೆನ್ನಲ್ಲೇ, ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಆಲಿಘಢ ಐಜಿ ಪಿಯೂಷ್ ಮೊರ್ಡಿಯಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

    ನಾಲ್ವರು ವ್ಯಕ್ತಿಗಳು ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲ್ಪಟ್ಟ ಹತ್ರಾಸ್ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ. ಸಾಮೂಹಿಕ ಅತ್ಯಾಚಾರವಾಗಿದೆ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಉಲ್ಲೇಖವಾಗಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ – ಸಂತ್ರಸ್ತೆ ಕುಟುಂಬ ಹೊರಗಿಟ್ಟು 2.30ಕ್ಕೆ ಪೊಲೀಸರಿಂದ್ಲೇ ಅಂತ್ಯಕ್ರಿಯೆ!

    ಸೆಪ್ಟೆಂಬರ್ 22ರಂದು ಯುವತಿ ಮೂವರನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾಳೆ. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರವಾಗಿರುವುದು ದೃಢಪಟ್ಟಿಲ್ಲ. ಕೆಲವೊಂದು ಸ್ಯಾಂಪಲ್ಸ್ ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ಕಾಯುತ್ತಿದ್ದೇವೆ. ಘಟನೆ ಸಂಬಂಧ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಐಜಿ ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

    ಇದೇ ತಿಂಗಳ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದಾರೆ. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ನಿನ್ನೆ ಮೃತಪಟ್ಟಿದ್ದಳು. ಇದನ್ನೂ ಓದಿ: ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ

    ಯುವತಿ ಸಾವನ್ನಪ್ಪಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಅಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದಾರೆ. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಮಗೆ ಗೊತ್ತಾಗಂದೆ ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಕೂಡ ಸಹೋದರ ದೂರಿದ್ದರು. ಇದನ್ನೂ ಓದಿ: ಗ್ಯಾಂಗ್‍ರೇಪ್, ಸಾವು ಪ್ರಕರಣ – ಅಪರಾಧಿಗಳನ್ನ ಗಲ್ಲಿಗೇರಿಸಿಯೆಂದ ಅಕ್ಷಯ್‍ಗೆ ರಮ್ಯಾ ತಿರುಗೇಟು

    ಹಿಂದೂ ಸಂಪ್ರದಾಯದಂತೆ ಆಕೆಯ ಅಂತ್ಯಸಂಸ್ಕಾರ ಮಾಡಬೇಕು ಎಂದು ಬಯಸಿದ್ದೆವು. ಇತ್ತ ನಾವು ಪ್ರತಿಭಟನೆಯಲ್ಲಿ ತೊಡಗಿದ್ದಾಗ, ಅತ್ತ ಸಹೋದರಿಯ ಅಂತ್ಯಸಂಸ್ಕಾರವನ್ನು ಪೊಲೀಸರು ಮುಗಿಸಿಯೇ ಬಿಟ್ಟಿದ್ದಾರೆ. ಅವರು ಒತ್ತಾಯಪೂರ್ವಕವಾಗಿ ಮೃತದೇಹವನ್ನು ಕೊಂಡೊಯ್ದಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಮಗಳ ಮುಖವನ್ನು ನೋಡಲು ಕೂಡ ಬಿಟ್ಟಿಲ್ಲ ಅಂತ ಯುವತಿಯ ತಂದೆ ಕಣ್ಣೀರು ಹಾಕಿದ್ದರು. ಇದನ್ನೂ ಓದಿ: ಮತ್ತೊಮ್ಮೆ ಭಾರತದ ಮಗಳು ಭೀಕರವಾಗಿ ಹಿಂಸೆಗೊಳಗಾಗಿದ್ದಾಳೆ: ಯುವರಾಜ್

  • ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಬಳ್ಳಾರಿ: ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ್ ಎಂದು ಬಳ್ಳಾರಿ ವಲಯದ ಐಜಿ ನಂಜುಂಡಸ್ವಾಮಿ ಅಗಲಿದ ಗೆಳೆಯನಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಂತಾಪ ಸೂಚಿಸಿದ್ದಾರೆ.

    ಈ ಪತ್ರದಲ್ಲಿ ಸಿದ್ಧಾರ್ಥ್ ಅವರನ್ನು ಭೇಟಿಯಾದ ದಿನಗಳು ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಅಪಾರವಾಗಿ ಹೇಳಿಕೊಂಡಿರುವ ನಂಜುಂಡಸ್ವಾಮಿ ತನ್ನ ಗೆಳೆಯ ಆತ್ಮಹತ್ಯೆ ಮಾಡಿಕೊಳ್ಳವಂತಹ ವ್ಯಕ್ತಿಯಲ್ಲ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಪತ್ರದಲ್ಲೇನಿದೆ?
    ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇ ಅಂಗಡಿಯಲ್ಲಿ. ನನ್ನ ಗೆಳೆಯ ಶಶಿಕುಮಾರ್ ಮತ್ತು ನಾನು ಒಂದು ರಾತ್ರಿ ಊಟ ಮಾಡಿದ ನಂತರ ಕಾಫಿ ಡೇಗೆ ಹೋದಾಗ, ಆಗ ಅದೊಂದೆ ಕಾಫಿ ಡೇ ಆಗಿತ್ತು. ಶಶಿ ಮೋಹನ್ ನನಗೆ ಸಿದ್ಧಾರ್ಥ ಅವರನ್ನು ಪರಿಚಯ ಮಾಡಿಸಿದ.

    ನಾನು ಆಗ ತಾನೇ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ ಬೆಂಗಳೂರು ಜೀವನ ಹೊಸದಾಗಿತ್ತು. ಸಿದ್ಧಾರ್ಥ್ ಅಂದು ಕೆಫೆ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟೀ-ಶರ್ಟ್ ಧರಿಸಿದ್ದ. ಮೊದಲನೇ ಭೇಟಿಯಲ್ಲೇ ನಾವಿಬ್ಬರು ಬಹಳ ಮಾತನಾಡಿದ್ದೇವು. ಆಗ ಅವರ ಮಾವ ಎಸ್.ಎಂ ಕೃಷ್ಣ ಮುಖ್ಯಮಂತ್ರಿಯಾಗಿರಲಿಲ್ಲ. ಸಿದ್ಧಾರ್ಥ್ ಹಳೆಯ ಗೆಳೆಯನಂತೆ ನನ್ನ ಜೊತೆ ತುಂಬಾ ಹೊತ್ತು ಖುಷಿಯಾಗಿ ಮಾತನಾಡುತ್ತಿದ್ದರು. ಅವರು ತಮ್ಮ ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಯ ಸರಪಣಿ (chain of restaurant) ಮಾಡುವುದಾಗಿ ಹೇಳುತ್ತಿದ್ದರು. ಸಿದ್ಧಾರ್ಥ್ ಅಂದು ಕಂಡಿದ್ದ ಕನಸುಗಳ ನನಸು ಮಾಡುತ್ತಲೇ ಸಾಗಿದವರು. ಅವರು ಪರಿಚಯವಾದ ಮೇಲೆ ನಾವು ತುಂಬಾ ಸಲ ಬೇರೆ-ಬೇರೆ ಕಡೆ ಭೇಟಿ ಆಗಿದ್ದೇನೆ.

    ಸಿದ್ಧಾರ್ಥ್ ಒಂದು ಬಾರಿ ಅವರ ಸ್ವಂತ ಊರಾದ ಚೇತನಹಳ್ಳಿಯಲ್ಲಿ ಒಂದು ಭವ್ಯವಾದ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಆಗ ನಾನು ಹಾಸನದಲ್ಲಿ ಎಸ್‍ಪಿ ಆಗಿದ್ದೆ. ಆಗ ಸನ್ಮಾನ್ಯ ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಸಿದ್ಧಾರ್ಥ ಅವರು ಉತ್ತಮ ರೀತಿಯಲ್ಲಿ ತಮ್ಮ ಎಲ್ಲಾ ಅತಿಥಿಗಳನ್ನು ಸತ್ಕರಿಸುತ್ತಿದ್ದರು. ನನಗೆ ತಮ್ಮ ಹಳೆಯ ಭವ್ಯವಾದ ಬ್ರಿಟಿಷ್ ಕಾಲದ ಮನೆಯನ್ನು ಸುತ್ತಾಡಿಸಿ ತೋರಿಸಿದರು. ಬ್ರಿಟಿಷ್ ಕಾಫಿ ತೋಟ ಸ್ವಾತಂತ್ರ್ಯ ನಂತರ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದರು.

    ಸಿದ್ಧಾರ್ಥ್ ಅವರಲ್ಲಿ ಅದಮ್ಯ ಸಾಹಸದ ಮನೋಭಾವನೆ ಇತ್ತು. ಅವರ ಕಂಡಾಗಲೆಲ್ಲ ನಾನು ಇವರರಂತೆ ಆಗಬೇಕು ನಾನು ತುಂಬಾ ಆಕ್ಟೀವ್ ಆಗಿ ಚೇತನ ಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ. ಅಂತಹ ವ್ಯಕ್ತಿ ನನ್ನ ಭಾಷಣ-ಬರಹಗಳ ಅಭಿಮಾನಿಯಾಗಿದ್ದರು. ಅವರ ತಂದೆ ಮತ್ತು ನಾನು ಒಂದು ಬಾರಿ ಪೂರ್ಣ ಪ್ರಜ್ಞಾ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ್ದೇವು. ನನ್ನ ಭಾಷಣ ಮುಗಿದ ಮೇಲೆ ಅವರ ತಂದೆ ನಿಮ್ಮ ಮಾತು ಕೇಳಿದರೆ ನಾನು ಒಮ್ಮೆ ದ.ರಾ ಬೇಂದ್ರೆ ಅವರ ಭಾಷಣ ಕೇಳಿದ್ದೆ ಅವರಂತೆ ನೀವು ಮಾತನಾಡುತ್ತೀರಿ. ನಮ್ಮ ಸಿದ್ಧಾರ್ಥ ನಿಮ್ಮ ಭಾಷಣಗಳ ಅಭಿಮಾನಿ ಎಂದಿದ್ದರು. ಆಗ ನಾನು ನಿಮ್ಮೊಡನೆ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಅದ್ದರಿಂದ ನನಗೆ ಒಳ್ಳೆಯ ಭಾಷಣ ಒಳ್ಳೆಯ ಮಾತುಗಾರರ ಕೇಳುವ ಭಾಗ್ಯ ಇವತ್ತು ನನಗಿದೆ ಎಂದಿದ್ದರು.

    ಸಿದ್ಧಾರ್ಥ್ ನಿಜವಾಗಿಯೂ ಬುದ್ಧನಾಗುವ ಮೊದಲು ಆ ಸಿದ್ಧಾರ್ಥನಂತೆ ಮಾನವೀಯತೆ ರಾಜಕಳೆಯಿಂದ ಬದುಕಿದ. ಆದರೆ ಇಂದು ಕಳೆಬರವಾಗಿದ್ದಾನೆ. ಈ ಸಿದ್ಧಾರ್ಥ ಬುದ್ಧನಾಗಲು ಹೊರಟ್ಟಿದ್ದ ಆತನಲ್ಲಿ ಈ ಪ್ರಪಂಚದ ಸಾವಿರಾರು ಸತ್ಯಗಳು ಉಳಿದು ಬಿಟ್ಟಿದ್ದವು. ಆತನು ಸಹ ಆ ಸತ್ಯಗಳನ್ನು ಈ ಪ್ರಪಂಚಕ್ಕೆ ತಿಳಿಸಲು ಹಪಹಪಿಸುತ್ತಿದ್ದ. ತನ್ನ ಅರಿವಿಗೆ ಬಂದ ಸತ್ಯಗಳ ತಿಳಿಸುವ ಮೊದಲೇ ಬುದ್ಧನಾಗುವ ದಾರಿಯಲ್ಲಿ ನಡೆದು ಬಿಟ್ಟ.

    ಆತನ ಮನದೊಳಗಿದ್ದ ಆ ಸತ್ಯಗಳೆಲ್ಲ ಹೊರಕ್ಕೆ ಬರಬೇಕು ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡುಹಿಡಿಯಲೇ ಬೇಕು ಯಾವ ವ್ಯಕ್ತಿ, ಸಂಘ, ಸಂಸ್ಥೆ, ಇಲಾಖೆಗಳಿಂದ ನೊಂದಿದ್ದ. ಆತ ಈ ನಿರ್ಧಾರ ತೆಗೆದುಕೊಳ್ಳಲು ಇದ್ದ ಕಾರಣ ಹೊರಬರಬೇಕಾಗಿದೆ. ನಮ್ಮ ಕಾಫಿ ಡೇ ಸಿದ್ಧಾರ್ಥ ಬುದ್ಧನಾಗಲೇ ಹೊರಟವನು. ತನ್ನ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡವನು. ಆತನೇ ಹೀಗಾದ ಎಂದರೆ ಆತನನ್ನು ನಂಬಿದ್ದವರಿಗೆ, ಆತನನ್ನು ಆದರ್ಶವಾಗಿ ಕಂಡವರಿಗೆ ನೋವಾಗಿದೆ. ಇದರ ಸಂಪೂರ್ಣ ತನಿಖೆ ಆಗಲಿ ಸತ್ಯ ಹೊರ ಬರಲಿ ಸಿದ್ಧಾರ್ಥ ಬುದ್ಧನಾಗಲು ಹೋದ ಆತ ನನಗೆ ಎಂದಿಗೂ ಬುದ್ಧನೇ.