Tag: ಏಪ್ರಿಲ್ ಫೂಲ್

  • ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ ಕೊಹ್ಲಿ!

    ಮೆಲ್ಬರ್ನ್‌ : ವಿರಾಟ್‌ ಕೊಹ್ಲಿ (Virat Kohli) ಸಿಡ್ನಿ ಸಿಕ್ಸರ್‌ ಪರ ಆಡಲಿದ್ದಾರೆ. ಹೀಗಂತ ಸಿಡ್ನಿ ಸಿಕ್ಸರ್‌ (Sydney Sixers) ತಂಡವೇ ಅಧಿಕೃತವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕೊಹ್ಲಿ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆ ತಲೆಗೆ ಹುಳ ಬಿಟ್ಟಿದೆ.

    ಭಾರತದಲ್ಲಿ ಹೇಗೆ ಇಂಡಿಯನ್‌ ಪೀಮಿಯರ್‌ ಲೀಗ್‌ (IPL) ಇದೆಯೋ ಅದೇ ರೀತಿ ಆಸ್ಟ್ರೇಲಿಯಾದಲ್ಲಿ (Austrila) ಬಿಗ್‌ ಬ್ಯಾಷ್‌ ಲೀಗ್‌ (BBL) ಇದೆ. ಈ ಲೀಗ್‌ನಲ್ಲಿರುವ ಸಿಡ್ನಿ ಸಿಕ್ಸರ್‌, ಮುಂದಿನ ಎರಡು ಆವೃತ್ತಿಯಲ್ಲಿ ವಿರಾಟ್‌ ಕೊಹ್ಲಿ ನಮ್ಮ ತಂಡವನ್ನು ಪ್ರತಿನಿಧಿಸುತ್ತಾರೆ ಎಂದು ಪೋಸ್ಟ್‌ ಮಾಡಿದೆ.

     

    ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನಲ್ಲೇ ಸಿಡ್ನಿ ಸಿಕ್ಸರ್‌ ಏಪ್ರಿಲ್‌ ಫೂಲ್ಸ್‌ ಡೇ (April Fools Day) ಎಂದು ಪೋಸ್ಟ್‌ ಮಾಡಿ ಎದ್ದಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ.

    ಬಿಸಿಸಿಐ (BCCI) ಐಪಿಎಲ್‌ಗೆ ಆದ್ಯತೆ ನೀಡುವ ಮತ್ತು ದೇಶೀಯ ಕ್ರಿಕೆಟ್‌ ಹಿತಾಸಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ನೀತಿಯಿಂದಾಗಿ ಭಾರತೀಯ ಆಟಗಾರರು ಇತರ ಕ್ರಿಕೆಟ್ ಲೀಗ್‌ಗಳಿಗೆ ಆಸಕ್ತಿ ತೋರಿಸುತ್ತಿಲ್ಲ.  ಇದನ್ನೂ ಓದಿ: ಐಪಿಎಲ್‌ನಿಂದ ಬ್ಯಾನ್‌ ಮಾಡಿ – ರಿಯಾನ್‌ ಪರಾಗ್‌ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್‌

    ಇದರ ಜೊತೆ ಇನ್ನೊಂದು ಕಾರಣ ಇದೆ. ಭಾರತದ ಯಾವುದೇ ಕ್ರಿಕೆಟಿಗ ಕೂಡ ವಿದೇಶಿ ಕ್ರಿಕೆಟ್ ಲೀಗ್ ಟೂರ್ನಿಗಳಲ್ಲಿ ಭಾಗವಹಿಸಬೇಕೆಂದರೆ ಆ ಆಟಗಾರ ಬಿಸಿಸಿಐ ಜೊತೆಗಿನ ಎಲ್ಲಾ ರೀತಿಯ ಸಂಬಂಧವನ್ನು ಕಡಿತಗೊಳಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಐಪಿಎಲ್‌ ಸೇರಿದಂತೆ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಬೇಕಾಗುತ್ತದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್‌ ಮಾಡಿದವರಿಗೆ ಚಳಿ ಬಿಡಿಸಿದ ನಟಿ

    ಬಿಸಿಸಿಐ ವಿದೇಶಿ ಟೂರ್ನಿಗೆ ಹೋಗಲೇಬಾರದು ಎಂದು ಯಾವುದೇ ನಿರ್ಬಂಧ ಹೇರಿಲ್ಲ. ಸದ್ಯ ಐಪಿಎಲ್‌ನಷ್ಟು ಪ್ರಚಾರ ಬೇರೆ ಯಾವುದೇ ಕ್ರಿಕೆಟ್‌ ಟೂರ್ನಿಗೆ ಇಲ್ಲ. ಹೀಗಾಗಿ ಭಾರತದ ಆಟಗಾರರು ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ.

     

  • ಮೈತುಂಬಾ ಬಟ್ಟೆ ಹಾಕುವೆ ಎನ್ನುತ್ತಾ ಏಪ್ರಿಲ್ ಫೂಲ್ ಮಾಡಿದ ಉರ್ಫಿ

    ಮೈತುಂಬಾ ಬಟ್ಟೆ ಹಾಕುವೆ ಎನ್ನುತ್ತಾ ಏಪ್ರಿಲ್ ಫೂಲ್ ಮಾಡಿದ ಉರ್ಫಿ

    ಬಿಗ್ ಬಾಸ್ ಹಿಂದಿ ಕಾರ್ಯಕ್ರಮದ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ (Urfi Javed) ನಿನ್ನೆಯೊಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ‘ನನ್ನ ಬಟ್ಟೆ ಕಾರಣದಿಂದಾಗಿ ನಿಮಗೆಲ್ಲ ನೋವಾಗಿದ್ದರೆ ಕ್ಷಮಿಸಿ. ಇನ್ಮುಂದೆ ಆ ರೀತಿಯ ಬಟ್ಟೆಗಳನ್ನು ಹಾಕುವುದಿಲ್ಲ. ನೀವು ಬದಲಾದ ಉರ್ಫಿ ನೋಡುತ್ತೀರಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದರು.

    ಅರೆಬರೆ ಬಟ್ಟೆ (Costume) ಹಾಕುವ ಕಾರಣಕ್ಕಾಗಿ ಈಗಾಗಲೇ ಉರ್ಫಿ ಪೊಲೀಸ್ ಸ್ಟೇಶನ್ ಮೆಟ್ಟಿಲು ಏರಿದ್ದಾರೆ. ಹಲವರು ಈಕೆಯ ಮೇಲೆ ದೂರು ಕೂಡ ನೀಡಿದ್ದಾರೆ. ಏನೇ ಮಾಡಿದರೂ ಉರ್ಫಿ ಮಾತ್ರ ತುಂಡುಡುಗೆ ತೊಡುವುದನ್ನು ಬಿಟ್ಟಿರಲಿಲ್ಲ. ಏಕಾಏಕಿ ಆಕೆ ಈ ಟ್ವೀಟ್ ಮಾಡಲು ಕಾರಣವೇನು ಎನ್ನುವ ಚರ್ಚೆ ನಡೆದಿತ್ತು.

    ಪೊಲೀಸ್ ಇಲಾಖೆಯು ಉರ್ಫಿಗೆ ನೋಟಿಸ್ ನೀಡಿರಬಹುದು. ಅಥವಾ ಬೆದರಿಕೆ ಬಂದಿರಬಹುದು. ಈ ಕಾರಣಕ್ಕಾಗಿ ಮೈ ತುಂಬಾ ಬಟ್ಟೆ ತೊಡುವ ಮಾತುಗಳನ್ನು ಉರ್ಫಿ ಆಡಿರಬಹುದು ಎಂದು ಕೆಲವರು ಕಾಮೆಂಟ್ ಮಾಡಿದರು. ಈಗಲಾದರೂ ಬುದ್ಧಿ ಬಂತಲ್ಲ, ಒಳ್ಳೆಯದಾಗಲಿ ಎಂದು ಹಲವರು ಕಾಲೆಳೆದಿದ್ದರು. ಇದನ್ನೂ ಓದಿ: ಅವಳಿ ಮಕ್ಕಳ ಮುದ್ದಾದ ಫೋಟೋ ಹಂಚಿಕೊಂಡ ಅಮೂಲ್ಯ

    ಆದರೆ, ಇವತ್ತು ಉರ್ಫಿ ಮತ್ತೊಂದು ಶಾಕ್ ನೀಡಿದ್ದಾರೆ. ಮತ್ತೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ‘ನಾನು ನಿಮಗೆ ಏಪ್ರಿಲ್ ಫೂಲ್ (April Fool) ಮಾಡಿದೆ. ಉರ್ಫಿ ಬದಲಾಗಲ್ಲ’ ಎಂದು ಟ್ವೀಟ್ ಮಾಡುವ ಮೂಲಕ ನಿನ್ನೆ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಬರೆದುಕೊಂಡಿದ್ದಾಳೆ.

  • ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು

    ಎಡಿಟ್ ಫೀಚರ್ ತರಲಿದ್ದೇವೆ ಎಂದ ಟ್ವಿಟ್ಟರ್ – ಇದು ಏಪ್ರಿಲ್ ಫೂಲ್ ಅಂದ್ರು ನೆಟ್ಟಿಗರು

    ವಾಷಿಂಗ್ಟನ್: ಮೈಕ್ರೋ ಬ್ಲಾಗಿಂಗ್ ಆ್ಯಪ್ ಟ್ವಿಟ್ಟರ್ ಏಪ್ರಿಲ್ 1ರಂದು ಬಳಕೆದಾರರಿಗೆ ಒಂದು ವಿಶೇಷ ಸಂದೇಶ ನೀಡಿತ್ತು. ಟ್ವಿಟ್ಟರ್ ತನ್ನ ಅಧಿಕೃತ ಖಾತೆಯಲ್ಲಿ ಎಡಿಟ್ ಬಟನ್ ಅನ್ನು ತರಲಿದ್ದೇವೆ ಎಂದು ಬರೆದಿತ್ತು. ಆದರೆ ಮೂರ್ಖರ ದಿನದಂದು ನೀಡಿರುವ ಈ ಸಂದೇಶವನ್ನು ಬಳಕೆದಾರರು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ.

    ಏಪ್ರಿಲ್ 1 ರಂದು ಟ್ವೀಟ್ ಮಾಡಿರುವ ಟ್ವಿಟ್ಟರ್ ಎಡಿಟ್ ಬಟನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿತ್ತು. ಆದರೆ ನೆಟ್ಟಿಗರು ಜಾಣರೆಂಬುದನ್ನು ಸಾಬೀತುಪಡಿಸಿದ್ದಾರೆ. ಈ ವಿಚಾರವಾಗಿ ನೆಟ್ಟಿಗರು ಟ್ವಿಟ್ಟರ್ ಅನ್ನೇ ತಿರುಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗೂಗಲ್ ಪೇ ಹೊಸ ಫೀಚರ್ – ಟ್ಯಾಪ್ ಟು ಪೇ

     

    ಈ ಟ್ವೀಟ್ ಹಾಸ್ಯ ಅಲ್ಲವೇ? ಎಂದು ಪ್ರಶ್ನಿಸಿದ್ದಕ್ಕೆ ಟ್ವಿಟ್ಟರ್, ಈ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮುಂದೆ ಈ ಹೇಳಿಕೆಯನ್ನು ನಾವು ಎಡಿಟ್ ಮಾಡುವ ಸಾಧ್ಯವೂ ಇದೆ ಎಂದು ಪ್ರತಿಕ್ರಿಯಿಸಿದೆ. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

    ಟ್ವಿಟ್ಟರ್‌ನ ಗೊಂದಲಮಯ ಹೇಳಿಕೆಯನ್ನು ಕೆಲವರು ಒಪ್ಪಿಕೊಂಡರೆ ಹಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್‌ನ ಟ್ವೀಟ್ ಪ್ರಕಾರ ಮುಂದೊಂದು ದಿನ ಎಡಿಟ್ ಬಟನ್‌ನ ಫೀಚರ್ ಬಂದಲ್ಲಿ ಬಳಕೆದಾರರಿಗಂತೂ ಉಪಯುಕ್ತವಾಗುವುದು ಸತ್ಯ.

  • ಏಪ್ರಿಲ್ ಫೂಲ್ ಆದ ಮದ್ಯಪ್ರಿಯರು

    ಏಪ್ರಿಲ್ ಫೂಲ್ ಆದ ಮದ್ಯಪ್ರಿಯರು

    – ಮದ್ಯದಂಗಡಿ ಮುಂದೆ ಕ್ಯೂ

    ಗದಗ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್‍ಡೌನ್ ಆಗಿದೆ. ಅಂದಿನಿಂದ ಕುಡಿಯಲು ಮದ್ಯ ಸಿಗದೇ ಅನೇಕರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇದೀಗ ನಗರದ ಕೆಲವು ಮದ್ಯ ಪ್ರಿಯರು ಏಪ್ರಿಲ್ ಫೂಲ್ ಆಗಿದ್ದಾರೆ.

    ಇಂದು ಏಪ್ರಿಲ್ 1 ರಂದು ಎಂಎಸ್‍ಐಎಲ್ ಓಪನ್ ಆಗುತ್ತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಅದು ನಿಜ ಎಂದು ತಿಳಿದ ಮದ್ಯ ಪ್ರಿಯರು ಬೆಳ್ಳಂಬೆಳಗ್ಗೆ ನಗರದ ಮುಳಗುಂದ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ಈಗ ಓಪನ್ ಆಗಬಹುದು, ಆಗ ಓಪನ್ ಆಗಬಹುದು ಎಂದುಕೊಂಡು ಮದ್ಯಕ್ಕಾಗಿ ಕ್ಯೂ ನಿಂತುಕೊಂಡಿದ್ದರು.

    ಸುಳ್ಳು ವದಂತಿಯನ್ನ ನಿಜ ಎಂದು ನಂಬಿದ್ದ ಮದ್ಯ ವ್ಯಸನಿಗಳು ಎರಡು ಸಾಲಿನಲ್ಲಿ ನೂರಾರು ಜನರು ಜಮಾಯಿಸಿದ್ದರು. ಈ ಕ್ಯೂನಲ್ಲಿ ಓರ್ವ ಮಹಿಳೆ ಸಹ ಸರದಿ ಸಾಲಿನಲ್ಲಿ ನಿಂತುಕೊಂಡಿದ್ದಳು.

    ನೂರಾರು ಜನರು ಒಂದೆಕಡೆ ಜಮಾಯಿಸಿದ್ದರಿಂದ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ದೌಡಾಯಿಸಿದ್ದಾರೆ. ಪೊಲೀಸರನ್ನ ಕಂಡು ಕುಡುಕರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬಂದಂತಹ ಸುಳ್ಳು ಸುದ್ದಿಯಿಂದ ನಗರದ ಕೆಲವು ಮದ್ಯ ವ್ಯಸನಿಗಳು ಏಪ್ರಿಲ್ ಫೂಲ್ ಆಗಿದ್ದಾರೆ.

  • ವೆಬ್‍ಸೈಟ್‍ನಲ್ಲಿ ಹಾರ್ಟ್ ಬ್ರೇಕಿಂಗ್ ಮಾಹಿತಿ – ಹವಾಮಾನ ಇಲಾಖೆ ಸ್ಪಷ್ಟನೆ

    ವೆಬ್‍ಸೈಟ್‍ನಲ್ಲಿ ಹಾರ್ಟ್ ಬ್ರೇಕಿಂಗ್ ಮಾಹಿತಿ – ಹವಾಮಾನ ಇಲಾಖೆ ಸ್ಪಷ್ಟನೆ

    ಬೆಂಗಳೂರು: ಹವಾಮಾನ ಇಲಾಖೆಯು ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರಿಗರಿಗೆ ವೆದರ್ ಬಾಂಬ್ ಹಾಕಿತ್ತು. ವೆಬ್‍ಸೈಟ್‍ನಲ್ಲಿ ಸೋಮವಾರ ಗರಿಷ್ಠ ಬಿಸಿಲಿನ ತಾಪಮಾನ 99.9 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆಯಾಗುತ್ತೆ ಎಂದು ದಾಖಲಾಗಿತ್ತು. ಈಗ ಇದರ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿದೆ.

    ಕಣ್ತಪ್ಪಿನಿಂದ ಈ ಎಡವಟ್ಟು ಆಗಿರೋದಾಗಿ ಇಲಾಖೆ ಸ್ಪಷ್ಟನೆ ನೀಡಿದೆ. ವೆಬ್ ಸೈಟ್ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಜನ ಕಾಲ್ ಮೇಲೆ ಕಾಲ್ ಮಾಡಿ ಈ ಸುದ್ದಿ ನಿಜನಾ ಎಂದು ಗಾಬರಿಯಾಗಿ ಪ್ರಶ್ನೆಗಳ ಸುರಿಮಳೆಗೈದಿದ್ದರು. “ಏನ್ರೀ ಏಪ್ರಿಲ್ ಫೂಲ್ ಮಾಡ್ತೀರ ಅಂದಾಗ” ಇದು ಕಣ್ತಪ್ಪಿನಿಂದ ಆಗಿದ್ದು ತಪ್ಪು ಯಾರೂ ಮಾಡಲ್ಲ ಬಿಡಿ ಎಂದು ಉತ್ತರ ನೀಡಿದ್ದಾರೆ.

    ಹಾರ್ಟ್‍ಬ್ರೇಕಿಂಗ್ ಸುದ್ದಿ ಏನು?
    ಶುಕ್ರವಾರ ಬೆಳ್ಳಂಬೆಳಗ್ಗೆ ನಿದ್ದೆಯಿಂದ ಎದ್ದು ಬೆಂಗಳೂರು ಜನ ಟೀ-ಕಾಫಿ ಕುಡಿಯೋ ಹೊತ್ತಿನಲ್ಲಿ ಹವಾಮಾನ ಇಲಾಖೆ ಹಾರ್ಟ್ ಬ್ರೇಕಿಂಗ್ ಸುದ್ದಿಯನ್ನು ವೆಬ್ ಸೈಟ್‍ನಲ್ಲಿ ಅಪ್ಡೇಟ್ ಮಾಡಿತ್ತು.

    ಇದೇ ಬರುವ ಸೋಮವಾರ ಬೆಂಗಳೂರು ಉಷ್ಣಾಂಶ ಶೇ 99.99 ಡಿಗ್ರಿ ಸೆಲ್ಸಿಯಸ್‍ನಷ್ಟು ಇರುತ್ತದೆ ಎಂದು ವೆಬ್‍ಸೈಟ್‍ನಲ್ಲಿ ಹಾಕಿದೆ. ಜನ ಈ ಸುದ್ದಿ ನೋಡಿ ಗಾಬರಿಗೊಂಡಿದ್ದರು. ಅಲ್ಲದೆ ಬೆಂಗಳೂರಿನ ಉಷ್ಣಾಂಶ 35 ರಿಂದ 36 ಡಿಗ್ರಿ ಸೆಲ್ಸಿಯಸ್ ಇದೆ. ಈ ಬಿಸಿಲನ್ನೇ ನಮ್ಮ ಕೈಯಲ್ಲಿ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂತದ್ರಲ್ಲಿ ಇಲಾಖೆಯ ಈ ಸುದ್ದಿ ನೋಡಿ ಶಾಕ್ ಆಗಿದ್ದರು.

    ಕೊನೆಗೆ ದಿನಾಂಕ ನೋಡಿದಾಗ ಏಪ್ರಿಲ್ 1 ಅಂದ್ರೆ ಇದು ಹವಾಮಾನ ಇಲಾಖೆ ಅಡ್ವಾನ್ಸ್ ಆಗಿಯೇ ಏಪ್ರಿಲ್ ಫೂಲ್ ಮಾಡೋಕೆ ಈ ಸುದ್ದಿ ಹಾಕಿದೆ ಎಂದು ಜನ ತಿಳಿದಿದ್ದರು.

  • ಶಿಖರ್ ಧವನ್‍ಗೆ ಯುವರಾಜ್ ಸಿಂಗ್ ಏಪ್ರಿಲ್ ಫೂಲ್ ಮಾಡಿದ್ದನ್ನು ನೋಡಿ

    ಶಿಖರ್ ಧವನ್‍ಗೆ ಯುವರಾಜ್ ಸಿಂಗ್ ಏಪ್ರಿಲ್ ಫೂಲ್ ಮಾಡಿದ್ದನ್ನು ನೋಡಿ

    ನವದೆಹಲಿ: ಡ್ರೆಸಿಂಗ್ ರೂಮ್‍ನಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಒಬ್ಬರಿಗೊಬ್ಬರು ಮೋಜು ಮಸ್ತಿ ಮಾಡುತ್ತಿರುತ್ತಾರೆ. ನಿನ್ನೆ ಏಪ್ರಿಲ್ 1, ಹೀಗಾಗಿ ಯುವರಾಜ್ ಸಿಂಗ್ ತನ್ನ ಸನ್ ರೈಸರ್ಸ್ ತಂಡದ ಸಹ ಆಟಗಾರ ಶಿಖರ್ ಧವನ್‍ಗೆ ಏಪ್ರಿಲ್ ಫೂಲ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಸನ್ ರೈಸರ್ಸ್ ತಂಡದ ಆಟಗಾರರು ಹೋಟೆಲ್‍ನಲ್ಲಿರುವಾಗ, ಶಿಖರ್ ಧವನ್ ಸ್ವಿಮಿಂಗ್ ಮಾಡುತ್ತಿದ್ದರು. ಈ ವೇಳೆ ಯುವಿ, ನಿಮ್ಮ ಪತ್ನಿ ಆಯೇಶಾ ಮುಖರ್ಜಿ ಕರೆ ಮಾಡಿದ್ರು. ಏನೋ ಎಮರ್ಜೆನ್ಸಿ ಅಂತೆ ಎಂದು ಧವನ್‍ಗೆ ಹೇಳಿದ್ದಾರೆ. ತಕ್ಷಣವೇ ಸ್ವಿಮಿಂಗ್ ಪೂಲ್‍ನಿಂದ ಹೊರಬಂದ ಧವನ್ ಪತ್ನಿಗೆ ಕರೆ ಮಾಡಲು ಬ್ಯಾಗ್‍ನಲ್ಲಿ ಮೊಬೈಲ್‍ಗಾಗಿ ಹುಡಿಕಿದ್ದಾರೆ. ಹಿಂದಿನಿಂದ ಬಂದ ಯುವಿ ಏಪ್ರಿಲ್ ಪೂಲ್ ಎಂದು ಹೇಳಿ ನಕ್ಕಿದ್ದಾರೆ.

    ಈ ವಿಡಿಯೋವನ್ನು ಯುವಿ ಟ್ವಿಟರ್ ನಲ್ಲಿ ಅಪಲೋಡ್ ಮಾಡಿದ್ದು, ಏಪ್ರಿಲ್ 1 ರಂದು ಫೂಲ್ ಮಾಡದಿದ್ದರೆ ಹೇಗೆ? ಇದು ತುಂಬಾ ತಮಾಷೆಯಾಗಿತ್ತು. ಎಲ್ಲರಿಗೂ ಏಪ್ರಿಲ್ ಫೂಲ್ಸ್ ಡೇ ಶುಭಾಶಯ ಎಂದು ಬರೆದುಕೊಂಡಿದ್ದಾರೆ.

    ಈ ಬಾರಿ ಯುವರಾಜ್ ಸಿಂಗ್ ಮತ್ತು ಶಿಖರ್ ಧವನ್ ಇಬ್ಬರೂ ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಆಡಲಿದ್ದಾರೆ. ಏಪ್ರಿಲ್ 5 ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಗೊಳ್ಳಲಿದೆ.

    https://twitter.com/YUVSTRONG12/status/848121660595220481

    https://www.facebook.com/yuvirajsinghofficial/videos/10155120939354254/