Tag: ಐಎಂಎ ಪ್ರಕರಣ

  • ಐಎಂಎ ಕೇಸಲ್ಲಿ ಜೈಲು ಸೇರಿದ್ದವನ ಜೊತೆ ಜಮೀರ್ ಅಹ್ಮದ್ ಪಾರ್ಟಿ

    ಐಎಂಎ ಕೇಸಲ್ಲಿ ಜೈಲು ಸೇರಿದ್ದವನ ಜೊತೆ ಜಮೀರ್ ಅಹ್ಮದ್ ಪಾರ್ಟಿ

    ಬೆಂಗಳೂರು: ಐಎಂಎ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯ ಜೊತೆಗೆ ಮಾಜಿ ಸಚಿವ ಜಮೀರ್ ಅಹ್ಮದ್  ಹಾಗೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಾರ್ಟಿ ಮಾಡಿದ್ದಾರೆ.

    ಐಎಂಎ ಪ್ರಕರಣದಲ್ಲಿ ಜೈಲು ಸೇರಿದ್ದ ಮುಜಾಹಿದ್ದೀನ್ ಅಕ್ಟೋಬರ್ 13ರಂದು ಜಾಮೀನಿನ ಆಧಾರದ ಮೇಲೆ ಹೊರ ಬಂದಿದ್ದ. ಅಂದು ರಾತ್ರಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಮುಜಾಹಿದ್ದೀನ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ಐಎಂಎ ಪ್ರಕರಣದಲ್ಲಿ ಮುಖ್ಯ ಆರೋಪಿ ಆಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಲು ಮುಜಾಹಿದ್ದೀನ್ ಸಹಾಯ ಮಾಡಿದ್ದ. ಈ ಹಿನ್ನೆಲೆಯಲ್ಲಿ ಮುಜಾಹಿದ್ದೀನ್ ಮೇಲೆ ಎಸ್‍ಐಟಿ ರೇಡ್ ಮಾಡಿ ಅರೆಸ್ಟ್ ಮಾಡಿತ್ತು. ಆದರೆ ಅಕ್ಟೋಬರ್ 11ರಂದು ಮುಜಾಹಿದ್ದೀನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠವು ಜಾಮೀನು ನೀಡಿತ್ತು. ಅಕ್ಟೋಬರ್ 13ರಂದು ಮುಜಾಹಿದ್ದೀನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನ ಹೊರಗೆ ನಿಂತಿದ್ದ ಬೆಂಬಲಿಗರು ಪಟಾಕಿ ಸಿಡಿಸಿ, ಹಾರ ಹಾಕಿ ಸ್ವಾಗತಿಸಿದ್ದರು.

    ಗ್ರಾಹಕರಿಗೆ ವಂಚಿಸಿದ್ದು ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಐಎಂಎ ಪ್ರಕರಣ: ಜೈಲಿನಿಂದ ಹೊರಬಂದವನಿಗೆ ರಾಜಮರ್ಯಾದೆ

    ಐಎಂಎ ಪ್ರಕರಣ: ಜೈಲಿನಿಂದ ಹೊರಬಂದವನಿಗೆ ರಾಜಮರ್ಯಾದೆ

    ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಮಾಯಕರ ಹಣ ತಿಂದವನಿಗೆ ರಾಜಮರ್ಯಾದೆ ನೀಡಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ನಿರ್ದೇಶಕರಲ್ಲಿ ಒಬ್ಬನಾದ ಮುಜಾಹಿದ್ದೀನ್ ಜೈಲಿನಿಂದ ಹೊರಬಂದಿದ್ದು, ಆತನಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.

    ಐಎಂಎ ಕೇಸಲ್ಲಿ ಮುಖ್ಯ ಆರೋಪಿ ಆಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಲು ಮುಜಾಹಿದ್ದೀನ್ ಸಹಾಯ ಮಾಡಿದ್ದನು. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಈಗ ಮುಜಾಹಿದ್ದೀನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಈತನನ್ನು ಬೆಂಬಲಿಗರು ಪಟಾಕಿ ಸಿಡಿಸಿ, ಹಾರ ಹಾಕಿ ಸ್ವಾಗತಿಸಿದ್ದಾರೆ. ಬೆಂಗಳೂರಿನ ಫ್ರೆಜರ್‍ಟೌನ್ ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಇದೇ ತಿಂಗಳ 11ರಂದು ಮುಜಾಹಿದ್ದೀನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠ ಜಾಮೀನು ನೀಡಿತ್ತು. ಮನ್ಸೂರ್ ಖಾನ್ ಎಸ್ಕೇಪ್ ಆಗಲು ಸಹಾಯ ಮಾಡಿದ್ದ ಮುಜಾಯಿದ್ದೀನ್ ಮೇಲೆ ಎಸ್‍ಐಟಿ ರೇಡ್ ಮಾಡಿ ಅರೆಸ್ಟ್ ಮಾಡಿತ್ತು.

    ಗ್ರಾಹಕರಿಗೆ ವಂಚಿಸಿದ್ದು ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಐಎಂಎ ಪ್ರಕರಣ: ಓರ್ವ ಆರೋಪಿಗೆ ಜಾಮೀನು, ಮೂವರ ಅರ್ಜಿ ತಿರಸ್ಕರಿಸಿದ ಕೋರ್ಟ್

    ಐಎಂಎ ಪ್ರಕರಣ: ಓರ್ವ ಆರೋಪಿಗೆ ಜಾಮೀನು, ಮೂವರ ಅರ್ಜಿ ತಿರಸ್ಕರಿಸಿದ ಕೋರ್ಟ್

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಓರ್ವ ಆರೋಪಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಮೂವರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದೆ.

    ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ್ ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು, ಆರೋಪಿಗಳಾದ ನಿಜಾಮುದ್ದೀನ್, ಅಫ್ಸರ್ ಪಾಶಾ, ಮೊಹಮ್ಮದ್ ಹನೀಫ್ ಅಫ್ಸರ್ ಅಜೀಜ್‍ಗೆ ಜಾಮೀನು ನಿರಾಕರಿಸಿದೆ. ಪ್ರಕರಣದ ಮತ್ತೊರ್ವ ಆರೋಪಿ ಸೈಯ್ಯದ್ ಮುಜಾಹಿದ್‍ಗೆ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

    ಮತ್ತೊಂದು ಕಡೆ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಸಂಸ್ಥೆಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು, ರಾಜ್ಯ ಸರ್ಕಾರ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ-2004 (ಕೆಪಿಐಡಿ) ಅನುಸಾರ ಸಕ್ಷಮ ಪ್ರಾಧಿಕಾರ ನೇಮಕ ಮಾಡಿತ್ತು. ಸರ್ಕಾರದ ಈ ಆದೇಶ ರದ್ದು ಮಾಡುವಂತೆ ಕೋರಿ ಐಎಂಎ ಕಂಪನಿ ಮನ್ಸೂರ್ ಖಾನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಗುರುವಾರ ವಿಚಾರಣೆ ನಡೆಸಿದ ಕೋರ್ಟ್, ವಿಚಾರಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು.

    ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐನಿಂದ ಮೌಲ್ವಿ ಅಫ್ಸರ್ ಹನೀಜ್ ಸೇರಿ ಇಬ್ಬರ ಮೇಲೆ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದೆ. ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್ ನಲ್ಲಿ ಎಸ್‍ಐಟಿ ಅಧಿಕಾರಿಗಳು ಮೌಲ್ವಿಯನ್ನು ಬಂಧಿಸಿದ್ದರು.

    ಹನೀಫ್ ಅಫ್ಸರ್ ಅಜೀಜ್ ಶಿವಾಜಿನಗರ ಒಪಿಎಚ್ ರಸ್ತೆಯ ಬೇಪಾರಿಯನ್ ಮಸೀದಿಯ ಧರ್ಮ ಗುರುವಾಗಿದ್ದು, 2017ರಲ್ಲಿ ಹೆಚ್‍ಬಿಆರ್ ಲೇಔಟ್ ನಲ್ಲಿ ಮೂರು ಕೋಟಿ ರೂ. ಮೌಲ್ಯದ ಮನೆ ಉಡುಗೊರೆ ಪಡೆದಿದ್ದ.

    ಮಸೀದಿಗೆ ಬರುವ ಸಾವಿರಾರು ಭಕ್ತರ ಭಾವನೆಗಳ ಜೊತೆ ಆಟವಾಡಿದ್ದ ಹನೀಫ್ ಅಫ್ಸರ್ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ. ನಮಾಜ್‍ಗೆ ಬಂದ ಜನರಿಗೆ ಐಎಂಎನಲ್ಲಿ ಹಣ ಹೂಡುವಂತೆ ಪ್ರಚೋದನೆ ಮಾಡುತ್ತಿದ್ದ. ಈ ಧರ್ಮಗುರು ಮಾತನ್ನು ನಂಬಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿಸಿದ್ದರಿಂದ ಧರ್ಮಗುರುವಿನ ಋಣ ತೀರಿಸಲು ಮೂರು ಕೋಟಿ ರೂ. ಮೌಲ್ಯದ ಮನೆಯನ್ನು ಮನ್ಸೂರ್ ಖಾನ್ ನೀಡಿದ್ದ.

  • ಐಎಂಎ ಆಸ್ತಿ ಸಂಪೂರ್ಣ ಮುಟ್ಟುಗೋಲು- ಆರ್.ಅಶೋಕ್

    ಐಎಂಎ ಆಸ್ತಿ ಸಂಪೂರ್ಣ ಮುಟ್ಟುಗೋಲು- ಆರ್.ಅಶೋಕ್

    ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಗೆ ಸೇರಿದ ಸಂಪೂರ್ಣ ಆಸ್ತಿಯನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಐಎಂಎಗೆ ಸೇರಿದ ಬಿಬಿಎಂಪಿ ವ್ಯಾಪ್ತಿಯ ಚರಾಸ್ತಿ, ಸ್ಥಿರಾಸ್ತಿ, ಸೇರಿದಂತೆ ಹಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು 21.73 ಕೋಟಿ ರೂ.ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಮಾರು 17 ಆಸ್ತಿಗಳನ್ನು ಕಂದಾಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ ಎಂದು ವಿವರಿಸಿದರು.

    ಒಟ್ಟು 2.85 ಕೋಟಿ ರೂ. ನಗದು, 8.86 ಕೋಟಿ ರೂ. ಡಿಡಿ ಜಪ್ತಿ ಮಾಡಲಾಗಿದೆ. 59 ಲಕ್ಷ ರೂ.ನ 5 ವಾಹನಗಳು, 91.57 ಲಕ್ಷ ರೂ.ನ ಚಿನ್ನ ಮತ್ತು ಬೆಳ್ಳಿ ಆಭರಣಗಳು, 303 ಕೆ.ಜಿ.ಯ 5,880 ನಕಲಿ ಚಿನ್ನದ ಬಿಸ್ಕೆಟ್‍ಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು 23 ಬ್ಯಾಂಕ್ ಅಕೌಂಟ್‍ನಲ್ಲಿನ 58 ಸಾವಿರ ರೂ. ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಜನ ಸಾಮಾನ್ಯರಿಗೆ ವಂಚಿಸುತ್ತಿದ್ದ ಆರೋಪದ ಮೇಲೆ ಯಲ್ಲೊ ಎಕ್ಸ್‍ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಅದರ 5 ಅಂಗ ಸಂಸ್ಥೆಗಳ ಅಕ್ರಮದ ವಿರುದ್ಧ ಸಿಐಡಿ ತನಿಖೆಗೆ ಸರ್ಕಾರ ಆದೇಶ ನೀಡಿದೆ. ಜನರಿಂದ 2 ರಿಂದ 2.5 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ಕಾರ್ ಖರೀದಿ ಮಾಡಿ ಹೂಡಿಕೆದಾರರಿಗೆ ಮಾಸಿಕ 27 ಸಾವಿರ ರೂ. ಬಾಡಿಗೆ ನೀಡುವ ಕೆಲಸವನ್ನು ಈ ಕಂಪನಿ ಮಾಡುತ್ತಿತ್ತು. ಆದರೆ, ಈ ಕಂಪನಿ ಅಕ್ರಮವಾಗಿ ನಡೆಯುತ್ತಿದ್ದು, ಕೋಟ್ಯಂತರ ರೂ. ಅಕ್ರಮ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

    2018ರಲ್ಲಿ ಪ್ರಾರಂಭವಾದ ಈ ಕಂಪನಿ ಕೇರಳ ಮೂಲದ್ದಾಗಿದೆ. ಈಗಾಗಲೇ 2 ಸಾವಿರ ಖಾತೆಗಳಿಗೆ ಹಣ ಜಮಾ ಮಾಡಿಕೊಂಡು, ಕೇವಲ 63 ಜನರಿಗೆ ಮಾತ್ರ ಕಾರ್ ನೀಡಲಾಗಿದೆ. ಈಗಾಗಲೇ 40-60 ಕೋಟಿ ರೂ. ಹಣ ಸಂಗ್ರಹ ಮಾಡಿದೆ. ಇದು ಅಕ್ರಮವಾಗಿದ್ದು, ಸಂಸ್ಥೆಯ ನಿರ್ದೇಶಕರಾದ ರಮೀತ್ ಮಲ್ಹೋತ್ರ, ಜೋಜೊ ಥಾಮಸ್, ಮಾಡಿ ನಾಯರ್ ಸೇರಿದಂತೆ ಸಂಸ್ಥೆಯ ಪಾಲುದಾರರಾದ ಲಕ್ಷ್ಮಿ ಸುರೇಖ, ಆಯುಷಾ ಸಿದ್ದಿಕಿ ಹಾಗೂ ಇತರರನ್ನು ಬಂಧಿಸುವಂತೆ ಆದೇಶಿಸಲಾಗಿದೆ ಎಂದರು.

    ಕಂಪನಿಯಿಂದ ಸಾವಿರಾರು ಜನ ಮೋಸ ಹೋಗುವ ಸಾಧ್ಯತೆ ಇತ್ತು. ಇದೊಂದು ಬೋಗಸ್, ಬ್ಲೇಡ್ ಕಂಪನಿ. ಬೆಂಗಳೂರು ಗ್ರಾಮಾಂತರ ಎಸ್‍ಪಿ ರವಿ ಚೆನ್ನಣ್ಣವರ್, ಡಿಸಿ, ಎಸಿಗಳು ಸಂಪೂರ್ಣ ತನಿಖೆ ಮಾಡಿ ಇದೊಂದು ಅಕ್ರಮ ಕಂಪನಿ ಎಂದು ವರದಿ ನೀಡಿದ್ದಾರೆ. ಹೀಗಾಗಿ ಈ ಕಂಪನಿ ವಿರುದ್ಧ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆರ್‍ಬಿಐ ಸಹ ಇದೊಂದು ಬೋಗಸ್ ಕಂಪನಿ ಎಂದು ಪತ್ರ ಬರೆದಿದೆ. ಹೀಗಾಗಿ ಸಂಪೂರ್ಣ ತನಿಖೆ ಮಾಡಲು ಸಿಐಡಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಇಂತಹ ಆರ್ಥಿಕ ಅಪರಾಧ ತಡೆಯಲು ಬೋಗಸ್ ಕಂಪನಿಗಳ ಬಗ್ಗೆ ಮೂರು ತಿಂಗಳ ಒಳಗೆ ಸಂಪೂರ್ಣ ಮಾಹಿತಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ. ಅಕ್ರಮದಲ್ಲಿ ಯಾರೇ ಇದ್ದರು ಕ್ರಮ ಕೈಗೊಳ್ಳುತ್ತೇವೆ. ತನಿಖೆಗೆ ಆದೇಶ ನೀಡಲಾಗಿದೆ. ಯಾರು ಈ ಅಕ್ರಮದಲ್ಲಿ ಇದ್ದಾರೆ ಎನ್ನುವುದು ತನಿಖೆ ನಂತರ ತಿಳಿಯಲಿದೆ. ಐಎಂಎ ತರಹ ಎರಡನೇ ದೊಡ್ಡ ಎಕ್ಸ್ ಪ್ರೆಸ್ ಜಾಲ ಇದು. ಮುಗ್ದರನ್ನು ಯಾಮಾರಿಸೋದು ಇದರ ಕೆಲಸ. ಜನರು ಸಹ ಇಂತಹ ಕಂಪನಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸಚಿವರು ಸಲಹೆ ನೀಡಿದರು.

  • ಅತ್ತ ಡಿಕೆಶಿಗೆ ಜೈಲು, ಇತ್ತ ಜಮೀರ್ ಅಹ್ಮದ್‍ಗೆ ಸಿಬಿಐ ನೋಟಿಸ್

    ಅತ್ತ ಡಿಕೆಶಿಗೆ ಜೈಲು, ಇತ್ತ ಜಮೀರ್ ಅಹ್ಮದ್‍ಗೆ ಸಿಬಿಐ ನೋಟಿಸ್

    ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಿಹಾರ್ ಜೈಲಿಗೆ ಶಿಫ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‍ನ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.

    ಜಮೀರ್ ಅಹ್ಮದ್ 90 ಕೋಟಿ ರೂ. ಬೆಲೆಬಾಳುವ ನಿವೇಶನವನ್ನು ಐಎಂಎಗೆ 9.38 ಕೋಟಿ ರೂ.ಗಳಿಗೆ ಮಾರಾಟ ಮಾಡಿ, ಬಾಕಿ 80 ಕೋಟಿ ರೂ.ಗಳನ್ನು ಹವಾಲಾ ರೂಪದಲ್ಲಿ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಜಮೀರ್ ಅಹ್ಮದ್ ಅವರಿಗೆ ನೋಟಿಸ್ ನೀಡಿದೆ. ಇದನ್ನೂ ಓದಿ: ಡಿಕೆಶಿಗೆ ತಿಹಾರ್ ಜೈಲೇ ಗತಿ – ಶನಿವಾರಕ್ಕೆ ವಿಚಾರಣೆ ಮುಂದೂಡಿಕೆ

    ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮೊನ್ನೆಯಷ್ಟೇ ಹೈಕೋರ್ಟ್ ಸಿಬಿಐ ವಿರುದ್ಧ ಚಾಟಿ ಬೀಸಿತ್ತು. ಈ ಪ್ರಕರಣವು ತನಿಖೆ ಕುಂಠಿತವಾಗುತ್ತಿದೆ. ತನಿಖೆ ಪ್ರಗತಿಯಲ್ಲಿ ಇಲ್ಲವೆಂದು ಬೇಸರ ವ್ಯಕ್ತಪಡಿಸಿತ್ತು. ಹೀಗಾಗಿ ತನಿಖೆ ಚುರುಕುಗೊಳಿಸಿರುವ ಸಿಬಿಐ, ಪ್ರಮುಖ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಮಾಜಿ ಸಚಿವರಿಗೆ ಟ್ರಾಫಿಕ್ ನಿಯಮ ಅನ್ವಯ ಆಗಲ್ವಾ? ರಸ್ತೆಯಲ್ಲಿಯೇ ಬಸ್ ಪಾರ್ಕ್

    ನೋಟಿಸ್ ಹಿನ್ನೆಲೆಯಲ್ಲಿ ಮಾಜಿ ಸಚಿವರು ಗುರುವಾರ ಬೆಳಗ್ಗೆ 11:30 ಗಂಟೆಗೆ ಸಿಬಿಐ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಅವರು, ಶುಕ್ರವಾರ ವಿಚಾರಣೆಗೆ ಬರುವುದಕ್ಕೆ ಆಗುವುದಿಲ್ಲ. ಪೂರ್ವ ನಿಯೋಜಿತ ಕಾರ್ಯಕ್ರಮವಿದೆ. ದೇವರ ಕಾರ್ಯದ ನಿಮಿತ್ತ ರಾಜಸ್ಥಾನದ ಜೈಪುರಕ್ಕೆ ತೆರಳಬೇಕಿದೆ. ವಿಚಾರಣೆಗೆ ಕಾಲಾವಕಾಶ ನೀಡಿ ಎಂದು ಕೇಳಿದ್ದಾರೆ ಎನ್ನಲಾಗಿದೆ.

    ಜಮೀರ್ ವಿರುದ್ಧದ ಆರೋಪವೇನು?:
    ಮಾಜಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಜೂನ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಿಜೆಪಿ ಮುಖಂಡ ಎನ್. ರಮೇಶ್ ಅವರು, 90 ಕೋಟಿ ರೂ. ಮೌಲ್ಯದ ನಿವೇಶನವನ್ನು ಕೇವಲ 9.38 ಕೋಟಿ ರೂ.ಗೆ ಮಾರಾಟ ಮಾಡಿದ್ದು, ಉಳಿದ 80 ಕೋಟಿ ರೂ.ಗಳನ್ನು ಕಪ್ಪು ಹಣ ಹವಾಲಾ ರೂಪದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪಡೆದಿದ್ದಾರೆ. ವಿವಾದಿತ ನಿವೇಶನವನ್ನು ಅಕ್ರಮ ಮಾರಾಟ ಮಾಡಿ ಉಳಿದ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 2001ರಲ್ಲಿ ಕೇವಲ ಎರಡೂವರೆ ಕೋಟಿ ರೂ.ಗೆ ನಿವೇಶನವನ್ನು ಖರೀದಿಸಿ ಅಕ್ರಮವಾಗಿ ಐಎಂಎಗೆ ಮಾರಾಟ ಮಾಡಿದ್ದಾರೆ ಎಂದು ದೂರಿದ್ದರು.

    ಭೂ ಮಾಲೀಕನಿಗೆ ಕೇವಲ ಎರಡೂವರೆ ಕೋಟಿ ರೂ.ಗಳನ್ನು ನೀಡಿ ಜಮೀನು ಖರೀದಿಸಿದ್ದು, ಅದೇ ಜಮೀನನ್ನು 9 ಕೋಟಿ ರೂ.ಗೆ ಐಎಂಎ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಆದರೆ ಆ ಜಮೀನಿನ ಸದ್ಯದ ಮಾರುಕಟ್ಟೆ ಬೆಲೆ ಕನಿಷ್ಟ 90 ಕೋಟಿ ರೂ.ಗಳಾಗಿದ್ದು, 2018ರಲ್ಲಿ ಮನ್ಸೂರ್ ಖಾನ್‍ಗೆ ಕೇವಲ 9.38 ಕೋಟಿ ರೂ.ಗೆ ಜಮೀರ್ ಅಹ್ಮದ್ ಖಾನ್ ಮಾರಾಟ ಮಾಡಿದ್ದಾರೆ. ಉಳಿದ 80 ಕೋಟಿ ರೂ. ಕಪ್ಪು ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

    9 ವರ್ಷಗಳಿಂದ ರಿಚ್ಮಂಡ್ ಟೌನ್‍ನ ಸರ್ಪಟೈನ್ ಸ್ಟ್ರೀಟ್‍ನಲ್ಲಿರುವ ವಿವಾದಿತ ನಿವೇಶನ ಕೋರ್ಟ್ ಅಂಗಳದಲ್ಲಿದ್ದು, 2014ರಲ್ಲಿ ಆಸ್ತಿ ಪ್ರಕರಣ ಕೋರ್ಟಿನಲ್ಲಿರುವಾಗಲೇ ಜಮೀರ್ ಪಾಲಿಕೆಗೆ ಪತ್ರ ಬರೆದು ಆಸ್ತಿಯನ್ನು ನಾನು ಖರೀದಿಸಿದ್ದೇನೆ ಖಾತೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. ಆಗಲೇ ಪಾಲಿಕೆ ನೌಕರರು ಈ ಆಸ್ತಿ ವ್ಯಾಜ್ಯ ಕೋರ್ಟ್ ನಲ್ಲಿದೆ. ಹೀಗಾಗಿ ಖಾತೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಹೀಗಿದ್ದರೂ ಸಹ ಹತ್ತು ಹಲವು ಬಾರಿ ಪತ್ರ ವ್ಯವಹಾರ ನಡೆಸಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ರಮೇಶ್ ಹೇಳಿದ್ದರು.

    ತಾವು ಖಾತೆ ಮಾಡಿಸಿದ ನಂತರ ಮನ್ಸೂರ್ ಖಾನ್‍ಗೆ ಮಾರಾಟ ಮಾಡಿರುವ ಜಮೀನಿಗೆ ಖಾತೆ ಮಾಡಿಸಲು ಜಮೀರ್ ಕಸರತ್ತು ಮಾಡಿದ್ದಾರೆ. ಸಚಿವ ಜಮೀರ್ ಸುಳ್ಳು ಲೆಕ್ಕ ಕೊಡುವುದರಲ್ಲಿ ಎಕ್ಸ್‍ಪರ್ಟ್. ಚುನಾವಣಾ ಪ್ರಮಾಣಪತ್ರದಲ್ಲೇ ತಪ್ಪು ಮಾಹಿತಿ ನೀಡಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ಮಾಜಿ ಶಾಸಕ ಚೆಲುವರಾಯ ಸ್ವಾಮಿಯಿಂದ 42 ಲಕ್ಷ ಸಾಲ ಪಡೆದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಚೆಲುವರಾಯ ಸ್ವಾಮಿ ಅದೇ 2018ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಸಾಲ ನೀಡಿರುವ ಮಾಹಿತಿಯನ್ನೇ ನೀಡಿಲ್ಲ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದರು.

  • ಐಎಂಎ ಪ್ರಕರಣ ಸಿಬಿಐಗೆ ನೀಡುವಂತೆ ಮೊದಲು ಆಗ್ರಹಿಸಿದ್ದು ನಾನು: ಜಮೀರ್ ಅಹಮದ್

    ಐಎಂಎ ಪ್ರಕರಣ ಸಿಬಿಐಗೆ ನೀಡುವಂತೆ ಮೊದಲು ಆಗ್ರಹಿಸಿದ್ದು ನಾನು: ಜಮೀರ್ ಅಹಮದ್

    ಬೆಂಗಳೂರು: ಬಹುಕೋಟಿ ವಂಚನೆ ಐಎಂಎ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮೊದಲು ಆಗ್ರಹಿಸಿದ್ದು ನಾನೇ ಎಂದು ಮಾಜಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

    ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅವರು, ನನ್ನ ಕ್ಷೇತ್ರದ ಕೆಲಸ ಸಂಬಂಧ ಆಯುಕ್ತರನ್ನು ಭೇಟಿ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲೇ ನಾನು ಐಎಂಎ ಪ್ರಕರಣವನ್ನು ಸಿಬಿಐಗೆ ನೀಡಲು ಒತ್ತಾಯ ಮಾಡಿದ್ದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಸಿಬಿಐಗೆ ನೀಡಿದ್ದಾರೆ, ಇದಕ್ಕೆ ನನ್ನ ಸ್ವಾಗತವಿದೆ ಎಂದರು.

    ಇದೇ ವೇಳೆ ಐಎಂಎ ಪ್ರಕರಣ ಸಂಬಂಧ ತಮಗೆ ಏನಾದರೂ ಬೆದರಿಕೆ ಬರುತ್ತಿದೆಯಾ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾವುದೇ ಬೆದರಿಕೆ ಬಂದಿಲ್ಲ. ಯಾರು ಭಯ ಪಡುತ್ತಾರೆ ಅವರಿಗೆ ಮಾತ್ರ ಬೆದರಿಕೆಗಳು ಬರುತ್ತದೆ. ನಾನು ಯಾರಿಗೂ ಭಯ ಪಡುವುದಿಲ್ಲ ಎಂದರು. ಅಲ್ಲದೇ ನನಗೆ ಐಎಂಎ ವಂಚನೆ ಪ್ರಕರಣಲ್ಲಿ ಇದುವರೆಗೂ ಸಿಬಿಐನಿಂದ ಯಾವುದೇ ಸಮನ್ಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

    ಸಚಿವ ಕೆಎಸ್ ಈಶ್ವರಪ್ಪ ಮುಸ್ಲಿಮರ ಬಗ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್, ಈಶ್ವರಪ್ಪ ಅವರ ಹೇಳಿಕೆಗೆ ಅಷ್ಟು ಮಹತ್ವ ನೀಡುವ ಅಗತ್ಯವಿಲ್ಲ. ಈಶ್ವರಪ್ಪ ಅವರದ್ದು ಎಲುಬಿಲ್ಲದ ನಾಲಿಗೆ, ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಈಗಾಗಲೇ ಸಿದ್ದರಾಮಯ್ಯ ಅವರು ಹಲವರು ಬಾರಿ ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಕಳ್ಳರ ರೀತಿ ನಡುರಾತ್ರಿ ಹೋಗಿ ಮುಸ್ಲಿಮರ ಮನೆಯಲ್ಲಿ ಮತಯಾಚನೆ ಮಾಡಿದ್ದಾರೆ. ಈ ಸಂಬಂಧ ನನ್ನ ಬಳಿ ವಿಡಿಯೋಗಳು ಕೂಡ ಇದ್ದು, ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಬಿಜೆಪಿಯವರಿಗೆ ಹಿಂದೂ, ಮುಸ್ಲಿಂ ಜನರು ಬೇಕಿಲ್ಲ. ಅವರಿಗೆ ಬೇಕಿರುವುದು ಕೇವಲ ಅಧಿಕಾರ ಅಷ್ಟೇ ಎಂದು ಆರೋಪಿಸಿದರು.

  • ಮನ್ಸೂರ್‌ನಿಂದ 38 ಕೆಜಿ ಚಿನ್ನ ಕರಗಿಸಿದ 9 ಕೋಟಿ ಪಡೆದಿದ್ದ ಸ್ನೇಹಿತನಿಗೆ ನೋಟಿಸ್

    ಮನ್ಸೂರ್‌ನಿಂದ 38 ಕೆಜಿ ಚಿನ್ನ ಕರಗಿಸಿದ 9 ಕೋಟಿ ಪಡೆದಿದ್ದ ಸ್ನೇಹಿತನಿಗೆ ನೋಟಿಸ್

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸದ್ಯ ಎಸ್‍ಐಟಿಯಿಂದ ಸಿಬಿಐಗೆ ವರ್ಗಾವಣೆ ಆಗಿದೆ. ಆದರೆ ಮನ್ಸೂರ್ ಖಾನ್ ಚಿನ್ನ ಕರಗಿಸಿ ಬರೋಬ್ಬರಿ 9 ಕೋಟಿ ರೂ. ಹಣವನ್ನು ಸ್ನೇಹಿತನಿಗೆ ಕೊಟ್ಟಿದ್ದು, ಈ ಬಗ್ಗೆ ತಿಳಿದ ಬಳಿಕ ಎಸ್‍ಐಟಿಯಿಂದ ಮನ್ಸೂರ್ ಸ್ನೇಹಿತನಿಗೆ ನೋಟಿಸ್ ನೀಡಲಾಗಿದೆ.

    ಮನ್ಸೂರ್ ಖಾನ್ ಸ್ನೇಹಿತ ಅಬ್ಬಾಸ್‍ಗೆ ಎಸ್‍ಐಟಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ದೇಶ ಬಿಟ್ಟು ಹೋಗುವ ಮುನ್ನವೇ ಮನ್ಸೂರ್ ಖಾನ್ ದುಬೈನಲ್ಲಿ ವಾಸವಾಗಿರೋ ಅಬ್ಬಾಸ್‍ಗೆ 38 ಕೆಜಿ ಚಿನ್ನ ಕರಗಿಸಿ ಮಾರಾಟ ಮಾಡಿ, ಸುಮಾರು 9 ಕೋಟಿ ಹಣವನ್ನು ನೀಡಿದ್ದನು. ಹಣ ನೀಡಿದ ಬಳಿಕ ದುಬೈಗೆ ಮನ್ಸೂರ್ ಎಸ್ಕೇಪ್ ಆಗಿದ್ದನು ಎನ್ನಲಾಗಿದೆ.

    ಹೀಗಾಗಿ ಎಸ್‍ಐಟಿ ಅಬ್ಬಾಸ್‍ಗೆ ನೋಟಿಸ್ ನೀಡಿದೆ. ನೋಟಿಸ್‍ಗೆ ಮಣಿದು ವಿಚಾರಣೆಗೆ ಅಬ್ಬಾಸ್ ಹಾಜರಾದರೆ ಎಸ್‍ಐಟಿ ಅಧಿಕಾರಿಗಳು ಆತನ ವಿಚಾರಣೆ ನಡೆಸುತ್ತಾರೆ, ಇಲ್ಲವಾದರೆ ಅಬ್ಬಾಸ್‍ನನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸೋ ಸಾಧ್ಯತೆಯಿದೆ. ಕೇವಲ ಎಸ್‍ಐಟಿ ಮಾತ್ರವಲ್ಲದೆ, ಇಡಿ ಅಧಿಕಾರಿಗಳಿಂದಲೂ ಅಬ್ಬಾಸ್‍ಗೆ ನೋಟಿಸ್ ಜಾರಿಗೊಳಿಸಲಾಗಿದೆ.

    ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ನನ್ನು ಬಂಧಿಸಿ ತೀವ್ರ ವಿಚಾರಣೆ ಒಳಪಡಿಸಿದ ಬೆನ್ನಲ್ಲೇ ಎಸ್‍ಐಟಿ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದರು. ಬೆಂಗಳೂರಿನ ಶಾಂತಿನಗರದಲ್ಲಿರುವ ಮನ್ಸೂರ್ ಮನೆ ಮೇಲೆ ದಾಳಿ ನಡೆಸಿದ ವೇಳೆ 300 ಕೆ.ಜಿ ಚಿನ್ನದ ಬಿಸಕೆಟ್ ಗಳು ಪತ್ತೆಯಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

  • ಮನ್ಸೂರ್ ಖಾನ್ ಪೊಲೀಸ್ ಕಸ್ಟಡಿ ಅಂತ್ಯ- ಎಸ್‍ಐಟಿಗೆ ಸಿಕ್ಕಿಲ್ಲ ಪೂರ್ಣ ಮಾಹಿತಿ

    ಮನ್ಸೂರ್ ಖಾನ್ ಪೊಲೀಸ್ ಕಸ್ಟಡಿ ಅಂತ್ಯ- ಎಸ್‍ಐಟಿಗೆ ಸಿಕ್ಕಿಲ್ಲ ಪೂರ್ಣ ಮಾಹಿತಿ

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯವಾಗಲಿದೆ.

    ಸತತ 14 ದಿನಗಳ ಕಾಲ ಮನ್ಸೂರ್ ಖಾನ್ ವಿಚಾರಣೆ ನಡೆಸಿದರೂ ಇನ್ನಷ್ಟು ಮಾಹಿತಿಗಳು ಹೊರಬರಬೇಕಿದೆ. ಶಿವಾಜಿನಗರ ಅನರ್ಹ ಶಾಸಕ ರೋಷನ್ ಬೇಗ್‍ಗೆ 400 ಕೋಟಿ ಕೊಟ್ಟಿರೋದು ಸತ್ಯ ಎಂದು ಎಸ್‍ಐಟಿ ಪೊಲೀಸರ ಬಳಿ ಮನ್ಸೂರ್ ಹೇಳಿಕೊಂಡಿದ್ದಾನೆ.

    ಆದರೆ ಅನಾರೋಗ್ಯದ ನೆಪವೊಡ್ಡಿ ರೋಷನ್‍ಬೇಗ್ ಅವರು ಮಾತ್ರ ವಿಚಾರಣೆಗೆ ಹಾಜರಾಗುತ್ತಿಲ್ಲ. ಹೇಗಾದರೂ ಮಾಡಿ ರೋಷನ್ ಬೇಗ್ ಅವರನ್ನು ವಿಚಾರಣೆಗೆ ಕರೆಸಿ, ಮನ್ಸೂರ್ ಖಾನ್ ಎದುರು ಕೂರಿಸಿ ವಿಚಾರಣೆ ಮಾಡೊ ಪ್ಲಾನ್‍ನಲ್ಲಿ ಎಸ್‍ಐಟಿ ಅಧಿಕಾರಿಗಳು ಇದ್ದಾರೆ.

    ರಾಜ್ಯವಲ್ಲದೇ ದೇಶದ ನಾನಾ ಭಾಗಗಳಲ್ಲಿ ಆಸ್ತಿ ಹೊಂದಿರೋದಾಗಿ ಮನ್ಸೂರ್ ಖಾನ್ ಹೇಳಿದ್ದಾನೆ. ಎಸ್‍ಐಟಿ ಅಧಿಕಾರಿಗಳು ಹೊರ ರಾಜ್ಯಗಳಲ್ಲಿನ ಆಸ್ತಿ ಪತ್ತೆ ಹಚ್ಚಲು ತೆರಳಿದ್ದಾರೆ. ಹೀಗಾಗಿ ವಿಚಾರಣೆ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಮತ್ತೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ.

    ಮನ್ಸೂರ್ ಸಿಕ್ಕಿಬಿದ್ದಿದ್ದು ಹೇಗೆ?
    ಸುಮಾರು 60 ಸಾವಿರ ಮಂದಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಜೂನ್ 8 ರಂದು ರಾತ್ರೋರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದನು. ವಿಷಯ ತಿಳಿದ ಹೂಡಿಕೆದಾರರು ಎಸ್‍ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ವಿಡಿಯೋ ಬಿಡುಗಡೆ ಮಾಡಿ ಗ್ರಾಹಕರ ಹಣ ಹಿಂದಿರುಗಿಸುವುದಾಗಿ ಹೇಳಿದ್ದನು.

    ನಂತರ ಅನಾರೋಗ್ಯದ ಕಾರಣ ನೀಡಿ ಭಾರತಕ್ಕೆ ಮರಳುತ್ತಿದ್ದೇನೆ ತಮಗೆ ಜೀವ ಭಯ ಇದ್ದು, ಪೊಲೀಸರು ರಕ್ಷಣೆ ಕೊಡಬೇಕು ಎಂದು ಕೋರಿ ಮತ್ತೊಂದು ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದನು. ಆದರೆ ವಿಡಿಯೋ ಬಿಡುಗಡೆ ಮಾಡಿದ 24 ಗಂಟೆಗಳಲ್ಲಿ ಮನ್ಸೂರ್ ವಾಪಸ್ ಬರಲಿಲ್ಲ. ಹೀಗಾಗಿ ಜುಲೈ 9ರಂದು ಮಧ್ಯರಾತ್ರಿ 1.30ರ ಸುಮಾರಿಗೆ ದುಬೈನಿಂದ ದೆಹಲಿಗೆ ಬಂದಿಳಿದ ಮನ್ಸೂರ್ ಖಾನ್‍ನನ್ನು ಎಸ್‍ಐಟಿ (ವಿಶೇಷ ತನಿಖಾ ತಂಡ) ಪೊಲೀಸರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲೇ ಬಂಧಿಸಿ. ನಂತರ ಆತನನ್ನು ಬೆಂಗಳೂರಿಗೆ ಕರೆತರಲಾಗಿತ್ತು.

  • ತೀವ್ರಗೊಂಡ ಮನ್ಸೂರ್ ವಿಚಾರಣೆ – ಜಮೀರ್, ಬೇಗ್‍ಗೆ ಎಸ್‍ಐಟಿ ನೋಟಿಸ್ ಜಾರಿ

    ತೀವ್ರಗೊಂಡ ಮನ್ಸೂರ್ ವಿಚಾರಣೆ – ಜಮೀರ್, ಬೇಗ್‍ಗೆ ಎಸ್‍ಐಟಿ ನೋಟಿಸ್ ಜಾರಿ

    ಬೆಂಗಳೂರು: ಬಹುಕೋಟಿ ವಂಚಕ ಮನ್ಸೂರ್ ಖಾನ್ ವಿಚಾರಣೆ ಇಡಿ ತೀವ್ರಗೊಳಿಸಿದ್ದರೆ ಇತ್ತ ವಿಶೇಷ ತನಿಖಾ ತಂಡ(ಎಸ್‍ಐ) ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಶಾಸಕ ರೋಷನ್ ಬೇಗ್‍ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಈ ತಿಂಗಳ 29ರಂದು ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ಸೂಚಿಸಿದ್ದಾರೆ.

    ದಿನೇ ದಿನೇ ಐಎಂಎ ಪ್ರಕರಣ ವಿಚಾರಣೆಯನ್ನು ಇಡಿ ಅಧಿಕಾರಿಗಳು ತೀವ್ರಗೊಳಿಸುತ್ತಿದ್ದು, ಇಡಿ ಅಧಿಕಾರಿಗಳು ಹಾಕುತ್ತಿರುವ ಪ್ರಶ್ನೆಗಳಿಗೆ ಆರೋಪಿ ಮನ್ಸೂರ್ ಖಾನ್ ತಬ್ಬಿಬ್ಬಾಗಿ ಪ್ರಕರಣದ ಹಿಂದೆ ಇರುವ ಕಾಣದ ಕೈಗಳ ಹೆಸರನ್ನು ಬಾಯಿಬಿಟ್ಟಿದ್ದಾನೆ.

    ಮನ್ಸೂರ್ ಖಾನ್ ಜೊತೆ ಇಬ್ಬರೂ ವ್ಯವಹಾರ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಮಧ್ಯೆ ಐಎಂಎ ಕಂಪನಿಯ ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್‍ರನ್ನು ಎಸ್‍ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಮತ್ತು ಕಂಪನಿಗಳ ರಿಜಿಸ್ಟ್ರಾರ್ ಗೆ ತಪ್ಪು ಮಾಹಿತಿ ನೀಡಿದ ಆರೋಪ ಆಡಿಟರ್ ಮೇಲಿದೆ.

    ಈ ಹಿಂದೆ ವಿಚಾರಣೆ ವೇಳೆ ಮನ್ಸೂರ್ 1000ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದ ರಹಸ್ಯ ವಿವರವನ್ನು ಇಡಿ ಅಧಿಕಾರಿಗಳಿಗೆ ತಿಳಿಸಿದ್ದನು. ಅಲ್ಲದೆ ಕೆಲ ಪ್ರಭಾವಿಗಳ ಹೆಸರುಗಳನ್ನು ಕೂಡ ಮನ್ಸೂರ್ ಪ್ರಸ್ತಾಪಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.

    ಪ್ರಭಾವಿಗಳ ಜೊತೆಗಿನ ನಂಟು ಹಾಗೂ ಪ್ರಭಾವಿಗಳಿಗೆ ಹಂಚಿಕೆಯಾಗಿರುವ ಐಎಂಎನ ಲಾಭಾಂಶದ ಕುರಿತು ಮನ್ಸೂರ್ ಬಾಯ್ಬಿಟ್ಟಿದ್ದನು. ಮನ್ಸೂರ್ ಗೆ ಜೀವ ಬೆದರಿಕೆ ಇರುವ ಹಿನ್ನೆಲೆ ಆತನಿಗೆ ಹೈ ಸೆಕ್ಯುರಿಟಿ ನೀಡಲಾಗಿದ್ದು, ಖಾನ್ ಗೆ ರಾತ್ರಿಯಿಡಿ ಬಿಗಿ ಭದ್ರತೆ ಒದಗಿಸಲಾಗುತ್ತಿದೆ.

  • ಐಎಂಎ ಪ್ರಕರಣ ಮುಚ್ಚಲು ಎಸ್‍ಐಟಿ ಬಳಕೆ: ಸೊಗಡು ಶಿವಣ್ಣ

    ಐಎಂಎ ಪ್ರಕರಣ ಮುಚ್ಚಲು ಎಸ್‍ಐಟಿ ಬಳಕೆ: ಸೊಗಡು ಶಿವಣ್ಣ

    ತುಮಕೂರು: 40 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವ ಐಎಂಎ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಇಲ್ಲಾ, ಮಳೆ ಬೆಳೆ ಇಲ್ಲಾ, ಶವ ಸಂಸ್ಕಾರಕ್ಕೂ ನೀರಿಲ್ಲದ್ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸ್ಥಿತಿಯಲ್ಲಿ 40 ಸಾವಿರ ಜನರ ಹಣವನ್ನು ಮನ್ಸೂರ್ ಅಲಿಖಾನ್ ತಿಂದು ಬಿಟ್ಟಿದ್ದಾನೆ ಎಂದು ಕಿಡಿಕಾರಿದರು.

    ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದಲ್ಲಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕೋಟ್ಯಾಂತರ ರೂಪಾಯಿ ಹೋಗಿರುವ ಅನುಮಾನ ಇದೆ. ಪ್ರಕರಣವನ್ನು ಮುಚ್ಚಿಹಾಕುವ ದೃಷ್ಠಿಯಲ್ಲಿ ಎಸ್‍ಐಟಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಐಎಂಎ ಕೇಸನ್ನು ಕೂಡಲೇ ಸಿಬಿಐಗೆ ವಹಿಸಲೇಬೇಕು ಎಂದು ಆಗ್ರಹಿಸಿದರು.