Tag: ಏರ್ ಇಂಡಿಯಾ

  • ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ಮತ್ತೆ ʼಮಹಾರಾಜʼನಾದ ಟಾಟಾ – Welcome Back ಏರ್‌ ಇಂಡಿಯಾ ಎಂದ ರತನ್‌ ಟಾಟಾ

    ನವದೆಹಲಿ: ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಟಾಟಾ ಸನ್ಸ್‌ ಖರೀದಿಸಿದೆ. ʼಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡಿರುವ ಏರ್‌ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದುಕೊಂಡಿದೆ.

    ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್‌ ಕಾಂತಾ, ಟಾಟಾ ಸಮೂಹ  ಒಟ್ಟು 18 ಸಾವಿರ ಕೋಟಿ ರೂ. ಬಿಡ್‌ ಮಾಡಿತ್ತು. ಡಿ.10ರ ವೇಳೆ ಸಂಪೂರ್ಣವಾಗಿ ಏರ್‌ ಇಂಡಿಯಾವನ್ನು ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಮೊದಲ ವರ್ಷ ಎಲ್ಲ ಉದ್ಯೋಗಿಗಳು ಏರ್‌ ಇಂಡಿಯಾದಲ್ಲಿ ಇರಲಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ತೆಗೆಯುವುದಿಲ್ಲ. ಒಂದು ವರ್ಷದ ನಂತರ ಟಾಟಾ ಸಮೂಹವು ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು ನೀಡಲು ಅವಕಾಶವನ್ನು ಹೊಂದಿರುತ್ತದೆ.

    ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುತ್ತಿದ್ದಂತೆ ಟಾಟಾ ಕಂಪನಿಯ ಮುಖ್ಯಸ್ಥ ರತನ್‌ ಟಾಟಾ Welcome back ಏರ್‌ ಇಂಡಿಯಾ ಎಂದು ಬರೆದು ವಿಮಾನ ಮತ್ತು ಮನೆಯ ಇಮೋಜಿ ಹಾಕಿ ಟ್ವೀಟ್‌ ಮಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

    https://twitter.com/RNTata2000/status/1446431109122650118

    ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಬಿಡ್‍ನಲ್ಲಿ ಕೊನೆಯಲ್ಲಿ ಅಜಯ್ ಸಿಂಗ್ ಅವರ ಸ್ಪೈಸ್ ಜೆಟ್ ಕಂಪನಿ ಮತ್ತು ಟಾಟಾ ಸನ್ಸ್ ಇತ್ತು. ಕೇಂದ್ರ ಸರ್ಕಾರ ಬಿಡ್‍ಗೆ 15-20 ಸಾವಿರ ಕೋಟಿ ರೂ. ಹಣವನ್ನು ಮೂಲ ಬೆಲೆಯಾಗಿ ಇಟ್ಟಿತ್ತು ಎಂದು ವರದಿಯಾಗಿತ್ತು. ಟಾಟಾ ಕಂಪನಿ ಸ್ಪೈಸ್ ಜೆಟ್‍ಗಿಂತಲೂ 5 ಸಾವಿರ ಕೋಟಿ ಹೆಚ್ಚು ಬಿಡ್ ಮಾಡಿತ್ತು ಎಂದು ವರದಿಯಾಗಿತ್ತು.

    2007ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಲೀನದ ಬಳಿಕ ಏರ್ ಇಂಡಿಯಾ ನಷ್ಟವನ್ನು ಅನುಭವಿಸುತ್ತಿದ್ದು ಆಗಸ್ಟ್‌ 2021ರ ವೇಳೆಗೆ 61,562 ಕೋಟಿ ರೂ. ನಷ್ಟದಲ್ಲಿತ್ತು. ಏರ್ ಇಂಡಿಯಾ ಸೇವೆಯಿಂದ ಪ್ರತಿದಿನ ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಖರೀದಿಯ ಬಳಿಕ ಟಾಟಾಗೆ 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಸಿಗಲಿದೆ.

    2019ರ ಲೋಕಸಭಾ ಚುನಾವಣೆಗೂ ಮೊದಲೇ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಏರ್‌ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್‌ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದನ್ನೂ ಓದಿ: ಕೆಜಿಎಫ್ 2 ಚಿತ್ರೀಕರಣದ ಫೋಟೋ ವೈರಲ್

    ಎರಡನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಶೇ.100 ರಷ್ಟು ಖಾಸಗೀಕರಣಕ್ಕೆ ಮುಂದಾಗಿತ್ತು. ಈ ಮಧ್ಯೆ ಕೋವಿಡ್ ಕಾರಣದಿಂದ ಬಿಡ್ ಪ್ರಕ್ರಿಯೆ ವಿಳಂಬವಾಗಿತ್ತು. 2018ರ ಬಿಡ್ಡಿಂಗ್ ಪ್ರಕ್ರಿಯೆ ಸಮಯದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖರೀದಿಸಿ ಲಾಭ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ಇಂಡಿಗೋ ಹೇಳಿತ್ತು.

    ವಿಶೇಷ ಏನೆಂದರೆ 89 ವರ್ಷದ ಹಿಂದೆ ಟಾಟಾ ಕಂಪನಿಯೇ ಏರ್‌ ಇಂಡಿಯಾ ಕಂಪನಿಯನ್ನು ಆರಂಭಿಸಿತ್ತು. 1932ರಲ್ಲಿ ಜೆ.ಆರ್.ಡಿ ಟಾಟಾ ಏರ್ ಇಂಡಿಯಾವನ್ನು ಸ್ಥಾಪಿಸಿದ್ದರು. 1932ರಲ್ಲಿ ಟಾಟಾ ಏರ್‌ಲೈನ್ಸ್‌ ಹೆಸರಿನಲ್ಲಿ ಆರಂಭಗೊಂಡ ಕಂಪನಿ ಬಳಿಕ 1946ರಲ್ಲಿ ಏರ್‌ ಇಂಡಿಯಾ ಕಂಪನಿಯಾಗಿ ಬದಲಾಗಿತ್ತು. ಸ್ವಾತಂತ್ರ್ಯ ಸಿಕ್ಕಿದ ಬಳಿಕ 1953ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಾಗಲೇ ಭಾರತದಲ್ಲಿ ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‌ಲೈನ್ಸ್‌ ಜೊತೆಯಾಗಿ ವಿಸ್ತಾರಾ ಏರ್ ಲೈನ್ಸ್ ಸೇವೆ ನೀಡುತ್ತಿದೆ.

  • ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    ನವದೆಹಲಿ: ಏರ್ ಇಂಡಿಯಾ ಟಾಟಾ ತೆಕ್ಕೆಗೆ ಮರಳಿದೆ. ಕೇಂದ್ರ ಸರ್ಕಾರದ ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದುಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಸ್, ಟ್ರಕ್ ಮಧ್ಯೆ ಭೀಕರ ಅಪಘಾತಕ್ಕೆ 7 ಬಲಿ – 14 ಮಂದಿ ಗಂಭೀರ

    ಈ ವಿಚಾರದ ಬಗ್ಗೆ ಟಾಟಾ ಕಂಪನಿಯ ವಕ್ತಾರರು ಮತ್ತು ಹಣಕಾಸು ಸಚಿವಾಲಯ ಅಧಿಕೃತವಾಗಿ ತಿಳಿಸಿಲ್ಲ. ಏರ್ ಇಂಡಿಯಾ ಖಾಸಗೀಕರಣಗೊಳಿಸುವ ಪ್ರಕ್ರಿಯೆಯ ಬಿಡ್‍ನಲ್ಲಿ ಕೊನೆಯಲ್ಲಿ ಅಜಯ್ ಸಿಂಗ್ ಅವರ ಸ್ಪೈಸ್ ಜೆಟ್ ಕಂಪನಿ ಮತ್ತು ಟಾಟಾ ಸನ್ಸ್ ಇತ್ತು.

    ಕೇಂದ್ರ ಸರ್ಕಾರ ಬಿಡ್‍ಗೆ 15-20 ಸಾವಿರ ಕೋಟಿ ರೂ. ಹಣವನ್ನು ಮೂಲ ಬೆಲೆಯಾಗಿ ಇಟ್ಟಿತ್ತು ಎಂದು ವರದಿಯಾಗಿತ್ತು. ಟಾಟಾ ಕಂಪನಿ ಮೂಲ ಬೆಲೆಗಿಂತಲೂ 3 ಸಾವಿರ ಕೋಟಿ ಮತ್ತು ಸ್ಪೈಸ್ ಜೆಟ್‍ಗಿಂತಲೂ 5 ಸಾವಿರ ಕೋಟಿ ಹೆಚ್ಚು ಬಿಡ್ ಮಾಡಿತ್ತು ಎಂದು ವರದಿಯಾಗಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಶೀಘ್ರವೇ ಬಿಡ್ ಅಂತಿಮಗೊಳಿಸಿ ಕೆಲ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ- ಮಹಾ ನೆರೆಯ ಭೀತಿ 

    2007ರಲ್ಲಿ ಇಂಡಿಯನ್ ಏರ್‍ಲೈನ್ಸ್ ವಿಲೀನದ ಬಳಿಕ ಏರ್ ಇಂಡಿಯಾ ನಷ್ಟವನ್ನು ಅನುಭವಿಸುತ್ತಿದ್ದು 90 ಸಾವಿರ ಕೋಟಿಗೂ ಅಧಿಕ ಸಾಲದ ಸುಳಿಯಲ್ಲಿದೆ. ಏರ್ ಇಂಡಿಯಾ ಸೇವೆಯಿಂದ ಪ್ರತಿದಿನ ಕೇಂದ್ರ ಸರ್ಕಾರಕ್ಕೆ 20 ಕೋಟಿ ರೂ. ನಷ್ಟವಾಗುತ್ತಿದೆ. ಮುಂದಿನ 4 ತಿಂಗಳಿನಲ್ಲಿ ಏರ್ ಇಂಡಿಯಾವನ್ನು ಪೂರ್ಣವಾಗಿ ಟಾಟಾ ಕಂಪನಿಗೆ ಸರ್ಕಾರ ಹಸ್ತಾಂತರಿಸಲಿದೆ. ಖರೀದಿಯ ಬಳಿಕ ಟಾಟಾಗೆ 4,400 ದೇಶೀಯ ಮತ್ತು 1,800 ಅಂತರಾಷ್ಟ್ರೀಯ ಲ್ಯಾಂಡಿಂಗ್ ಸಿಗಲಿದೆ.

    2019ರ ಲೋಕಸಭಾ ಚುನಾವಣೆಗೂ ಮೊದಲೇ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ ಶೇ.76 ರಷ್ಟು ಷೇರನ್ನು ಮಾರಾಟ ಮಾಡಿ ಶೇ.24 ರಷ್ಟು ಷೇರನ್ನು ತನ್ನ ಬಳಿ ಇಡುವ ಕೇಂದ್ರದ ಪ್ರಸ್ತಾಪಕ್ಕೆ ಬಿಡ್ ಮಾಡಲು ಯಾರೂ ಆಸಕ್ತಿ ತೋರಿಸಿರಲಿಲ್ಲ. ಇದನ್ನೂ ಓದಿ: ಗುದನಾಳದಲ್ಲಿ 42 ಲಕ್ಷ ಬೆಲೆ ಬಾಳುವ ಚಿನ್ನದ ಪೇಸ್ಟ್- ವ್ಯಕ್ತಿ ವಶಕ್ಕೆ

    ಎರಡನೇ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಶೇ.100 ರಷ್ಟು ಖಾಸಗೀಕರಣಕ್ಕೆ ಮುಂದಾಗಿತ್ತು. ಈ ಮಧ್ಯೆ ಕೋವಿಡ್ ಕಾರಣದಿಂದ ಬಿಡ್ ಪ್ರಕ್ರಿಯೆ ವಿಳಂಬವಾಗಿತ್ತು. 2018ರ ಬಿಡ್ಡಿಂಗ್ ಪ್ರಕ್ರಿಯೆ ಸಮಯದಲ್ಲಿ ನಷ್ಟದಲ್ಲಿರುವ ಏರ್ ಇಂಡಿಯಾವನ್ನು ಖರೀದಿಸಿ ಲಾಭ ಆಗುತ್ತದೆ ಎಂಬ ನಿರೀಕ್ಷೆ ಇಲ್ಲ ಎಂದು ಇಂಡಿಗೋ ಹೇಳಿತ್ತು.

    1932ರಲ್ಲಿ ಜೆ.ಆರ್.ಡಿ ಟಾಟಾ ಏರ್ ಇಂಡಿಯಾವನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಸಿಕ್ಕಿದ ಬಳಿಕ 1947ರಲ್ಲಿ ಏರ್ ಇಂಡಿಯಾವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು. ಈಗಾಗಲೇ ಭಾರತದಲ್ಲಿ ಟಾಟಾ ಸನ್ಸ್ ಮತ್ತು ಸಿಂಗಾಪುರ ಏರ್‍ಲೈನ್ಸ್ ಜೊತೆಯಾಗಿ ವಿಸ್ತಾರಾ ಏರ್ ಲೈನ್ಸ್ ಸೇವೆ ನೀಡುತ್ತಿದೆ.

  • 1 ವರ್ಷದ ಬಳಿಕ ಕೇರಳ ವಿಮಾನ ದುರಂತಕ್ಕೆ ಕಾರಣ ಸಿಕ್ತು- ತನಿಖಾ ವರದಿಯಲ್ಲಿ ಏನಿದೆ?

    1 ವರ್ಷದ ಬಳಿಕ ಕೇರಳ ವಿಮಾನ ದುರಂತಕ್ಕೆ ಕಾರಣ ಸಿಕ್ತು- ತನಿಖಾ ವರದಿಯಲ್ಲಿ ಏನಿದೆ?

    ನವದೆಹಲಿ: ಪೈಲಟ್ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಕೇರಳದ ಕೋಯಿಕ್ಕೋಡ್‍ನಲ್ಲಿ ವಿಮಾನ ದುರಂತ ಸಂಭವಿಸಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ಹೇಳಿದೆ.

    ನಾಗರಿಕ ವಿಮಾನಯಾನ ಸಚಿವಾಲಯದ ವಿಭಾಗವಾದ ಎಎಐಬಿ 257 ಪುಟಗಳ ವರದಿಯನ್ನು ಶನಿವಾರ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್ ಲ್ಯಾಂಡಿಂಗ್ ವೇಳೆ ಪಾಲಿಸ ಬೇಕಾದ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡಲಿಲ್ಲ ಎಂದು ಹೇಳಿದೆ.

    ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಭಾರೀ ಮಳೆ ಬರುತ್ತಿತ್ತು. ಇದರಿಂದಾಗಿ ಪೈಲಟ್‍ಗೆ ರನ್‍ವೇ ಸರಿಯಾಗಿ ಗೋಚರಿಸಲಿಲ್ಲ. ಈ ವೇಳೆ ‘ಗೋ ಅರೌಂಡ್’ ಎಂಬ ಸಂದೇಶವನ್ನು ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ರೂಮಿಗೆ ಕಳುಹಿಸಿದ ಬಳಿಕವೂ ಪೈಲಟ್ ಟಚ್‍ಡೌನ್ ವಲಯವನ್ನು ದಾಟಿ ರನ್‍ವೇಯ ಅರ್ಧ ದೂರದಲ್ಲಿ ಲ್ಯಾಂಡ್ ಮಾಡಿದ್ದಾರೆ. ಇದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪೈಲಟ್‍ಗೆ ಅನಿಸಿದಾಗ ಗೋ ಅರೌಂಡ್ ಸಂದೇಶವನ್ನು ಕಳುಹಿಸುತ್ತಾರೆ. ಈ ಸಂದೇಶ ಬಂದ ಕೂಡಲೇ ವಿಮಾನ ಲ್ಯಾಂಡ್ ಮಾಡಲು ಪೈಲಟ್‍ಗೆ ಸಾಧ್ಯವಾಗುವುದಿಲ್ಲ ಎನ್ನುವುದು ಎಟಿಸಿಯಲ್ಲಿ ಕಾರ್ಯನಿರ್ವಹಣೆ ಮಾಡುವವರಿಗೆ ತಿಳಿಯುತ್ತದೆ. ಕೂಡಲೇ ಅವರು ಹತ್ತಿರದಲ್ಲೇ ಎಲ್ಲಿ ಲ್ಯಾಂಡಿಂಗ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ.

    ವಿಮಾನದ ಗಾಜಿನ ವೈಪರ್ ದೋಷಪೂರಿತವಾಗಿತ್ತು. ಪ್ರತಿಕೂಲ ಹವಾಮಾನದಿಂದ ಲ್ಯಾಂಡಿಂಗ್ ಮಾಡುವುದು ಕಷ್ಟ ಎನ್ನುವುದು ಪೈಲಟ್‍ಗೆ ಗೊತ್ತಿತ್ತು. ಈ ವಿಚಾರಗಳು ಪೈಲಟ್‍ಗೆ ಮೊದಲೇ ಗೊತ್ತಿತ್ತು.  ಆದರೂ ಪೈಲಟ್ ಟಚ್‍ಡೌನ್ ವಲಯ(ವಿಮಾನದ ಚಕ್ರಗಳು ಮೊದಲು ರನ್‍ವೇಯನ್ನು ಸ್ಪರ್ಶಿಸುವ ಸ್ಥಳ) ದಾಟಿ ಅರ್ಧ ದೂರಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದಾಗಿ ವಿಮಾನ ನಿಯಂತ್ರಣಕ್ಕೆ ಸಿಗದೇ ಟೇಬಲ್ ಟಾಪ್ ರನ್‍ವೇಯಿಂದ ಕೆಳಗೆ ಜಾರಿ ಬಿದ್ದಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ದುಬೈಯಿಂದ ವಂದೇ ಭಾರತ್ ಮಿಷನ್ ಅಡಿ 2020ರ ಆಗಸ್ಟ್ 7ರಂದು 184 ಪ್ರಯಾಣಿಕರನ್ನು ಹೊತ್ತುಕೊಂಡು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೋಯಿಕ್ಕೊಂಡಿಗೆ ಬಂದಿತ್ತು. ಈ ವೇಳೆ ರನ್‍ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ವಿಮಾನ ಕೆಳಗೆ ಜಾರಿ ಬಿದ್ದ ಪರಿಣಾಮ ಇಬ್ಬರು ಪೈಲಟ್ ಸೇರಿದಂತೆ 21 ಮಂದಿ ಮೃತಪಟ್ಟಿದ್ದರು. ಇದನ್ನೂ ಓದಿ: ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಯಿಕ್ಕೋಡ್‍ ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

  • ಭಾರತದಲ್ಲಿನ ಕೊರೊನಾ ಟೆಸ್ಟ್‌ಗಳು ವಿಶ್ವಾಸಾರ್ಹವಲ್ಲ – ಆಸ್ಟ್ರೇಲಿಯಾ

    ಭಾರತದಲ್ಲಿನ ಕೊರೊನಾ ಟೆಸ್ಟ್‌ಗಳು ವಿಶ್ವಾಸಾರ್ಹವಲ್ಲ – ಆಸ್ಟ್ರೇಲಿಯಾ

    ಪರ್ತ್: ಭಾರತದಲ್ಲಿ ಮಾಡುತ್ತಿರುವ ಕೊರೊನಾ ಟೆಸ್ಟ್‌ಗಳು ವಿಶ್ವಾಸಾರ್ಹವಲ್ಲ ಎಂದು ಎಂದು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ ಮುಖ್ಯಮಂತ್ರಿ ಮಾರ್ಕ್ ಮೆಕ್‍ಗೋವನ್ ಹೇಳಿದ್ದಾರೆ.

    ಭಾರತದಿಂದ ಮರಳಿ ಪರ್ತ್ ಹೋಟೆಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿರುವ ನಾಲ್ವರಲ್ಲಿ ಕೋವಿಡ್ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ ಬಳಿಕ ಮಾರ್ಕ್ ಅವರು ಈ ಹೇಳಿಕೆ ನೀಡಿದ್ದಾರೆ.

    ಭಾರತದಿಂದ ಮರಳುತ್ತಿರುವ ವ್ಯಕ್ತಿಗಳಿಗೆ ಅಲ್ಲಿ ಸರಿಯಾಗಿ ಪರೀಕ್ಷೆ ಮಾಡುತ್ತಿಲ್ಲ. ಇದು ಇಲ್ಲಿ ಕೆಲ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಭಾರತದಿಂದ ವಾಪಸಾಗುತ್ತಿರುವ ಹೆಚ್ಚಿನವರು ಕೋವಿಡ್ ಸೋಂಕು ಹೊಂದಿದ್ದಾರೆ ಎಂದು ಪಶ್ಚಿಮ ಆಸ್ಟ್ರೇಲಿಯಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಭಾರತದಿಂದ ಸಿಡ್ನಿಗೆ ತೆರಳಿದ್ದ ಏರ್ ಇಂಡಿಯಾ ವಿಮಾನದ ಓರ್ವ ಸಿಬ್ಬಂದಿಗೆ ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಪ್ರಯಾಣಕ್ಕೂ ಮುನ್ನ ದೆಹಲಿಯಲ್ಲಿ ಅವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ ನೆಗೆಟಿವ್ ಬಂದಿತ್ತು. ಸಿಡ್ನಿಗೆ ಬಂದ ನಂತರ ಅಲ್ಲಿ ಟೆಸ್ಟ್ ಮಾಡಲಾಗಿದ್ದು ಅಲ್ಲಿ ಪಾಸಿಟಿವ್ ಬಂದಿದೆ. ಈ ಕಾರಣಕ್ಕೆ ಪ್ರಯಾಣಿಕರನ್ನು ಸಿಡ್ನಿಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಬಳಿಕ ವಿಮಾನವು ಪ್ರಯಾಣಿಕರಿಲ್ಲದೆಯೇ ಕೇವಲ ಸರಕು ಹೇರಿಕೊಂಡು ಭಾರತಕ್ಕೆ ಮರಳಿದೆ.

    ಭಾರತದಲ್ಲಿ ಪ್ರತಿ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮೇ 15ರವರೆಗೆ ಎಲ್ಲ ನೇರ ವಿಮಾನಗಳನ್ನು ರದ್ದು ಮಾಡಿದೆ.

  • ನಷ್ಟದಲ್ಲಿರುವ ʼಮಹಾರಾಜʼನನ್ನು ಖರೀದಿಸಲು ಮುಂದಾದ ಟಾಟಾ ಕಂಪನಿ

    ನಷ್ಟದಲ್ಲಿರುವ ʼಮಹಾರಾಜʼನನ್ನು ಖರೀದಿಸಲು ಮುಂದಾದ ಟಾಟಾ ಕಂಪನಿ

    ನವದೆಹಲಿ: 90 ಸಾವಿರ ಕೋಟಿ ರೂ. ನಷ್ಟದ ಸುಳಿಯಲ್ಲಿ ಸಿಲುಕಿರುವ ʼಮಹಾರಾಜʼನನ್ನು ಖರೀದಿಸಲು ಟಾಟಾ ಕಂಪನಿ ಆಸಕ್ತಿ ತೋರಿಸಿದೆ.

    ʼಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡಿರುವ ಏರ್‌ ಇಂಡಿಯಾ ಕಂಪನಿಯನ್ನು ಮಾರಾಟ ಮಾಡುವ ಸಂಬಂಧ ಕೇಂದ್ರ ಸರ್ಕಾರ ಬಿಡ್ಡಿಂಗ್‌ ಆಹ್ವಾನಿಸಿದ್ದು ಇಂದು ಸಂಜೆ 5 ಗಂಟೆಗೆ ಅವಧಿ ಮುಕ್ತಾಯವಾಗಿದೆ.

    ಈ ಬಿಡ್ಡಿಂಗ್‌ನಲ್ಲಿ ಟಾಟಾ ಕಂಪನಿ, ಏರ್‌ ಇಂಡಿಯಾ ನೌಕರರ ಒಕ್ಕೂಟ ಮತ್ತು ಅಮೆರಿಕದ ಇಂಟರ್ಅಪ್ಸ್ ಕಂಪನಿ ಖರೀದಿಸಲು ಆಸಕ್ತಿ ತೋರಿಸಿದೆ. ಕೇಂದ್ರ ಸರ್ಕಾರ ಜನವರಿ 5 ರಂದು ಬಿಡ್ಡಿಂಗ್‌ಗೆ ಅರ್ಹತೆ ಪಡೆದವರ ಹೆಸರನ್ನು ಪ್ರಕಟಿಸುವ ಸಾಧ್ಯತೆಯಿದೆ.

    ಏರ್‌ ಇಂಡಿಯಾ ಮಾರಾಟ ಮಾಡುವ ಕೇಂದ್ರ ಸರ್ಕಾರದ ಮೊದಲ ಪ್ರಯತ್ನ ವಿಫಲವಾಗಿತ್ತು. 2018ರಲ್ಲಿ ಕೇಂದ್ರ ಸರ್ಕಾರ ಬಿಡ್‌ ಆಹ್ವಾನಿಸಿತ್ತು. ಆದರೆ ಯಾರೂ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಈ ಸಂದರ್ಭದಲ್ಲಿ ಶೇ.76 ರಷ್ಟು ಪಾಲು ಮಾರಾಟ ಮಾಡುವುದರ ಜೊತೆಗೆ ಸಾಲವನ್ನು ಪಾವತಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.

    ಈ ಬಾರಿ ಬಿಡ್‌ನಲ್ಲಿ ಶೇ.100 ರಷ್ಟು ಷೇರನ್ನು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಗಳು ಬಿಡ್‌ನಲ್ಲಿ ಭಾಗವಹಿಸಿ ಖರೀದಿಸಲು ಆಸಕ್ತಿ ತೋರಿಸಿವೆ.

    ಮಾಧ್ಯಮಗಳಲ್ಲಿ ಪ್ರಕಟವಾದಂತೆ ಟಾಟಾ ಗ್ರೂಪ್, ಮಲೇಷ್ಯಾದ ಏರ್ ಏಷ್ಯಾ ಗ್ರೂಪ್‌ ಜೊತೆ ಸೇರಿ ಜಂಟಿಯಾಗಿ ಬಿಡ್‌ನಲ್ಲಿ ಭಾಗವಹಿಸಿದೆ ಎಂದು ವರದಿಯಾಗಿದೆ. ಸದ್ಯ ಏರ್‌ ಏಷ್ಯಾ ಇಂಡಿಯಾದಲ್ಲಿ ಟಾಟಾ ಗ್ರೂಪ್‌ ಶೇ.49ರಷ್ಟು ಪಾಲುದಾರಿಕೆ ಹೊಂದಿದೆ. 2020-21ರ ಅಂತ್ಯದ ವೇಳೆಗೆ ಏರ್‌ಏಷ್ಯಾ ಇಂಡಿಯಾದಲ್ಲಿನ ತನ್ನ ಪಾಲನ್ನು ನಿಧಾನವಾಗಿ ಶೇ.76 ಕ್ಕಿಂತ ಹೆಚ್ಚಿಸಲು ಟಾಟಾ ಸಂಸ್ಥೆ ಯೋಚಿಸುತ್ತಿರುವ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಖರೀದಿಗೆ ಆಸಕ್ತಿ ತೋರಿಸಿದೆ ಎನ್ನಲಾಗುತ್ತಿದೆ.

    ವಿಶೇಷ ಏನೆಂದರೆ 88 ವರ್ಷದ ಹಿಂದೆ ಟಾಟಾ ಕಂಪನಿಯೇ ಏರ್‌ ಇಂಡಿಯಾ ಕಂಪನಿಯನ್ನು ಆರಂಭಿಸಿತ್ತು. 1932ರಲ್ಲಿ ಟಾಟಾ ಏರ್‌ಲೈನ್ಸ್‌ ಹೆಸರಿನಲ್ಲಿ ಆರಂಭಗೊಂಡ ಕಂಪನಿ ಬಳಿಕ 1946ರಲ್ಲಿ ಏರ್‌ ಇಂಡಿಯಾ ಕಂಪನಿಯಾಗಿ ಬದಲಾಗಿತ್ತು.

  • ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್‍ಗೆ ಏರ್ ಇಂಡಿಯಾ ಸಿಬ್ಬಂದಿಯಿಂದ ಅಂತಿಮ ನಮನ

    ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್‍ಗೆ ಏರ್ ಇಂಡಿಯಾ ಸಿಬ್ಬಂದಿಯಿಂದ ಅಂತಿಮ ನಮನ

    – ಹುಟ್ಟೂರು ತಲುಪಿದ ಅಖಿಲೇಶ್ ಮೃತದೇಹ

    ದೆಹಲಿ/ಲಕ್ನೋ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ದುರಂತದಲ್ಲಿ ಮಡಿದ ಪೈಲಟ್‍ಗೆ ಏರ್ ಇಂಡಿಯಾ ಎಕ್ಸ್‍ ಪ್ರೆಸ್ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.

    ಶುಕ್ರವಾರ ರಾತ್ರಿ ನಡೆದ ದುರಂತದಲ್ಲಿ ಪೈಲಟ್ ಅಖಿಲೇಶ್ ಕುಮಾರ್ ಮೃತಪಟ್ಟಿದ್ದರು. ಶನಿವಾರ ರಾತ್ರಿ ಏರ್ ಇಂಡಿಯಾ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿ, ಮೃತದೇಹ ಇಂದು ಬೆಳಗ್ಗೆ ಹುಟ್ಟೂರು ಉತ್ತರ ಪ್ರದೇಶದ ಮಥುರಾಗೆ ತಲುಪಿದೆ. ಇದನ್ನೂ ಓದಿ: ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ದುಬೈನಲ್ಲಿ ಸಿಲುಕಿದ್ದ ಭಾರತೀಯರನ್ನು ಶುಕ್ರವಾರ ಏರ್ ಇಂಡಿಯಾ ವಿಮಾನ ಮೂಲಕ ಕೇರಳದ ಕೋಯಿಕ್ಕೋಡ್ ನಲ್ಲಿರುವ ಕರಿಪುರ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿ ದುರಂತಕ್ಕೀಡಾಗಿತ್ತು.  ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ದುಬೈಯಿಂದ 190 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್‍ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಪೈಲಟ್ ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್‍ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸೇರಿ 19 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

  • ಕೇರಳ ವಿಮಾನ ದುರಂತ – ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ

    ಕೇರಳ ವಿಮಾನ ದುರಂತ – ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ

    -ಮಂಗಳೂರು ವಿಮಾನ ದುರಂತದಿಂದ ನಾವು ಪಾಠ ಕಲಿತಿದ್ದೇವೆ

    ತಿರುವನಂತಪುರ: ದುಬೈ-ಕೋಯಿಕ್ಕೋಡ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ತಲಾ ಹತ್ತು ಲಕ್ಷ ಪರಿಹಾರವನ್ನು ಏರ್ ಇಂಡಿಯಾ ನೀಡಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರಿದೀಪ್‍ಸಿಂಗ್ ಪುರಿ ತಿಳಿಸಿದ್ದಾರೆ.

    ಇಂದು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡದ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದ ಅವರು ದುರ್ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು. ಬಳಿಕ ಮಾತನಾಡಿ, ಜೀವಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿದ್ದು ಸಾವನ್ನಪ್ಪಿದರ ಕುಟುಂಬಕ್ಕೆ ಹತ್ತು ಲಕ್ಷ, ಗಂಭೀರ ಗಾಯಗೊಂಡವರಿಗೆ ಎರಡು ಲಕ್ಷ ಮತ್ತು ಸಣ್ಣ ಪುಟ್ಟ ಗಾಯಾಳುಗಳಿಗೆ 50 ಸಾವಿರ ಪರಿಹಾರ ಏರ್ ಇಂಡಿಯಾ ಕಡೆಯಿಂದ ನೀಡಲಾಗುವುದು. ಈಗಾಗಲೇ 23 ಮಂದಿ ಆಸ್ಪತ್ರೆ ಡಿಸ್ಚಾರ್ಜ್ ಆಗಿದ್ದಾರೆ. 149 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ದುರಂತ ನಡೆದ ಸ್ಥಳದಲ್ಲಿ ವಿಮಾನದ ಎರಡು ಬ್ಲಾಕ್ ಬಾಕ್ಸ್ ಸಿಕ್ಕಿವೆ, ಮುಂದಿನ ಹಂತದಲ್ಲಿ ದುರಂತಕ್ಕೆ ನಿಖರ ಕಾರಣ ಪತ್ತೆಹಚ್ಚಲಾಗುವುದು ಈ ಬಗ್ಗೆ ತನಿಖೆ ನಡೆಸಿದೆ. ವಿಮಾನ ಹಾರಾಟ ನಡೆಸುತ್ತಿದ್ದವರು ಅನುಭವಿ ಪೈಲೆಟ್ ಗಳು ಈ ಪೈಕಿ ಮುಖ್ಯ ಪೈಲೈಟ್ ಸಾಠೆ ಹಿಂದೆ 27 ಬಾರಿ ಇದೇ ರನ್ ವೇ ಲ್ಯಾಂಡ್ ಮಾಡಿದ್ದಾರೆ ಅವರಿಗೆ 10,848 ಗಂಟೆ ವಿಮಾನ ಹಾರಾಟ ನಡೆಸಿರುವ ಅನುಭವ ಇದೆ ಆದರು ಅವಘಡ ಸಂಭವಿಸಿದೆ. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು 

    ನಾವು ಮಂಗಳೂರು ವಿಮಾನ ದುರಂತದಿಂದ ಪಾಠ ಕಲಿತಿದ್ದೇವೆ, ಪ್ರತಿನಿತ್ಯವೂ ಹೊಸ ಪಾಠ ವಿಮಾನಯಾನ ಕ್ಷೇತ್ರದಲ್ಲಿ ಕಲಿಯುತ್ತಿದ್ದೇವೆ, ಈಗ ಈ ಘಟನೆ ಮತ್ತೊಂದು ಹೊಸ ಪಾಠ ಕಲಿಸಿದೆ, ಅಪಘಾತಕ್ಕೆ ಕಾರಣ ನೈಜ ಸಮಯ ಆಧರಿಸಿ ಹೊರ ಬರಲಿದ್ದು ಇದನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

  • ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಕ್ಯಾಲಿಕಟ್‌: ಕೇರಳ ವಿಮಾನ ದುರಂತ ಪ್ರಕರಣದ ತನಿಖೆ ನಡೆಸುತ್ತಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳಿಗೆ ಬ್ಲ್ಯಾಕ್‌ ಬಾಕ್ಸ್‌ ಸಿಕ್ಕಿದೆ.

    ದುಬೈನಿಂದ ಹೊರಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಟೇಬಲ್‌ಟಾಪ್‌ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್‌ ಆಗಿ 35 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 18 ಮಂದಿ ಮೃತಪಟ್ಟಿದ್ದಾರೆ. 137 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, 22 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಪೈಲಟ್‌ ಮೃತಪಟ್ಟಿದ್ದು, 4 ಮಂದಿ ವಿಮಾನ ಸಿಬ್ಬಂದಿ ಪಾರಾಗಿದ್ದಾರೆ.

    ಏನಿದು ಬ್ಲ್ಯಾಕ್‌ ಬಾಕ್ಸ್‌?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. . ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ಹಿಂಭಾಗದಲ್ಲಿ ಯಾಕೆ?
    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.  ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು 

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್ – ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್‌ ಧ್ವನಿಯನ್ನು ದಾಖಲಿಸುತ್ತದೆ. ಇದನ್ನೂ ಓದಿ: ವಿಮಾನ ದುರಂತ- ಮೃತಪಟ್ಟವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್‌ ಬಾಕ್ಸ್‌ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ಹೊರ ಸೂಸುತ್ತಿರುತ್ತದೆ.

    ಬಳಕೆ ಆಗಿದ್ದು ಯಾವಾಗ?
    1953-54ರ ವರ್ಷದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲು ಮತ್ತು ಮುಂದೆ ಅಪಘಾತ ತಡೆಯಲು ಬ್ಲ್ಯಾಕ್‌ಬಾಕ್ಸ್‌ ಅನ್ನು ಅಭಿವೃದ್ಧಿ ಪಡಿಸಲಾಯಿತು. ಈ ಮೊದಲು ಇದು ಕೆಂಪು ಬಣ್ಣದ್ದಲ್ಲಿತ್ತು. ಹೀಗಾಗಿ ಇದನ್ನು ʼಕೆಂಪು ಮೊಟ್ಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಳಿಕ ಬಾಕ್ಸ್‌ ಒಳಗಡೆ ಇರುವ ಗೋಡೆಗಳು ಕಪ್ಪು ಬಣ್ಣದ್ದಲ್ಲಿದ್ದ ಕಾರಣ ಇದನ್ನು ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಯಿತು. ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಈ ಬ್ಲ್ಯಾಕ್‌ ಬಾಕ್ಸ್‌ ನೀಡದೇ ಇದ್ದರೂ ತನಿಖೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ.

  • ವಿಮಾನ ದುರಂತ- ಮೃತಪಟ್ಟವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್

    ವಿಮಾನ ದುರಂತ- ಮೃತಪಟ್ಟವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್

    – ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಧಾವಿಸ್ಬೇಡಿ
    – ಸಿಎಂ ಪಿಣರಾಯಿ ನಿಯೋಗ ಆಸ್ಪತ್ರೆಗೆ ಭೇಟಿ

    ತಿರುವನಂತಪುರಂ: ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

    ಪ್ರಯಾಣಿಕ ದುಬೈನಿಂದ ಭಾರತಕ್ಕೆ ವಂದೆ ಭಾರತ್ ಮಿಷನ್ ಅಡಿ ಟಿಕೆಟ್ ಪಡೆದು ಶುಕ್ರವಾರ ರಾತ್ರಿ ವಿಮಾನ ಹತ್ತಿದ್ದರು. ಆದರೆ ಕರಿಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದ್ದು, ಏರ್ ಇಂಡಿಯಾ ವಿಮಾನ ಇಬ್ಭಾಗವಾಗಿತ್ತು. ಈ ದುರಂತದಲ್ಲಿ ಸಾವನ್ನಪ್ಪಿದವರ ಕೊರೊನಾ ಟೆಸ್ಟ್ ಮಾಡಿದಾಗ ಓರ್ವನಿಗೆ ಕೊರೊನಾ ಪಾಸಿಟಿವ್ ಇರುವುದು ವರದಿಯಾಗಿದೆ.

    ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್‍ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್‍ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ದುರ್ಘಟನೆ ನಡೆಯುತ್ತಿದ್ದಂತೆ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಸಹಕಾರದಿಂದ ಗಾಯಗೊಂಡ 149 ಮಂದಿಯನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿದ್ದು, 22 ಮಂದಿಯ ಸ್ಥಿತಿ ಗಂಭೀರವಾಗಿದೆ. 22 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಮಲಪ್ಪುರಂ ಕಲೆಕ್ಟರ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಯಾರೂ ಭೇಟಿ ಮಾಡಬೇಡಿ ಎಂದು ಅಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ 10 ವರ್ಷಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೂಡ ಇಂತದ್ದೇ ದುರಂತ ಸಂಭವಿಸಿತ್ತು ಎಂದು ಮೆಲುಕು ಹಾಕಿಕೊಂಡರು. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು 

    ರಾಜ್ಯಪಾಲ, ಸಿಎಂ ನಿಯೋಗ ಭೇಟಿ:
    ಕೋಯಿಕ್ಕೋಡ್ ನಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ನಿಯೋಗ ತಿರುವನಂಪುರದಿಂದ ಕೋಯಿಕ್ಕೋಡ್ ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಕೋಯಿಕ್ಕೋಡ್ ನಲ್ಲಿರುವ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದೆ. ಇದನ್ನೂ ಓದಿ: ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದೆ. ಈ ತನಿಖೆ ಬಳಿಕ ಮುಂದಿನ ಕ್ರಮ ಏನು ಅಂತ ಹೇಳುವುದಾಗಿ ಇದೇ ವೇಳೆ ಸಿಎಂ ಪಿಣರಾಯಿ ಅವರು ತಿಳಿಸಿದರು. ನಿಯೋಗದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸ್ಪೀಕರ್ ಪಿ. ವಿಶ್ವಾಸ್ ಮೆಹ್ತಾ ಹಾಗೂ ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಪ್ರಮುಖರಾಗಿದ್ದರು.

  • ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    – ಮೊಮ್ಮಗನಿಗಾಗಿ ಕಾದು ಕುಳಿತಿದ್ದ ಅಜ್ಜ-ಅಜ್ಜಿಗೆ ಶಾಕ್

    ತಿರುವನಂತಪುರಂ: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾದವರ ಒಂದೊಂದೇ ಮನಮಿಡಿಯುವ ಕಥೆಗಳು ಬೆಳಕಿಗೆ ಬರುತ್ತಿದೆ.

    ಹೌದು. 1 ವರ್ಷದ ಅಜಮ್ ಮೊಹಮ್ಮದ್ ತನ್ನ ಅಜ್ಜಿ ಮನೆಗೆ ಹೋಗುವ ಮುನ್ನವೇ ಕಣ್ಣುಮುಚ್ಚಿರುವ ಮನಕಲಕುವ ಘಟನೆಯೊಂದು ನಡೆದಿದೆ. ಕೋಯಿಕ್ಕೋಡ್ ವೆಲ್ಲಿಮಡುಕುನ್ನು ಮ್ದು ನಿಜಮ್ ಹಾಗೂ ಸಾಹಿರಾ ದಂಪತಿಗೆ ಒಂದು ವರ್ಷಗಳ ಹಿಂದೆ ಅಜಮ್ ಜನಿಸಿದ್ದಾನೆ.

    ಮಗುವಿಗೆ 1 ವರ್ಷವಾದ ಬಳಿಕ ಇದೀಗ ತಮ್ಮ ಮಗುವನ್ನು ತಾಯ್ನಾಡಿಗೆ ಪರಿಚಯಿಸಲು ತಾಯಿ ತನ್ನ ಮೂವರು ಮಕ್ಕಳೊಂದಿಗೆ ವಿಮಾನ ಹತ್ತಿದ್ದರು. ಆದರೆ ಅಜಮ್ ಮೊದಲ ಪ್ರಯಾಣವೇ ಅಂತಿಮ ಪ್ರಯಾಣವಾಗಿದ್ದು, ಇತ್ತ ಮೊಮ್ಮಗನನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಅಜ್ಜ-ಅಜ್ಜಿಗೆ ದಿಗಿಲು ಬಡಿದಂತಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಅಜಮ್ ತಾಯಿ 29 ವರ್ಷದ ಸಾಹಿರಾ ಬಾನು ಕೂಡ ದುರ್ಘಟನೆಗೆ ಬಲಿಯಾಗಿದ್ದಾರೆ. ಅಜಮ್ ಸಹೋದರರಾದ 8 ವರ್ಷದ ಇಹಾನ್ ಮೊಹಮ್ಮದ್ ಹಾಗೂ 4 ವರ್ಷದ ಮರಿಯಮ್ ಮೊಹಮ್ಮದ್ ಗಾಯಗೊಂಡಿದ್ದು, ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಪರಿಪುರದಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಪುಟ್ಟ ಕಂದಮ್ಮ ಅಜಮ್ ತನ್ನ ತಾಯಿಯ ತೊಡೆಯ ಮೇಲೆ ಕುಳಿತುಕೊಂಡಿದ್ದ ಎನ್ನಲಾಗಿದೆ.

    ನಿಜಮ್ ಹಾಗೂ ಅವರ ಕುಟುಂಬ ಕಳೆದ 10 ವರ್ಷಗಳಿಂದ ದುಬೈನಲ್ಲಿ ನೆಲೆಸಿದೆ. ನಿಜಮ್ ಅಲ್ಲೇ ಉಳಿದುಕೊಂಡಿದ್ದು, ಸಾಹಿರಾ ತಮ್ಮ ಮೂವರು ಮಕ್ಕಳೊಂದಿಗೆ ಶುಕ್ರವಾರ ದುಬೈನಿಂದ ತಾಯ್ನಾಡಿಗೆ ಬರಲು ವಿಮಾನ ಏರಿದ್ದಾರೆ. ಆದರೆ ತಾಯ್ನಾಡಿಗೆ ಕಾಲಿಡುವ ಮೊದಲೇ ದುರಂತಕ್ಕೀಡಾಗಿದ್ದಾರೆ. ಸಾಹಿರಾಗೆ ಹೆರಿಗೆ ಸಮಯದಲ್ಲಿ ಜೊತೆಗಿದಿದ್ದರಿಂದ ತಾಯಿ ಸಕೀನಾ ಮಾತ್ರ ಅಜಮ್ ನನ್ನು ನೋಡಿದ್ದರು. ಹೀಗಾಗಿ ಮಗನಿಗೆ 1 ವರ್ಷ ತುಂಬಿದ ಬಳಿಕ ಆತನನ್ನು ತಾಯ್ನಾಡು ಕಕ್ಕಡ್‍ಗೆ ಪರಿಚಯಿಸಲು ದಂಪತಿ ತುದಿಗಾಲಿನಲ್ಲಿದ್ದರು ಎಂದು ಸಾಹಿರಾ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಕಳೆದ ರಾತ್ರಿ ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕಾಡಿದೆವು. ಆದರೆ ಇಬ್ಬರು ಮಕ್ಕಳು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ನಿಟ್ಟುಸಿರು ಬಿಟ್ಟೆವು. ಇಬ್ಬರೂ ಕೂಡ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಾಹಿರಾ ಸಂಬಂಧಿಕರು ತಿಳಿಸಿದ್ದಾರೆ. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು
     

    ಶುಕ್ರವಾರ ರಾತ್ರಿ ವಿಮಾನ ದುರಂತ ಸಂಭವಿಸುತ್ತಿದ್ದಂತೆಯೇ ಗಂಭೀರ ಗಾಯಗೊಂಡಿದ್ದ ಸಾಹಿರಾರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗೆ ಮೃತಪಟ್ಟಿದ್ದಾರೆ. ಇತ್ತ ಅಜಮ್ ಕೂಡ ಕೋಯಿಕ್ಕೋಡ್ ಮೆಡಿಕಲ್ ಕಾಲೇಜ್ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಹೋದರ ಮರಿಯಮ್ ನನ್ನು ಮೊದಲು ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಾಹಿರಾ ತಂದೆ ನಿವೃತ್ತ ಶಿಕ್ಷಕರಾಗಿದ್ದು, ಮೊಮ್ಮಗನ ಬರುವಿಕೆಗಾಗಿ ಕಾದು ಕುಳಿತಿದ್ದು, ಇದೀಗ ಮಗಳು, ಮೊಮ್ಮಗನನ್ನು ಕಳೆದುಕೊಂಡು ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ