Tag: ಐಎಂಎ ಮಾಲೀಕ

  • ಐಎಂಎ ಮಾಲೀಕನ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲು

    ಐಎಂಎ ಮಾಲೀಕನ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲು

    ಬೆಂಗಳೂರು: ಈಗಾಗಲೇ ವಂಚನೆ ಆರೋಪ ಎದುರಿಸುತ್ತಿರುವ ಐಎಂಎ ಮಾಲೀಕ ಮನ್ಸೂರ್ ಖಾನ್ ವಿರುದ್ಧ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.

    ಚಿನ್ನದ ವ್ಯಾಪಾರಿ ಅಂಕಿತ್ ಸಾಂಘ್ವಿ ಎಂಬವರು ಮನ್ಸೂರ್ ಖಾನ್ ವಿರುದ್ಧ ವಂಚನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸಾರ್ವಜನಿಕರಿಂದ ಮಾತ್ರವಲ್ಲದೆ, ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳಿಗೂ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

    ಮನ್ಸೂರ್ ಖಾನ್ ನನ್ನ ಬಳಿ ಸುಮಾರು 9.80 ಕೋಟಿ ರೂ. ಮೌಲ್ಯದ ಚಿನ್ನವನ್ನು ಖರೀದಿಸಿದ್ದರು. ಬಳಿಕ ಕಂಪನಿ ಹೆಸರಲ್ಲಿ ಚೆಕ್ ನೀಡಿ, ನಾಳೆ ಡ್ರಾ ಮಾಡಿಕೊಳ್ಳಿ ಎಂದು ಹೇಳಿದ್ದರು. ಆದರೆ ಹಣ ಡ್ರಾ ಮಾಡಿಕೊಳ್ಳುವ ಹಿಂದಿನ ದಿನವೇ ಮನ್ಸೂರ್ ಖಾನ್ ಕುಟುಂಬ ಸಮೇತ ತಲೆಮರೆಸಿಕೊಂಡಿದ್ದಾರೆ ಎಂದು ಅಂಕಿತ್ ಸಾಂಘ್ವಿ ದೂರಿದ್ದಾರೆ.

    ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಇಲ್ಲಿವರೆಗೂ ಒಟ್ಟು 6 ಎಫ್‍ಐಆರ್ ಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ.

    ಸಾರ್ವಜನಿಕರಿಗೆ ವಂಚಿಸಿದ್ದು ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು. ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದರು. ಈ ಬೆನ್ನಲ್ಲೇ ಮನಸೂರ್ ಖಾನ್ ಪರಾರಿಯಾಗಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಹಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.

  • ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಕೊನೆಗೂ ದುಬೈನಲ್ಲಿ ಐಎಂಎ ಮಾಲೀಕ ಮನ್ಸೂರ್ ಖಾನ್ ಪತ್ತೆ

    ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಖಾನ್ ಕೊನೆಗೂ ದುಬೈನಲ್ಲಿ ಪತ್ತೆಯಾಗಿದ್ದಾನೆ. ಮನ್ಸೂರ್ ಖಾನ್ ಹಾಗೂ ಆತನ ಕುಟುಂಬವನ್ನು ರಾ ಸಂಸ್ಥೆಯ ಅಧಿಕಾರಿಗಳು ದುಬೈನಿಂದ 122 ಕಿ.ಮೀ. ದೂರವಿರುವ ಬೀಚ್ ಸಿಟಿಯ ರಾಸ್-ಅಲ್- ಕೈಯಮ್ ಬಳಿ ಪತ್ತೆ ಮಾಡಿದ್ದಾರೆ.

    ದುಬೈಯಿಂದ ಬೇರೆ ಕಡೆ ಹೋಗದಂತೆ ಅಧಿಕಾರಿಗಳು ಕಣ್ಣಿಟ್ಟಿದ್ದರು. ಅಲ್ಲದೆ ಮನ್ಸೂರ್ ಬಗ್ಗೆ ದುಬೈ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. 15 ದಿನದಲ್ಲಿ ಮನ್ಸೂರ್ ನನ್ನು ಕರ್ನಾಟಕಕ್ಕೆ ಕರೆ ತರಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ.

    ಪತ್ತೆಯಾಗಿದ್ದು ಹೇಗೆ?
    ಮನ್ಸೂರ್ ಸಿಗಲು ಮೌಲ್ವಿಯೊಬ್ಬರು ಸುಳಿವು ಕೊಟ್ಟಿದ್ದರು. ಆ ಮೌಲ್ವಿಯ ಎಡವಟ್ಟಿನಿಂದ ಮನ್ಸೂರ್ ಬಲೆಗೆ ಬಿದ್ದಿದ್ದಾನೆ. ಇಂಟರ್ ನೆಟ್ ಕಾಲ್‍ನಲ್ಲಿ ಮನ್ಸೂರ್ ಬೆಂಗಳೂರಿನ ಮೌಲ್ವಿ ಶೋಯಬ್ ನನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದನು. ಮನ್ಸೂರ್ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆನ್‍ಲೈನ್‍ಗೆ ಬಂದು ಹೋಗುತ್ತಿದ್ದನು. ಹಾಗಾಗಿ ಪೊಲೀಸರು ಆತನ ಇಂಟರ್ ನೆಟ್ ಕಾಲ್ ಮೇಲೆ ಕಣ್ಣಿಟ್ಟಿದ್ದರು. ಮನ್ಸೂರ್ ಮೆಸೆಂಜರ್ ಮೂಲಕ ಮೌಲ್ವಿ ಶೋಯಬ್‍ಗೆ ಕರೆ ಮಾಡುತ್ತಿದ್ದನು.

    ಯಾರು ಮೌಲ್ವಿ ಶೋಯಬ್?
    ಶೋಯಬ್ ಹೆಣ್ಣೂರು ರಸ್ತೆಯಲ್ಲಿ ಮದರಸ ನಡೆಸುತ್ತಿದ್ದು, ಮನ್ಸೂರ್ ಈ ಮೌಲ್ವಿ ಜೊತೆ ನಿಕಟ ಸಂಪರ್ಕ ಹೊಂದಿದ್ದನು. ಬೆಂಗಳೂರಿನಲ್ಲಿದ್ದಾಗ ಮದರಸ ಕಟ್ಟಲು ಮನ್ಸೂರ್, ಮೌಲ್ವಿಗೆ 20 ಕೋಟಿ ಹಣ ನೀಡಿದ್ದನು. ಮನ್ಸೂರ್ ಸಹಾಯದೊಂದಿಗೆ ಮೌಲ್ವಿ ಮದರಸ ನಿರ್ಮಾಣ ಮಾಡಿಕೊಂಡಿದ್ದನು. ಆ ಮದರಸದಲ್ಲಿಯೇ ಮನ್ಸೂರ್ ಖಾನ್ ಜನರಿಗೆ ಮರಳು ಮಾಡುತ್ತಿದ್ದನು.