ನೇಪಿಟಾವ್/ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪ (Myanmar Earthquake) 900 ಕಿಲೋ ಮೀಟರ್ ದೂರದ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಂಕ್ ಮೇಲೂ ದೊಡ್ಡ ಪರಿಣಾಮ ಬೀರಿದೆ. 1930ರ ನಂತರ ಥಾಯ್ಲೆಂಡ್‌ನಲ್ಲಿ ಎದುರಿಸಿದ ಅತ್ಯಂತ ಶಕ್ತಿಶಾಲಿ ಕಂಪನ ಇದಾಗಿದ್ದು, ಗಗನಚುಂಬಿ ಕಟ್ಟಡಗಳ ಧರಾಶಾಹಿಯಾಗಿವೆ. ನಿಂತ ಸ್ಥಳದಲ್ಲಿ ಮೆಟ್ರೋ ರೈಲ್ವೆ (Metro Train) ನಲುಗಿ ಹೋಗಿವೆ, ರಸ್ತೆಗಳು ಬಾಯಿತೆರದು ನಿಂತಿದೆ. ಘಟನೆಯಲ್ಲಿ ಈವರೆಗೆ 144 ಮಂದಿ ಸಾವನ್ನಪ್ಪಿದ್ದಾರೆ.
ಈ ನಡುವೆ ಸಂತ್ರಸ್ತವಾಗಿರುವ ಮ್ಯಾನ್ಮಾರ್‌ಗೆ ಭಾರತ ನೆರವಿನ ಹಸ್ತ ಚಾಚಿದೆ. ತಾತ್ಕಾಲಿಕ ಟೆಂಟ್‌ಗಳು, ಮಲಗುವ ಹಾಸಿಗೆ, ಹೊದಿಕೆಗಳು, ಆಹಾರ, ನೀರು, ನೈರ್ಮಲ್ಯ ಕಿಟ್, ಸೋಲಾರ್ ಲೈಟ್, ಜನರೇಟರ್ ಸೆಟ್ ಹಾಗೂ ಔಷಧಗಳ ನೆರವನ್ನು ಭಾರತ ನೀಡಿದೆ. ಈಗಾಗಲೇ ಸುಮಾರು 15 ಟನ್ ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯುಸೇನೆಯ C-130-J ವಿಮಾನ ವಿಮಾನದಲ್ಲಿ ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ಮೊದಲು ನನಗೆ ತಲೆ ಸುತ್ತುತ್ತಿದೆ ಎಂದು ಭಾವಿಸಿದ್ದೆ – ಥೈಲ್ಯಾಂಡ್ ಭೂಕಂಪದ ಭಯಾನಕ ಚಿತ್ರಣ ಬಿಚ್ಚಿಟ್ಟ ಕನ್ನಡಿಗ
ನಲುಗಿ ಹೋದ ಮೆಟ್ರೋಗಳು
ಥಾಯ್ಲೆಂಡ್ ಮತ್ತು ಮಯನ್ಮಾರ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪವು ಥಾಯ್ಲೆಂಡ್ ರಾಜಧಾನಿ ಬ್ಯಾಕಾಂಕ್ ಅನ್ನು ನಲುಗಿಸಿದೆ. ಬ್ಯಾಕಾಂಕ್‌ನಲ್ಲಿ ಸಂಭವಿಸಿದ ಭೂಕಂಪನವು ರಿಕ್ಟರ್ ಮಾಪಕದಲ್ಲಿ 7.3 ರಿಂದ 7.7 ರವರೆಗೆ ತೀವ್ರತೆಯಲ್ಲಿ ದಾಖಲಾಗಿದೆ. ಥಾಯ್ಲೆಂಡ್‌ನ ಖನಿಜ ಸಂಪನ್ಮೂಲ ಇಲಾಖೆಯ ಪ್ರಕಾರ, ಈ ಭೂಕಂಪವು 1930ರ ನಂತರ ಥಾಯ್ಲೆಂಡ್‌ನಲ್ಲಿ ಅನುಭವಿಸಿದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: Myanmar Earthquake: ಮ್ಯಾನ್ಮಾರ್‌ನಲ್ಲಿ ಪ್ರಬಲ ಭೂಕಂಪಕ್ಕೆ 60 ಸಾವು, 250 ಮಂದಿಗೆ ಗಾಯ
ಘಟನೆಯಲ್ಲಿ ಈವರೆಗೆ 144 ಮಂದಿ ಸಾವನ್ನಪ್ಪಿದ್ದು ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ. ದೇಶದಲ್ಲಿ ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಥಾಯ್ಲೆಂಡ್‌ನ ಪ್ರಧಾನಿ ಪೇಟೊಂಗ್‌ತಾರ್ನ್ ಶಿನವತ್ರಾ ಅವರು ಭೂಕಂಪದ ನಂತರ ಬ್ಯಾಂಕಾಕ್‌ನ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 144ಕ್ಕೇರಿದ ಸಾವಿನ ಸಂಖ್ಯೆ; ತುರ್ತು ಪರಿಸ್ಥಿತಿ ಘೋಷಣೆ
– ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚನೆ
ನವದೆಹಲಿ: ಭಾರತದ ಲಘು ಯುದ್ಧ ವಿಮಾನ (LCA -Light Combat Aircraft) Mk-1A ಉತ್ಪಾದನೆ ಮತ್ತು ಸೇರ್ಪಡೆಯಲ್ಲಿನ ವಿಳಂಬವನ್ನು ಪರಿಹರಿಸಲು ರಕ್ಷಣಾ ಸಚಿವಾಲಯವು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ (Rajesh Kumar Singh) ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಮೂಲಗಳು ಹೇಳಿವೆ.
LCA ಉತ್ಪಾದನೆಯಲ್ಲಿನ ಅಡಚಣೆಗಳನ್ನು ಗುರುತಿಸುವ ಮತ್ತು ಉತ್ಪಾದನೆಯನ್ನು ವೇಗಗೊಳಿಸಲು ಕ್ರಮಗಳನ್ನು ಶಿಫಾರಸು ಮಾಡುವ ಕಾರ್ಯವನ್ನು ಸಮಿತಿ ವಹಿಸಿಕೊಂಡಿದೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ಒಂದು ತಿಂಗಳ ಗಡುವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಗಳ ವಿತರಣೆಯನ್ನು ತ್ವರಿತಗೊಳಿಸಲು ವಿಮಾನ ತಯಾರಿಕೆಯಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಮಾರ್ಗಗಳನ್ನು ಸಮಿತಿಯೂ ಪರಿಶೀಲಿಸುತ್ತದೆ. ಮುಂದಿನ ದಶಕ ಮತ್ತು ಅದಕ್ಕೂ ಮೀರಿದ ಅವಧಿಯಲ್ಲಿ ವಾಯುಪಡೆಯು Mk-1, Mk-1A, ಮತ್ತು Mk-2 ಸೇರಿದಂತೆ ಸುಮಾರು 350 LCA ರೂಪಾಂತರಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಯುಎಸ್‌ಏಡ್ ಉದ್ಯೋಗಿಗಳಿಗೆ ಟ್ರಂಪ್ ಶಾಕ್ – 1,600ಕ್ಕೂ ಹೆಚ್ಚು ಮಂದಿ ವಜಾ
ಸರ್ಕಾರದ ಆತ್ಮ ನಿರ್ಭರ ಭಾರತ್ ಉಪಕ್ರಮದ ಅಡಿಯಲ್ಲಿ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಗಾಗಿ ಭಾರತದ ಪ್ರಯತ್ನದಲ್ಲಿ LCA ಕಾರ್ಯಕ್ರಮವು ನಿರ್ಣಾಯಕವಾಗಿದೆ. IAF ನ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ಸಕಾಲಿಕ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸಮಿತಿಯ ಶಿಫಾರಸುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
https://youtu.be/9aRZwimkiN0?si=KeDewaxigwrszoWU
ಎಲ್‌ಸಿಎ ವಿಮಾನದ ಉತ್ಪಾದನೆ ನಿಧಾನ ಮತ್ತು ವಾಯುಸೇನೆಗೆ ಸೇರ್ಪಡೆ ವಿಳಂಬ ಬಗ್ಗೆ ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಏರೋ ಇಂಡಿಯಾ ಪ್ರದರ್ಶನದಲ್ಲಿ ವಿಮಾನವನ್ನು ಪರಿಶೀಲಿಸುವಾಗ ಅವರು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ʻನಂಬಿಕೆ ಇಲ್ಲʼ ಎಂದು ಹೇಳಿದ್ದರು. ಇದನ್ನೂ ಓದಿ: ಅಮೆರಿಕ ನಾಲ್ಕನೇ ಹಂತದ ಗಡಿಪಾರು: 12 ಮಂದಿ ಅಕ್ರಮ ವಲಸಿಗರು ಭಾರತಕ್ಕೆ
ನವದೆಹಲಿ: ಭಾರತೀಯ ವಾಯುಪಡೆಯ (IAF) ಅವಳಿ ಆಸನಗಳ ಮಿರಾಜ್-2000 ಯುದ್ಧ ವಿಮಾನವು (Mirage 2000 fighter aircraft) ದೈನಂದಿನ ತರಬೇತಿಯಲ್ಲಿದ್ದಾಗ ಪತನಗೊಂಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ನಿರ್ಮಿಸಿದ ಮಿರಾಜ್-2000 ಫೈಟರ್ ಜೆಟ್, ಮೊದಲ ಬಾರಿಗೆ 1978 ರಲ್ಲಿ ಹಾರಾಟ ನಡೆಸಿತ್ತು. ಫ್ರೆಂಚ್ ಏರ್ ಫೋರ್ಸ್ ಇದನ್ನು 1984 ರಲ್ಲಿ ಸೇನೆಗೆ ಸೇರ್ಪಡೆಗೊಳಿಸಿದ ನಂತರ 600 ಮಿರಾಟ್-2000 ಜೆಟ್‌ಗಳನ್ನ ಉತ್ಪಾದಿಸಲಾಯಿತು. ಈ ಪೈಕಿ ಅರ್ಧದಷ್ಟು ವಿಮಾನಗಳನ್ನ ಭಾರತ ಸೇರಿದಂತೆ 8 ದೇಶಗಳಿಗೆ ರಫ್ತು ಮಾಡಲಾಯಿತು. ಮಿರಾಜ್-2000 ಆವೃತ್ತಿಯಲ್ಲಿ ಒಂಟಿ ಆಸನಗಳ ಜೆಟ್‌ಗಳೂ ಸಹ ಇವೆ.
ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವಾಯುಪಡೆಗೆ ಗೆಲುವು ತಂದುಕೊಡುವಲ್ಲಿ ಮಿರಾಜ್-2000 ಯುದ್ಧ ವಿಮಾನಗಳು ಪ್ರಮುಖ ಪಾತ್ರ ಸಹ ವಹಿಸಿದ್ದವು. ಅಲ್ಲದೇ 2019ರ ಸರ್ಜಿಕಲ್ ಸ್ಟ್ರೈಕ್‌ನಲ್ಲೂ ಇದೇ ಆವೃತ್ತಿಯ ವಿಮಾನಗಳ ಮೂಲಕ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ದಾಳಿ ನಡೆಸಲಾಗಿತ್ತು. ಇದನ್ನೂ ಓದಿ: ವಾಲ್ಮೀಕಿ ಹಗರಣ | ಸಿಬಿಐ ತನಿಖೆ ಚುರುಕು ಮೂವರು ಆರೋಪಿಗಳಿಗೆ ನೋಟಿಸ್
ಸಾಮಾನ್ಯವಾಗಿ ಯಾವುದೇ ಒಂದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಸಂಭವಿಸಿದಾಗ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (IMF) ಆರ್ಥಿಕ ನೆರವು ಪಡೆಯುತ್ತವೆ. ಇದೀಗ ದಿವಾಳಿ ಹಂತ ತಲುಪಿರುವ ಪಾಕಿಸ್ತಾನ ಕೂಡ ಅದೇ ದಾರಿ ಅನುರಿಸಿದೆ. ಈ ಹಿಂದೆ ಐಎಂಎಫ್ ಮಾತ್ರವಲ್ಲದೇ ಸೌದಿ, ಚೀನಾ (China) ದೇಶಗಳಿಂದ ಸಾಲ ಪಡೆದಿದ್ದರೂ ಪಾಕ್ ದಾರಿದ್ರ್ಯ ನೀಗಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಈ ನಡುವೆ ಐಎಂಎಫ್ ಷರತ್ತುಗಳಿಗೆ ಒಪ್ಪಿ ಮತ್ತೆ ಸಾಲ ಪಡೆದುಕೊಳ್ಳಲು ಮುಂದಾಗಿದೆ.
ಕಳೆದ ಜುಲೈ ತಿಂಗಳಲ್ಲೇ 7 ಶತಕೋಟಿ ಡಾಲರ್ ಸಾಲಕ್ಕೆ (Billion USD Loan) ಐಎಂಎಫ್ ಜೊತೆಗೆ ಮಾತುಕತೆ ಮುಕ್ತಾಯಗೊಂಡಿದೆ. ಆದರೂ ಈವರೆಗೆ ಸಾಲ ಸಿಕ್ಕಿಲ್ಲ. ಏಕೆಂದರೆ ಐಎಂಎಫ್ ಕಾರ್ಯಕಾರಿ ಮಂಡಳಿ ಸಾಲಕ್ಕೆ ಅನುಮೋದನೆ ನೀಡಿಲ್ಲ. ಇದೇ ಸೆಪ್ಟೆಂಬರ್ 25ರಂದು ಐಎಂಎಫ್ ಕಾರ್ಯಕಾರಿ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಸಾಲ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧಸಲಾಗುತ್ತದೆ. ಒಂದು ವೇಳೆ ಪಾಕ್‌ಗೆ ಸಾಲ ಕೊಡಲು ಅನುಮತಿ ಸಿಕ್ಕರೆ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ ಪಾಕ್ 7 ಶತಕೋಟಿ ಡಾಲರ್ ನೆರವು ಪಡೆದುಕೊಳ್ಳಲಿದೆ. ಹಾಗಿದ್ದರೆ ಐಎಂಎಫ್‌ನ ಷರತ್ತುಗಳೇನು? ಪಾಕ್‌ನ ಪರಿಸ್ಥಿತಿಗೆ ಕಾರಣವೇನು? ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..
ಐಎಂಎಫ್ ಷರತ್ತುಗಳೇನು?
ಐಎಂಎಫ್ ಪಾಕ್‌ಗೆ ಸಾಲ ನೀಡಲು ಒಪ್ಪಿದಾಗ ಹಲವು ಷರತ್ತುಗಳನ್ನು ವಿಧಿಸಿತ್ತು. ಅದರಲ್ಲಿ ಪ್ರಮುಖವಾಗಿ ಆದಾಯದ ಮೇಲಿನ ತೆರಿಗೆ ದುಪ್ಪಟ್ಟು ಮಾಡುವುದಾಗಿದೆ. ಮೂಲಗಳ ಪ್ರಕಾರ, ಕೃಷಿ ಆದಾಯದ ಮೇಲಿನ ತೆರಿಗೆಯನ್ನು 15% ನಿಂದ 45%ಗೆ ಹೆಚ್ಚಿಸುವುದಾಗಿ ಷರತ್ತು ವಿಧಿಸಿದೆ. ಜೊತೆಗೆ ವಿದ್ಯುತ್ ಮೇಲಿನ ಸಬ್ಸಿಡಿಗಳನ್ನು ಕೊನೆಗೊಳಿಸುವ ಷರತ್ತು ವಿಧಿಸಿದೆ. ಆದಾಗ್ಯೂ ಐಎಂಎಫ್‌ನ ಎಲ್ಲಾ ಷರತ್ತುಗಳಿಗೆ ಪಾಕ್ ಸಿದ್ಧ ಎಂದು ಹೇಳಿದೆ. ಖುದ್ದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ (shehbaz sharif) ಐಎಂಎಫ್‌ನ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.
ಪಾಕ್ ಸರ್ಕಾರದಲ್ಲೇ ಐಎಂಎಫ್ ವಿರುದ್ಧ ಭಿನ್ನಮತ:
ಪಾಕಿಸ್ತಾನಕ್ಕೆ ಐಎಂಎಫ್ ಸಾಲ ನೀಡಲು ಒಪ್ಪಿದ ಬಳಿಕ 2 ತಿಂಗಳಾದರೂ ಈ ವರೆಗೆ ಕಾರ್ಯಕಾರಿ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಪಾಕ್ ಸರ್ಕಾರದಲ್ಲೇ ಐಎಂಎಫ್ ವಿರುದ್ಧ ಭಿನ್ನಮತ ಸ್ಫೋಟಗೊಂಡಿದೆ. ಉಪ ಪ್ರಧಾನಿ ಇಶಾಕ್ ದಾರ್, ಐಎಂಎಫ್ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನವನ್ನು ಹಾಳು ಮಾಡಿದೆ. ಪಾಕಿಸ್ತಾನ ದಿವಾಳಿಯಾಗಬೇಕೆಂದು ಐಎಂಎಫ್ ಬಯಸಿದೆ. ಅದಕ್ಕಾಗಿಯೇ ತೆರಿಗೆ ಹೆಚ್ಚಿಸುವ, ಸಬ್ಸಿಡಿಗಳನ್ನು ನಿಲ್ಲಿಸುವ ಷರತ್ತುಗಳನ್ನು ವಿಧಿಸಿದೆ. ಇದನ್ನು ನಮ್ಮ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ಸಾಲ ನೀಡಲು ಐಎಂಎಫ್ ವಿಳಂಬ ಮಾಡುತ್ತಿರುವುದು ಏಕೆ?
ಅಂತಾರಾಷ್ಟ್ರೀಯ ಹಣಕಾಸು ನಿಧಿ ಉದ್ದೇಶಪೂರ್ವಕವಾಗಿಯೇ ಪಾಕಿಸ್ತಾನಕ್ಕೆ ಸಾಲ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಆದ್ರೆ ವಾಸ್ತವಾಂಶ ಬೇರೆಯೇ ಇದೆ. ಈಗಾಗಲೇ ಮುಂದಿನ ಸಾಲಕ್ಕೆ ಪಾಕ್ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡಿದೆ. ಆದ್ರೆ ಸಾಲ ಪಡೆಯುವ ಪೂರ್ವದಲ್ಲಿ ಮಾಡಬೇಕಾದ ಪ್ರಮುಖ ಷರತ್ತುಗಳನ್ನು ಪಾಕ್ ಪೂರೈಸುವಲ್ಲಿ ವಿಫಲವಾಗಿದೆ.
ಏನದು ಷರತ್ತು?: ಐಎಂಎಫ್‌ನಿಂದ ಸಾಲ ಪಡೆಯುವುದಕ್ಕೂ ಮುನ್ನ ಪಾಕ್ ತನ್ನ ಮೇಲಿರುವ 12 ಶತಕೋಟಿ ಡಾಲರ್ ಸಾಲವನ್ನು ತೀರಿಸಬೇಕು ಎಂಬುದು ಷರತ್ತಾಗಿದೆ. ಸೌದಿ ಅರೇಬಿಯಾಕ್ಕೆ 5 ಶತಕೋಟಿ ಡಾಲರ್ ಮತ್ತು ಚೀನಾಕ್ಕೆ 4 ಶತಕೋಟಿ ಡಾಲರ್ ಮತ್ತು ಯುಎಇಗೆ 3 ಶತಕೋಟಿ ಡಾಲರ್ ಸಾಲವನ್ನು ಪಾಕ್ ಮರುಪಾವತಿ ಮಾಡಬೇಕಾಗಿದೆ. 2ನೇ ಷರತ್ತು 2 ಶತಕೋಟಿ ಡಾಲರ್‌ನಷ್ಟು ಪಾಕಿಸ್ತಾನ ಡೆಪಾಸಿಟ್ ಹೊಂದಿರಬೇಕು. ಆದ್ರೆ ಪಾಕ್ ಈ ಷರತ್ತು ಪಾಲಿಸುವಲ್ಲಿ ವಿಫಲವಾದ ಕಾರಣ ಪಾಕ್ ಸಾಲ ಪಡೆದಿಲ್ಲ. ಈ ನಡುವೆ ಪಾಕ್‌ಗೆ ಚೀನಾ ಸೌದಿಗೆ ಶಹಬಾಜ್ ಷರೀಫ್ ವಿಶೇಷ ಧನ್ಯವಾದ ಅರ್ಪಿಸಿದ್ದು, ಸಾಲ ಮುಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ 2 ಶತಕೋಟಿ ಡಾಲರ್ ಹೊಂದಿಸಲು ಪಾಕ್ ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಆದಾಗ್ಯೂ ಇದುವರೆಗೆ ಯಾವುದೇ ಒಪ್ಪಂದಗಳು ನಡೆದಿರುವುದು ಬೆಳಕಿಗೆ ಬಂದಿಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಪಾಕಿಸ್ತಾನಕ್ಕೆ ಸಾಲ ಏಕೆ ಬೇಕು?
* ಹೆಚ್ಚುತ್ತಿರುವ ಸಾಲದ ಹೊರೆ:
ಪಾಕಿಸ್ತಾನವು ಸದ್ಯ ಸಾಲದ ಬಲೆಯಲ್ಲಿ ಸಿಲುಕಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಜೂನ್ 2024ರ ವೇಳೆಗೆ ದೇಶವು ಪಾಕಿಸ್ತಾನಿ ರೂಪಾಯಿ 71,245 ಶತಕೋಟಿಗಿಂತ ಹೆಚ್ಚಿನ ಸಾಲವನ್ನು ಹೊಂದಿದೆ. ಇದು ನುಂಗಲಾರದ ತುತ್ತಾಗಿದೆ.
* ವಿದೇಶಿ ವಿನಿಮಯ ಮೀಸಲು ಖಾಲಿ:
ಪಾಕಿಸ್ತಾನದ ವಿದೇಶಿ ವಿನಿಮಯಕ್ಕೆ ಮೀಸಲಿರಿಸಿದ್ದ ಖಜಾನೆ ಸಹ ಖಾಲಿಯಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಇತ್ತೀಚಿನ ವರದಿಯ ಅನುಸಾರ, 2020-21ರಲ್ಲಿ 17.2 ಶತಕೋಟಿ ಡಾಲರ್ ವಿದೇಶಿ ವಿನಿಮಯವಷ್ಟೇ ಮೀಸಲು ಹೊಂದಿತ್ತು. ಆದರೆ, 2023-24ರ ವೇಳೆಗೆ ಇದು 9.3 ಶತಕೋಟಿ ಡಾಲರ್‌ಗೆ ಇಳಿಕೆಯಾಗಿದೆ.
* ನಿರಂತರವಾಗಿ ಕುಸಿಯುತ್ತಿರುವ ಕರೆನ್ಸಿ ಮೌಲ್ಯ:
ಪಾಕಿಸ್ತಾನಿ ರೂಪಾಯಿಯ ಮೌಲ್ಯ ನಿರಂತರವಾಗಿ ಕುಸಿಯುತ್ತಿದೆ. 2022ರ ಮೇ ತಿಂಗಳಲ್ಲಿ 1 ಡಾಲರ್‌ಗೆ 185 ಪಾಕಿಸ್ತಾನಿ ರೂಪಾಯಿ ಇತ್ತು. ಆದರೀಗ 1 ಅಮೆರಿಕನ್ ಡಾಲರ್‌ಗೆ 278 ಪಾಕಿಸ್ತಾನಿ ರೂ.ನಷ್ಟು ಹೆಚ್ಚಾಗಿದೆ.
* ಹುಚ್ಚುಚ್ಚಾಗಿ ಹೆಚ್ಚುತ್ತಿರುವ ಹಣದುಬ್ಬರ:
ಪಾಕಿಸ್ತಾನದಲ್ಲಿ ಹಣದುಬ್ಬರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಲ್ಲಿ ಹಣದುಬ್ಬರ 10% ಹೆಚ್ಚಾಗಿದೆ. ಉದಾಹರಣೆಗೆ ಒಂದು ಕೆಜಿ ಗೋದಿ ಹಿಟ್ಟು 800 ರೂ.ಗಿಂತಲೂ ಹೆಚ್ಚಾಗಿದೆ.
ಪಾಕ್ ವಿಶ್ವದ 5ನೇ ಅತಿದೊಡ್ಡ ಸಾಲಗಾರನಾಗಿರೋದು ಏಕೆ?
ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರವಾದಾಗಿನಿಂದ 23 ಬಾರಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆದುಕೊಂಡಿದೆ. ಪಾಕಿಸ್ತಾನ ಐಎಂಎಫ್‌ಗೆ ವಿಶ್ವದ 5ನೇ ಅತಿದೊಡ್ಡ ಸಾಲಗಾರ ರಾಷ್ಟ್ರವಾಗಿದೆ. ಐಎಂಎಫ್ ವರದಿ ಪ್ರಕಾರ ಪಾಕಿಸ್ತಾನ 2024ರ ಸೆಪ್ಟೆಂಬರ್ 12ರ ವೇಳೆಗೆ ಪಾಕ್ 6.15 ಶತಕೋಟಿ ಡಾಲರ್ ಸಾಲವನ್ನು ಹೊಂದಿತ್ತು ಎನ್ನಲಾಗಿದೆ.
ಐಎಂಎಫ್‌ನಿಂದ 31 ಶತಕೋಟಿ ಡಾಲರ್ ಸಾಲ ಪಡೆದ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿತ್ತು. 10.3 ಶತಕೋಟಿ ಡಾಲರ್ ಸಾಲ ಪಡೆದ ಈಜಿಪ್ಟ್ 2ನೇ ಸ್ಥಾನ, 10.2 ಶತಕೋಟಿ ಡಾಲರ್ ಸಾಲ ಪಡೆದಿರುವ ಉಕ್ರೇನ್ 3ನೇ ಸ್ಥಾನ, 6.4 ಶತಕೋಟಿ ಡಾಲರ್ ಸಾಲ ಪಡೆದುಕೊಂಡಿರುವ ಈಕ್ವೆಡಾರ್ 4ನೇ ಸ್ಥಾನದಲ್ಲಿದ್ದರೆ, 1.15 ಶತಕೋಟಿ ಡಾಲರ್ ಹೊಂದಿರುವ ಪಾಕ್ 5ನೇ ರಾಷ್ಟ್ರವಾಗಿದೆ. ಇದೀಗ ಮುಂದಿನ 37 ತಿಂಗಳಲ್ಲಿ ಹಂತ ಹಂತವಾಗಿ 7 ಶತಕೋಟಿ ಡಾಲರ್ ಸಾಲ ಪಡೆದುಕೊಂಡರೆ, ಒಟ್ಟು 13 ಶತಕೋಟಿ ಡಾಲರ್‌ಗಿಂತ ಹೆಚ್ಚು ಸಾಲ ಪಡೆದುಕೊಂಡಂತೆ ಆಗುತ್ತದೆ. ಈ ಮೂಲಕ ಏಷ್ಯಾದಲ್ಲೇ ಪಾಕ್ ಅತಿದೊಡ್ಡ ಸಾಲಗಾರ ರಾಷ್ಟ್ರ ಎಂಬ ಕುಖ್ಯಾತಿಗೆ ಗುರಿಯಾಗಲಿದೆ.
ಸದ್ಯ ಭಾರತದ ಜೊತೆಗೆ ಸಂಬಂಧ ಹೊಂದಲು ಹಾತೊರೆಯುತ್ತಿರುವ ಪಾಕ್ ಮುಂದೆ ಯಾವ ರೀತಿ ತನ್ನ ದೇಶವನ್ನು ದಿವಾಳಿತನದಿಂದ ಕಾಪಾಡಿಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
– ಸಂಭೋಗಕ್ಕೆ ಒತ್ತಾಯಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖ
ಶ್ರೀನಗರ: ಕೋಲ್ಕತ್ತಾದಲ್ಲಿ (Kolkata) ಆರ್.ಜಿ ಕರ್ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಇದೀಗ ಭಾರತೀಯ ವಾಯುಪಡೆಯಲ್ಲೂ ಅಧಿಕಾರಿಯೊಬ್ಬರ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.
ಭಾರತೀಯ ವಾಯುಪಡೆಯ ಫ್ಲೈಯಿಂಗ್ ಸ್ಕ್ವಾಡ್ ಮಹಿಳಾ ಅಧಿಕಾರಿಯೊಬ್ಬರು (IAF Officer) ವಿಂಗ್ ಕಮಾಂಡರ್ ಮೇಲೆ ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಪೊಲೀಸ್ (udgam Police) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇಬ್ಬರೂ ಅಧಿಕಾರಿಗಳು ಶ್ರೀನಗರದಲ್ಲಿ (Srinagar) ನೆಲೆಸಿದ್ದಾರೆ. ಇದನ್ನೂ ಓದಿ: Haryana Poll | ಬಿಜೆಪಿಯಿಂದ 21 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ವಿನೇಶ್ ವಿರುದ್ಧ ಪ್ರಬಲ ಅಭ್ಯರ್ಥಿ ಅಖಾಡಕ್ಕೆ
ಪ್ರಕರಣ ದಾಖಲಾಗುತ್ತಿದ್ದಂತೆ ಸ್ಥಳೀಯ ಬುಡ್ಗಾಮ್ ಠಾಣೆಯ ಪೊಲೀಸರು ವಾಯುಪಡೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ವಾಯುಪಡೆಯ ಅಧಿಕಾರಿಗಳು ಸಹ ಅಧಿಕಾರಿಗಳ ವಿಚಾರಣೆಗೆ ಸಹಕಾರ ನೀಡಿರುವುದಾಗಿ ವರದಿಯಾಗಿದೆ. ಕಳೆದ 2 ವರ್ಷಗಳಿಂದ ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಫ್ಲೈಯಿಂಗ್ ಸ್ಕ್ವಾಡ್‌ನ ಮಹಿಳಾ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿ, ದುರ್ಗಾಪೂಜೆಗೆ ಗಮನ ಹರಿಸಿ – ದೀದಿ ಹೇಳಿಕೆಗೆ ಮೃತ ಟ್ರೈನಿ ವೈದ್ಯೆಯ ತಾಯಿ ಆಕ್ರೋಶ
ದೂರಿನಲ್ಲಿ ಏನಿದೆ?
2023ರ ಡಿಸೆಂಬರ್ 31ರ ಮಧ್ಯರಾತ್ರಿ ಹೊಸ ವರ್ಷದ ಪಾರ್ಟಿ ವೇಳೆ ವಿಂಗ್ ಕಮಾಂಡರ್ ತನಗೆ ಉಡುಗೊರೆ ನೀಡುವುದಾಗಿ ತನ್ನ ಕೋಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಹಿಳೆ ನಿಮ್ಮ ಕುಟುಂಬ ಎಲ್ಲಿದೆ ಎಂದು ಕೇಳಿದಾಗ, ಪುರುಷ ಅಧಿಕಾರಿ ಅವರು ಬೇರೆಡೆ ನೆಲೆಸಿದ್ದಾರೆ ಎಂದು ಹೇಳಿದ್ದರು. ಆ ದಿನ ರಾತ್ರಿ ತನ್ನೊಂದಿಗೆ ಸಂಭೋಕ್ಕೆ ಒತ್ತಾಯಿಸಿ, ಕಿರುಕುಳ ನೀಡಿದರು. ನಾನೂ ಇದು ಸರಿಯಿಲ್ಲ ಎಂದು ಪದೇ ಪದೇ ಹೇಳಿದೆ. ಸಾಧ್ಯವಾದಷ್ಟು ವಿರೋಧಿಸಲು ಪ್ರಯತ್ನಿಸಿದೆ, ಆದ್ರೆ ಅವರು ನನ್ನ ಮಾತು ಕೇಳದೇ ಮೇಲೆರಗಲು ಬಂದರು. ಆಗ ನಾನು ಅವರನ್ನು ತಳ್ಳಿ ಅಲ್ಲಿಂದ ಓಡಿ ಹೋದೆ. ಇದಾದ ನಂತರ ಅವರ ಕುಟುಂಬದೊಂದಿಗೆ ಮತ್ತೆ ಭೇಟಿಯಾಗೋಣ ಎಂದು ಕೇಳಿದ್ದರು. ಇದೇ ರೀತಿ ಅನೇಕ ಸಂದರ್ಭಗಳಲ್ಲಿ ಕಿರುಕುಳ ನೀಡುತ್ತಿದ್ದರು.
ಆತನಿಂದ ನನ್ನ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ನಿರಂತರ ಭಯದಲ್ಲಿ ಬದುಕುತ್ತಿದ್ದೇನೆ. ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದೆ. ಇದರಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಬಹಳ ಸಮಯದಿಂದ ಈ ಚಿತ್ರಹಿಂದೆ ಸಹಿಸಿಕೊಂಡಿದ್ದೇನೆ. ಕೊನೆಗೆ ವಿಧಿಯಿಲ್ಲದೇ ದೂರು ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ವಿರುದ್ಧ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಅನೇಕ ಸಂರ್ಭಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ವಿಷಯದಲ್ಲಿ ಸಂಘರ್ಷ ಬೇಡ – ಸಚಿವ ಎಂ.ಬಿ ಪಾಟೀಲ್‌ಗೆ ಕೇಂದ್ರ ಸಚಿವ ಹೆಚ್‌ಡಿಕೆ HD ಕುಮಾರಸ್ವಾಮಿ ಭರವಸೆ
ಚೆನ್ನೈ: ತಾಂತ್ರಿಕ ದೋಷದಿಂದಾಗಿ ಐಎಎಫ್‍ನ (Indian Air Force) ತರಬೇತಿ ಹೆಲಿಕಾಪ್ಟರ್ (Helicopter) ಚೆನ್ನೈ ಬಳಿಯ ಪೊಪರ್ಂದಲ್‍ನ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸಿಬ್ಬಂದಿ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಸಲವಕ್ಕಂ ಪೊಲೀಸ್ ಠಾಣಾ ವ್ಯಾಪ್ತಿಯ ಪೊಪರ್ಂದಲ್ ಪ್ರದೇಶಕ್ಕೆ ಸಮೀಪಿಸಿದಾಗ ಹಠಾತ್ತನೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮವಾಗಿ ಪೈಲಟ್ ಗದ್ದೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಮತ್ತೊಂದು ಸೇನಾ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿ ಬಂದು ತಾಂತ್ರಿಕ ದೋಷ ಸರಿಪಡಿಸಿ ಸೇನಾ ನೆಲೆಗೆ ಕೊಂಡೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ತುರ್ತು ಭೂಸ್ಪರ್ಶದ ವೇಳೆ ಯಾವುದೇ ಅನಾಹುತ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಗುಜರಾತ್‍ನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರ ಪರಿಣಾಮ ಅದರಲ್ಲಿದ್ದ ಇಬ್ಬರು ಪೈಲಟ್‍ಗಳು ಸೇರಿ ಮೂವರು ನಾಪತ್ತೆಯಾಗಿದ್ದರು.
ನವದೆಹಲಿ: ಭಾರತದ ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದೆ. 2027 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ. ಗೀತಾ ಗೋಪಿನಾಥ್ (Gita Gopinath) ಹೇಳಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಬೆಳವಣಿಗೆಯು ಕಳೆದ ಆರ್ಥಿಕ ವರ್ಷದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ ಮತ್ತು ಆ ಕ್ಯಾರಿಓವರ್ ಪರಿಣಾಮಗಳು ಈ ವರ್ಷದ ನಮ್ಮ ಮುನ್ಸೂಚನೆಯ ಮೇಲೆ ಪರಿಣಾಮ ಬೀರುತ್ತಿವೆ. ಇತರ ಅಂಶವೆಂದರೆ ನಾವು ಖಾಸಗಿ ಬಳಕೆ ಚೇತರಿಸಿಕೊಳ್ಳುವುದನ್ನು ನೋಡುತ್ತಿದ್ದೇವೆ ಎಂದು ಗೋಪಿನಾಥ್ ಹೇಳಿದರು. ಇದನ್ನೂ ಓದಿ: ISRO: ಭೂಮಿ ಪರಿವೀಕ್ಷಣಾ ಇಒಎಸ್-08 ಉಪಗ್ರಹ ಯಶಸ್ವಿ ಉಡಾವಣೆ
IMF 2024-25 ರ ಆರ್ಥಿಕ ವರ್ಷಕ್ಕೆ ಭಾರತದ ಬೆಳವಣಿಗೆಯ ಪ್ರಕ್ಷೇಪಣವನ್ನು 7% ಗೆ ಹೆಚ್ಚಿಸಿದೆ. ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರವು ನೀಡಿದ 6.5% ಪ್ರೊಜೆಕ್ಷನ್‌ಗಿಂತ ಇದು ತುಸು ಹೆಚ್ಚಿದೆ. ಇದರಿಂದ 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು IMF ಭವಿಷ್ಯ ನುಡಿದಿದೆ.
ಗ್ರಾಮೀಣ ಬಳಕೆಯಲ್ಲಿನ ಆರ್ಥಿಕತೆ ಚೇತರಿಕೆಯಿಂದ ಕಾಣಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ನೀವು ದ್ವಿಚಕ್ರ ವಾಹನಗಳ ಮಾರಾಟವನ್ನು ನೋಡಿದರೆ, ಅದು ಹೆಚ್ಚುತ್ತಿದೆ. ಈ ಮಾನ್ಸೂನ್‌ನಲ್ಲಿ ಉತ್ತಮ ಫಸಲುಗಳನ್ನು ಉತ್ಪಾದಿಸುತ್ತೇವೆ ಎಂದು ನಾವು ನಿರೀಕ್ಷಿಸುತ್ತೇವೆ. ಗ್ರಾಮೀಣ ಬಳಕೆಯಲ್ಲಿ ಚೇತರಿಕೆ ಕಾಣಬೇಕು ಎಂದು ಹೇಳಿದರು. ಇದನ್ನೂ ಓದಿ: ಅಗ್ನಿ ಕ್ಷಿಪಣಿ ಪಿತಾಮಹ ರಾಮ್ ನಾರಾಯಣ್ ಅಗರ್ವಾಲ್ ನಿಧನ
ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಭಾರತ ಶತ್ರು ಸೇನೆಗಳ ಹುಟ್ಟಡಗಿಸಲು ಸೂಕ್ತ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಭಾರತ ಸ್ವದೇಶಿ ನಿರ್ಮಿತ ಆಯುಧಗಳನ್ನೇ ಸೇನೆಗೆ ಸೇರ್ಪಡೆಗೊಳಿಸಲು ಸಿದ್ಧತೆ ನಡೆಸಿದೆ. ಕೆಲ ದಿನಗಳ ಹಿಂದೆಯಷ್ಟೇ ಭಾರತ ಅಗ್ನಿ-5 (AGNI – 5) ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. 5,000 ಕಿಮೀ ದೂರದಲ್ಲಿರುವ ಗುರಿಯನ್ನು ತಲುಪಿ ಶತ್ರುಗಳನ್ನು ಕೊಲ್ಲುವ ಸಾಮರ್ಥ್ಯದ ಈ ಕ್ಷಿಪಣಿಯನ್ನು ರಕ್ಷಣಾ ಸಚಿವಾಲಯ ಸೇನೆಗೆ ಸೇರಿಸುವ ಸಿದ್ಧತೆ ನಡೆಸಿದೆ. ಅಲ್ಲದೇ ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ವದೇಶಿ ನಿರ್ಮಿತ ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ʻನಾಗಾಸ್ತ್ರʼವನ್ನು (ಆತ್ಮಹತ್ಯಾ ಡ್ರೋನ್) (Suicide Drone) ಭಾರತೀಯ ಸೇನೆಗೆ ಸೇರಿಸುವ ತಯಾರಿ ನಡೆದಿದೆ. ಇದಾದ ಒಂದೆರಡು ದಿನಗಳಲ್ಲೇ ಚೀನಾ ಮತ್ತು ಪಾಕ್ ಗಡಿಯಲ್ಲಿ ಭಾರತ ಗಸ್ತು ಹೆಚ್ಚಿಸಲು 156 ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗೆ ಮುಂದಾಗಿದೆ.
ಹಾಗಾದ್ರೆ ಭಾರತದ ರಕ್ಷಣಾ ವಲಯದಲ್ಲಿ (India’s Defense Sector) ಆಗುತ್ತಿರುವ ಬೆಳವಣಿಗೆಗಳು ಏನು? ಸೇನಾ ಸಾಮರ್ಥ್ಯ ಹೆಚ್ಚಿಸಲು ಯಾವೆಲ್ಲ ಕ್ರಮಗಳನ್ನು ಮತ್ತು ಏಕೆ ಕೈಗೊಳ್ಳಲಾಗುತ್ತಿದೆ? ಅನ್ನೋ ಬಗ್ಗೆ ತಿಳಿಯೋಣ…
ಚೀನಾ-ಪಾಕ್‌ಗೆ ಠಕ್ಕರ್ ಕೊಡಲು ಪ್ಲ್ಯಾನ್:
ಇತ್ತೀಚೆಗೆ ಚೀನಾ, ಭಾರತದ ಸಿಕ್ಕಿಂನಿಂದ ಸುಮಾರು 150 ಕಿಮೀ ಮೀಟರ್‌ಗಳಷ್ಟು ದೂರದ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಅತ್ಯಾಧುನಿಕ ಫೈಟರ್ ಜೆಟ್‌ಗಳನ್ನ ನಿಯೋಜಿಸಿದೆ. ಅಲ್ಲದೇ ಚೀನಾ ನೆರವಿನಿಂದಲೇ ಎದುರಾಳಿ ಪಾಕಿಸ್ತಾನ ಗಡಿ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳಿಗೆ ಠಕ್ಕರ್ ಕೊಡಲು ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಭಾರತೀಯ ಸೇನೆಗೆ 90 ಮತ್ತು ಭಾರತೀಯ ವಾಯುಸೇನೆಗೆ 66 ಲಘು ಯುದ್ಧ ಹೆಲಿಕಾಪ್ಟರ್‌ಗಳ (ಪ್ರಚಂಡ್) ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಡೆಟ್‌ಗೆ (HAL) 45,000 ಕೋಟಿ ರೂ.ಗೆ ಟೆಂಡರ್ ನೀಡಿದೆ. `ಪ್ರಚಂಡ್ʼ ಹೇಲಿಕಾಪ್ಟರ್ (Prachand Helicopter) 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವ ಸಾಮರ್ಥ್ಯ ಹೊಂದಿದ್ದು, ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್ ನಂತಹ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಣ್ವಸ್ತ್ರಗಳ ಬಲ ಹೆಚ್ಚಿಸಿಕೊಂಡ ಭಾರತ:
ಹೌದು. ವಿಶ್ವದ 9 ರಾಷ್ಟ್ರಗಳು 2023ರಲ್ಲಿ ಅಣ್ವಸ್ತ್ರಗಳನ್ನು (Nuclear Weapons) ಆಧುನಿಕರಣಗೊಳಿಸುವುದರ ಜೊತೆಗೆ ಹೊಸ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆ ನಿಯೋಜಿಸಿವೆ. ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ, ದಕ್ಷಿಣ ಕೊರಿಯಾ, ಇಸ್ರೇಲ್ ಅಲ್ಲದೇ ಭಾರತವೂ ಸಹ ಈ ರಾಷ್ಟ್ರಗಳ ಪಟ್ಟಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಮುನ್ನುಗ್ಗುತ್ತಿರುವ ಭಾರತ ಅಣ್ವಸ್ತ್ರಗಳ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಸದ್ಯ ಅತಿಹೆಚ್ಚು ಅಣ್ವಸ್ತ್ರಗಳನ್ನು ಹೊಂದಿರುವ ವಿಶ್ವದ ಅಗ್ರ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನಕ್ಕೆ ಏರಿಕೆ. ಅಮೆರಿಕ 5,044, ರಷ್ಯಾ 5,580, ಚೀನಾ 476, ಭಾರತ 172, ಪಾಕಿಸ್ತಾನ 170, ಇಸ್ರೇಲ್ 90, ಉತ್ತರ ಕೊರಿಯಾ 50 ಪರಮಾಣು ಅಸ್ತ್ರಗಳನ್ನು ಒಳಗೊಂಡಿವೆ.
ಶತ್ರುಗಳಲ್ಲಿ ನಡುಕ ಹುಟ್ಟಿಸಿದ ನಾಗಾಸ್ತ್ರ:
ನಾಗಾಸ್ತ್ರ-1 ಡ್ರೋನ್ (Nagastra – 1) ಅನ್ನು ಅತ್ಯಂತ ನಿಖರವಾದ ದಾಳಿ ನಡೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದ್ದು, ಜಿಪಿಎಸ್ ನಿರ್ದೇಶನದ ನೆರವಿನಿಂದ ಗುರಿಯ ಕೇವಲ 2 ಮೀಟರ್ ವ್ಯಾಪ್ತಿಯಲ್ಲಿ ನಿಖರ ದಾಳಿ ನಡೆಸಬಲ್ಲದು. ಅಲ್ಲದೇ ಇದು ಸ್ಥಿರ ರೆಕ್ಕೆಗಳನ್ನು ಹೊಂದಿದ್ದು, ಓರ್ವ ವ್ಯಕ್ತಿಯೇ ಕೊಂಡೊಯ್ಯುವಷ್ಟು ಹಗುರವಾಗಿದೆ. ಕೇವಲ 9 ಕೆಜಿ ತೂಕ ಹೊಂದಿದ್ದು, ಗರಿಷ್ಠ 30 ನಿಮಿಷಗಳಷ್ಟು ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಡ್ರೋನ್ ಹೊಂದಿರುವ ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯ ಕಾರಣದಿಂದ, ಇದು ಅತ್ಯಂತ ಕನಿಷ್ಠ ಪ್ರಮಾಣದ ಸದ್ದನ್ನು ಹೊರಹೊಮ್ಮಿಸುತ್ತದೆ. ಡ್ರೋನ್ 200 ಮೀಟರ್‌ಗಳಿಗಿಂತ ಎತ್ತರದಲ್ಲಿ ಹಾರಾಟ ನಡೆಸುವಾಗ ಅದನ್ನು ಗುರುತಿಸುವುದು ಶತ್ರುಗಳಿಗೆ ಕಷ್ಟಕರವಾಗುತ್ತದೆ.
ನಾಗಾಸ್ತ್ರ ಆತ್ಮಹತ್ಯಾ ಡ್ರೋನ್:
ನಾಗಾಸ್ತ್ರವನ್ನು ಆತ್ಮಹತ್ಯಾ ಡ್ರೋನ್‌ಗಳೆಂದೂ (ಸುಸೈಡ್ ಡ್ರೋನ್) ಕರೆಯಲಾಗುತ್ತದೆ. ಇವುಗಳು ಒಂದು ಬಾರಿ ಮಾತ್ರವೇ ಪ್ರಯೋಗಿಸಬಲ್ಲ ಆಯುಧಗಳಾಗಿವೆ. ನೇರವಾಗಿ ತಮ್ಮ ಗುರಿಯೆಡೆಗೆ ಸಾಗಿ, ತಮ್ಮನ್ನು ತಾವು ಸ್ಫೋಟಿಸಿಕೊಳ್ಳುತ್ತವೆ. ಇದು ಸರಿಯಾದ ಗುರಿಯನ್ನು ಗುರುತಿಸುವ ತನಕ ಮೇಲ್ಭಾಗದಲ್ಲಿ ಹಾರಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅವಕಾಶ ಸಿಕ್ಕ ತಕ್ಷಣವೇ ಗುರಿಯ ಮೇಲೆ ದಾಳಿ ನಡೆಸುತ್ತವೆ. ಒಂದು ವೇಳೆ ಗುರಿಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ದಾಳಿ ಯೋಜನೆ ರದ್ದುಗೊಳಿಸಿದರೆ, ಗಾಳಿಯಲ್ಲಿ ಅಡ್ಡಾಡುವ ಡ್ರೋನ್ ಅನ್ನು ಮರಳಿ ಹಿಂದಕ್ಕೆ ಕರೆಸಿಕೊಳ್ಳಬಹುದು. ಅದಕ್ಕಾಗಿ ಅನುಕೂಲಕರ ಲ್ಯಾಂಡಿಂಗ್ ಮಾಡಲು ಪ್ಯಾರಾಚುಟ್ ರಿಕವರಿ ವ್ಯವಸ್ಥೆಯನ್ನೂ ಹೊಂದಿದೆ. ಇದರಿಂದಾಗಿ ಡ್ರೋನ್ ಮರುಬಳಕೆಗೆ ಲಭ್ಯವಾಗುತ್ತದೆ.
ಇಷ್ಟೇ ಅಲ್ಲ, ಕಳೆದ ವರ್ಷವೂ ಸಹ ಭಾರತದ ರಕ್ಷಣಾ ಸಚಿವಾಲಯ ಸುಮಾರು 45,000 ಕೋಟಿ ರೂ. ಮೌಲ್ಯದ ವಿವಿಧ ಆಯುಧಗಳ ಖರೀದಿಗೆ ಒಪ್ಪಿಗೆ ಸೂಚಿಸಿತ್ತು. ಧ್ರುವಾಸ್ತ್ರ ಕ್ಷಿಪಣಿಗಳು, ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಾಣದ 12 ಸುಖೋಯ್-30 MKI ಯುದ್ಧ ವಿಮಾನಗಳು, ಆರ್ಟಿಲರಿ ಗನ್‌ಗಳು ಮತ್ತು ರೇಡಾರ್‌ಗಳನ್ನ ಕ್ಷಿಪ್ರವಾಗಿ ಸಾಗಿಸಲು ಅತ್ಯವಶ್ಯಕವಾದ ಹೈ ಮೊಬಿಲಿಟಿ ವೆಹಿಕಲ್ ಹಾಗೂ ಗನ್ ಟೋವಿಂಗ್ ವೆಹಿಕಲ್ಸ್‌ಗಳನ್ನ ಖರೀದಿಸಲು ಅನುಮೋದನೆ ನೀಡಿತ್ತು.
ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ʻಧ್ರುವಾಸ್ತ್ರʼ:
ಭಾರತದ ದೇಶೀಯ ನಿರ್ಮಾಣದ ಹೆಲಿಕಾಪ್ಟರ್ ಲಾಂಚ್ಡ್ ನಾಗ್ (ಹೆಲಿನಾ) ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ATGM) ಎಲ್ಲ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೆಲಿನಾ ಭಾರತೀಯ ಭೂಸೇನೆಯ ಆವೃತ್ತಿಯಾದರೆ, ಭಾರತೀಯ ವಾಯುಪಡೆಯ ಆವೃತ್ತಿಯನ್ನ ಧ್ರುವಾಸ್ತ್ರ ಎಂದು ಕರೆಯಲಾಗುತ್ತದೆ. ಈ ಧ್ರುವಾಸ್ತ್ರವೂ ತನ್ನ ಆರಂಭಿಕ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಧ್ರುವಾಸ್ತ್ರ ಅವಳಿ ಲಾಂಚರ್‌ಗಳನ್ನ ಹೊಂದಿದ್ದು, ಒಟ್ಟು 8 ಕ್ಷಿಪಣಿಗಳನ್ನ ಒಯ್ಯುವ ಸಾಮರ್ಥ್ಯ ಹೊಂದಿದೆ. ಇದರ ಕ್ಷಿಪಣಿ ಗರಿಷ್ಠ 4 ಕಿಮೀ ಗಳಷ್ಟು ಎತ್ತರದಿಂದ ಉಡಾವಣೆಗೊಳಿಸಬಹುದಾಗಿದೆ. ಪ್ರತಿ ಗಂಟೆಗೆ 70 ಕಿಮೀ ಗಳಷ್ಟು ವೇಗದಲ್ಲಿ ನಿಖರವಾಗಿ ದಾಳಿ ನಡೆಸಬಲ್ಲದು. ಧ್ರುವಾಸ್ತ್ರ ಕ್ಷಿಪಣಿ 43 ಕೆಜಿ ತೂಕ ಹೊಂದಿರಲಿದೆ. ಇದು ಇದರ ಮೂಲ ವಿನ್ಯಾಸವಾದ ನಾಗ್ ಕ್ಷಿಪಣಿಯಷ್ಟೇ ತೂಕ ಹೊಂದಿದೆ. ಇದರ ಸಿಡಿತಲೆ 8 ಕೆಜಿಗಳಷ್ಟು ತೂಕವಿದೆ. ಇದು ಅಂದಾಜು 1.85 – 1.9 ಮೀಟರ್ (6 ಅಡಿ) ಉದ್ದವಿದ್ದು, 0.16-0.2 ಮೀಟರ್ (8 ಇಂಚ್) ಅಗಲ ಇರಲಿದೆ. ಧ್ರುವಾಸ್ತ್ರ ಸಹ ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಗೊಳಿಸಿದ್ದು, ಸೇನೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಡೆಟ್ (HAL) 45,000 ಕೋಟಿ ರೂ. ಟೆಂಡರ್ ಪಡೆದುಕೊಂಡಿದೆ. ರಕ್ಷಣಾ ಸಚಿವಾಲಯವು ಭಾರತೀಯ ವಾಯು ಸೇನೆಗೆ 156 ಪ್ರಚಂಡ ಮಾದರಿಯ ಲಘು ಯುದ್ಧ ಹೆಲಿಕಾಪ್ಟರ್‌ಗಳ (Light Combat Helicopter) ಖರೀದಿಗೆ ಪ್ರಸ್ತಾವನೆ ಸಲ್ಲಿದೆ. ಈ ಮೂಲಕ ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡಿದೆ.
2015ರ ನಿಯಮಾವಳಿ 30ರ ಪ್ರಕಾರ, 156 ಲಘು ಯುದ್ಧ ಹೆಲಿಕಾಪ್ಟರ್‌ಗಳ ಖರೀದಿಗಾಗಿ ರಕ್ಷಣಾ ಸಚಿವಾಲಯವು ಪ್ರಸ್ತಾವನೆಗಾಗಿ ವಿನಂತಿ (RFP) ನೀಡಿದೆ. ಈ ಪೈಕಿ ಭಾರತೀಯ ಸೇನೆಗೆ 90 ಮತ್ತು ಭಾರತೀಯ ವಾಯು ಸೇನೆ 66 ಲಘು ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಇದರ ವೆಚ್ಚ 45,000 ಕೋಟಿ ರೂ.ಗಳಷ್ಟಾಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ
ಪ್ರಸ್ತುತ ಈ ಎರಡೂ ಸೇನೆಗಳು 15 ಹೆಲಿಕಾಪ್ಟರ್‌ಗಳನ್ನು ಹೊಂದಿವೆ. ಈ 156 ಲಘು ಯುದ್ಧ ವಿಮಾನಗಳನ್ನು ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ಇದು ಭಯೋತ್ಪಾದಕರು ಮತ್ತು ನುಸುಳುಕೋರರನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಪ್ರಚಂಡ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯನ್ನು ಸುಗಮಗೊಳಿಸುತ್ತವೆ. ಶತ್ರುಗಳನ್ನು ಹುಡುಕಿ ಕೊಲ್ಲುವ ಜೊತೆಗೆ ಬಂಕರ್‌ಗಳ ಬಸ್ಟಿಂಗ್ ಕಾರ್ಯಾಚರಣೆಗೂ ಸಹಾಯಕವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಚಿತ್ರದುರ್ಗದಿಂದ ಹಾರಿದ ಸ್ವದೇಶಿ ತಪಸ್ ಯುಎವಿ ಕಾರವಾರದ ಅರಬ್ಬಿ ಸಮುದ್ರದಲ್ಲಿ ಯಶಸ್ವಿ ಲ್ಯಾಂಡಿಂಗ್
ʻಪ್ರಚಂಡ್ʼ ಹೇಲಿಕಾಪ್ಟರ್ 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್ ನಂತಹ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ. ಪ್ರತಿಕೂಲ ವಾತಾವರಣದಲ್ಲಿಯೂ ಕ್ಷಿಪಣಿಗಳನ್ನು ಹಾರಿಸುವ ಮೂಲಕ ಶತ್ರುಗಳ ವಾಯು ರಕ್ಷಣಾ ಕಾರ್ಯಾಚರಣೆಯನ್ನು ನಾಶಪಡಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ರಕ್ಷಣಾ ಸಚಿವಾಲಯವು ಹೆಚ್‌ಎಎಲ್‌ಗೆ 65,000 ಕೋಟಿ ರೂ. ಮೌಲ್ಯದ 97 LCA ಮಾರ್ಕ್ 1A ಫೈಟರ್ ಜೆಟ್‌ಗಳನ್ನು ಖರೀದಿಸಲು ಟೆಂಡರ್ ನೀಡಿದೆ.
– ವಿದೇಶಗಳಿಂದ ಆರ್ಥಿಕ ಸಹಾಯ ಪಡೆಯುವುದನ್ನು ನಿಲ್ಲಿಸಿ – ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಯೋಜನೆಗಳನ್ನು ಕೂಡಲೇ ರೂಪಿಸಿ
ಮಾಲೆ: ಭಾರತದೊಂದಿಗೆ (India) ಕಿತ್ತಾಟ ನಡೆಸಿ ಚೀನಾಗೆ (China) ಹತ್ತಿರವಾಗಿರುವ ಮಾಲ್ಡೀವ್ಸ್ (Maldives) ಈಗ ಸಾಲದ ಸುಳಿಯಲ್ಲಿ (Debt Distress) ಸಿಲುಕಿದೆ. ಈಗ ಚೀನಾದಿಂದ ಮತ್ತಷ್ಟು ಸಾಲ ಪಡೆಯಲು ಮುಂದಾಗಿರುವ ಮಾಲ್ಡೀವ್ಸ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಾಲ್ಡೀವ್ಸ್ ಕೂಡಲೇ ತನ್ನ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರ ವೆಚ್ಚವನ್ನು ಕಡಿತ ಮಾಡಬೇಕು ಮತ್ತು ಹೊರ ದೇಶಗಳಿಂದ ಆರ್ಥಿಕ ಸಹಾಯ ಪಡೆಯುವುದನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದೆ.
ಸಾಲದ ಸುಳಿಯಲ್ಲಿ ಸಿಲುಕಿರುವ ಮಾಲ್ಡೀವ್ಸ್ ಆರ್ಥಿಕತೆ ಕುಸಿಯುವ ಲಕ್ಷಣಗಳು ಕಾಣಿಸುತ್ತಿವೆ. ಸಾಲದ ಜೊತೆಗೆ ಆದಾಯ ವೃದ್ಧಿಸುವ ಯಾವುದೇ ಯೋಜನೆಗಳನ್ನು ಸರ್ಕಾರ ಕೈಗೊಂಡಿಲ್ಲ. ಹೀಗಾಗಿ ರಾಷ್ಟ್ರದ ಪ್ರಮುಖ ಆದಾಯದ ಮೂಲವಾಗಿರುವ ಪ್ರವಾಸೋದ್ಯಮಕ್ಕೆ (Tourism) ಪೂರಕವಾಗಿರುವ ಯೋಜನೆಗಳನ್ನು ಕೂಡಲೇ ರೂಪಿಸಬೇಕು ಎಂದು ಐಎಂಎಫ್ ಹೇಳಿದೆ. ಇದನ್ನೂ ಓದಿ: ಇಂದು ರಾಜ್ಯದ 7 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ
ಕಳೆದ ವರ್ಷ ಅಂತ್ಯಕ್ಕೆ ಮಾಲ್ಡೀವ್ಸ್ ವಿದೇಶಗಳಿಂದ 4.038 ಬಿಲಿಯನ್ ಡಾಲರ್ (ಅಂದಾಜು 33.71 ಸಾವಿರ ಕೋಟಿ ರೂ.) ಸಾಲ ಪಡೆದಿದೆ. ಇದು ಮಾಲ್ಡೀವ್ಸ್ ಜಿಡಿಪಿಗಿಂತ 118%ರಷ್ಟು ಹೆಚ್ಚಿದೆ. ಈ ಪೈಕಿ 25% ರಷ್ಟು ಸಾಲವನ್ನು ಚೀನಾದ ಎಕ್ಸ್‌ಪೋರ್ಟ್-ಇಂಪೋರ್ಟ್ ಬ್ಯಾಂಕ್‌ನಿಂದಲೇ ಪಡೆದಿದೆ.
ಭಾರತ ವಿರೋಧಿಯಾಗಿರುವ ಮೊಹಮ್ಮದ್ ಮುಯಿಜು ಅಧ್ಯಕ್ಷರಾದ ಬಳಿಕ ಚೀನಾಗೆ ಭೇಟಿ ನೀಡಿ ಸಹಾಯ ಪಡೆದ್ದರು. ಚುನಾವಣಾ ಪ್ರಚಾರದಲ್ಲಿ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ಹೊರ ಹಾಕುವುದಾಗಿ ಘೋಷಿಸಿದ್ದರು. ಅದರಂತೆ ಭಾರತದ ಸೈನಿಕರು ಈಗ ಮಾಲ್ಡೀವ್ಸ್ ತೊರೆದಿದ್ದು ಚೀನಾ ಈಗ ರಕ್ಷಣಾ ಸಹಾಯ ಒದಗಿಸುವುದಾಗಿ ಹೇಳಿದೆ. ಇದನ್ನೂ ಓದಿ: ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ಮಾನವೀಯ ನೆರವು – ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್
ಚೀನಾದಿಂದ ಭಾರೀ ಹೂಡಿಕೆ
ಮಾಲ್ಡೀವ್ಸ್‌ನ ಐದಕ್ಕೂ ಹೆಚ್ಚು ದ್ವೀಪಗಳನ್ನು ಚೀನಾದ ಕಂಪನಿಗಳು 50 ವರ್ಷಗಳಿಗೆ ಗುತ್ತಿಗೆ ಪಡೆದಿವೆ. ಮಾಲೆ ಸಮುದ್ರ ಸೇತುವೆ ಅಭಿವೃದ್ಧಿ ಯೋಜನೆಯ ವೆಚ್ಚದ 50% ರಷ್ಟು ಹಣವನ್ನು ಚೀನಾವೇ ಭರಿಸಿದೆ. ಅಷ್ಟೇ ಅಲ್ಲದೇ 50% ರಷ್ಟು ವೆಚ್ಚವನ್ನು ಸಾಲದ ರೂಪದಲ್ಲಿ ನೀಡಿದೆ. ಚೀನಾ -ಮಾಲ್ಡೀವ್ಸ್ ಸ್ನೇಹ ಸೇತುವೆ, ವಿಮಾನ ನಿಲ್ದಾಣ ನವೀಕರಣ, ಮನೆಗಳ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಸರ್ಕಾರ ಬಿಲಿಯನ್‌ಗಟ್ಟಲೇ ಡಾಲರ್ ಹಣವನ್ನು ಹೂಡಿಕೆ ಮಾಡಿದೆ. ಮಾಲ್ಡೀವ್ಸ್ ಮತ್ತು ಚೀನಾದ ಸಂಬಂಧ ಈಗ ಆರಂಭವಾಗಿದ್ದಲ್ಲ. 1975 ರಿಂದಲೇ ಚೀನಾ ಮಾಲ್ಡೀವ್ಸ್‌ನಲ್ಲಿ ಹೂಡಿಕೆ ಮಾಡಲು ಆರಂಭಿಸಿತ್ತು.
ಏನಿದು ಚೀನಾದ ಕುತಂತ್ರ?
ವ್ಯಾಪಾರ ಮಾರುಕಟ್ಟೆಯನ್ನು ವಿಸ್ತರಿಸುವ ನೆಪದಲ್ಲಿ ಆರಂಭಿಸಿರುವ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಮೂಲಕ ಚೀನಾ ಇಡೀ ವಿಶ್ವವನ್ನೇ ಆಳಲು ಹೊರಟಿದೆ. ಈ ಯೋಜನೆಗೆ ಈಗ 10 ವರ್ಷ ಪೂರ್ಣಗೊಂಡಿದೆ. ಸರಳವಾಗಿ ಹೇಳುವುದಾರೆ ರಸ್ತೆ, ರೈಲು, ಹಡಗಿನ ಮೂಲಕ ವಸ್ತುಗಳನ್ನು ಸಾಗಿಸಲು ಆರಂಭವಾದ ಯೋಜನೆ ಇದು. ರಷ್ಯಾ, ಸೌದಿ ಅರೇಬಿಯಾ, ಕತಾರ್, ಇರಾನ್, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಬರೋಬ್ಬರಿ 150 ದೇಶಗಳು ಈ ಯೋಜನೆಗೆ ಸಹಿ ಹಾಕಿದೆ.
ಯೋಜನೆಯನ್ನು ಸರಳವಾಗಿ ವಿವರಿಸುವುದಾರೆ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಚೀನಾ ಭಾರೀ ದೊಡ್ಡ ಮೊತ್ತದ ಯೋಜನೆಯನ್ನು ಕೈಗೊಳ್ಳುತ್ತದೆ. ಈ ಯೋಜನೆಗೆ ಅರ್ಧದಷ್ಟು ಹಣವನ್ನು ಚೀನಾ ಹೂಡಿಕೆ ಮಾಡಿದರೆ ಉಳಿದ ಅರ್ಧ ಹಣವನ್ನು ಆ ದೇಶಗಳು ಹೂಡಿಕೆ ಮಾಡಬೇಕು. ಆ ದೇಶಗಳಿಗೆ ಹಣ ಹೂಡಿಕೆ ಮಾಡಲು ಶಕ್ತಿ ಇಲ್ಲದ ಕಾರಣ ಚೀನಾದ ಬ್ಯಾಂಕ್‌ಗಳೇ ದೇಶಗಳಿಗೆ ಸಾಲ ನೀಡುತ್ತದೆ. ಸಾಲ ಪಾವತಿ ಆಗದೇ ಇದ್ದಾಗ ಯೋಜನೆಯನ್ನೇ ಚೀನಾ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುತ್ತದೆ. ಚೀನಾ -ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಹೆಸರಿನಲ್ಲಿ ಪಾಕ್ ಸಾಲ ಪಡೆದುಕೊಂಡಿತ್ತು ಸದ್ಯ ಅಂದಾಜು 30 ಬಿಲಿಯನ್ ಡಾಲರ್ ಹಣವನ್ನು ಪಾಕಿಸ್ತಾನ ಚೀನಾಗೆ ಪಾವತಿ ಮಾಡಬೇಕಿದೆ. ಚೀನಾ ಹಣವನ್ನು ಪಾವತಿ ಮಾಡಲು ಕನಿಷ್ಟ 40 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 2017ರಲ್ಲಿ 99 ವರ್ಷಗಳ ಕಾಲ ಚೀನಾದ ಚೀನಾ ಮರ್ಚಂಟ್ ಪೋರ್ಟ್ ಹೋಲ್ಡಿಂಗ್‌ಗೆ ಲೀಸ್‌ಗೆ ನೀಡಲಾಗಿದೆ.
ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಚೀನಾದ ಒನ್ ರೋಡ್, ಒನ್ ಬೆಲ್ಟ್ ಈಗ ಡೆಟ್ ಟ್ರ್ಯಾಪ್ ಡಿಪ್ಲೊಮಸಿ ಎಂದೇ ಎಂದೇ ಕುಖ್ಯಾತಿ ಪಡೆದಿದೆ.