Tag: ಏರ್ ಗನ್

  • ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಕಾರವಾರ| ಪುಟ್ಟ ಮಕ್ಕಳಿಂದ ಏರ್ ಗನ್‌ನಲ್ಲಿ ಆಟ; ಮಿಸ್ ಫೈರ್ ಆಗಿ ತಮ್ಮನ ಕೈಯಿಂದ ಸಾವುಕಂಡ ಅಣ್ಣ

    ಕಾರವಾರ: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕ ಕೈಯ್ಯಿಂದ ಏರ್ ಗನ್ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ ವಿದ್ರಾಹಕ ಘಟನೆ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.‌

    ಶಿರಸಿಯ ಸೋಮನಳ್ಳಿಯ ರಾಘವೇಂದ್ರ ಕೇಶವ ಹೆಗಡೆ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಉಂಡಿಯರ್ ಎಂಬವರ ಇಬ್ಬರು ಮಕ್ಕಳು (ಅಣ್ಣ-ತಮ್ಮ) ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಅಣ್ಣ-ತಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ 7 ವರ್ಷದ ತಮ್ಮನಿಂದ ಆಕಸ್ಮಿಕವಾಗಿ ಗುಂಡು ಹಾರಿದ್ದು, ಇದರಿಂದ ಅಣ್ಣ ಕರಿಯಪ್ಪ (9) ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸಿಸಿಟಿವಿಯಲ್ಲಿ ವಿಡಿಯೋ ದಾಖಲಾಗಿದೆ.

    ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಪಿಐ ಶಶಿಕಾಂತ ವರ್ಮಾ, ಪಿಎಸ್ಐ ಸಂತೋಷ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕನ್ನಡಿಯಲ್ಲಿ ಬಿಂಬ ನೋಡಿ ಗುಂಡು ಹೊಡೆಯುತ್ತಾರೆ ಕೊಡಗಿನ ಮಹಿಳೆ

    ಕನ್ನಡಿಯಲ್ಲಿ ಬಿಂಬ ನೋಡಿ ಗುಂಡು ಹೊಡೆಯುತ್ತಾರೆ ಕೊಡಗಿನ ಮಹಿಳೆ

    ಮಡಿಕೇರಿ: ವಿಶಿಷ್ಟ ಹಬ್ಬ ಆಚರಣೆಗಳ, ಉಡುಗೆ ತೊಡುಗೆ ಮತ್ತು ಸಂಪ್ರದಾಯಗಳಿಂದ ಕೊಡಗು ದೇಶದ ಗಮನ ಸೆಳೆದಿದೆ. ಇಲ್ಲಿ ಮಕ್ಕಳು ಹುಟ್ಟಿದರೆ ಗುಂಡು ಹಾರಿಸಿ ಸಂಭ್ರಮಿಸುತ್ತಾರೆ. ಅಂತ್ಯಸಂಸ್ಕಾರದ ವೇಳೆ ಗುಂಡು ಹಾರಿಸಿ ಶೋಕ ವ್ಯಕ್ತಪಡಿಸಲಾಗುತ್ತದೆ. ಇನ್ನು ಹಬ್ಬ ಹರಿದಿನಗಳೆಂದರೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗಳು ಸಾಮಾನ್ಯ. ಅದರೆ ಕೊಡಗಿನ ಮಹಿಳೆಯೊಬ್ಬರು ಕನ್ನಡಿಯಲ್ಲಿ ಬಿಂಬ ನೋಡಿ ಹಿಮ್ಮುಖವಾಗಿ ಕೋವಿಯಿಂದ ಶೂಟ್ ಮಾಡುವುದರಲ್ಲಿ ಪರಿಣಿತರಾಗಿದ್ದಾರೆ.

    ವಿರಾಜಪೇಟೆ ತಾಲ್ಲೂಕಿನ ಒಂಟಿಯಂಗಡಿ ಸಮೀಪದ ದೇವಣಗೇರಿಯ ನಿವಾಸಿ ಡೀನಾ ಉತ್ತಪ್ಪ ಇಂತಹ ಸಾಧನೆ ಮಾಡಿರುವವರು. ಸಾಮಾನ್ಯವಾಗಿ ಮುಂದೆ ನೋಡಿಯೇ ಗುರಿತಪ್ಪದಂತೆ ಟಾರ್ಗೆಟ್ ಇಟ್ಟು ಶೂಟ್ ಮಾಡುವುದಕ್ಕೆ ಇಷ್ಟೋ ಜನರಿಗೆ ಸಾಧ್ಯವಾಗುವುದಿಲ್ಲ. ಆದರೆ ಮಹಿಳೆ ಡೀನಾ ಉತ್ತಪ್ಪ ಹಿಮ್ಮುಖವಾಗಿ ಗನ್  ಹೆಗಲೇರಿಸಿಕೊಂಡು ಕನ್ನಡಿಯಲ್ಲಿ ಟಾರ್ಗೆಟ್ ಇಟ್ಟಿರುವ ವಸ್ತುವಿನ ಬಿಂಬ ನೋಡುತ್ತಾ ಗುರಿ ತಪ್ಪದಂತೆ ಏರ್ ಗನ್ ನಿಂದ ಹಿಮ್ಮುಖವಾಗಿ ಶೂಟ್ ಮಾಡುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

    ಗೃಹಿಣಿಯಾಗಿರುವ ಡೀನಾ ತಾವು ಪ್ರೌಢಶಾಲೆಯಲ್ಲಿದ್ದಾಗಲೇ ಏರ್ ಗನ್ ಶೂಟ್ ಮಾಡುತ್ತಿದ್ದರು. ವಿವಾಹವಾದ ಬಳಿಕ ಈ ಅಭ್ಯಾಸ ಕೈಬಿಟ್ಟಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ದಸರಾ ಸಂದರ್ಭದಲ್ಲಿ ಜಂಬೋ ಸರ್ಕಸ್ ನೋಡಲು ಹೋಗಿದ್ದರು. ಸರ್ಕಸ್ ನಲ್ಲಿ ಕನ್ನಡಿಯಲ್ಲಿ ಬಿಂಬ ನೋಡಿಕೊಂಡು, ಹಿಮ್ಮುಖವಾಗಿ ಶೂಟ್ ಮಾಡಿದ್ದನ್ನು ನೋಡಿ ನಾನು ಏಕೆ ಇದನ್ನು ಪ್ರಯತ್ನಿಸಬಾರೆಂದು ಆಲೋಚಿಸಿ ಹಿಮ್ಮುಖವಾಗಿ ಶೂಟ್ ಮಾಡಲು ನಿರಂತರ ಪ್ರಯತ್ನಿಸಿದ್ದಾರೆ.

    ಕಳೆದ ಆರು ತಿಂಗಳ ಹಿಂದೆ ಅದರಲ್ಲಿ ಸಕ್ಸಸ್ ಆಗಿದ್ದಾರೆ. ಆ ನಂತರವೂ ನಿರಂತರ ಪ್ರಯತ್ನದ ಫಲವಾಗಿ ಡೀನಾ ಅವರು ಈಗ ಕನ್ನಡಿಯಲ್ಲಿ ಟಾರ್ಗೆಟ್ ನ ಬಿಂಬ ನೋಡುತ್ತಾ ಹಿಮ್ಮುಖವಾಗಿ ಸಲೀಸಾಗಿ ಶೂಟ್ ಮಾಡುತ್ತಾರೆ.

    ಹಿಮ್ಮುಖವಾಗಿ ಶೂಟ್ ಮಾಡಿದ್ದ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅದನ್ನು ಗಮನಿಸಿದ್ದ ಕೊಡಗಿನ ಇನ್ನಿಬ್ಬರು ಯುವಕರು ಪ್ರಭಾವಿತರಾಗಿ ಅವರು ಕೂಡ ಹಿಮ್ಮುಖವಾಗಿ ಶೂಟ್ ಮಾಡುವುದನ್ನು ಅಭ್ಯಾಸಿಸಿದ್ದಾರೆ. ಈಗ ಹಿಮ್ಮುಖವಾಗಿ ಶೂಟ್ ಮಾಡುವುದು ಕೊಡಗಿನಲ್ಲಿ ಟ್ರೆಂಡ್ ಆಗಿ ಬೆಳೆಯುತ್ತಿದೆ. ಪತ್ನಿ ಡೀನಾ ಅವರ ಈ ಪ್ರಯತ್ನಕ್ಕೆ ಪತಿ ಉತ್ತಪ್ಪ ಕೂಡ ಸಾಥ್ ನೀಡುತ್ತಿದ್ದಾರೆ.

  • ಶಿವಮೊಗ್ಗದಲ್ಲಿ ರಾಬರಿಗೆ ಯತ್ನ- ಮಾಲೀಕ ಗನ್ ತೋರಿಸ್ತಿದ್ದಂತೆ ದರೋಡೆಕೋರರು ಪರಾರಿ

    ಶಿವಮೊಗ್ಗದಲ್ಲಿ ರಾಬರಿಗೆ ಯತ್ನ- ಮಾಲೀಕ ಗನ್ ತೋರಿಸ್ತಿದ್ದಂತೆ ದರೋಡೆಕೋರರು ಪರಾರಿ

    – ಏರ್ ಗನ್ ನೋಡಿ ಭಯಬಿದ್ದ ಕಳ್ಳರು

    ಶಿವಮೊಗ್ಗ: ಮಲೆನಾಡಿನಲ್ಲಿ ಇತ್ತಿಚೇಗೆ ಕೊಲೆ, ಸುಲಿಗೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಎರಡು ಜೋಡಿ ಕೊಲೆಗಳು ನಡೆದಿವೆ.

    ಈ ಘಟನೆ ಮಾಸುವ ಮುನ್ನವೇ ನಿನ್ನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ರಾಬರಿಗೆ ಬಂದ ತಂಡ ಮನೆಯ ಮಾಲೀಕ ಏರ್ ಗನ್ ಕೈಗೆತ್ತಿಕೊಳ್ಳುತ್ತಿದ್ದಂತೆ ಗನ್ ಎಂದು ಭಾವಿಸಿ ಹಾಗೂ ತಕ್ಷಣ ಗ್ರಾಮಸ್ಥರನ್ನು ಮನೆ ಬಳಿ ಬಂದ್ದಿದ್ದನ್ನು ಕಂಡು ಪರಾರಿಯಾಗಿದ್ದಾರೆ.

    ನಿನ್ನೆ ರಾತ್ರಿ ಮೇಗರವಳ್ಳಿಯ ಪುರುಷೋತ್ತಮ್ ಹೆಗಡೆ, ಗಣೇಶ್ ಹೆಗಡೆ ಹಾಗೂ ರೇವಂತ್ ಹೆಗಡೆ ಅವರ ಮನೆ ಬಾಗಿಲು ಬಡಿದು ಮಚ್ಚು, ಲಾಂಗ್ ತೋರಿಸಿ ದರೋರೆಗೆ ಯತ್ನ ಮಾಡಿದ್ದಾರೆ. ಈ ವೇಳೆ ಮನೆಯವರ ಕೂಗಾಟ ಕೇಳಿ ಗ್ರಾಮಸ್ಥರು ಹೆಗಡೆ ಮನೆಯವರ ಬಳಿ ಬರುವಷ್ಟರಲ್ಲಿ ಇನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರು ಪರಾರಿಯಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಆಂತಕದ ವಾತಾವರಣ ಸೃಷ್ಟಿಯಾಗಿದೆ.

    ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಬರಿ ಯತ್ನ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮೇಗರವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹೆಗಡೆ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.