Tag: ಏತ ನೀರಾವರಿ ಯೋಜನೆ

  • ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿಸಿಎಂ

    ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿಸಿಎಂ

    – ನೀರಿನ ಮಹತ್ವ ಗೊತ್ತಾಗಬೇಕಾದ್ರೆ ಕೋಲಾರ ಚಿಕ್ಕಬಳ್ಳಾಪುರ ಭಾಗಕ್ಕೆ ಹೋಗಿ ನೋಡಬೇಕು ಎಂದ ಡಿಸಿಎಂ

    ರಾಮನಗರ: ಕನಕಪುರ ತಾಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತನೀರಾವರಿ ಯೋಜನೆಗಿಂದು (Etah Water Irrigation Project) ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರಿಂದು ಪರೀಕ್ಷಾರ್ಥ ಚಾಲನೆ ನೀಡಿದ್ದಾರೆ.

    ಬಳಿಕ ಮಾತನಾಡಿದ ಅವರು, ಮಲೆನಾಡು ಸೇರಿದಂತೆ ಇತರೆ ಕಡೆ ಉತ್ತಮ ಮಳೆಯಾಗುತ್ತಿದೆ. ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ ಆದ ಕಾರಣಕ್ಕೆ ಅರ್ಕಾವತಿ ಬಲದಂಡೆ ನಾಲೆ ಏತ ನೀರಾವರಿ ಯೋಜನೆಯನ್ನು ತುರ್ತಾಗಿ ಪುನಶ್ಚೇತನ ಮಾಡಿ ಚಾಲನೆ ನೀಡಿದ್ದೇವೆ. ಇದು ನನ್ನ ಬಹುದಿನದ ಕನಸು. ಇದರಿಂದ ಸಾವಿರ ಎಕರೆಗೂ ಹೆಚ್ಚು ಭೂಮಿಗೆ ನೀರಾವರಿ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನ – ಅಮಿತ್ ಶಾ ಆರೋಪ

    ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಸಂಪುಟದಲ್ಲಿ ಸಚಿವನಾಗಿದ್ದಾಗ ಒತ್ತಾಯ ಮಾಡಿ ಅವರನ್ನು ಕರೆದುಕೊಂಡು ಬಂದು ಅರ್ಕಾವತಿ ಬಲದಂಡೆ ನಾಲೆಯ ಏತ ನೀರಾವರಿ ಕಾಮಗಾರಿಯನ್ನು ಉದ್ಘಾಟಿಸಲಾಗಿತ್ತು. ಈ ಭಾಗದ ರೈತರು ಈ ಯೋಜನೆ ಸಾಕಾರಗೊಳ್ಳುವ ವೇಳೆಯಲ್ಲಿ ಕೇವಲ 3-4 ಸಾವಿರಕ್ಕೆ ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರ ನನಗೆ ಈಗಲೂ ಬೇಸರ ತರಿಸುತ್ತದೆ. ಹಣಕ್ಕೆ ಕಷ್ಟವಿದ್ದ ಕಾಲದಲ್ಲೂ ಎಸ್.ಎಂ ಕೃಷ್ಣ ಅವರ ಕೈಯಿಂದ ಸುಮಾರು 300 ಜನ ರೈತರಿಗೆ ಎಕರೆ ಇಂತಿಷ್ಟು ಎಂದು ಹೆಚ್ಚುವರಿಯಾಗಿ 7 ಕೋಟಿ ರೂ. ಪರಿಹಾರ ಕೊಡಿಸಲಾಯಿತು ಎಂದು ವಿವರಿಸಿದ್ದಾರೆ.

    ದೇವರ ಅನುಗ್ರಹದಿಂದ ನಾನೇ ಇಂದು ನೀರಾವರಿ ಸಚಿವನಾಗಿದ್ದೇನೆ. ಇಂತಹ ನೂರು ಯೋಜನೆಗಳನ್ನು ಮಾಡುವ ಶಕ್ತಿ ನೀಡಿದ್ದಾನೆ. ಶಿಂಷಾ ನೀರನ್ನು ಸಾತನೂರು ಹಾಗೂ ಕೆಂಪಮ್ಮನ ದೊಡ್ಡಿವರೆಗೂ ತೆಗೆದುಕೊಂಡು ಹೋಗಲಾಗುತ್ತಿದೆ. ದೊಡ್ಡ ಆಲಹಳ್ಳಿ ಕೆರೆಗೂ ನೀರನ್ನು ತುಂಬಿಸಲಾಗುತ್ತಿದೆ. ಕೈಲಾಂಚ, ಮಾಗಡಿ, ಮಾತೂರು ಕೆರೆ, ಚನ್ನಪಟ್ಟಣ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲಾಯಿತು. ಆದರೂ ನಮ್ಮ ಜನಕ್ಕೆ ಕೆಲಸದ ಮಹತ್ವ ಗೊತ್ತಾಗಲಿಲ್ಲ. ಈ ಭಾಗದ ಜನಕ್ಕೆ ನೀರಿನ ಮಹತ್ವ ಗೊತ್ತಾಗಬೇಕು ಎಂದರೆ, ಕೋಲಾರ ಚಿಕ್ಕಬಳ್ಳಾಪುರ ಭಾಗಕ್ಕೆ ಹೋಗಿ ನೋಡಬೇಕು ಎಂದು ಹೇಳಿದ್ದಾರೆ.

    ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ರೈತರು ಬದುಕುತ್ತಿದ್ದಾರೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆ.ಸಿ ವ್ಯಾಲಿ ಯೋಜನೆಯನ್ನು ಕಾರ್ಯಗತಗೊಳಿಸಿ, ಕೊಳಚೆ ನೀರನ್ನು ಶುದ್ಧೀಕರಣ ಮಾಡಿ ಕೋಲಾರದ ಕೆರೆಗಳನ್ನು ತುಂಬಿಸಿದ್ದೇವೆ. ಈಗ ಎತ್ತಿನಹೊಳೆಯಿಂದ ಕುಡಿಯುವ ನೀರನ್ನು ಕೊಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ವಿನೇಶ್‌ ಅನರ್ಹ ಕುರಿತು ಟೀಕೆ – ದೇವರೇ ನಿಮಗೆ ಶಿಕ್ಷೆ ಕೊಟ್ಟಿದ್ದಾನೆ ಎಂದ ಬ್ರಿಜ್‌ ಭೂಷಣ್‌

  • ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನ ತುಂಬಿಸಿ – ಸಚಿವ ಬೋಸರಾಜು ಸೂಚನೆ

    ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನ ತುಂಬಿಸಿ – ಸಚಿವ ಬೋಸರಾಜು ಸೂಚನೆ

    ಬೆಂಗಳೂರು: ರಾಜ್ಯಾದ್ಯಂತ ಮಳೆಯ (Karnataka Rains) ಪ್ರಮಾಣ ಹೆಚ್ಚಾಗಿದ್ದು ಅಣೆಕಟ್ಟುಗಳು ತುಂಬಿವೆ. ನಮ್ಮ ಇಲಾಖೆಯ ವ್ಯಾಪ್ತಿಯ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು (NS Bosaraju) ಅಧಿಕಾರಿಗಳಿಗೆ ಸೂಚನೆ ನೀಡಿದರು.

    ವಿಕಾಸಸೌಧದಲ್ಲಿಂದು ಪಿಎಂಕೆಎಸ್‌ವೈ ಕಾಮಗಾರಿಗಳ (PMKSY works) ಪ್ರಗತಿ ಪರಿಶೀಲನೆ ಹಾಗೂ ಕೇಂದ್ರ ಅನುದಾನದ ಕುರಿತು ಚರ್ಚಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕರು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯ ನಡೆಸಲಾಯಿತು.

    ಪಿಎಂಕೆಎಸ್‌ವೈ ಯೋಜನೆ ಅಡಿಯಲ್ಲಿ ಈಗಾಗಲೇ ಮಂಜೂರಾಗಿರುವ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಸಚಿವರು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಈಗಾಗಲೇ ಸಲ್ಲಿಸಲಾಗಿರುವ ಪ್ರಸ್ತಾವನೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಜಲ ಆಯೋಗದ ನಿರ್ದೇಶಕರು, ಅದಕ್ಕೆ ಬೇಕಾದಂತಹ ಅಗತ್ಯ ಕ್ರಿಯಾಯೋಜನೆ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿ:
    ರಾಜ್ಯಾದ್ಯಾಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹತೇಕ ಅಣೆಕಟ್ಟುಗಳು ತುಂಬಿವೆ. ಆದರೂ ಕೆಲವು ಕೆರೆಗಳಲ್ಲಿ ಹೆಚ್ಚಿನ ನೀರಿನ ಸಂಗ್ರಹವಾಗದೇ ಇರುವ ಬಗ್ಗೆ ಅಧಿಕಾರಿಗಳು ವರದಿಯನ್ನು ನೀಡಿದ್ದಾರೆ. ಅಣೆಕಟ್ಟುಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಕೆರೆ ತುಂಬಿಸುವ ಕಾರ್ಯವನ್ನ ಮರುಚಾಲನೆಗೊಳಿಸಬೇಕು. ಎಲ್ಲಾ ಕೆರೆಗಳು ತುಂಬುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನ ಕೈಗೊಳ್ಳುವುದಲ್ಲದೇ, ಅವುಗಳ ಸಮರ್ಪಕ ನಿರ್ವಹಣೆಗೂ ಆದ್ಯತೆ ನೀಡುವಂತೆ ಸೂಚನೆ ನೀಡಿದರು.

    ನಿಷ್ಕ್ರಿಯಗೊಂಡಿರುವ ಏತ ನೀರಾವರಿ ಯೋಜನೆ ವರದಿ ನೀಡಿ:
    ಆಯಾ ಕಾಲಕ್ಕೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಹಲವಾರು ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡು ಅವುಗಳ ನಿರ್ಮಾಣ ಮಾಡಲಾಗಿದೆ. ಅವುಗಳ ನಿರ್ವಹಣೆ ಅವಧಿ ಮುಗಿದ ನಂತರ ಹಾಗೂ ಕಾಲಕ್ರಮೇಣ ಹಲವು ನಿಷ್ಕ್ರಿಯಗೊಂಡಿವೆ. ಆಯಾ ವಲಯವಾರು ಕೈಗೊಂಡಿರುವ ಏತ ನೀರಾವರಿ ಯೋಜನೆಗಳ ಬಗ್ಗೆ, ಈಗ ಚಾಲ್ತಿಯಲ್ಲಿರುವ, ಸರಿಯಾದ ನಿರ್ವಹಣೆ ಆಗುತ್ತಿರುವ ಹಾಗೂ ನಿಷ್ಕ್ರಿಯಗೊಂಡಿರುವ ಯೋಜನೆಗಳ ಬಗ್ಗೆ ವರದಿ ನೀಡಬೇಕು. ಇವುಗಳನ್ನು ಪುನರುಜ್ಜೀವನಗೊಳಿಸಿದರೇ ಆಗುವ ಅನುಕೂಲಗಳು ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆಯು ಮಾಹಿತಿಯನ್ನು ಅದರಲ್ಲಿ ಅಳವಡಿಸುವಂತೆ ಸೂಚನೆ ನೀಡಿದರು.

    ವಿಭಾಗವಾರು ಹಾಗೂ ಉಪವಿಭಾಗವಾರು ಕಚೇರಿಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಜಾಗದ ಕೊರತೆಯಿದ್ದಲ್ಲಿ ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರುವಂತೆ ಸೂಚನೆ ನೀಡಿದರು. ತೆರೆದ ಬಾವಿಗಳು ಹಾಗೂ ಹೂಳು ಎತ್ತುವ ಹೊಸ ಯೋಜನೆಗಳ ಪ್ರಸ್ತಾವನೆ ಸಲ್ಲಿಸುವುದನ್ನೂ ನಿಲ್ಲಿಸುವಂತೆ ಸೂಚಿಸಿದರು.

    ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ರಾಘವನ್‌, ಕೇಂದ್ರ ಜಲ ಆಯೋಗದ ನಿರ್ದೇಶಕ ಹರ್ಷ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ಸ್‌ ಉಪಸ್ಥಿತರಿದ್ದರು.

  • 24 ಗ್ರಾಮಗಳ ರೈತರ ಜಮೀನಿಗೆ ನೀರುಣಿಸುವ ಏತನೀರಾವರಿ ಯೋಜನೆ – ಸಿದ್ದರಾಮಯ್ಯರಿಂದ ಲೋಕಾರ್ಪಣೆ

    24 ಗ್ರಾಮಗಳ ರೈತರ ಜಮೀನಿಗೆ ನೀರುಣಿಸುವ ಏತನೀರಾವರಿ ಯೋಜನೆ – ಸಿದ್ದರಾಮಯ್ಯರಿಂದ ಲೋಕಾರ್ಪಣೆ

    – 2018ರಲ್ಲೇ ಸಿಎಂ ಆಗಿ ಶಂಕುಸ್ಥಾಪನೆ ನೆರವೇರಿಸಿದ್ದ ಸಿದ್ದರಾಮಯ್ಯ
    – 2023ರ ಅಂತ್ಯದಲ್ಲಿ ಯೋಜನೆಗೆ ಚಾಲನೆ

    ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿ ಬಳಿ ತುಂಗಭದ್ರಾನದಿ ಮೂಲಕ 24 ಗ್ರಾಮಗಳ ಸುಮಾರು 40 ಸಾವಿರ ಎಕರೆ ಜಮೀನಿಗೆ ನೀರುಣಿಸುವ ತಿಮ್ಮಾಪುರ ಏತನೀರಾವರಿ ಯೋಜನೆಯನ್ನು (Lift Irrigation Project) ಸಿಂಧನೂರಿನಲ್ಲಿ ಶನಿವಾರ (ಇಂದು) ಸಿಎಂ ಸಿದ್ದರಾಮಯ್ಯ (Siddaramaiah) ಉದ್ಘಾಟಿಸಿದರು.

    ಜಿಲ್ಲೆಯ ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದ ಜಮೀನುಗಳ ರೈತರು (Farmers) ನದಿ ಹತ್ತಿರದಲ್ಲಿದ್ದರೂ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ 2018 ಫೆಬ್ರವರಿ 18ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. 2019 ರಲ್ಲಿ ಕಾಮಗಾರಿಯನ್ನ ಗುತ್ತಿಗೆ ನೀಡಲಾಗಿತ್ತು. ತುಂಗಭದ್ರಾ ನದಿಯಿಂದ 160 ಎಚ್.ಪಿ ಸಾಮರ್ಥ್ಯದ 4 ಮೋಟರ್‌ಗಳನ್ನ ಅಳವಡಿಸಿ ನೀರೆತ್ತುವ ಯೋಜನೆಯನ್ನ 90 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಇದನ್ನೂ ಓದಿ: ನಂದಗೊಂಡನಹಳ್ಳಿಯ 12 ಎಕರೆಯಲ್ಲಿ ಬೆಳೆದಿದ್ದ ಮರಗಳ ನಾಶ – ಐವರು ಅರಣ್ಯಾಧಿಕಾರಿಗಳ ಅಮಾನತು

    ನದಿಯಿಂದ 17.10 ಕಿಮೀ ಅಂತರದಲ್ಲಿರುವ ತುರಕಟ್ಟಿ ಗ್ರಾಮದ ಹತ್ತಿರದ ಆರ್.ಎನ್ ನಗರದ ಬಳಿಯ ತುಂಗಭದ್ರಾ ಎಡದಂಡೆ ನಾಲೆಯ ವಿತರಣಾ ಕಾಲುವೆ ನೀರು ಹಾಯಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ನಂತರ ಕೆಳಭಾಗದ ಕಾಲುವೆ ಮತ್ತು ಅಕ್ಕಪಕ್ಕದ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಈ ಯೋಜನೆಯಿಂದ ಕಾಲುವೆಯ ಕೆಳಭಾಗದ 40 ಸಾವಿರ ಎಕರೆ ಪ್ರದೇಶಕ್ಕೆ ಅನುಕೂಲವಾಗಲಿದೆ. ಇದನ್ನೂ ಓದಿ: ಹಣ ಡಬಲ್ ಮಾಡೋದಾಗಿ ಸತೀಶ್ ಜಾರಕಿಹೊಳಿ ಆಪ್ತನಿಗೆ 25 ಲಕ್ಷ ರೂ. ವಂಚಿಸಿದ್ದ ಗ್ಯಾಂಗ್ ಅರೆಸ್ಟ್

    ತುಂಗಭದ್ರಾ ಎಡದಂಡೆ ಉಪಕಾಲುವೆಯ ನೀರು ಸಮರ್ಪಕವಾಗಿ ಜಮೀನುಗಳಿಗೆ ಹರಿಯದ ಕಾರಣ ತೊಂದರೆ ಅನುಭವಿಸುತ್ತಿದ್ದ ತಾಲೂಕಿನ 24ಕ್ಕೂ ಹೆಚ್ಚು ಗ್ರಾಮಗಳ ರೈತರ ಎರಡು ದಶಕಗಳ ಕನಸು ಈಗ ನನಸಾಗುತ್ತಿದೆ. ವಾರ್ಷಿಕ ಮಳೆ ಪ್ರಮಾಣ ಕುಸಿತ, ತುಂಗಭದ್ರಾ ಅಣೆಕಟ್ಟೆಯಿಂದ ನೀರಿನ ಅಲಭ್ಯತೆಯಿಂದಾಗಿ ಈ ಭಾಗದ ರೈತರ ಜಮೀನುಗಳಿಗೆ ನೀರಿನ ಕೊರತೆಯಾಗಿತ್ತು. ಇದರಿಂದ ಪ್ರತಿವರ್ಷ ರೈತರು ಬೆಳೆನಷ್ಟ ಅನುಭವಿಸುತ್ತಿದ್ದರು. ತುಂಗಭದ್ರಾ ನದಿ ಪಕ್ಕದಲ್ಲಿದ್ದರೂ ಭತ್ತ ಸೇರಿ ತೋಟಗಾರಿಕೆ ಬೆಳೆ ಬೆಳೆಯಲು ಆಗದೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದ ರೈತರು ಸರ್ಕಾರಕ್ಕೆ ಏತ ನೀರಾವರಿ ಯೋಜನೆಗೆ ಬೇಡಿಕೆಯಿಟ್ಟಿದ್ದರು. ಅಂದಿನ ಶಾಸಕ ಹಂಪನಗೌಡ ಬಾದರ್ಲಿ ಈ ಯೋಜನೆ ಜಾರಿಗೊಳಿಸಲು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ಈ ಹಿಂದೆ 2018 ರಲ್ಲಿ ಸಿಎಂ ಆಗಿದ್ದಾಗ ಈ ಯೋಜನೆಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯ ಅವರೇ ಲೋಕಾರ್ಪಣೆ ಮಾಡುತ್ತಿರುವುದು ವಿಶೇಷವಾಗಿದೆ.

  • ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರಂಜಿಯಂತೆ ಚಿಮ್ಮುತ್ತಿರೋ ನೀರು

    ರಾಷ್ಟ್ರೀಯ ಹೆದ್ದಾರಿಯಲ್ಲೇ ಕಾರಂಜಿಯಂತೆ ಚಿಮ್ಮುತ್ತಿರೋ ನೀರು

    ದಾವಣಗೆರೆ: ಹರಿಹರ-ದಾವಣಗೆರೆ ಮಾರ್ಗ ಮಧ್ಯೆ 22 ಕೆರೆ ಏತ ನೀರಾವರಿ ಯೋಜನೆ ಪೈಪ್‍ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ವ್ಯರ್ಥವಾಗುತ್ತಿದೆ.

    ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿ ಪೈಪ್‍ಲೈನ್ ಒಡೆದಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗಲೇ ಪೈಪ್‍ಲೈನ್ ಒಡೆದು ಕಾರಂಜಿಯಂತೆ ನೀರು ಚಿಮ್ಮುತ್ತಿದೆ.

    ಏತ ನೀರಾವರಿ ಯೋಜನೆ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಾಗಿದೆ. ಇದೇ ಜೂನ್ 22 ರಂದು ಈ ಯೋಜನೆ ಆರಂಭವಾಗಿತ್ತು. ಆದರೆ ನಾಲ್ಕು ದಿನಗಳಲ್ಲಿ ಪೈಪ್ ಲೈನ್ ಹಾಳಾಗಿದೆ. ಈ ಮೂಲಕ ಹತ್ತು ವರ್ಷದ ಯೋಜನೆಗೆ ವಿಘ್ನಗಳು ತಪ್ಪದಂತಾಗಿದೆ.

    ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಜಗಳೂರು ತಾಲೂಕಿನ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಆ ರಸ್ತೆಯಲ್ಲಿ ಹೋಗುತ್ತಿರುವ ಸವಾರರು ನೀರು ಚಿಮ್ಮುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ರಸ್ತೆಯ ಪಕ್ಕದಲ್ಲಿಯೇ ನೀರು ಕಾರಂಜಿಯಂತೆ ಚಿಮ್ಮುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

  • ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ – ಸಿಎಂ

    ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ – ಸಿಎಂ

    – ಎಂಟಿಬಿಯಂತಹ ಶಾಸಕರು ಆಯ್ಕೆ ಆಗಬೇಕು
    – ಯಾವುದೇ ಕೆಲಸ ಮಾಡಿಕೊಡಲು ಸಿದ್ಧ

    ಬೆಂಗಳೂರು: ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಭರವಸೆ ನೀಡಿದ್ದಾರೆ.

    ಹೊಸಕೋಟೆಯಲ್ಲಿ ಏತ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು. ಕೇವಲ ಎಂಟಿಬಿ ಕ್ಷೇತ್ರ ಮಾತ್ರವಲ್ಲ ಆದ್ಯತೆ ಮೇರೆಗೆ ಎಲ್ಲ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಲಾಗುವುದು. ಎಂಟಿಬಿಯವರಿಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಕೊಟ್ಟಿದ್ದರೆ ಮೈತ್ರಿ ಸರ್ಕಾರದಲ್ಲಿ ಅವರು ರಾಜೀನಾಮೆ ನೀಡುವ ಪ್ರಸಂಗವೇ ಬರುತ್ತಿರಲಿಲ್ಲ. ಎಂಟಿಬಿ ಯಾವುದೇ ಪಕ್ಷದಿಂದ ನಿಲ್ಲಲಿ ಅಥವಾ ಪಕ್ಷೇತರ ಅಭ್ಯರ್ಥಿಯಾದರೂ ಪರವಾಗಿಲ್ಲ. ಅವರಂತಹ ಶಾಸಕರು ಆಯ್ಕೆ ಆಗಬೇಕು ಎಂದು ಜನರಲ್ಲಿ ಮನವಿ ಮಾಡಿದರು.

    ಇಂತಹ ಪ್ರಮಾಣಿಕ ವ್ಯಕ್ತಿ ಶಾಸಕನಾಗಬೇಕು. ಯಡಿಯೂರಪ್ಪ ಮಾತನಾಡಿದರೆ ಹಿಂದೆ ಸರಿಯುವ ವ್ಯಕ್ತಿ ಅಲ್ಲ. ಎಂಟಿಬಿ ಅವರೇ ಇನ್ನು ಹತ್ತು ಕೆಲಸಗಳನ್ನು ಕೇಳಿ ಎಲ್ಲ ಕೆಲಸಗಳನ್ನು ಮಾಡಿಕೊಡುವೆ. ಇದೇ ವೇಳೆ ಮತ್ತೇನು ಬೇಕಣ್ಣ ಎಂದು ಸಿಎಂ ಸಭಿಕರನ್ನು ಪ್ರಶ್ನಿಸಿದರು. ಸಿಎಂ ಮಾತು ಕೇಳಿ ಕೇಕೆ ಹಾಕಿ ಸಭಿಕರು ಸಂತಸಪಟ್ಟರು. ಶಿಕಾರಿಪುರದಂತೆ ಹೊಸಕೋಟೆ ಕ್ಷೇತ್ರ ಮಾದರಿಯಾಗಬೇಕು. ಇದಕ್ಕೆ ನಾನು ಯಾವುದೇ ಕೆಲಸ ಮಾಡಿಕೊಡಲು ಸಿದ್ಧ ಎಂದು ಭರವಸೆ ನೀಡಿದರು.

    ಹೊಸಕೋಟೆ ನಗರಕ್ಕೆ ಮೆಟ್ರೋ ವಿಸ್ತರಣೆ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮೆಟ್ರೋ ಯೋಜನೆ ವಿಸ್ತರಣೆಗೆ ಅನುಮತಿ ಕೊಡಿಸುತ್ತೇನೆ. ಪುನಃ ಹೊಸಕೋಟೆಗೆ ಬಂದು ಮೆಟ್ರೋ ಯೋಜನೆ ವಿಸ್ತರಣೆಗೆ ಶಂಕುಸ್ಥಾಪನೆ ಮಾಡುತ್ತೇನೆ. ಹೊಸಕೋಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾತಿಗೆ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜೀನಾಮೆ ನೀಡಿದರೂ ಹೊಸಕೋಟೆ ಅಭಿವೃದ್ಧಿ ಬಗ್ಗೆ ಎಂಟಿಬಿ ನಾಗರಾಜ್ ಗೆ ವಿಶೇಷ ಪ್ರೇಮ ಇದೆ. ನಾಗರಾಜ್ ರವರಿಗೆ ಶಾಸಕ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ ಅಂತಹವರು. ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಎಂಟಿಬಿ ಶ್ರಮಿಸಿದ್ದಾರೆ. ಬಿಎಸ್‌ವೈ ಮೂರೂವರೆ ವರ್ಷ ಆಡಳಿತ ಮಾಡುತ್ತಾರೆ. ನಮ್ಮದು ಅಲ್ಲಾಡಿಸುವ ಸರ್ಕಾರವಲ್ಲ. ನಾವು ಕನಕಪುರ ಬಂಡೆ ಅಲ್ಲ, ನಾವು ಅಲ್ಲಾಡಲ್ಲ, ಮೂರುವರೆ ವರ್ಷ ಪೂರ್ಣಗೊಳಿಸ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹೊಸಕೋಟೆಯಲ್ಲಿ ಸಿಎಂ ಯಡಿಯೂರಪ್ಪ ಅವರು 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ 800 ಕೆ.ಜಿ. ಬೃಹತ್ ಸೇಬಿನ ಹಾರವನ್ನು ಕ್ರೇನ್ ಮುಖಾಂತರ ಸಿಎಂ ಯಡಿಯೂರಪ್ಪನವರಿಗೆ ಹಾಕಲಾಯಿತು.

    ಸಿಎಂ ಕಾರ್ಯಕ್ರಮಕ್ಕೆ ಪ್ರತಿಭಟನೆ ಬಿಸಿ ತಟ್ಟಿತ್ತು. ಹೊಸಕೋಟೆಗೆ ಕಾವೇರಿ ನೀರು, ಮೆಟ್ರೋ ಮಂಜೂರು ಮಾಡುವಂತೆ ಸ್ಥಳೀಯ ನಿವಾಸಿಗಳಿಂದ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.