Tag: ಏರ್ ಟೆಲ್

  • ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ಸರ್ಕಾರ ಸಹಾಯ ಮಾಡದಿದ್ದರೆ ವೊಡಾಫೋನ್, ಐಡಿಯಾ ಮುಚ್ಚುತ್ತೇವೆ- ಬಿರ್ಲಾ

    ನವದೆಹಲಿ: ಕೇಂದ್ರ ಸರ್ಕಾರ ನಮಗೆ ಪರಿಹಾರೋಪಾಯಗಳನ್ನು ಕಲ್ಪಿಸದಿದ್ದಲ್ಲಿ ವೊಡಾಫೋನ್ ಹಾಗೂ ಐಡಿಯಾ ಕಂಪನಿಗಳನ್ನು ಮುಚ್ಚುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.

    ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನವರಿ ಅಂತ್ಯದ ವೇಳೆಗೆ ಕಂಪನಿಯು ಬಾಕಿ ಉಳಿಸಿಕೊಂಡಿರುವ ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಹಣವನ್ನು ಪಾವತಿಸಬೇಕಿದ್ದು, ಈ ಕುರಿತು ಕೇಂದ್ರ ಸರ್ಕಾರದ ನಮಗೆ ಏನಾದರೂ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ವೊಡಾಫೋನ್, ಐಡಿಯಾದ ಅಧ್ಯಾಯ ಮುಕ್ತಾಯವಾಗಲಿದೆ. ದಿವಾಳಿಯಾದ ನಂತರವೂ ನಾವು ಹಣ ಹೂಡುವುದರಲ್ಲಿ ಅರ್ಥವಿಲ್ಲ ಹೀಗಾಗಿ ನಾವು ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಬಿರ್ಲಾ ಸ್ಪಷ್ಟಪಡಿಸಿದ್ದಾರೆ.

    ಮುಖೇಶ್ ಅಂಬಾನಿಯವರ ರಿಲಾಯನ್ಸ್ ಜಿಯೋ ಕಡಿಮೆ ಬೆಲೆಯ ಡೇಟಾ ಹಾಗೂ ಕರೆಯ ಸೌಲಭ್ಯ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಹೀಗಾಗಿ ಜಿಯೋಗೆ ಸ್ಪರ್ಧೆಯೊಡ್ಡಲು ಇತರೆ ಕಂಪನಿಗಳು ಸಹ ದರ ಕಡಿಮೆ ಮಾಡಬೇಕಾಯಿತು. ಇದರ ಭಾಗವಾಗಿ ಬಿರ್ಲಾ ಅವರ ಐಡಿಯಾ ಹಾಗೂ ಬ್ರಿಟಿಷ್ ಮೂಲದ ಟೆಲಿಕಾಂ ಕಂಪನಿ ವೊಡಾಫೋನ್ ಕಳೆದ ವರ್ಷ ವಿಲೀನಗೊಂಡಿತ್ತು. ನಂತರ ಕರೆ ಹಾಗೂ ಡೇಟಾ ದರಗಳನ್ನು ಕಡಿಮೆ ಮಾಡಿದ್ದವು. ಇದನ್ನೂ ಓದಿ: ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ಈ ವೇಳೆ ಕಂಪನಿಗೆ 1.17 ಲಕ್ಷ ರೂ. ನಷ್ಟ ಉಂಟಾಗಿತ್ತು. ಈ ಮಧ್ಯೆ 14 ವರ್ಷಗಳಿಂದ ತೆರಿಗೆ ಹಾಗೂ ಸ್ಪೆಕ್ಟ್ರಂ ಶುಲ್ಕವನ್ನು ಬಾಕಿ ಉಳಿಸಿಕೊಂಡಿರುವುದನ್ನು ಕಂಪನಿಗಳು ಪಾವತಿಸಬೇಕೆಂಬ ಸರ್ಕಾರದ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ನಂತರ ಸರ್ಕಾರಕ್ಕೆ ಹಣ ಪಾವತಿಸುವಂತೆ ಸುಪ್ರೀಂ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಕೆಲವು ವಾರಗಳ ಹಿಂದೆ ಟೆಲಿಕಾಂ ವಲಯ ಅತಿ ಹೆಚ್ಚು ನಷ್ಟವನ್ನು ದಾಖಲಿಸಿದೆ. ಹೀಗಾಗಿ ಇಷ್ಟು ಪ್ರಮಾಣದ ಮೊತ್ತವನ್ನು ಗಡುವಿನೊಳಗೆ ಸರ್ಕಾರಕ್ಕೆ ಹೇಗೆ ಪಾವತಿಸುವುದು ಎಂಬುದು ಕಂಪನಿಗಳ ಮುಖ್ಯಸ್ಥರನ್ನು ಚಿಂತೆಗೀಡು ಮಾಡಿದೆ.

    ಭಾರೀ ನಷ್ಟದ ನಡುವೆಯೂ ಇಷ್ಟೊಂದು ಮೊತ್ತದ ಹಣವನ್ನು ನಮ್ಮಿಂದ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ದಂಡ ಹಾಗೂ ಬಡ್ಡಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕೆಂದು ಟೆಲಿಕಾಂ ಸಂಸ್ಥೆಗಳಾದ ಏರ್‍ಟೆಲ್ ಹಾಗೂ ವೊಡಾಫೊನ್ ಕೋರ್ಟ್ ಮೊರೆ ಹೋಗಿವೆ. ಅಲ್ಲದೆ ಸುಪ್ರೀಂ ಕೋರ್ಟ್‍ನಲ್ಲಿ ಮರು ಪರಿಶೀಲನಾ ಅರ್ಜಿಯನ್ನು ಸಹ ಸಲ್ಲಿಸಿವೆ. ಇದನ್ನೂ ಓದಿ: ಕೇಂದ್ರದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್

    ಎಜಿಆರ್ ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಿತ್ತು.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

    ಭಾರತಿ ಏರ್ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.

  • ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

    ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

    ನವದೆಹಲಿ: ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್(ಡಿಸಿಸಿ) ಏರ್ ಟೆಲ್, ಐಡಿಯಾ ವೊಡಾಫೋನ್ ಕಂಪನಿಗಳಿಗೆ 3,050 ಕೋಟಿ ರೂ. ದಂಡ ವಿಧಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

    ತನ್ನ ಸೇವೆ ಆರಂಭಗೊಂಡ ಸಮಯದಲ್ಲಿ ಈ ಟೆಲಿಕಾಂ ಕಂಪನಿಗಳು ಅಂತರ್ ಸಂಪರ್ಕ ನೀಡದೇ ಲೋಪ ಎಸಗುತ್ತಿವೆ ಎಂದು ಆರೋಪಿಸಿ ಜಿಯೋ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ದೂರು ನೀಡಿತ್ತು.

    ಡಿಸಿಸಿ ಸರ್ಕಾರದ ನೇಮಿಸಿದ ಸಮಿತಿಯಾಗಿದ್ದು ಟೆಲಿಕಾಂ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ನೀತಿ ಆಯೋಗ, ಆರ್ಥಿಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳಿರುತ್ತಾರೆ. ಈಗಾಗಲೇ ವೊಡಾಫೋನ್ ಮತ್ತು ಏರ್ ಟೆಲ್ ಆರ್ಥಿಕ ಮುಗ್ಗಟ್ಟಿನಲ್ಲಿರುವುದು ಡಿಸಿಸಿ ಈಗ ದಂಡಕ್ಕೆ ಅನುಮೋದನೆ ನೀಡಿರುವುದು ಮತ್ತೆ ಹಿನ್ನಡೆಯಾಗಿದೆ.

    ಟ್ರಾಯ್ ನೀಡಿದ ಶಿಫಾರಸುಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅರುಣ್ ಸುಂದರ್‍ರಾಜನ್ ತಿಳಿಸಿದ್ದಾರೆ. ಈ ಹಿಂದಿನ ಸಭೆಯಲ್ಲಿ ಈ ಶಿಫಾರಸ್ಸಿನ ಬದಲಾವಣೆ ಸಾಧ್ಯವೇ ಎಂದು ಕೇಳಿ ಟ್ರಾಯ್‍ಗೆ ವಾಪಸ್ ಕಳುಹಿಸಲಾಗಿತ್ತು. ಆದರೆ ಟ್ರಾಯ್ ಈ ಶಿಫಾರಸ್ಸಿನಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿತ್ತು.

    2016ರಲ್ಲೇ ಟ್ರಾಯ್ ಈ ಬಗ್ಗೆ ಮೊದಲ ಶಿಫಾರಸ್ಸು ಮಾಡಿತ್ತು. ಡಿಸಿಸಿ ಅನುಮೋದನೆ ಕೊಟ್ಟ ಬಳಿಕ ಈ ಶಿಫಾರಸ್ಸು ದೂರಸಂಪರ್ಕ ಸಚಿವಾಲಯಕ್ಕೆ ಹೋಗುತ್ತದೆ. ಈ ವಿಚಾರದಲ್ಲಿ ದೂರಸಂಪರ್ಕ ಸಚಿವಾಲಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುಂದರ್‍ರಾಜನ್ ತಿಳಿಸಿದರು.

    ಏನಿದು ಪ್ರಕರಣ?
    2016ರ ಸೆಪ್ಟೆಂಬರ್ 5 ರಂದು ಜಿಯೋ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ ಒಳ ಬರುವ ಮತ್ತು ಹೊರ ಹೋಗುವ ಕರೆಗಳಲ್ಲಿ ಜಿಯೋ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದರು. ಎರಡು ಟೆಲಿಕಾಂ ಕಂಪನಿಗಳ ಮಧ್ಯೆ ಒಂದು ಕರೆ ಪೂರ್ಣಗೊಳ್ಳಬೇಕಾದರೆ ಪಾಯಿಂಟ್ಸ್ ಆಫ್ ಇಂಟರ್ ಕನೆಕ್ಷನ್ ಬಳಕೆ ಮಾಡಲಾಗುತ್ತದೆ. ಅಕ್ಟೋಬರ್ 2016ರಲ್ಲಿ ಟ್ರಾಯ್ ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿಗಳಿಗೆ 1,050 ಕೋಟಿ ರೂ., ಐಡಿಯಾಗೆ 950 ಕೋಟಿ ರೂ. ದಂಡ ವಿಧಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

    ಗ್ರಾಹಕ ವಿರೋಧಿ ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಕಡಿಮೆ ಮಾಡಲು ಟೆಲಿಕಾಂ ಕಂಪನಿಗಳು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತಿದೆ ಎಂದು ಜಿಯೋ ದೂರು ನೀಡಿತ್ತು. ಈ ವಿಚಾರದ ಬಗ್ಗೆ ಏರ್ ಟೆಲ್ ಮತ್ತು ವೊಡಾಫೋನ್ ಕಂಪನಿ, ದಂಡ ವಿಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಮಾಡುತ್ತೇವೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆಯಿದೆ ಎಂದು ತಿಳಿಸಿದೆ.

  • ಕಡಿಮೆ ಬೆಲೆಯಲ್ಲೇ ಹೆಚ್ಚು ಡೇಟಾ- ಇದು ಜಿಯೋ ರಿಪಬ್ಲಿಕ್ ಡೇ ಆಫರ್

    ಕಡಿಮೆ ಬೆಲೆಯಲ್ಲೇ ಹೆಚ್ಚು ಡೇಟಾ- ಇದು ಜಿಯೋ ರಿಪಬ್ಲಿಕ್ ಡೇ ಆಫರ್

    ಮುಂಬೈ: ಈ ಹಿಂದೆ ನ್ಯೂ ಇಯರ್, ಧನ್ ಧನಾ ಧನ್ ಆಫರ್ ಪ್ರಕಟಿಸಿದ್ದ ಜಿಯೋ ಈಗ ರಿಪಬ್ಲಿಕ್ ಡೇ ಆಫರ್ ಪ್ರಕಟಿಸಿದೆ.

    ಜಿಯೋ ಪ್ರೈ ಸದಸ್ಯರಿಗೆ ಮಾತ್ರ ಲಭ್ಯವಿರುವ ಈ ಪ್ಲಾನ್ ನಲ್ಲಿ ಗ್ರಾಹಕರು ಈ ಹಿಂದಿನ ದರದಲ್ಲೇ ಪ್ಯಾಕ್ ಹಾಕಿಸಿದ್ರೆ 50% ಹೆಚ್ಚು ಡೇಟಾ ಸಿಗಲಿದೆ. ಅಷ್ಟೇ ಅಲ್ಲದೇ ಈ ಕಡಿಮೆ ದರದಲ್ಲೇ ಹೆಚ್ಚಿನ ಡೇಟಾ ಸಿಗುವುದು ವಿಶೇಷ.

    ಹೊಸ ಡೇಟಾ ಪ್ಲಾನ್‍ಗಳು ಜನವರಿ 26ರ ಮಧ್ಯರಾತ್ರಿ 12 ಗಂಟೆಯಿಂದ ಲಭ್ಯವಾಗಲಿದೆ. ಎಂದಿನಂತೆ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿರಲಿದೆ. ಇದನ್ನೂ ಓದಿ: 15 ತಿಂಗಳ ನಂತ್ರ ಲಾಭಕ್ಕೆ ಮರಳಿದ ಜಿಯೋ- ಏರ್ ಟೆಲ್ ಆದಾಯ ಕುಸಿತ

    ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು