Tag: ಏಸು ಪ್ರತಿಮೆ

  • ಕಪಾಲ ಬೆಟ್ಟ ವಿವಾದ- ಜ.13ಕ್ಕೆ ಕನಕಪುರ ಚಲೋ

    ಕಪಾಲ ಬೆಟ್ಟ ವಿವಾದ- ಜ.13ಕ್ಕೆ ಕನಕಪುರ ಚಲೋ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಎತ್ತರದ ಏಸು ಕ್ರಿಸ್ತನ ಪ್ರತಿಮೆ ವಿಚಾರವಾಗಿ ಹಿಂದೂ ಜಾಗರಣ ವೇದಿಕೆ ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರು ಜ.13 ರಂದು ಕನಕಪುರ ಚಲೋ ಹಮ್ಮಿಕೊಂಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್, ಕಪಾಲ ಬೆಟ್ಟ ಮೊದಲಿಗೆ ಮುನೇಶ್ವರ ಬೆಟ್ಟವಾಗಿತ್ತು. ಮುನೇಶ್ವರನ ಆರಾಧನೆ ಮಾಡುತ್ತಿದ್ದ ಕುರುಹು ಇನ್ನೂ ಬೆಟ್ಟದಲ್ಲಿ ಇದೆ. ಆದರೆ ಅದೇ ಸ್ಥಳದಲ್ಲಿ ಶಿಲುಬೆ ನಿಲ್ಲಿಸಲಾಗಿದೆ. ಈ ಮೂಲಕ ಹಿಂದೂ ಧರ್ಮದವರನ್ನು ತುಳಿದು ಮತಾಂತರ ಮಾಡಿಸಿರುವ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

    ಕಪಾಲ ಬೆಟ್ಟ ಅರಣ್ಯ ಪ್ರದೇಶವಾಗಿದ್ದು, ಗೋಮಾಳ ಜಮೀನಾಗಿದೆ. ಗೋಮಾಳ ಗೋವುಗಳಿಗೆ ಮೀಸಲಿಟ್ಟ ಜಾಗವಾಗಿದ್ದು, ಅಲ್ಲಿನ ಗೋವುಗಳು ಪರದಾಡುವಂತಹ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಜಮೀನು ಪರಭಾರೆ ಕಾನೂನು ಬಾಹಿರವಾಗಿ ನಡೆದಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೆ ಜಮೀನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ಜ.13ರಂದು ಕನಕಪುರ ಚಲೋ ನಡೆಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್‍ನ ಕ್ಷೇತ್ರೀಯ ಪ್ರಮುಖ್ ಪ್ರಭಾಕರ್ ಕಲ್ಲಡ್ಕ ಭಟ್ ಭಾಗವಹಿಸಲಿದ್ದು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

    ರಾಮನಗರ ಸೇರಿದಂತೆ ಮಂಡ್ಯ, ಕೋಲಾರ ಭಾಗದಲ್ಲಿ ಪ್ರಮುಖವಾಗಿ ಒಕ್ಕಲಿಗರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಕಾದಿದೆ ಎಂದರು.

  • ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿರುವ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಲು ಅವಕಾಶ ಕೋರಿ ಕ್ರೈಸ್ತರ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.

    ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೊ ನೇತೃತ್ವದ ನಿಯೋಗದಿಂದ ಇಂದು ಮಧ್ಯಾಹ್ನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿಎಸ್‍ವೈ ಭೇಟಿ ಮಾಡಿ ಮಾತುಕತೆ ನಡೆಸಲಾಯ್ತು. ಈ ವೇಳೆ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡುವಂತೆ ಸಿಎಂಗೆ ಮನವಿ ನಿಯೋಗದಿಂದ ಮನವಿ ಮಾಡಲಾಯಿತು.

    ಸಿಎಂ ಭೇಟಿ ಬಳಿಕ ಮಾತಾಡಿದ ಪೀಟರ್ ಮಚಾಡೊ, ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಸಿಎಂಗೆ ಮನವಿ ಮಾಡಿದ್ದೇವೆ. ಇದರಲ್ಲಿ ಯಾರೂ ರಾಜಕೀಯ ಮಾಡೋದು ಬೇಡ. ಸುಮಾರು ವರ್ಷಗಳಿಂದಲೂ ಏಸುವನ್ನು ಅಲ್ಲಿ ನಾವು ಪೂಜಿಸುತ್ತಾ ಬಂದಿದ್ದೇವೆ. ಅಲ್ಲಿ ಈಗ ಏಸು ಪ್ರತಿಮೆ ನಿರ್ಮಾಣ ಆಗುತ್ತಿದೆ. ಇದಕ್ಕೆ ವಿರೋಧ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

    ಕಪಾಲ ಬೆಟ್ಟದಲ್ಲಿ ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಾ ಇದ್ದರು ಎನ್ನುವ ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಷ್ಟಕ್ಕೂ ಅದು ಕಪಾಲಿ ಬೆಟ್ಟ ಅಲ್ಲ. ಅದು ಕಪಾಲ ಬೆಟ್ಟ. ಕಪಾಲಿ ಬೆಟ್ಟ ಅಂತ ಆಗಿದ್ದು ಹೇಗೆಂದು ಗೊತ್ತಿಲ್ಲ ಅಂತ ಇದೇ ವೇಳೆ ಪೀಟರ್ ಮಚಾಡೊ ಹೇಳಿದರು.

    ಕಪಾಲ ಬೆಟ್ಟದ ಸುತ್ತಮುತ್ತಲಿನ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪವನ್ನೂ ಅವರು ಅಲ್ಲಗಳೆದರು. ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಮತಾಂತರ ಮಾಡೋದು ಸುಲಭ ಅಲ್ಲ. ಹಿಂದೆ ಬಂದಿದ್ದ ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿರಬಹದು. ನಾವು ಒಂದೂವರೆ ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಿದ್ದೇವೆ. ಒಬ್ಬರನ್ನಾದರೂ ಮತಾಂತರ ಮಾಡಿದ್ದನ್ನು ತೋರಿಸಲಿ ಎಂದು ಪೀಟರ್ ಮಚಾಡೋ ಸ್ಪಷ್ಟಪಡಿಸಿದರು.

    ಕ್ರೈಸ್ತರ ನಿಯೋಗಕ್ಕೆ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟ ಭರವಸೆ ಕೊಟ್ಟಿಲ್ಲ ಎನ್ನಲಾಗಿದೆ. ರಾಮನಗರ ಜಿಲ್ಲಾಡಳಿತದಿಂದ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಡದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ವಿರೋಧಿಸಿ ಜನವರಿ 13ರಂದು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ರಾಮನಗರದಲ್ಲಿ ತಿಳಿಸಿದ್ದಾರೆ.

    ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸಹ ಸೂಚನೆ ನೀಡಲಾಗಿದೆ. ಇದೀಗ ದಿನದಿಂದ ದಿನಕ್ಕೆ ವಿವಾದ ರಂಗೇರುತ್ತಿದ್ದು ಬಿಜೆಪಿ ನಾಯಕರು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ರಾಮನಗರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ನಗರದ ಕೆಂಪೇಗೌಡ ಸರ್ಕಲ್‍ನಿಂದ ಆರಂಭವಾದ ಜಾಗೃತಿ ಜಾಥಾ ಮೆರವಣಿಗೆ ಜೂನಿಯರ್ ಕಾಲೇಜ್ ಮೈದಾನದವರೆಗೆ ನಡೆಸಲಾಯಿತು. ಸಿಎಎ ಬೆಂಬಲದ ಅಭಿಯಾನದಲ್ಲಿ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ವೇಳೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‍ರವರು, ಕಪಾಲ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬರುತ್ತೆ, ಅದು ಗೋಮಾಳದ ಜಮೀನು. ಅಲ್ಲಿ ಅನಧಿಕೃತವಾಗಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡ್ತಿರುವುದು ತಪ್ಪು ಎಂದರು. ಅಲ್ಲದೆ ಅನಧಿಕೃತವಾಗಿ ಪ್ರತಿಮೆ ನಿರ್ಮಾಣವಾಗುತ್ತಿರುವ ದೃಷ್ಟಿಯಿಂದ ಇದೇ ಜನವರಿ 13ರಂದು ಜಿಲ್ಲೆಯಾದ್ಯಂತ ಕಾರ್ಯಕ್ರಮ ರೂಪಿಸಿದ್ದೇವೆ. ಕಪಾಲ ಬೆಟ್ಟಕ್ಕೆ ಭೇಟಿ ನೀಡುತ್ತೇವೆ, ಕನಕಪುರದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.

    ನಾವು ಶಾಂತಿ ಪ್ರಿಯರಾಗಿದ್ದು, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಕಪಾಲ ಬೆಟ್ಟಕ್ಕೆ ಹೋಗಿ ಬಂದ ಬಳಿಕ ಕನಕಪುರದಲ್ಲಿ ಪ್ರತಿಭಟನೆ ಮೂಲಕ ಜನಜಾಗೃತಿ ಮೂಡಿಸುವಂತಹ ಕೆಲಸ ಮಾಡುವುದಾಗಿ ತಿಳಿಸಿದರು.

  • ‘ಡಿಕೆ ಶಿವಕುಮಾರ್ ನೀವು ಏಸುಕುಮಾರ್ ಆಗಬೇಡಿ’ – ಪ್ರತಾಪ್ ಸಿಂಹ ವ್ಯಂಗ್ಯ

    ‘ಡಿಕೆ ಶಿವಕುಮಾರ್ ನೀವು ಏಸುಕುಮಾರ್ ಆಗಬೇಡಿ’ – ಪ್ರತಾಪ್ ಸಿಂಹ ವ್ಯಂಗ್ಯ

    ಮೈಸೂರು: ಕನಕಪುರ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿ ಮುಂದುವರಿದಿದೆ. ಈ ಕುರಿತು ವ್ಯಂಗ್ಯವಾಡಿರುವ ಸಂಸದರು, ಡಿ.ಕೆ.ಶಿವಕುಮಾರ್ ಅವರೇ ನೀವೂ ಏಸುಕುಮಾರ್ ಆಗಬೇಡಿ ಎಂದಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಪಾಲ ಬೆಟ್ಟ ಶಿವನ ಬೆಟ್ಟ. ಆ ಬೆಟ್ಟವನ್ನು ಏಸು ಬೆಟ್ಟ ಮಾಡಿ ನೀವು ಏಸುಕುಮಾರ ಅನಿಸಿಕೊಳ್ಳಬೇಡಿ. ಶಿವ ಮತ್ತು ಭಕ್ತರ ನಡುವಿನ ಸಂಬಂಧ ಇದು. ಆ ಸಂಬಂಧವನ್ನು ನೀವು ಮುರಿಯಬೇಡಿ ಎಂದರು.

    ಕೆಲ ದಿನಗಳ ಹಿಂದೆಯಷ್ಟೇ ಪ್ರತಾಪ್ ಸಿಂಹ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲೂ ಡಿಕೆಶಿ ಅವರಿಗೆ ಈ ವಿಚಾರದಲ್ಲಿ 4 ಪ್ರಶ್ನೆ ಕೇಳಿದ್ದರು.

    ಪ್ರತಾಪ್ ಸಿಂಹ ಪ್ರಶ್ನೆಗಳು:
    1. ಏನು ಡಿ.ಕೆ. ಶಿವಕುಮಾರರೇ, ಸ್ವಂತ ಹಣದಲ್ಲಿ 114 ಅಡಿ ಎತ್ತರದ ಏಸು ಪ್ರತಿಮೆ ನಿರ್ಮಾಣದ ಹಿಂದಿರುವ ಉದ್ದೇಶವೇನು?
    2. ಆಂಧ್ರದಲ್ಲಿ ಮತಾಂತರವನ್ನೇ ಅಧಿಕಾರದ ಮೆಟ್ಟಿಲಾಗಿಸಿಕೊಂಡ ಜಗನ್ ಮೋಹನ್ ರೆಡ್ಡಿಯವರಂತೆ, ಕನಕಪುರದ ಒಕ್ಕಲಿಗರನ್ನು ಕನ್ವರ್ಟ್ ಮಾಡುವ ಸ್ಕೀಮಾ ಇದು?
    3. ಸಿದ್ದಗಂಗಾ, ಸುತ್ತೂರು, ಸಿರಿಗೆರೆಗಳಂತೆ ಆದಿಚುಂಚನಗಿರಿ ಸಂಸ್ಥೆಯನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋದ ಬಾಲಗಂಗಾಧರ ಶ್ರೀಗಳು ಮರೆತುಹೋದರಾ ನಿಮಗೆ?
    4. ಸರ್ವ ಜಾತಿಜನಾಂಗದ ದೈವ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ನಿರ್ಮಿಸಿದ್ದರೆ ಕಪಾಲಿ ಬೆಟ್ಟಕ್ಕೆ ಕಳಶಪ್ರಾಯವಾಗುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದರು.

    ಡಿಕೆಶಿ ಸಮರ್ಥನೆ: ಏಸು ಪ್ರತಿಮೆ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದ ಡಿಕೆಶಿ ಅವರು, ಎಲ್ಲಾ ಸಮುದಾಯಗಳಿಗೂ ನಾನು ನೆರವಾಗಿದ್ದು, ಅಂಬೇಡ್ಕರ್ ಅವರು ರಚಿಸಿದ್ದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಅವರಿಂದ ನೀತಿಪಾಠ ನನಗೆ ಬೇಕಿಲ್ಲ. ಬಿಜೆಪಿ ನಾಯಕರು ಯಾವಾಗಲೂ ಬೇರೊಬ್ಬರ ವಿಚಾರದಲ್ಲಿ ತಪ್ಪು ಕಂಡು ಹಿಡಿರುವ ಕೆಲಸವನ್ನಷ್ಟೇ ಮಾಡುತ್ತಾರೆ. ಈಗಲೂ ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಕಪಾಲ ಬೆಟ್ಟ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಜನರು ನನ್ನ ಪರವಾಗಿ ನಿಂತು ಬೆಳೆಸಿದ್ದಾರೆ. ಇಡೀ ಗ್ರಾಮದ ಜನರು ನನ್ನ ಪರ ಪ್ರಾರ್ಥನೆ ಮಾಡಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಗ್ರಾಮಸ್ಥರು ಮೂರ್ತಿ ನಿರ್ಮಾಣ ಮಾಡುವ ಪ್ರಸ್ತಾಪ ಮಾಡಿದ್ದರು. ಆದರೆ ಈ ಜಾಗ ಸರ್ಕಾರಿ ಸ್ಥಳವಾಗಿದೆ. ಆದ್ದರಿಂದ ಬೇಡ ಎಂದು ಹೇಳಿ ಯಾವುದೇ ತೊಂದರೆ ಇಲ್ಲದೇ ಜಮೀನು ನೀಡುವ ಭರವಸೆ ನೀಡಿದ್ದೆ.

    ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಈ ಸ್ಥಳವನ್ನು ಮಂಜೂರು ಮಾಡಿಸಿ ಸ್ವತಃ ಹಣವನ್ನೂ ನೀಡಿ ಅವರಿಗೆ ಹಕ್ಕು ಪತ್ರವನ್ನು ನೀಡಿದ್ದೇನೆ. ಬೆಟ್ಟ 16 ಎಕರೆ ಇದ್ದು, 10 ಎಕರೆ ಜಮೀನು ಮಾತ್ರ ಅವರಿಗೆ ಕಾನೂನಾತ್ಮಕವಾಗಿ ನೀಡಿದ್ದೇನೆ. ಈ ಒಂದು ಸ್ಥಳ ಮಾತ್ರವಲ್ಲ, ನನ್ನದೇ ಸ್ವತಃ ಜಮೀನನ್ನು ಕೂಡ ಕರ್ನಾಟಕ ಸರ್ಕಾರದ ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಲು ನೀಡಿದ್ದೇನೆ. ಅಲ್ಲದೇ ನೂರಾರು ದೇವಾಲಯಗಳನ್ನು ನಿರ್ಮಾಣ ಮಾಡಲು ನೆರವು ನೀಡಿದ್ದೇವೆ ಎಂದು ಹೇಳಿದ್ದರು.

  • ಏಸು ಪ್ರತಿಮೆ ನಿರ್ಮಾಣ ಹಿನ್ನೆಲೆ – ಕಪಾಲ ಬೆಟ್ಟಕ್ಕೆ ಬಿಜೆಪಿ ಕಾರ್ಯಕರ್ತರು ಭೇಟಿ

    ಏಸು ಪ್ರತಿಮೆ ನಿರ್ಮಾಣ ಹಿನ್ನೆಲೆ – ಕಪಾಲ ಬೆಟ್ಟಕ್ಕೆ ಬಿಜೆಪಿ ಕಾರ್ಯಕರ್ತರು ಭೇಟಿ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆ ವಿಚಾರವಾಗಿ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ದಿನನಿತ್ಯ ಬಿಜೆಪಿ ಸರ್ಕಾರದ ಸಚಿವರು, ನಾಯಕರು ಸಹ ಪ್ರತಿಮೆ ನಿರ್ಮಾಣದ ವಿಚಾರವಾಗಿ ಭೂಮಿ ಮಂಜೂರಾತಿ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಬಿಜೆಪಿ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

    ಹಾರೋಬೆಲೆಯ ಕಪಾಲ ಬೆಟ್ಟಕ್ಕೆ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ನೇತೃತ್ವದ ಸುಮಾರು 50 ಮುಖಂಡರು, ಕಾರ್ಯಕರ್ತರ ತಂಡ ಕಪಾಲ ಬೆಟ್ಟಕ್ಕೆ ಭೇಟಿ ನೀಡಿತ್ತು. ಕಪಾಲ ಬೆಟ್ಟದ ತಳಭಾಗದಿಂದಲೂ ಕೂಡಾ ನಡೆದುಕೊಂಡೇ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದವರೆಗೆ ಬೆಟ್ಟದ ವೀಕ್ಷಣೆ ಹಾಗೂ ಈ ಹಿಂದಿನ ಕುರುಹುಗಳ ವೀಕ್ಷಣೆ ನಡೆಸುತ್ತಾ ಸಾಗಿದರು. ಅಲ್ಲದೇ ಬೆಟ್ಟದ ಮೇಲ್ಭಾಗದಲ್ಲಿನ ಶಿಲುಬೆಯ ತಳಭಾಗದಲ್ಲಿ ಇರುವ ಮುನೇಶ್ವರ ಸ್ವಾಮಿಯ ಕಲ್ಲುಗಳು ಹಾಗೂ ಮುನಿಸೇವೆ ಮಾಡುತ್ತಿದ್ದ ಕುರುಹುಗಳ ವೀಕ್ಷಣೆ ಮಾಡಿದ್ರು.

    ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆಯ ಜಾಗವವನ್ನು ವೀಕ್ಷಣೆ ಮಾಡಿದರು. ಅಲ್ಲದೇ ಕಪಾಲ ಬೆಟ್ಟ ಈ ಹಿಂದೆ ಮುನೇಶ್ವರ ಬೆಟ್ಟವಾಗಿತ್ತು ಅದಕ್ಕೆ ಸಂಬಂಧಪಟ್ಟ ಕುರುಹುಗಳು ಶಿಲುಬೆಯಿರುವ ಜಾಗದಲ್ಲಿದೆ ಎಂದರು. ಕಪಾಲ ಬೆಟ್ಟ ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಯಾವುದೇ ರೀತಿ ಘಟನೆ ನಡೆದರೂ ಇದೀಗ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಲಿದ್ದು, ಏಸುವಿನ ಮಾದರಿ ಪ್ರತಿಮೆ ಬಳಿ ಹಾಗೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಾಲ್ಕು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

    ಕಪಾಲ ಬೆಟ್ಟದ ಭೇಟಿ ವಿಚಾರವಾಗಿ ಮಾತನಾಡಿದ ಬಿಜೆಪಿ ಜಿಲ್ಲಾದ್ಯಕ್ಷ ಎಂ.ರುದ್ರೇಶ್, ಪ್ರತಿಮೆ ನಿರ್ಮಾಣದ ಜಾಗದ ವಸ್ತುಸ್ಥಿತಿ ಹೇಗಿದೆ, ಪ್ರತಿಮೆ ನಿರ್ಮಾಣಕ್ಕು ಮುನ್ನ ಬೆಟ್ಟದ ವಸ್ತುಸ್ಥಿತಿ ಹೇಗಿತ್ತು ಎಂಬ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ವರದಿ ಕೇಳಿದ್ದು ಜಾಗದ ವರದಿಯನ್ನ ನೀಡಲಿದ್ದೇವೆ. ಅದರ ಮುಂದಿನ ಕಾನೂನು ಕ್ರಮ ಏನಿದೆ ಅವರು ತೆಗೆದುಕೊಳ್ಳಲಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಅವರು ಕೂಡಾ ಕಪಾಲ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

    ಏಸುಕ್ರಿಸ್ತನ ಪ್ರತಿಮೆ ನಿರ್ಮಾಣದ ಬೆಟ್ಟದ ತುದಿಗೆ ತೆರಳಲು ಮಣ್ಣಿನ ರಸ್ತೆ ಹಲವಾರು ವರ್ಷಗಳಿಂದ ಇದೆ. ಇತ್ತೀಚೆಗೆ ಪ್ರತಿಮೆಯ ಶಿಲಾನ್ಯಾಸದ ವೇಳೆ ರಸ್ತೆಯನ್ನ ಜೆಸಿಬಿ ಬಳಸಿ ಅಲ್ಪಸ್ವಲ್ಪ ದುರಸ್ಥಿ ಕಾರ್ಯ ನಡೆಸಲಾಗಿತ್ತು. ಆದರೆ ನಿನ್ನೆ ಕೆಲವರು ದಾರಿಯಲ್ಲಿ ಕೆಲವು ಕಡೆಗಳಲ್ಲಿ ಗುಂಡಿಗಳನ್ನು ತೋಡಿದ್ದು ವಾಹನಗಳು ಓಡಾಡಂತೆ ಮಾಡಿದ್ದಾರೆ. ಸುಮಾರು ಎರಡ್ಮೂರು ಅಡಿಗಳಷ್ಟು ಆಳವಾಗಿ ನಾಲ್ಕು ಕಡೆಗಳಲ್ಲಿ ಗುಂಡಿಗಳನ್ನು ತೆಗೆದಿದ್ದು ವಾಹನಗಳು ಬೆಟ್ಟದ ಮೇಲ್ಭಾಗಕ್ಕೆ ತೆರಳದಂತೆ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಈ ರೀತಿ ಮಾಡಿ ಬೆಟ್ಟಕ್ಕೆ ಬರುವವರ ವಿರುದ್ಧ ಹಗೆತನ ಸಾಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

  • ಡಿಕೆ ಶಿವಕುಮಾರ ಅಲ್ಲ ಏಸುಕುಮಾರ – ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ

    ಡಿಕೆ ಶಿವಕುಮಾರ ಅಲ್ಲ ಏಸುಕುಮಾರ – ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಹಾರೋಬೆಲೆ ಬಳಿಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ.

    ಶಿಲಾನ್ಯಾಸ ನೆರವೇರಿದ ದಿನದಿಂದ ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿ ಮುಖಂಡರು ಟ್ವಿಟ್ಟರ್ ನಲ್ಲಿ ಕಿಡಿಕಾರಿದರೆ, ಅಲ್ಲಲ್ಲಿ ಡಿಕೆಶಿ ವಿರುದ್ಧ ಟ್ರೋಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹ ಕಾಣಿಸಿಕೊಂಡಿದ್ದವು. ಆದರೆ ಇದೀಗ ಡಿಕೆಶಿ ವಿರುದ್ಧ ನೆಟ್ಟಿಗರು ನಾನಾ ರೀತಿಯಲ್ಲಿ ಡಿಕೆಶಿ ಫೋಟೋ ಎಡಿಟ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

    ಏಸು ಪ್ರತಿಮೆಯ ವಿವಾದದ ಕಿಡಿ ಇದೀಗ ರಂಗೇರಿದ್ದು, ಡಿಕೆ.ಶಿವಕುಮಾರ ಅಲ್ಲ ಏಸುಕುಮಾರ ಎಂಬ ಬರಹಗಳ ಜೊತೆಗೆ ಕನಕಪುರ ಜನತೆಯನ್ನು ಕ್ರಿಶ್ಚಿಯನ್ ಆಗಿ ಮತಾಂತರ ಮಾಡುವ ಹುನ್ನಾರ ಆಗಿದ್ದು, ಕನಕಪುರ ಕ್ರಿಶ್ಚಿಯನ್ನರ ಕೋಟೆಯಾಗಲಿದೆ ಎಂಬ ಬರಹಗಳ ಜೊತೆಗೆ ಡಿ.ಕೆ ಶಿವಕುಮಾರ್ ಏಸು ಗೆಟಪ್ ನಲ್ಲಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಡಿಕೆ ಶಿವಕುಮಾರ್ ಪ್ರತಿಮೆಯ ಶಿಲಾನ್ಯಾಸ ನೆರವೇರಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿದ್ದು, ಅಡಿ ಬರಹಗಳನ್ನು ಹಾಕುವ ಮೂಲಕ ನೆಟ್ಟಿಗರು ವ್ಯಾಪಕ ಟೀಕೆ ಮಾಡಿದ್ದಾರೆ. ಮತ್ತೊಂದು ಕಡೆ ಏಸು ಶಿಲುಬೆ ಹೊತ್ತ ರೀತಿಯಲ್ಲಿಯೇ ಶಿವಕುಮಾರ್ ಅವರನ್ನು ಶಿಲುಬೆಗೇರಿಸಿರುವ ನೆಟ್ಟಿಗರು, ತಂದೆಯೇ ನನ್ನನ್ನು ಕ್ಷಮಿಸು ನಾನು ಏನು ಕೆಲಸ ಮಾಡ್ತಿದ್ದೇನೆ ಎನ್ನುವುದು ತಿಳಿದಿಲ್ಲ ಎಂದು ಬರೆಯಲಾಗಿದೆ.

    ಕೆಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಕನಕಪುರವನ್ನು ಎಸಪ್ಪನಪುರ ಮಾಡಲು ಹೊರಟ ಕೆಂಪೇಗೌಡರ ಮಗ ಡಿ.ಕೆ ಶಿವಕುಮಾರ್, 10 ಎಕರೆ ಜಮೀನನ್ನು ಕ್ರೈಸ್ತ ಬಂಧುಗಳಿಗೆ ಹಸ್ತಾಂತರಿಸಿದ ಏಸಪ್ಪನ ಪರಮ ಭಕ್ತ. ಪೂಜನೀಯ ಆದಿಚುಂಚನಗಿರಿ ಸ್ವಾಮಿಜೀಯವರು ತಮ್ಮ ಭಕ್ತನನ್ನು ಕರೆದು ಬುದ್ಧಿ ಹೇಳಬೇಕು ಎಂದು ಸಮಸ್ತ ಹಿಂದು ಸಂಘಟನೆಗಳ ಆಗ್ರಹ ಎಂದು ಕಿಡಿಕಾರಿದ್ದಾರೆ.

    ಅಲ್ಲದೇ ಕಾಲಭೈರವೇಶ್ವರ ಕಾಪಾಡು ನಿನ್ನ ಭಕ್ತನನ್ನು. ರಾಮನಗರದ ಸುತ್ತ ಮುತ್ತ ಜನರ ಮುಂದಿನ ಹೆಸರುಗಳು. ಜಾನಿ ಗೌಡ, ಪೀಟರ್ ಗೌಡ, ಮೇರಿ ಗೌಡ, ಹೆನ್ರಿ ಗೌಡ, ಜೆಸ್ಸಿ ಗೌಡ, ಒಬಾಮ ಗೌಡ, ಕಿಸ್ಟೋಫರ್ ಗೌಡ, ದೇಪಿದ್, ಏಸುಡಿಕೆ, ಏಸುಸ್ವಾಮಿ, ಏಸುನೀತ, ಏಸ್ನಿಖಿಲ್ ಇತ್ಯಾದಿ ಇತ್ಯದಿಯಾಗಿ ಕರೆಯಬೇಕಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ, ಏಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಯಾವ ನ್ಯಾಯ: ಸತೀಶ್

    ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ, ಏಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಯಾವ ನ್ಯಾಯ: ಸತೀಶ್

    ರಾಮನಗರ: ಅರಣ್ಯದಲ್ಲೇ ವಾಸ ಮಾಡುತ್ತಿದ್ದ ಆದಿವಾಸಿ ಇರುಳಿಗರನ್ನು ಒಕ್ಕಲೆಬ್ಬಿಸಿ ಹಕ್ಕುಪತ್ರಗಳನ್ನು ನೀಡದೇ ಸತಾಯಿಸುತ್ತಿರುವ ಜಿಲ್ಲಾಡಳಿತ ಇದೀಗ ಯೇಸು ಪ್ರತಿಮೆಗೆ ಜಮೀನು ಮಂಜೂರು ಮಾಡಿರುವುದು ಯಾವ ನ್ಯಾಯ ಸ್ವಾಮೀ. ಪ್ರತಿಮೆ ನಿರ್ಮಾಣ ಮಾಡುವ ಬದಲು, ಅಲ್ಲಿನ ಮೂಲ ನಿವಾಸಿಗಳಾದ ವನವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬಹುದಾಗಿತ್ತು ಎಂದು ವನವಾಸಿ ಕಲ್ಯಾಣ ಸಮಿತಿಯ ಮುಖಂಡರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವನವಾಸಿ ಕಲ್ಯಾಣ ಸಮಿತಿಯ ಮುಖಂಡ ಸತೀಶ್, ಮೂಲ ನಿವಾಸಿಗಳು ನಿವೇಶನ ಸೇರಿದಂತೆ ಹಕ್ಕು ಪತ್ರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೂ ಈ ತನಕ ಅವರ ಕೂಗಿಗೆ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಆದರೆ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದಲೇ ಡಿಕೆಶಿ ಭೂಮಿ ಮಂಜೂರು ಮಾಡಿಸಿರುವುದು ಯಾವ ನ್ಯಾಯ. ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ರೀತಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.

    ಕಳೆದ 12 ದಿನಗಳಿಂದ ಕನಕಪುರ ತಾಲೂಕಿನ ಮರಳವಾಡಿಯ ಸಮೀಪದಲ್ಲಿ ಹಕ್ಕುಪತ್ರಕ್ಕಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ವನವಾಸಿ ಇರುಳಿಗರು ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಸಕ ಶಿವಕುಮಾರ್ ಅವರಾಗಲೀ, ಸಂಸದ ಡಿ.ಕೆ.ಸುರೇಶ್ ಅವರಾಗಲಿ ಒಂದು ದಿನವೂ ಸ್ಥಳಕ್ಕೆ ಧಾವಿಸಿಲ್ಲ. ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ, ಆದರೆ ಪ್ರಯೋಜನವಾಗಿಲ್ಲ. ಯೇಸು ಪ್ರತಿಮೆ ನಿರ್ಮಾಣಕ್ಕಾಗಿ ಕಪಾಲ ಟ್ರಸ್ಟ್‍ಗೆ 10 ಎಕರೆ ಭೂಮಿ ನೀಡುವ ಜನಪ್ರತಿನಿಧಿಗಳು ಆದಿವಾಸಿಗಳು ಧರಣಿ ನಡೆಸುತ್ತಿದ್ದರು ಸ್ಥಳಕ್ಕೆ ಧಾವಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನತೆಗೆ ಹಕ್ಕು ಪತ್ರ ವಿತರಣೆ ಮಾಡಬೇಕಾಗಿದೆ. ಅದರಲ್ಲೂ ಕನಕಪುರ ತಾಲೂಕಿನಲ್ಲೇ 600ಕ್ಕೂ ಹೆಚ್ಚು ಮಂದಿ ಪಲಾನುಭವಿಗಳಿದ್ದಾರೆ. ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕು. ಮೂಲ ನಿವಾಸಿಗಳ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

    ಅರಣ್ಯದಲ್ಲೇ ಹುಟ್ಟಿ ಬೆಳೆದ ಅರಣ್ಯವಾಸಿ, ಆದಿವಾಸಿ, ವನವಾಸಿಗಳು ಪ್ರತಿಭಟನೆ ನಡೆಸುತ್ತಿದ್ರು ಜಿಲ್ಲಾಡಳಿತ ಹಕ್ಕುಪತ್ರ ನೀಡುವ ಕೆಲಸ ಮಾಡಿಲ್ಲ. ಮಾಜಿ ಸಚಿವ ಡಿಕೆಶಿ ಆದಿವಾಸಿಗಳ ಕಡೆಗೆ ಗಮನ ಹರಿಸಿಲ್ಲ. ಆದರೆ ಅವರು ಯೇಸು ಪ್ರತಿಮೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿ ಪ್ರತಿಮೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಮೊದಲು ಆದಿವಾದಿಗಳಿಗೆ ಹಕ್ಕಪತ್ರ ನೀಡುವಂತೆ ಒತ್ತಾಯಿಸಿದರು.

  • ಏಸು ಕ್ರಿಸ್ತ ಪ್ರತಿಮೆ ವಿವಾದ- ಸರ್ಕಾರಕ್ಕೆ ವರದಿ ನೀಡೋ ಮುನ್ನವೇ ತಹಶೀಲ್ದಾರ್ ಎತ್ತಂಗಡಿ

    ಏಸು ಕ್ರಿಸ್ತ ಪ್ರತಿಮೆ ವಿವಾದ- ಸರ್ಕಾರಕ್ಕೆ ವರದಿ ನೀಡೋ ಮುನ್ನವೇ ತಹಶೀಲ್ದಾರ್ ಎತ್ತಂಗಡಿ

    – ವರ್ಷಾಂತ್ಯದಲ್ಲಿ ಡಿಕೆಶಿಗೆ ಶಾಕ್

    ರಾಮನಗರ: ಏಸು ಪ್ರತಿಮೆ ನಿರ್ಮಾಣ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದ್ದು, ಸರ್ಕಾರಕ್ಕೆ ವರದಿ ನೀಡುವ ಮುನ್ನವೇ ಕನಕಪುರ ತಹಶೀಲ್ದಾರ್ ಆನಂದಯ್ಯ ಅವರನ್ನು ಸ್ಥಳ ನಿಯೋಜನೆ ಮಾಡದೇ ಏಕಾಏಕಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಚಾಮರಾಜನಗರ ಜಿಲ್ಲೆಯ ಯಳಂದೂರು ತಹಶೀಲ್ದಾರ್ ಆಗಿದ್ದ ವರ್ಷ ಅವರನ್ನು ಕನಕಪುರ ತಹಶೀಲ್ದಾರ್ ಆಗಿ ನೇಮಕ ಮಾಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಉಮಾದೇವಿ ಸೋಮವಾರ ರಾತ್ರಿ ಆದೇಶ ಹೊರಡಿದ್ದಾರೆ.

    ಕನಕಪುರ ತಾಲೂಕಿನ ಹಾರೊಬೆಲೆ ಸಮೀಪದಲ್ಲಿನ ಕಪಾಲ ಬೆಟ್ಟದಲ್ಲಿನ 10 ಎಕರೆ ಸರ್ಕಾರಿ ಗೋಮಾಳದಲ್ಲಿ ಶಾಸಕ ಡಿ.ಕೆ ಶಿವಕುಮಾರ್ ಅವರು ಅತೀ ಎತ್ತರದ ಏಸು ಕ್ರಿಸ್ತ ಪ್ರತಿಮೆ ನಿರ್ಮಾಣಕ್ಕೆ ಡಿ.25 ರಂದು ಚಾಲನೆ ನೀಡಿದ್ದರು. ಇದಾದ ಬಳಿಕ ಡಿಕೆಶಿ ನಡೆ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಈ ಬಗ್ಗೆ ಕಂದಾಯ ಸಚಿವರು ತನಿಖೆಗೆ ಆದೇಶಿಸಿ, ವರದಿ ನೀಡುವಂತೆ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

    ತನಿಖೆಗೆ ಆದೇಶ ಮಾಡಿದ ಮೂರೇ ದಿನದಲ್ಲಿ ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಕಂದಾಯ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ಸಹಜವಾಗಿ ಅಲ್ಲಿನ ತಹಶೀಲ್ದಾರ್ ಅವರೇ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಬೇಕಿತ್ತು. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೇ, ಕನಕಪುರ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

    ತಹಶೀಲ್ದಾರ್ ಆನಂದಯ್ಯ ವರ್ಗಾವಣೆಯಲ್ಲಿ ಸಾಕಷ್ಟು ಅನುಮಾನಗಳು ಮೂಡಿದ್ದು, ಡಿಕೆಶಿ ಆಪ್ತರು ಎಂಬ ಕಾರಣಕ್ಕೆ ಹಲವಾರು ವರ್ಷಗಳಿಂದ ಕನಕಪುರದಲ್ಲೇ ಆನಂದಯ್ಯ ಕೆಲಸ ಮಾಡುತ್ತಿದ್ದಾರೆ. ಡಿಕೆಶಿ ಅಣತಿಯಂತೆ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ಹೀಗಾಗಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ ಎನ್ನಲಾಗಿದೆ. ಮತ್ತೊಂದು ಕಡೆ ಡಿಕೆಶಿ ಅವರ ಒತ್ತಡ ಹಾಗು ಪ್ರಭಾವದಿಂದಾಗಿ ತಹಶೀಲ್ದಾರ್ ವರ್ಗಾವಣೆ ಮೂಲಕ ಗೋಮಾಳದ ವರದಿಯನ್ನು ಇನ್ನಷ್ಟು ದಿನ ಮೂಂದೂಡುವ ತಂತ್ರವೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು- ಡಿಕೆಶಿ ಸಮರ್ಥನೆ, ಬಿಜೆಪಿ ಕಟು ಟೀಕೆ

    ಮತ್ತೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಕೆಲ ದಿನಗಳ ಹಿಂದಯಷ್ಟೇ ಜಿಲ್ಲೆಯಲ್ಲಿ ಕ್ಲೀನಿಂಗ್ ಕೆಲಸ ಆರಂಭಿಸಲಾಗುವುದು ಎಂದಿದ್ದರು. ಹಾಗಾಗಿ ತಹಶೀಲ್ದಾರ್ ಆನಂದಯ್ಯ ವರ್ಗಾವಣೆ ಆಗಿದ್ದಾರೆ ಎನ್ನಲಾಗಿದೆ. ಆದರೆ, ಕನಕಪುರ ತಾಲೂಕಿನ ಏಸು ಪ್ರತಿಮೆ ವಿವಾದದ ಬೆನ್ನಲ್ಲೇ ಅಲ್ಲಿನ ತಹಶೀಲ್ದಾರ್ ವರ್ಗಾವಣೆಯಾಗಿರುವುದು ಮಾತ್ರ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

  • ಡಿಕೆಶಿ, ಕಾಂಗ್ರೆಸ್ಸಿಗೆ ಲಾಭ ಮಾಡಿಕೊಡೋದು ಬೇಡ ಎಂದ ಯಡಿಯೂರಪ್ಪ

    ಡಿಕೆಶಿ, ಕಾಂಗ್ರೆಸ್ಸಿಗೆ ಲಾಭ ಮಾಡಿಕೊಡೋದು ಬೇಡ ಎಂದ ಯಡಿಯೂರಪ್ಪ

    ಬೆಂಗಳೂರು: ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಪೌರತ್ವ ಬಿಸಿಯಿಂದ ನರಳುತ್ತಿರುವ ಬಿಜೆಪಿಗೆ ಮತ್ತೊಂದು ತಲೆನೋವು ಮೈಮೇಲೆ ಎಳೆದುಕೊಳ್ಳಲು ತಯಾರಿಲ್ಲ. ಹಾಗಾಗಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಪ್ರತಿರೋಧ ಹೇಳಿಕೆಗಳನ್ನು ಕೊಡದೇ ಕಾನೂನಾತ್ಮಕ ಅಸ್ತ್ರ ಬಳಸಲು ಮುಂದಾಗ್ತಿದೆ.

    ಈ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಗೆ ಸಿಎಂ ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ. ಏಸು ಪ್ರತಿಮೆ ವಿರುದ್ಧ ಧ್ವನಿ ಎತ್ತಿ ರಾಡಿ ಮಾಡಿಕೊಳ್ಳಬೇಡಿ, ಸರ್ಕಾರಿ ಗೋಮಾಳ ಜಮೀನು ಕಾನೂನಾತ್ಮಕವಾಗಿ ಇದೆಯೋ ಇಲ್ಲವೋ ನೋಡೋಣ. ಈಗಾಗಲೇ ವರದಿ ಕೇಳಿದ್ದು, ಜಿಲ್ಲಾಧಿಕಾರಿ ವರದಿ ಕೊಟ್ಟ ಬಳಿಕ ಕಾನೂನಾತ್ಮಕವಾಗಿ ಕ್ರಮ ಕೈಗೊಂಡು ಸುಮ್ಮನೆ ಆಗೋಣ. ವಿಷಯ ದೊಡ್ಡದು ಮಾಡಿ ಡಿಕೆಶಿ ಹಾಗೂ ಕಾಂಗ್ರೆಸ್ ಲಾಭ ಮಾಡಿಕೊಡೋದು ಬೇಡ. ಈಗಾಗಲೇ ಪೌರತ್ವ ಕಾಯಿದೆ ಬಿಸಿ ಇದೆ. ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ವಿರೋಧ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆ ಇಡಬೇಕು ಅಂತಾ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಓದಿ: “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

    ಈ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ರಾಮನಗರ ಜಿಲ್ಲೆ ಕಪಾಲಿ ಬೆಟ್ಟದ ಜಮೀನು ವಿವಾದದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿಲ್ಲ, ಆ ಪ್ರಸ್ತಾವನೆಯೂ ಇವತ್ತಿನ ಸಂಪುಟದಲ್ಲಿ ಇರಲಿಲ್ಲ ಅಂತಾ ರಕ್ಷಣಾತ್ಮಕ ಹೇಳಿಕೆ ಕೊಟ್ಟರು.

  • “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

    “ಏಸು ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಲ್ಲ, ಕೃಷ್ಣನೂ ಒಂದೇ, ಏಸುವೂ ಒಂದೇ, ಆದರೆ..”

    – ವಿಧಾನ ಸೌಧದಲ್ಲಿ ಅಶೋಕ್, ಸಿಟಿ ರವಿ ಪ್ರತಿಕ್ರಿಯೆ
    – ಇಷ್ಟು ದಿನ ಸುಮ್ಮನೆ ಇದ್ದದ್ದನ್ನ ಕೆಣಕಿದ್ದು ಯಾಕೆ?

    ಬೆಂಗಳೂರು: ಏಸು ಪ್ರತಿಮೆ ನಿರ್ಮಾಣದ ಬಗ್ಗೆ ನಮ್ಮ ವಿರೋಧ ಇಲ್ಲ. ಡಿಕೆ ಶಿವಕುಮಾರ್ ಏನಾದ್ರೂ ಮಾಡಿಕೊಳ್ಳಲಿ. ಆದರೆ ಜಾಗ ಯಾವುದು ಎನ್ನುವುದನ್ನು ನೋಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ವಿಧಾನ ಸೌಧದಲ್ಲಿ ಕ್ಯಾಬಿನೆಟ್ ಸಭೆಗೂ ಮುನ್ನ ಮಾತನಾಡಿದ ಅವರು, ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಸಂಬಂಧಿಸಿದಂತೆ ಇವತ್ತು ಅಥವಾ ನಾಳೆ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬೆಟ್ಟ ಇದೆ, ಪಕ್ಕದಲ್ಲಿ ಡ್ಯಾಮ್ ಇದೆ. ಆದರೆ ಜಾಗ ಯಾವುದು ಎನ್ನುವುದನ್ನು ನೋಡಬೇಕು. ಇಷ್ಟು ದಿನ ಸುಮ್ಮನೆ ಇದ್ದದ್ದನ್ನ ಕೆಣಕಿದ್ದು ಯಾಕೆ ಎನ್ನುವುದು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

    ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಇಸ್ಕಾನ್‍ನವರು ಥೀಮ್ ಪಾರ್ಕ್ ಮಾಡಲು ಹೊರಟಾಗ ಡಿ.ಕೆ.ಶಿವಕುಮಾರ್ ಇಲ್ಲ ಸಲ್ಲದ ಕಿರುಕುಳ ನೀಡಿ ಆ ಯೋಜನೆ ನಿಲ್ಲುವ ಹಾಗೆ ಮಾಡಿದ್ದರು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮಗೆ ಕೃಷ್ಣನೂ ಒಂದೇ ಏಸುವೂ ಒಂದೇ. ಆದರೆ ಗೋಮಾಳ ಜಮೀನು ದುರುಪಯೋಗದ ಬಗ್ಗೆ ಈಗಾಗಲೇ ಕಂದಾಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

    ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ 114 ಅಡಿಯ ಏಕಶಿಲಾ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಿವಕುಮಾರ್ ಡಿ.25ರ ಕ್ರಿಸ್‍ಮಸ್ ದಿನದಂದು ಶಂಕುಸ್ಥಾಪನೆ ಮಾಡಿದ್ದಾರೆ. ಕ್ರಿಸ್ ಮಸ್ ಶುಭ ದಿನದ ಹಿನ್ನೆಲೆಯಲ್ಲಿ ಪ್ರತಿಮೆಗೆ ಸಿದ್ಧವಾಗಿರುವ ಕಲ್ಲಿಗೆ ಉಳಿ ಪೆಟ್ಟು ಹಾಕುವ ಮೂಲಕ ಶಿಲಾನ್ಯಾಸ ನೆರವೇರಿಸಿದ್ದರು.

    ಅದರಲ್ಲಿ 13 ಅಡಿ ಮೆಟ್ಟಿಲುಗಳು ಇದ್ದು, ಅದರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಹಾರೋಬೆಲೆ ಗ್ರಾಮದಲ್ಲಿ ಶೇಕಡಾ 99 ರಷ್ಟು ಮಂದಿ ಕ್ರೈಸ್ತ ಸಮುದಾಯದವರಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಭೂಮಿ ನೀಡಿದ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರಿಗೆ ಕ್ರಿಶ್ಚಿಯನ್ನರು ಕೃತಜ್ಞತೆ ಸಲ್ಲಿಸಿದ್ದರು.

    ಬಿಜೆಪಿ ವಿರೋಧ: ಇತ್ತ ಏಸು ಪ್ರತಿಮೆ ಸ್ಥಾಪನೆ ಬಗ್ಗೆ ಬಿಜೆಪಿ ಕಟು ಟೀಕೆ ಮಾಡಿದೆ. ಯಾವುದೋ ಆಸೆಗಾಗಿ ತಿಹಾರ್ ಜೈಲಿನಲ್ಲಿದ್ದು ಬಂದಿರೋ ಡಿಕೆಶಿ, ಇಟಲಿಯಮ್ಮನನ್ನು ಪ್ರಸನ್ನಗೊಳಿಸಲು ಇಂತಹ ಕೆಲಸ ಮಾಡಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್‍ಕುಮಾರ್ ಹೆಗ್ಡೆ ಟೀಕಿಸಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಕೆಂಪೇಗೌಡರ ಅನುಯಾಯಿ ಅಂತಾರೆ. ನಿರ್ಮಾಲಾನಂದ ಸ್ವಾಮಿಗಳ ಭಕ್ತ ಅಂತಾರೆ. ಯೇಸು ಪ್ರತಿಮೆ ಮಾಡೋವಾಗ ಕೇಂಪೆಗೌಡರ ನೆನಪು ಯಾಕೆ ಆಗಿಲ್ಲ? ಸ್ವಾಮೀಜಿಗಳ ನೆನಪು ಯಾಕೆ ಆಗಿಲ್ಲ. ಡಿಕೆ ಶಿವಕುಮಾರ್ ಹಿಂದೂ ಸಮಾಜದ ದೇವರ ಬಗ್ಗೆಯೂ ಚಿಂತಿಸಲಿ ಅಂತ ಮಂಗಳೂರಲ್ಲಿ ಸಚಿವ ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದರು.