Tag: ಏರ್ ಪೋರ್ಟ್

  • ಏರ್‌ಪೋರ್ಟ್ ನೆಲದ ಮೇಲೆ ವಿಶ್ರಾಂತಿಗೆ ಜಾರಿದ ಸಾಕ್ಷಿ, ಧೋನಿ!

    ಏರ್‌ಪೋರ್ಟ್ ನೆಲದ ಮೇಲೆ ವಿಶ್ರಾಂತಿಗೆ ಜಾರಿದ ಸಾಕ್ಷಿ, ಧೋನಿ!

    ಚೆನ್ನೈ: ಐಪಿಎಲ್ ಟೂರ್ನಿಯ ಪಂದ್ಯದ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈ ನಿಂದ ಜೈಪುರಕ್ಕೆ ಪ್ರಯಾಣ ಬೆಳೆಸಿದ್ದು, ಈ ವೇಳೆ ವಿಮಾನ ನಿಲ್ದಾಣದಲ್ಲಿ ಧೋನಿ ಹಾಗೂ ಸಾಕ್ಷಿ ನೆಲದ ಮೇಲೆ ಮಲಗಿ ವಿಶ್ರಾಂತಿ ಪಡೆದಿದ್ದಾರೆ.

    ಧೋನಿ ಇನ್‍ಸ್ಟಾಗ್ರಾಮ್ ನಲ್ಲಿ ಈ ಫೋಟೋ ಪೋಸ್ಟ್ ಮಾಡಿದ್ದು, ಐಪಿಎಲ್ ಟೂರ್ನಿಯ ಸಮಯದಲ್ಲಿ ಬೆಳಗ್ಗೆ ಫ್ಲೈಟ್ ಇದ್ದರೆ ಇಂತಹ ಸಂದರ್ಭವನ್ನ ಎದುರಿಸಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

    ತಡರಾತ್ರಿವರೆಗೂ ನಡೆಯುವ ಐಪಿಎಲ್ ಪಂದ್ಯಗಳ ಬಳಿಕ ಆಟಗಾರರು ತಡವಾಗಿ ಮಲಗುತ್ತಾರೆ. ಆದರೆ ಮುಂದಿನ ಪಂದ್ಯಕ್ಕೆ ಬೇರೆಡೆ ತೆರಳಬೇಕಾದ ಕಾರಣ ಮತ್ತೆ ಬೆಳಗ್ಗೆ ಬಹುಬೇಗ ಎದ್ದು ತೆರಳುತ್ತಾರೆ. ಬಿಡುವಿಲ್ಲದ ವೇಳಾಪಟ್ಟಿಯೊಂದಿಗೆ ಆಟಗಾರರು ಫಿಟ್ನೆಸ್ ಕಾಯ್ದಕೊಳ್ಳುವುದು ಸವಾಲಿನ ಕೆಲಸವಾಗಿದೆ.

    https://www.instagram.com/p/BwD9VVXFdJt/

    ನಿನ್ನೆ ನಡೆದ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ತಂಡ ಭರ್ಜರಿ ಗೆಲುವು ಪಡೆದಿತ್ತು. ಟೂರ್ನಿಯಲ್ಲಿ ಮುಂದಿನ ಪಂದ್ಯ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯಲಿದೆ. ಈ ಹಿಂದೆಯೂ ಕೂಡ ಧೋನಿ ತಮಗೆ ಸಿಕ್ಕ ವಿರಾಮ ಸಮಯವನ್ನು ವ್ಯರ್ಥ ಮಾಡದೇ ವಿಶ್ರಾಂತಿ ಪಡೆದುಕೊಳ್ಳುವ ಮೂಲಕ ಮುಂದಿನ ಪಂದ್ಯದ ತಯಾರಿಗೆ ಬೇಕಾದ ಸಮಯವನ್ನು ನಿರ್ವಹಿಸುತ್ತಿದ್ದರು. ಹಲವು ಸಂದರ್ಭದಲ್ಲಿ ಪಂದ್ಯದ ನಡುವೆ ಮೈದಾನದಲ್ಲೇ ಮಲಗಿಕೊಂಡು ವಿಶ್ರಾಂತಿ ಪಡೆಯುವ ಮೂಲಕ ಗಮನ ಸೆಳೆದಿದ್ದರು.

    ಇತ್ತ ಚೆನ್ನೈ 2019ರ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಆಡಿರುವ ಆರು ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ ಒಟ್ಟು 10 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಮುಂದುವರಿದಿದೆ.

    https://www.instagram.com/p/BjSyjBfnmma/

  • ಮುಂಬೈಗೆ ಹಾರಿದ್ದ ಶಾಸಕ ಸುಧಾಕರ್ ದಿಢೀರ್ ಬೆಂಗ್ಳೂರಿಗೆ ವಾಪಸ್

    ಮುಂಬೈಗೆ ಹಾರಿದ್ದ ಶಾಸಕ ಸುಧಾಕರ್ ದಿಢೀರ್ ಬೆಂಗ್ಳೂರಿಗೆ ವಾಪಸ್

    ಚಿಕ್ಕಬಳ್ಳಾಪುರ: ಮುಂಬೈಗೆ ಹಾರಿದ್ದ ಶಾಸಕ ಡಾ. ಸುಧಾಕರ್ ಅವರು ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

    ಇಂದು ಬೆಳಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಲ್ಲದೆ ನೀವೇ ಎಲ್ಲ ಹಾಕ್ಕೊಟ್ಟಿದ್ದು ಎಂದು ಬೇಸರ ವ್ಯಕ್ತಪಡಿಸಿ ಬೆಂಗ್ಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಅಸಮಾಧಾನಿತರ ಪಟ್ಟಿಯಲ್ಲಿ ಡಾ. ಸುಧಾಕರರ್ ಅವರು ಕೂಡ ಇದ್ದು, ಎರಡು ದಿನದಿಂದ ಸದನಕ್ಕೆ ಹಾಜರಾಗಿರಲಿಲ್ಲ. ನಿನ್ನೆ ಮುಂಬೈಗೆ ತೆರಳಿದ್ದ ಅವರು ಇಂದು ಬೆಳಗ್ಗೆ ದಿಢೀರ್ ಎಂದು ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರಿಗೆ ವಾಪಸ್ಸಾಗಿದ್ದು, ಇದೀಗ ಸುಧಾಕರ್ ನಡೆ ತೀವ್ರ ಅನುಮಾನಕ್ಕೀಡು ಮಾಡಿದೆ.

    ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಭಾಗಿಯಾಗಲಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಡಕ್ ಸೂಚನೆಯಿಂದ ಹೆದರಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

    ಇತ್ತ ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್‍ಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ನೀಡಿ ಆದೇಶ ಹೊರಡಿಸಿದ್ದಾರೆ. ಪ್ರತಾಪ್‍ಗೌಡ ಹಾಗೂ ಬಸವನಗೌಡ ಈ ಇಬ್ಬರೂ ಶಾಸಕರು ಬಿಜೆಪಿ ಕಡೆಗೆ ವಾಲುವ ಅನುಮಾನ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಬ್ಬರಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ. ಆದರೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಡಾ.ಸುಧಾಕರ್‍ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನೂ ಮರೀಚಿಕೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಸಸ್ಪೆನ್ಸ್ ಇರಿಸಿದ್ದು, ಸುಧಾಕರ್ ನಡೆ ಕುತೂಹಲ ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಹಲೋ…, ಎಲ್ಲಿದ್ದೀಯಾ ನಾರಾಯಣರಾವ್ ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು’ ಅಂದ್ರು ಸಿದ್ದರಾಮಯ್ಯ, ಏರ್ ಪೋರ್ಟಿಂದ ಓಡೋಡಿ ಬಂದ್ರು ನಾರಾಯಣ ರಾವ್!

    ‘ಹಲೋ…, ಎಲ್ಲಿದ್ದೀಯಾ ನಾರಾಯಣರಾವ್ ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು’ ಅಂದ್ರು ಸಿದ್ದರಾಮಯ್ಯ, ಏರ್ ಪೋರ್ಟಿಂದ ಓಡೋಡಿ ಬಂದ್ರು ನಾರಾಯಣ ರಾವ್!

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಹಲವು ಹಾಸ್ಯಮಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಇಂದು ವಿಧಾನಸಭೆಯಲ್ಲಿ ನಡೆದ ಶಾಸಕಾಂಗ ಸಭೆಗೆ ಆರಂಭದಲ್ಲಿ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಆಗಮಿಸಿರಲಿಲ್ಲ. ತಮ್ಮ ನಿರೀಕ್ಷಿತ ಶಾಸಕರೆಲ್ಲಾ ಬರ್ತಾರೋ ಇಲ್ವೋ ಎಂಬ ಆತಂಕದಲ್ಲೇ ಎಲ್ಲಾ ನಾಯಕರು ಇದ್ದರು. ಇದೇ ವೇಳೆ ಸಭೆಗೆ ಬಂದ ಶಾಸಕರ ದೃಶ್ಯಾವಳಿಗಳನ್ನು ಚಿತ್ರೀಕರಿಸಲು ಕೊಠಡಿಯೊಳಗೆ ಮಾಧ್ಯಮಗಳಿಗೆ ಪ್ರವೇಶ ನೀಡಲಾಯಿತು.

    ಮಾಧ್ಯಮ ಪ್ರತಿನಿಧಿಗಳು ವೀಡಿಯೋ ಶೂಟ್ ಮಾಡುತ್ತಿದ್ದ ವೇಳೆಯಲ್ಲಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರು ತಮ್ಮದೇ ಜಿಲ್ಲೆಯವರಾದ ಬಸವಕಲ್ಯಾಣ ಶಾಸಕರಾದ ನಾರಾಯಣ ರಾವ್ ಅವರಿಗೆ ಫೋನ್ ಮಾಡಿದ್ದಾರೆ. ಈ ವೇಳೆ ಖಂಡ್ರೆಯವರು ಸಿದ್ದರಾಮಯ್ಯ ಅವರಿಗೆ ಫೋನ್ ನೀಡಿದ್ದಾರೆ. ಫೋನ್ ಕೈಗೆತ್ತಿಕೊಂಡ ಸಿದ್ದರಾಮಯ್ಯನವರು ತಮ್ಮ ಎಂದಿನ ಶೈಲಿಯಲ್ಲಿ, ಹಲೋ…… ನಾರಾಯಣರಾವ್ ಎಲ್ಲಿದ್ದೀಯಾ, ಆ….. ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು ಎಂದು ಹೇಳಿದ್ದಾರೆ.

    ಸರ್, ಹೈದ್ರಾಬಾದ್‍ನಿಂದ ಬರೋದು ಲೇಟಾಯ್ತು. ಈಗ ಬೆಂಗಳೂರು ಏರ್ ಪೋರ್ಟ್‍ಗೆ ಬಂದಿದ್ದೇನೆ. ಬರ್ತಿದ್ದೇನೆ ಸರ್ ಎಂದು ಸಿದ್ದರಾಮಯ್ಯ ಅವರಿಗೆ ಉತ್ತರಿಸಿದರು. ಅಷ್ಟೊತ್ತಿಗಾಗಲೇ ನಾರಾಯಣರಾವ್ ಅವರು ಹೈದರಾಬಾದ್‍ನಿಂದ ವಿಮಾನದಲ್ಲಿ ಆಗಮಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗಿಳಿದು ವಿಧಾನಸೌಧ ತಲುಪಬೇಕು ಅನ್ನೋ ಧಾವಂತದಲ್ಲಿ ಹೊರಬರುತ್ತಿದ್ದರು.

    ಈ ವೇಳೆ ಅಲ್ಲಿಯೂ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು. ಸಿದ್ದರಾಮಯ್ಯ ಫೋನ್ ಕಾಲ್ ರಿಸೀವ್ ಮಾಡಿದ ನಾರಾಯಣರಾವ್ ಅವರು, ಓಡೋಡುತ್ತಾ ಬಂದು ಕೆಂಪು ಬಣ್ಣದ ಕಾರು ಹತ್ತಿ ಏರ್ ಪೋರ್ಟಿಂದ ಹೊರಟೇ ಬಿಟ್ರು. ಈ ವೇಳೆ ಅವರ ಜೊತೆ ಬಂದಿದ್ದವರಲ್ಲಿ ಯಾಕೆ ಲೇಟ್ ಎಂದು ಕೇಳಿದಾಗ, ವಿಮಾನ ಬರುವುದು ವಿಳಂಬವಾಯಿತು ಎಂಬ ಸ್ಪಷ್ಟನೆ ನೀಡಿದರು.

    ಹೆಬ್ಬಾರ್ ಇವ್ರೇ…!: ಅತೃಪ್ತ ಬಣದಲ್ಲಿದ್ದಾರೆ ಎಂಬ ಗುಮಾನಿಯಲ್ಲೇ ಇದ್ದ ಶಿವರಾಮ್ ಹೆಬ್ಬಾರ್ ಅವರು ಕೂಡಾ ಇಂದಿನ ಸಭೆಗೆ ಆಗಮಿಸಿದ್ದರು. ಅವರ ಬಳಿ ಹೋಗ್ತಿದ್ದಂತೆ ಅವರ ಅಕ್ಕಪಕ್ಕದಲ್ಲಿ ಕುಳಿತಿದ್ದ ಶಾಸಕರು, ನೋಡ್ರಪ್ಪಾ ಇಲ್ಲಿ…. ಹೆಬ್ಬಾರ್ ಇವ್ರೇ… ಅಂತಾ ಬೆರಳು ತೋರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಪೋರ್ಟ್ ಪಾರ್ಕಿಂಗ್‍ನಲ್ಲಿ ಕಾರು ಚಾಲಕರ ಮಧ್ಯೆ ಮಾರಾಮಾರಿ- ಓಲಾ ಕ್ಯಾಬ್ ಜಖಂ

    ಏರ್ ಪೋರ್ಟ್ ಪಾರ್ಕಿಂಗ್‍ನಲ್ಲಿ ಕಾರು ಚಾಲಕರ ಮಧ್ಯೆ ಮಾರಾಮಾರಿ- ಓಲಾ ಕ್ಯಾಬ್ ಜಖಂ

    ಮಂಗಳೂರು: ನಗರ ಏರ್ ಪೋರ್ಟ್ ಪಾರ್ಕಿಂಗ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಓಲಾ ಕ್ಯಾಬ್ ಹಾಗೂ ಸ್ಥಳೀಯ ಕಾರು ಚಾಲಕರ ಮಧ್ಯೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಓಲಾ ಕ್ಯಾಬ್ ಒಂದನ್ನು ಕಲ್ಲು ತೂರಿ ಜಖಂ ಗೊಳಿಸಲಾಗಿದೆ.

    ಪ್ರಯಾಣಿಕರನ್ನು ಕರೆದೊಯ್ದಿದ್ದ ಓಲಾ ಕ್ಯಾಬ್ ಚಾಲಕ ತನ್ನ ಕಾರನ್ನು ಏರ್ ಪೋರ್ಟ್ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ. ಇದನ್ನು ಸ್ಥಳೀಯ ಕಾರು ಚಾಲಕರು ಆಕ್ಷೇಪಿಸಿದ್ದು, ಕೂಡಲೇ ಕಾರು ತೆರವು ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಓಲಾ ಕಾರು ಚಾಲಕ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿ, ತನ್ನ ಸಹವರ್ತಿಗಳನ್ನು ಕರೆಸಿದ್ದಾನೆ. ಆ ಬಳಿಕ ಸ್ಥಳೀಯ ಕ್ಯಾಬ್ ಚಾಲಕರು ಮತ್ತು ಓಲಾ ಸಿಬ್ಬಂದಿ ನಡುವೆ ಬೀದಿ ಕಾಳಗವೇ ನಡೆದು ಹೋಗಿದೆ. ಜಗಳದ ನಡುವೆ ಓಲಾ ಕ್ಯಾಬ್ ಮೇಲೆ ಕಲ್ಲು ತೂರಿ ಜಖಂ ಗೊಳಿಸಲಾಗಿದೆ. ಅಷ್ಟೇ ಅಲ್ಲದೆ ಘಟನೆಯಲ್ಲಿ ಓಲಾ ಕ್ಯಾಬ್ ಚಾಲಕನೊಬ್ಬನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಏರ್ ಪೋರ್ಟ್ ಆವರಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ಸ್ಥಳೀಯ ಕಾರು ಚಾಲಕರ ನಡುವೆ ಪೈಪೋಟಿ ಇರುವುದರಿಂದ ಓಲಾ ಕ್ಯಾಬ್‍ಗಳಿಗೆ ಅವಕಾಶ ನೀಡುತ್ತಿರಲಿಲ್ಲ. ಓಲಾ ಟ್ಯಾಕ್ಸಿಯಂತಹ ಆನ್ ಲೈನ್ ಕ್ಯಾಬ್ ಗಳು ಕಡಿಮೆ ಬಾಡಿಗೆ ದರದಲ್ಲಿ ಮಂಗಳೂರು ನಗರ ತಲುಪಿಸುವ ಕಾರಣ ಈ ಹಿಂದೆಯೂ ಜಟಾಪಟಿ ನಡೆದಿತ್ತು. ಈ ವಿಚಾರ ಹಲವು ಸಮಯದಿಂದ ಹೊಗೆಯಾಡುತ್ತಿದ್ದು ಈಗ ಗೂಂಡಾಗಿರಿ ನಡೆಸುವಷ್ಟರ ಮಟ್ಟಿಗೆ ಮುಂದುವರೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏರ್ ಪೋರ್ಟ್ ನಲ್ಲಿ ತಿಂಡಿ ಮಾಡೋ ಮುನ್ನ ಈ ಸುದ್ದಿ ನೋಡಿ

    ಏರ್ ಪೋರ್ಟ್ ನಲ್ಲಿ ತಿಂಡಿ ಮಾಡೋ ಮುನ್ನ ಈ ಸುದ್ದಿ ನೋಡಿ

    ಚಿಕ್ಕಬಳ್ಳಾಪುರ: ಕ್ಯಾಬ್ ಚಾಲಕನೋರ್ವ ತಿನ್ನುತ್ತಿದ್ದ ಪೊಂಗಲ್ ನಲ್ಲಿ ಹುಳ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ನಡೆದಿದೆ.

    ಕೆಐಎಎಲ್ ನ ಕಾರ್ ಪಾರ್ಕಿಂಗ್ ಬಳಿ ಇರುವ ಸತೀಶ್ ಡೈನಿಂಗ್ ಕ್ಯಾಂಟೀನ್ ನಲ್ಲಿ ಕ್ಯಾಬ್ ಚಾಲಕ ಗಣೇಶ್ 50 ರೂ. ಕೊಟ್ಟು ಒಂದು ಪ್ಲೇಟ್ ಪೊಂಗಲ್ ಖರೀದಿಸಿದ್ದಾರೆ. ಪೊಂಗಲ್ ತಿನ್ನುತ್ತಿದ್ದ ವೇಳೆ ಪೊಂಗಲ್ ಜೊತೆಗೆ ತಟ್ಟೆಯಲ್ಲಿ ಹುಳ ಪತ್ತೆಯಾಗಿದೆ. ಇದರಿಂದ ಬೆಚ್ಚಿಬಿದ್ದ ಕ್ಯಾಬ್ ಚಾಲಕ ಗಣೇಶ್, ಕ್ಯಾಂಟೀನ್ ಸಿಬ್ಬಂದಿ ವಿರುದ್ಧ ತಿರುಗಿಬಿದ್ದಿದ್ದಾರೆ.

    ವಿಷಯ ತಿಳಿದು ಗುಂಪುಗೂಡಿದ ಕ್ಯಾಬ್ ಚಾಲಕರು ಕ್ಯಾಂಟೀನ್ ಮಾಲೀಕ ಹಾಗೂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಕೊಡ್ತಿರೋದಲ್ಲದೇ ಒಂದು ಪ್ಲೇಟ್ ಪೊಂಗಲ್ ಗೆ 50 ರೂ. ವಸೂಲಿ ಮಾಡಿ ಹಣ ದೋಚುತ್ತಿದ್ದಾರೆ ಅಂತ ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಅಡುಗೆ ಕೊಠಡಿಗೆ ತೆರಳಿ ಕ್ಯಾಬ್ ಚಾಲಕರು ಪರಿಶೀಲನೆ ನಡೆಸಿದ್ದು, ಕೊಳೆತ ಟೊಮೆಟೋ, ತರಕಾರಿಗಳು ಸಹ ಪತ್ತೆಯಾಗಿವೆ. ಇದರಿಂದ ಮತ್ತಷ್ಟು ಕೆಂಡಾಮಂಡಲರಾಗಿರೋ ಕ್ಯಾಬ್ ಚಾಲಕರು ಕ್ಯಾಂಟೀನ್ ಮುಚ್ಚಬೇಕು ಹಾಗೂ ಬೇರೆಯವರಿಗೆ ಕ್ಯಾಂಟೀನ್ ನಡೆಸಲು ಅವಕಾಶ ಮಾಡಿಕೊಡಬೇಕು ಅಂತ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಮನಿಸಿ, ಹೊಸ ಏರ್ ಪೋರ್ಟ್ ರಸ್ತೆಯಲ್ಲಿ ಹೋಗೋರೆ ಹುಷಾರ್..!

    ಗಮನಿಸಿ, ಹೊಸ ಏರ್ ಪೋರ್ಟ್ ರಸ್ತೆಯಲ್ಲಿ ಹೋಗೋರೆ ಹುಷಾರ್..!

    ಬೆಂಗಳೂರು: ಏರ್ ಪೋರ್ಟ್ ಹೋಗಬೇಕು ಅಂದರೆ ಸಾಕಷ್ಟು ಟೋಲ್ ಕಟ್ಟಬೇಕು. ಟೋಲ್ ಬಿಟ್ಟು ಹೋಗೋಕೆ ಬೇರೆ ದಾರಿ ಇಲ್ಲ ಅಂತ ಇದ್ದವರಿಗೆ ಸರ್ಕಾರ ಹೊಸದೊಂದು ರೋಡ್ ಮಾಡಿಕೊಟ್ಟಿತ್ತು. ಆದ್ರೆ ಈಗ ಆ ರೋಡ್‍ನಲ್ಲಿ ಯಾರೂ ಸಂಚಾರ ಮಾಡುವ ಹಾಗಿಲ್ಲ. ಯಾಕಂದ್ರೆ ಈ ರಸ್ತೆಯಲ್ಲಿ ಸಂಚರಿಸಿದ್ರೆ ಊರಿನ ಜನ ಹಿಗ್ಗಾಮುಗ್ಗವಾಗಿ ಥಳಿಸುತ್ತಾರೆ.

    ಬೇರೆ ಊರಿಗೆ ಹೋಗೋಕೆ ಏರ್ ಪೋರ್ಟ್ ಹೋಗುತ್ತಿದ್ದ ಜನಕ್ಕೆ ದಿನನಿತ್ಯ ಟೋಲ್‍ನ ಕಿರಿಕಿರಿ ಇತ್ತು. ಅದರಲ್ಲೂ ಕ್ಯಾಬ್‍ನ ಡ್ರೈವರ್ ಗಳು ಸರ್ಕಾರಕ್ಕೆ ಪದೇ ಪದೇ ಮನವಿ ನೀಡುತ್ತಿದ್ದರು. ಹೀಗಾಗಿ ಸರ್ಕಾರ ಏರ್ ಪೋರ್ಟ್ ರಸ್ತೆಯ ಟೋಲ್ ಕಿರಿಕಿರಿ ತಪ್ಪಿಸಲು ಕೋಟಿ ಕೋಟಿ ಹಣ ಖರ್ಚು ಮಾಡಿ ಪರ್ಯಾಯ ಮಾರ್ಗ ಕಲ್ಪಿಸಿದೆ.

    ಆದ್ರೆ ಈ ರಸ್ತೆಯಲ್ಲೂ ಪ್ರಯಾಣಿಕರಿಗೆ ನೆಮ್ಮದಿಯಿಲ್ಲ. ಏರ್ ಪೋರ್ಟ್ ಗೆ ಹೋಗುವ ರಸ್ತೆ ಮಾರ್ಗದಲ್ಲಿ ಹಲವು ಹಳ್ಳಿಗಳು ಸಿಗುತ್ತದೆ. ಇಲ್ಲಿ ಕ್ಯಾಬ್ ಚಾಲಕರು ವೇಗವಾಗಿ ವಾಹನ ಚಲಾಯಿಸಿ ಜನರ ಪ್ರಾಣಕ್ಕೆ ಕುತ್ತು ತರುತ್ತಾ ಇದ್ದಾರಂತೆ. ಹೀಗಾಗಿ ಹಳ್ಳಿಯ ಒಳಗೆ ಕಾರ್ ಗಳನ್ನು ತೆಗೆದುಕೊಂಡು ಹೋಗಲು ಇಲ್ಲಿನ ಜನ ಬಿಡ್ತಾ ಇಲ್ಲ. ಅಪ್ಪಿ-ತಪ್ಪಿ ಬಂದರೆ ಅವರನ್ನ ಹೊಡೆದು ಕಳುಹಿಸುತ್ತಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ ಎಂದು ಕ್ಯಾಬ್ ಚಾಲಕ ಹರೀಶ್ ಹೇಳಿದ್ದಾರೆ.

    ಜನರು ರೊಚ್ಚಿಗೆದ್ದು ಈ ರೀತಿ ಹಲ್ಲೆ ಮಾಡುತ್ತಾ ಇರುವುದರಿಂದ ಸಾಕಷ್ಟು ಕ್ಯಾಬ್‍ಗಳು ಮತ್ತೆ ಅದೇ ಟೋಲ್ ರಸ್ತೆಯಲ್ಲೇ ಪ್ರಯಾಣಿಸ್ತಿದ್ದಾರೆ. ಆದರೆ ಈ ರಸ್ತೆಯಲ್ಲಿ ಓಡಾಡೋರಿಗೆ ಹಲ್ಲೆ ಮಾಡಿದರೆ ಮತ್ತೆ ಟೋಲ್ ರಸ್ತೆಗೆ ಇಳೀತಾರೆ. ಹೀಗಾಗಿ ಟೋಲ್ ಮ್ಯಾನೇಜ್ ಮೆಂಟ್‍ನವರೇ ಪೊಲೀಸರಿಗೆ ಮತ್ತು ಜನರಿಗೆ ಹಣಕೊಟ್ಟು ಹೀಗೆ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಕ್ಯಾಬ್ ಚಾಲಕ ನವೀನ್‍ಗೌಡ ಆರೋಪಿಸಿದ್ದಾರೆ.

  • ಏರ್ ಪೋರ್ಟ್ ಸೇತುವೆಯಿಂದ 10 ಅಡಿ ಆಳಕ್ಕೆ ಬಿದ್ದು ಬೆಂಗ್ಳೂರು ಟೆಕ್ಕಿ ದುರ್ಮರಣ!

    ಏರ್ ಪೋರ್ಟ್ ಸೇತುವೆಯಿಂದ 10 ಅಡಿ ಆಳಕ್ಕೆ ಬಿದ್ದು ಬೆಂಗ್ಳೂರು ಟೆಕ್ಕಿ ದುರ್ಮರಣ!

    ಚೆನ್ನೈ: ಇಲ್ಲಿನ ಏರ್ ಪೋರ್ಟ್ ಸೇತುವೆಯಿಂದ 10 ಅಡಿ ಆಳಕ್ಕೆ ಬಿದ್ದು, ಬೆಂಗಳೂರಿನ ಟೆಕ್ಕಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಟೆಕ್ಕಿಯನ್ನು 32 ವರ್ಷದ ಚೈತನ್ಯ ವಿಯೂರುರು ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರದ ವಿಜಯವಾಡ ನಿವಾಸಿಯಾಗಿರೋ ಇವರು ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

    ಆಗಿದ್ದು ಏನು?: ಇಂದು ಬೆಳಗ್ಗೆ ಚೈತನ್ಯ ಅವರು ಏರ್‍ಪೋರ್ಟ್ ಸೇತುವೆ ಮೇಲೆ ಕುಳಿತುಕೊಳ್ಳಲು ಅಣಿಯಾದಾಗ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.

    ಈ ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆದ್ರೆ ಅದರಲ್ಲಿ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೋ ಅಥವಾ ಸೇತುವೆಯ ಕಂಬಿ ಮೇಲೆ ಕುಳಿತುಕೊಂಡು ಮಾತನಾಡುತ್ತಿದ್ದಾರೆಯೋ ಎಂಬುದು ಸರಿಯಾಗಿ ಗೋಚರಿಸುತ್ತಿಲ್ಲ. ಸದ್ಯ ಪೊಲೀಸರು ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

    10 ಅಡಿ ಎತ್ತರದಿಂದ ಬಿದ್ದ ಚೈತನ್ಯ ಅವರ ತಲೆಗೆ ಗಂಭೀರ ಗಾಯಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಕೈಯಲ್ಲಿ ಯಾವುದೇ ಬ್ಯಾಗ್ ಹಾಗೂ ವಿಮಾನ ಟಿಕೆಟ್ ಇರಲಿಲ್ಲ. ಆದ್ರೆ ಚೈತನ್ಯ ಮೊಬೈಲ್ ನಲ್ಲಿ ಆನ್ ಲೈನ್ ಮೂಲಕ ಟಿಕೆಟ್ ಮಾಡಿದ್ದಾರೆಯೋ ಎಂಬುದಾಗಿಯೂ ತಿಳಿದುಬಂದಿಲ್ಲ. ಯಾಕಂದ್ರೆ ಘಟನೆಯಿಂದಾಗಿ ಅವರ ಕೈಯಲ್ಲಿದ್ದ ಐಫೋನ್ ಕೂಡ ನಜ್ಜುಗುಜ್ಜಾಗಿದೆ. 10 ಅಡಿ ಮೇಲಿಂದ ಬಿದ್ದ ರಭಸಕ್ಕೆ ಅವರ ಬಳಿಯಿದ್ದ ಇನ್ನೊಂದು ಫೋನ್ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಮೃತ ವ್ಯಕ್ತಿಯ ಬಳಿಯಿದ್ದ ಐಡಿ ಕಾರ್ಡ್ ನ ಆಧರಿಸಿ ಅವರ ಮೃತನ ತಂದೆ ಜನಾರ್ದನ ರಾವ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಚೈತನ್ಯ ಪೋಷಕರು ಕೂಡಲೇ ವಿಜಯವಾಡದಿಂದ ಚೆನ್ನೈಗೆ ಆಗಮಿಸಿದ್ದಾರೆ. ಒಟ್ಟಿನಲ್ಲಿ ಚೈತನ್ಯ ಚೆನ್ನೈಗೆ ಯಾಕೆ ಬಂದಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ.

    ಸದ್ಯ ವಿಮಾನ ನಿಲ್ದಾಣದ ಪೊಲೀಸರು ಐಪಿಸಿ ಸೆಕ್ಷನ್ 174(ಆಕಸ್ಮಿಕ ಸಾವು) ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಬೆಂಗಳೂರು ಏರ್‍ಪೋರ್ಟ್ ನಲ್ಲಿ ಪ್ರಯಾಣಿಕನ ಬಳಿ 2.5 ಕೆ.ಜಿ ಗಾಂಜಾ ಪತ್ತೆ

    ಬೆಂಗಳೂರು ಏರ್‍ಪೋರ್ಟ್ ನಲ್ಲಿ ಪ್ರಯಾಣಿಕನ ಬಳಿ 2.5 ಕೆ.ಜಿ ಗಾಂಜಾ ಪತ್ತೆ

    ಬೆಂಗಳೂರು: ಪ್ರಯಾಣಿಕನೊಬ್ಬನ ಬ್ಯಾಗ್‍ನಲ್ಲಿ ಸುಮಾರು ಎರಡುವರೆ ಕೆ.ಜಿ ಗಾಂಜಾ ಪತ್ತೆಯಾಗಿರುವ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಕೇರಳ ಮೂಲದ ಪೂಲಪರಂಬಿ ಹಂಸ ಮೊಹಮ್ಮದ್ (31) ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಆರೋಪಿ ಮೊಹಮೊದ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾಗೆ ಪ್ರಯಾಣ ಮಾಡಲು ಬಂದಿದ್ದ. ಸ್ಕ್ರೀನಿಂಗ್‍ನಲ್ಲಿ ಹ್ಯಾಂಡ್ ಬ್ಯಾಗ್ ಪರಿಶೀಲನೆ ಮಾಡುತ್ತಿದ್ದಾಗ ಆತನ ಬ್ಯಾಗ್‍ನಲ್ಲಿ ಸುಮಾರು ಎರಡೂವರೆ ಕೆ.ಜಿ ಗಾಂಜಾ ಪತ್ತೆಯಾಗಿದೆ.


    ಏರ್ ಪೋರ್ಟ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಗಾಂಜಾವನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

     

  • ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಹಿಳೆಯನ್ನು ಟಚ್ ಮಾಡಿ ಹಸ್ತಮೈಥುನ ಮಾಡ್ತಿದ್ದ ಉದ್ಯಮಿ ಅರೆಸ್ಟ್!

    ಬೆಂಗಳೂರಿನಿಂದ ಹೊರಟ ವಿಮಾನದಲ್ಲಿ ಮಹಿಳೆಯನ್ನು ಟಚ್ ಮಾಡಿ ಹಸ್ತಮೈಥುನ ಮಾಡ್ತಿದ್ದ ಉದ್ಯಮಿ ಅರೆಸ್ಟ್!

    ಬೆಂಗಳೂರು: ಕಳೆದ 10 ದಿನದಲ್ಲಿ ವಿಮಾನದಲ್ಲಿ ಲೈಂಗಿಕ ದೌರ್ಜನ್ಯದ ಎರಡನೇ ಪ್ರಕರಣ ವರದಿಯಾಗಿದೆ. ಕಳೆದ ಮಂಗಳವಾರ ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ 31 ವರ್ಷದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಕಳೆದ ಮಂಗಳವಾರ ನವ ಮುಂಬೈ ನಿವಾಸಿಯಾದ ಮಹಿಳೆ ಬೆಂಗಳೂರಿನಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ಹೊರಟಿದ್ದಾರೆ. ಈ ವೇಳೆ ತಮಿಳುನಾಡು ಮೂಲದ ಉದ್ಯಮಿ ಸುಬಿನ್ ಹಂಸ ಎಂಬಾತನಿಗೆ ಈಕೆಯ ಪಕ್ಕದ ಸೀಟು ಸಿಕ್ಕಿದೆ. ಬೆಳಗಿನ ಜಾವವಾದ್ದರಿಂದ ಮಹಿಳೆ ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಸುಬಿನ್ ತನ್ನ ದುಷ್ಟ ಬುದ್ಧಿಯನ್ನು ತೋರಿಸಿದ್ದಾನೆ. ತಾನು ಮಲಗಿರುವಂತೆ ನಟಿಸಿ ಆತ ಮಹಿಳೆಯ ಅಂಗಾಂಗಗಳನ್ನು ಟಚ್ ಮಾಡಿದ್ದಾನೆ. ನಿದ್ದೆಯಲ್ಲಿ ಈತ ಹೀಗೆ ಮಾಡುತ್ತಿದ್ದಾನೆ ಎಂದು ಆ ಮಹಿಳೆ ಭಾವಿಸಿದ್ದಾರೆ.

    ಹೀಗಾಗಿ ಸ್ವಲ್ಪ ಪಕ್ಕಕ್ಕೆ ಜರುಗಿ ನಿದ್ದೆಗೆ ಮತ್ತೆ ಶರಣಾಗಿದ್ದಾರೆ. ಆದರೆ ಮತ್ತೆ ಆತ ತನ್ನ ವಿಕೃತಿ ಮುಂದುವರೆಸಿದ್ದಾನೆ. ಆಕೆಗೆ ಮತ್ತೆ ಎಚ್ಚರವಾದಾಗ ಕಾಮುಕ ಸುಬೀನ್ ಹಂಸ ಹಸ್ತಮೈಥುನ ಮಾಡುತ್ತಿದ್ದಿದ್ದು ಗೊತ್ತಾಗಿದೆ. ತಕ್ಷಣ ಆಕೆ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅವರು ಬರುವ ವೇಳೆಗೆ ಈತ ಪ್ಯಾಂಟ್ ಜಿಪ್ ಹಾಕುತ್ತಿದ್ದಿದ್ದನ್ನು ನೋಡಿದ್ದಾರೆ. ಆತನಿಗೆ ಎಚ್ಚರಿಕೆ ನೀಡಿ ಮಹಿಳೆಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.

    ಬಳಿಕ ವಿಮಾನ ಮುಂಬೈನಲ್ಲಿ ಇಳಿಯುತ್ತಿದ್ದಂತೆಯೇ ವಿಮಾನದ ಸಿಬ್ಬಂದಿ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಸಿ.ಐ.ಎಸ್.ಎಫ್ ಜೊತೆ ಸೇರಿ ಭದ್ರತಾ ಸಿಬ್ಬಂದಿ ಸುಬೀನ್ ಹಂಸನನ್ನು ಏರ್ ಪೋರ್ಟ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಳಿಕ ಆತನನ್ನು ಬಂಧಿಸಿದ್ದಾರೆ.

    ಭದ್ರತಾ ಸಿಬ್ಬಂದಿಯ ದೂರಿನ ಅನ್ವಯ ಮಹಿಳೆಯ ಜೊತೆ ಅಸಭ್ಯ ವರ್ತನೆಗೆ ಸುಬೀನ್ ವಿರುದ್ಧ ಪ್ರಕರಣ ದಾಖಲಿಸಿರೋದಾಗಿ ಪೊಲೀಸರು ತಿಳಿಸಿದ್ದಾರೆ. ನಂತರ ಆತನನ್ನು ಕೋರ್ಟ್ ಗೆ ಹಾಜರುಪಡಿಸಿ, ನ್ಯಾಯಾಂಗ ವಶಕ್ಕೊಪ್ಪಿಸಲಾಯಿತು.

    10 ದಿನ ಹಿಂದೆಯೂ ಹೀಗಾಗಿತ್ತು: ಕಳೆದ ಜೂನ್ 19ರಂದು ದೆಹಲಿ ಮುಂಬೈ ಮಾರ್ಗದ ವಿಮಾನವೊಂದರಲ್ಲಿ ದೆಹಲಿ ಮೂಲದ ವಕೀಲೆಯ ಮೇಲೆ ಐಟಿ ಕಂಪೆನಿಯ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನನ್ನೂ ಸಿ.ಐ.ಎಸ್.ಎಫ್ ಸಿಬ್ಬಂದಿ ಬಂಧಿಸಿದ್ದರು.

  • ಬೆಂಗ್ಳೂರು ಮಹಿಳೆಯನ್ನ ವಿವಸ್ತ್ರಗೊಳ್ಳುವಂತೆ ಹೇಳಿದ ಏರ್‍ಪೋರ್ಟ್ ಸಿಬ್ಬಂದಿ!

    ಬೆಂಗ್ಳೂರು ಮಹಿಳೆಯನ್ನ ವಿವಸ್ತ್ರಗೊಳ್ಳುವಂತೆ ಹೇಳಿದ ಏರ್‍ಪೋರ್ಟ್ ಸಿಬ್ಬಂದಿ!

    ಬೆಂಗಳೂರು: ಇತ್ತೀಚೆಗೆ 30 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನಿಂದ ಐಸ್ ಲ್ಯಾಂಡ್‍ಗೆ ತೆರಳುತ್ತಿದ್ದ ವೇಳೆ ಜರ್ಮನಿಯ ಫ್ರಾಂಕ್‍ಫರ್ಟ್ ಏರ್‍ಪೋರ್ಟ್ ಸಿಬ್ಬಂದಿ ತಪಾಸಣೆಗಾಗಿ ಮಹಿಳೆಯನ್ನ ವಿವಸ್ತ್ರಗೊಳ್ಳುವಂತೆ ಹೇಳಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ನಡೆದಿದ್ದೇನು?: 4 ವರ್ಷದ ಮಗಳ ಜೊತೆ ಬೆಂಗಳೂರು ಮೂಲದ ಶೃತಿ ಬಸಪ್ಪ ದಂಪತಿ ಐಸ್ ಲ್ಯಾಂಡ್ ಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬರ್ಲಿನ್‍ಗೆ ವಿಮಾನ ಹತ್ತಲೆಂದು ದಂಪತಿ ಇಳಿದಿದ್ದರು. ವಿಮಾನ ನಿಲ್ದಾಣದಲ್ಲಿ ಬಾಡಿ ಸ್ಕ್ಯಾನ್ ಆದ ನಂತರವೂ ಶೃತಿ ಬಸಪ್ಪ ಅವರನ್ನು ತಡೆದ ಅಲ್ಲಿನ ಸಿಬ್ಬಂದಿ ಪಕ್ಕಕ್ಕೆ ಕರೆದುಕೊಂಡು ಹೋಗಿ ಬಟ್ಟೆ ತೆಗೆಯುವಂತೆ ಹೇಳಿದ್ದಾರೆ. ಈ ಬಗ್ಗೆ ಶೃತಿ ಫ್ರಾಂಕ್‍ಫರ್ಟ್ ಏರ್ಪೋಟ್‍ನ ಫೆಸ್‍ಬುಕ್ ಪೇಜಿನಲ್ಲಿ ಪೋಸ್ಟ್ ಮಾಡಿ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.

    ನನ್ನ ಪತಿ ಐಸ್‍ಲ್ಯಾಂಡ್ ಪ್ರಜೆಯಾಗಿದ್ದು, ನನ್ನ ಬಳಿ ಭಾರತದ ಪಾಸ್‍ಪೋರ್ಟ್ ಇತ್ತು. ಇತ್ತೀಚೆಗೆ ಭಾರತಕ್ಕೆ ಬಂದಿದ್ದ ನಾವು ಮತ್ತೆ ಐಸ್‍ಲ್ಯಾಂಡ್‍ಗೆ ತೆರಳುತ್ತಿದ್ದೆವು. ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಸಿಬ್ಬಂದಿ ನನ್ನನ್ನು ತಪಾಸಣೆಗಾಗಿ ಪಕ್ಕಕ್ಕೆ ಸರಿಯುವಂತೆ ಹೇಳಿದ್ರು. ನನ್ನನ್ನು ಒಂದು ಕೊಠಡಿಗೆ ಕರೆದುಕೊಂಡು ಹೋಗಿ 4 ವರ್ಷದ ಮಗಳ ಎದುರೇ ವಿವಸ್ತ್ರಗೊಳ್ಳುವಂತೆ ಹೇಳಿದ್ರು. ಇದಕ್ಕೆ ಯಾವುದೇ ವಿವರಣೆ ನೀಡಲಿಲ್ಲ.

    ಮೊದಲು ಲೋಹ ಶೋಧಕದಿಂದ ತಪಾಸಣೆ ಮಾಡಿದ್ರು. ಈ ವೇಳೆ ನನಗೆ ಹೊಟ್ಟೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ, ನಿಧಾನವಾಗಿ ತಪಾಸಣೆ ಮಾಡಿ ಅಂತಾ ಪ್ರಮಾಣ ಪತ್ರ ತೋರಿಸಿದೆ. ಆದ್ರೆ ಅದನ್ನ ಅವರ ಕೇಳಲೇ ಇಲ್ಲ. ಕೊನೆಗೆ ಸಿಬ್ಬಂದಿ ಮಹಿಳೆಯೊಬ್ಬರು ನನ್ನ ಮೇಲೆ ಕಿರುಚಾಡಲು ಶುರು ಮಾಡಿದ್ರು. ನಂತರ ಆಕೆ ಮೇಲ್ವಿಚಾರಕಿಯನ್ನು ಕರೆದುಕೊಂಡು ಬಂದ್ರು. ಅವರೂ ಕೂಡ ನನಗೆ ಹೇಗೆ ಬಟ್ಟೆ ತೆಗೆಯಬೇಕು ಅಂತ ಹೇಳಿದ್ರು. ನಿಜವಾಗಲೂ ಈ ರೀತಿಯ ನಿಯಮ ಇದೆಯೇ. ಇಲ್ಲಿ ಜನಾಂಗೀಯ ವಿಚಾರ ತರಲು ನನಗೆ ಇಷ್ಟವಿಲ್ಲ. ಆದ್ರೆ ಸಾಲಿನಲ್ಲಿದ್ದವರ ಪೈಕಿ ನನ್ನನ್ನು ಮಾತ್ರ ಪಕ್ಕಕ್ಕೆ ಎಳೆದರು. ನನ್ನ ಪತಿಯ ಮುಖ ನೋಡಿದ ಮೇಲೆ ಸಾಮಾನ್ಯ ತಪಾಸಣೆ ಮಾಡಿದ್ರು. ಈ ಬಗ್ಗೆ ನನಗೆ ನಿಮ್ಮಿಂದ ಆದಷ್ಟು ಬೇಗ ಉತ್ತರ ಬೇಕು ಎಂದು ಶೃತಿ ಪೋಸ್ಟ್ ಮಾಡಿದ್ದರು.

    ಈ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುವಂತೆ ಫ್ರಾಂಕ್‍ಫರ್ಟ್ ಟಮಿರ್ನಲ್‍ನ ಅಕೌಂಟ್‍ನಿಂದ ಕೇಳಲಾಗಿದೆ. ಆದರೂ ಈ ಬಗ್ಗೆ ಮತ್ತೊಮ್ಮೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿರೋ ಶೃತಿ, ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದ ಅಧಿಕಾರಿಗಳು ದೂರು ನೀಡಿದ್ದೇನೆ. ಎರಡು ದಿನಗಳಾದ್ರೂ ಅವರಿಂದ ಯಾವುದೇ ಉತ್ತರವಿಲ್ಲ ಅಂತ ಹೇಳಿದ್ದಾರೆ.

    ಈ ಬಗ್ಗೆ ಶೃತಿ ವಿಮಾನ ನಿಲ್ದಾಣದಲ್ಲೂ ದೂರು ದಾಖಲಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಜರ್ಮನ್‍ನಲ್ಲಿರುವ ದೂತವಾಸದ ಅಧಿಕಾರಿಗಳ ವಿವರ ಕೇಳಿದ್ದಾರೆ. ಪ್ರಕರಣ ಸಂಬಂಧ ವಿಚಾರಣೆ ನಡೆಸುವಂತೆಯೂ ಸೂಚಿಸಿದ್ದಾರೆ ಎಂದು ವರದಿಯಾಗಿದೆ.