Tag: ಏರ್ ಪೋರ್ಟ್

  • ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆ ಬಿರುಕು – ಬದಲಿ ಮಾರ್ಗ ವ್ಯವಸ್ಥೆ

    ಮಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸುವ ಸೇತುವೆ ಬಿರುಕು – ಬದಲಿ ಮಾರ್ಗ ವ್ಯವಸ್ಥೆ

    ಮಂಗಳೂರು: ಏರ್ ಪೋರ್ಟಿಗೆ ತೆರಳುವ ಮರವೂರು ಮುಖ್ಯ ಸೇತುವೆ ಬಿರುಕು ಬಿಟ್ಟಿದೆ. ಕಾವೂರು ಸಮೀಪದ ಮರವೂರಿನ ಫಲ್ಗುಣಿ ನದಿಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದನ್ನು ತಿಳಿದ ಕಾವೂರು ಪೊಲೀಸರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದ್ದು ಹೆಚ್ಚಿನ ಅಪಾಯವಾಗುವುದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗಿದೆ.

    ಸೋಮವಾರ ರಾತ್ರಿಯೇ ಹಿರಿಯ ಅಧಿಕಾರಿಗಳು ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ಸ್ಥಳೀಯ ಶಾಸಕ ಉಮಾನಾಥ್ ಕೋಟ್ಯಾನ್, ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ಆಗಮಿಸಿದ್ದು ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಬಂದ್ ಮಾಡಲು ಸೂಚಿಸಿದ್ದರು. ಮಂಗಳೂರು ನಗರದಿಂದ ಬಜ್ಪೆ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಸಂಪರ್ಕ ಕಡಿತಗೊಂಡಿರೋದ್ರಿಂದ ಬಜ್ಪೆ ಏರ್‍ಪೋರ್ಟ್‍ಗೆ ತೆರಳುವ ವಾಹನಗಳನ್ನು ಕಾವೂರಿನಲ್ಲಿ ಡೈವರ್ಟ್ ಮಾಡಲಾಗುತ್ತಿದೆ.

    ಕಾವೂರು ಕಡೆಯಿಂದ ಕಟೀಲು, ಬಜ್ಪೆಗೆ ತೆರಳುವ ವಾಹನಗಳಿಗೂ ಸಂಚಾರಕ್ಕೆ ಅವಕಾಶ ಇಲ್ಲ. ಮಂಗಳೂರು ನಗರ ಭಾಗದಿಂದ ಬಜ್ಪೆಗೆ ತೆರಳಬೇಕಿದ್ದರೆ ಇನ್ನು ನಂತೂರು, ವಾಮಂಜೂರು, ಗುರುಪುರ, ಕೈಕಂಬ, ಬಜ್ಪೆ ಮೂಲಕ ಸುತ್ತು ಬಳಸಿ ತೆರಳಬೇಕಾಗಿದೆ. ಉಡುಪಿಯಿಂದ ಬರುವವರೂ ಮುಲ್ಕಿ, ಕಿನ್ನಿಗೋಳಿ, ಕಟೀಲು ಮಾರ್ಗವಾಗಿ ಬಜ್ಪೆಗೆ ಬರಬೇಕಾಗುತ್ತದೆ. ಮಂಗಳೂರು ಗ್ರಾಮೀಣ ಭಾಗದಿಂದ ನಗರಕ್ಕೆ ಪ್ರಮುಖ ಕೊಂಡಿಯಾಗಿದ್ದ ಸೇತುವೆ ಇಂದು ಕುಸಿಯುವ ಭೀತಿಯಲ್ಲಿದೆ. ಇಲ್ಲಿ ಹೊಸ ಸೇತುವೆ ಕಾಮಗಾರಿ ನಡಿಯುತ್ತಿದ್ದು, ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸೇತುವೆ ಒಂದು ಭಾಗದ ಪಿಲ್ಲರ್ ಕುಸಿದು ಸೇತುವೆ ಬಿರುಕು ಬಿಟ್ಟಿದೆ. ಇದನ್ನೂ ಓದಿ: ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ- ರೈತರಲ್ಲಿ ಆತಂಕ

  • ಮಾಜಿ ಸಚಿವ ಯು.ಟಿ ಖಾದರ್ ಕಾರು ಫಾಲೋ ಮಾಡ್ಕೊಂಡು ಬಂದ ಅಪರಿಚಿತರು!

    ಮಾಜಿ ಸಚಿವ ಯು.ಟಿ ಖಾದರ್ ಕಾರು ಫಾಲೋ ಮಾಡ್ಕೊಂಡು ಬಂದ ಅಪರಿಚಿತರು!

    ಮಂಗಳೂರು: ಅಪರಿಚಿತ ವ್ಯಕ್ತಿಗಳು ಮಾಜಿ ಸಚಿವ ಯು.ಟಿ ಖಾದರ್ ಕಾರು ಫಾಲೋ ಮಾಡಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್ ವರೆಗೂ ಅಪರಿಚಿತರು ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ಸುಮಾರು ಹತ್ತು ಕಿ.ಮೀ ವರೆಗೂ ಖಾದರ್ ಕಾರಿನ ಹಿಂದೆ ಬಂದಿದ್ದಾರೆ. ಆಗ ಅನುಮಾನ ಬಂದು ಖಾದರ್ ಎಸ್ಕಾರ್ಟ್ ವಾಹನದ ಪೊಲೀಸರು ಬೈಕ್ ತಡೆಹಿಡಿದಿದ್ದಾರೆ. ನಂತೂರು ಬಳಿ ಎಸ್ಕಾರ್ಟ್ ವಾಹನ ನಿಲ್ಲಿಸಿ ಬೈಕಿನ ಹಿಂದೆ ಪೊಲೀಸರು ಓಡಿದ್ದಾರೆ. ತಕ್ಷಣ ಎಚ್ಚೆತ್ತ ಬೈಕ್ ಸವಾರರು ಬೈಕ್ ತಿರುಗಿಸಿ ಪರಾರಿಯಾಗಿದ್ದಾರೆ.

    ಖಾದರ್ ಎಸ್ಕಾರ್ಟ್ ವಾಹನದ ಎಎಸ್‍ಐ ಸುಧೀರ್ ಮಾಹಿತಿಯಂತೆ ಅಪರಿಚಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅಪರಿಚಿತ ಬೈಕ್ ಸವಾರರು ಕೆಲ ಕಾಲ ಆತಂಕ ಸೃಷ್ಟಿಸಿದ್ದಾರೆ. ಬೈಕ್ ನಂಬರ್ ನೋಟ್ ಮಾಡಿಕೊಂಡಿರುವ ಪೊಲೀಸರು ವಿಳಾಸ ಪತ್ತೆಗಿಳಿದಿದ್ದಾರೆ.

    ಖಾದರ್ ಅವರು ಬೆಂಗಳೂರಿಗೆ ತೆರಳಲು ದೇರಳಕಟ್ಟೆಯಿಂದ ಪೊಲೀಸ್ ಎಸ್ಕಾರ್ಟ್ ನಲ್ಲಿ ಏರ್ ಪೋರ್ಟಿಗೆ ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಜಮ್ಮು- ಕಾಶ್ಮೀರದ 33 ನಾಯಕರ ವಿದೇಶ ಪ್ರವಾಸಕ್ಕೆ ತಡೆ

    ಜಮ್ಮು- ಕಾಶ್ಮೀರದ 33 ನಾಯಕರ ವಿದೇಶ ಪ್ರವಾಸಕ್ಕೆ ತಡೆ

    – ದುಬೈಗೆ ಹೊರಟಿದ್ದ ಮಾಜಿ ಶಾಸಕನನ್ನ ತಡೆದ ಸಿಬ್ಬಂದಿ

    ಶ್ರೀನಗರ: ಜಮ್ಮು ಕಾಶ್ಮೀರದ 33 ನಾಯಕರ ವಿದೇಶ ಪ್ರವಾಸಕ್ಕೆ ತಡೆ ನೀಡಿ ಆದೇಶಿಸಲಾಗಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮಾಜಿ ಶಾಸಕ ಅಲ್ತಾಫ್ ಅಹ್ಮದ್ ವಾನಿ ದುಬೈಗೆ ಹೊರಟಿದ್ದರು. ಆದ್ರೆ ವಿಮಾನ ನಿಲ್ದಾಣದ ಸಿಬ್ಬಂದಿ ಅವರ ಪ್ರಯಾಣಕ್ಕೆ ಅವಕಾಶ ನೀಡಿಲ್ಲ.

    ಜಮ್ಮು ಕಾಶ್ಮೀರದ ವಿವಿಧ ಪಕ್ಷಗಳ ಒಟ್ಟು 33 ನಾಯಕರ ಹೆಸರು ಆದೇಶದ ಪಟ್ಟಿಯಲ್ಲಿದೆ. ಆದ್ರೆ ಮಾಜಿ ಮುಖ್ಯಮಂತ್ರಿ ಡಾ.ಫಾರೂಖ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಹೆಸರನ್ನ ಈ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ.

    ವಿದೇಶ ಪ್ರಯಾಣ ತಡೆ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಅಲ್ತಾಫ್ ಅಹ್ಮದ್ ವಾನಿ, ನಾನು ದುಬೈನಲ್ಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೊರಟಿದ್ದೆ. ಕುಟುಂಬ ಸಮೇತರಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದ ವೇಳೆ ಇಮಿಗ್ರೇಷನ್ ಕೌಂಟರ್ ನಲ್ಲಿ ಅಧಿಕಾರಿಗಳು ನನ್ನ ಬೇರೆ ಕೊಠಡಿಗೆ ಕರೆದುಕೊಂಡು ಹೋದರು. ಪಾಸ್‍ಪೋರ್ಟ್ ನಲ್ಲಿ ಸಮಸ್ಯೆ ಇರಬಹುದು ಎಂದು ತಿಳಿದುಕೊಂಡಿದ್ದೆ. ಸುಮಾರು ಮೂರು ಗಂಟೆ ಕಾಲ ನನ್ನನ್ನು ಕೊಠಡಿಯಲ್ಲಿ ಕೂರಿಸಲಾಗಿತ್ತು. ಆದ್ರೆ ನನ್ನ ಪ್ರಯಾಣ ತಡೆದ ಬಗ್ಗೆ ಯಾರೂ ಸಹ ಸ್ಪಷ್ಟೀಕರಣ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಜಮ್ಮು ಕಾಶ್ಮೀರ ಪೊಲೀಸರ ಮಧ್ಯಸ್ಥಿಕೆ ನಂತರ ಹೊರಗೆ ಕಳುಹಿಸಿ, ಆದೇಶದ ಪ್ರಕಾರ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ ಎಂಬ ಮಾಹಿತಿ ನೀಡಿದರು. ಕುಟುಂಬಸ್ಥರಿಗೆ ದುಬೈಗೆ ತೆರಳುವಂತೆ ಹೇಳಿ, ಅಧಿಕಾರಿಗಳಿಗೆ ಈ ಕುರಿತು ಸ್ಪಷ್ಟನೆ ನೀಡಬೇಕೆಂದು ತಿಳಿಸಿ ಹಿಂದಿರುಗಿ ಬಂದಿದ್ದೇನೆ. ಪಾಸ್‍ಪೋರ್ಟ್ ಹಿಂದಿರುಗಿಸಿರು ಅಧಿಕಾರಿಗಳು ಮಾರ್ಚ್ 2021ರವರೆಗೆ ನಾನು ವಿದೇಶಕ್ಕೆ ತೆರಳುವ ಹಾಗಿಲ್ಲ ಎಂದು ಸೂಚಿಸಿದ್ದಾರೆ. ಸದ್ಯ ನಾನು ದೆಹಲಿಯಲ್ಲಿದ್ದೇನೆ ಅಂತ ಅಲ್ತಾಫ್ ವಾನಿ ಹೇಳಿದ್ದಾರೆ.

    ಆಗಸ್ಟ್ 5, 2019ರಂದು ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವೇಳೆ ಕೇಂದ್ರ ಒಟ್ಟು 37 ನಾಯಕರ ವಿದೇಶ ಪ್ರವಾಸಕ್ಕೆ ತಡೆ ಹಿಡಿದಿತ್ತು. ಮೂರು ತಿಂಗಳ ನಂತರ ಪಟ್ಟಿಯಿಂದ ಕೆಲವರ ಹೆಸರು ಕೈ ಬಿಟ್ಟು 33 ನಾಯಕರ ವಿದೇಶ ಪ್ರವಾಸ ಕೈಗೊಳ್ಳದಂತೆ ಆದೇಶದಲ್ಲಿ ಸೂಚಿಸಲಾಗಿದೆ.

  • ಹೋಟೆಲ್ ಕ್ವಾರಂಟೈನ್‍ಗೆ ಒಪ್ಪದ ಪ್ರಯಾಣಿಕರು ದೆಹಲಿಗೆ ವಾಪಸ್

    ಹೋಟೆಲ್ ಕ್ವಾರಂಟೈನ್‍ಗೆ ಒಪ್ಪದ ಪ್ರಯಾಣಿಕರು ದೆಹಲಿಗೆ ವಾಪಸ್

    – ಏರ್‌ಪೋರ್ಟಿನಲ್ಲಿ ಮಹಿಳೆ ರಂಪಾಟ
    – ಹೋಂ ಕ್ವಾರಂಟೈನ್‍ಗೆ ತೆರಳಿದ ಸದಾನಂದ ಗೌಡ

    ಬೆಂಗಳೂರು: ಇಂದಿನಿಂದ ದೇಶಿಯ ವಿಮಾನಗಳ ಹಾರಾಟ ಆರಂಭವಾಗಿದ್ದು, ಚೆನ್ನೈ ಹಾಗೂ ದೆಹಲಿಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳು ಆಗಮಿಸಿವೆ.

    ಎರಡು ತಿಂಗಳ ಬಳಿಕ ಮೊದಲ ಬಾರಿಗೆ ದೇಶಿಯ ವಿಮಾನ ಹಾರಾಟ ನಡೆಸಿದ್ದು, ಇಂದು 120 ಜನ ಪ್ರಯಾಣಿಕರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬಂದವರನ್ನೆಲ್ಲ ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇದಕ್ಕೆ ಒಪ್ಪದ ಕೆಲ ಪ್ರಯಾಣಿಕರು ದೆಹಲಿಗೆ ವಾಪಸ್ಸಾಗಿದ್ದಾರೆ.

    ಎಲ್ಲಾ ಪ್ರಯಾಣಿಕರಿಗೆ ಏಳು ದಿನ ಹೋಟೆಲ್ ಕ್ವಾರಂಟೈನ್ ಇನ್ನೂ ಏಳು ದಿನ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಕ್ವಾರಂಟೈನ್ ಗೆ ಹೋಗುವವರು ತಮ್ಮದೇ ಖರ್ಚಿನಲ್ಲಿ ಟಿಕೆಟ್ ಖರೀದಿ ಮಾಡಬೇಕು, ಹೋಮ್ ಕ್ವಾರಂಟೈನ್ ಆಗುವವರು ಕೂಡ ತಮ್ಮದೇ ಖರ್ಚಿನಲ್ಲಿ ಕ್ಯಾಬ್ ಗಳನ್ನು ಬುಕ್ ಮಾಡಿಕೊಳ್ಳಬೇಕು.

    ಏರ್ ಪೋರ್ಟಿನಿಂದ ನಿರ್ಗಮನ ಮಾಡುವವರಿಗೆ ಹೈಟೆಕ್ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿಎ. ಟಿವಿ ಸ್ಕ್ರೀನ್ ನಲ್ಲಿ ಪ್ರತಿ ಪ್ರಯಾಣಿಕರ ಬಾಡಿ ಟೆಂಪರೇಚರ್ ಚೆಕ್ ಮಾಡಲಾಗುತ್ತಿದೆ. ಬಾಡಿ ಟೆಂಪರೇಚರ್ 38 ಕ್ಕಿಂತ ಜಾಸ್ತಿ ಬಂದ್ರೆ ಪ್ರಯಾಣಕ್ಕೆ ಅವಕಾಶವಿಲ್ಲ.

    ಪ್ರತಿ ಅರ್ಧ ಗಂಟೆಗೊಮ್ಮೆ ಇಡೀ ಏರ್ ಪೋರ್ಟ್ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇಂದು 94 ವಿಮಾನ ಗಳು ಏರ್ಪೋರ್ಟಿನಿಂದ ಆಗಮನ ಮತ್ತು ನಿರ್ಗಮನ ಮಾಡಲಿವೆ. 6 ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಹೋಟೆಲ್ ಕ್ವಾರಂಟೈನ್ ಕಡ್ಡಾಯವಾಗಿದ್ದು, ಉಳಿದ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ.

    ಹೋಟೆಲ್ ಕ್ವಾರಂಟೈನ್ ಗೆ ನಿರಾಕರಿಸಿ ದೆಹಲಿ ಮತ್ತು ಚೆನ್ನೈನಿಂದ ಬಂದ ಪ್ರಯಾಣಿಕರು ಕ್ಯಾತೆ ತೆಗೆದಿದ್ದಾರೆ. ಈ ಸಂಬಂಧ ಏರ್ ಪೋರ್ಟ್ ಒಳಗೆ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಹೋಂ ಕ್ವಾರಂಟೈನ್ ಕಳುಹಿಸಿ, ಹೋಟೆಲ್ ಕ್ವಾರಂಟೈನ್ ಗೆ ಹೋಗಲ್ಲ. ಬೇರೆ ಬೇರೆ ರಾಜ್ಯಗಳಿಂದ ದೆಹಲಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದೀವಿ. ನಾವು ದೆಹಲಿ ರಾಜ್ಯದವರಲ್ಲ ಎಂದು ಗಲಾಟೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಕ್ವಾರಂಟೈನ್ ಗೆ ಒಪ್ಪಿಕೊಳ್ಳದ ಪ್ರಯಾಣಿಕರನ್ನು ಸಿಬ್ಬಂದಿ ದೆಹಲಿಗೆ ವಾಪಸ್ ಕಳುಹಿಸಿದ್ದಾರೆ. ಉಳಿದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲಾಗಿದೆ.

    ಎಸ್ಕೇಪ್ ಆಗ್ತಿದ್ದ ಮಹಿಳೆ:
    ಚೆನ್ನೈನಿಂದ ಬಂದು ಕ್ವಾರಂಟೈನ್ ಆಗದೇ ಏರ್ ಪೋರ್ಟಿನಿಂದ ಮಹಿಳೆಯೊಬ್ಬರು ಎಸ್ಕೇಪ್ ಆಗಲು ಯತ್ನಿಸಿದ್ದು, ಈ ವೇಳೆ ಆಕೆಯನ್ನು ಪಬ್ಲಿಕ್ ಟಿವಿ ಬೆನ್ನಟ್ಟಿದೆ. ಬ್ಯಾರಿಕೇಡ್ ದಾಟಿ ಹೊರಗಡೆ ಬಂದ ದೃಶ್ಯ ನೋಡಿದ ಪಬ್ಲಿಕ್ ಟಿವಿ ಮಹಿಳೆಯನ್ನು ಹಿಂಬಾಲಿಸಿತ್ತು. ಈ ವೇಳೆ ಕ್ಯಾಮೆರಾ ಕಂಡು ಮಹಿಳೆ ಗರಂ ಆಗಿದ್ದಾರೆ.

    ಏರ್ ಪೋರ್ಟ್ ಸಿಬ್ಬಂದಿಯ ಕಣ್ತಪ್ಪಿಸಿ ಮಹಿಳೆ ಎಸ್ಕೇಪ್ ಆಗುತ್ತಿದ್ದರು. ಕೂಡಲೇ ಈ ವಿಚಾರ ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ಕ್ವಾರಂಟೈನ್ ಆಗದ ವಿಚಾರಕ್ಕೆ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸುತ್ತಿದ್ದ ವೇಳೆ ಮಹಿಳೆ ಎಸ್ಕೇಪ್ ಆಗಲು ಯತ್ನಿಸಿದ್ದರು. ಇತ್ತ ದೆಹಲಿಯಿಂದ ಆಗಮಿಸಿದ ಕೇಂದ್ರ ಸಚಿವ ಸದಾನಂದ ಗೌಡ ಅವರು ನೇರವಾಗಿ ಹೋಂ ಕ್ವಾರಂಟೈನ್ ಗೆ ತೆರಳಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ಭೀತಿ- ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈ ಅಲರ್ಟ್

    ರಾಜ್ಯದಲ್ಲಿ ಕೊರೊನಾ ಭೀತಿ- ಮಂಗ್ಳೂರು ಏರ್‌ಪೋರ್ಟಿನಲ್ಲಿ ಹೈ ಅಲರ್ಟ್

    ಮಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ಏರ್‌ಪೋರ್ಟಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಕರಾವಳಿಯಲ್ಲಿ ವೈರಸ್ ಬರದಂತೆ ತಡೆಗಟ್ಟಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಯಂತ್ರಗಳನ್ನು ಅಳವಡಿಸಲಾಗಿದೆ. ದುಬೈ ಸೇರಿದಂತೆ ಎಲ್ಲಾ ದೇಶಗಳಿಂದ ಬರುವ ವಿಮಾನದಲ್ಲಿ ಹೆಚ್ಚುವರಿ ತಪಾಸಣೆ ಮಾಡಲಾಗುತ್ತಿದ್ದು, ಹಡಗಿನ ಮೂಲಕ ಬರುವವರಿಗೂ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ. ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಟರ್ ವಾರ್ಡ್ ನಿರ್ಮಾಣ ಮಾಡಲಾಗಿದೆ.

    ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಕರೋನಾ ಕಟ್ಟೆಚ್ಚರ ವಹಿಸಲಾಗಿದ್ದು, ಆಂಧ್ರ, ತೆಲಂಗಾಣ, ಕೇರಳ ಗಡಿಯಲ್ಲಿ ಎಚ್ಚರಿಕೆ ನೀಡಲಾಗಿದೆ. ಬಳ್ಳಾರಿ, ಕಲಬುರುಗಿ, ಬೆಳಗಾವಿ, ಚಾಮರಾಜನಗರ, ರಾಯಚೂರು ಭಾಗಗಳಲ್ಲಿ ಕೂಡ ಎಚ್ಚರಿಕೆ ವಹಿಸಲಾಗುತ್ತಿದೆ. ಇದನ್ನೂ ಓದಿ: ಆಂಧ್ರದ ಟೆಕ್ಕಿಗೆ ಕೊರೊನಾ : ಬೆಂಗ್ಳೂರಲ್ಲಿ ಲ್ಯಾಂಡ್ ಆಗಿದ್ರೂ ಪತ್ತೆ ಆಗಲಿಲ್ಲ ಯಾಕೆ?-ಟೆಕ್ಕಿಗೆ ಕೊರೊನಾ ಬಂದಿದ್ದು ಹೇಗೆ?

    ಇತ್ತ ಬೆಂಗಳೂರು ಟೆಕ್ಕಿಗೆ ಕೊರೊನಾ ಜ್ವರ ಕಂಡು ಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಕಂಪನಿಗಳ ಮೇಲೆ ನಿಗಾ ವಹಿಸಲಾಗಿದೆ. ಅಲ್ಲದೆ ಖಾಸಗಿ ಕಂಪನಿಗಳ ನೌಕರರ ಮೇಲೆ ನಿಗಾಕ್ಕೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಏರ್ ಪೋರ್ಟಲ್ಲಿ ಬಾಂಬ್, ಲಾಕರ್‌ನಲ್ಲಿ ಸೈನೈಡ್ ಬಚ್ಚಿಟ್ಟ ಆದಿತ್ಯ ರಾವ್

    ಏರ್ ಪೋರ್ಟಲ್ಲಿ ಬಾಂಬ್, ಲಾಕರ್‌ನಲ್ಲಿ ಸೈನೈಡ್ ಬಚ್ಚಿಟ್ಟ ಆದಿತ್ಯ ರಾವ್

    ಉಡುಪಿ: ಬಾಂಬರ್ ಆದಿತ್ಯನ ತನಿಖಾ ಪುರಾಣದಲ್ಲಿ ಅಗೆದಷ್ಟು ವಿಷಯಗಳು ಸಿಗ್ತಾಯಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯನ ವಿಚಾರಣೆ ಇಂದು ತವರು ಜಿಲ್ಲೆಗೆ ಶಿಫ್ಟ್ ಆಗಿದೆ. ಮಂಗಳೂರು ಏರ್ ಪೋರ್ಟಿನಲ್ಲಿ ಬಾಂಬ್ ಇಟ್ಟು ಸೀದಾ ಬಂದದ್ದು ವಡಭಾಂಡೇಶ್ವರದ ಬಲರಾಮ ದೇವರ ಸನ್ನಿಧಿಗೆ ಅಂತ ಆದಿತ್ಯ ಬಾಯಿ ಬಿಟ್ಟಿದ್ದಾನೆ. ಖತರ್ನಾಕ್ ಆದಿತ್ಯ ಪುರಾಣಕ್ಕೆ ಸೈನೈಡ್ ಈಗ ತಗ್ಲಾಕೊಂಡಿದೆ.

    ಮಂಗಳೂರು ಏರ್ಪೋರ್ಟಿಗೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸೈಕೋ ಬಾಂಬರ್ ತನಿಖೆ ಶುರುವಾಗಿದೆ. ತನಿಖೆ ವೇಳೆ ಮಾಹಿತಿಗಳನ್ನು ಬಹಿರಂಗ ಮಾಡಿರುವ ಆದಿತ್ಯ, ಹಲವು ಬ್ಯಾಂಕಿನಲ್ಲಿ ಲಾಕರ್ ಗಳನ್ನು ಪಡೆದಿರುವ ಮಾಹಿತಿ ನೀಡಿದ್ದಾನೆ. ತನಿಖಾಧಿಕಾರಿ ಬೆಳ್ಳಿಯಪ್ಪ ಆರೋಪಿಯನ್ನು ಕಡಿಯಾಳಿಯ ಕರ್ಣಾಟಕ ಬ್ಯಾಂಕಿಗೆ ಕರೆತಂದಿದ್ದಾರೆ. ಲಾಕರ್ ನಲ್ಲಿ ಕೆಲ ವಸ್ತುಗಳನ್ನು ಇಟ್ಟ ಬಗ್ಗೆ ಆದಿತ್ಯ ಹೇಳಿದ್ದ. 4ನೇ ಶನಿವಾರ ಬ್ಯಾಂಕ್ ರಜೆ ಇದ್ದರೂ ಬಾಗಿಲು ತೆರೆಸಿ ತನಿಖೆ ಮಾಡಲಾಯ್ತು.

    ಲಾಕರ್ ತೆರೆದಾಗ ಬೆಚ್ಚಿಬಿದ್ದ ಪೊಲೀಸರು:
    ಸೈಕೋ ಬಾಂಬರ್ ಆದಿತ್ಯ ತನಿಖೆ ಮಾಡುತ್ತಾ ಲಾಕರ್ ನಲ್ಲಿ ಆದಿತ್ಯ ಇಟ್ಟದ್ದ ಬಾಕ್ಸ್ ಗಳನ್ನು ತೆರೆದು ನೋಡಿದಾಗ ಚಿನ್ನದ ಆಭರಣ ಇಡುವ ಬಾಕ್ಸ್ ಪತ್ತೆಯಾಗಿದೆ. ಬಾಕ್ಸ್ ಒಳಗೆ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ. ಎಫ್ ಎಸ್ ಎಲ್ ತಜ್ಞರಿಗೆ ಪೊಲೀಸರು ಅದನ್ನು ಒಪ್ಪಿಸಲಿದ್ದಾರೆ.

    ಮಂಗಳೂರಿನ ಚಿನ್ನದಂಗಡಿಯಿಂದ ಖರೀದಿಸಿದ್ನಂತೆ ಸೈನೈಡ್:
    ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು, ದಾಖಲೆಗಳು, ಸರ್ಟಿಫಿಕೇಟ್ ಗಳನ್ನು ವಶಕ್ಕೆ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ವರ್ಷದ ಹಿಂದೆಯಿಂದ ತಯಾರಿ ಮಾಡಿದ್ನಾ ಎಂಬ ಬಗ್ಗೆ ಸಂಶಯ ಶುರುವಾಗಿದೆ. ಯಾಕಂದರೆ ಆದಿತ್ಯ ಲಾಕರ್ ಓಪನ್ ಮಾಡಿ ವರ್ಷ ಒಂದೂವರೆ ಕಳೆದಿದೆ. ಇದನ್ನೂ ಓದಿ: ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    ಹುಸಿ ಬಾಂಬ್ ಕರೆ ಮಾಡಿದ್ದೇ ಉಡುಪಿಯ ಮಲ್ಪೆಯಿಂದ:
    ಆರೋಪಿ ಆದಿತ್ಯನನ್ನು ಉಡುಪಿಯಿಂದ ಮಲ್ಪೆಗೆ ಶಿಫ್ಟ್ ಮಾಡಲಾಯ್ತು. ಇಲ್ಲಿನ ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರಿಗೆ ಕರೆತರಲಾಯ್ತು. ಮಂಗಳೂರು ಏರ್ ಪೋರ್ಟ್ ಬಳಿ ಬಾಂಬ್ ಇಟ್ಟ ಆದಿತ್ಯ ಸೀದಾ ಮಲ್ಪೆಗೆ ಬಂದಿದ್ದಾನೆ. ಇಲ್ಲಿನ ಪೆಟ್ಟಿಗೆ ಅಂಗಡಿಯೊಂದರ ಬಳಿ ಕುಳಿತು ಇಂಡಿಗೋ ವಿಮಾನದಲ್ಲಿ ಮತ್ತೊಂದು ಬ್ಯಾಗ್ ಬಾಂಬ್ ಇಟ್ಟಿದ್ದೇನೆಂದು ಹೇಳಿ ಸಿಮ್ ಕಾರ್ಡ್ ಬಿಸಾಕಿ ಕಾಲ್ಕಿತ್ತಿದ್ದಾನೆ. ಇದನ್ನು ಮಹಜರು ವೇಳೆ ಆದಿತ್ಯನೇ ಒಪ್ಪಿಕೊಂಡಿದ್ದಾನೆ.

    ಏರ್ ಪೋರ್ಟ್ ಟರ್ಮಿನಲ್ ಮ್ಯಾನೇಜರ್‍ಗೆ ಆದಿತ್ಯ ಕರೆ ಮಾಡಿದ ನಂತರ ಕಾರ್ಕಳ ಮೂಲದ ಜಿಂ ಮಾಸ್ಟರ್ ಗೆ ಫೋನ್ ಮಾಡಿ ಕಾರ್ಕಳಕ್ಕೆ ಹೊರಟಿದ್ದಾನೆ. ಈ ಎಲ್ಲಾ ಫೋನ್ ಕರೆಗಳು ಮಲ್ಪೆ ಫೋನ್ ಟವರಲ್ಲಿ ದಾಖಲಾಗಿದೆ.

    ಆದಿತ್ಯ ರಾವ್ ಏರ್ ಪೋರ್ಟ್ ಬಾಂಬಿಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರಿನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು- ಸಿಬ್ಬಂದಿ ಜೊತೆ ಪೊಲೀಸರು ಮಾಹಿತಿ ಪಡೆದರು. ಏರ್ ಪೋರ್ಟ್ ಅಧಿಕಾರಿಗಳ ಕೋಪದಲ್ಲಿ ಬಾಂಬ್ ಫಿಕ್ಸ್ ಮಾಡಿದ ಆದಿತ್ಯ, ಮಾನಸಿಕವಾಗಿ ಕುಗ್ಗಿದ್ದಾಗ ಸೈನೈಡ್ ಜಗಿದು ಸಾಯಲು ರೆಡಿ ಮಾಡಿಕೊಂಡಿದ್ದ ಎಂಬೂದು ಗೊತ್ತಾಗುತ್ತಿದೆ. ಆದಿತ್ಯನ ಪುರಾಣದಲ್ಲಿ ಇನ್ನೆಷ್ಟು ಅಧ್ಯಾಯಗಳಿವೆ ಎಂಬೂದು ಸದ್ಯದ ಕುತೂಹಲ.

  • ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    – ಕೇಂದ್ರಕ್ಕೆ ವರದಿ ಸಲ್ಲಿಸಿದ ತನಿಖಾ ತಂಡ
    – ಸ್ಥಳ ಮಹಜರು ವೇಳೆ ಸತ್ಯ ಬಾಯ್ಬಿಟ್ಟ ಆದಿತ್ಯ

    ಮಂಗಳೂರು: ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿತವಾಗಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಆದಿತ್ಯ ರಾವ್ ಬಗ್ಗೆ ಕೇಂದ್ರಕ್ಕೆ ವರದಿ ರವಾನೆಯಾಗಿದೆ. ಪೊಲೀಸರ ಪ್ರಾಥಮಿಕ ವರದಿಯನ್ನು ಕೇಂದ್ರ ಗೃಹ ಇಲಾಖೆ ಪರಿಶೀಲಿಸಲಿದ್ದು, ಎನ್‍ಐಎ ತನಿಖೆ ಅಗತ್ಯವಿದೆಯೇ ಅನ್ನುವ ಬಗ್ಗೆ ನಿರ್ಧರಿಸಲಿದೆ.

    ಬಾಂಬರ್ ಆದಿತ್ಯನನ್ನು ಪೊಲೀಸರು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಆರೋಪಿ ಆದಿತ್ಯನನ್ನು ವಿಚಾರಣೆ ನಡೆಸಿದ ಪೊಲೀಸರು, ಸಮಗ್ರ ವರದಿಯನ್ನು ರೆಡಿ ಮಾಡಿದ್ದರು. ಬಾಂಬ್ ತಯಾರಿಕೆ, ಅದಕ್ಕೆ ಬಳಸಿದ ವಸ್ತುಗಳು, ಏರ್ ಪೋರ್ಟ್ ಅಧಿಕಾರಿಗಳು ಟಾರ್ಗೆಟ್ ಆಗಿರುವುದು ಇತ್ಯಾದಿ ವಿಚಾರಗಳ ಬಗ್ಗೆ ಆರೋಪಿ ನೀಡಿದ್ದ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಡೀ ಪ್ರಕರಣದ ಕುರಿತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ

    ತನಿಖಾಧಿಕಾರಿ ಮಂಗಳೂರು ಉತ್ತರ ಎಸಿಪಿ ಕೆ.ಯು ಬೆಳ್ಳಿಯಪ್ಪ ರೆಡಿ ಮಾಡಿದ್ದ ವಿಚಾರಣಾ ವರದಿ ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾಗಿದ್ದು ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದೆ. ಆರೋಪಿ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ತನಿಖೆ ಅಗತ್ಯವಿದ್ದರೆ ವಿಚಾರಣೆಗೆ ಪ್ರತ್ಯೇಕ ತಂಡವನ್ನು ಕಳಿಸಿಕೊಡುವ ಸಾಧ್ಯತೆಯಿದೆ.

    ಅಗತ್ಯ ಕಂಡು ಬಂದಲ್ಲಿ ಭಯೋತ್ಪಾದಕ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ರಾಷ್ಟ್ರೀಯ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಮಂಗಳೂರು ಪೊಲೀಸರು ನೀಡಿರುವ ರಿಪೋರ್ಟ್ ಮಹತ್ವದ್ದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ನಿರ್ಣಯದ ಮೇಲೆ ಪ್ರಕರಣ ಯಾವ ರೀತಿಯ ತಿರುವು ಪಡೆಯುತ್ತೆ ಅನ್ನೋದು ನಿರ್ಧಾರವಾಗಲಿದೆ. ಇದನ್ನೂ ಓದಿ: ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

    ಭಯೋತ್ಪಾದಕರಿಗೆ ಬಳಸುವಂತಹ ಕಠಿಣ ಕಾನೂನುಗಳನ್ನು ಪೊಲೀಸರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಂಡೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಜೀವಂತ ಬಾಂಬ್ ಪತ್ತೆ ವಿಚಾರ ಇಡೀ ದೇಶದ ಗಮನ ಸೆಳೆದ ಪ್ರಕರಣವಾಗಿದ್ದು ಸಹಜವಾಗೇ ಆದಿತ್ಯ ರಾವ್ ಹೈಪ್ರೊಫೈಲ್ ಆರೋಪಿಯಾಗಿ ಬದಲಾಗಿದ್ದಾನೆ.

    ಆರೋಪಿ ಉತ್ತರದಿಂದ ಅಚ್ಚರಿಗೊಂಡ ಪೊಲೀಸರು:
    ಪೊಲೀಸರು ಸ್ಥಳ ಮಹಜರು ನಡೆಸಿದ ವೇಳೆ ತೀರಾ ಸಹಜವಾಗಿ ಆರೋಪಿ ಉತ್ತರ ನೀಡುತ್ತಿದ್ದುದು ಪೊಲೀಸರನ್ನೇ ಅಚ್ಚರಿಗೊಳಿಸಿತ್ತು. ಬಾಂಬ್ ಇದ್ದ ಬ್ಯಾಗ್ ಇಟ್ಟಿದ್ದ ಟಿಕೆಟ್ ಕೌಂಟರ್ ಬಳಿಯ ಕುರ್ಚಿಯನ್ನು ತೋರಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾನೆ. ಪೊಲೀಸರ ಜೊತೆ ತುಳುವಿನಲ್ಲಿಯೇ ಸಂಭಾಷಣೆ ನಡೆಸುತ್ತಾ ಆಟೋ ಇಳಿದು ಎಸ್ಕಲೇಟರ್ ಮೂಲಕ ಮೇಲಿಂದ ಹತ್ತಿ ಬಂದಿದ್ದನ್ನು ತೋರಿಸಿದ್ದಾನೆ. ಮುಖಕ್ಕೆ ಮಾಸ್ಕ್ ಹಾಕಿದ್ದರೂ, ಯಾವುದನ್ನೂ ಆಲಕ್ಷಿಸದೆ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿದ್ದನು. ಬಳಿಕ ಏರ್ ಪೋರ್ಟ್ ಬಳಿಯಿಂದ ಆಟೋ ಮೂಲಕ ಕೆಂಜಾರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಸೆಲೂನ್ ಬಳಿಯಿದ್ದ ಬ್ಯಾಗ್ ತೆಗೆದುಕೊಂಡಿದ್ದನ್ನೂ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ಪೊಲೀಸರು ಈಗಾಗಲೇ ಆರೋಪಿಯನ್ನು ಹತ್ತು ದಿನಗಳ ಕಸ್ಟಡಿಗೆ ಪಡೆದಿದ್ದು ತನಿಖೆಯನ್ನು ಚೆನ್ನೈಗೆ ವಿಸ್ತರಿಸಲಿದ್ದಾರೆ. ಚೆನ್ನೈನಿಂದ ಬಾಂಬ್ ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದ್ದು, ಆ ಬಗ್ಗೆ ಪೊಲೀಸರು ಅಲ್ಲಿಗೆ ಕೊಂಡೊಯ್ದು ವಿಚಾರಣೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಆದಿತ್ಯ ರಾವ್ ಸಂಪೂರ್ಣ ಜಾತಕ ಈಗ ಪೊಲೀಸರ ಕೈಸೇರಿದ್ದು, ಇನ್ನು ಯಾವ ರೀತಿಯ ತನಿಖೆಗೆ ಒಳಪಡಲಿದ್ದಾನೆ ಅನ್ನೋದು ಕುತೂಹಲ ಅಷ್ಟೇ. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ

  • ಏರ್‌ಪೋರ್ಟಿನಲ್ಲಿ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಬ್ಯಾಗ್

    ಏರ್‌ಪೋರ್ಟಿನಲ್ಲಿ ಆತಂಕ ಸೃಷ್ಟಿಸಿದ ಅನುಮಾನಾಸ್ಪದ ಬ್ಯಾಗ್

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾರಸುದಾರರಿಲ್ಲದ ಅನುಮಾನಾಸ್ಪದ ಬ್ಯಾಗ್ ಒಂದು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆಯಿತು.

    ವಿಮಾನ ನಿಲ್ದಾಣದ ಅರೈವಲ್ಸ್ ಗೇಟ್ ಬಳಿಯ ಲಗೇಜ್ ಸಾಗಿಸುವ ಟ್ರಾಲಿ ಮೇಲೆ ಬ್ಯಾಗ್ ಒಂದು ಯಾರೂ ವಾರಸುದಾರರಿಲ್ಲದೆ ಪತ್ತೆಯಾಗಿತ್ತು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಸಾಕಷ್ಟು ಸಮಯ ಕಾದರೂ ಬ್ಯಾಗ್ ತೆಗೆದುಕೊಳ್ಳಲು ಯಾರೂ ಬರಲಿಲ್ಲ. ಹೀಗಾಗಿ ಏಕಾಂಗಿಯಾಗಿದ್ದ ಬ್ಯಾಗ್ ಕಂಡ ಭದ್ರತಾ ಸಿಬ್ಬಂದಿ ಅನುಮಾನ ಪಡುವಂತಾಯಿತು.

    ಸ್ಥಳಕ್ಕೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಯಂತ್ರದ ಮೂಲಕ ಭದ್ರತಾ ಸಿಬ್ಬಂದಿ ಅನುಮಾನಾಸ್ಪದ ಬ್ಯಾಗನ್ನು ಪರಿಶೀಲನೆ ನಡೆಸಿದರು. ಕೊನೆಗೆ ಯಾವುದೇ ಅನುಮಾನಾಸ್ಪದ ರೀತಿಯ ಸ್ಫೋಟಕ ವಸ್ತುಗಳಿಲ್ಲ ಎಂದು ಖಚಿತ ಪಡಿಸಿಕೊಂಡು ಟ್ರಾಲಿ ಸಮೇತ ಬ್ಯಾಗನ್ನು ಭದ್ರತಾ ಸಿಬ್ಬಂದಿ ತೆಗೆದುಕೊಂಡು ಹೋದರು. ಇನ್ನು ಭದ್ರತಾ ಸಿಬ್ಬಂದಿ ಕೊಂಡೊಯ್ದು ಬ್ಯಾಗ್ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಕಚೇರಿಗೆ ಕೊಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಕೆಲ ಪ್ರಯಾಣಿಕರು ಆತುರದಲ್ಲಿ ಬ್ಯಾಗ್ ಬಿಟ್ಟು ಹೋಗುವ ಕಾರಣ ಈ ರೀತಿಯ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಆದರೆ ಯಾವುದೇ ಸಮಯದಲ್ಲೂ ನಿರ್ಲಕ್ಷ್ಯ ವಹಿಸುವಂತಿಲ್ಲ. ಏರ್‌ಪೋರ್ಟಿನಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಪರಿಶೀಲನೆ ನಡೆಸಲಾಗುತ್ತದೆ.

  • ಹುಬ್ಬಳ್ಳಿಯಲ್ಲಿ ಒಂದೂವರೆ ಗಂಟೆ ಅಗಸದಲ್ಲೇ ಸುತ್ತಿದ ವಿಮಾನ

    ಹುಬ್ಬಳ್ಳಿಯಲ್ಲಿ ಒಂದೂವರೆ ಗಂಟೆ ಅಗಸದಲ್ಲೇ ಸುತ್ತಿದ ವಿಮಾನ

    ಹುಬ್ಬಳ್ಳಿ: ಹವಾಮಾನ ವೈಪರಿತ್ಯದಿಂದಾಗಿ ವಿಮಾನವೊಂದು ಸುಮಾರು ಒಂದೂವರೆ ಗಂಟೆ ಕಾಲ ಆಗಸದಲ್ಲೇ ಸುತ್ತು ಹೊಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಮಂಗಳವಾರ ಸಂಜೆ 6:36ಕ್ಕೆ ಗೋವಾದಿಂದ ಹೊರಟ 6 ಇ 7998 ನಂಬರಿನ ಇಂಡಿಗೋ ವಿಮಾನ ಸಂಜೆ ಹುಬ್ಬಳ್ಳಿಯಲ್ಲಿ 7:45ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಪೈಲೆಟ್ ವಿಮಾನವನ್ನ ಲ್ಯಾಂಡ್ ಮಾಡಲಾಗದೇ ಪರಿದಾಡಿದ್ದಾರೆ. ಹೀಗಾಗಿ ವಿಮಾನ ಲ್ಯಾಂಡ್ ಆಗದ ಪರಿಣಾಮ ವಿಮಾನದಲ್ಲಿದ್ದ 60ಕ್ಕೂ ಹೆಚ್ಚು ಪ್ರಯಾಣಿಕರು ಕೆಲಕಾಲ ಕಂಗಾಲಾಗಿದ್ದರು. ಬಳಿಕ ಪೈಲಟ್ ಚಾಕಚಕ್ಯತೆಯಿಂದ ಸುರಕ್ಷಿತವಾಗಿ ವಿಮಾನವನ್ನ ಲ್ಯಾಂಡಿಂಗ್ ಮಾಡಿದ್ದಾರೆ.

    ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಇಳಿಯಲು ATS (ಏರ್ ಪೋರ್ಟ್ ಟೆಕ್ನಿಕಲ್ ಸರ್ವಿಸಸ್) ನಿಂದ ಅನುಮತಿ ಬಾರದ ಹಿನ್ನೆಲೆಯಲ್ಲಿ, ರೇಡರ್ ಸಿಗ್ನಲ್ ಸರಿಯಾಗಿ ಗ್ರಹಿಸದ ಕಾರಣ ವಿಮಾನ ಇಳಿಯಲು ಅನುಮತಿ ನೀಡಿರಲಿಲ್ಲ. ಹೀಗಾಗಿ ವಿಮಾನ ಕೆಲ ಸಮಯ ಹುಬ್ಬಳ್ಳಿ ವಿಮಾನ ನಿಲ್ದಾಣದ ಸುತ್ತ ತಿರುಗಿದೆ. ಬಳಿಕ ಮತ್ತೊಮ್ಮೆ ಇಳಿಯಲು ಬಂದಾಗಲೂ ಸಿಗ್ನಲ್ ಸಿಗದ ಕಾರಣ ಕೊನೆಯ ಕ್ಷಣದಲ್ಲಿ ಹಿಂತಿರುಗಿದ ಪರಿಣಾಮ ವಿಮಾನದ ಲ್ಯಾಂಡಿಂಗ್ ತಡವಾಗಿದೆ ಎಂದು ತಿಳಿದುಬಂದಿದೆ.

    ಸಾಮಾನ್ಯವಾಗಿ 55 ನಿಮಿಷ ತೆಗೆದುಕೊಳ್ಳುವ ವಿಮಾನ ಮಂಗಳವಾರ ನಿಗದಿತ ಸಮಯ 6.55ರ ಬದಲು 19 ನಿಮಿಷ ಮೊದಲು 6.36ಕ್ಕೆ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದೆ. ಅದರೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆದಾಗ ರಾತ್ರಿ 8.03 ನಿಮಿಷವಾಗಿತ್ತು. ಅಂದ್ರೆ ಸುಮಾರು 7.30ಕ್ಕೆ ರೀಚ್ ಆಗಬೇಕಾದ ವಿಮಾನ 8.03ಕ್ಕೆ ಲ್ಯಾಂಡ್ ಆಗಿದೆ. ಅರ್ಥಾತ್ 1 ಗಂಟೆ 27 ನಿಮಿಷ ವಿಮಾನ ಆಗಸದಲ್ಲಿತ್ತು ಎಂಬುದಾಗಿ ತಿಳಿದು ಬಂದಿದೆ.

  • ಅವಘಡಕ್ಕೂ ಮುನ್ನ ಎದ್ದೇಳಿ – ಹೈದರಾಬಾದ್ ಏರ್ ಪೋರ್ಟ್ ವಿರುದ್ಧ ರಿತೇಶ್ ಆಕ್ರೋಶ

    ಅವಘಡಕ್ಕೂ ಮುನ್ನ ಎದ್ದೇಳಿ – ಹೈದರಾಬಾದ್ ಏರ್ ಪೋರ್ಟ್ ವಿರುದ್ಧ ರಿತೇಶ್ ಆಕ್ರೋಶ

    ಮುಂಬೈ: ಬಾಲಿವುಡ್ ನಟ ರಿತೇಶ್ ದೇಶಮುಖ್ ಹೈದರಾಬಾದ್ ಏರ್ ಪೋರ್ಟ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿ ಅವಘಡಕ್ಕೂ ಮುನ್ನ ಎದ್ದೇಳಿ ಎಂದು ಟ್ವೀಟ್ ಮಾಡಿದ್ದಾರೆ.

    ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಾಂಜ್ ನ ಎಮೆರ್ಜಿನ್ಸಿ ಗೇಟ್ ಲಾಕ್ ಆಗಿರುವ ವಿಡಿಯೋವನ್ನು ರಿತೇಶ್ ದೇಶಮುಖ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದಾರೆ. ಏರ್ ಪೋರ್ಟ್ ನಲ್ಲಿ ವೇಟಿಂಗ್ ಲಾಂಜ್ ಕೋಣೆಗೆ ಪ್ರವೇಶಿಲು ಮತ್ತು ನಿರ್ಗಮಿಸಲು ಎಲಿವೇಟರ್ ಒಂದೇ ಮಾರ್ಗವಾಗಿದೆ. ಪಕ್ಕದಲ್ಲಿರುವ ಎಮರ್ಜಿನ್ಸಿ ಗೇಟ್‍ಗೆ ಚೈನ್ ನಿಂದ ಲಾಕ್ ಮಾಡಲಾಗಿದೆ.

    ಟ್ವೀಟ್ ನಲ್ಲಿ ಏನಿದೆ?
    ನಾನು ಇದೀಗ ಹೈದರಾಬಾದ್ ಏರ್ ಪೋರ್ಟ್ ನ ವೇಟಿಂಗ್ ಲಾಂಜ್ ನಲ್ಲಿದ್ದೇನೆ. ಈ ನಿರೀಕ್ಷಣಾ ಕೊಠಡಿಗೆ ತೆರಳಲು ಮತ್ತು ನಿರ್ಗಮಿಸಲು ಒಂದೇ ಎಲಿವೇಟರ್ ಇದೆ. ದಿಢೀರ್ ಅಂತಾ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇರುವ ಒಂದು ಮಾರ್ಗ ಬಂದ್ ಆಗಿತ್ತು. ಎಮರ್ಜಿನ್ಸಿ ಗೇಟ್‍ನ್ನು ಚೈನ್ ನಿಂದ ಲಾಕ್ ಮಾಡಲಾಗಿದೆ. ಒಂದು ವೇಳೆ ಬೆಂಕಿ ಅವಘಡ ಸಂಭವಿಸಿದ್ರೆ ಮುಂದೆ ನಡೆಯುವ ಅನಾಹುತಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

    ನಿರೀಕ್ಷಣಾ ಕೊಠಡಿಯ ಎಲಿವೇಟರ್ ನಿಂತಿದ್ದರಿಂದ ಪ್ರಯಾಣಿಕರು ತುರ್ತು ನಿರ್ಗಮನದ ಬಾಗಿಲು ತೆರೆಯುವಂತೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ವಿಮಾನ ಟೇಕ್ ಆಫ್ ಆಗುತ್ತಿದ್ದು, ಡೋರ್ ತೆರೆಯಿರಿ ಎಂದರೂ ಸಿಬ್ಬಂದಿ ಬಾಗಿಲು ತೆಗೆದಿಲ್ಲ. ಎಮರ್ಜಿನ್ಸಿ ವೇಳೆಯಲ್ಲಿ ಬಾಗಿಲು ತೆಗೆಯದೇ ಇದ್ದರೆ ಹೇಗೆ? ಅನಾಹುತಕ್ಕೂ ಮುನ್ನ ಹೈದರಾಬಾದ್ ಏರ್ ಪೋರ್ಟ್ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಟ್ವೀಟ್ ಮಾಡಿದ್ದಾರೆ.

    ರಿತೇಶ್ ಟ್ವೀಟಿಗೆ ಪ್ರತಿಕ್ರಿಯಿಸಿರುವ ಏರ್ ಪೋರ್ಟ್, ಸೇವೆಯಲ್ಲಿ ತೊಂದರೆಯಾಗಿದ್ದಕ್ಕೆ ವಿಷಾದಿಸುತ್ತೇವೆ. ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಸಮಸ್ಯೆಯನ್ನ ಪರಿಹರಿಸಲಾಗಿದೆ. ನಮ್ಮ ಏರ್ ಪೋರ್ಟ್ ಟರ್ಮಿನಲ್ ಗಳು ಸುರಕ್ಷತೆಗೆ ಅನುಗುಣವಾಗಿರುತ್ತವೆ. ಒಂದು ವೇಳೆ ತುರ್ತು ಸಮಯದಲ್ಲಿ ಪ್ರಯಾಣಿಕರು ಗ್ಲಾಸ್ ಒಡೆದು ಹೊರಗೆ ಬರಬಹುದು. ನಾವು ಪ್ರಯಾಣಿಕರ ಸುರಕ್ಷತೆಗೆ ಮೊದಲ ಅದ್ಯತೆಯನ್ನು ನೀಡುತ್ತೇವೆ ಎಂದು ಟ್ವೀಟ್ ಮಾಡಿ ಉತ್ತರಿಸಿದೆ.