Tag: ಐಎಂಎಫ್

  • ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಪಾತಾಳಕ್ಕೆ ಬಿದ್ದ ಪಾಕ್‌ – ಸಾಲದ ಪ್ರಮಾಣ 80 ಲಕ್ಷ ಕೋಟಿಗೆ ಏರಿಕೆ

    ಇಸ್ಲಾಮಾಬಾದ್:‌ ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಪಾಕಿಸ್ತಾನವನ್ನ ಶೆಹಬಾಜ್ ಷರೀಫ್ (Shehbaz Sharif) ಆಡಳಿತ ಇನ್ನಷ್ಟು ಸಾಲದ ಕೂಪಕ್ಕೆ ತಳ್ಳಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ವರ್ಷ ಜೂನ್‌ ವೇಳೆಗೆ ಪಾಕಿಸ್ತಾನದ ಸಾಲದ ಮಿತಿ 2,86,832 ಶತಕೋಟಿ ಡಾಲರ್‌ (USD) ಅಂದ್ರೆ ಸುಮಾರು 80.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗೆ ಏರಿಕೆಯಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದ್ರೆ 13 ಪ್ರತಿಶತದಷ್ಟು ಹೆಚ್ಚಾಗಿದೆ.

    ಹೌದು. ಪಾಕಿಸ್ತಾನದ ಹಣಕಾಸು ಸಚಿವಾಲಯ (Pakistan Ministry of Finance) ಬಿಡುಗಡೆ ಮಾಡಿದ 2025ರ ಅಂಕಿ-ಅಂಶದ ಪ್ರಕಾರ, ಜೂನ್ 2025ರ ಅಂತ್ಯದ ವೇಳೆಗೆ ಪಾಕಿಸ್ತಾನದ ಒಟ್ಟು ಸಾಲ 80.6 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಗಳಷ್ಟಾಗಿದೆ. ಇದರಲ್ಲಿ 54.5 ಲಕ್ಷ ಕೋಟಿ ದೇಶಿಯ ಸಾಲ, 26 ಲಕ್ಷ ಕೋಟಿ ಬಾಹ್ಯ ಸಾಲ ಇದೆ. ಅಲ್ಲದೇ ದೇಶದ ಸಾಲದ ಪ್ರಮಾಣ ಜಿಡಿಪಿಗಿಂತ 70% ಏರಿಕೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ʻಒಂದ್‌ ಸಲ ಕಮಿಟ್‌ ಆದ್ರೆ ತನ್ನ ಮಾತ್‌ ತಾನೇ ಕೇಳಲ್ಲʼ – ಜಾಹೀರಾತಿನಿಂದ ಸಿಟ್ಟಿಗೆದ್ದ ಟ್ರಂಪ್‌, ಕೆನಡಾ ಮೇಲೆ ಹೆಚ್ಚುವರಿ 10% ಸುಂಕ

    ಸಾಲದ ಹೊರೆ ಹೆಚ್ಚಾಗಿದ್ದೇಕೆ?
    ದೇಶಿಯ ಸಾಲವು ವರ್ಷದಿಂದ ವರ್ಷಕ್ಕೆ ಶೇ.15 ರಷ್ಟು ಏರಿಕೆಯಾಗುತ್ತಿದೆ. ಇದರೊಂದಿಗೆ ಬಾಹ್ಯ ಸಾಲವು ವಾರ್ಷಿಕ ಶೇ.6 ರಷ್ಟು ಹೆಚ್ಚಾಗುತ್ತಾ ಬಂದಿದೆ. ಐಎಂಎಫ್‌, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB), ಇತರ ಬಹುಪಕ್ಷೀಯ ಸಂಸ್ಥೆಗಳಿಂದ ಸಂಸ್ಥೆಗಳಿಂದಲೂ ನಿಧಿಗಳು ಹರಿದುಬಂದಿದ್ದು, ಸಾಲದ ಹೊರೆ ಹೆಚ್ಚಾಗುತ್ತ ಸಾಗಿದೆ. ಇದನ್ನೂ ಓದಿ: Bihar Election 2025 | ಪಂಚಾಯತ್ ಪ್ರತಿನಿಧಿಗಳಿಗೆ ಪಿಂಚಣಿ, 50 ಲಕ್ಷ ವಿಮೆ, 5 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತೇಜಸ್ವಿ ಭರವಸೆ

  • ಪಾಕ್‌ ಹುಟ್ಟಡಗಿಸಲು ಐಎಎಫ್‌ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

    ಪಾಕ್‌ ಹುಟ್ಟಡಗಿಸಲು ಐಎಎಫ್‌ ಬಳಸಿದ್ದು 50ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರ: ವಾಯುಪಡೆಯ ಉಪಮುಖ್ಯಸ್ಥ ಮಾಹಿತಿ

    – ಆಪರೇಷನ್ ಸಿಂಧೂರ ಯಶೋಗಾಥೆಯ ಮತ್ತಷ್ಟು ಸ್ಫೋಟಕ ವಿಚಾರ ಬಹಿರಂಗ

    ನವದೆಹಲಿ: ಪಹಲ್ಗಾಮ್‌ ದಾಳಿಗೆ (Pahalgam Terror Attack) ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK) ದಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ಭಾರತ ನಡೆಸಿ ದಾಳಿಯ 3 ತಿಂಗಳ ಬಳಿಕ ವಾಯುಪಡೆಯ ಉಪ ಮುಖ್ಯಸ್ಥರು ʻಆಪರೇಷನ್‌ ಸಿಂಧೂರʼ (Operation Sindoor) ಎಕ್ಸ್‌ಕ್ಲೂಸಿವ್‌ ದೃಶ್ಯಗಳನ್ನ ಹಂಚಿಕೊಂಡಿದ್ದಾರೆ ಜೊತೆಗೆ, ಇದುವರೆಗೆ ಕೇಳಿರದ ಒಂದಷ್ಟು ಮಾಹಿತಿಗಳನ್ನ ಹಂಚಿಕೊಂಡರು.

    ಖಾಸಗಿ ವಾಹಿನಿಯೊಂದರ ಕಾನ್‌ಕ್ಲೈವ್‌ನಲ್ಲಿ ಮಾತನಾಡಿದ ಏರ್ ಮಾರ್ಷಲ್ ನರ್ಮದೇಶ್ವರ ತಿವಾರಿ, ಪಾಕಿಸ್ತಾನವನ್ನು ಕದನ ವಿರಾಮಕ್ಕೆ ತರಲು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತೀಯ ವಾಯುಪಡೆ (IAF) 50ಕ್ಕಿಂತ ಕಡಿಮೆ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿತು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಯಶಸ್ಸಿನ ಹಿಂದೆ ಬೆಂಗಳೂರಿನ ತಂತ್ರಜ್ಞಾನವಿದೆ: ಮೋದಿ ಅಭಿನಂದನೆ

    ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ಮಾಡಲು ಐಎಎಫ್‌ ಹೆಚ್ಚಿನ ಸಂಖ್ಯೆಯ ಗುರಿಗಳನ್ನು ನಿಗದಿಪಡಿಸಿತ್ತು. ಅಂತಿಮವಾಗಿ ಪ್ರಮುಖ ತಾಣಗಳನ್ನು ಪಟ್ಟಿ ಮಾಡಿ 9ಕ್ಕೆ ಇಳಿಸಲಾಗಿತು. ಆದ್ರೆ 50 ಕ್ಕಿಂತಲೂ ಕಡಿಮೆ ಶಸ್ತ್ರಾಸ್ತ್ರಗಳಲ್ಲಿ, ಭಾರತೀಯ ರಕ್ಷಣಾ ಪಡೆಗಳು ಸಂಘರ್ಷ ನಿರ್ಮೂಲನೆ ಮಾಡಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಯಿತು. ಹಿಂದೆಂದೂ ಈ ರೀತಿ ನಡೆದೇ ಇಲ್ಲ ಎಂಬುದೇ ನಮಗೆ ದೊಡ್ಡ ಸಾಧನೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರದಲ್ಲಿ ಭಾರತ ಪರಾಕ್ರಮ – ಪಾಕ್‌ನ 6 ಯುದ್ಧ ವಿಮಾನಗಳು ಉಡೀಸ್‌; ವಾಯುಪಡೆ ಮುಖ್ಯಸ್ಥ

    ಮೊದಲು ನಾವು ಉಗ್ರರ ಅಡಗು ತಾಣಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದವು. ಆದ್ರೆ ಮೇ 9, 10ರ ರಾತ್ರಿ ಮುಖ್ಯ ದಾಳಿ ನಡೆಸಿದಾಗ ತೀಕ್ಷ್ಣ ಪ್ರತಿಕ್ರಿಯೆ ಕೊಡಲೇಬೇಕೆಂದು ನಿರ್ಧರಿಸಿದೆವು. ಹಾಗಾಗಿ ಪಾಕ್‌ ಮೇಲೆ ಪ್ಯಾನಲ್‌ ಫ್ರಂಟ್‌ ಅಟ್ಯಾಕ್‌ ಮಾಡಿದೆವು. ಪ್ರತಿಯೊಂದು ಶಸ್ತ್ರಾಸ್ತ್ರವನ್ನು ಗಣನೆಗೆ ತೆಗೆದುಕೊಂಡಿದ್ದೇವೆ. 1971ರ ಯುದ್ಧದ ಸಮಯದಲ್ಲೂ ಮಾದಲಾರದಂತಹ ದಾಳಿಯನ್ನ ನಾವು ಮಾಡಿದ್ದೇವೆ. ಪಾಕ್‌ನ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ಕೊಟ್ಟಿದ್ದೇವೆ. ಪಾಕಿಸ್ತಾನದ ಸಾಮರ್ಥ್ಯವನ್ನು ಬಹಿರಂಗಪಡಿಸುವುದು ಸಹ ಈ ದಾಳಿಯ ಹಿಂದಿನ ಉದ್ದೇಶವಾಗಿತ್ತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಆಪರೇಷನ್‌ ಸಿಂಧೂರ ನಡೆಸಿದ್ದು ಏಕೆ?
    ಏಪ್ರಿಲ್‌ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭೀಕರ ಭಯೋತ್ಪಾದಕ ದಾಳಿ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಭಾರತೀಯ ರಕ್ಷಣಾ ಪಡೆಗಳು ಮೇ 7ರ ಬೆಳಗ್ಗಿನ ಜಾವ ಪಾಕ್‌ ಮತ್ತು ಪಿಒಕೆಯಲ್ಲಿನ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ ಕುಟುಂಬದ 10 ಸದಸ್ಯರು ಮತ್ತು ನಾಲ್ವರು ಆಪ್ತ ಸಹಾಯಕರು ಸೇರಿದಂತೆ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಇದನ್ನೂ ಓದಿ: ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ 

  • Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

    Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

    ಜೈಪುರ: ಭಾರತೀಯ ವಾಯುಪಡೆಯ (IAF) ಜಾಗ್ವಾರ್ ವಿಮಾನ (Jaguar Fighter Jet) ತರಬೇತಿ ವೇಳೆ ಪತನಗೊಂಡ ಪರಿಣಾಮ ಇಬ್ಬರು ಪೈಲೆಟ್‌ಗಳು (Pilots) ಸಾವನ್ನಪ್ಪಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಭಾನೋಡ ಗ್ರಾಮದಲ್ಲಿ ನಡೆದಿದೆ.

    ದೈನಂದಿನ ತರಬೇತಿ ವೇಳೆ ಬಾನೋಡಾ ಗ್ರಾಮದ ಕೃಷಿ ಭೂಮಿಯಲ್ಲಿ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದಾರೆ. ಘಟನೆಗೆ ಕಾರಣವೇನೆಂದು ತಿಳಿಯಲು ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಐಎಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

    ಘಟನೆಯಲ್ಲಿ ನಾಗರಿಕ ಆಸ್ತಿ-ಪಾಸ್ತಿಗಳಿಗೆ ಯಾವುದೇ ಹಾನಿಯಾಗಿಲ್ಲ. ಮಧ್ಯಾಹ್ನ 1:25ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಡಿಕೇರಿ-ನಾಪೋಕ್ಲು-ವಿರಾಜಪೇಟೆ ಮಾರ್ಗ ಬಸ್ ಸಂಚಾರಕ್ಕೆ ಪೊನ್ನಣ್ಣ ಚಾಲನೆ

  • ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    – ಭಾರತೀಯ ವಾಯುಪಡೆ, ಬಿಎಸ್‌ಎಫ್‌ ಸೂಕ್ಷ್ಮ ಮಾಹಿತಿ ನೀಡಿ 40,000 ಹಣ ಪಡೆದಿದ್ದ ಆರೋಪಿ

    ಗಾಂಧೀನಗರ: ಭಾರತೀಯ ವಾಯುಪಡೆ (IAF) ಮತ್ತು ಗಡಿ ಭದ್ರತಾ ಪಡೆಗೆ (BSF) ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ ಜೊತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ನ (Gujarat Man) ವ್ಯಕ್ತಿಯನ್ನು ಬಂಧಿಸಲಾಗಿದೆ.

    ಕಛ್ ನಿವಾಸಿಯಾಗಿರುವ ಆರೋಪಿ ಸಹದೇವ್ ಸಿಂಗ್ ಗೋಹಿಲ್ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿ ಕೆ. ಸಿದ್ಧಾರ್ಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ಅದಿತಿ ಭಾರದ್ವಾಜ್‌ (28) ಹೆಸರಿನ ಮಹಿಳೆ 2023ರಲ್ಲಿ ವಾಟ್ಸಪ್‌ ಮೂಲಕ ಏಜೆಂಟ್‌ ಜೊತೆ ಸಂಪರ್ಕಕ್ಕೆ ಬಂದಿದ್ದಳು. ಆರೋಪಿ ಸಹದೇವ್‌ ಆಕೆಗೆ ನಿರ್ಮಾಣ ಹಂತದಲ್ಲಿರುವ ಐಎಎಫ್‌ ಮತ್ತು ಬಿಎಸ್‌ಎಫ್‌ ತಾಣಗಳ ಫೋಟೊ, ವೀಡಿಯೋಗಳನ್ನು ಕಳುಹಿಸಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

    2025 ರ ಆರಂಭದಲ್ಲಿ ಆತ ಸಿಮ್ ಕಾರ್ಡ್ ಖರೀದಿಸಿದ್ದ. OTP ಸಹಾಯದಿಂದ ಅದಿತಿ ಭಾರದ್ವಾಜ್‌ಗಾಗಿ ಆ ಸಂಖ್ಯೆಯಲ್ಲಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿದ್ದ. ಅದಾದ ಬಳಿಕ BSF ಮತ್ತು IAFಗೆ ಸಂಬಂಧಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಆ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

    ಗೋಹಿಲ್ ಮಾಹಿತಿ ಹಂಚಿಕೊಳ್ಳಲು ಬಳಸಿದ ಸಂಖ್ಯೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿತ್ತು ಎಂದು ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಗೋಹಿಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು 40,000 ರೂ. ಹಣ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು. ಪರಿಣಾಮವಾಗಿ ಎಲ್ಲೆಡೆ ತನಿಖೆ ಚುರುಕುಗೊಳಿಸಲಾಗಿದೆ. ಭಾರತದ ವಿರುದ್ಧ ಬೇಹುಗಾರಿಕೆಯ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್, ಉದ್ಯಮಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಹತ್ತುಕ್ಕೂ ಹೆಚ್ಚು ಜನರಲ್ಲಿ ಗೋಹಿಲ್ ಕೂಡ ಒಬ್ಬ. ಇದನ್ನೂ ಓದಿ: ಉಗ್ರರ ದಾಳಿಯಿಂದ 20,000 ಭಾರತೀಯರು ಸಾವು: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಕಿಡಿ

  • ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    ಅಸಲಿ ಆಟ ಈಗ ಶುರು – ಸಾಲದ ಹಣ ಬಿಡುಗಡೆಗೆ ಪಾಕ್‌ಗೆ 11 ಷರತ್ತು ವಿಧಿಸಿದ IMF

    – ಒಟ್ಟು 50 ಕಂಡೀಷನ್‌; ಪಾಲಿಸದಿದ್ರೆ ಹಣ ಸಿಗಲ್ಲ ಅಂತ ವಾರ್ನಿಂಗ್‌

    ಇಸ್ಲಾಮಾಬಾದ್‌: ಭಾರತದ ಆಪರೇಷನ್‌ ಸಿಂಧೂರ (Operation Sindoor) ಬಳಿಕ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಇದೀಗ ತನ್ನ ವರಸೆ ಬದಲಿಸಿದೆ. ಸಾಲದ ಹಣ ಬಿಡುಗಡೆ ಮಾಡುವುದಕ್ಕೆ ಮೊದಲೇ 11 ಹೊಸ ಷರತ್ತುಗಳನ್ನು ಪಾಕಿಸ್ತಾನಕ್ಕೆ ವಿಧಿಸಿದೆ. ಜೊತೆಗೆ ಷರತ್ತು ಪಾಲಿಸದಿದ್ದರೆ ಹಣ ಸಿಗುವುದಿಲ್ಲ ಅಂತ ಎಚ್ಚರಿಕೆಯನ್ನೂ ನೀಡಿದೆ.

    ಹೌದು.. ಪಾಕಿಸ್ತಾನಕ್ಕೆ ಸಾಲ (Pakistan Loan) ಮಂಜೂರು ಮಾಡಿದ ಬಳಿಕ ಐಎಂಎಫ್‌ಗೆ ಸಾಲ ಮರುಪಾವತಿ ಆಗುತ್ತದೆಯೇ ಇಲ್ಲವೇ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಸಾಲ ಮಂಜೂರು ಮಾಡಿದ್ದ ಐಎಂಎಫ್‌ 11 ಹೊಸ ಷರತ್ತುಗಳನ್ನು ವಿಧಿಸಿದೆ. ಇದರಿಂದ ಪಾಕ್‌ ಮೇಲೆ ಈವರೆಗೆ ವಿಧಿಸಿರುವ ಒಟ್ಟು ಷರತ್ತುಗಳು 50ಕ್ಕೆ ಏರಿಕೆಯಾಗಿದೆ. ಈ ಷರತ್ತುಗಳನ್ನು ಪೂರೈಸದ್ದರೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಐಎಂಎಫ್‌ ಖಡಕ್ಕಾಗಿ ಹೇಳಿದೆ. ಇದನ್ನೂ ಓದಿ: ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು – ಪಾಕ್‌ನಲ್ಲಿ ಹೆಚ್ಚಿದ ಹಸಿವು; 1.1 ಕೋಟಿ ಜನರಿಗೆ ಆಹಾರ ಅಭದ್ರತೆ

    india pakistan

    ಜೊತೆಗೆ ಭಾರತ-ಪಾಕಿಸ್ತಾನದ ಉದ್ವಿಗ್ನತೆ (India Pakistan Clash) ಮುಂದುವರಿದ್ರೆ ಅದರ ಪರಿಣಾಮವು ಹಣಕಾಸು ವ್ಯವಸ್ಥೆ, ದೇಶದ ಆಂತರಿಕ ಮತ್ತು ಬಾಹ್ಯ ಸುಧಾರಣೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭಾರತ, ಚೀನಾವನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಎತ್ತಿಕಟ್ಟುತ್ತಿವೆ: ರಷ್ಯಾ ವಿದೇಶಾಂಗ ಸಚಿವ

    17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಅನುಮೋದನೆ ನೀಡುವುದು, ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ ತರುವುದು, ವಿದ್ಯುತ್ ಬಿಲ್‌ಗಳ ಮೇಲೆ ಹೆಚ್ಚಿನ ಸರ್‌ಚಾರ್ಜ್ ವಿಧಿಸುವುದು ಸೇರಿದಂತೆ 11 ಷರತ್ತುಗಳನ್ನು ವಿಧಿಸಿದೆ. ಇದು ದುಸ್ಥಿತಿಯಲ್ಲಿರುವ ಪಾಕಿಸ್ತಾನದ ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್‌ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?

    ಏನೇನು ಷರತ್ತುಗಳು?
    * ಮುಂದಿನ ಜುಲೈ 1ರೊಳಗೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಯ ಅಧಿಸೂಚನೆ ಹೊರಡಿಸುವುದು.
    * 2026ರ ಫೆಬ್ರವರಿ 15 ರೊಳಗೆ ಅರ್ಧ ವಾರ್ಷಿಕ ಅನಿಲ ದರ ಹೊಂದಾಣಿಕೆ.
    * ವಿದ್ಯುತ್‌ ಸ್ಥಾವರಗಳ ಮೇಲೆ ವಿಧಿಸುವ ಶುಲ್ಕಕ್ಕೆ ಈ ವರ್ಷದ ಅಂತ್ಯದೊಳಗೆ ಸುಗ್ರೀವಾಜ್ಞೆ ಶಾಶ್ವತಗೊಳಿಸಬೇಕು (ಕೈಗಾರಿಕಾ ಇಂಧನ ಬಳಕೆಯನ್ನು ರಾಷ್ಟ್ರೀಯ ಗ್ರಿಡ್‌ಗೆ ಬದಲಾಯಿಸುವ ಗುರಿ)
    * ಮುಂದಿನ ಜೂನ್ ಅಂತ್ಯದ ವೇಳೆಗೆ ಸಾಲ ಸೇವಾ ಸರ್‌ಚಾರ್ಜ್‌ನ ಪ್ರತಿ ಯೂನಿಟ್‌ಗೆ 3.21 ರೂ. ಮಿತಿ ತೆಗೆದುಹಾಕುವುದು.
    * 17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್‌ಗೆ ಸಂಸತ್ತಿನ ಅನುಮೋದನೆ
    * ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ
    * ದೀರ್ಘ ಕಾಲಕ್ಕೆ ಹಣಕಾಸು ವಲಯಕ್ಕೆ ಕಾರ್ಯತಂತ್ರ
    * ವಿಶೇಷ ತಂತ್ರಜ್ಞಾನ ವಲಯಗಳ ಪ್ರೋತ್ಸಾಹಕ್ಕಾಗಿ ಹಂತ-ಹಂತದ ಯೋಜನೆ
    * 3 ವರ್ಷಗಳು ಮಾತ್ರ ಉಪಯೋಗಿಸಿದ ಕಾರು ಆಮದು ಉದಾರೀಕರಣ
    * ಅಭಿವೃದ್ಧಿ ವೆಚ್ಚದ ಬದ್ಧತೆ
    * 6 ಟ್ರಿಲಿಯನ್ ಬಜೆಟ್‌ನಲ್ಲಿ 1.07 ಟ್ರಿಲಿಯನ್ ಅಭಿವೃದ್ಧಿ ವೆಚ್ಚಕ್ಕೆ ಮೀಸಲಿಡಬೇಕು.

    IMF ಗುರಿಗಳಿಗೆ ಅನುಗುಣವಾಗಿ ಷರತ್ತು
    IMF ವರದಿಯ ಪ್ರಕಾರ, ಪಾಕಿಸ್ತಾನದ ಮುಂಬರುವ ರಕ್ಷಣಾ ಬಜೆಟ್ ವೆಚ್ಚ 2,414 ಶತಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ 12% ಹೆಚ್ಚಾಗಲಿದೆ. ಆದರೆ ಇತ್ತೀಚೆಗೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವು ಈ ತಿಂಗಳ ಆರಂಭದಲ್ಲಿ ಇದನ್ನು 2,500 ಶತಕೋಟಿ ರೂ. ಅಂದರೆ 18% ಹೆಚ್ಚಿಸಲು ನಿರ್ಧರಿಸಿದೆ, ಇದು IMF ಹಣಕಾಸಿನ ಸಮತೋಲನ ಗುರಿಗೆ ವಿರುದ್ಧವಾಗಿದೆ. IMF ಗುರಿಗಳಿಗೆ ಅನುಗುಣವಾಗಿ ಇದೇ ಜೂನ್ ತಿಂಗಳ ಒಳಗೆ 2026ರ ಬಜೆಟ್ ಅನ್ನು ಅಂಗೀಕರಿಸುವಂತೆ ಐಎಂಎಫ್‌ ಸಂಸತ್ತಿಗೆ ಹೇಳಿದೆ. ಇದನ್ನೂ ಓದಿ: Hyderabad Fire | ಕಾಪಾಡಲು ಹೋಗಿದ್ದ ತಾಯಿ ಮಕ್ಕಳನ್ನು ಅಪ್ಪಿಕೊಂಡೇ ಸುಟ್ಟು ಕರಕಲು!

  • ಭಾರತ-ಪಾಕ್‌ ಉದ್ವಿಗ್ನತೆಯಿಂದ ಬಂದ್‌ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ

    ಭಾರತ-ಪಾಕ್‌ ಉದ್ವಿಗ್ನತೆಯಿಂದ ಬಂದ್‌ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ (India Pakistan) ನಡುವಿನ ಉದ್ವಿಗ್ನತೆಯಿಂದ ಮುಚ್ಚಲ್ಪಟ್ಟಿದ್ದ ವಿವಿಧ ರಾಜ್ಯಗಳ 32 ವಿಮಾನ ನಿಲ್ದಾಣಗಳು (Airports) ಮತ್ತೆ ಕಾರ್ಯಾರಂಭ ಮಾಡಲು ವಾಯುಪಡೆ ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ.

    32 ವಿಮಾನ ನಿಲ್ದಾಣಗಳನ್ನು ತೆರೆಯುವಂತೆ ಭಾರತೀಯ ವಾಯುಪಡೆ ಅಧಿಕಾರಿಗಳು ಸೂಚನೆ ನೀಡಿದ ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಸಂಬಂಧಪಟ್ಟ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಿದೆ. ಹೀಗಾಗಿ ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ ಮಾಡಲಿವೆ. ಇದನ್ನೂ ಓದಿ: ಯುದ್ಧ ಭೀತಿ ನಡುವೆ ಮತ್ತೊಂದು ಶಾಕ್‌ – ಪಾಕಿಸ್ತಾನದ 51 ಸ್ಥಳಗಳ ಮೇಲೆ ಬಲೂಚ್‌ ಹೋರಾಟಗಾರರಿಂದ ದಾಳಿ

    AI ಚಿತ್ರ
    AI ಚಿತ್ರ

    ಇತ್ತೀಚೆಗೆ ಭಾರತ ಪಾಕ್‌ ನಡುವಿನ ಸಂಘರ್ಷ ತೀವ್ರಗೊಂಡಿತ್ತು. ಈ ಹಿನ್ನೆಲೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 32 ವಿಮಾನ ನಿಲ್ದಾಣಗಳನ್ನು ಮೇ 15ರ ವರೆಗೆ ತಾತ್ಕಾಲಿಕವಾಗಿ ಬಂದ್‌ ಮಾಡುವಂತೆ ಸೂಚಿಸಿತ್ತು. ಇದನ್ನೂ ಓದಿ: ಭಾರತ-ಪಾಕ್ ʻಕದನ-ವಿರಾಮʼ ಮಾತುಕತೆ – ಇಂದು ಎರಡೂ ದೇಶಗಳ ಡಿಜಿಎಂಒಗಳ ಸಭೆ

    ಪಂಜಾಬ್‌ನ ಅಮೃತಸರ, ಲುಧಿಯಾನ, ಪಟಿಯಾಲ, ಬಟಿಂಡಾ, ಹಲ್ವಾರಾ ಮತ್ತು ಪಠಾಣ್‌ಕೋಟ್, ಹಿಮಾಚಲ ಪ್ರದೇಶದ ಭುಂತರ್, ಶಿಮ್ಲಾ ಮತ್ತು ಕಾಂಗ್ರಾ ಗಗ್ಗಲ್, ಚಂಡೀಗಢ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಜಮ್ಮು, ಲಡಾಖ್‌ನ ಲೇಹ್, ರಾಜಸ್ಥಾನದ ಕಿಶೆಂಗಢ, ಜೈಸರ್, ಜೋದ್‌ಪುರ ಮತ್ತು ಬಿಕಾನೇರ್ ಮತ್ತು ಗುಜರಾತ್‌ನ ಮುಂದ್ರ, ಜಾಮ್‌ನಗರ ಸೇರಿದಂತೆ ಹಲವು ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿತ್ತು. ಆದ್ರೆ ಭಾರತ-ಪಾಕ್‌ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಏರ್‌ಪೋರ್ಟ್‌ಗಳನ್ನು ಕಾರ್ಯಾಚರಣೆ ಪುನರಾರಂಭಿಸುತೆ ಭಾರತೀಯ ವಾಯುಸೇನೆ ಸೂಚನೆ ನೀಡಿದೆ. ಇದನ್ನೂ ಓದಿ: ಉಗ್ರರ ಸಂಹಾರಕ್ಕೆ ಭಾರತೀಯ ಸೇನೆಗೆ ನೆರವಾಗಿದ್ದು ಬೆಂಗಳೂರಿನ ʻಇಸ್ರೋʼ

  • ಭಾರತದ ವಿರೋಧದ ನಡುವೆಯೂ ಪಾಕ್‌ಗೆ 19,000 ಕೋಟಿ ಸಾಲ ಕೊಟ್ಟ ಐಎಂಎಫ್‌

    ಭಾರತದ ವಿರೋಧದ ನಡುವೆಯೂ ಪಾಕ್‌ಗೆ 19,000 ಕೋಟಿ ಸಾಲ ಕೊಟ್ಟ ಐಎಂಎಫ್‌

    ನವದೆಹಲಿ: ಭಾರತದ (India) ವಿರೋಧದ ನಡುವೆಯೂ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) 19 ಸಾವಿರ ಕೋಟಿ ಸಾಲವನ್ನು ಮಂಜೂರು ಮಾಡಿದೆ.

    ಐಎಂಎಫ್ ಕಾರ್ಯಕಾರಿ ಮಂಡಳಿಯು ತನ್ನ ವಿಸ್ತೃತ ನಿಧಿ ಸೌಲಭ್ಯ (EFF) ಅಡಿಯಲ್ಲಿ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ಗಳ ಎರಡನೇ ಸಾಲದ ಕಂತನ್ನು ವಿತರಿಸಲು ಅನುಮೋದನೆ ನೀಡಿದೆ. ಇದನ್ನೂ ಓದಿ: ನಾವಿರುವ ಸ್ಥಳದಲ್ಲಿ ಗುಂಡಿನ ಶಬ್ಧಗಳು ಕೇಳುತ್ತಿದೆ: ಓಮರ್ ಅಬ್ದುಲ್ಲಾ

    ರಾಜ್ಯ ಪ್ರಾಯೋಜಿತ ಭಯೋತ್ಪಾದನೆಗೆ ಹಣಕಾಸಿನ ನೆರವು ಎಂದು ಭಾರತ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಪಾಕಿಸ್ತಾನಕ್ಕೆ ಸಾಲ ನೀಡುವ ಸಂಬಂಧ ಮತದಾನದಿಂದ ಭಾರತ ದೂರ ಉಳಿಯಿತು.

    ಪುನರಾವರ್ತಿತ ಆರ್ಥಿಕ ಬಿಕ್ಕಟ್ಟುಗಳು ಮತ್ತು ಹಿಂದಿನ ಐಎಂಎಫ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಕಳಪೆ ದಾಖಲೆಯಿಂದ ಗುರುತಿಸಲ್ಪಟ್ಟ ಇಎಫ್‌ಎಫ್ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನದ ಪ್ರಗತಿಯನ್ನು ಐಎಂಎಫ್ ಪರಿಶೀಲಿಸಿದ ನಂತರ ಈ ಅನುಮೋದನೆ ನೀಡಲಾಗಿದೆ. ಹಿಂದಿನ ಐಎಂಎಫ್ ಸಾಲಗಳನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಪಾಕಿಸ್ತಾನದ ನಿರಂತರ ವೈಫಲ್ಯದ ಬಗ್ಗೆ ಭಾರತ ಎಚ್ಚರಿಕೆ ನೀಡಿತ್ತು. ನಿಧಿಯ ಕಾರ್ಯಕ್ರಮ ವಿನ್ಯಾಸಗಳು ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳು ದೇಶದ ಆರ್ಥಿಕ ಮತ್ತು ರಾಜಕೀಯ ವಾಸ್ತವಗಳಿಗೆ ಹೊಂದಿಕೊಳ್ಳುತ್ತವೆಯೇ ಎಂದು ಪ್ರಶ್ನಿಸಿತ್ತು. ಇದನ್ನೂ ಓದಿ: ಫಿರೋಜ್‌ಪುರದ ಮನೆ ಮೇಲೆ ಬಿದ್ದ ಪಾಕ್‌ ಡ್ರೋನ್‌ – ಮೂವರಿಗೆ ಗಾಯ, ಓರ್ವ ಗಂಭೀರ

    ಕಳೆದ ಐದು ವರ್ಷಗಳಲ್ಲಿ ನಾಲ್ಕು ಐಎಂಎಫ್ ಕಾರ್ಯಕ್ರಮಗಳ ಹೊರತಾಗಿಯೂ, ಪಾಕಿಸ್ತಾನವು ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಲೇ ಇದೆ ಎಂದು ಭಾರತ ಎತ್ತಿ ತೋರಿಸಿದೆ. ಇದರಿಂದಾಗಿ ಭವಿಷ್ಯದ ಸಾಲ ನೀಡಿಕೆಯು ಹೆಚ್ಚಿನ ಯಶಸ್ಸನ್ನು ನೀಡುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಭಾರತ ಗಮನ ಸೆಳೆದಿತ್ತು.

  • ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

    ಪಾಕ್‌ನ ಪ್ರಮುಖ ಎಫ್‌-16 ಹೊಡೆದುರುಳಿಸಿದ ಭಾರತೀಯ ವಾಯು ಸೇನೆ

    ನವದೆಹಲಿ: ಪಾಕಿಸ್ತಾನ ವಾಯುಪಡೆಯ ಎಫ್ -16 ಸೂಪರ್ಸಾನಿಕ್ ಫೈಟರ್ ಜೆಟ್ ಅನ್ನು ಭಾರತೀಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಸಂಜೆ ಹೊಡೆದುರುಳಿಸಿದೆ ಎಂದು ಮೂಲಗಳು ತಿಳಿಸಿವೆ.

    ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಜಮ್ಮುವನ್ನು ಗುರಿಯಾಗಿಸಲು ಪಾಕಿಸ್ತಾನ ಮಾಡಿದ ದಾಳಿ ಪ್ರಯತ್ನ ವಿಫಲವಾಗಿದೆ. ಎಫ್ -16 ಪಾಕಿಸ್ತಾನಿ ವಾಯುಪಡೆಯ ಪ್ರಮುಖ ಪಡೆಗಳಲ್ಲಿ ಒಂದಾಗಿದೆ. ಇದು ಚೀನಾ ಮತ್ತು ಫ್ರೆಂಚ್ ಯುದ್ಧ ವಿಮಾನಗಳನ್ನು ಹೊಂದಿದೆ.

    ಪಾಕಿಸ್ತಾನದ ವಾಯುಪಡೆಯ ಪ್ರಮುಖ ವಾಯುಪಡೆಯ ಕೇಂದ್ರವಾದ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯಿಂದ ಎಫ್ -16 ಹಾರಾಟ ನಡೆಸಿತು. ಭಾರತೀಯ SAM (ಸರ್ಫೇಸ್-ಟು-ಏರ್ ಮಿಸೈಲ್) ಸರ್ಗೋಧಾ ವಾಯುನೆಲೆಯ ಬಳಿ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿತು.

    ಸರ್ಗೋಧಾ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುಂಚೂಣಿಯ ವಾಯುನೆಲೆಯಾಗಿದ್ದು, ದೇಶದಲ್ಲಿ ಅತ್ಯಂತ ಹೆಚ್ಚು ರಕ್ಷಣೆ ಹೊಂದಿರುವ ವಾಯುನೆಲೆಗಳಲ್ಲಿ ಒಂದಾಗಿದೆ.

    1980 ರ ದಶಕದ ಉತ್ತರಾರ್ಧದಲ್ಲಿ ಅಮೆರಿಕ ನಿರ್ಮಿತ ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ತಲುಪಿಸಲಾಗಿತ್ತು. ಅಂದಿನಿಂದ ಅವು ಹಲವಾರು ನವೀಕರಣಗಳಿಗೆ ಒಳಗಾಗಿವೆ. 2019 ರಲ್ಲಿ ಭಾರತದ ಬಾಲಕೋಟ್ ವಾಯುದಾಳಿಯ ನಂತರ ಈ ವಿಮಾನವನ್ನು ಪಾಕಿಸ್ತಾನ ವಾಯುಪಡೆಯು ಭಾರತದ ವಿರುದ್ಧ ಬಳಸಿತ್ತು. ಈ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಪೈಲಟ್ ಮಾಡಿದ ಮಿಗ್ -21, ವೈಮಾನಿಕ ಯುದ್ಧದಲ್ಲಿ ಎಫ್-16 ಅನ್ನು ಹೊಡೆದುರುಳಿಸಿತ್ತು. ಇದು 1971 ರ ಯುದ್ಧದ ನಂತರ 45 ವರ್ಷಗಳ ನಂತರ ಎರಡೂ ದೇಶಗಳ ನಡುವಿನ ಮೊದಲ ಕಾಳಗವಾಗಿತ್ತು.

  • ವಿಂಗ್ ಕಮಾಂಡರ್ ಮೇಲೆ ಕೊಲೆ ಯತ್ನ ಕೇಸ್ – ಸ್ಟೇಷನ್ ಬೇಲ್ ಮೇಲೆ ವಿಕಾಸ್ ರಿಲೀಸ್

    ವಿಂಗ್ ಕಮಾಂಡರ್ ಮೇಲೆ ಕೊಲೆ ಯತ್ನ ಕೇಸ್ – ಸ್ಟೇಷನ್ ಬೇಲ್ ಮೇಲೆ ವಿಕಾಸ್ ರಿಲೀಸ್

    – ಭಾಷಾ ಕಾರಣಕ್ಕೆ ಹಲ್ಲೆ ಸುಳ್ಳೆಂದ ಯುವಕ
    – ವಿಂಗ್ ಕಮಾಂಡರ್ ವಿರುದ್ಧವೂ ಎಫ್‌ಐಆರ್‌

    ಬೆಂಗಳೂರು: ವಿಂಗ್ ಕಮಾಂಡರ್ (Wing commander) ಶಿಲಾದಿತ್ಯ ಬೋಸ್‌ನಿಂದ ಹಲ್ಲೆಗೊಳಗಾದ ಯುವಕ ವಿಕಾಸ್ ಕುಮಾರ್ ಸ್ಟೇಷನ್ ಬೇಲ್ ಮೇಲೆ ರಿಲೀಸ್ ಆಗಿದ್ದಾರೆ. ಇದೇ ಏ.24 ಎಂದು ಮತ್ತೆ ವಿಚಾರಣೆಗೆ ಹಾಜರಾಗಲು ನೊಟೀಸ್ ಕೊಟ್ಟು ರಿಲೀಸ್ ಮಾಡಿದ್ದಾರೆ.

    ಬಳಿಕ ಮಾತಾಡಿರುವ ವಿಕಾಸ್, ವಿಂಗ್ ಕಮಾಂಡರ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ಭಾಷಾ ಹಲ್ಲೆ ಅನ್ನೋದು ಸುಳ್ಳು. ಪ್ರಕರಣವನ್ನು ನಾನು ಇಲ್ಲಿಗೆ ಬಿಡಲ್ಲ. ನನಗೆ ನ್ಯಾಯ ಬೇಕು. ಸಿಎಂ, ಗೃಹಸಚಿವರು, ಕಮಿಷನರ್, ನನ್ನ ಪರವಾಗಿನಿಂದ ನಿಂತ ಕನ್ನಡಿಗರಿಗೆ ಧನ್ಯವಾದ ಅಂದಿದ್ದಾರೆ. ಜೊತೆಗೆ, ವಿಕಾಸ್ ಕುಮಾರ್ ಪ್ರತಿದೂರು ದಾಖಲಿಸಿದ್ದು, ಬೈಯಪ್ಪನಹಳ್ಳಿ ಪೊಲೀಸರು (Baiyyappanahalli Police) ಕಾರ್‌ನ ನಂಬರ್ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದ – ವಿಂಗ್‌ ಕಮಾಂಡರ್‌ ವಿರುದ್ಧ ಕೊನೆಗೂ ಎಫ್‌ಐಆರ್‌

    Wing Commander fatally attacked BY gang in Bengaluru

    ಭಾರತೀಯ ನ್ಯಾಯ ಸಂಹಿತೆ ಅಡಿ ಸೆಕ್ಷನ್‌ 109 (ಕೊಲೆ ಯತ್ನ), 115 (2) (ಮಾರಣಾಂತಿಕ ಹಲ್ಲೆ), 304 (ಬಲವಂತವಾಗಿ ವಸ್ತು ಕಸಿದುಕೊಳ್ಳುವುದು), 324 (ಅರಿವಿಗೆ ಇದ್ದರೂ ಉದ್ದೇಶ ಪೂರಕವಾಗಿ ವಸ್ತುಗಳನ್ನು ಹಾಳು ಮಾಡೋದು) ಹಾಗೂ 352 (ಶಾಂತಿಭಂಗ) ಸೆಕ್ಷನ್‌ಗಳ ಅಡಿ ಕೇಸ್ ದಾಖಲಿಸಿದ್ದಾರೆ. ಎಫ್‌ಐಆರ್ ದಾಖಲಾಗ್ತಿದ್ದಂತೆಯೇ ಬೈಯಪ್ಪನಹಳ್ಳಿ ಠಾಣೆಗೆ ಏರ್‌ಪೋರ್ಸ್‌ನ ನಾಲ್ವರು ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದಿಯಲ್ಲಿ ಬೈದಿದ್ದು ಅರ್ಥ ಆಗಿಲ್ಲ ಎಂದಿದ್ದಕ್ಕೆ ಗಲಾಟೆ: ಯುವಕನ ತಾಯಿ ಅಳಲು

    ಘಟನೆ ಬಗ್ಗೆ ಏರ್‌ಫೋರ್ಸ್ ಪ್ರತಿಕ್ರಿಯಿಸಿದ್ದು, ಐಎಎಫ್ ಅಧಿಕಾರಿ ಭಾಗಿಯಾಗಿರುವುದು ದುರದೃಷ್ಟಕರ, ತನಿಖೆ ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡ್ತೇವೆ ಅಂದಿದೆ. ಬೈಯಪ್ಪನಹಳ್ಳಿ ಪೊಲೀಸರು ಕೂಡ ಸ್ಥಳ ಮಹಜರು ನಡೆಸಿ, ಇಬ್ಬರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದರು. ಸ್ಥಳದಲ್ಲಿದ್ದ ಕಲ್ಲನ್ನು ವಶಕ್ಕೆ ಪಡೆದರು. ಇದನ್ನೂ ಓದಿ: ನೆಲಕ್ಕೆ ಬಿದ್ರೂ ಬಿಡದೆ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿ ವಿಂಗ್ ಕಮಾಂಡರ್ ದರ್ಪ

    ವಿಕಾಸ್ ಕೊಟ್ಟ ದೂರಿನಲ್ಲೇನಿದೆ..?
    ನಿನ್ನೆ (ಸೋಮವಾರ) ಬೆಳಗ್ಗೆ ಸ್ನೇಹಿತನ ಬೈಕ್ ವಾಪಸ್ ನೀಡಲು ಹೋಗ್ತಿದ್ದೆ. ಟಿನ್‌ಫ್ಯಾಕ್ಟರಿ ಸಿಗ್ನಲ್ ಬಳಿ ಬೈಕ್‌ಗೆ ಕಾರ್ ಟಚ್ ಆಯ್ತು. ಅದಕ್ಕೆ ಗೋಪಾಲನ್ ಗ್ರ್ಯಾಂಡ್‌ ಮಾಲ್ ಬಳಿ ಕಾರನ್ನು ಅಡ್ಡಹಾಕಿ ಪ್ರಶ್ನೆ ಮಾಡಿದೆ. ಕಾರಿಂದ ಇಳಿದು ಬಂದ ವ್ಯಕ್ತಿ ಕಾಲಿನಿಂದ ಒದ್ದು ಬೈಕ್ ಕೆಳಗೆ ಬೀಳಿಸಿದ. ಅದನ್ನು ಕೇಳಿದಾಗ ನಿರಂತರವಾಗಿ ಹಲ್ಲೆ ಮಾಡಿದ. ಸ್ವಯಂ ರಕ್ಷಣೆಗಾಗಿ ನಾನು ಒಂದು ಏಟು ಹೊಡೆದೆ. ಸ್ನೇಹಿತನಿಗೆ ಕರೆ ಮಾಡಲು ಮೊಬೈಲ್ ತೆಗೆದೆ, ಆದ್ರೆ ಅಲ್ಲಿದ್ದ ಅಪರಿಚಿತ ವ್ಯಕ್ತಿ ನನ್ನ ಕೈ ಕಚ್ಚಿ, ಫೋನ್ ಕಸಿದುಕೊಂಡು ಎಸೆದರು, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲ್ಲುವ ಬೆದರಿಕೆ ಹಾಕಿದರು. ನನ್ನ ಕುತ್ತಿಗೆಗೆ ಹಿಂದಿನಿಂದ ಕೈ ಹಾಕಿ ಹೊಡೆದರು. ನನ್ನ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ರು, ನನ್ನ ಬೈಕ್ ಕೀ ಕಸಿದುಕೊಂಡು ದೂಡಿದರು, ನಾನು ನೆಲಕ್ಕೆ ಬಿದ್ದೆ. ಮತ್ತೆ ನನ್ನ ಮುಖದ ಮೇಲೆ ಹಲ್ಲೆ ಮಾಡಿದರು. ಆ ಅಪರಿಚಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಕಾಸ್‌ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • Myanmar Earthquake | ಸಾವಿನ ಸಂಖ್ಯೆ 694ಕ್ಕೆ ಏರಿಕೆ, 1,600ಕ್ಕೂ ಹೆಚ್ಚು ಮಂದಿಗೆ ಗಾಯ!

    Myanmar Earthquake | ಸಾವಿನ ಸಂಖ್ಯೆ 694ಕ್ಕೆ ಏರಿಕೆ, 1,600ಕ್ಕೂ ಹೆಚ್ಚು ಮಂದಿಗೆ ಗಾಯ!

    – ನಿನ್ನೆಯಿಂದ 6 ಬಾರಿ ಭೂಕಂಪ, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆ

    ನೇಪಿಟಾವ್/ಬ್ಯಾಂಕಾಕ್‌: ಮಯನ್ಮಾರ್‌ನಲ್ಲಿ (Myanmar) ನಿನ್ನೆಯಿಂದ 6 ಬಾರಿ ಭೂಕಂಪ ಸಂಭವಿಸಿದ್ದು, ಸಾವಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಈ ಕ್ಷಣದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 694ಕ್ಕೆ ಏರಿಕೆಯಾಗಿದ್ದು, 1,600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಅವಶೇಷಗಳ ಅಡಿ ಇನ್ನೂ ನೂರಾರು ಮಂದಿ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

    ರಸ್ತೆಗಳಲ್ಲೇ ಚಿಕಿತ್ಸೆ:
    ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವು-ನೋವು ಉಂಟುಮಾಡಿದೆ. ಒಂದೆಡೆ ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಮತ್ತೊಂದೆಡೆ ಜೀವ ಉಳಿಸಬೇಕಾದ ಆಸ್ಪತ್ರೆಗಳೇ ಕಣ್ಣೀರಿನ ಕಥೆ ಹೇಳುತ್ತಿವೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ನೊಂದ ಸಂತ್ರಸ್ತರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಬಂದೊದಗಿವೆ. ಇದರಿಂದ ಮ್ಯಾನ್ಮಾರ್‌ನ ನೈಪಿತಾವು ಸೇರಿ 6 ಪ್ರದೇಶ ಹಾಗೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

    ಭಾರತದಿಂದ ನೆರವಿನ ಹಸ್ತ
    ಸಂತ್ರಸ್ತವಾಗಿರುವ ಮ್ಯಾನ್ಮಾರ್‌ಗೆ ಭಾರತ ನೆರವಿನ ಹಸ್ತ ಚಾಚಿದೆ. ತಾತ್ಕಾಲಿಕ ಟೆಂಟ್‌ಗಳು, ಮಲಗುವ ಹಾಸಿಗೆ, ಹೊದಿಕೆಗಳು, ಆಹಾರ, ನೀರು, ನೈರ್ಮಲ್ಯ ಕಿಟ್‌, ಸೋಲಾರ್‌ ಲೈಟ್‌, ಜನರೇಟರ್‌ ಸೆಟ್‌ ಹಾಗೂ ಔಷಧಗಳ ನೆರವನ್ನು ಭಾರತ ನೀಡಿದೆ. ಈಗಾಗಲೇ ಸುಮಾರು 15 ಟನ್‌ ಪರಿಹಾರ ಸಾಮಗ್ರಿಗಳನ್ನು ಭಾರತೀಯ ವಾಯುಸೇನೆಯ C-130-J ವಿಮಾನ ವಿಮಾನದಲ್ಲಿ ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ.

    ಅಫ್ಘಾನಿಸ್ತಾನದಲ್ಲೂ ಕಂಪಿಸಿದ ಭೂಮಿ:
    ಮ್ಯಾನ್ಮಾರ್‌, ಥಾಯ್ಲೆಂಡ್‌ನಲ್ಲಿ ಭೂಂಕಪದ ಬೆನ್ನಲ್ಲೇ ಶನಿವಾರ ಮುಂಜಾನೆ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಮುಂಜಾನೆ 5:16ಕ್ಕೆ ಭೂಮಿ ಕಂಪಿಸಿದ್ದು, ಭೂಮಿಯಿಂದ 180 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದೆ. ರಿಕ್ಟರ್‌ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಫ್ಘಾನಿಸ್ತಾನದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.