ಮೈಸೂರು: ಎಚ್.ಡಿ ರೇವಣ್ಣ ಅವರ ಅವರ ಬರಿಗಾಲ ಪೂಜೆ ಫಲಿಸಲಿಲ್ಲ. ನಿಂಬೆ ಹಣ್ಣಿಗೆ ಬೆಲೆ ಇಲ್ಲ ಎಂದು ಮಾಜಿ ಸಚಿವ ಎ.ಮಂಜು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರಿಗೆ 9ರ ಸಂಖ್ಯೆ ಆಗಿ ಬರೋದಿಲ್ಲ. 1999, 2009, 2019ರಲ್ಲಿನ ಸೋಲು ಇದಕ್ಕೆ ಸಾಕ್ಷಿಯಾಗಿದೆ. ನಾನು ಈ ಹಿಂದೆಯೇ ಹೇಳಿದ್ದೆ 9 ದೇವೇಗೌಡರಿಗೆ ಆಗುವುದಿಲ್ಲ ಎಂದು. ಈಗ ಅದು ಮತ್ತೆ ದೇವೇಗೌಡರ ವಿಷಯದಲ್ಲಿ ನಿಜವಾಗಿದೆ ಎಂದು ಹೇಳಿದರು.
ಮಂಗಳವಾರ ವಿಧಾನಸಭೆ ಕಲಾಪ ಮುಂದೂಡಿದ್ದರೆ ಒಳಿತಾಗುತ್ತದೆ ಅಂದುಕೊಂಡಿದ್ದರು. ಇದಕ್ಕಾಗಿ ರೇವಣ್ಣ ಮಂಗಳವಾರದವರೆಗೂ ವಿಶ್ವಾಸ ನಿರ್ಣಯ ಮುಂದೂಡಿದ್ದರು. ಅವರ ನಿಂಬೆ ಹಣ್ಣಿಗೆ, ಪೂಜೆಗೆ ಇದೀಗ ತಕ್ಕ ಉತ್ತರ ದೊರೆತಿದೆ ಎಂದರು.
ನಾನು ಯಾವುದೇ ಕಾರಣಕ್ಕೂ ಹೊಸ ಸಂಪುಟಕ್ಕೆ ಸೇರೋದಿಲ್ಲ. ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಅಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಯಡಿಯೂರಪ್ಪ ಹಾಗೂ ಮೋದಿಯವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಬಿಜೆಪಿ ಸರ್ಕಾರ ನೆರವಾಗಲಿದೆ. 10-17 ದಿನದಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ. ಮೈತ್ರಿ ಸರ್ಕಾರವನ್ನ ಯಾರೂ ಬೀಳಿಸಿಲ್ಲ, ಅವರೇ ಬೀಳಿಸಿಕೊಂಡಿದ್ದಾರೆ. ನಮ್ಮ ಸರ್ಕಾರ ಮುಂದೆ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ ಎಂದರು.
ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಸಚಿವ ಎ.ಮಂಜು ಇಂದು ಫೇಸ್‍ಬುಕ್ ನಲ್ಲಿ ಮುಖ್ಯಮಂತ್ರಿಗಳಿಗೆ ಸುದೀರ್ಘವಾದ ಪತ್ರ ಬರೆದಿದ್ದಾರೆ. ಪತ್ರದ ಮೂಲಕ ರಾಜೀನಾಮೆ ನೀಡಿ ಹೊರ ಬನ್ನಿ ಎಂದು ಎ.ಮಂಜು ಮನವಿ ಮಾಡಿಕೊಂಡಿದ್ದಾರೆ.
ಪತ್ರದಲ್ಲಿ ಏನಿದೆ?
ಸನ್ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಳಕಳಿಯ ಮನವಿ. ಸರ್ ನೀವು ಕನ್ನಡಿಗರ ಕಣ್ಮಣಿ ಆಗಿದ್ದವರು ಎಂದು ಬಳಸಲು ಸಕಾರಣವಿದೆ. ನೀವು ರಾಜ್ಯ ಕಂಡ ವಿಶೇಷ ರಾಜಕಾರಣಿ. ಮೊದಲ ಬಾರಿಗೆ ಶಾಸಕರಾಗಿ ಸಿಎಂ ಆದ ದಾಖಲೆ ನಿಮ್ಮ ಹೆಸರಲ್ಲೇ ಇದೆ. 2006ರ 20-20 ಸರ್ಕಾರದ ಸಮಯದಲ್ಲಿ ನೀವು ತೋರಿಸಿದ ಕಾರ್ಯ ಕ್ಷಮತೆ ಅನುಕರಣೀಯ. ಜನನಾಯಕ ಅಂದರೆ ಹೀಗಿರಬೇಕು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ತಾವು ಮಾಡುತ್ತಿರುವುದು ಏನು? ಯಾವ ಸಂದೇಶವನ್ನು ಮುಂದಿನ ಪೀಳಿಗೆಗೆ ನೀಡುತ್ತಿದ್ದೀರಾ? ಒಮ್ಮೆ ನಿಮ್ಮ ಪಟಾಲಂನ್ನು ದೂರವಿಟ್ಟು ಏಕಾಂತದಲ್ಲಿ ಕುಳಿತು ಯೋಚಿಸಿ.
ನಿಮ್ಮ ರಾಜಕೀಯ ಜೀವನದ ಮೊದಲ ವಿಲನ್ ಸಹೋದರ ಹೆಚ್.ಡಿ ರೇವಣ್ಣ. ಸಮ್ಮಿಶ್ರ ಸರ್ಕಾರದ ಇವತ್ತಿನ ಸ್ಥಿತಿಗೆ ರೇವಣ್ಣ ಕೊಡುಗೆ ಅಪಾರ. ಆತ ಹುಟ್ಟುತ್ತಾ ಸಹೋದರರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿಗೆ ಅನ್ವರ್ಥನಾಗಿದ್ದಾನೆ. ನಿಮ್ಮನ್ನು ಆತ ವ್ಯವಸ್ಥಿತವಾಗಿ ಹಂತ ಹಂತವಾಗಿ ಮುಗಿಸಿಯೇ ಬಿಟ್ಟ. ಅದು ನಿಮಗೆ ಗೊತ್ತಾಗಲೇ ಇಲ್ಲ. ಇರಲಿ ಈಗಲಾದರೂ ಅದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಭವಿಷ್ಯ ಉತ್ತಮವಾಗುವುದು. ಇನ್ನು ಮುಖ್ಯ ವಿಷಯಕ್ಕೆ ಬರುತ್ತೇನೆ. ಸದ್ಯ ಸದನದಲ್ಲಿ ನಿಮ್ಮ ವರ್ತನೆ ರಾಜ್ಯದ ಜನರಿಗೆ ಮಾತ್ರವಲ್ಲ ನಿಮ್ಮದೇ ಸಮುದಾಯದ ಜನರಿಗೆ ಅಸಹ್ಯ ತರಿಸಿದೆ. ಅಸಹ್ಯ ಒಂದು ಕಡೆಯಾದರೆ ಮತ್ತೊಂದು ಕಡೆ ಗಬ್ಬೆದ್ದು ಹೋಗಿರುವ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜನರು ಶಾಸಕಾಂಗ ಕಾರ್ಯಾಂಗ ಪತ್ರಿಕಾರಂಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ನ್ಯಾಯಾಂಗ ಸಂವಿಧಾನದ ಮೇಲೆ ಇನ್ನು ನಂಬಿಕೆ ಇಟ್ಟಿದ್ದಾರೆ. ಆದರೆ ನೀವು ಅದನ್ನೇ ಬುಡಮೇಲು ಮಾಡಲು ಹೊರಟಿದ್ದೀರಾ? ನಿಮ್ಮ ವ್ಯಕ್ತಿತ್ವಕ್ಕೆ ಇದು ಶೋಭೆ ತರುವುದಿಲ್ಲ.
ರೇವಣ್ಣನಂತವನು ಇದನ್ನು ಮಾಡುವುದು ನಿರೀಕ್ಷಿತ. ಆದರೆ ತಾವು ಅವನಂತಲ್ಲ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿಯೇ ನಿಮಗೆ ಸೌಜನ್ಯವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ಕಾನೂನಿಗೆ ಗೌರವ ಕೊಡಿ. ಹಿಂದಿನ ನಿದರ್ಶನಗಳನ್ನು ನೋಡಿ. ತೀರಾ ಹಿಂದೆಯಲ್ಲ ನೀವು ಸಿಎಂ ಆಗುವ ಮುನ್ನ ಆದ ಘಟನೆಗಳನ್ನು ನೆನಪಿಸಿಕೊಳ್ಳಿ. ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಯ ದಂಡನಾಯಕ ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪ ಸಂವಿಧಾನಬದ್ಧವಾಗಿ ಸಿಎಂ ಆದರು. ಆದರೆ ರಾಜಕೀಯ ತಂತ್ರಗಳನ್ನು ಬಳಸಿ ಅವರು ವಿಶ್ವಾಸ ಮತ ಸಾಬೀತು ಮಾಡದಂತೆ ಮಾಡಿ ಒಂದೇ ದಿನದಲ್ಲಿ ಅವರನ್ನು ಕೆಳಗಿಳಿಸಿದ್ದೀರಿ. ಅವತ್ತಿನ ಉದಾಹರಣೆಯನ್ನೇ ನೋಡುವುದಾದರೂ ಅವತ್ತು ಯಡಿಯೂರಪ್ಪನವರಿಗೆ ನ್ಯಾಯಾಲಯ ಒಂದು ದಿನದಲ್ಲಿ ವಿಶ್ವಾಸ ಮತ ಯಾಚನೆ ಮಾಡಲು ಸೂಚಿಸಿತ್ತು.
104 ಜನ ಇದ್ದವರಿಗೆ ಬೇಕಾಗಿದ್ದು ಕೇವಲ 9 ಜನರ ಬೆಂಬಲ. ಆದರೆ ಎಲ್ಲಿ ಅದು ಸಿಕ್ಕಿ ಬಿಡುತ್ತದೋ ಎಂದು ಅದಕ್ಕೆ ಅವಕಾಶ ಕೊಡದೇ ಅವರನ್ನು ಇಳಿಸಿಬಿಟ್ಟಿರಿ. ಆದರೆ ಈಗ ನೀವು ಮಾಡ್ತಾ ಇರೋದು ಏನು ಸ್ವಾಮಿ? ಅದೇ ಕಾನೂನು ರಾಜ್ಯಪಾಲರು ಯಾರೇ ಹೇಳಿದರೂ ಕುರ್ಚಿಗೆ ಅಂಟಿಕೊಂಡು ಕೂರುವ ಕೆಟ್ಟ ಬುದ್ಧಿ ಅದ್ಯಾಕೆ ಬಂತು? ದಯಮಾಡಿ ಈಗಲೂ ಕಾಲ ಮಿಂಚಿಲ್ಲ. ನೀವು ಸದಾ ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಹೇಳುತ್ತೀರಿ. ಅದನ್ನು ಕೇವಲ ಘೋಷಣೆಗೆ ಮಾತ್ರ ಸೀಮಿತಗೊಳಿಸದೇ ದಯಮಾಡಿ ಕಾರ್ಯ ರೂಪಕ್ಕೂ ತನ್ನಿ. ಮುಂದಿನ ಪೀಳಿಗೆಗೆ ಒಬ್ಬ ಒಳ್ಳೆಯ ಜನನಾಯಕರಾಗಿ ನೆನಪಿನಲ್ಲಿರಿ. ಕೆಟ್ಟ ಪರಂಪರೆಗೆ ಅಡಿಪಾಯ ಹಾಕಿ ಕೆಟ್ಟವರಾಗಿ ಬಿಂಬಿತರಾಗದಿರಿ. ಇನ್ನೂ ಕಾಲ ಮಿಂಚಿಲ್ಲ ನೀವೇ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಡಿ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ನಾನು ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಾಜಿ ಸಚಿವ ಎ. ಮಂಜು ಸ್ಫೋಟಕ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆಗುತ್ತಾ ಎಂಬ ಪ್ರಶ್ನೆ ಮೂಡುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಮಂಜು ಅವರು, ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ಉಲ್ಲೇಖ ಮಾಡಿದ್ದು, ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಮಾಹಿತಿ ಸರಿಯಾಗಿ ನೀಡಿಲ್ಲ. ಅಫಿಡವಿಟ್‍ನಲ್ಲಿ ಬ್ಯಾಂಕ್ ಬ್ಯಾಲೆನ್ಸ್ 5.78 ಲಕ್ಷ ಎಂದು ತೋರಿಸಿದ್ದಾರೆ. ಆದರೆ ಡಿಸೆಂಬರ್ 30 ರವರೆಗೂ 43,31,286 ರೂ.ಲಕ್ಷ ಹಣ ಇರುತ್ತೆ. ಪಡುವಲಹಿಪ್ಪೆಯ ಕರ್ನಾಟಕ ಬ್ಯಾಂಕ್‍ನಲ್ಲಿ ಪ್ರಜ್ವಲ್ ಬ್ಯಾಂಕ್ ಬ್ಯಾಲೆನ್ಸ್ 5,78,238 ರೂ. ಎಂದು ಉಲ್ಲೇಖವಾಗಿದೆ. ಆದರೆ ನಮ್ಮ ಪ್ರಕಾರ ಕರ್ನಾಟಕ ಬ್ಯಾಂಕ್‍ನಲ್ಲಿ 43,31,286 ರೂಪಾಯಿ ಇದೆ. ಹೀಗಾಗಿ ಇವರು ಸುಳ್ಳು ಮಾಹಿತಿಯನ್ನು ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
43 ಲಕ್ಷ ಬಿಟ್ಟು ಕೇವಲ 5 ಲಕ್ಷ ತೋರಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದರೆ 5 ವರ್ಷ ರಿಟರ್ನ್ಸ್ ತೋರಿಸಬೇಕು. ಆದರೆ ಕೇವಲ ಒಂದು ವರ್ಷ ಆದಾಯ ತೆರಿಗೆ ತೋರಿಸಿದ್ದಾರೆ. ಉಳಿದೆಲ್ಲವೂ ನಾಟ್ ಫೈಲ್ ಎಂದು ತೋರಿಸಿದ್ದಾರೆ. 2016 ರಲ್ಲಿಯೇ ಮಿನರ್ವ್ ಸರ್ಕಲ್ ನಲ್ಲಿ ಅಕೌಂಟ್ ಓಪನ್ ಮಾಡಿದ್ದಾರೆ. ಆಗಲೇ ಹಲವು ಕಡೆ ಭೂಮಿಯನ್ನೂ ಖರೀದಿಸಿದ್ದರು. ಹೀಗಿದ್ದರೂ ಎಲ್ಲವನ್ನೂ ಮರೆಮಾಚಿದ್ದಾರೆ. ಕೇವಲ 18/19 ಎರಡು ವರ್ಷದ ತೆರಿಗೆ ತೋರಿಸಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಆರೋಪ ಮಾಡಿದ್ದಾರೆ.
ಪ್ರಜ್ವಲ್ ಎಲ್‍ಎಲ್‍ಪಿ ಮತ್ತು ಡ್ರೋಣ್ ಎರಡು ಕಂಪನಿಯ ಪಾಲುದಾರರಾಗಿದ್ದು, ಒಂದು ಕಂಪನಿಗೆ 20%, ಇನ್ನೊಂದು ಕಂಪನಿಗೆ 25% ರಷ್ಟು ಪಾಲುದಾರರಾಗಿದ್ದಾರೆ. ಇದೆಲ್ಲವನ್ನೂ ಅಫಿಡವಿಟ್‍ನಲ್ಲಿ ತಿಳಿಸಿಲ್ಲ. ಹೊಳೆನರಸೀಪುರದಲ್ಲಿ ತಂದೆ ಸೂರಜ್ ಮತ್ತು ಪ್ರಜ್ವಲ್ ಅವರಿಗೆ ಗಿಫ್ಟ್ ಕೊಟ್ಟಿದ್ದಾರೆ. ಆ ಗಿಫ್ಟ್ ನಿವೇಶನ ಅಂತ ಅಫಿಡವಿಟ್‍ನಲ್ಲಿ ತೋರಿಸಿದ್ದಾರೆ. ಆದರೆ ವಾಸ್ತವವಾಗಿ ಅದು ಕನ್ವೆನ್ಷನ್ ಹಾಲ್ ಆಗಿದೆ. ಚೆನ್ನಾಂಬಿಕಾ ಕನ್ವೆನ್ಷನ್ ಹಾಲ್ ಅಂತ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಹೈವೇಯಲ್ಲಿ ಕಟ್ಟಿರುವುದರಿಂದ ದೂರು ಕೂಡ ನೀಡಲಾಗಿತ್ತು. ಸುಮಾರು ಐದಾರು ಕೋಟಿಯ ಬೆಲೆ ಬಾಳುವ ಕನ್ವೆನ್ಷನ್ ಹಾಲ್ ಇದಾಗಿದ್ದು, ಕೋರ್ಟ್ ಕೂಡ ಡೆಮಾಲಿಶನ್‍ಗೆ ಆದೇಶಿಸಿತ್ತು. ಹೀಗಿದ್ದರೂ ಅಧಿಕಾರ ದುರುಪಯೋಗ ಮಾಡಿ ಇಲ್ಲಿಯವರೆಗೆ ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ನೆಲಮಂಗಲದ ಬಳಿ 12 ಎಕರೆ ಭೂಮಿ ಖರೀದಿಸಿದ್ದಾರೆ. ಬಾವಿಕೆರೆ ಎಂಬಲ್ಲಿ 12 ಎಕರೆ ಖರೀದಿಸಿದ್ದಾರೆ. ಆದರೆ ಮಾರ್ಕೆಟ್ ಬೆಲೆಯನ್ನ ನಮೂದಿಸಿಲ್ಲ. ಅಲ್ಲಿ 2.5 ಕೋಟಿ ಎಕರೆಗೆ ಬೆಲೆಯಿದೆ. ಆದರೆ ಕೇವಲ 54 ಲಕ್ಷ ಮಾತ್ರ ತೋರಿಸಿದ್ದಾರೆ. ಬೇನಾಮಿ ಹೆಸರಿನಲ್ಲಿ 45 ಎಕರೆಗೆ ಬೇಲಿ ಹಾಕಿದ್ದಾರೆ. ಸರ್ಕಾರಿ ಖರಾಬು ಭೂಮಿಯನ್ನೂ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎಂದು ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಆರೋಪಿಸಿದ್ದಾರೆ.
ಈಗಾಗಲೇ ಅವರ ಆಸ್ತಿ ವಿಚಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದಾಖಲಾತಿ ಸಮೇತವಾಗಿ ದೂರು ದಾಖಲಿಸಿದ್ದೇವೆ. ಮಾಜಿ ಪ್ರಧಾನಿ ಅವರ ಮೊಮ್ಮಗ ಎಂದು ಸುಮ್ಮನ್ನಿರಬೇಡಿ, ಸರ್ಕಾರಕ್ಕೆ ಮೋಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾನು ಮನವಿ ಮಾಡಿಕೊಂಡಿದ್ದೇನೆ. ಅವರು ಕೂಡ ಈ ದೂರನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಚ್.ವಿಶ್ವನಾಥ್ ರಾಜೀನಾಮೆ ನೀಡಿರುವ ಬಗ್ಗೆ ಬಿಜೆಪಿ ನಾಯಕ ಎ.ಮಂಜು ಪ್ರತಿಕ್ರಿಯಿಸಿ, ಅಪ್ಪ ಮಕ್ಕಳ ಜೊತೆ ಯಾರು ಇರೋಕೂ ಆಗಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರವಿರಬಹುದು, ಇನ್ನೊಂದು ಇರಬಹುದು ಕೇವಲ ಅವರ ಕುಟುಂಬಕ್ಕೆ ಸೀಮಿತ ಮಾಡಿಕೊಳ್ಳುತ್ತಾರೆ. ಅರ್ಹತೆ ಇರುವ ಯಾರಿಗೂ ಅಧಿಕಾರ ನೀಡುವುದಿಲ್ಲ. ಅಧಿಕಾರವಿಲ್ಲದೇ ಅಧ್ಯಕ್ಷನಾಗಿಯೂ ಜವಾಬ್ದಾರಿ ನಿರ್ವಹಿಸಲು ಆಗದ ಹಿನ್ನೆಲೆಯಲ್ಲಿ ನೊಂದು ವಿಶ್ವನಾಥ್ ಅವರು ರಾಜೀನಾಮೆ ಕೊಟ್ಟಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಉಸಿರುಗಟ್ಟುವ ವಾತವಾರಣವಿದೆ. ಹೀಗಾಗಿ ಅಪ್ಪ ಮಕ್ಕಳ ಜೊತೆ ಯಾರು ಇರಲು ಆಗುವುದಿಲ್ಲ ಎಂದು ಮಂಜು ಆರೋಪಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಜೀ ಹೂಜೂರ್‍ಗಳಿಗೆ ಮಾತ್ರ ಅವಕಾಶ ಸಿಗುತ್ತಿದೆ. ಕೆಲಸ ಮಾಡುವವರಿಗೆ ಹಿರಿಯರಿಗೆ ಗೌರವ ಸಿಗುತ್ತಿಲ್ಲ. ನಿಜವಾಗಿ ಪಕ್ಷ ಕಟ್ಟುವವರಿಗೆ ಪಕ್ಷ ಬೆಳೆಸುವಂತವರಿಗೆ ಸ್ಥಾನಮಾನ ನೀಡುವುದಿಲ್ಲ ಎಂದು ಕಿಡಿಕಾರಿದರು.
ಆಪರೇಷನ್ ಕಮಲದ ಬಗ್ಗೆ ಮಾತನಾಡಿ, ಮೈತ್ರಿ ಸರ್ಕಾರವನ್ನ ನಾವು ಕೆಡವುದಕ್ಕೆ ಹೋಗುವುದಿಲ್ಲ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಕುಮಾರಸ್ವಾಮಿಯವರೇ ನೈತಿಕವಾಗಿ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು. ನಾವು ಯಾರು ಸರ್ಕಾರವನ್ನ ಬೀಳಿಸುವುದಿಲ್ಲ. ಅವರೇ ಕೆಡವಿಕೊಳ್ಳುತ್ತಾರೆ ಎಂದು ಹೇಳಿದರು.
ಹಾಸನ: ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಎರಡು ಕುಟುಂಬದವರಿಗೆ ಮಾತ್ರ ಲಾಭವಾಗಿದೆ ಎಂದು ಹಾಸನ ಪರಾಚಿತ ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದ್ದಾರೆ.
ಅರಕಲಗೂಡಿನಲ್ಲಿ ಮಾತನಾಡಿದ ಅವರು, ಒಂದು ದೇವೇಗೌಡರ ಮೊಮ್ಮಗ ಪ್ರಜ್ವಲ್‍ನನ್ನು ರಾಜಕೀಯಕ್ಕೆ ತರಲು, ಮತ್ತೊಂದು ಡಿ.ಕೆ.ಶಿವಕುಮಾರ್ ತಮ್ಮನನ್ನು ಗೆಲ್ಲಿಸಲು ಮಾತ್ರ ಈ ಮೈತ್ರಿ ಲಾಭವಾಗಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಶೂನ್ಯವಾಗಿದೆ. ಚುನಾವಣೆಗೂ ಮುನ್ನವೇ ಮೈತ್ರಿಯಿಂದ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ನಾನೇ ಭವಿಷ್ಯ ನುಡಿದಿದ್ದೆ. ಅದು ಈಗ ನಿಜವಾಗಿದೆ ಎಂದರು.
ನೂತನವಾಗಿ ಆಯ್ಕೆಯಾದ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ಹೇಳಿಕೆಯನ್ನು ಮನಃಪೂರ್ವಕವಾಗಿ ಹೇಳಿಲ್ಲ. ಇದು ನಾಟಕವೋ ಮತ್ತೊಂದೋ ಮುಂದೆ ನೋಡೋಣ. ರಾಜೀನಾಮೆ ಕೊಡುತ್ತೇನೆ ಎಂಬ ಬಗ್ಗೆ ನನಗೆ ಮಾಧ್ಯಮದಲ್ಲಿ ನೋಡಿ ಗೊತ್ತಾಯಿತು. ಅದು ಅವರ ವೈಯಕ್ತಿಕ ವಿಚಾರವಾಗಿದೆ. ದೇವೇಗೌಡರ ಈ ಪರಿಸ್ಥಿತಿಗೆ ಇವರೇ ಕಾರಣರಾಗಿದ್ದಾರೆ. ದೇವೇಗೌಡರು ಹಾಸನದಿಂದ ನಿಲ್ಲಲಿ ಎಂದು ರಾಜಕೀಯ ವಿರೋಧಿಯಾದರೂ ನಾನೇ ಹೇಳಿದ್ದೆ. ಅಂದು ದೇವೇಗೌಡರನ್ನು ಇಲ್ಲಿಂದ ಓಡಿಸಿದ್ದು ಇವರೇ, ಬಹುಶಃ ಇವತ್ತು ಅರಿವಾಗಿದೆ ಅನಿಸುತ್ತಿದೆ ಎಂದರು.
ದೇವೇಗೌಡರನ್ನ ಇಲ್ಲಿಂದ ತಳ್ಳಿದ್ದರು ಎಂಬ ಅಪವಾದ ಅವರ ಮೇಲಿದೆ. ಈಗ ಭವಾನಿ ರೇವಣ್ಣ ಕಣ್ಣೀರು ಹಾಕಿದ್ದರಂತೆ. ಅವರಿಗೆ ಅವತ್ತು ನಮ್ಮ ಮಾವ ಎಂಬ ಗೌರವ ಇರಲಿಲ್ಲವೆ ಎಂದು ಜನರು ಮಾತನಾಡುತ್ತಿದ್ದಾರೆ. ಅವರ ಮೇಲೆ ಗೌರವ ಇದ್ದಿದ್ದರೆ ಇದೆಲ್ಲವನ್ನು ಮೊದಲೇ ತಿಳಿದುಕೊಳ್ಳಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೇಗೌಡರನ್ನು ಹಾಸನದಿಂದ ಇವರೇ ಹೋಗುವ ರೀತಿ ಮಾಡಿದ್ದಾರೆ. ಇದು ಹಾಸನ ಜನರ ಮನಸ್ಸಿನಲ್ಲಿ ಇದೆ ಎಂದು ತಿಳಿದಿದ್ದು, ಇದರಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾತನಾಡುತ್ತಿದ್ದಾರೆ ಎಂಬುದು ನಮ್ಮ ಅಭಿಪ್ರಾಯವಾಗಿದೆ. ಪ್ರಜ್ವಲ್ ತಮ್ಮ ಹೇಳಿಕೆಯನ್ನ ಮನಃಪೂರ್ವಕವಾಗಿ ಹೇಳಿಲ್ಲ. ಇದು ನಾಟಕವೋ ಮತ್ತೊಂದು ಮುಂದೆ ನೋಡೋಣ ಎಂದು ವ್ಯಂಗ್ಯ ಮಾಡಿದ್ದಾರೆ.
ದೇವೇಗೌಡರು ರಾಜ್ಯದ ಶಕ್ತಿ ಎಂದು ಈಗ ಅರಿವಾಗಿದೆಯಾ? ದೇವೇಗೌಡರು ಕುಟುಂಬದ ಶಕ್ತಿ ಮಾತ್ರವಾಗಿದ್ದರೂ ಈಗ ಅವರು ಮೈತ್ರಿಗೂ ಶಕ್ತಿಯಾಗಲಿಲ್ಲ. ದೇವೇಗೌಡರು ಗೆಲ್ಲಬೇಕು ಎಂಬ ಆಸೆ ಎಲ್ಲರಿಗೂ ಇದೆ. ಅವರು ಸೋತಿದ್ದು ನಿಜವಾಗಿಯೂ ನನಗೆ ಬೇಸರವಾಗಿದೆ. ಹಾಸನದಲ್ಲಿ ಚುನಾವಣೆ ಗೆದ್ದಿರುವುದು ಜೆಡಿಎಸ್ ಅಲ್ಲ, ಮೈತ್ರಿ ಗೆದ್ದಿದೆ. ಜನರನ್ನ ದಾರಿತಪ್ಪಿಸಲು ಪ್ರಜ್ವಲ್ ರಾಜೀನಾಮೆ ಹೇಳಿಕೆ ನೀಡಿದ್ದಾರೆ ಎಂದು ಮಂಜು ಟೀಕಿಸಿದರು.
ಹಾಸನ: ಅಜ್ಜ ದೇವೇಗೌಡರು ತ್ಯಾಗ ಮಾಡಿದ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದಿದ್ದಾರೆ. ಪ್ರಜ್ವಲ್ ರೇವಣ್ಣ 1,42,123 ಮತಗಳ ಅಂತರದಿಂದ ಬಿಜೆಪಿಯ ಮಂಜು ಅವರನ್ನು ಸೋಲಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು 6,75,512 ಮತಗಳನ್ನು ಪಡೆದಿದ್ದರೆ, ಎ.ಮಂಜು 5,33,389 ಮತಗಳನ್ನು ಗಳಿಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರಗಳಿವೆ. 16,29,587 ಮತದಾರರಿದ್ದು, ಅವರಲ್ಲಿ 12,73,219 ಮತದಾನ ಮಾಡಿದ್ದರು.
ಗೆಲುವಿನ ಹಾದಿ:
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಸಿ.ಎನ್ ಬಾಲಕೃಷ್ಟ ಮಾಜಿ ಪ್ರದಾನಿ ದೇವೇಗೌಡರ ಸಂಬಂಧಿ ಆಗಿದ್ದು, ಸಾಂಪ್ರದಾಯಿಕ ಜೆಡಿಎಸ್ ಮತಗಳ ಜೊತೆಗೆ ಪ್ರಮುಖ ವಕ್ಕಲಿಗ ಸಮುದಾಯ ಮತಗಳು ಕೂಡ ಜೆಡಿಎಸ್ ಪಾಲಾಗಿವೆ. ಹೀಗಾಗಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಮತಗಳು ಮೈತ್ರಿ ಅಭ್ಯರ್ಥಿ ಪರ ಬಿದ್ದಿವೆ.
ಜೆಡಿಎಸ್‍ನಿಂದ ಶಾಸಕರಾಗಿ ಸತತವಾಗಿ ನಾಲ್ಕನೆ ಬಾರಿಗೆ ಆಯ್ಕೆಯಾಗಿರುವ ಹೆಚ್.ಕೆ.ಕುಮಾರ್ ಸ್ವಾಮಿ ಸಕಲೇಶಪುರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆನೆ ಹಾವಳಿ ಸಮಸ್ಯೆಗೆ ಮುಖ್ಯಮಂತ್ರಿಯವರಿಂದ ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದರು. ಮೀಸಲು ಕ್ಷೇತ್ರವಾದ ಸಕಲೇಶಪುರ ಸಾಂಪ್ರದಾಯಿಕವಾಗಿ ಬಿಜೆಪಿ ಹೊರತುಪಡಿಸಿ ಪಕ್ಷಕ್ಕೆ ಮತಗಳನ್ನು ಚಲಾಯಿಸಲಾಗಿದೆ.
ಹೊಳೇನರಸೀಪುರ ಜೆಡಿಎಸ್‍ನ ತಾಯಿ ಬೇರು ಇರುವ ವಿಧಾನ ಸಭಾ ಕ್ಷೇತ್ರವಾಗಿದ್ದು, ಮಾಜಿ ಪ್ರದಾನಿ ದೇವೇಗೌಡರಿಗೆ ಜನ್ಮ ನೀಡಿದ ಪ್ರಮುಖ ವಿಧಾನ ಸಭಾ ಕ್ಷೇತ್ರವಾಗಿದೆ. ಜೊತೆಗೆ ಸಚಿವ ಹೆಚ್.ಡಿ.ರೇವಣ್ಣನವರ ಸ್ವಕ್ಷೇತ್ರ. ಇಲ್ಲಿ ಜೆಡಿಎಸ್ ವೋಟನ್ನು ತಡೆಯುವರು ಯಾರು ಇರಲಿಲ್ಲ. ಇನ್ನೂ ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಭಾರಿ ಗೆಲುವು ಕಂಡಿರುವ ಜೆಡಿಎಸ್‍ನ ಲಿಂಗೇಶ್ ಜಿಲ್ಲೆಯಲ್ಲಿ ಏಕೈಕ ಲಿಂಗಾಯಿತ ಶಾಸಕ. ಆದ್ದರಿಂದ ಲಿಂಗಾಯಿತ ಮತದಾರರು ಜೆಡಿಎಸ್ ಪಕ್ಷದ ಪರ ಇದ್ದರು. ಜೊತೆಗೆ ಈ ಕ್ಷೇತ್ರದಲ್ಲಿ ಹಲವಾರು ದಶಕಗಳಿಂದ ದೇವೇಗೌಡರ ಪ್ರಭಾವ ಕೂಡ ಇದೆ.
ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದವರೇ ಆದ ಹಿರಿಯ ನಾಯಕ ಎ.ಟಿ ರಾಮಸ್ವಾಮಿಯವರು ಪಕ್ಷದ ಪರ ಪ್ರಚಾರ ಮಾಡಿದ್ದರು. ಕ್ಷೇತ್ರದಲ್ಲಿರುವ ಕುರುಬ ಸಮುದಾಯದ ಮತಗಳು ಸಹ ಸಿದ್ದರಾಮಯ್ಯನವರ ಪ್ರವಾಸದ ಹಿನ್ನೆಲೆಯಲ್ಲಿ ಜೆಡಿಎಸ್ ಪಾಲಾಗಿದೆ. ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ದೇವೇಗೌಡರಿಗೆ ಸಾಕಷ್ಟು ಮತದಾರರಿದ್ದಾರೆ. ಕಳೆದ ಬಾರಿ ಇಲ್ಲಿ ದೇವೇಗೌಡರಿಗೆ ಮುನ್ನಡೆ ನೀಡಿದ್ದರು. ಈ ಭಾರಿಯೂ ಮತದಾರರು ಅವರ ಮೊಮ್ಮಗ ಪ್ರಜ್ವಲ್‍ಗೆ ಮುನ್ನಡೆ ನೀಡಿದ್ದಾರೆ.
ಹಾಸನ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಹೆಚ್.ಎಸ್ ಪ್ರಕಾಶ್ ನಿಧನರಾಗಿದ್ದು. ಮತದಾರ ರ ಅನುಕಂಪ ಮತ್ತೆ ಜೆಡಿಎಸ್‍ನ ಕಡೆಗೆ ಒಲವಿತ್ತು. ಜೆಡಿಎಸ್ ಕಾಂಗ್ರೆಸ್‍ನ ಚುನಾವಣಾ ಪೂರ್ವ ಹೊಂದಾಣಿಕೆ ಹಿನ್ನೆಲೆಯಲ್ಲಿ ಬಿಜೆಪಿಗಿಂತಲೂ ಹೆಚ್ಚಿನ ಮತಗಳು ಮೈತ್ರಿ ಅಭ್ಯರ್ಥಿ ಪಾಲಾಗಿವೆ.
ಹಾಸನ: ಲೋಕಸಭಾ ಚುನಾವಣೆಯಲ್ಲಿ ಹಾಸನ ಜನರು ಈ ಬಾರಿ ಐತಿಹಾಸಿಕ ವಿಚಾರಕ್ಕೆ ನಾಂದಿ ಹಾಡಿದ್ದು, ಕುಟುಂಬ ರಾಜಕಾರಣದ ವಿರುದ್ಧ ಮತ ಹಾಕಿದ್ದಾರೆ. ಕ್ಷೇತ್ರದಲ್ಲಿ ತಮ್ಮ ಗೆಲುವು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಆಪರೇಷನ್ ಕಮಲದ ಅಗತ್ಯವೇ ಇಲ್ಲದೆ ಮೈತ್ರಿ ಸರ್ಕಾರ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರ ನಿರೀಕ್ಷೆ. ಇದೇ ಅಭಿಪ್ರಾಯ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಂದಿದೆ. ಎನ್‍ಡಿಎ 300 ರಿಂದ 350 ಸ್ಥಾನ ಗೆಲ್ಲಲಿದೆ. ಈ 300 ಸ್ಥಾನದಲ್ಲಿ ಹಾಸನ ಕ್ಷೇತ್ರವೂ ಒಂದು ಸ್ಥಾನ ಸೇರಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ತಮಗೆ ಗೆಲುವು ಸಿಗಲಿದೆ ಎಂದರು.
ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರ ಯಾವುದೇ ಕಾರಣದಿಂದ ಉಳಿಯಲ್ಲ. ನಮ್ಮ ಪಕ್ಷದ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲದೆಯೇ ಸರ್ಕಾರ ಉರುಳಲಿದೆ. ಈಗಾಗಲೇ ಹಲವು ಶಾಸಕರು ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಕಮಲದ ಪ್ರಶ್ನೆಯೇ ಇಲ್ಲಾ, ಬಹುಶಃ ಆಪರೇಷನ್ ಇಲ್ಲದೆಯೇ ನ್ಯಾಚುರಲ್ ಆಗಿ ಮಗು ಹುಟ್ಟುತ್ತೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಆಗುತ್ತೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ ನೀಡುವ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ತನಿಖೆ ನಡೆದು ನ್ಯಾಯ ಸಿಗುವ ವಿಶ್ವಾಸ ಇದೆ. ಇದು ದೇಶದ ರಾಜಕೀಯ ಇತಿಹಾಸದಲ್ಲಿ ಗಮನ ಸೆಳೆಯುವ ವಿಚಾರವಾಗಲಿದೆ. ಜೆಡಿಎಸ್ ಅಭ್ಯರ್ಥಿ ಆಯೋಗಕ್ಕೆ ಸಲ್ಲಿಸದೇ ಇರುವ ಆದಾಯ ಮಾಹಿತಿಯನ್ನು ಪ್ರಶ್ನೆ ಮಾಡಿದ್ದೇವೆ. ಮತದಾರರಿಗೆ ಮೋಸ ಮಾಡಿ ಮತ ಹಾರಿಸಿಕೊಂಡಿರುವ ದೂರು ನೀಡಿದ್ದೇವೆ ಎಂದರು.
ಹಾಸನ: ಚುನಾವಣಾ ಆಯೋಗಕ್ಕೆ ಹಾಸನ ಡಿಸಿ ಬರೆದ ಪತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಅಪೂರ್ಣ ಅಫಿಡವಿಟ್ ಸಲ್ಲಿಕೆ ಆರೋಪ ಪ್ರಕರಣದಲ್ಲಿ ಪಾರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಎ. ಮಂಜು ಅವರು ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಕೆಯ ವೇಳೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಇದರ ಬಗ್ಗೆ ತನಿಖೆ ಆಗಬೇಕು ಎಂದು ಚುನಾವಣೆ ಅಯೋಗಕ್ಕೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಪ್ರಜಾ ಪ್ರಾತಿನಿಧ್ಯ ಕಾಯಿದೆ 1951 ಕಲಂ 125ಚಿ ಪ್ರಕಾರ ಕ್ರಮ ಕೈಗೊಳ್ಳುವಂತೆ ಚುನಾವಣೆ ಆಯೋಗ ಹಾಸನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಪತ್ರ ಬರೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ಉತ್ತರ ನೀಡಿರುವ ಡಿಸಿ ಚುನಾವಣಾ ಆಯೋಗದ ನಿರ್ದೇಶನಗಳನ್ನೇ ಉಲ್ಲೇಖಿಸಿ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವುದು ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಫಿಡವಿಟ್‍ನಲ್ಲಿ ತಪ್ಪು ಮಾಹಿತಿ ಬಗ್ಗೆ ಚುನಾವಣಾ ಅಧಿಕಾರಿ ನೇರ ಕ್ರಮ ಅಸಾಧ್ಯ. ಈ ಬಗ್ಗೆ ದೂರುದಾರರೇ ಸೂಕ್ತ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು ಎಂದು ಮರು ಪತ್ರ ಬರೆದಿದ್ದಾರೆ.
ಅರೋಪವೇನು?
ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಪ್ರಜ್ವಲ್ ರೇವಣ್ಣ ಅವರು ಸುಳ್ಳು ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಅವರು 7 ಕೋಟಿಗೂ ಹೆಚ್ಚು ಆದಾಯ ತೋರಿಸಿದ್ದಾರೆ. ಆದರೆ ಕೇವಲ ಮೂರು ಕೋಟಿಯಷ್ಟು ಆದಾಯದ ಮೂಲ ತೋರಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು 23 ಲಕ್ಷ ಪ್ರಜ್ವಲ್‍ಗೆ ಸಾಲ ನೀಡಿರೋದಾಗಿ ಹೇಳಿದ್ದಾರೆ. ಆದರೆ ಪ್ರಜ್ವಲ್ ಅಫಿಡವಿಟ್‍ನಲ್ಲಿ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಎ. ಮಂಜು ಆರೋಪಿಸಿದ್ದರು.
ಬೆಂಗಳೂರು/ಹಾಸನ: ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಎದುರಾಗಿದೆ. ಸುಳ್ಳು ಅಫಿಡವಿಟ್ ಸಲ್ಲಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.
ಸುಳ್ಳು ಅಫಿಡವಿಟ್ ಬಗ್ಗೆ ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೆ ಹಾಸನದಲ್ಲಿರೋ ಕಲ್ಯಾಣ ಮಂಟಪ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಳಿ ಪಡೆದಿರೋ ಸಾಲದ ಬಗ್ಗೆ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ಇದೀಗ ಈ ಬಗ್ಗೆ ಸಮಗ್ರ ವರದಿ ನೀಡುವಂತೆ ಹಾಸನ ಚುನಾವಣಾ ಅಧಿಕಾರಿಗೆ ಆಯೋಗ ಸೂಚನೆ ನೀಡಿದೆ.
ಅಫಿಡವಿಟ್ ನಲ್ಲಿ ಪ್ರಜ್ವಲ್ 7 ಕೋಟಿಗೂ ಹೆಚ್ಚು ಆದಾಯ ತೋರಿಸಿದ್ದಾರೆ. ಆದರೆ ಕೇವಲ ಮೂರು ಕೋಟಿಯಷ್ಟು ಮಾತ್ರ ಆದಾಯದ ಮೂಲ ತೋರಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು 23 ಲಕ್ಷ ರೂ. ಪ್ರಜ್ವಲ್ ಗೆ ಸಾಲ ನೀಡಿರೋದಾಗಿ ಹೇಳಿದ್ದಾರೆ. ಆದರೆ ಪ್ರಜ್ವಲ್ ಅಫಿಡವಿಟ್ ನಲ್ಲಿ ಆ ಮಾಹಿತಿ ಹಾಕಿಲ್ಲ ಎಂದು ಎ ಮಂಜು ಆರೋಪಿಸಿದ್ದಾರೆ.
ಪ್ರಜ್ವಲ್ ಅಫಿಡವಿಟ್ ನಲ್ಲಿ ಗಂಭೀರ ಲೋಪವಾಗಿದೆ. ಅದಕ್ಕೆ ತಕ್ಕ ಬೆಲೆ ತರಬೇಕಾಗುತ್ತದೆ. ಈಗಾಗಲೇ ಈ ವಿಚಾರ ಚನಾವಣಾ ಆಯೋಗದಲ್ಲಿ ಸಾಬೀತಾಗುತ್ತದೆ. ದೇಶದಲ್ಲೇ ಇದು ದೊಡ್ಡ ಪ್ರಕರಣ ಆಗಲಿದೆ ಎಂದು ಎ ಮಂಜು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಜೆಡಿಎಸ್ ಮುಖಂಡ ವಿಶ್ವನಾಥ್ ಹಾಗೂ ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜಟಾಪಟಿ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹಾಗೂ ಜೆಡಿಎಸ್‍ನ ಪ್ರಮುಖ ನಾಯಕರು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವನಾಥ್ ಅವರು ಸುಮ್ಮನೆ ಹೇಳಿಕೆ ನೀಡಲ್ಲ ಎಂದು ಅವರು ಹೇಳಿದರು.
ಹರದನಹಳ್ಳಿ ದೇವೇಗೌಡರ ಅಡ್ಡಾದಲ್ಲಿ ಈಗ ಕದನ ಕುತೂಹಲ. ದೇಶಕ್ಕೆ ಪ್ರಧಾನಿಮಂತ್ರಿಯನ್ನ ಕಾಣಿಕೆಯಾಗಿ ಕೊಟ್ಟ ಜಿಲ್ಲೆಯಲ್ಲೀಗ ರಾಜಕೀಯ ಕಾಳಗ ಪಲ್ಲಟವಾಗಿದೆ. ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಗಳನ್ನ ಹೊಂದಿರುವ ಹಾಸನದಲ್ಲಿ ಹೇಮಾವತಿ ಜೀವ ನದಿ. ಈ ಹೇಮಾವತಿಯ ಒಡಲಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಗೌಡರ ರಾಜಕೀಯ ಗಾಲಿಯೂ ಉರುಳಿ ಹೋಗಿದೆ.
5 ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಗೌಡರು 6ನೇ ಬಾರಿ ಹಾಸನದಿಂದ ಸ್ಪರ್ಧಿಸದೇ ತುಮಕೂರಿಗೆ ಹೋಗಿದ್ದಾರೆ. ಮೊಮ್ಮಗ ಪ್ರಜ್ವಲ್ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ರಾಜಕೀಯ ಭವಿಷ್ಯದ ಕಡೇ ಆಟವನ್ನೇ ಸವಾಲಿಗಿಟ್ಟಿದ್ದಾರೆ ದೊಡ್ಡ ಗೌಡರು. ಕಳೆದ ಬಾರಿ ದೇವೇಗೌಡರ ವಿರುದ್ಧವೇ ತೊಡೆತಟ್ಟಿದ್ದ ಎ.ಮಂಜು ಈ ಬಾರಿ ಮೊಮ್ಮಗನ ವಿರುದ್ಧವೂ ತೊಡೆ ತಟ್ಟಿದ್ದಾರೆ. ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಬಿಜೆಪಿಯಿಂದ ಅಖಾಡಕ್ಕಿಳಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದರೂ, ಎರಡು ಕಡೆ ಕಮಲ ಅರಳಿರುವುದರಿಂದ ಏನೂ ಬೇಕಾದರೂ ಆಗಬಹುದು. ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದ್ದರೂ, ಅಹಿಂದ ಮತಗಳನ್ನು ಪಡೆದರೂ ಸಾಕು ಅಭ್ಯರ್ಥಿ ಸುಲಭವಾಗಿ ಗೆದ್ದು ಬಿಡಬಹುದು.
ಹಾಸನ ಕ್ಷೇತ್ರದ ಮತದಾರರು: 16,29,587 ಒಟ್ಟು ಮತದಾರರನ್ನು ಹಾಸನ ಲೋಕ ಅಖಾಡ ಹೊಂದಿದೆ. ಇದರಲ್ಲಿ 8,07,188 ಮಹಿಳಾ ಮತದಾರರು ಮತ್ತು 8,22,399 ಪುರುಷ ಮತದಾರರಿದ್ದಾರೆ. ಒಕ್ಕಲಿಗ ಸಮುದಾಯ 5 ಲಕ್ಷ, ಎಸ್‍ಸಿ+ಎಸ್‍ಟಿ ಸಮುದಾಯ 3 ಲಕ್ಷ, ಲಿಂಗಾಯಿತ ಸಮುದಾಯ 2.50 ಲಕ್ಷ, ಮುಸ್ಲಿಂ ಸಮುದಾಯ 2 ಲಕ್ಷ, ಕುರುಬ ಸಮುದಾಯ 1.50 ಲಕ್ಷ ಮತ್ತು ಇತರೆ ಸಮುದಾಯ 2 ಲಕ್ಷ ಮಂದಿ ಇದ್ದಾರೆ.
2014ರ ಫಲಿತಾಂಶ: 2014ರ ಲೋಕ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ದೇವೇಗೌಡರು 1,00,462(8.76%) ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ವಿರುದ್ಧ ಗೆಲುವು ಕಂಡಿದ್ದರು. ದೇವೇಗೌಡರು 5,09,841 (44.47%), ಎ.ಮಂಜು 4,09,378 (35.67%) ಮತ್ತು ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 (14.44%) ಮತಗಳನ್ನು ಪಡೆದುಕೊಂಡಿದ್ದರು.
ಜೆಡಿಎಸ್ ಪ್ರಾಬಲ್ಯ: ಹಾಸನ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 6 ಕ್ಷೇತ್ರದಲ್ಲಿ ಜೆಡಿಎಸ್ ಮತ್ತು 2 ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಹಾಸನ-ಪ್ರೀತಂಗೌಡ(ಬಿಜೆಪಿ), ಬೇಲೂರು – ಲಿಂಗೇಶ್(ಜೆಡಿಎಸ್), ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ(ಜೆಡಿಎಸ್), ಅರಕಲಗೂಡು – ಎ.ಟಿ.ರಾಮಸ್ವಾಮಿ (ಜೆಡಿಎಸ್), ಹೊಳೇನರಸೀಪುರ – ಹೆಚ್.ಡಿ.ರೇವಣ್ಣ(ಜೆಡಿಎಸ್), ಶ್ರವಣಬೆಳಗೊಳ – ಸಿಎನ್ ಬಾಲಕೃಷ್ಣ (ಜೆಡಿಎಸ್), ಅರಸೀಕೆg- ಶಿವಲಿಂಗೇಗೌಡ (ಜೆಡಿಎಸ್) ಮತ್ತು ಕಡೂರು- ಬೆಳ್ಳಿ ಪ್ರಕಾಶ್ (ಬಿಜೆಪಿ) ಆಯ್ಕೆಯಾಗಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು ಪ್ರಜ್ವಲ್ ರೇವಣ್ಣ : ದೇವೇಗೌಡರು ಮೊಮ್ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟ ಪರಿಣಾಮ ಪ್ರಜ್ವಲ್ ಕಣದಲ್ಲಿ ನಿಂತಿದ್ದಾರೆ.
ಪ್ಲಸ್ ಪಾಯಿಂಟ್: ಹಾಸನ ಜಿಲ್ಲೆಯ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಪಾರುಪತ್ಯ, ಹಿಡಿತವನ್ನು ಹೊಂದಿದ್ದಾರೆ. ತಂದೆ ಹೆಚ್.ಡಿ.ರೇವಣ್ಣ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕೈಗೊಂಡಿರೋ ಅಭಿವೃದ್ಧಿ ಕಾರ್ಯಗಳು ಪ್ರಜ್ವಲ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿವೆ. 6 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಹೊಂದಿದ್ದು, ಹಾಸನದಲ್ಲಿ ಯುವ ಕಾರ್ಯಕರ್ತರ ಪಡೆಯನ್ನ ಕಟ್ಟಲಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಒಟ್ಟಾಗಿ ಕಣಕ್ಕಿಳಿದಿರೋದು ಮತಗಳ ಕ್ರೋಢಿಕರಣ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಚುನಾವಣೆಗೂ ಮುನ್ನವೇ ಕಾರ್ಯಕರ್ತರೊಂದಿಗಿನ ಒಡನಾಟ ಹೊಂದಿದ್ದು ಮತ್ತೊಂದು ಪ್ಲಸ್ ಪಾಯಿಂಟ್.
ಮೈನಸ್ ಪಾಯಿಂಟ್: ಕುಟುಂಬ ರಾಜಕಾರಣದ ಆರೋಪ ಹೊತ್ತಿರುವುದರ ಜೊತೆಗೆ ರಾಜಕೀಯ ಅನುಭವದ ಕೊರತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನ ಹೊಡೆತ ನೀಡಬಹುದು. ಎ.ಮಂಜು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಆಗಿರುವ ಕಾರಣ ನೇರ ಹಣಾಹಣಿ ನಡೆಯಲಿದೆ.
ಎ.ಮಂಜು: 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಎ.ಮಂಜು ಸೋತಿದ್ದರು. ಮೈತ್ರಿ ಧರ್ಮ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಂಡಾಯದ ಬಾವುಟ ಹಾರಿಸಿ ಎ. ಮಂಜು ಬಿಜೆಪಿ ಸೇರ್ಪಡೆಗೊಂಡು ಕಮಲ ಹಿಡಿದು ಸ್ಪರ್ಧೆ ಮಾಡಿದ್ದಾರೆ.
ಪ್ಲಸ್ ಪಾಯಿಂಟ್: 2014ರಲ್ಲಿ ದೇವೇಗೌಡರ ವಿರುದ್ಧ ಸೋತ ಅನುಕಂಪದ ಅಲೆ ಕೆಲಸ ಮಾಡಬಹುದು. ಮೈತ್ರಿಯ ಸ್ಥಳೀಯ ಕಚ್ಚಾಟದ ಲಾಭ ಪಡೆಯಲು ಎ.ಮಂಜು ಪ್ರಯತ್ನಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಕಡು ವಿರೋಧಿಗಳು ಒಂದಾಗುವ ಲಕ್ಷಣಗಳು ಕಾಣುತ್ತಿವೆ. ಈ ಬಾರಿ 2 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಹೊಂದಿದ್ದು, ಮಾಜಿ ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತಿರೋದು ಎ. ಮಂಜು ಅವರಿಗೆ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಮೈನಸ್ ಪಾಯಿಂಟ್: ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿರೋದು ಮೊದಲ ಹೊಡೆತ. ಮೈತ್ರಿಯಿಂದಾಗಿ ಅಹಿಂದ ಮತಗಳು ಒಟ್ಟಾಗುವ ಆತಂಕ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಜ್ವಲ್ ಪರ ಸಚಿವರುಗಳು, ಶಾಸಕರು ದಂಡು ಪ್ರಚಾರ ನಡೆಸುತ್ತಿರೋದು. ಕಾಂಗ್ರೆಸ್ ಬಿಟ್ಟು ಕಡೇ ಕ್ಷಣದಲ್ಲಿ ಬಿಜೆಪಿಗೆ ಜಿಗಿದು ಅಭ್ಯರ್ಥಿಯಾಗಿದ್ದು ಆಂತರಿಕ ಅಸಮಾಧಾನದ ಬಿಸಿ ತಾಗುವ ಸಾಧ್ಯತೆಗಳಿವೆ.