ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವೆಗಳ ಪರೀಕ್ಷೆಯ (CSE) ಫಲಿತಾಂಶವನ್ನು ಇಂದು (ಏ.22) ಪ್ರಕಟವಾಗಿದೆ. ಒಟ್ಟು 1,009 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, 2018ರಿಂದ ಯುಪಿಎಸ್‌ಸಿ ತಯಾರಿ ನಡೆಸುತ್ತಿದ್ದ ಪ್ರಯಾಗ್‌ರಾಜ್‌ನ ಶಕ್ತಿ ದುಬೆ (Shakti Dubey) ಪ್ರಥಮ ರ‍್ಯಾಂಕ್‌ನೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಹರ್ಷಿತಾ ಗೋಯಲ್ 2ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಫಲಿತಾಂಶದಲ್ಲಿ ಉತ್ತರ ಪ್ರದೇಶ (Uttar Pradesh) ಪ್ರಯಾಗ್‌ರಾಜ್ ಮೂಲದ ಶಕ್ತಿ ದುಬೆ, ಯುಪಿಎಸ್‌ಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಶಕ್ತಿ ದುಬೆ, ಬನಾರಸ್ ವಿವಿಯಲ್ಲಿ ಜೀವ ರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2018ರಿಂದಲೂ ಯುಪಿಎಸ್‌ಸಿಗೆ ತಯಾರಿ ನಡೆಸಿದ್ದ ಶಕ್ತಿ ಪರಿಶ್ರಮಕ್ಕಿಂದು ಫಲ ಸಿಕ್ಕಿದೆ. ಇದನ್ನೂ ಓದಿ: ಪ್ರಿಯಾಂಕಾ Vs ಬಾನ್ಸುರಿ ಸ್ವರಾಜ್ – ʼNational Herald Ki Lootʼ ಕೈಚೀಲ ಹೊತ್ತು ಸಭೆಗೆ ಹಾಜರ್
ಯುಪಿಎಸ್‌ಸಿ ಟಾಪ್-10 ಟಾಪರ್ಸ್ ಯಾರು?
ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೋಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್, ಮಾಯಾಂಕ್ ತ್ರಿಪಾಠಿ ಕ್ರಮವಾಗಿ ಅಗ್ರ 10 ರ‍್ಯಾಂಕ್‌ಗಳಲ್ಲಿದ್ದಾರೆ. ಇದನ್ನೂ ಓದಿ: 1 ಲಕ್ಷ ರೂ. ದಾಟಿದ ಚಿನ್ನದ ಬೆಲೆ – ಸಾರ್ವಕಾಲಿಕ ದಾಖಲೆ
1009 ಅಭ್ಯರ್ಥಿಗಳು ತೇರ್ಗಡೆ:
ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 1,009 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 335, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) 109, ಇತರ ಹಿಂದುಳಿದ ವರ್ಗಗಳು (ಒಬಿಸಿ) 318, ಪರಿಶಿಷ್ಟ ಜಾತಿ (ಎಸ್‌ಸಿ) 160 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 87 ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವಿಶೇಷ ಚೇತನರ ವಿಭಾಗದಿಂದ 45, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 12 ಅಭ್ಯರ್ಥಿಗಳು ಪಿಡಬ್ಲ್ಯೂಬಿಡಿ-1 (ದೃಷ್ಟಿಹೀನ), 8 ಪಿಡಬ್ಲ್ಯೂಬಿಡಿ-2 (ಶ್ರವಣದೋಷ), 16 ಪಿಡಬ್ಲ್ಯೂಬಿಡಿ-3 (ಚಲನಾ ದುರ್ಬಲತೆ) ಮತ್ತು 9 ಪಿಡಬ್ಲ್ಯೂಬಿಡಿ-5 (ಇತರ ಅಂಗವೈಕಲ್ಯ) ಅಭ್ಯರ್ಥಿಗಳಿದ್ದಾರೆ.
ಜೈಪುರ: 10 ರೂ.ಗಾಗಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ (Retired IAS Officer) ಮೇಲೆ ಬಸ್ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಜೈಪುರದಲ್ಲಿ ನಡೆದಿದೆ.
ನಿವೃತ್ತ ಅಧಿಕಾರಿ ಆರ್.ಎಲ್. ಮೀನ ಹಲ್ಲೆಗೆ ಒಳಗಾದ ನಿವೃತ್ತ ಅಧಿಕಾರಿ. ಇವರು ಆಗ್ರಾ ರಸ್ತೆಯ ಕನೋಟಾ ಬಸ್ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಕಂಡಕ್ಟರ್ (Bus Conductor) ನಿಲ್ದಾಣ ಬಂದಿದೆ ಎಂದು ತಿಳಿಸಿಲ್ಲ. ನಂತರ ಬಸ್ ನೈಲಾದಲ್ಲಿ ಮುಂದಿನ ನಿಲ್ದಾಣ ತಲುಪಿತು. ಮುಂದಿನ ನಿಲ್ದಾಣಕ್ಕೆ ಹೆಚ್ಚುವರಿ 10 ರೂ. ಪಾವತಿಸಿ ಎಂದು ಕಂಡಕ್ಟರ್ ಕೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ.
ಶುಕ್ರವಾರ ಈ ಘಟನೆ ನಡೆದಿದ್ದು, ಆ ಘಟನೆಯ ವೀಡಿಯೋ ವೈರಲ್ ಆಗಿದೆ. ಬಲಿಪಶು ಸರಿಯಾದ ಬಸ್ ನಿಲ್ದಾಣವನ್ನು ತಪ್ಪಿಸಿಕೊಂಡಾಗ, ಮುಂದಿನ ನಿಲ್ದಾಣದವರೆಗೆ ಪ್ರಯಾಣಕ್ಕೆ 10 ರೂ. ಹೆಚ್ಚುವರಿ ಶುಲ್ಕ ಪಾವತಿಸಲು ಕಂಡಕ್ಟರ್ ಕೇಳಿದ್ದರು. ಹೆಚ್ಚುವರಿ ಪ್ರಯಾಣ ದರ ನೀಡಲು ನಿರಾಕರಿಸಿದ್ದಕ್ಕೆ, ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ರಸ್ತೆಗಿಳಿದ ಗಜರಾಜ – ನಾಲ್ಕು ಕಿಮೀ ಟ್ರಾಫಿಕ್ ಜಾಮ್!
ಹೆಚ್ಚುವರಿ ಶುಲ್ಕದ ವಿಚಾರಕ್ಕೆ ಕಂಡಕ್ಟರ್ ಮತ್ತು ನಿವೃತ್ತ ಅಧಿಕಾರಿ ಮೀನ ಅವರ ನಡುವೆ ವಾಗ್ವಾದ ನಡೆಯಿತು. ಆದರೆ, ಮೀನ ಹಣ ನೀಡಲು ನಿರಾಕರಿಸಿದ್ದಾರೆ. ಕಂಡಕ್ಟರ್, ಮೀನ ಅವರನ್ನು ತಳ್ಳುತ್ತಿದ್ದಂತೆ, ಇವರು ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಕಂಡಕ್ಟರ್ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹೆಲ್ಮೆಟ್ ಹಾಕದಿದ್ರೆ ಪೆಟ್ರೋಲ್ ಇಲ್ಲ; ಸಾವು-ನೋವು ತಡೆಗೆ ಯುಪಿ ಸರ್ಕಾರ ಸಜ್ಜು
ನವದೆಹಲಿ: ಪೂಜಾ ಖೇಡ್ಕರ್ (Puja Khedkar) ಅವರ ಐಎಎಸ್ (IAS) ಆಯ್ಕೆಯನ್ನು ಯುಪಿಎಸ್‌ಸಿ ರದ್ದುಗೊಳಿಸಿದೆ. ಅಲ್ಲದೇ ಮುಂದೆ ಅವರು ಯಾವುದೇ ಪರೀಕ್ಷೆಗಳನ್ನು ತೆಗೆದುಕೊಳ್ಳದಂತೆ ನಿಷೇಧ ಹೇರಿದೆ.
ಅಕ್ರಮ ಕಾರಣಕ್ಕೆ 2024 ರ ಜುಲೈ 18 ರಂದು ನಾಗರಿಕ ಸೇವಾ ಪರೀಕ್ಷೆ-2022 (CSE-2022) ರ ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಅಭ್ಯರ್ಥಿಯಾಗಿರುವ ಖೇಡ್ಕರ್ ಅವರಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ನಿಂದ ಶೋಕಾಸ್ ನೋಟಿಸ್ (SCN) ನೀಡಲಾಗಿತ್ತು. ಜುಲೈ 25 ರೊಳಗೆ ನೋಟಿಸ್‌ಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಅವರು ಆಗಸ್ಟ್ 4 ರವರೆಗೆ ಸಮಯ ಕೋರಿದ್ದರು.
ಯುಪಿಎಸ್‌ಸಿ ಜುಲೈ 30 ರವರೆಗೆ ಅವರಿಗೆ ಸಮಯ ನೀಡಿತು. ಇದು ಅಂತಿಮ ಅವಕಾಶ, ಸಮಯದಲ್ಲಿ ಯಾವುದೇ ವಿಸ್ತರಣೆಗೆ ಅನುಮತಿ ನೀಡಲ್ಲ ಎಂದು ಸ್ಪಷ್ಟಪಡಿಸಿತ್ತು. ಗಡುವಿನೊಳಗೆ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಯುಪಿಎಸ್‌ಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಲಾಗಿತ್ತು. ಇದನ್ನೂ ಓದಿ: ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್ ತರಬೇತಿಗೆ ತಡೆ – ಅಕಾಡೆಮಿಗೆ ಬುಲಾವ್!
ನಿಗದಿತ ಸಮಯದೊಳಗೆ ತನ್ನ ವಿವರಣೆ ಸಲ್ಲಿಸಲು ಖೇಡ್ಕರ್ ವಿಫಲರಾದರು. UPSC ಲಭ್ಯವಿರುವ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ. CSE-2022 ನಿಯಮಗಳ ನಿಬಂಧನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಕಂಡುಬಂದಿದೆ. ಹೀಗಾಗಿ CSE-2022 ಗಾಗಿ ಅವರ ತಾತ್ಕಾಲಿಕ ನೇಮಕಾತಿ ರದ್ದುಗೊಳಿಸಲಾಗಿದೆ. ಮುಂದಿನ ಎಲ್ಲಾ ಪರೀಕ್ಷೆಗಳಿಂದ ಅವರನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ ಎಂದು ಯುಪಿಎಸ್‌ಸಿ ತಿಳಿಸಿದೆ.
ಮುಂಬೈ: ಐಎಎಸ್ ಅಧಿಕಾರಿಗಳ ಪುತ್ರಿಯೊಬ್ಬಳು ಸೋಮವಾರ (ಇಂದು) ಮುಂಜಾನೆ ಮುಂಬೈನ (Mumbai) ಬಹುಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರ ಕೇಡರ್ IAS ಅಧಿಕಾರಿಗಳಾದ ರಾಧಿಕಾ ಮತ್ತು ವಿಕಾಸ್ ರಸ್ತೋಗಿ ಅವರ ಪುತ್ರಿ ಲಿಪಿ ರಸ್ತೋಗಿ (27) ಆತ್ಮಹತ್ಯೆಗೆ ಶರಣಾದ ಯುವತಿ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ.
ಕಾನೂನು ವಿದ್ಯಾರ್ಥಿನಿಯಾಗಿದ್ದ ಲಿಪಿ, ಇಂದು ಮುಂಜಾನೆ 4 ಗಂಟೆ ಸುಮಾರಿಗೆ ರಾಜ್ಯ ಸಚಿವಾಲಯದ ಬಳಿಯ ಕಟ್ಟಡದ 10ನೇ ಮಹಡಿಯಿಂದ ಜಿಗಿದಿದ್ದಾರೆ. ಆಕೆಯ ಕೋಣೆಯಲ್ಲಿ ಡೆತ್ ನೋಟ್ ಒಂದು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಕಾಸ್ ರಸ್ತೋಗಿ ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರೆ, ರಾಧಿಕಾ ರಸ್ತೋಗಿ ರಾಜ್ಯದ ಗೃಹ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕನ್ನಡದಲ್ಲಿ ಐಎಎಸ್ (IAS) ಮಾಡಿದ ಮೊದಲ ಅಧಿಕಾರಿ ಹಾಗೂ ಬಾ ನಲ್ಲೆ ಮಧುಚಂದ್ರಕೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕರಾಗಿ (Actor) ನಟಿಸಿರುವ ಕೆ.ಶಿವರಾಮ್ (K. Shivaram) ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಇದೆ. ಅನಾರೋಗ್ಯದಿಂದಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಲವು ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಮೂಲಗಳ ಪ್ರಕಾರ ಎಚ್.ಸಿ.ಜಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಸಿಗುತ್ತಿದೆ. ಕನ್ನಡದಲ್ಲೇ ಐಎಎಸ್ ಬರೆದು, ನಂತರ ಬೆಂಗಳೂರು, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅವರು ಕೆಲಸ ಮಾಡಿದ್ದಾರೆ.
ನಂತರ ಬಾ ನಲ್ಲೆ ಮಧುಚಂದ್ರಿಕೆ, ವಸಂತ ಕಾವ್ಯದಂತಹ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಸಾಂಗ್ಲಿಯಾನ 3 ಚಿತ್ರದಲ್ಲಿ ಇವರದ್ದು ಖಳನಾಯಕನ ಪಾತ್ರ. ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಿವರಾಮ್, ತಮ್ಮ ಮಗಳನ್ನು ನಟ ಪ್ರದೀಪ್ ಅವರಿಗೆ ಧಾರೆಯರೆದಿದ್ದರು. ಕೆಲವು ತಿಂಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅವರು ಆಪ್ತರು ತಿಳಿಸಿದ್ದಾರೆ.
ನವದೆಹಲಿ: ನನ್ನ ವಿರುದ್ಧ ಮಾಡಿರುವ ಅವಹೇಳನಕಾರಿ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಿಂದ ಡಿಲೀಟ್ ಮಾಡಬಹುದು. ಆದರೆ ಇಂತಹ ಪೋಸ್ಟ್ ಗಳಿಂದ ನನ್ನ ಕುಟುಂಬಕ್ಕೆ ಘಾಸಿಯಾಗಿದೆ, ನಾನು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ? ಹೀಗಾಗಿ ಐಪಿಎಸ್ ಡಿ.ರೂಪಾ ಬೇಷರತ್ ಕ್ಷಮೆ ಕೇಳಬೇಕು ಎಂದು ಐಎಎಸ್ ರೋಹಿಣಿ ಸಿಂಧೂರಿ (IAS Rohini Sinduri) ಪಟ್ಟು ಹಿಡಿದಿದ್ದಾರೆ.
ಡಿ.ರೂಪಾ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ವಾದ ಮಂಡಿಸಿದ ರೋಹಿಣಿ ಸಿಂಧೂರಿ ಪರ ವಕೀಲರು, ಮಾನಹಾನಿಯಾಗುವ ರೀತಿಯಲ್ಲಿ ಪೋಸ್ಟ್ ಗಳನ್ನು ಮಾಡಲಾಗಿದೆ ಈ ಹಿನ್ನಲೆಯಲ್ಲಿ ಡಿ.ರೂಪಾ ಬೇಷರತ್ ಕ್ಷಮೆ ಕೋರುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿ.ರೂಪಾ (D. Roopa) ಪರ ವಕೀಲರು, ರೋಹಿಣಿ ಸಿಂಧೂರಿ ಕೂಡಾ ಆರೋಪ ಮಾಡಿದ್ದಾರೆ. ಬುದ್ಧಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಾದಿಸಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಿಂಧೂರಿ ಪರ ವಕೀಲರು, ಹೌದು ಬುದ್ಧಿ ಭ್ರಮಣೆಯಾದವರು ಈ ರೀತಿ ಪೊಸ್ಟ್ ಮಾಡುತ್ತಾರೆ. ಆದರೆ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಹೇಳಿಲ್ಲ ಅಂದ್ರು. ಇದನ್ನೂ ಓದಿ: ಅನ್ನಪೂರ್ಣಿ ಸಿನಿಮಾ: ನಯನತಾರಾ ವಿರುದ್ಧ ಪ್ರಕರಣ ದಾಖಲು
ವಾದ-ಪ್ರತಿವಾದ ವೇಳೆ ಮಧ್ಯಪ್ರವೇಶ ಮಾಡಿದ ನ್ಯಾ.ಎ.ಎಸ್ ಓಕಾ (S Oka), ನೀವು ಒಂದು ನಿರ್ಧಾರಕ್ಕೆ ಬರಬೇಕು ಒಂದು ತಿಂಗಳ ಸಮಯ ನೀಡಲಾಗುವುದು, ಸೋಶಿಯಲ್ ಮೀಡಿಯಾದಿಂದ ಎಲ್ಲ ಪೋಸ್ಟ್ ಡಿಲೀಟ್ ಮಾಡಬೇಕು. ನಿಮಗೆ ಒಳ್ಳೆಯ ಭವಿಷ್ಯವಿದೆ. ಉಜ್ವಲ ಭವಿಷ್ಯದ ಕಾರಣದಿಂದ ಪ್ರಕರಣ ಇತ್ಯರ್ಥಕ್ಕೆ ಯೋಚಿಸಿದ್ದೇವೆ. ಆದರೆ ಭಾವನೆಗಳು ಅಧಿಕವಾಗಿದ್ದರೆ ನಾವು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಇಬ್ಬರೂ ಅಧಿಕಾರಿಗಳಿಗೆ ಬುದ್ಧಿ ಮಾತು ಹೇಳಿದರು.
ನ್ಯಾಯಧೀಶರ ಮಾತಿಗೆ ಒಪ್ಪದ ರೋಹಿಣಿ ಸಿಂಧೂರಿ ಪರ ವಕೀಲರು, ನಮಗೆ ಉಜ್ವಲ ಭವಿಷ್ಯವಿರಬಹುದು. ಆದರೆ ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದು ಹೇಗೆ?. ನಮ್ಮನ್ನು ಜನರು ಬೇರೆ ರೀತಿಯಲ್ಲೇ ನೋಡುತ್ತಾರೆ. ಈ ಹಂತದಲ್ಲಿ ಮೌನವಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ ಎ.ಎಸ್ ಓಕಾ, ಮೌನವಾಗಿರಲು ಅಥವಾ ಅರ್ಜಿ ಹಿಂತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತಿಲ್ಲ. ಒಂದು ತಿಂಗಳು ಸಮಯ ನೀಡಲಾಗುವುದು ಫೆ.16ಕ್ಕೆ ಮುಂದಿನ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಅಲ್ಲಿಯ ತನಕ ಮಧ್ಯಂತರ ಆದೇಶ ಆದೇಶ ಮುಂದುವರಿಯಲಿದೆ. ಯಾರು ಯಾರ ವಿರುದ್ಧವೂ ಆರೋಪ ಪ್ರತ್ಯಾರೋಪ ಮಾಡಬಾರದು. ಸೋಶಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಮಾಡುವಂತಿಲ್ಲ ಎಂದು ನ್ಯಾಯಾಧೀಶರು ಸೂಚಿಸಿದರು.
ಬೆಂಗಳೂರು: 7 ತಿಂಗಳ ಬಳಿಕ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಜೊತೆಗೆ ಐಪಿಎಸ್ ಅಧಿಕಾರಿ ಡಿ.ರೂಪಾಗೂ (D.Roopa Moudgil) ಸರ್ಕಾರ ಹುದ್ದೆ ನಿಯೋಜನೆ ಮಾಡಿದೆ. ಆಂತರಿಕ ಭದ್ರತಾ ವಿಭಾಗದ ಐಜಿಯಾಗಿ ರೂಪಾರನ್ನ ನಿಯೋಜಿಸಲಾಗಿದೆ.
ರೋಹಿಣಿ ಸಿಂಧೂರಿ ಮತ್ತು ರೂಪಾ ಮೌದ್ಗಿಲ್ ಪರಸ್ಪರ ಕಿತ್ತಾಡಿಕೊಂಡಿದ್ದರು. ಆಗ ರಾಜ್ಯ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಯಾವುದೇ ಹುದ್ದೆಯನ್ನು ನೀಡಿರಲಿಲ್ಲ. ಇದಾದ 7 ತಿಂಗಳ ಬಳಿಕ ರೋಹಿಣಿ ಸಿಂಧೂರಿ ಅವರನ್ನು ಕರ್ನಾಟಕ ಗೆಜೆಟಿಯರ್ ಡಿಪಾರ್ಟ್‌ಮೆಂಟ್‌ನ ಮುಖ್ಯ ಸಂಪಾದಕರನ್ನಾಗಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ ಗೆಜೆಟಿಯರ್‌ಗೆ ರೋಹಿಣಿ ಸಿಂಧೂರಿ ಚೀಫ್ ಎಡಿಟರ್
ರೋಹಿಣಿ ಸಿಂಧೂರಿ ಅವರಿಗೆ ಹುದ್ದೆ ನಿಯೋಜನೆಯಾದ ಬೆನ್ನಲ್ಲೇ ಡಿ.ರೂಪಾ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಯಾಗಿ ನಿಯುಕ್ತಿಗೊಳಿಸಲಾಗಿದೆ.
ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರ ಮತ್ತು ಧರ್ಮ ಕಲಹದಲ್ಲಿ ತೊಡಗಿಕೊಳ್ಳಬಾರದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗೆ ಪ್ರಾಮಾಣಿಕತೆಯ ಪಾಠ ಮಾಡಿದ್ದಾರೆ. ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಪ್ರಜಾಪ್ರಭುತ್ವದ ಕಣ್ಣು ಮತ್ತು ಕಿವಿ ಇದ್ದಂತೆ. ಸಮಾಜವನ್ನ ಬದಲಾವಣೆ ಮತ್ತು ಸುಧಾರಣೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ನಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಬಾಂಬ್ ಸ್ಫೋಟದ ಬೆದರಿಕೆ, ಪ್ರಧಾನಿ ಕೊಲ್ಲುವುದಾಗಿ ಕಾಮೆಂಟ್: ಆರೋಪಿಗಾಗಿ ತೀವ್ರ ಶೋಧ
ಜನರು ಮತ್ತು ಸರ್ಕಾರದ ನಡುವೆ ಸೇತುವೆ ಆಗಿ ಕೆಲಸ ಮಾಡುವವರು ಅಧಿಕಾರಿಗಳು. ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಬೇಕು. ಜನಪರ ಕೆಲಸ ಮಾಡಿ ಸರ್ಕಾರಕ್ಕೂ ಒಳ್ಳೆಯ ಹೆಸರು ಬರಲಿದೆ. ಅನೇಕ ಜನ ಒಳ್ಳೆಯ ಅಧಿಕಾರಿಗಳು ಇದ್ದಾರೆ. ಆದರೆ ಕೆಲವರು ಸರ್ಕಾರದ ನಿರೀಕ್ಷೆಯಂತೆ ಕೆಲಸ ಮಾಡದೇ ಇರುವವರು ಇದ್ದಾರೆ. ಅಂತಹ ಕೆಲವು ಅಧಿಕಾರಿಗಳ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂವಿಧಾನವನ್ನು ರಕ್ಷಣೆ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಂವಿಧಾನದ ಧ್ಯೇಯೋದ್ದೇಶ ಅರ್ಥ ಮಾಡಿಕೊಂಡು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಬಡವರಿಗಾಗಿ ನಾವು 5 ಗ್ಯಾರಂಟಿ ಜಾರಿ ಘೋಷಣೆ ಮಾಡಿದ್ದೇವೆ. ಈಗಾಗಲೇ 3 ಗ್ಯಾರಂಟಿಗಳು ಜಾರಿ ಆಗಿವೆ. 4 ನೇ ಗ್ಯಾರಂಟಿ ಆ.20ಕ್ಕೆ ಜಾರಿ ಆಗಲಿದೆ. 5ನೇ ಗ್ಯಾರಂಟಿ ಡಿಸೆಂಬರ್ ಅಥವಾ ಜನವರಿಯಲ್ಲಿ ಅನುಷ್ಠಾನ ಆಗಲಿದೆ. ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಬೇಕಾದರೆ ಅಧಿಕಾರಿಗಳ ಪಾತ್ರ ಮುಖ್ಯ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ಸಚಿವ ಕೃಷ್ಣಭೈರೇಗೌಡ ಸೇರಿ ಸಂಘದ ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಕೆಎಎಸ್ ಅಧಿಕಾರಿಗಳನ್ನ ಸಿಇಒ, ಡಿಸಿ ಪೋಸ್ಟ್‌ಗೆ ನೇಮಕ ಮಾಡಬೇಕು. ಕೆಎಎಸ್ ಅಧಿಕಾರಿಗಳನ್ನು ಐಎಎಸ್ ಆಗಿ ಪದೋನ್ನತಿ ಮಾಡುವ ಪ್ರಮಾಣವನ್ನ 50% ಹೆಚ್ಚಳ ಮಾಡಬೇಕು ಎಂದು ಸಿಎಂಗೆ ಕೆಎಎಸ್ ಅಧಿಕಾರಿಗಳ ಸಂಘದ ವತಿಯಿಂದ ಮನವಿ ಮಾಡಲಾಯಿತು. ಇದನ್ನೂ ಓದಿ: ಹರಿಶ್ಚಂದ್ರ ಘಾಟ್‌ನಲ್ಲಿ ನೆರವೇರಿದ ಸ್ಪಂದನಾ ಅಂತ್ಯಸಂಸ್ಕಾರ
ಬೆಂಗಳೂರು: ಮಹಾಘಟಬಂಧನ್ ಸಭೆಗಾಗಿ ಹೊರ ರಾಜ್ಯಗಳಿಂದ ಬಂದ ನಾಯಕರನ್ನು ಸ್ವಾಗತಿಸಲು ಐಎಎಸ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದ್ದ ವಿಚಾರ ಸದನದಲ್ಲಿ ಕೋಲಾಹಲ ಸೃಷ್ಟಿಸಿತು. ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಅಲ್ಲದೇ ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮುಂದೆ ಎಸೆದರು. ಈ ಒಂದು ಹೈಡ್ರಾಮಾಕ್ಕೆ ಬುಧವಾರದ ಕಲಾಪ ಸಾಕ್ಷಿಯಾಯಿತು.
ಮಹಾಘಟಬಂಧನ್ ಗಣ್ಯರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳ ಬಳಕೆ ವಿಚಾರವನ್ನು ಕಲಾಪದಲ್ಲಿ ಪ್ರಸ್ತಾಪಿಸಿದ ಆರ್. ಅಶೋಕ್, ನಿನ್ನೆ, ಮೊನ್ನೆ ಸಭೆಗಳಲ್ಲಿ ಗಣ್ಯರ ಸ್ವಾಗತಕ್ಕೆ ಹೊಟೇಲ್‌ಗೆ ಕರೆತರಲು ಹಿರಿಯ ಅಧಿಕಾರಿಗಳ ಬಳಕೆ ಮಾಡಲಾಗಿದೆ. ಇದು ಯಾವ ಕಾನೂನಿನಲ್ಲಿ ಬಳಸಿದ್ದೀರಿ? ಇದು ಅಪರಾಧ, ಶಿಷ್ಟಾಚಾರ ಉಲ್ಲಂಘನೆ. ಸರ್ಕಾರ ಇದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು.
ಅಶೋಕ್ ವಿರೋಧಕ್ಕೆ ಸಚಿವ ಎಚ್.ಕೆ. ಪಾಟೀಲ್ ಸಮಜಾಯಿಷಿ ನೀಡಿ, ರಾಜ್ಯಕ್ಕೆ ಗಣ್ಯರು ಬಂದಾಗ ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ನಮ್ಮಿಂದ ಪ್ರೋಟೋಕಾಲ್ ಉಲ್ಲಂಘನೆ ಆಗಿಲ್ಲ. ಪ್ರೋಟೋಕಾಲ್ ಇಲ್ಲದವರಿಗೆ ನಮ್ಮ ನಾಯಕರು ಸ್ವಾಗತಿಸಿದ್ದಾರೆ. 26 ಪಕ್ಷಗಳು ಒಟ್ಟಾಗಿ ಸೇರಿದ್ದು ಬಿಜೆಪಿಯವರಿಗೆ ಸಹಿಸೋದಕ್ಕೆ ಆಗ್ತಿಲ್ಲ ಎಂದು ಹೇಳಿದರು. ಪಾಟೀಲ್‌ರ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
ಲಾಲೂ ಪ್ರಸಾದ್ ಯಾದವ್ ಸಿಎಂ ಆಗಿದ್ದಾರಾ? ಅವರಿಗೆ ರವಿಶಂಕರ್ ಅನ್ನೋ ಐಎಎಸ್ ಅಧಿಕಾರಿ ನಿಯೋಜಿಸಿದ್ದೀರಲ್ಲ? ಸಿಎಸ್ ಅವರು ಅಧಿಕಾರಿಗಳ ನಿಯೋಜಿಸಿ ತಪ್ಪು ಮಾಡಿದ್ದಾರೆ ಎಂದು ಅಶೋಕ್ ಗುಡುಗಿದರು. ಈ ವೇಳೆ ಬಿಜೆಪಿ ಸದಸ್ಯರ ಮೇಲೆ ಸ್ಪೀಕರ್ ಯು.ಟಿ. ಖಾದರ್ ಗರಂ ಆದರು. ಈ ವಿಚಾರದಲ್ಲಿ ಚರ್ಚೆಗೆ ನೋಟಿಸ್ ಕೊಡಿ, ಚರ್ಚೆ ಮಾಡಿ. ನೋಟಿಸ್ ಕೊಡ್ರೀ.. ಇಷ್ಟ ಬಂದಾಗ ಮಾತಾಡೋ ನಿಯಮವಿಲ್ಲ ಎಂದು ಗರಂ ಆದರು.
ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿದ ಬಿಜೆಪಿ ನಾಯಕರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಸಿಎಂ ಅವರು ಅಧಿಕಾರಿಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಬಿಜೆಪಿಯಿಂದ ಧರಣಿ ಹಿನ್ನೆಲೆ ಸದನವನ್ನು ಸ್ಪೀಕರ್ ಸ್ವಲ್ಪ ಕಾಲ ಮುಂದೂಡಿದರು. ನಂತರ ಸ್ಪೀಕರ್ ಕೊಠಡಿಯಲ್ಲಿ ಬಿಜೆಪಿ ಸದಸ್ಯರ ಜತೆ ಸಂಧಾನ ಸಭೆ ನಡೆಯಿತು. ಧರಣಿ ಕೈಬಿಡುವಂತೆ ಕಾಂಗ್ರೆಸ್‌ನವರು ಮನವಿ ಮಾಡಿದರು. ವಿಧಾನಸಭೆ ಕಲಾಪ ಪುನಾರಂಭವಾದಾಗ ಸ್ಪೀಕರ್ ಸಂಧಾನ ವಿಫಲವಾಯಿತು. ಮತ್ತೆ ಸದನದ ಬಾವಿಯಲ್ಲಿ ಬಿಜೆಪಿ ಧರಣಿ ಮುಂದುವರಿಯಿತು. ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಇಡೀ ಎರಡು ದಿನ ರಾಜಕಾರಣಿಗಳ ಕಾವಲು ಕಾದಿದ್ದಾರೆ ಅಧಿಕಾರಿಗಳು. ನಿಮ್ಮ ರಾಜಕೀಯ ತೆವಲಿಗಾಗಿ ರಾಜ್ಯದ ಮಾನ ಮರ್ಯಾದೆ ಹರಾಜು ಮಾಡಿದ್ದೀರಾ. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರೋರು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ. ಎಂಎಲ್‌ಎ, ಎಂಪಿ ಅಲ್ಲದವರನ್ನೂ ಐಎಎಸ್ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಪುಡಿ ಪಕ್ಷಗಳ ಮುಖಂಡರನ್ನೆಲ್ಲ ಐಎಎಸ್ ಅಧಿಕಾರಿಗಳು ಸ್ವಾಗತ ಮಾಡಿರೋದು ಸರಿಯಲ್ಲ ಎಂದು ಕೆಂಡ ಕಾರಿದರು. ಬಿಜೆಪಿ ಧರಣಿಗೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ನಿಮ್ಮ ಬೆದರಿಕೆಗಳಿಗೆ ಹೆದರಲ್ಲ. ಬಿಜೆಪಿ ಧರಣಿ ಮಾಡುತ್ತಿರುವುದು ಸರಿಯಲ್ಲ. ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಐಎಎಸ್ ಅಧಿಕಾರಿಗಳನ್ನು ಲೀಗಲ್ ಆಫೀಸರ್ ಮಾಡಿದ್ದರು. ಅಲ್ಲದೇ ತಮ್ಮ ಪ್ರಮಾಣವಚನ ಸಂದರ್ಭದಲ್ಲಿ ಇದೇ ನಿರ್ಧಾರ ತೆಗೆದುಕೊಂಡಿದ್ದರು. ಕುಮಾರಕೃಪಾಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನ ನಿಯೋಜಿಸಿದ್ರು. ಇವರ ಧರಣಿಗೆ ಸರ್ಕಾರ ಸೊಪ್ಪು ಹಾಕಲ್ಲ. ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಸಿಎಂ ಸಿದ್ದು ಗರಂ ಆದರು. ಇದನ್ನೂ ಓದಿ: ವಿಧಾನ ಪರಿಷತ್‍ನಲ್ಲಿ ಗುಂಡಿನ ಗಮ್ಮತ್ತಿನ ಬಗ್ಗೆ ಚರ್ಚೆ- ನಗೆಗಡಲಲ್ಲಿ ತೇಲಿದ ಸದನ
ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ನಡೆಸಿತು. ಧರಣಿ ಕೈಬಿಡುವಂತೆ ಸ್ಪೀಕರ್ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಕೆಲವು ವಿಧೇಯಕಗಳ ಅಂಗೀಕಾರಕ್ಕೆ ಸರ್ಕಾರ ಮುಂದಾಯಿತು. ಧರಣಿಯ ನಡುವೆಯೇ ಸಿವಿಲ್ ಪ್ರಕ್ರಿಯೆಗಳ ಕರ್ನಾಟಕ ಸಂಹಿತೆಗಳ ತಿದ್ದುಪಡಿ ವಿಧೇಯಕ ಅಂಗೀಕರಿಸಿತು. ಚರ್ಚೆ ಇಲ್ಲದೇ ಸರ್ಕಾರಿ ವ್ಯಾಜ್ಯಗಳ ನಿರ್ವಹಣೆ ವಿಧೇಯಕಕ್ಕೂ ಅಂಗೀಕಾರ ದೊರೆಯಿತು. ಸ್ವಯಂ ಘೋಷಣೆ ಮೂಲಕ ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿ ಪರಿವರ್ತನೆ ಮಾಡಲು ಅವಕಾಶ ಕೊಡುವ ವಿಧೇಯಕವನ್ನೂ ಅಂಗೀಕರಿಸಲಾಯಿತು. ಈ ವೇಳೆ ದೋಖಾ ದೋಖಾ ಎಂದು ಬಿಜೆಪಿ ನಾಯಕರು ಕೂಗಿದರು. ಪ್ರತಿಪಕ್ಷಗಳ ಧರಣಿ ತೀವ್ರವಾಗಿ ವಿಧೇಯಕಗಳ ಪ್ರತಿಗಳನ್ನು ಹರಿದು ಬಿಸಾಡಿದರು.
ಈ ವೇಳೆ ಭೋಜನ ವಿರಾಮಕ್ಕೆ ಸದನ ಮುಂದೂಡದೇ ಮುಂದುವರೆಸಿದರು. ಊಟಕ್ಕೆ ಹೋಗೋರು ಹೋಗಿ ಮಾಡಿಕೊಂಡು ಬರಬಹುದು. ಸದನ ಮುಂದುವರೆಯಲಿದೆ ಎಂದು ಸ್ಪೀಕರ್ ಹೇಳಿದರು. ಈ ವೇಳೆ ಅವರ ಸ್ಥಾನವನ್ನು ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅಲಂಕರಿಸಿದರು. ಊಟಕ್ಕೆ ಬಿಡದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಧರಣಿ ನಿರತ ಬಿಜೆಪಿ ಸದಸ್ಯರು, ಸ್ಪೀಕರ್ ಪೀಠದ ಬಳಿ ಜಮಾಯಿಸಿ ಹರಿದ ಹಾಳೆ ಎಸೆದ ಆಕ್ರೋಶ ಹೊರಹಾಕಿದರು. ಸ್ಪೀಕರ್ ಪೀಠದಲ್ಲಿ ಕೂತಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮುಖದ ಮೇಲೆಯೇ ಹರಿದ ಹಾಳೆ ಎಸೆದರು. ಈ ವೇಳೆ ಸ್ಪೀಕರ್ ರಕ್ಷಣೆಗೆ ನಿಂತ ಮಾರ್ಷಲ್‌ಗಳು ಬಂದು ನಿಂತರು. ಕೊನೆಗೂ ಸದನವನ್ನು ಮಧ್ಯಾಹ್ನ 3 ಕ್ಕೆ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಮುಂದೂಡಿದರು. ಇದನ್ನೂ ಓದಿ: ಹೆಸರು ಬದಲಾವಣೆ ಬಿಟ್ಟು ಇಂಡಿಯಾ ಸಭೆಯಿಂದ ಏನು ಪ್ರಯೋಜನ ಆಗಿಲ್ಲ: ಕುಮಾರಸ್ವಾಮಿ
ರಾಮನಗರ: ಮಹಾಘಟಬಂಧನ್ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ವಿಚಾರ ಸಂಬಂಧ ಚನ್ನಪಟ್ಟಣದಲ್ಲಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಇದೊಂದು ಅತ್ಯಂತ ಕೆಟ್ಟ ಸಂಪ್ರದಾಯ. ಒಂದು ಪಕ್ಷದ ರಾಜಕೀಯ ಕಾರ್ಯಕ್ರಮಕ್ಕೆ ಹಿರಿಯ ಅಧಿಕಾರಿಗಳ ಬಳಕೆ ಸರಿಯಲ್ಲ. ಸರ್ಕಾರ ಪ್ರೋಟೋಕಾಲ್ ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕುಮಾರಸ್ವಾಮಿ ಎಲ್ಲಾದ್ರಲ್ಲೂ ರಾಜಕೀಯ ಮಾಡ್ತಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಗುಡುಗಿದ ಅವರು, ಈವಾಗ ಏನು ಮಾಡ್ತಿದ್ದಾರೆ.? ಈಗ ಮಾಡ್ತಿರೋದು ರಾಜಕೀಯವೋ, ಅಥವಾ ರಾಜ್ಯದ ಅಭಿವೃದ್ಧಿಯೋ ಎಂದು ಟಾಂಗ್ ನೀಡಿದ್ರು. ಅವರ ರಾಜಕೀಯ ಸಂಘಟನೆಗೆ ಹಿರಿಯ ಅಧಿಕಾರಿಗಳ ಬಳಕೆ ಮಾಡಿದ್ದಾರೆ. ಕಳೆದ 40ವರ್ಷಗಳ ರಾಜಕೀಯ ಇತಿಹಾಸದಲ್ಲೇ ಇದು ಪ್ರಥಮ. ಬೇರೆ ಪಕ್ಷದ ನಾಯಕರ ಸ್ವಾಗತ ಕೋರಕು ಬೇಕಿದ್ರೆ ಸಚಿವರು, ಸಂಸದರು ಹೋಗಲಿ. ಆದರೆ ಅಧಿಕಾರಿಗಳ ಕಳಿಸುವ ಮೂಲಕ ಕೆಟ್ಟ ಸಂಪ್ರದಾಯ ಹುಟ್ಟುಹಾಕಿದ್ದಾರೆ. ಅಧಿಕಾರಿಗಳ ಪಕ್ಷದ ಕಾರ್ಯಕರ್ತರ ರೀತಿ ಬಳಕೆ ಮಾಡಿರೋದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಪಕ್ಷ ನಾಯಕನಾಗಲು ಹೆಚ್‍ಡಿಕೆ ಹೀಗೆ ಅರೋಪ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನಿರೋದೇ ವಿರೋಧ ಪಕ್ಷದಲ್ಲಿ. ನಮ್ಮತ್ರ ಇರೋದು ಕೇವಲ 19 ಸದಸ್ಯರು. ಬಿಜೆಪಿಯವರು 65 ಸ್ಥಾನ ಗೆದ್ದಿದ್ದಾರೆ. ನನಗೂ ವಿರೋಧ ಪಕ್ಷದ ಸ್ಥಾನಕ್ಕೂ ಸಂಬಂಧ ಇಲ್ಲ ಎಂದರು. ಇದನ್ನೂ ಓದಿ: ಟೊಮೆಟೋ ಬೆಳೆದು ಒಂದೇ ತಿಂಗಳಲ್ಲಿ ಕೋಟಿ-ಕೋಟಿ ಬಾಚಿದ ರೈತ – ದಂಪತಿ ಫುಲ್ ಖುಷ್