Tag: ಏಕ್ ಲವ್ ಯಾ

  • “ಹೆಣ್ಣು ಮಕ್ಳು ಬಾರ್‌ಗೆ ಹೋಗ್ಬಾರ್ದಾ”: ರಚಿತಾ ರಾಮ್

    “ಹೆಣ್ಣು ಮಕ್ಳು ಬಾರ್‌ಗೆ ಹೋಗ್ಬಾರ್ದಾ”: ರಚಿತಾ ರಾಮ್

    – ಸಿಗರೇಟ್‍ನಲ್ಲಿಯೂ ಕಿಕ್ ಇದೆ

    ಬೆಂಗಳೂರು: ಡಿಂಪಲ್ ಬೆಡಗಿ ರಚಿತಾ ರಾಮ್ ‘ಏಕ್ ಲವ್ ಯಾ’ ಚಿತ್ರದಲ್ಲಿ ಸಿಗರೇಟ್ ಸೇದುವ ಮೂಲಕ ಹಾಗೂ ಲಿಪ್ ಕಿಸ್ ಮಾಡುವ ಮೂಲಕ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಹೆಣ್ಣು ಮಕ್ಕಳು ಬಾರ್‌ಗೆ ಹೋಗಬಾರದಾ ಎಂದು ಹೇಳಿದ್ದಾರೆ.

    ಪ್ರೇಮಿಗಳ ದಿನದಂದು ರಚಿತಾ ಅಭಿನಯದ ‘ಏಕ್ ಲವ್ ಯಾ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್ ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ರಚಿತಾ ಅವರು ನಟಿಸಿದ ಬೋಲ್ಡ್ ದೃಶ್ಯಗಳು ವೈರಲ್ ಆಗಿದೆ. ಇದನ್ನೂ ಓದಿ: ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

    ಟೀಸರ್ ಬಿಡುಗಡೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಚಿತಾ, ಈ ಚಿತ್ರದಲ್ಲಿ ನನಗೆ ಎರಡು ಮೇಜರ್ ಹಾಡಿದೆ. ಒಂದು ಎಣ್ಣೆ ಹಾಡು ಇದೆ. ಗಂಡು ಮಕ್ಕಳಿಗೆ ಮಾತ್ರ ಬ್ರೇಕಪ್ ಇರಲ್ಲ, ಹೆಣ್ಣು ಮಕ್ಕಳಿಗೂ ಬ್ರೇಕಪ್ ಆಗುತ್ತೆ. ಗಂಡು ಮಕ್ಕಳು ಮಾತ್ರ ಬಾರ್‍ಗೆ ಹೋಗಬೇಕಾ? ಹೆಣ್ಣು ಮಕ್ಕಳು ಬಾರ್‌ಗೆ ಹೋಗಬಾರದಾ? ಹೆಣ್ಣು ಮಕ್ಕಳು ಬಾರ್‍ಗೆ ಹೋಗಬಾರದು ಎಂದು ಬೋರ್ಡ್ ಹಾಕಿದ್ದಾರಾ? ಎಂಬ ಹಾಡಿಗೆ ನಾನು ಡ್ಯಾನ್ಸ್ ಮಾಡಿದ್ದೇನೆ ಎಂದರು.

    ಈ ಚಿತ್ರದಲ್ಲಿ ನಾನು ಮಾಡದಿರುವ ಪಾತ್ರದಲ್ಲಿ ನಟಿಸಿದ್ದೇನೆ. ನಾನು ಇದುವರೆಗೂ ಯಾವುದೇ ಚಿತ್ರದಲ್ಲಿ ಸಿಗರೇಟ್ ಸೇದಿಲ್ಲ. ಈ ಚಿತ್ರದ ಸೀನ್‍ವೊಂದರಲ್ಲಿ ಸಿಗರೇಟ್ ಸೇದಬೇಕು ಎಂದಾಗ ಜನರು ನೋಡಿದ ತಕ್ಷಣ ‘ಇವಳು ದಿನಾ ಸಿಗರೇಟ್ ಸೇದುತ್ತಾಳಾ’ ಎಂದು ಎನಿಸಬೇಕು. ಏಕೆಂದರೆ ಸೀನ್ ನೋಡಿದ ತಕ್ಷಣ ಜನರಿಗೆ ಇಷ್ಟವಾಗಬೇಕು. ಏನೇ ಮಾಡೋಕ್ಕೆ ಬಂದರೆ ಅದನ್ನು ಅಚ್ಚುಕಟ್ಟಾಗಿ ಕಲಿತು ಮಾಡಬೇಕು ಎಂಬುದು ನನ್ನ ಆಸೆ ಎಂದು ರಚಿತಾ ಸಿಗರೇಟ್ ದೃಶ್ಯದ ಬಗ್ಗೆ ಮಾತನಾಡಿದರು.

    ಈ ಚಿತ್ರದಲ್ಲಿ ನಾನು ಎರಡು ಸಿಗರೇಟ್ ಪ್ಯಾಕೇಟ್ ವೇಸ್ಟ್ ಮಾಡಿದ್ದೇನೆ. ನಾನು ಮೊದಲ ಬಾರಿಗೆ ಸಿಗರೇಟ್ ಸೇದಿದಾಗ 5 ನಿಮಿಷದವರೆಗೂ ಕೆಮ್ಮಿದ್ದೆನೆ. ಆಗ ನನಗೆ ಸಿಗರೇಟ್‍ನಲ್ಲಿಯೂ ಕಿಕ್ ಇದೆ ಎಂಬುದು ತಿಳಿಯಿತು. ಚಿತ್ರದಲ್ಲಿ ಸಿಗರೇಟ್ ಸೇದಬೇಕು ಎಂದಾಗ ಚಿತ್ರತಂಡ ಅದನ್ನು ಹೇಗೆ ಹಿಡಿದುಕೊಳ್ಳಬೇಕು. ಹೇಗೆ ಸೇದಬೇಕು ಎಂಬುದು ಹೇಳಿಕೊಟ್ಟಿದ್ದರು ಎಂದು ರಚಿತಾ ತಿಳಿಸಿದರು.

    ಇದೇ ವೇಳೆ ಮಾತನಾಡಿದ ಅವರು, ನಿರ್ದೇಶಕ ಪ್ರೇಮ್ ಅವರ ಜೊತೆ ಇದು ನನ್ನ ಮೊದಲ ಚಿತ್ರ. ಪ್ರೇಮ್ ಅವರು ನನಗೆ ಒಳ್ಳೆಯ ಪಾತ್ರವನ್ನು ನೀಡಿದ್ದಾರೆ. ಪ್ರೇಮ್ ಅವರ ನಿರ್ದೇಶನದ ‘ಕರಿಯಾ’, ‘ಜೋಗಿ’, ‘ಎಕ್ಸ್‌ಕ್ಯೂಸ್ ಮಿ’ ನನಗೆ ತುಂಬಾ ಇಷ್ಟ. ಅದರಲ್ಲಿ ಎಕ್ಸ್‌ಕ್ಯೂಸ್ ಮಿ ಚಿತ್ರ ತುಂಬಾನೇ ಇಷ್ಟ. ಈ ಹಿಂದೆ ‘ದಿ-ವಿಲನ್’ ಚಿತ್ರದಲ್ಲಿ ಒಂದು ಹಾಡಿನಲ್ಲಿ ನಾನು ಚಿಕ್ಕ ದೃಶ್ಯದಲ್ಲಿ ನಟಿಸಿದೆ. ಈಗ ಪ್ರೇಮ್ ಅವರು ಈ ಚಿತ್ರದ ಬಗ್ಗೆ ಹೇಳಿದ್ದರು. ಆಗ ನಾನು ಈ ಚಿತ್ರವನ್ನು ಒಪ್ಪಿಕೊಂಡೆ ಎಂದು ರಚಿತಾ ಹೇಳಿದರು.

    ಪ್ರೇಮ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಬೇಕೆಂಬ ತುಂಬಾ ಆಸೆ ಇತ್ತು. ಪ್ರೇಮ್ ಅವರು ಪಾತ್ರಗಳನ್ನು ತುಂಬಾ ಚೆನ್ನಾಗಿ ಬರೆಯುತ್ತಾರೆ. ಈ ಚಿತ್ರದಲ್ಲಿ ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿತ್ತು. ಹಾಗಾಗಿ ನಾನು ಈ ಚಿತ್ರವನ್ನು ಒಪ್ಪಿಕೊಂಡೆ. ಇದರ ಜೊತೆ ರಕ್ಷಿತಾ ಅವರ ಬ್ಯಾನರಿನಲ್ಲಿ ಕೆಲಸ ಮಾಡಲು ಖುಷಿಯಿದೆ. ಈ ಮೊದಲು ರಕ್ಷಿತಾ ಅವರು ತಮ್ಮ ಬ್ಯಾನರಿನಲ್ಲಿ ‘ಜೋಗಯ್ಯ’ ಸಿನಿಮಾವನ್ನು ಮಾಡಿದ್ದು, ‘ಏಕ್ ಲವ್ ಯಾ’ ಅವರ ಎರಡನೇ ಚಿತ್ರ ಎಂದರು.

  • ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

    ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

    ಬೆಂಗಳೂರು: ಐ ಲವ್ ಯು ಸಿನಿಮಾದಲ್ಲಿ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸದ್ದು ಮಾಡಿದ್ದರು. ಈಗ ಮತ್ತೆ ತಮ್ಮ ಹೊಸ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳ ಪಾತ್ರದಲ್ಲಿ ನಟಿಸಿ ಮತ್ತೆ ಎಲ್ಲೆಡೆ ಸುದ್ದಿಯಾಗಿದ್ದಾರೆ.

    ಹೌದು. ರಚಿತಾ ತಮ್ಮ ಹೊಸ ಚಿತ್ರ `ಏಕ್ ಲವ್ ಯಾ’ ಸಿನಿಮಾದಲ್ಲಿ ಮತ್ತೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅದರಲ್ಲೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ರಚಿತಾ ಸಿಗರೇಟ್ ಸೇದಿ, ಹೀರೋಗೆ ಲಿಪ್ ಕಿಸ್ ಕೊಟ್ಟ ದೃಶ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

    ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯದ ಮೂಲಕ ಟೀಸರ್ ಆರಂಭವಾಗುತ್ತದೆ. ನಾಯಕ ರಾಣಾಗೆ ರಚಿತಾ ಲಿಪ್ ಕಿಸ್ ಮಾಡುವ ದೃಶ್ಯದೊಂದಿಗೆ ಟೀಸರ್ ಮುಗಿಯುತ್ತದೆ. 1 ನಿಮಿಷ 40 ಸೆಕೆಂಡ್‍ಗಳ ಟೀಸರ್ ನಲ್ಲಿ ರಾಣಾ ಆ್ಯಕ್ಷನ್ ಹಾಗೂ ರಚಿತಾ ಲುಕ್ ಎಲ್ಲರ ಗಮನ ಸೆಳೆದಿದೆ.

    `ಏಕ್ ಲವ್ ಯಾ’ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದು, ಅವರ ಸಹೋದರ ರಾಣಾ ನಾಯಕನಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿದ್ದು, ಟೀಸರ್ ಆರಂಭದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಲಾಗಿದೆ.

    ಐ ಲವ್ ಯು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ನಂತರದ ದಿನಗಳಲ್ಲಿ ಸ್ವತಃ ರಚಿತಾ ಅವರೇ, ‘ಇನ್ನುಮುಂದೆ ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ’ ಎಂದು ಹೇಳಿಕೊಂಡಿದ್ದರು. ಈಗ ರಚಿತಾ ಬಿಂದಾಸ್ ಆಗಿ ಸಿಗರೇಟ್ ಸೇದುತ್ತಿರುವ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ಈ ಕುರಿತು ಪ್ರೇಮ್ ಸಹ ಖಚಿತಪಡಿಸಿದ್ದು, ಇದು ನಮ್ಮ ಏಕ್ ಲವ್ ಯಾ ಚಿತ್ರದ ಸ್ಟಿಲ್. ಹೇಗೆ ಹೊರಬಂತೋ ನಮಗೂ ಗೊತ್ತಿಲ್ಲ. ಈ ಚಿತ್ರದಲ್ಲಿ ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯವಿದೆ. ಟೀಸರ್‍ನಲ್ಲಿ ಇನ್ನಷ್ಟು ಅಚ್ಚರಿಗಳು ಕಾದಿವೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದರು.