Tag: ಐಎಂಎ ಕೇಸ್

  • ಜಮೀರ್ ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ಎದುರಿಸ್ತಾರೆ: ಡಿ.ಕೆ.ಶಿವಕುಮಾರ್

    ಜಮೀರ್ ಕಾನೂನಿನ ಚೌಕಟ್ಟಿನಲ್ಲಿ ಎಲ್ಲವನ್ನೂ ಎದುರಿಸ್ತಾರೆ: ಡಿ.ಕೆ.ಶಿವಕುಮಾರ್

    – ಇವರ ಕಿರುಕುಳ ಹೇಗೆ ಇರುತ್ತೆ ನನಗೂ ಗೊತ್ತಿದೆ
    – ಬಿಜೆಪಿಯಲ್ಲಿ ಇರೋರೆಲ್ಲ ಪರಿಶುದ್ಧರಾ?

    ಬೆಂಗಳೂರು: ಶಾಸಕರಾದ ಜಮೀರ್ ಅಹ್ಮದ್ ಖಾನ್ ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿಯೇ ಎದುರಿಸುತ್ತಾರೆ. ಕಾನೂನು ಪ್ರಕಾರ ಎದುರಿಸಲು ಶಾಸಜಕರು ಸಮರ್ಥರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಶಾಸಕ ಜಮೀರ್ ಅಹ್ಮದ್ ಇಡಿ ದಾಳಿ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ವಿಧಾನಸೌಧದಲ್ಲಿಯೇ ಶ್ರೀನಿವಾಸ್ ಗೌಡರು ಮೂವತ್ತು ಕೋಟಿಯ ಆರೋಪಗಳನ್ನು ಮಾಡಿದರು. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ 9 ಕೋಟಿ ತಂದು ಸರ್ಕಾರ ರಚನೆ ಮಾಡಿದರು ಅಂತ ಅವರೇ ಹೇಳಿದ್ದರು. ಆದ್ರೆ ಇವರ ಮೇಲೆಲ್ಲ ದಾಳಿ ನಡೀತಾ? ಐಟಿ, ಎಸಿಬಿಯಲ್ಲಿ ಪ್ರಕರಣ ದಾಖಲಾಯ್ತಾ? ಆಪರೇಷನ್ ಕಮಲದ ವೇಳೆ ಯಾರ ಮೇಲೆ ದಾಳಿ ನಡೀತಾ? ಬಿಜೆಪಿಯಲ್ಲಿರೋರು ಪರಿಶುದ್ಧರಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.

    ಎರಡು ವರ್ಷದ ಹಿಂದೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಿದ್ದರು. ಎಲ್ಲದಕ್ಕೂ ಉತ್ತರ ಕೊಟ್ಟಿದ್ದೆ ಎಂದು ಜಮೀರ್ ಹೇಳಿದ್ದರು. ಈಗ ದಾಳಿ ನಡೆಯುವ ಅವಶ್ಯಕತೆ ಇರಲಿಲ್ಲ. ಈಗ ಕಿರುಕುಳ ನೀಡುತ್ತಿರೋದು ಯಾಕೆ? ಈ ಕಿರುಕುಳ ಹೇಗೆ ಇರುತ್ತೆ ನಂಗೂ ಗೊತ್ತಿದೆ. ಈಗ ತೊಂದರೆ ಕೊಡುತ್ತಿರುವುದು ಸರಿ ಇಲ್ಲ. ಯಾರ ಅನಕೂಲಕ್ಕೆ ಈ ದಾಳಿ ನಡೆದಿದೆ ಗೊತ್ತಿಲ್ಲ ಎಂದರು. ಇದೇ ವೇಳೆ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ಹಿಂದೇಟು ಹಾಕಿದರು.

    ಜಮೀರ್ ಅಹ್ಮದ್ ಅವರ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ನೂತನ ಬಂಗಲೆ, ಯುಬಿಸಿಟಿಯಲ್ಲಿರುವ ಫ್ಲ್ಯಾಟ್, ಕಲಾಸಿಪಾಳ್ಯದಲ್ಲಿಯ ನ್ಯಾಷನಲ್ ಟ್ರಾವೆಲ್ ಕಚೇರಿ ಮತ್ತು ದೆಹಲಿ, ಮುಂಬೈನಲ್ಲಿರುವ ಕಚೇರಿಗಳ ಮೇಲೆ ಇಡಿ ದಾಳಿ ನಡೆದಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಐಎಂಎ ಗೋಲ್ಡ್‌ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಶಾಸಕ ಜಮೀರ್!

  • ರೋಷನ್ ಬೇಗ್‍ಗೆ ಜಾಮೀನು – ಪರಪ್ಪನ ಅಗ್ರಹಾರದತ್ತ ಬೆಂಬಲಿಗರು

    ರೋಷನ್ ಬೇಗ್‍ಗೆ ಜಾಮೀನು – ಪರಪ್ಪನ ಅಗ್ರಹಾರದತ್ತ ಬೆಂಬಲಿಗರು

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

    2018 ರ ಆರೋಪಕ್ಕೆ ಈಗ ರೋಷನ್ ಬೇಗ್ ಅವರನ್ನ ಬಂಧಿಸಲಾಗಿದೆ. ಕಕ್ಷಿದಾರರು ಸಿಬಿಐ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಹುರುಳಿಲ್ಲ. ಈಗಾಗಲೇ 36ರ ಪೈಕಿ 35 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕಕ್ಷಿದಾರರು ಅನಾರೋಗ್ಯದಿಂದ ಬಳಲುತ್ತಿದ್ದ, ಜಾಮೀನು ನೀಡುವಂತೆ ಬೇಗ್ ಪರ ಹಿರಿಯ ವಕೀಲ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು. ವಾದ -ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಇಂದು ಆದೇಶ ಕಾಯ್ದಿರಿಸಿತ್ತು.

    ರೋಷನ್ ಬೇಗ್ ಜಾಮೀನು ಹಿನ್ನೆಲೆ ಅವರ ಬೆಂಬಲಿಗರು ಪರಪ್ಪನ ಅಗ್ರಹಾರದತ್ತ ಆಗಮಿಸುತ್ತಿದ್ದಾರೆ. ಇಂದು ಸಂಜೆ 6 ರಿಂದ 7 ಗಂಟೆಯ ಅವಧಿಯಲ್ಲಿ ರೋಷನ್ ಬೇಗ್ ಜಜೈಲಿನಿಂದ ಹೊರ ಬರಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರ ಆಗಮನ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನವೆಂಬರ್ 22ರಂದು ರೋಷನ್ ಬೇಗ್ ಅವರ ಬಂಧನವಾಗಿತ್ತು.

  • ಬೆಳ್ಳಂಬೆಳಗ್ಗೆ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ

    ಬೆಳ್ಳಂಬೆಳಗ್ಗೆ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ

    ಬೆಂಗಳೂರು: ಬಹುಕೋಟಿ ಐಎಂಎ ಹಗರಣ ಪ್ರಕರಣದಲ್ಲಿ ಮಾಜಿ ಶಾಸಕ ರೋಷನ್ ಬೇಗ್ ಭಾನುವಾರ ತಡರಾತ್ರಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇಂದು ಬೆಳಗ್ಗೆ ಸಿಬಿಐನ ಏಳು ಅಧಿಕಾರಿಗಳ ತಂಡ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ನಡೆಸಿದೆ.

    ಐಎಂಎ ಕಂಪನಿಯ ಸಂಸ್ಥಾಪಕ ಮನ್ಸೂರ್ ಖಾನ್ ಒತ್ತಡದಿಂದಾಗಿ ಸಿಬಿಐ ಭಾನುವಾರ ಮಾಜಿ ಮಂತ್ರಿ, ಶಿವಾಜಿ ನಗರದ ಮಾಜಿ ಶಾಸಕ ರೋಷನ್ ಬೇಗ್ ಅವರನ್ನು ಬಂಧಿಸಿದೆ. ರೋಷನ್ ಬೇಗ್ ಅವರನ್ನು ಬಂಧಿಸಿದ ಸಿಬಿಐ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಿದ್ದಾರೆ.

    ಬಂಧನ ಯಾಕೆ?
    ಈ ಹಿಂದೆ ಸಿಬಿಐ ಎರಡು ಬಾರಿ ನೋಟಿಸ್ ನೀಡಿ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಯಾವುದೇ ವಿಚಾರಣೆ ನಡೆಸಿರಲಿಲ್ಲ. ಇದನ್ನೂ ಓದಿ: ಐಎಂಎ ವಂಚನೆಗೆ ಸ್ಫೋಟಕ ತಿರುವು- ಮನ್ಸೂರ್‌ನನ್ನು ಸಚಿವ್ರ ಬಳಿ ಕರ್ಕೊಂಡು ಹೋಗಿದ್ದ ಬೇಗ್

    ಈ ನಡುವೆ ಮನ್ಸೂರ್ ಖಾನ್ ನಾನು ರೋಷನ್ ಬೇಗ್ ಅವರಿಗೆ ಹಣ ನೀಡಿದ್ದೇನೆ. ಈ ಹಣವನ್ನು ರೋಷನ್ ಬೇಗ್ ಅವರಿಂದ ಪಡೆಯಲೇಬೇಕು ಎಂದು ಹೇಳಿದ್ದಾನೆ. ಒಂದು ವೇಳೆ ಹಣವನ್ನು ಪಡೆಯದೇ ಇದ್ದರೆ ನಿಮ್ಮ ವಿರುದ್ಧವೇ ನ್ಯಾಯಾಧೀಶರಿಗೆ ದೂರು ನೀಡುತ್ತೇನೆ ಎಂದು ಮನ್ಸೂರ್ ಖಾನ್ ಸಿಬಿಐ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮನ್ಸೂರ್‌ ಖಾನ್‌ ಒತ್ತಡ – ರೋಷನ್‌ ಬೇಗ್‌ ಅರೆಸ್ಟ್‌, ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    ರೋಷನ್ ಬೇಗ್ ಅವರಿಗೆ ಮನ್ಸೂರ್ ಖಾನ್ 200 ಕೋಟಿ ಸೇರಿದಂತೆ ಐಷಾರಾಮಿ ಕಾರು, ಉಡುಗೊರೆ ನೀಡಿದ್ದ ಆರೋಪ ಈ ಪ್ರಕರಣ ಬೆಳಕಿಗೆ ಬಂದಾಗಲೇ ಬಂದಿತ್ತು. ಆದರೆ ಈಗ ಮನ್ಸೂರ್ ಖಾನ್ ಒತ್ತಡ ಹಾಕಿದ್ದ ಕಾರಣ ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಮನೆಗೆ ತೆರಳಿ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಂಜೆಯ ವೇಳೆ ಬಂಧಿಸಿದೆ.

  • ರೋಷನ್‌ ಬೇಗ್‌ರಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ

    ರೋಷನ್‌ ಬೇಗ್‌ರಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ

    ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿರುವ ರೋಷನ್‌ ಬೇಗ್‌ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು.

    ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರೋಷನ್‌ ಬೇಗ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ವಕ್ಫ್‌ ಖಾತೆಯ ಸಚಿವರಾಗಿದ್ದರು. ಐಎಂಎ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ ತಾನು ಯಾವುದೇ ಅಕ್ರಮ ಎಸಗಿಲ್ಲ ಹೇಳಿದ್ದರು. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಸರ್ಕಾರದ ಎಸ್‌ಐಟಿ ತನಿಖೆಗಿಂತ ಸಿಬಿಐ ತನಿಖೆ ನಡೆಸುವುದೇ ಸೂಕ್ತ ಎಂದು ಹೇಳಿದ್ದರು.

    ಈ ನಡುವೆ 2019ರಲ್ಲಿ ಕಾಂಗ್ರೆಸ್‌ ಶಾಸಕರ ಜೊತೆ ರೋಷನ್‌ ಬೇಗ್‌ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಬಿಜೆಪಿ ಸೇರ್ಪಡೆಗೆ ರಾಜ್ಯ ನಾಯಕರು ಒಲವು ವ್ಯಕ್ತಪಡಿಸಿದ್ದರೂ ಹೈಕಮಾಂಡ್‌ ನಾಯಕರು ಒಪ್ಪಿಗೆ ನೀಡಿರಲಿಲ್ಲ.

    ಎರಡ್ಮೂರು ಬಾರಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ರೋಷನ್‌ ಬೇಗ್‌ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ರೋಷನ್ ಬೇಗ್ ಸೇರ್ಪಡೆಗೆ ರಾಜ್ಯ ನಾಯಕರು ಒಪ್ಪಿ‌ದ್ದರೂ ಆ ಬಳಿಕ ಹೈಕಮಾಂಡ್ ಕೊಕ್ಕೆ ಹಾಕಿತ್ತು

    ಶಿವಾಜಿನಗರ ಉಪಚುನಾವಣೆಯಲ್ಲಿ ಬಿಜೆಪಿ ತನಗೆ ಟಿಕೆಟ್‌ ನೀಡಬಹುದು ಎಂದು ನಿರೀಕ್ಷೆಯಲ್ಲಿ ರೋಷನ್‌ ಬೇಗ್‌ ಇದ್ದರು. ಆದರೆ ಬಿಜೆಪಿ ಸರವಣ ಅವರಿಗೆ ಟಿಕೆಟ್‌ ನೀಡಿತ್ತು. ಹೀಗಿದ್ದರೂ ಬಿಜೆಪಿ ಪರ ಒಳಗೊಳಗೆ ರೋಷನ್‌ ಬೇಗ್‌ ಕೆಲಸ ಮಾಡಿದ್ದರು.

    ಐಎಂಎ ಪ್ರಕರಣದಲ್ಲಿ ಸಿಬಿಐನಿಂದ ಪಾರಾಗಲು ರೋಷನ್‌ ಬೇಗ್‌ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಗಂಭೀರ ಆರೋಪ ಮಾಡಿದ್ದರು. ಆದರೆ ಬಿಜೆಪಿಗೆ ರೋಷನ್‌ ಬೇಗ್‌ ಸೇರ್ಪಡೆಯಾಗಿರಲಿಲ್ಲ. ಇತ್ತ ಕಾಂಗ್ರೆಸ್‌ ನಾಯಕರ ಬೆಂಬಲವು ಸಿಗಲಿಲ್ಲ.

    ಒಂದು ಕಾಲದಲ್ಲಿ ಮುಸ್ಲಿಮರ ಪ್ರಬಲ ನಾಯಕನಾಗಿ ಮೆರೆದಿದ್ದ ರೋಷನ್ ಬೇಗ್ ರಾಜೀನಾಮೆ ಬಳಿಕ ಯಾರ ಬೆಂಬಲ ಇಲ್ಲದ ಕಾರಣ ಒಂಟಿಯಾಗಿದ್ದರು. ಈಗ ಈ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಮೂಲಕ ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮೊದಲ ರಾಜಕಾರಣಿ ರೋಷನ್‌ ಬೇಗ್‌ ಆಗಿದ್ದಾರೆ.  ಇದನ್ನೂ ಓದಿ: ಎರಡು ಬಾರಿ ವಿಚಾರಣೆ ನಡೆಸಿದ್ದ ಸಿಬಿಐ ಇಂದು ಬಂಧಿಸಿದ್ದು ಯಾಕೆ? ಇಲ್ಲಿದೆ ಎಕ್ಸ್‌ಕ್ಲೂಸಿವ್‌ ವರದಿ ಓದಿ

    ಬೇಗ್‌ ಮೇಲಿರುವ ಆರೋಪ ಏನು?
    ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್‍ನಿಂದ ಸುಮಾರು 200 ಕೋಟಿಗೂ ಹೆಚ್ಚು ಹಣದ ಜೊತೆ ಬೆಲೆಬಾಳುವ ಐಷಾರಾಮಿ ವಸ್ತುಗಳು, ಕಾರುಗಳನ್ನು ಗಿಫ್ಟ್ ಪಡೆದಿರುವ ಗಂಭೀರ ಆರೋಪ ರೋಷನ್‌ ಬೇಗ್‌ ಮೇಲಿದೆ.

    ಐಎಂಎ ತನಿಖೆಗಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಿತ್ತು. ಐಎಂಎ ನಿರ್ದೇಶಕರು ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಎಸ್‍ಐಟಿ ಬಂಧಿಸಿತ್ತು. ಈ ಪ್ರಕರಣದಲ್ಲೇ ಬೆಂಗಳೂರಿನ ಅಂದಿನ ಜಿಲ್ಲಾಧಿಕಾರಿ ಶಂಕರ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌ ಕೂಡ ಅರೆಸ್ಟ್ ಆಗಿದ್ದರು.

    ಕಾರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ಬಳಿಕ ಒಂದು ದಿನ ಪೂರ್ತಿ ರೋಷನ್ ಬೇಗ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.

    ಅಧಿವೇಶನ ನಡೆಯುತ್ತಿದ್ದರಿಂದ ರೋಷನ್ ಬೇಗ್ ಅವರನ್ನು ಎಸ್‌ಐಟಿ ಬಿಟ್ಟು ಕಳಿಸಿತ್ತು. ಆ ಬಳಿಕ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಐಎಂಎ ತನಿಖೆಯನ್ನು ಯಡಿಯೂರಪ್ಪ ಸರ್ಕಾರ ಸಿಬಿಐಗೆ ವಹಿಸಿತ್ತು.

  • ಬೆಳಗ್ಗೆ ಮೀಟಿಂಗ್, ಸಂಜೆ ಸೂಸೈಡ್- ವಿಜಯ್ ಶಂಕರ್ ಆತ್ಮಹತ್ಯೆಗೆ ಕಾರಣವೇನು?

    ಬೆಳಗ್ಗೆ ಮೀಟಿಂಗ್, ಸಂಜೆ ಸೂಸೈಡ್- ವಿಜಯ್ ಶಂಕರ್ ಆತ್ಮಹತ್ಯೆಗೆ ಕಾರಣವೇನು?

    -ಬಂಧನದ ಭೀತಿ ?
    -ಮೊದಲ ಬಲಿ ಪಡೆದ ಐಎಂಎ ಹಗರಣ

    ಬೆಂಗಳೂರು: ಬಹುಕೋಟಿ ಐಎಂಎ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಇಂದು ಬೆಂಗಳೂರಿನ ಜಯನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮಾನತುಗೊಂಡಿದ್ದ ವಿಜಯ್ ಶಂಕರ್ 20 ದಿನಗಳ ಹಿಂದೆ ಕೆಲಸಕ್ಕೆ ಮರಳಿದ್ದರು. ಇಂದು ಬೆಳಗ್ಗೆ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸಿದ್ದು, ಲವಲವಿಕೆಯಿಂದಲೇ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ.

    1.5 ಕೋಟಿ ಲಂಚದ ಆರೋಪ: ಐಎಂಎ ಪ್ರಕರಣದಲ್ಲಿ 1.5 ಕೋಟಿ ರೂ. ಲಂಚ ಪಡೆದ ಆರೋಪ ವಿಜಯ್ ಶಂಕರ್ ಮೇಲಿತ್ತು. ಪ್ರಕರಣ ಸಂಬಂಧ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ ಎಸ್‍ಐಟಿ ತಂಡವು ವಿಜಯ್ ಶಂಕರ್ ಅವರನ್ನು ಬಂಧಿಸಿದೆ. ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸುವ ವೇಳೆ ಪ್ರಕರಣ ಎಸ್‍ಐಟಿಯಿಂದ ಸಿಬಿಐಗೆ ವರ್ಗಾವಣೆಯಾಗಿತ್ತು. ಸಿಬಿಐ ಸಹ ವಿಜಯ್ ಶಂಕರ್ ಅವರನ್ನ ಬಂಧಿಸಿತ್ತು.

    ಬಂಧನದ ಭೀತಿ: ಎಸ್.ಐ.ಟಿ ಕೇಸ್ ನಲ್ಲಿ 16 ಆರೋಪಿಯಾಗಿದ್ದ ವಿಜಯ್ ಶಂಕರ್, ಕೇಸ್ ಸಿಬಿಐಗೆ ವರ್ಗಾವಣೆಯಾದ ನಂತರ 4ನೇ ಆರೋಪಿಯಾಗಿದ್ದರು. ಕೆಲ ದಿನಗಳ ಹಿಂದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಪ್ರಾಷಿಕ್ಯೂಷನ್ ಗೆ ಸರ್ಕಾರ ಅನುಮತಿ ನೀಡಿದೆ ಎಂಬ ಭಯದಲ್ಲಿದ್ದ ವಿಜಯ್ ಶಂಕರ್, ಇದರಿಂದ ತಪ್ಪಿಸಿಕೊಳ್ಳಲು ಪದೇ ಪದೇ ವಿಧಾನಸೌಧಕ್ಕೂ ಭೇಟಿ ನೀಡಿದ್ದರು ಎಂದು ತಿಳಿದ ಬಂದಿದೆ. ಈಗ ಬಂಧನದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆಗಳು ವ್ಯಕ್ತವಾಗಿವೆ.

    ಇಂದು ಬೆಳಗ್ಗೆ 10:30 ರಿಂದ 12 ಗಂಟೆಯವರೆಗೂ ಸಭೆ ನಡೆಸಿದ್ದ ವಿಜಯ್ ಶಂಕರ್ ಮಧ್ಯಾಹ್ನ 12:30ಕ್ಕೆ ಕಚೇರಿಯಿಂದ ಹೊರ ಬಂದಿದ್ದರು. ಮನೆಗೆ ಬಂದಿದ್ದ ವಿಜಯ್ ಶಂಕರ್, ಸಂಜೆ ಸುಮಾರು 7 ಗಂಟೆಗೆ ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ವೇಳೆ ಮನೆಯಲ್ಲಿ ವಿಜಯ್ ಶಂಕರ್ ಪತ್ನಿ ಹಾಗೂ ಪುತ್ರಿ ಇದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ತಿಲಕ ನಗರ ಠಾಣೆಯ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.