Tag: ಐಎಂಎ ವಂಚನೆ

  • ಮನ್ಸೂರ್‌ ಖಾನ್‌ ಒತ್ತಡ – ರೋಷನ್‌ ಬೇಗ್‌ ಅರೆಸ್ಟ್‌, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ಮನ್ಸೂರ್‌ ಖಾನ್‌ ಒತ್ತಡ – ರೋಷನ್‌ ಬೇಗ್‌ ಅರೆಸ್ಟ್‌, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ಬೆಂಗಳೂರು: ಐಎಂಎ ಕಂಪನಿಯ ಸಂಸ್ಥಾಪಕ ಮನ್ಸೂರ್‌ ಖಾನ್‌ ಒತ್ತಡದಿಂದಾಗಿ ಸಿಬಿಐ ಇಂದು ಮಾಜಿ ಮಂತ್ರಿ, ಶಿವಾಜಿ ನಗರದ ಮಾಜಿ ಶಾಸಕ ರೋಷನ್‌ ಬೇಗ್‌ ಅವರನ್ನು ಬಂಧಿಸಿದೆ.

    ರೋಷನ್‌ ಬೇಗ್‌ ಅವರನ್ನು ಬಂಧಿಸಿದ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈಗ ರೋಷನ್‌ ಬೇಗ್‌ ಅವರನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.

    ಬಂಧನ ಯಾಕೆ?
    ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್‌ ನೀಡಿ ರೋಷನ್‌ ಬೇಗ್‌ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ.

    ಈ ನಡುವೆ ಮನ್ಸೂರ್‌ ಖಾನ್‌ ನಾನು ರೋಷನ್‌ ಬೇಗ್‌ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್‌ ಬೇಗ್‌ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್‌ ಖಾನ್‌  ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ರೋಷನ್‌ ಬೇಗ್‌ ಅವರಿಗೆ ಮನ್ಸೂರ್‌ ಖಾನ್‌ 200 ಕೋಟಿ ಸೇರಿದಂತೆ ಐಷಾರಾಮಿ ಕಾರು, ಉಡುಗೊರೆ ನೀಡಿದ್ದ ಆರೋಪ ಈ ಪ್ರಕರಣ ಬೆಳಕಿಗೆ ಬಂದಾಗಲೇ ಬಂದಿತ್ತು. ಆದರೆ ಈಗ ಮನ್ಸೂರ್‌ ಖಾನ್‌ ಒತ್ತಡ ಹಾಕಿದ್ದ ಕಾರಣ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮನೆಗೆ ತೆರಳಿ ರೋಷನ್‌ ಬೇಗ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ  ಸಂಜೆಯ ವೇಳೆ ಬಂಧಿಸಿದೆ. ಇದನ್ನೂ ಓದಿ: ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಗ್ರಾಹಕರಿಗೆ ವಂಚನೆ ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷಕ್ಕೆ 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ 2019ರ ಏಪ್ರಿಲ್, ಮೇ ತಿಂಗಳಿನಲ್ಲಿ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಐಎಂಎ ವಂಚನೆ – ಶಿವಾಜಿನಗರದ ಕಾರ್ಪೋರೇಟರ್ ಪತಿ ಬಂಧನ

    ಐಎಂಎ ವಂಚನೆ – ಶಿವಾಜಿನಗರದ ಕಾರ್ಪೋರೇಟರ್ ಪತಿ ಬಂಧನ

    ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಸಂಬಂಧ ಬಿಬಿಎಂಪಿ ಪಾಲಿಕೆಯ ಸದಸ್ಯರೊಬ್ಬರ ಪತಿಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ಅಧಿಕಾರಿಗಳು ಬಂಧಿಸಿದ್ದಾರೆ.

    ಶಿವಾಜಿನಗರದ ಕಾರ್ಪೋರೇಟರ್ ಪರೀಧಾ ಅವರ ಪತಿ ಇಸ್ತಿಯಾಕ್ ಅಹಮದ್ ಬಂಧಿತ ಆರೋಪಿ. ಇಸ್ತಿಯಾಕ್ ಅಹಮದ್ ಶಿವಾಜಿನಗರದ ರೌಡಿಶೀಟರ್ ಹಾಗೂ ಶಾಸಕ ರೋಷನ್ ಬೇಗ್ ಆಪ್ತನಾಗಿದ್ದ. ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್‍ನಿಂದ ಎರಡು ಕೋಟಿ ರೂ. ಪಡೆದಿದ್ದ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಆರೋಪಿಯನ್ನು ಬಂಧಿಸಿದ ಎಸ್‍ಐಟಿ ಅಧಿಕಾರಿಗಳು, ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

    ಎಸ್‍ಐಟಿ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಇಸ್ತಿಯಾಕ್ ಅಹಮದ್‍ನನ್ನು ವಿಚಾರಣೆಗೆ ಒಳಪಡಿಸಿದ್ದರು. ಇದರಿಂದಾಗಿ ಆರೋಪಿ, ತಾನು ಮನ್ಸೂರ್ ಖಾನ್‍ನಿಂದ 2 ಕೋಟಿ ರೂ. ಹಣ ಪಡೆದಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

    ಈ ಪ್ರಕರಣದ ಮುಖ್ಯ ಆರೋಪಿ, ಐಎಂಎ ಮಾಲೀಕ ಮನ್ಸೂರ್ ಖಾನ್, ಬೆಂಗಳೂರು ಜಿಲ್ಲಾಧಿಕಾರಿ ವಿಜಯಶಂಕರ್, ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಸೇರಿದಂತೆ ಅನೇಕರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.

    ಮನ್ಸೂರ್ ಖಾನ್ ಜಾರಿ ನಿರ್ದೇಶನಾಲಯದ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ 15 ರಾಜಕೀಯ ನಾಯಕರ ಹೆಸರನ್ನು ಮನ್ಸೂರ್ ಹೇಳಿದ್ದ ಎಂದು ಮೂಲಗಳು ತಿಳಿಸಿದ್ದವು.

  • ಐಎಂಎ ವಂಚನೆ- ತಂಗಿ ಮದುವೆಗೆ ಕೂಡಿಟ್ಟ 2.5 ಲಕ್ಷ ರೂ. ಕಳೆದುಕೊಂಡ ಅಂಗವಿಕಲ

    ಐಎಂಎ ವಂಚನೆ- ತಂಗಿ ಮದುವೆಗೆ ಕೂಡಿಟ್ಟ 2.5 ಲಕ್ಷ ರೂ. ಕಳೆದುಕೊಂಡ ಅಂಗವಿಕಲ

    -ಸಣ್ಣ ಪುಟ್ಟ ಕಳ್ಳರನ್ನ ಹಿಡೀತೀರಿ, ಈಗ ಮನ್ಸೂರ್‍ನನ್ನು ಬಂಧಿಸಿ

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕೂಡಿಕೆ ಮಾಡಿದ್ದ ಅಂಗವಿಕರೊಬ್ಬರು ತಂಗಿ ಮದುವೆಗೆ ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

    ಐಎಂಎಯಿಂದ ಮೋಸಹೋದ ಸಲೀಂ ಅವರು ಪೊಲೀಸರಿಗೆ ದೂರಿ ನೀಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಮನ್ಸೂರ್ ಮಾತನ್ನ ನಂಬಿ ಐಎಂಎನಲ್ಲಿ ಹಣ ಹೂಡಿಕೆ ಮಾಡಿದ್ದೆ. ನಮಗೆ ಲಾಭ ಕೊಡ್ತೇನೆ ಎಂದು ಹೇಳಿ ಹಣ ಹೂಡಿಕೆ ಮಾಡಿಸಿಕೊಂಡಿದ್ದನು. ಇದೇ ತಿಂಗಳು 23 ರಂದು ನನ್ನ ತಂಗಿ ಮದುವೆ ನಿಶ್ಚಯವಾಗಿತ್ತು. ಎರಡು ತಿಂಗಳಿಂದ ನಾನು ಹಣ ಕೇಳುತ್ತಾನೆ ಬಂದಿದ್ದೇನೆ. ಹಣವನ್ನು ಕೊಡುತ್ತೇನೆ ಎಂದು ಮನ್ಸೂರ್ ಹೇಳಿದ್ದನು. ಆದರೆ ನಮಗೆ ಮೋಸ ಮಾಡಿ ಓಡಿ ಹೋಗಿದ್ದಾನೆ. ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಹಣ ಕೂಡಿಟ್ಟಿದ್ದೆ ಎಂದು ಅಳಲನ್ನು ಹೇಳಿಕೊಂಡಿದ್ದಾರೆ.

    ನಾನು ಮಾತ್ರ ಅಂಗವಿಕಲನಲ್ಲ, ನನ್ನ ಮನೆಯಲ್ಲಿ ಇನ್ನೂ ಮೂವರು ಅಂಗವಿಕಲರಿದ್ದಾರೆ. ನಮ್ಮ ಕಷ್ಟವನ್ನ ನಾನು ಯಾರಿಗೆ ಹೇಳಲಿ. ಸಿಟಿ ಮಾರ್ಕೆಟ್ ನಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿದ್ದೆ. ಒಂದು ಒಂದು ರೂಪಾಯಿ ಕಷ್ಟ ಪಟ್ಟು ಸೇರಿಸಿಟ್ಟಿದ್ದೆ. ಆದ್ರೆ ಐಎಂಎನಲ್ಲಿ ಎರಡುವರೆ ಲಕ್ಷ ಹೂಡಿಕೆ ಮಾಡಿ ಮೋಸ ಹೋಗಿದ್ದೇನೆ ಎಂದು ನೊಂದರು.

    ಏನು ಮಾಡುತ್ತಿದ್ದಾರೆ ಈ ಪೊಲೀಸರು? ಡಿಸಿಪಿ, ಎಸಿಪಿ ಎಲ್ಲಾ ಎಲ್ಲಿ ಹೋಗಿದ್ದಾರೆ? ಸಣ್ಣ ಪುಟ್ಟ ಕಳ್ಳತನ ಮಾಡಿದವರನ್ನ ಅರೆಸ್ಟ್ ಮಾಡುತ್ತಾರೆ. ಈಗ ಕೋಟಿಗಟ್ಟಲೆ ಹಣ ದೋಚಿ ಪರಾರಿಯಾಗಿರುವ ಮನ್ಸೂರ್ ಖಾನ್‍ನನ್ನ ಪೊಲೀಸರು ಬಂಧಿಸಲಿ. ಅಮಾಯಕರ ಹಣವನ್ನು ವಾಪಾಸ್ ಕೊಡಿಸಲಿ ಎಂದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.