Tag: ಏರ್ ಇಂಡಿಯಾ

  • ಅಹಮದಾಬಾದ್ ವಿಮಾನ ದುರಂತ – ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ವಿಷಾದ

    ಅಹಮದಾಬಾದ್ ವಿಮಾನ ದುರಂತ – ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ವಿಷಾದ

    – ವಿಮಾನ ಅಪಘಾತದ ತನಿಖೆಗಳು ತುಂಬಾ ಸಮಯ ತೆಗೆದುಕೊಳ್ಳುತ್ತದೆ ಎಂದ ಸಿಇಒ

    ಅಹಮದಾಬಾದ್: ವಿಮಾನ ದುರಂತ ನಡೆದ ದಿನ ನಮಗೆಲ್ಲರಿಗೂ ತುಂಬಾ ಕಷ್ಟಕರವಾದ ದಿನವಾಗಿದೆ. ಅಲ್ಲದೇ ಈ ಘಟನೆಯ ಬಗ್ಗೆ ನಾನು ತೀವ್ರ ದುಃಖವನ್ನು ವ್ಯಕ್ತಪಡಿಸುತ್ತೇನೆ ಎಂದು ಏರ್ ಇಂಡಿಯಾ (Air India) ಸಿಇಒ ಕ್ಯಾಂಪ್ಬೆಲ್ ವಿಲ್ಸನ್ (Campbell Wilson) ವಿಷಾದ ವ್ಯಕ್ತಪಡಿಸಿದ್ದಾರೆ.

    ಏರ್ ಇಂಡಿಯಾ ವಿಮಾನ ಅಪಘಾತದ ಸ್ಥಳಕ್ಕೆ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಭೇಟಿ ನೀಡಿದ್ದರು. ಭೇಟಿಗೂ ಮೊದಲು ವೀಡಿಯೋ ಹೇಳಿಕೆ ನೀಡಿದ್ದಾರೆ. ಈಗ ನಮ್ಮ ಪ್ರಯತ್ನಗಳು ಸಂಪೂರ್ಣವಾಗಿ ನಮ್ಮ ಪ್ರಯಾಣಿಕರು, ಸಿಬ್ಬಂದಿ ಸದಸ್ಯರು, ಅವರ ಕುಟುಂಬಗಳು ಮತ್ತು ಪ್ರೀತಿಪಾತ್ರರ ಅಗತ್ಯಗಳ ಮೇಲೆ ಕೇಂದ್ರೀಕೃತವಾಗಿವೆ. ನಿಮ್ಮಲ್ಲಿ ಹಲವು ಪ್ರಶ್ನೆಗಳಿವೆ ಎಂದು ನನಗೆ ತಿಳಿದಿದೆ. ಈ ಸಂದರ್ಭದಲ್ಲಿ ನಾನು ಅವೆಲ್ಲದಕ್ಕೂ ಉತ್ತರಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಮಾನ ದುರಂತ ಸ್ಥಳಕ್ಕೆ ಪ್ರಧಾನಿ ಭೇಟಿ – ಅಹಮದಾಬಾದ್‌ ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮೋದಿ

    ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಪ್ರಯಾಣಿಕರಲ್ಲಿ, 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, ಓರ್ವ ಕೆನಡಾದ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

    ತುರ್ತು ಕ್ರಮಗಳಿಗೆ ಅಧಿಕಾರಿಗಳೊಂದಿಗೆ ಏರ್ ಇಂಡಿಯಾ ಕೆಲಸ ಮಾಡುತ್ತಿದೆ. ವಿಮಾನ ಅಪಘಾತದ ತನಿಖೆಗಳು ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಏನೇ ವಿಚಾರವಾದರೂ, ಹೆಚ್ಚಿನ ಮಾಹಿತಿಯನ್ನು ಒದಗಿಸಲು ಪ್ರಯಾಣಿಕರ ಹಾಟ್‌ಲೈನ್ ಸಂಖ್ಯೆ 1800 5691 444ಗೆ ಕರೆ ಮಾಹಿತಿ ಪಡೆಯಬಹುದು ಎಂದು ಹೇಳಿದ್ದಾರೆ.

  • ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

    ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿ ವಿಮಾನದಲ್ಲಿ ಹಾರಿದ್ದ ಒಂದೇ ಕುಟುಂಬದ ಐವರು ದುರಂತ ಅಂತ್ಯ

    – ವಿಮಾನದಲ್ಲಿ ಕೊನೆಯ ಸೆಲ್ಫಿ ತೆಗೆದು ಕುಟುಂಬಸ್ಥರಿಗೆ ಕಳುಹಿಸಿ ಖುಷಿಪಟ್ಟಿದ್ದ ಕುಟುಂಬ

    ಗಾಂಧೀನಗರ: ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡು ಪ್ರಯಾಣ ಬೆಳೆಸಿದ್ದ ಸುಂದರ ಕುಟುಂಬವೊಂದು ಗುರುವಾರ ಅಹಮದಾಬಾದ್‌ನಲ್ಲಿ (Ahmedabad Plane Crash) ಸಂಭವಿಸಿದ ವಿಮಾನ ಅಪಘಾತದಲ್ಲಿ ದುರಂತ ಅಂತ್ಯಕಂಡಿದೆ.

    ಗಂಡ-ಹೆಂಡತಿ ಹಾಗೂ ಮೂರು ಮುದ್ದಾದ ಮಕ್ಕಳ ಒಂದೇ ದಿನ ಮೃತಪಟ್ಟಿದ್ದಾರೆ. ಸಾಫ್ಟ್‌ವೇರ್‌ ವೃತ್ತಿಯಲ್ಲಿದ್ದ ಪ್ರತೀಕ್‌ ಜೋಶಿ ಕಳೆದ ಆರು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದರು. ಮೂರು ಮಕ್ಕಳು ಹಾಗೂ ಮಡದಿಯೊಂದಿಗೆ ಲಂಡನ್‌ನಲ್ಲಿ ಜೀವನ ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಇದನ್ನೂ ಓದಿ: Ahmedabad | ವಿಮಾನ ದುರಂತ ನಡೆದ ಸ್ಥಳಕ್ಕೆ ಇಂದು ಮೋದಿ ಭೇಟಿ

    ಮಕ್ಕಳು, ಮಡದಿಯನ್ನ ಲಂಡನ್‌ಗೆ ಕರೆಸಿಕೊಳ್ಳಲು ಹಲವು ವರ್ಷಗಳಿಂದ ಪ್ರತೀಕ್‌ ಕಾದಿದ್ದರು. ಕನಸು ಅಂತಿಮವಾಗಿ ನನಸಾಯಿತು. ಉದಯಪುರದಲ್ಲಿ ಪ್ರಸಿದ್ಧ ವೈದ್ಯೆಯಾಗಿದ್ದ ಡಾ. ಕೋಮಿ ವ್ಯಾಸ್‌ ಅವರು ಎರಡು ದಿನಗಳ ಹಿಂದಷ್ಟೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಪತಿ ಪ್ರತೀಕ್ ಜೊತೆ ಲಂಡನ್‌ಗೆ ಹೊರಡಲು ಸಜ್ಜಾಗಿದ್ದರು.

    ಗುರುವಾರ ಬೆಳಗ್ಗೆ ಭರವಸೆ ಮತ್ತು ಉತ್ಸಾಹದೊಂದಿಗೆ ಈ ಕುಟುಂಬ, ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಭಾರತದಲ್ಲಿ ತಮ್ಮ ಜೀವನದ ಕಡೆಯ ಸೆಲ್ಫಿಯನ್ನು ಕುಟುಂಬ ಕ್ಲಿಕ್ಕಿಸಿಕೊಂಡಿತ್ತು. ಆ ಸೆಲ್ಫಿಯನ್ನ ತನ್ನ ಸಂಬಂಧಿಕರಿಗೆ ಕಳಿಸಿ ಖುಷಿಪಟ್ಟಿತ್ತು.

    ಆದರೆ, ಕೆಲವೇ ಹೊತ್ತಿನಲ್ಲಿ ಅವರ ಕನಸು ನುಚ್ಚುನೂರಾಯಿತು. ಭೀಕರ ವಿಮಾನ ಅಪಘಾತದಲ್ಲಿ ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ 241 ಮಂದಿ ಮೃತಪಟ್ಟರು. ಅವರಲ್ಲಿ ಈ ಕುಟುಂಬದ ಐವರು ಸೇರಿದ್ದಾರೆ. ಹಾಸ್ಟೆಲ್‌ವೊಂದಕ್ಕೆ ಬಡಿದು ಪತನಗೊಂಡಿತು. ವಿಮಾನದಲ್ಲಿದ್ದ ಈ ಕುಟುಂಬ ದಾರುಣ ಅಂತ್ಯ ಕಂಡಿತು. ಇದನ್ನೂ ಓದಿ: ಅಹಮದಾಬಾದ್‌ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು: ಏರ್‌ ಇಂಡಿಯಾ

  • 1.25 ಲಕ್ಷ ಲೀಟರ್‌ ಇಂಧನ ಇತ್ತು, ಮಧ್ಯಾಹ್ನ ತಾಪಮಾನ ಹೆಚ್ಚಿದ್ದರಿಂದ ರಕ್ಷಿಸುವ ಅವಕಾಶ ಇರಲಿಲ್ಲ: ಅಮಿತ್‌ ಶಾ

    1.25 ಲಕ್ಷ ಲೀಟರ್‌ ಇಂಧನ ಇತ್ತು, ಮಧ್ಯಾಹ್ನ ತಾಪಮಾನ ಹೆಚ್ಚಿದ್ದರಿಂದ ರಕ್ಷಿಸುವ ಅವಕಾಶ ಇರಲಿಲ್ಲ: ಅಮಿತ್‌ ಶಾ

    ಅಹಮದಾಬಾದ್: ಪತನಗೊಂಡ ಏರ್‌ ಇಂಡಿಯಾ (Air India) ವಿಮಾನವು ಸುಮಾರು 1.25 ಲಕ್ಷ ಲೀಟರ್ ಇಂಧನವನ್ನು ಹೊತ್ತೊಕೊಂಡು ಸಾಗುತ್ತಿತ್ತು. ಮಧ್ಯಾಹ್ನ ಹೆಚ್ಚಿನ ತಾಪಮಾನದಿಂದಾಗಿ (Temperature) ಪ್ರಯಾಣಿಕರನ್ನು ರಕ್ಷಿಸುವ ಅವಕಾಶವಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

    ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಮತ್ತು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಘಟನೆಯಿಂದ ಇಡೀ ರಾಷ್ಟ್ರವು ದುಃಖದಲ್ಲಿದ್ದು ಮೃತರ ಕುಟುಂಬಗಳೊಂದಿಗೆ ನಿಂತಿದೆ. ಅಪಘಾತದ ನಡೆದ 10 ನಿಮಿಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಿಕ್ಕಿತು ಎಂದು ತಿಳಿಸಿದರು. ಇದನ್ನೂ ಓದಿ: ತಮ್ಮ ಫೇವರೇಟ್‌ ನಂಬರ್‌ ದಿನವೇ ಮೃತಪಟ್ಟ ಗುಜರಾತ್‌ ಮಾಜಿ ಸಿಎಂ ರೂಪಾನಿ

    ನಾನು ಗುಜರಾತ್ ಮುಖ್ಯಮಂತ್ರಿ ಮತ್ತು ನಾಗರಿಕ ವಿಮಾನಯಾನ ಸಚಿವರನ್ನು ಸಂಪರ್ಕಿಸಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಸ್ವಲ್ಪ ಸಮಯದಲ್ಲೇ ಕರೆ ಮಾಡಿದ್ದಾರೆ. ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ದುರಂತ ನಡೆದ ಸ್ಥಳಕ್ಕೆ ನಾನು ಹೋಗಿದ್ದೆ. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಒಬ್ಬರು ದುರಂತದಿಂದ ಪಾರಾಗಿದ್ದು, ಡಿಎನ್ಎ ಪರಿಶೀಲನೆಯ ನಂತರ ಸಾವಿನ ಸಂಖ್ಯೆಯನ್ನು ಘೋಷಿಸಲಾಗುವುದು ಎಂದು ಹೇಳಿದರು.

     

    ನಾನು ಬದುಕುಳಿದ ಓರ್ವ ಪ್ರಯಾಣಿಕನನ್ನು ಭೇಟಿಯಾದೆ. ಪ್ರತಿಯೊಂದು ಇಲಾಖೆಯು ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಮೃತ ದೇಹಗಳ ಮರುಪಡೆಯುವಿಕೆ ಬಹುತೇಕ ಪೂರ್ಣಗೊಂಡಿದೆ. ಕುಟುಂಬ ಸದಸ್ಯರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ವಿದೇಶಗಳಲ್ಲಿರುವ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದೆ. ಸುಮಾರು 1000 ಡಿಎನ್ಎ ಪರೀಕ್ಷೆಗಳನ್ನು ಮಾಡಲಾಗುವುದು ಎಂದರು. ಇದನ್ನೂ ಓದಿ: Ahmedabad Plane Crash | ಮೊದಲ ಬಾರಿಗೆ ಪತಿ ನೋಡಲು ಹೊರಟಿದ್ದ ನವವಿವಾಹಿತೆ ಸಾವು

    ಡಿಎನ್ಎ ಪರೀಕ್ಷೆಗಳ ನಂತರ ಶವಗಳನ್ನು ಹಸ್ತಾಂತರಿಸಲಾಗುವುದು. ಪರಿಶೀಲನಾ ಸಭೆಯಲ್ಲಿ, ಪ್ರತಿಯೊಂದು ಅಂಶವನ್ನು ಚರ್ಚಿಸಲಾಗಿದ್ದು ವಿಮಾನಯಾನ ಸಚಿವರು ತನಿಖೆಯನ್ನು ತ್ವರಿತವಾಗಿ ನಡೆಸುವಂತೆ ಸೂಚನೆ ನೀಡಿದ್ದಾರೆ ಎಂದರು.

  • ತಮ್ಮ ಫೇವರೇಟ್‌ ನಂಬರ್‌ ದಿನವೇ ಮೃತಪಟ್ಟ ಗುಜರಾತ್‌ ಮಾಜಿ ಸಿಎಂ ರೂಪಾನಿ

    ತಮ್ಮ ಫೇವರೇಟ್‌ ನಂಬರ್‌ ದಿನವೇ ಮೃತಪಟ್ಟ ಗುಜರಾತ್‌ ಮಾಜಿ ಸಿಎಂ ರೂಪಾನಿ

    ನವದೆಹಲಿ: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ (Vijay Rupani) ಅವರು ಫೇವರೇಟ್‌ ಲಕ್ಕಿ ಸಂಖ್ಯೆಯ ದಿನವೇ ಮೃತಪಟ್ಟಿದ್ದಾರೆ.

    ಹೌದು. ರೂಪಾನಿ ಅವರು ಖರೀದಿಸಿದ ಮೊದಲ ವಾಹನದ ಸಂಖ್ಯೆ 1206. ಇದು ತಮ್ಮ ಫೇವರೇಟ್‌ ಸಂಖ್ಯೆ ಎಂದು ಭಾವಿಸಿದ ರೂಪಾನಿ ಅವರು ನಂತರ ಖರೀದಿಸಿದ ವಾಹನಗಳಿಗೆ ಈ ಸಂಖ್ಯೆಯ ನಂಬರ್‌ ಅನ್ನೇ ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ದಿನಾಂಕ 12 ಮತ್ತು 6ನೇ ತಿಂಗಳು (1206) ಲಂಡನ್‌ಗೆ ಪ್ರಯಾಣ ಬೆಳೆಸುತ್ತಿದ್ದಾಗ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

     

    ರೂಪಾನಿ ಅವರ ಬಳಿ ಎರಡು ಕಾರು ಇತ್ತು. ಇನ್ನೋವಾ ಕಾರಿನ ಸಂಖ್ಯೆ GJ-03-ER-1206 ಆಗಿದ್ದರೆ ಮಾರುತಿ ವಾಗನರ್‌ ಕಾರಿನ ಸಂಖ್ಯೆ GJ-03-HK-1206 ಆಗಿತ್ತು. ಇದನ್ನೂ ಓದಿ: ಟೇಕಾಫ್‌ ಆದ 30 ಸೆಕೆಂಡ್‌ನಲ್ಲಿ ದೊಡ್ಡ ಶಬ್ಧ ಬಂತು – ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು

    ಲಂಡನ್‌ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12 A ಸೀಟಿನಲ್ಲಿ ಕುಳಿತುಕೊಂಡಿದ್ದರು. ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲು ರೂಪಾನಿ ಏರ್‌ ಇಂಡಿಯಾ ವಿಮಾನ ಹತ್ತಿದ್ದರು. ಮಗಳ ಮನೆಗೆ ಪತ್ನಿ 6 ತಿಂಗಳ ಹಿಂದೆ ತೆರಳಿದ್ದರು. ಪತ್ನಿಯನ್ನು ಕರೆ ತರುವ ಉದ್ದೇಶದಿಂದ ರೂಪಾನಿ ಪ್ರಯಾಣ ಬೆಳೆಸಿದ್ದರು.

  • ಮೃತ ಪ್ರಯಾಣಿಕರ ಕುಟುಂಬಕ್ಕೆ 1 ಕೋಟಿ ಪರಿಹಾರ: ಟಾಟಾ ಗ್ರೂಪ್‌ ಘೋಷಣೆ

    ಮೃತ ಪ್ರಯಾಣಿಕರ ಕುಟುಂಬಕ್ಕೆ 1 ಕೋಟಿ ಪರಿಹಾರ: ಟಾಟಾ ಗ್ರೂಪ್‌ ಘೋಷಣೆ

    ನವದೆಹಲಿ: ಅಹಮದಾಬಾದ್ ಬಳಿ ನಡೆದ ಏರ್ ಇಂಡಿಯಾ (Air India) ವಿಮಾನ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಟಾಟಾ ಗ್ರೂಪ್ (Tata Group) 1 ಕೋಟಿ ರೂಪಾಯಿ ಪರಿಹಾರ ನೀಡಲಿದೆ ಎಂದು ಕಂಪನಿಯ ಅಧ್ಯಕ್ಷ ಎನ್ ಚಂದ್ರಶೇಖರನ್ (N Chandrasekaran) ಘೋಷಿಸಿದ್ದಾರೆ.

    ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಟಾಟಾ ಗ್ರೂಪ್ ಭರಿಸಲಿದೆ ಮತ್ತು ಅವರಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲ ದೊರೆಯುವಂತೆ ನೋಡಿಕೊಳ್ಳಲಿದೆ ಎಂದು ಅವರು ಹೇಳಿದರು.

    ವಿಮಾನ ಪತನಗೊಂಡು ಬಿದ್ದ ಬಿ ಜೆ ಮೆಡಿಕಲ್ಸ್ ಹಾಸ್ಟೆಲ್ ನಿರ್ಮಾಣಕ್ಕೆ ನಾವು ಸಹಾಯ ಮಾಡುತ್ತೇವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಟೇಕಾಫ್‌ ಆದ 30 ಸೆಕೆಂಡ್‌ನಲ್ಲಿ ದೊಡ್ಡ ಶಬ್ಧ ಬಂತು – ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು

     

    ಈ ಕ್ಷಣದಲ್ಲಿ ನಾವು ಅನುಭವಿಸುತ್ತಿರುವ ದುಃಖವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬ ಮತ್ತು ಗಾಯಗೊಂಡವರ ಜೊತೆ ನಾವಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

    1932 ರಲ್ಲಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದಕ್ಕೆ 1946ರಲ್ಲಿ ಏರ್‌ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. ಕೇಂದ್ರ ಸರ್ಕಾರವು 1953 ರಲ್ಲಿ ಏರ್‌ಲೈನ್ಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಜೆಆರ್‌ಡಿ ಟಾಟಾ 1977ರವರೆಗೆ ಅದರ ಅಧ್ಯಕ್ಷರಾಗಿ ಮುಂದುವರಿದರು. ಸುಮಾರು 67 ವರ್ಷಗಳ ನಂತರ ಏರ್‌ ಇಂಡಿಯಾವನ್ನು ಟಾಟಾ ಸಂಸ್ಥೆ ಮತ್ತೆ ಪಡೆದುಕೊಂಡಿತ್ತು. ಸಾಲದ ಸುಳಿಯಲ್ಲಿದ್ದ ಏರ್‌ ಇಂಡಿಯಾವನ್ನು ಕೇಂದ್ರ ಸರ್ಕಾರವು ಅಕ್ಟೋಬರ್‌ 2021 ರಲ್ಲಿ 18,000 ಕೋಟಿ ರೂ.ಗೆ ಟಾಟಾ ಗ್ರೂಪ್ಸ್‌ಗೆ ಮಾರಾಟ ಮಾಡಿತ್ತು.

  • ಟೇಕಾಫ್‌ ಆದ 30 ಸೆಕೆಂಡ್‌ನಲ್ಲಿ ದೊಡ್ಡ ಶಬ್ಧ ಬಂತು – ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು

    ಟೇಕಾಫ್‌ ಆದ 30 ಸೆಕೆಂಡ್‌ನಲ್ಲಿ ದೊಡ್ಡ ಶಬ್ಧ ಬಂತು – ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು

    ಅಹಮದಾಬಾದ್: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ವಿಶ್ವಾಸ್‌ ಕುಮಾರ್‌ ರಮೇಶ್‌ (Vishwash Kumar Ramesh) ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

    ವಿಮಾನ ನಿಲ್ದಾಣದ ಟೇಕಾಫ್‌ ಆದ 30 ಸೆಕೆಂಡ್‌ಗಳ ನಂತರ ದೊಡ್ಡ ಶಬ್ಧ ಕೇಳಿ ಬಂತು ನಂತರ ವಿಮಾನ ಪತನ ಹೊಂದಿತು ಎಂದು ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಪಾರಾದ ವಿಶ್ವಾಸ್‌ ಅವರು ತುರ್ತು ನಿರ್ಗಮನ ಡೋರ್‌ ಬಳಿಯ 11A ಸೀಟಿನಲ್ಲಿ ಕುಳಿತುಕೊಂಡಿದ್ದರು. ಪತನಗೊಳ್ಳುವ ಕೊನೆ ಕ್ಷಣದಲ್ಲಿ ವಿಮಾನದಿಂದ ಅವರು ಹಾರಿದ್ದರಿಂದ ಪಾರಾಗಿದ್ದಾರೆ.

    ವಿಶ್ವಾಸ್‌ ಅವರ ಎದೆ , ಕಣ್ಣು, ಪಾದಗಳು ಗಾಯಗೊಂಡಿದ್ದು ಅವರು ಈಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನ ಪತನಗೊಂಡ ಸ್ಥಳದಿಂದ ಅವರು ನಡೆದುಕೊಂಡೇ ಅಂಬುಲೆನ್ಸ್‌ ಹತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದೆ. ಇದನ್ನೂ ಓದಿ: ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

     

    ನಾನು ಎದ್ದು ನೋಡಿದಾಗ ನನ್ನ ಸುತ್ತಲೂ ಶವಗಳ ರಾಶಿ ಇತ್ತು. ಸುತ್ತಲೂ ಛಿದ್ರಗೊಂಡ ವಿಮಾನದ ಭಾಗಗಳು ಬಿದ್ದಿದ್ದವು. ಭಯಗೊಂಡು ನಾನು ಓಡಲು ಆರಂಭಿಸಿದ್ದೆ. ಈ ವೇಳೆ ಯಾರೋ ನನ್ನನ್ನು ಹಿಡಿದು ಅಂಬುಲೆನ್ಸ್‌ ಮೂಲಕ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: Ahmedabad Plane Crash | ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಸಹ ಪೈಲಟ್‌!

    ಬ್ರಿಟಿಷ್ ಪ್ರಜೆಯಾಗಿರುವ ವಿಶ್ವಾಸ್‌ ತನ್ನ ಕುಟುಂಬವನ್ನು ಭೇಟಿ ಮಾಡಲು ಕೆಲವು ದಿನಗಳ ಕಾಲ ಭಾರತಕ್ಕೆ ಬಂದಿದ್ದರು. ಇಂದು ಸಹೋದರ ಅಜಯ್ ಕುಮಾರ್ ರಮೇಶ್ (45) ಜೊತೆ ಯುಕೆಗೆ ತೆರಳುತ್ತಿದ್ದರು. ವಿಶ್ವಾಸ್‌ ಅವರು 20 ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ.

    ನನ್ನ ಸಹೋದರ ಅಜಯ್‌ ಬೇರೆ ಸಾಲಿನಲ್ಲಿ ಕುಳಿತಿದ್ದರು. ಅವರು ನನಗೆ ಸಿಕ್ಕಿಲ್ಲ. ಅವರನ್ನು ದಯವಿಟ್ಟು ಪತ್ತೆ ಹಚ್ಚಲು ನನಗೆ ಸಹಾಯ ಮಾಡಿ ಎಂದು ಅವರು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.

  • Ahmedabad Plane Crash | ಈವರೆಗೆ ಭಾರತದಲ್ಲಿ ಸಂಭವಿಸಿದ ಪ್ರಮುಖ ವಿಮಾನ ದುರಂತಗಳ ಪಟ್ಟಿ ಇಲ್ಲಿದೆ

    Ahmedabad Plane Crash | ಈವರೆಗೆ ಭಾರತದಲ್ಲಿ ಸಂಭವಿಸಿದ ಪ್ರಮುಖ ವಿಮಾನ ದುರಂತಗಳ ಪಟ್ಟಿ ಇಲ್ಲಿದೆ

    ನವದೆಹಲಿ: ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ (Air India) ವಿಮಾನ ಪತನಗೊಂಡಿದ್ದು, ಸದ್ಯ ವಿಮಾನದಲ್ಲಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

    ಅಹಮದಾಬಾದ್ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ  (Sardar Vallabhbhai Patel International Airport) ಲಂಡನ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಪರಿಣಾಮ ಅಹಮದಾಬಾದ್ ಸಮೀಪದ ಮೇಘನಿ ನಗರದ ಬಿಜೆ ಎಂಬಿಬಿಎಸ್ ಕಾಲೇಜು ಹಾಸ್ಟೆಲ್‌ಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿ ಪೈಲೆಟ್, ಸಿಬ್ಬಂದಿಗಳು ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಸದ್ಯದ ಮಾಹಿತಿ ಪ್ರಕಾರ ವಿಮಾದಲ್ಲಿದ್ದ 200ಕ್ಕೂ ಹೆಚ್ಚು ಜನರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಇದನ್ನೂ ಓದಿ: Ahmedabad Plane Crash | ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಸಹ ಪೈಲಟ್‌!

    ಭಾರತದಲ್ಲಿ ಈ ರೀತಿ ವಿಮಾನ ದುರಂತ ಸಂಭವಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಹಲವು ಅವಘಡಗಳು ಸಂಭವಿಸಿದ್ದವು. ಪ್ರಮುಖ ವಿಮಾನ ಅಪಘಾತಗಳ ಬಗ್ಗೆ ಮಾಹಿತಿ ಇಲ್ಲಿದೆ.

    2020ರ ಆಗಸ್ಟ್ 7: ಕ್ಯಾಲಿಕಟ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ದುಬೈ-ಕೋಯಿಕ್ಕೋಡ್ ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಪತನಗೊಂಡಿತ್ತು. ಈ ದುರಂತದಲ್ಲಿ 18 ಜನ ಮೃತಪಟ್ಟಿದ್ದು, 172 ಜನ ಪಾರಾಗಿದ್ದರು.

    2010ರ ಮೇ 22: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್‌ವೇನಲ್ಲಿ ದುಬೈ-ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಪತನಗೊಂಡಿತ್ತು. ಘಟನೆಯಲ್ಲಿ 158 ಪ್ರಯಾಣಿಕರು ಮೃತಪಟ್ಟಿದ್ದು, ಕೇವಲ 8 ಜನ ಬದುಕುಳಿದಿದ್ದರು.

    2000ರ ಜುಲೈ 17: ಅಲಯನ್ಸ್ ಏರ್ ವಿಮಾನ 7412 ಪಟ್ನಾದ ವಸತಿ ಪ್ರದೇಶದಲ್ಲಿ ಪತನವಾಗಿ 60 ಜನ ಮೃತಪಟ್ಟಿದ್ದರು.ಇದನ್ನೂ ಓದಿ: ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ

    1996ರ ನವೆಂಬರ್ 12: ಹರಿಯಾಣದ ಚಕ್ರಿಡಬ್ರಿ ಬಳಿ ಆಗಸದಲ್ಲಿ ಸೌದಿ ಅರೇಬಿಯಾದ ವಿಮಾನ ಮತ್ತು ಕಜಕಿಸ್ತಾನದ ವಿಮಾನ ಮುಖಾಮುಖಿ ಡಿಕ್ಕಿಯಾಗಿ ಎರಡೂ ವಿಮಾನದಲ್ಲಿದ್ದ 349 ಜನ ಸಾವಿಗೀಡಾಗಿದ್ದರು.

    1993ರ ಏಪ್ರಿಲ್ 26: ಇಂಡಿಯನ್ ಏರ್‌ಲೈನ್ಸ್ ವಿಮಾನ ಔರಂಗಾಬಾದ್‌ನಲ್ಲಿ ಟೇಕ್‌ಆಫ್ ಆಗುವಾಗ ರನ್‌ವೇನಲ್ಲಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 55 ಜನ ಮೃತಪಟ್ಟಿದ್ದರು.

    1991ರ ಆಗಸ್ಟ್ 16: ಇಂಫಾಲದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 69 ಜನ ಮೃತಪಟ್ಟಿದ್ದರು.

    1990ರ ಫೆಬ್ರುವರಿ 14: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಪ್ರೇಮಿಗಳ ದಿನದಂದು ಅಪಘಾತಕ್ಕೀಡಾಗಿ 92 ಜನ ಸಾವನ್ನಪ್ಪಿದ್ದರು.

    1988ರ ಅಕ್ಟೋಬರ್ 19: ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 133 ಜನ ಮೃತಪಟ್ಟಿದ್ದರು.

    1982ರ ಜೂನ್ 21: ಪ್ರತಿಕೂಲ ಹವಾಮಾನದ ಕಾರಣ ಬಾಂಬೆಯಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 17 ಜನ ಸಾವನ್ನಪ್ಪಿದ್ದರು.

    1978ರ ಜನವರಿ 1: ಬಾಂದ್ರಾದ ಕರಾವಳಿ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ಹೊಸವರ್ಷದ ಸಂಭ್ರಮದಲ್ಲಿದ್ದ ಜನರಿಗೆ ಆಘಾತ ನೀಡಿತ್ತು. ಈ ವೇಳೆ 213 ಜನ ಮೃತಪಟ್ಟಿದ್ದರು.ಇದನ್ನೂ ಓದಿ: ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್‌ ಪ್ರಯಾಣಿಕನ ಭಾವುಕ ಪೋಸ್ಟ್‌

  • ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

    ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

    ಅಹಮದಾಬಾದ್: ಮಹಿಳೆಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಏರ್‌ ಇಂಡಿಯಾ  (Air India) ವಿಮಾನ ಅಪಘಾತದಿಂದ ಪಾರಾಗಿದ್ದಾರೆ.

    ಅಹಮದಾಬಾದ್‌ನ (Ahmedabad) ಭೂಮಿ ಚೌಹಾಣ್ ಲಂಡನ್‌ಗೆ ಹೊರಟಿದ್ದರು. ಆದರೆ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರು. ಇದರಿಂದ ಅವರಿಗೆ ವಿಮಾನ ಏರಲು ಅನುಮತಿ ನಿರಾಕರಿಸಲಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತದ (Air India Flight Crash) ಸುದ್ದಿ ಬಂದಿದ್ದು, ಮಹಿಳೆ, ಮಾಧ್ಯಮಗಳ ಮುಂದೆ ಗದ್ಗದಿತರಾಗಿದ್ದಾರೆ. ಇದನ್ನೂ ಓದಿ: ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ

    ಈ ವಿಚಾರ ಕೇಳಿ ನನಗೆ ಭಯವಾಗಿ ಕೈಕಾಲುಗಳು ನಡುಗಲು ಪ್ರಾರಂಭಿಸಿದವು. ನಾನು ತುಂಬಾ ಹೊತ್ತು ಅದೇ ಆಘಾತದಲ್ಲಿದ್ದೆ. ಕೇವಲ 10 ನಿಮಿಷ ತಡವಾಗಿ ಬಂದಿದ್ದರಿಂದ ವಿಮಾನ ತಪ್ಪಿಸಿಕೊಂಡು ಬದುಕುಳಿದೆ. ನನ್ನ ನೆಚ್ಚಿನ ದೇವರಾದ ಗಣಪತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಗಣಪತಿ ಬಪ್ಪಾ ನನ್ನನ್ನು ಉಳಿಸಿದ ಎಂದು ಹೇಳಿಕೊಂಡಿದ್ದಾರೆ.

    ಭೂಮಿ ತಮ್ಮ ಪತಿಯೊಂದಿಗೆ ಲಂಡನ್‌ನಲ್ಲಿ ವಾಸವಾಗಿದ್ದರು. ರಜೆ ಇದ್ದ ಕಾರಣ ಭಾರತಕ್ಕೆ ಬಂದಿದ್ದರು. ಅವರ ಪತಿ ಈಗ ಬ್ರಿಟನ್‌ನಲ್ಲಿದ್ದಾರೆ. ಭೂಮಿ ಎರಡು ವರ್ಷಗಳ ಹಿಂದೆ ಲಂಡನ್‌ಗೆ ತೆರಳಿದ್ದರು. ಇದಾದ ಬಳಿಕ ಮೊದಲ ಬಾರಿಗೆ ಅವರು ಭಾರತಕ್ಕೆ ಬಂದಿದ್ದರು.

    ಅಪಘಾತಗೊಂಡ ಈ ವಿಮಾನದಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಮೂಲಗಳ ಪ್ರಕಾರ 200ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

  • ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ

    ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ

    ನವದೆಹಲಿ: ದುರಂತಕ್ಕೀಡಾದ ಏರ್‌ ಇಂಡಿಯಾ (Air India) ವಿಮಾನ ಟೇಕಾಫ್‌ ಆಗುವ ಮೊದಲೇ ಸರಿ ಇರಲಿಲ್ಲ, ಅವ್ಯವಸ್ಥೆಯಿಂದ ಕೂಡಿತ್ತು ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಕಾಶ್ ವತ್ಸಾ ಎಂಬವರು ದೆಹಲಿಯಿಂದ (Delhi) ಅಹಮದಾಬಾದ್‌ಗೆ AI-171 ವಿಮಾನದಲ್ಲಿ ಬಂದಿದ್ದರು. ತಮ್ಮ ಪ್ರಯಾಣದ ವೇಳೆ ಕೆಟ್ಟ ಅನುಭವ ಆಗಿತ್ತು ಎಂದು ಅವರು ಎಕ್ಸ್‌ನಲ್ಲಿ ಬರೆದು ಸಿಟ್ಟು ಹೊರಹಾಕಿದ್ದರು. ಇದನ್ನೂ ಓದಿ: ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ಪೋಸ್ಟ್‌ನಲ್ಲಿ ಏನಿದೆ?
    ಅಹಮದಾಬಾದ್‌ನಲ್ಲಿ(Ahmedabad) ಗುರುವಾರ ಮಧ್ಯಾಹ್ನ ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿ 2 ಗಂಟೆ ಮೊದಲು ಪ್ರಯಾಣಿಸಿದ್ದೆ. ಅಲ್ಲಿನ ಅವ್ಯವಸ್ಥೆಯ ದೃಶ್ಯಗಳನ್ನು ಸೆರೆಹಿಡಿದು ಏರ್‌ ಇಂಡಿಯಾಗೆ ಟ್ವೀಟ್‌ ಮಾಡಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ವಿಮಾನ ಪತನಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್‌ ಪ್ರಯಾಣಿಕನ ಭಾವುಕ ಪೋಸ್ಟ್‌

    ವಿಮಾನ ಕೆಲವೊಂದು ಅವ್ಯವಸ್ಥೆಯನ್ನು ನಾನು ಹಂಚಿಕೊಂಡಿದ್ದೇನೆ. ಹವಾನಿಯಂತ್ರಿತ ವ್ಯವಸ್ಥೆ, ಮನರಂಜನಾ ಪರದೆ ನಿರ್ವಹಿಸುವ ರಿಮೋಟ್‌ ಕೆಲಸ ಮಾಡುತ್ತಿರಲಿಲ್ಲ. ಹೀಗೆ ಹಲವು ಅವ್ಯವಸ್ಥೆಗಳನ್ನು ದೃಶ್ಯ ಸಹಿತ ಪಟ್ಟಿ ಕಳುಹಿಸಬೇಕು ಎಂದುಕೊಂಡಿದ್ದೆ. ಇವುಗಳ ಬಗ್ಗೆ ಈಗಲೂ ನಾನು ಮಾಹಿತಿ ನೀಡಲು ಸಿದ್ಧ. ನನ್ನ ಎಕ್ಸ್‌ ಖಾತೆಯನ್ನು ಸಂಪರ್ಕಿಸಿ ಎಂದು ಅವರು ಬರೆದುಕೊಂಡಿದ್ದಾರೆ.

    ಅಹಮದಾಬಾದ್‌ನಿಂದ ಲಂಡನ್‌ಗೆ ಮಧ್ಯಾಹ್ನ 1:39ಕ್ಕೆ ಟೇಕಾಫ್‌ ಆಗಿದ್ದ ಏರ್‌ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡು ಸಮೀಪದ ಮೇಘನಿ ನಗರದ ವಸತಿ ಪ್ರದೇಶದಲ್ಲಿವ ಮೆಡಿಕಲ್‌ ಹಾಸ್ಟೆಲ್‌ನ ಅಡುಗೆ ಮನೆ ಮೇಲೆ ಬಿದ್ದಿತ್ತು.

  • ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್‌ ಪ್ರಯಾಣಿಕನ ಭಾವುಕ ಪೋಸ್ಟ್‌

    ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್‌ ಪ್ರಯಾಣಿಕನ ಭಾವುಕ ಪೋಸ್ಟ್‌

    ಅಹಮದಾಬಾದ್‌: ಲಂಡನ್ ಮೂಲದ ಜೇಮೀ ಮೀಕ್ ತಮ್ಮ ಗುಜರಾತ್ ಭೇಟಿ ಮುಗಿಸಿ, ಸ್ವದೇಶಕ್ಕೆ ಮರಳುವ ಮುನ್ನ ಭಾರತದಲ್ಲಿನ ತಮ್ಮ ಅನುಭವಗಳನ್ನು ಇನ್ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದರು. ದುರಾದೃಷ್ಟವಶಾತ್‌ ಅವರಿದ್ದ ಏರ್‌ ಇಂಡಿಯಾ (Air India) ವಿಮಾನ ಅಹಮದಾಬಾದ್‌ನಿಂದ (Ahmedabad) ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ (Plane Crash) ಪತನಗೊಂಡಿದೆ.

    ಪೋಸ್ಟ್‌ನಲ್ಲಿ, ಭಾರತದಲ್ಲಿನ ತಮ್ಮ ಅದ್ಭುತ ಅನುಭವಗಳನ್ನು ತಮ್ಮ ಗೆಳೆಯ ಫಿಯೊಂಗಲ್ ಗ್ರೀನ್‌ಲಾ-ಮೀಕ್ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಲದೇ ಬುಧವಾರ ರಾತ್ರಿ ಇಂದು ಭಾರತದಲ್ಲಿ ನನ್ನ ಕೊನೆ ರಾತ್ರಿ ಎಂದು ಬೇಸರದಲ್ಲಿ ಹೇಳಿಕೊಂಡಿದ್ದರು. ಇದನ್ನೂ ಓದಿ: Ahmedabad Plane Crash | ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಸಹ ಪೈಲಟ್‌!

    ಜೇಮೀ ಸ್ವದೇಶಕ್ಕೆ ಮರಳಲು ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಕೆಲವೇ ನಿಮಿಷಗಳ ಮುನ್ನ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಭಾರತಕ್ಕೆ ವಿದಾಯ ಎಂದು ಹೇಳಿಕೊಂಡಿದ್ದರು.

    ಅಪಘಾತಗೊಂಡ ಈ ವಿಮಾನದಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಅದರಲ್ಲಿ 133 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನೂ, ಜೇಮೀ ಮತ್ತು ಫಿಯೊಂಗಲ್ ಬದುಕುಳಿದ ಬಗ್ಗೆಯಾಗಲಿ, ಸಾವನ್ನಪ್ಪಿರುವ ಬಗ್ಗೆಯಾಗಲಿ ಮಾಹಿತಿ ಲಭ್ಯವಾಗಿಲ್ಲ. ಜೇಮೀ ಭಾರತದ ಯೋಗದ ಬಗ್ಗೆ ವಿಶೇಷ ಒಲವು ಹೊಂದಿದ್ದರು ಎಂದು ತಿಳಿದು ಬಂದಿದೆ.

    ಮೂಲಗಳ ಪ್ರಕಾರ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?