Tag: ಏರ್ ಶೋ

  • ಸಿಂಗಾಪುರ ಏರ್ ಶೋನಲ್ಲಿ ಭಾಗಿಯಾಗಲಿದೆ ತೇಜಸ್ ಫೈಟರ್ ಜೆಟ್

    ಸಿಂಗಾಪುರ ಏರ್ ಶೋನಲ್ಲಿ ಭಾಗಿಯಾಗಲಿದೆ ತೇಜಸ್ ಫೈಟರ್ ಜೆಟ್

    ನವದೆಹಲಿ: ಸಿಂಗಾಪುರದಲ್ಲಿ ನಡೆಯಲಿರುವ ಏರ್ ಶೋ-೨೦೨೨ರಲ್ಲಿ ಮೇಡ್ ಇನ್ ಇಂಡಿಯಾ ತೇಜಸ್ ಫೈಟರ್ ಜೆಟ್ ಪ್ರದರ್ಶನಗೊಳ್ಳಲಿದೆ.

    ಫೆಬ್ರವರಿ ೧೫ ರಿಂದ ೧೮ರ ವರೆಗೆ ನಡೆಯಲಿದರುವ ಏರ್ ಶೋನಲ್ಲಿ ಭಾಗವಹಿಸಲು ೪೪ ಭಾರತೀಯ ವಾಯುಪಡೆ ಸಿಬ್ಬಂದಿ ಈಗಾಗಲೇ ಸಿಂಗಾಪುರದ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ.

    ಸಿಂಗಾಪುರದಲ್ಲಿ ಪ್ರತೀ ೨ ವರ್ಷಗಳಿಗೊಮ್ಮೆ ಏರ್ ಶೋ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಜಾಗತಿಕವಾಗಿ ವಾಯುಯಾನದ ಉತ್ಪನ್ನಗಳನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಈ ಬಾರಿ ಪ್ರಪಂಚದ ವಿವಿಧೆಡೆ ತಯಾರಾದ ವಾಯುಯಾನ ಉತ್ಪನ್ನಗಳೊಂದಿಗೆ ಮೇಡ್ ಇನ್ ಇಂಡಿಯಾ ತೇಜಸ್ ಕೂಡಾ ಪ್ರದರ್ಶನವಾಗಲಿದೆ. ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿತು ಪೈಲಟ್ ರಹಿತ ಹೆಲಿಕಾಪ್ಟರ್

    ತೇಜಸ್ ಫೈಟರ್ ಜೆಟ್ ಅನ್ನು ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಹೆಚ್‌ಎಎಲ್) ಭಾರತೀಯ ವಾಯುಪಡೆ ಹಾಗೂ ನೌಕಾಪಡೆಗಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನೂ ಓದಿ: IPL ಹರಾಜಿನಲ್ಲಿ ಅನ್‍ಸೋಲ್ಡ್ ಆದ ಸ್ಟಾರ್ ಆಟಗಾರರು

    ಭಾರತ ಈ ಹಿಂದೆ ಮಲೇಷ್ಯಾದ ಐಎಲ್‌ಎಮ್‌ಎ-೨೦೧೯ ಹಾಗೂ ದುಬೈ ಏರ್ ಶೋ-೨೦೨೧ರಲ್ಲಿ ಭಾಗವಹಿಸಿ ಸ್ವದೇಶೀ ವಿಮಾನಗಳನ್ನು ಪ್ರದರ್ಶಿಸಿದ್ದವು.

  • ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ – ಇನ್ನೆರಡು ದಿನ ನಡೆಯಲಿದೆ ವೈಮಾನಿಕ ಪ್ರದರ್ಶನ

    ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ – ಇನ್ನೆರಡು ದಿನ ನಡೆಯಲಿದೆ ವೈಮಾನಿಕ ಪ್ರದರ್ಶನ

    ಬೆಂಗಳೂರು: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ. ಶರವೇಗದಲ್ಲಿ ಮುನ್ನುಗ್ಗಿ ಚಮತ್ಕಾರ, ಸಾಹಸ. ನೀಲಿ ಆಕಾಶದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್ ಗಳ ರಣ ರೋಚಕ, ಮೋಹಕ ಚಿತ್ತಾರ. ಮೊದಲ ದಿನದ ಏರ್ ಶೋ ಅಧ್ಬುತವಾಗಿತ್ತು.

    ಹೌದು. ವಿಶ್ವದ ಮೊದಲ ಹೈಬ್ರೀಡ್ ಏರ್ ಶೋಗೆ ಬೆಂಗಳೂರು ಸಾಕ್ಷಿ ಆಗಿದ್ದು, ಇಂದು ಮತ್ತು ನಾಳೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಭಾರತೀಯ ವಾಯುಸೇನೆ ಹಾಗೂ ಏರೋ ಇಂಡಿಯಾ 2021 ಧ್ವಜಹೊತ್ತ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಗಳು  ಏರ್ ಶೋಗೆ ಚಾಲನೆ ನೀಡಿದವು. ಸೂರ್ಯಕಿರಣ್ ಹಾಗೂ ಸಾರಂಗ್ ಜಂಟಿ ಪ್ರದರ್ಶನ ಅಮೋಘವಾಗಿತ್ತು. 4 ಸಾರಂಗ್ ಹೆಲಿಕಾಪ್ಟರ್ ಗಳು, 9 ಸೂರ್ಯಕಿರಣ್ ಯುದ್ಧ ವಿಮಾನಗಳು ಬಾನಂಗಳದಲ್ಲಿ ಡೇಲ್ಟಾ ಫಾರ್ಮೇಷನ್‍ನಲ್ಲಿ ಹಾರಾಟ ನಡೆಸಿದವು.

    ಸಾರಂಗ್ ಹೆಲಿಕಾಪ್ಟರ್ ಗಳು ವಜ್ರಾಕೃತಿ ರಚಿಸುತ್ತಾ ಡಾಗ್ ಫೈಟ್ ಮಾಡ್ತಾ ಮೈ ಜುಮ್ಮೆನಿಸುವ ಸಾಹಸದ ಪ್ರದರ್ಶನ ನಡೆಸಿದವು. ಇನ್ನೂ ಇದೇ ಮೊದಲ ಬಾರಿ ಅಮೆರಿಕಾದ ಬಿ1ಬಿ ಸೂಪರ್ ಸಾನಿಕ್ ಬಾಂಬರ್ ವಿಮಾನದ ಹಾರಾಟ ಸಖತ್ ಥ್ರಿಲ್ ನೀಡ್ತು. 28 ಗಂಟೆಗಳಲ್ಲಿ ಅಮೆರಿಕದಿಂದ ಭಾರತಕ್ಕೆ ತಲುಪಿದ ಬಿ1ಬಿ ಸೂಪರ್ ಸಾನಿಕ್ ಬಾಂಬರ್ ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಎಲ್ಲರ ಅಟ್ರಾಕ್ಷನ್ ಆಗಿತ್ತು.

    ಈ ಬಾರಿ ಸುಖೋಯ್, ರಫೆಲ್, ತೇಜಸ್, ಸೂರ್ಯಕಿರಣ್, ಸಾರಂಗ್, ಜಾಗ್ವಾರ್, ಮಿಗ್ 2000, ಎಲ್ ಸಿ ಹೆಚ್ ಸೇರಿದಂತೆ ಹಲವು ಹೆಲಿಕಾಪ್ಟರ್, ವಿಮಾನಗಳು ಸಾಹಸದ ಪ್ರದರ್ಶನ ನೀಡಿದವು.

  • ರಾಜ್ಯದಲ್ಲಿ ಹೂಡಿಕೆ ಸಹಭಾಗಿತ್ವಕ್ಕೆ ಅವಕಾಶ- ಅಮೆರಿಕ ಉತ್ಸುಕ

    ರಾಜ್ಯದಲ್ಲಿ ಹೂಡಿಕೆ ಸಹಭಾಗಿತ್ವಕ್ಕೆ ಅವಕಾಶ- ಅಮೆರಿಕ ಉತ್ಸುಕ

    – ಡಿಸಿಎಂ ಜೊತೆ ಅಮೆರಿಕ ಕಾನ್ಸುಲ್ ಜನರಲ್ ಚರ್ಚೆ

    ಬೆಂಗಳೂರು: ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲ್ ಜನರಲ್ ಜುಡಿತ್ ರಾವಿನ್ ಅವರು ಮಾಹಿತಿ ತಂತ್ರಜ್ಞಾನ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ಹಾಗೂ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಪಡೆದರು.

    ಸೋಮವಾರ ಸಂಜೆ ಭೇಟಿ ಮಾಡಿದ ಅವರು, ಮಾಹಿತಿ ತಂತ್ರಜ್ಞಾನ ಉದ್ಯಮ ಉತ್ತೇಜಿಸಲು ಜಾರಿಗೊಳಿಸಲಾಗಿರುವ ಪ್ರೋತ್ಸಾಹಕ ಕ್ರಮಗಳು, ಭೂಸುಧಾರಣಾ ಕಾನೂನು ಸೇರಿದಂತೆ ಹಲವು ವಿಷಯಗಳ ಕುರಿತು ಈ ಸಂದರ್ಭದಲ್ಲಿ ಪವರ್ ಪಾಯಿಂಟ್ ವಿಷಯ ಪ್ರಸ್ತುತಿ ಮಾಡಲಾಯಿತು.

    ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಎಸ್‍ಡಿಎಂ ಪರ್ಯಾವರಣಗಳ ಬಗ್ಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಪ್ರಸ್ತುತಪಡಿಸಿದರು. ರಾಜ್ಯದಲ್ಲಿರುವ ಪರಿಪೋಷಕಗಳು, ಆಕ್ಸಲರೇಟರ್ ಗಳು, ನವೋದ್ಯಮಗಳಲ್ಲಿ ಹೂಡಿಕೆ, ಕೌಶಲ್ಯ ಸುಧಾರಣೆ ಹಾಗೂ ಪರಸ್ಪರ ಸಹಭಾಗಿತ್ವಕ್ಕೆ ಇರುವ ಅವಕಾಶಗಳ ಕುರಿತು ರಾಜ್ಯ ನವೋದ್ಯಮಗಳ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಪವರ್ ಪಾಯಿಂಟ್ ಕುರಿತು ತಿಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ ಅವರು, ರಾಜ್ಯದಲ್ಲಿರುವ ಅಮೆರಿಕದ ಕಂಪನಿಗಳು ಉತ್ತಮವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇನ್ನೂ ಹೆಚ್ಚಿನ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಅವಕಾಶಗಳಿದ್ದು, ರಾಜ್ಯ ಸರ್ಕಾರದ ಸಹಭಾಗಿತ್ವ ಸೇರಿದಂತೆ ಯಾವುದೇ ರೀತಿಯಲ್ಲಿ ಕೈಜೋಡಿಸಲು ಸಿದ್ಧವಿದೆ ಎಂದು ತಿಳಿಸಿದರು.

    ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿನ ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್‍ಎಂಎಸ್), ವಿಶ್ವವಿದ್ಯಾಲಯ ಏಕೀಕೃತ ನಿರ್ವಹಣಾ ವ್ಯವಸ್ಥೆ, ಡಿಪ್ಲೊಮಾ ಪಠ್ಯಕ್ರಮದಲ್ಲಿ ಮಾಡಿರುವ ಬದಲಾವಣೆಗಳ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ತಿಳಿಸಿದರು.

    ಇದಕ್ಕೂ ಮುನ್ನ ಅಮೆರಿಕಾ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಈ ವೇಳೆ ಸರ್ಕಾರದ ಯೋಜನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜುಡಿತ್ ರಾವಿನ್ ಅವರು, ಮೆಸಾಚ್ಯುಯೇಟ್ಸ್ ತಾಂತ್ರಿಕ ವಿಶ್ವವಿದ್ಯಾಲಯ (ಎಂಐಟಿ)ದ ನೇತೃತ್ವದಲ್ಲಿ ಸಹಭಾಗಿತ್ವ ಸೇರಿದಂತೆ ಹಲವು ರೀತಿಗಳಲ್ಲಿ ಇಲ್ಲಿನ ಯೋಜನೆಗಳಲ್ಲಿ ಭಾಗವಹಿಸುವ ಇಂಗಿತ ವ್ಯಕ್ತಪಡಿಸಿದರು. ಕರ್ನಾಟಕದ ಜೊತೆಗೆ ಅಮೆರಿಕಾ ಭಾಂದವ್ಯ ಚೆನ್ನಾಗಿದೆ. ಅಮೆರಿಕಾದ ಸಾಕಷ್ಟು ನಾಗರಿಕರು ಇಲ್ಲಿ ನೆಲೆಸಿದ್ದಾರೆ. ವಿವಿಧ ಉದ್ಯಮಗಳಲ್ಲಿ ಅಮೆರಿಕಾ ಸಹಭಾಗಿತ್ವ ಇದೆ. ಹೀಗಾಗಿ ಏರ್ ಶೋ ನಮ್ಮ ಪಾಲಿಗೆ ಮಹತ್ವದ್ದು. ಏರ್ ಶೋ ಆಯೋಜನೆಗೆ ಸರ್ಕಾರ ಚೆನ್ನಾಗಿ ವ್ಯವಸ್ಥೆ ಮಾಡಿದೆ. ಹೀಗಾಗಿ ತುಂಬಾ ನಿರೀಕ್ಷೆಯಲ್ಲಿದ್ದೇವೆ ಜುಡಿತ್ ರಾವಿನ್ ತಿಳಿಸಿದರು.

    ಅಮೆರಿಕಾ ರಾಯಭಾರಿ ಕಚೇರಿಯ ಪ್ರಭಾರಿ ರಾಯಭಾರಿ ಡೊನಾಲ್ಡ್ ಹೆಫ್ಲಿನ್ ಮಾತನಾಡಿ, ಕೊರೊನಾ ನಿರ್ಭಂದಗಳ ನಡುವೆ ಕರ್ನಾಟಕ ಸರ್ಕಾರ ಏರ್ ಶೋ ಗೆ ಅಚ್ಚುಕಟ್ಟಾಗಿ ಏರ್ಪಾಡು ಮಾಡಿದೆ, ಖುಷಿಯಾಗಿದೆ. ಅಮೆರಿಕಾದ ದೊಡ್ಡ ನಿಯೋಗವೇ ಈ ಶೋನಲ್ಲಿ ಪಾಲ್ಗೊಳ್ಳಲಿದೆ. ತುಂಬಾ ಉಪಯುಕ್ತ ಮತ್ತು ಯಶಸ್ವಿಯಾಗಲಿದೆ ಎಂದರು.

    ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಮಣ ರೆಡ್ಡಿ, ಅಮೆರಿಕ ಕಾನ್ಸುಲ್ ಜನರಲ್ ಕಚೇರಿಯ ರಾಜಕೀಯ, ಆರ್ಥಿಕ ವಿಷಯ ತಜ್ಞ ಎಚ್.ಭರತ್ ಕುಮಾರ್ ಇದ್ದರು.

  • ಕೆಐಎಬಿ ಏರ್‌ಪೋರ್ಟ್ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ..!

    ಕೆಐಎಬಿ ಏರ್‌ಪೋರ್ಟ್ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ..!

    – ಮಾಧ್ಯಮ ಪ್ರಕಟಣೆ ಹೊರಡಿಸಿದ ಕೆಐಎಬಿ

    ಬೆಂಗಳೂರು/ಚಿಕ್ಕಬಳ್ಳಾಪುರ: ಏರೋ ಇಂಡಿಯಾ ಏರ್ ಶೋ 2021 ಹಿನ್ನೆಲೆಯಲ್ಲಿ ಬೆಂಗಳೂರು ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ ಆಗಲಿದೆ ಎಂದು ಕೆಐಎಬಿ ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದೆ.

    ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ ಫೆಬ್ರವರಿ 5ರವರೆಗೆ ಏರ್ ಶೋ ನಡೆಯಲಿದೆ. ಹೀಗಾಗಿ ಏರ್ ಶೋ ಬೆಂಬಲಿಸುವ ಹಾಗೂ ಲೋಹದ ಹಕ್ಕಿಗಳ ಪೂರ್ವಾಭ್ಯಾಸ ತಾಲೀಮಿಗೆ ಸಹಕಾರ ನೀಡುವ ಉದ್ದೇಶದಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ಬದಲಾವಣೆ ಆಗಲಿದೆ. ಜನವರಿ 30 ಮತ್ತು 31 ರಂದು ಮಧ್ಯಾಹ್ನ 1.30 ರಿಂದ ಸಂಜೆ 4 ರವರೆಗೆ ರನ್ ವೇ ಬಂದ್ ಆಗಲಿದ್ದು ಈ ಸಮಯದಲ್ಲಿ ವಿಮಾನಗಳ ಹಾರಾಟ ಇರುವುದಿಲ್ಲ.

    ಫೆಬ್ರವರಿ 1ರ ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5 ರವರೆಗೂ ವಿಮಾನ ಹಾರಾಟ ಇರುವುದಿಲ್ಲ. ಫೆಬ್ರವರಿ 2 ಮತ್ತು 3 ರಂದು ಬೆಳಗ್ಗೆ 9 ರಿಂದ 12 ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ವಿಮಾನಗಳ ಹಾರಾಟ ಸಂಪೂರ್ಣ ಬಂದ್ ಆಗಲಿದೆ. ಫೆಬ್ರವರಿ 4 ಮತ್ತು 5 ರಂದು ಸಹ ಬೆಳಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಲೋಹದ ಹಕ್ಕಿಗಳ ಹಾರಾಟ ಇರುವುದಿಲ್ಲ. ಏರೋ ಇಂಡಿಯಾ 2021 ಪೂರ್ವಭ್ಯಾಸ ಹಾಗೂ ಪ್ರದರ್ಶನಕ್ಕೆ ಬೆಂಬಲ ನೀಡುವ ಸಲುವಾಗಿ ಕೆಐಎಬಿ ಈ ನಿರ್ಧಾರ ಕೈಗೊಂಡಿದೆ.

  • ಬೆಂಗಳೂರಲ್ಲೇ ಫೆಬ್ರವರಿ 3 ರಿಂದ 7ರವರೆಗೆ ನಡೆಯಲಿದೆ ಏರ್ ಶೋ

    ಬೆಂಗಳೂರಲ್ಲೇ ಫೆಬ್ರವರಿ 3 ರಿಂದ 7ರವರೆಗೆ ನಡೆಯಲಿದೆ ಏರ್ ಶೋ

    – ಪೂರ್ವಭಾವಿ ಸಭೆ ನಡೆಸಿದ ರಾಜನಾಥ್ ಸಿಂಗ್

    ನವದೆಹಲಿ: ಏಷ್ಯಾದ ಅತಿ ದೊಡ್ಡ ಏರ್ ಶೋ ‘ಏರೋ ಇಂಡಿಯಾ’ ಬೆಂಗಳೂರಿನಲ್ಲೇ 2021ರ ಫೆಬ್ರವರಿ 3 ರಿಂದ 7ರವರೆಗೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ‘ಏರೋ ಇಂಡಿಯಾ’ ಏರ್ ಶೋ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಪೂರ್ವಭಾವಿ ಸಭೆ ನಡೆಸಿದ್ದು, ಪ್ರತಿ ವರ್ಷದಂತೆ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿವೆ.

    ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಪೂರ್ಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಚಿವರು ಸಭೆಯಲ್ಲಿ ಸೂಚಿಸಿದ್ದಾರೆ. ಈಗಾಗಲೇ ಖ್ಯಾತ ವೈಮಾನಿಕ ಸಂಸ್ಥೆಗಳು ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳಲು ಉತ್ಸುಕತೆ ತೋರಿವೆ. ಹಲವು ರಾಷ್ಟ್ರಗಳ ಪ್ರತಿನಿಧಿಗಳು, ರಕ್ಷಣಾ ಕ್ಷೇತ್ರದ ಪ್ರಮುಖ ಸಂಸ್ಥೆಗಳು ಹಾಗೂ ಹೂಡಿಕೆದಾರರು ಏರ್ ಶೋ ನಲ್ಲಿ ಭಾಗಿಯಾಗಲಿದ್ದಾರೆ.

    1996ರಲ್ಲಿ ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಬೆಂಗಳೂರಿನಲ್ಲಿ ಶುರುವಾಗಿತ್ತು. ಅಂದಿನಿಂದಲೂ ಏರ್ ಶೋ ಬೆಂಗಳೂರಿನಲ್ಲೇ ನಡೆಯುತ್ತಿದೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಏರ್ ಶೋ ನಡೆಯುತ್ತದೆ. ಈ ವೇಳೆ ಲೋಹದ ಹಕ್ಕಿಗಳನ್ನು ನೋಡೋದೆ ಚೆಂದ. ಇದೀಗ ಇದರ 13ನೇ ಆವೃತ್ತಿ ನಡೆಯಲಿದೆ. ಕೋವಿಡ್-19 ಹರಡುವಿಕೆ ತಡೆಯಲು ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗುವುದು. ನಿಗದಿಯಂತೆಯೇ ಏರ್ ಶೋ ಕಾರ್ಯಕ್ರಮ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ಫೆಬ್ರವರಿಯಲ್ಲಿ ಏರ್ ಶೋ ವೇಳೆ ಭಾರೀ ಅವಘಡ ಸಂಭವಿಸಿತ್ತು. ಸ್ಥಳದಲ್ಲಿದ್ದ ಒಣ ಹುಲ್ಲಿನಿಂದಾಗಿ ಎಲ್ಲೆಡೆ ಬೆಂಕಿ ವ್ಯಾಪಿಸಿದ್ದು, ಸುಮಾರು 32 ಎಕರೆ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಹರಡಿತ್ತು. ಪರಿಣಾಮ ಪಾರ್ಕ್ ಮಾಡಿದ್ದ 200 ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಕಾರು ನಿಲ್ಲಿಸಿದ್ದ ಸ್ಥಳ ಖಾಸಗಿ ಪಾರ್ಕಿಂಗ್ ಪ್ರದೇಶವಾಗಿದ್ದು, ಘಟನೆ ಸಂಬಂಧ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯ ತೀವ್ರತೆಯ ವಿಡಿಯೋ, ಫೋಟೋ ತೆಗೆದು ಪೋಸ್ಟ್ ಮಾಡಿದ್ದರು.

  • ಏರ್ ಶೋ ವೇಳೆ ಕಾರು ಸುಟ್ಟ ಪ್ರಕರಣ: ಮಾಲೀಕರಿಗೆ ಚೆಕ್ ವಿತರಣೆ

    ಏರ್ ಶೋ ವೇಳೆ ಕಾರು ಸುಟ್ಟ ಪ್ರಕರಣ: ಮಾಲೀಕರಿಗೆ ಚೆಕ್ ವಿತರಣೆ

    ಬೆಂಗಳೂರು: ಏರ್ ಶೋ ವೇಳೆ ಕಾರು ಸುಟ್ಟು ಹೋಗಿರುವ ಮಾಲೀಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ಮಾಡೋದಾಗಿ ಗೃಹ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

    ಇನ್ಶ್ಯೂರೆನ್ಸ್ ಇಲ್ಲದವರಿಗೆ ಪರಿಹಾರ ನೀಡುವುದಕ್ಕೆ ಸಿಎಂ ಕುಮಾರಸ್ವಾಮಿ ಒಪ್ಪಿದ್ದಾರೆ ಎಂದು ಮಂಗಳವಾರ ವಿಧಾನಸೌಧದಲ್ಲಿ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡಿರುವ ಕೆಲವರಿಗೆ ಪರಿಹಾರದ ಚೆಕ್ ವಿತರಿಸಿ ಮಾತಾಡಿದ್ದಾರೆ.

    ಸುಬೋದಿಪ್ ಹಾಜ್ರಾ, ರಮಾಕಾಂತ್ ಹಾಗೂ ಗಿರಿಜಮ್ಮ ಎನ್ನುವರಿಗೆ ಇನ್ಶ್ಯೂರೆನ್ಸ್ ಚೆಕ್ ವಿತರಿಸಿದರು. ಬೆಂಗಳೂರಿನ ಯಲಹಂಕದಲ್ಲಿ ಏರ್ ಶೋ ನಡೆಯುವ ವೇಳೆ 277 ಕಾರುಗಳು ಸುಟ್ಟು ಹೋಗಿದ್ದವು.

    251 ಕಾರುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇವುಗಳಲ್ಲಿ 60 ವಾಹನಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ. 26 ಕಾರುಗಳು ಅರ್ಧ ಸುಟ್ಟು ಹೋಗಿವೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ತಂದು ಭದ್ರತೆ ನೀಡದೇ ಇದ್ರೆ ಏನು ಪ್ರಯೋಜನ: ಕರಂದ್ಲಾಜೆ ಪ್ರಶ್ನೆ

    ಏರ್ ಶೋ ತಂದು ಭದ್ರತೆ ನೀಡದೇ ಇದ್ರೆ ಏನು ಪ್ರಯೋಜನ: ಕರಂದ್ಲಾಜೆ ಪ್ರಶ್ನೆ

    ಚಿಕ್ಕಮಗಳೂರು: ಏರ್ ಶೋ ಬೇರೆ ಕಡೆ ಶಿಫ್ಟ್ ಆಗುತ್ತೆ ಅಂದಾಗ ಸಿಎಂ ಮತ್ತು ನಾವೆಲ್ಲರೂ ಒಗ್ಗೂಡಿ ಬೆಂಗಳೂರಿಗೆ ತಂದಿದ್ದೇವೆ. ಶೋ ಆಯೋಜಸಿದ ಬಳಿಕ ಅದಕ್ಕೆ ಸೂಕ್ತ ಭದ್ರತೆ ನೀಡದೇ ಇದ್ದರೆ ಏನು ಪ್ರಯೋಜನ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ.

    ಅಗ್ನಿ ಅವಘಡ ಸಂಭವಿಸಿದ ಸ್ಥಳದಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಅಗ್ನಿಶಾಮಕದ ವಾಹನಗಳು ಮತ್ತು ಪೊಲೀಸರು ಇರಲಿಲ್ಲ. ದಿನೇಶ್ ಗುಂಡೂರಾವ್ ಅವರಿಗೆ ಬುದ್ಧಿ ಭ್ರಮಣೆಯಾಗಿದ್ದು, 300 ಕಾರುಗಳು ಸುಟ್ಟು ಹೋದಾಗ ಎಲ್ಲಿ ಹೋಗಿದ್ದರು? ಗುಂಡೂರಾವ್ ಸಹ ಒಂದು ಪಕ್ಷದ ಅಧ್ಯಕ್ಷರಾಗಿದ್ದು, ತಮ್ಮ ವೈಫಲ್ಯಗಳನ್ನು ಮರೆಮಾಚಲು ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಗುಡುಗಿದರು.

    ಮಂತ್ರಿಗಳು ಸರ್ಕಾರದ ವೈಫಲ್ಯವನ್ನ ಬಿಜೆಪಿ ತಲೆಗೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಳು, ಅಧಿಕಾರಿಗಳು ರಾಜ್ಯದಲ್ಲಿ ಯಾರು ಕೆಲಸ ಮಾಡುತ್ತಿಲ್ಲ. ಆರು-ಹತ್ತು ತಿಂಗಳಿಗೊಮ್ಮೆ ಅಧಿಕಾರಿಗಳನ್ನ ವರ್ಗಾವಣೆ ಮಾಡಿ, ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ. ವರ್ಗಾವಣೆಯಾದ ಏರ್ ಶೋನ ಬೆಂಗಳೂರಿಗೆ ತಂದ್ರೆ ಸರ್ಕಾರದ ಬೇಜವಾಬ್ದಾರಿಯಿಂದ ಕರ್ನಾಟಕಕ್ಕೆ ಅವಮಾನವಾಗಿದೆ. ಮೊದಲಿಗೆ ಒಂದು ಕಾರಿಗೆ ಬೆಂಕಿ ಹತ್ತಿಕೊಂಡು ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಅವರ ಕಣ್ಣಿಗೆ ಅದು ಕಾಣಿಸಿಲ್ವಾ? ಎಂದು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದರು.

    https://www.youtube.com/watch?v=BUA3pczdc3w

    https://twitter.com/ShobhaBJP/status/1099924539759194112

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೋಭಾ ಕರಂದ್ಲಾಜೆಗೆ ಬುದ್ಧಿಭ್ರಮಣೆಯಾಗಿದೆ: ದಿನೇಶ್ ಗುಂಡೂರಾವ್ ತಿರುಗೇಟು

    ಶೋಭಾ ಕರಂದ್ಲಾಜೆಗೆ ಬುದ್ಧಿಭ್ರಮಣೆಯಾಗಿದೆ: ದಿನೇಶ್ ಗುಂಡೂರಾವ್ ತಿರುಗೇಟು

    ಮಂಗಳೂರು: ಪುಲ್ವಾಮ ದಾಳಿಗೂ, ಏರ್ ಶೋ ದುರಂತಕ್ಕೂ ಲಿಂಕ್ ಮಾಡುವ ಮಟ್ಟಿಗೆ ಸಂಸದೆ ಶೋಭಾ ಕರಂದ್ಲಾಜೆಗೆ ಬುದ್ಧಿಭ್ರಮಣೆಯಾಗಿದೆ. ಯಾವಾಗ ಏನು ಮಾತನಾಡಬೇಕು ಅಂತ ಅವರಿಗೆ ಗೊತ್ತಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

    ಏರ್ ಶೋನಲ್ಲಿ ಬೆಂಕಿ ಅನಾಹುತಕ್ಕೆ ರಾಜ್ಯ ಸರ್ಕಾರದ ವೈಫಲ್ಯತೆ ಕಾರಣ ಎಂದು ಶೋಭಾ ಕರಂದ್ಲಾಜೆ ಟೀಕೆಗೆ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮ ದಾಳಿಯ ವೈಫಲ್ಯದ ಬಗ್ಗೆ ಶೋಭಾ ಮಾತಾಡಲಿ. ಇಂಟೆಲಿಜೆನ್ಸ್ ವರದಿ ಬಗ್ಗೆ ಮೋದಿ ಸುಮ್ಮನಿದ್ದಾರೇಕೆ ಅನ್ನುವುದನ್ನು ಹೇಳಲಿ. ಅದನ್ನ ಬಿಟ್ಟು ಪುಲ್ವಾಮ ದಾಳಿಗೂ, ಏರ್ ಶೋ ದುರಂತಕ್ಕೂ ಲಿಂಕ್ ಮಾಡುವ ಮಟ್ಟಿಗೆ ಶೋಭಾ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ಏರ್ ಶೋ ಬೆಂಕಿ ಅವಘಡಕ್ಕೂ ಪುಲ್ವಾಮಾ ದಾಳಿಗೂ ಲಿಂಕ್ ಇದೆಯಾ – ಘಟನೆಯನ್ನು ರಾಜಕೀಯಗೊಳಿಸಿದ್ರಾ ಕರಂದ್ಲಾಜೆ?

    ಶೋಭಾ ಏನು ಮಾತಾಡುತ್ತಾರೆಂದು ಅವರಿಗೇ ಗೊತ್ತಿಲ್ಲ. ಕೇಂದ್ರದ ವಾಯುನೆಲೆ ಸುಪರ್ದಿಯಲ್ಲಿ ಯಲಹಂಕದಲ್ಲಿ ಏರ್ ಶೋ ನಡೆಯುತ್ತಿದೆ. ಏನಾದರೂ ವಿಫಲತೆ ಆಗಿದ್ದರೆ ರಕ್ಷಣಾ ಇಲಾಖೆ ವೈಫಲ್ಯ ಅನ್ನಬೇಕಷ್ಟೇ. ಇಡೀ ಕಾರ್ಯಕ್ರಮಕ್ಕೆ ಸಹಕಾರ ಕೊಡುವುದಷ್ಟೆ ರಾಜ್ಯ ಸರ್ಕಾರದ ಕೆಲಸ. ಸುಮ್ಮನೆ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಶೋಭಾ ಸಂಸದರಾಗಿ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಹೇಳಲಿ. ಅವರು ಏನೂ ಕೆಲಸ ಮಾಡದೇ ಈ ರೀತಿ ಹೇಳಿಕೆಯಿಂದ ಪ್ರಚಾರ ಗಿಟ್ಟಿಸಿಕೊಳ್ತಾರೆ ಎಂದು ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಅಗ್ನಿ ಅವಘಡ: ಕಾರಿನ ಓವರ್ ಹೀಟ್ ಸೈಲೆನ್ಸರ್‌ನಿಂದ ಬೆಂಕಿ?

    ಏರ್ ಶೋ ಅಗ್ನಿ ಅವಘಡ: ಕಾರಿನ ಓವರ್ ಹೀಟ್ ಸೈಲೆನ್ಸರ್‌ನಿಂದ ಬೆಂಕಿ?

    ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಓವರ್ ಹೀಟ್ ಆಗಿದ್ದ ಕಾರಿನ ಸೈಲೆನ್ಸರ್ ಕಾರಣ ಎಂಬ ಶಂಕೆ ವ್ಯಕ್ತವಾಗಿರುವುದಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪರಿಶೀಲನೆ ವೇಳೆ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅವಘಡ ನಡೆದ ಸ್ಥಳದಲ್ಲಿ ಇಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ಪರಿಶೀಲನೆ ನಡೆಸಿದರು. ಈ ವೇಳೆ ನಿರ್ಮಲಾ ಸೀತಾರಾಮನ್ ಅವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ಪ್ರದರ್ಶನದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಸೈಲೆನ್ಸರ್ ನಿಂದ ಬೆಂಕಿಯ ಜ್ವಾಲೆ ಆರಂಭವಾಗಿದೆ ಎಂಬ ಬಗ್ಗೆ ವಿವರಣೆ ನೀಡಿದ್ದಾಗಿ ರಕ್ಷಣಾ ವಕ್ತಾರರ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

    ಬೆಂಕಿ ಕಾಣಿಸಿಕೊಂಡ ವೇಳೆ ವೇಗದ ಗಾಳಿಯಿಂದ ಕೆಲವೇ ಕ್ಷಣಗಳಲ್ಲಿ ಅಗ್ನಿಯ ಜ್ವಾಲೆ ಹೆಚ್ಚಾಗಿ ಇಡೀ ಪ್ರದೇಶವನ್ನು ಆವರಿಸಿಕೊಂಡಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಘಟನೆ ಗಮನಕ್ಕೆ ಬಂದ ಕೂಡಲೇ ವಾಯು ಪಡೆಯ ತುರ್ತು ಸೇವಾ ಅಧಿಕಾರಿಗಳು ಸೇರಿದಂತೆ ಇಲಾಖೆ ಪರಿಹಾರ ಕ್ರಮಗಳನ್ನು ನಡೆಸಿದೆ. ಕೆಲ ವಾಹನಗಳನ್ನು ಬೆಂಕಿಯಿಂದ ರಕ್ಷಣೆ ಮಾಡಿರುವ ಬಗ್ಗೆಯೂ ವಿವರಣೆ ನೀಡಿದ್ದಾರೆ. ಇದನ್ನು ಓದಿ: ಹಣ ಉಳಿಸಲು ಕಾಂಟ್ರ್ಯಾಕ್ಟರ್‌ಗಳು ಮುಂಜಾಗ್ರತ ಕ್ರಮಕೈಗೊಂಡಿಲ್ಲ: ಏರೋ ಶೋ ಹಿಂದಿನ ಕಾಂಟ್ರ್ಯಾಕ್ಟರ್

    ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡ ಸಾರ್ವಜನಿಕರಿಗೆ ನೆರವಾಗಲು ಸಹಾಯವಾಣಿಯನು ತೆರಯಲಾಗಿದ್ದು, 94808 01415 ಮತ್ತು 080-2294 2536 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. ಇತ್ತ ಏರ್ ಶೋನ ಅಂತಿಮ ದಿನದ ಪ್ರದರ್ಶನ ಆರಂಭಗೊಂಡು ಯಾವುದೇ ಅಡೆ ತಡೆ ಇಲ್ಲದೆ ನಡೆಯುತ್ತಿದೆ. ಬೆಂಕಿಯ ಅವಘಡದ ಬಳಿಕವೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶೋಭಾ ಕರಂದ್ಲಾಜೆ ಹೇಳಿಕೆ ಸಮರ್ಥಿಸಿಕೊಂಡ ಬಿಎಸ್‍ವೈ – ಏರ್ ಶೋ ಅಗ್ನಿ ಅವಘಡದ ಉನ್ನತ ತನಿಖೆಗೆ ಆಗ್ರಹ

    ಶೋಭಾ ಕರಂದ್ಲಾಜೆ ಹೇಳಿಕೆ ಸಮರ್ಥಿಸಿಕೊಂಡ ಬಿಎಸ್‍ವೈ – ಏರ್ ಶೋ ಅಗ್ನಿ ಅವಘಡದ ಉನ್ನತ ತನಿಖೆಗೆ ಆಗ್ರಹ

    ಬೆಂಗಳೂರು: ಯಲಹಂಕ ಏರ್ ಶೋದಲ್ಲಿ ನಡೆದ ಅಗ್ನಿ ಅವಘಡಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಸರ್ಕಾರ ತನ್ನ ಜವಾಬ್ದಾರಿ ನಿರ್ವಹಣೆಯನ್ನು ಮಾಡಲು ವಿಫಲವಾಗಿದೆ. ಒಬ್ಬ ಸಂಸದರಾಗಿ ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದರು.

    ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್‍ವೈ ಅವರು, ಏರ್ ಶೋ ಒಂದು ಅಂತರಾಷ್ಟ್ರಿಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಸೌಲಭ್ಯ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಕಾರ್ಯಕ್ರಮದಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಸರ್ಕಾರ ನಿರ್ಲಕ್ಷ್ಯ ವಹಿಸಿದ ಕಾರಣ ಸಿಎಂ ಎಚ್‍ಡಿಕೆ ಹಾಗೂ ಗೃಹ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂತರಾಷ್ಟ್ರಿಯ ಕಾರ್ಯಕ್ರಮದಲ್ಲಿ ಇಂತಹ ದೊಡ್ಡ ಅವಘಡ ನಡೆದರೆ ದೇಶದ ಹೆಸರಿಗೆ ಕಳಂಕ ಆಗುತ್ತದೆ ಎಂದು ಕನಿಷ್ಠ ಮುನ್ನೆಚ್ಚರಿಕೆ ಆದರೂ ವಹಿಸಬೇಕಿತ್ತು ಎಂದರು.

    ಗೃಹ ಸಚಿವರಾದ ಎಂಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ ಕಾರುಗಳು ಮಾತ್ರ ಸುಟ್ಟಿದೆ. ಸಾವು ನೋವು ಸಂಭವಿಸಿಲ್ಲ ಎಂದು ಹೇಳುವ ಮೂಲಕ ಬೇಜಾಬ್ದಾರಿ ಹೇಳಿಕೆ ನೀಡಿದ್ದಾರೆ. ಅದ್ದರಿಂದ ಅವರು ಕೂಡಲೇ ಜನರ ಕ್ಷಮೆ ಕೋರಬೇಕು ಎಂದರು. ಅಲ್ಲದೇ ಪಾರ್ಕಿಂಗ್ ಸ್ಥಳಕ್ಕೆ ಎನ್‍ಒಸಿ ಕೊಟ್ಟ ಬಗ್ಗೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ತೆಗೆದುಕೊಳ್ಳದ ಕುರಿತು ತನಿಖೆ ಆಗಲಿ. ಘಟನೆ ವೇಳೆ ಕಾರಿನಲ್ಲಿದ ಪ್ರಮುಖ ದಾಖಲೆಗಳು ಸುಟ್ಟ ಭಸ್ಮವಾಗಿದೆ. ರಾಜ್ಯ ಪೊಲೀಸ್ ಇಲಾಖೆಯೂ ಕಾರ್ಯಕ್ರಮಕ್ಕೆ ಸೂಕ್ತ ವ್ಯವಸ್ಥೆ ನೀಡಲು ವಿಫಲವಾಗಿದೆ. ಸಿಎಂ ಎಚ್‍ಡಿಕೆ ಅವರು ಏರ್ ಶೋ ಬೆಂಗಳೂರಿನಲ್ಲಿ ಮಾಡಬೇಕೆಂದು ಎಂದು ಹೇಳಿದ್ದರು. ಆದರೆ ಇಂತಹ ಕಾರ್ಯಕ್ರಮದಲ್ಲೇ ಇಂತಹ ಅವಘಡ ನಡೆದರೆ ಹೇಗೆ ಎಂದು ಪ್ರಶ್ನಿಸಿದರು.

    ಹುಟ್ಟು ಹಬ್ಬದ ಆಚರಣೆ ಇಲ್ಲ:
    ಇದೇ ತಿಂಗಳು 27 ರಂದು ನನ್ನ ಹುಟ್ಟಹಬ್ಬ ಇದ್ದು, ಸಿದ್ದಗಂಗಾ ಶ್ರೀಗಳು ಹಾಗೂ ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಹುಟ್ಟಹಬ್ಬ ಮಾಡಿಕೊಳ್ಳದಿರಲು ನಿರ್ಧಾರ ಮಾಡಿದ್ದೇನೆ. ಆ ದಿನ ಚಿತ್ರದುರ್ಗದಲ್ಲಿ ಪಕ್ಷದ ಕಾರ್ಯಕ್ರಮ ಇದ್ದು, ಅಲ್ಲಿ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನನ್ನ ಪರವಾಗಿ ಯಾವುದೇ ಅಭಿಮಾನಿಗಳು ಕೂಡ ಸಂಭ್ರಮಾಚರಣೆ ಮಾಡದಿರಲು ಮನವಿ ಮಾಡುತ್ತೇನೆ ಎಂದು ಬಿಎಸ್‍ವೈ ಹೇಳಿದರು.

    https://www.youtube.com/watch?v=BUA3pczdc3w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv