Tag: ಎಸ್. ಮುನಿಸ್ವಾಮಿ

  • ಬಿಎಸ್‍ವೈ ಕ್ಲಾಸ್ ಬೆನ್ನಲ್ಲೇ ಯೂಟರ್ನ್ ಹೊಡೆದ ಮುನಿಸ್ವಾಮಿ

    ಬಿಎಸ್‍ವೈ ಕ್ಲಾಸ್ ಬೆನ್ನಲ್ಲೇ ಯೂಟರ್ನ್ ಹೊಡೆದ ಮುನಿಸ್ವಾಮಿ

    – ನನ್ನ ಗೆಲುವಿಗೆ ಕಾಂಗ್ರೆಸ್ ನಾಯಕರೂ ಕಾರಣ

    ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಶಾಸಕರನ್ನು ಕರೆ ತರುತ್ತೇನೆ ಅಂತ ನಾನು ಹೇಳಿಲ್ಲ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಯೂಟರ್ನ್ ಹೊಡೆದಿದ್ದಾರೆ.

    ಎಸ್.ಮುನಿಸ್ವಾಮಿ ಅವರು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರು, ಬಹಿರಂಗವಾಗಿ ನಾಯಕರು ಯಾವುದೇ ಹೇಳಿಕೆ ನೀಡಬಾರದು ಎಂದು ಎಚ್ಚರಿಕೆ ನೀಡಿದ ಬೆನ್ನಲ್ಲೇ ಮುನಿಸ್ವಾಮಿ ತಮ್ಮ ಹೇಳಿಕೆಯಿಂದ ಹಿಂದಕ್ಕೆ ಸರಿದಿದ್ದಾರೆ.

    ಬಿ.ಎಸ್.ಯಡಿಯೂರಪ್ಪನವರ ಭೇಟಿಯ ಬಳಿಕ ಮಾತನಾಡಿದ ಮುನಿಯಪ್ಪ ಅವರು, ಯಾರೋ ಕಳ್ಳರು ಸುಳ್ಳರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಮಾಜಿ ಶಾಸಕರಾದ ಸುಧಾಕರ್, ಕೊತ್ತೂರು ಮಂಜುನಾಥ್ ಮತ್ತು ಮಂಜುನಾಥಗೌಡ ಒಳ್ಳೆಯವರು. ಅಂತಹ ನಾಯಕರು ಬಿಜೆಪಿ ಸೇರುತ್ತಾರೆ. ಕೋಲಾರದಲ್ಲಿ ನಾನು ಗೆಲುವು ಸಾಧಿಸಲು ಕಾಂಗ್ರೆಸ್ ನಾಯಕರೂ ಕಾರಣ ಎಂದಷ್ಟೇ ಹೇಳಿದ್ದೇನೆ. ಆದರೆ ಅವರನ್ನೆಲ್ಲ ಬಿಜೆಪಿಗೆ ಕರೆ ತರುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪನವರಿಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ ಎಂದು ಹೇಳಿದರು.

    ಇದಕ್ಕೂ ಮುನ್ನ ಕೋಲಾರ ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ನಡೆಯಲಿವೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಲು ಜಿಲ್ಲೆಯ ಸುಮಾರು ಐದರಿಂದ ಆರು ಜನ ಶಾಸಕರನ್ನು ಕಳುಹಿಸಿಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದರು.

  • 28 ವರ್ಷಗಳಿಂದ ಜಿಲ್ಲೆಗೆ ತಟ್ಟಿರುವ ಶಾಪ ಮೇ 23 ರಂದು ಮುಕ್ತಿ – ಕೋಲಾರ ಬಿಜೆಪಿ ಅಭ್ಯರ್ಥಿ ವಿಶ್ವಾಸ

    28 ವರ್ಷಗಳಿಂದ ಜಿಲ್ಲೆಗೆ ತಟ್ಟಿರುವ ಶಾಪ ಮೇ 23 ರಂದು ಮುಕ್ತಿ – ಕೋಲಾರ ಬಿಜೆಪಿ ಅಭ್ಯರ್ಥಿ ವಿಶ್ವಾಸ

    ಕೋಲಾರ: ಜಿಲ್ಲೆಗೆ 28 ವರ್ಷಗಳಿಂದ ತಟ್ಟಿರುವ ಶಾಪ ಮೇ 23 ರಂದು ಮುಕ್ತಿಯಾಗಲಿದೆ ಎಂದು ಬಿಜೆಪಿಯ ಲೋಕಸಭಾ ಅಭ್ಯರ್ಥಿ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮೇ 23ರ ಮತ ಏಣಿಕೆಯ ಕುರಿತಂತೆ ಏಜೆಂಟ್‍ಗಳಿಗೆ ಆಯೋಜಿಸಿದ್ದ ಕಾರ್ಯಾಗಾರದ ನಂತರ ಸುದ್ದಿಗಾರ ಜೊತೆ ಮಾತನಾಡಿದ ಅವರು, ಜಿಲ್ಲೆಗೆ 28 ವರ್ಷಗಳಿಂದ ಕೆ.ಎಚ್.ಮುನಿಯಪ್ಪ ಅವರಿಂದ ತಟ್ಟಿರುವ ಶಾಪ ಇನ್ನೆರೆಡು ದಿನಗಳಲ್ಲಿ ವಿಮೋಚನೆಯಾಗಲಿದೆ ಎಂದು ಭವಿಷ್ಯ ನುಡಿದರು.

    ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ, ಅದೇ ರೀತಿ ಕೋಲಾರ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ. ಚುನಾವಣೆ ಮುಗಿದ ಮೇಲೂ ಸಹ ಜಿಲ್ಲೆಯ ಜನರ ಜೊತೆ ಇದ್ದೇನೆ. ಮುಂದೆಯೂ ಸಹ ಜಿಲ್ಲೆಯಲ್ಲೇ ಇರುತ್ತೇನೆ. ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಎಲ್ಲಾ ಪಕ್ಷದ ಮುಖಂಡರು ಪಕ್ಷಾತೀತವಾಗಿ ಮತ ಹಾಕಿಸಿರುವುದರಿಂದ ಲಕ್ಷ ಮತಗಳ ಅಂತರದಿಂದ ಗೆಲುತ್ತೇವೆ ಎಂದರು.

    ಬಂಗಾರಪೇಟೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರರೆಡ್ಡಿ ಅವರು ಯಾವುದೇ ರೀತಿಯ ತುಘಲಕ್ ದರ್ಬಾರ್ ಮಾಡದೇ ಪ್ರಜಾ ಪ್ರಭುತ್ವದಲ್ಲಿ ಮುಕ್ತವಾಗಿ ಚುನಾವಣೆ ಮಾಡಬೇಕು. ಅದು ಬಿಟ್ಟು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಹಣದ ಆಮಿಷ ಬೆದರಿಕೆ ಹಾಕಿರುವುದು ಗೌರವ ತರುವಂತಹ ವಿಷಯವಲ್ಲವೆಂದು ವಾಗ್ದಾಳಿ ನಡೆಸಿದರು. ಇದೇ ವೇಳೆ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಅವರು ತಮ್ಮ ಅಧಿಕಾರವಧಿಯಲ್ಲಿ ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

  • ಕೋಲಾರ: ಬಿಜೆಪಿಯಿಂದ ಎಸ್.ಮುನಿಸ್ವಾಮಿ ಅಚ್ಚರಿ ಆಯ್ಕೆ

    ಕೋಲಾರ: ಬಿಜೆಪಿಯಿಂದ ಎಸ್.ಮುನಿಸ್ವಾಮಿ ಅಚ್ಚರಿ ಆಯ್ಕೆ

    ಕೋಲಾರ: 2019 ಲೋಕಾಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋಲಾರ ಕ್ಷೇತ್ರಕ್ಕೆ ಅಚ್ಚರಿಯ ಆಯ್ಕೆಯಾಗಿ ಎಸ್.ಮುನಿಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

    ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಯಲುವಗುಳಿ ಗ್ರಾಮದ ಮೂಲದವಾಗಿರುವ ಮುನಿಯಪ್ಪ ಅವರು, ಸದ್ಯ ಬೆಂಗಳೂರು ಮಹದೇವಪುರ ಕ್ಷೇತ್ರದ ಆಡುಗೋಡಿ ಬಿಬಿಎಂಪಿ ಸದಸ್ಯರಾಗಿದ್ದಾರೆ. ಪರಿಶಿಷ್ಟ ಜಾತಿ (ಬಲಗೈ) ಸಮುದಾಯದಯಕ್ಕೆ ಸೇರಿದ್ದಾರೆ.

    ಕೋಲಾರ ಕ್ಷೇತ್ರದಿಂದ ಬಿಜೆಪಿಗೆ ಟಿಕೆಟ್‍ಗೆ ಮೂವರಿಗಿಂತ ಹೆಚ್ಚಿನ ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಛಲವಾದಿ ನಾರಾಯಣಸ್ವಾಮಿ, ಡಿಎಸ್ ವೀರಯ್ಯ ಅವರ ಹೆಸರು ಟಿಕೆಟ್ ರೇಸ್‍ನಲ್ಲಿ ಕೇಳಿ ಬಂದಿತ್ತು. ಸದ್ಯ ರಾಜ್ಯ ನಾಯಕರಿಗೆ ಶಾಕ್ ನೀಡಿರುವ ಬಿಜೆಪಿ ಹೈಕಮಾಂಡ್ ಎಸ್.ಮುನಿಸ್ವಾಮಿ ಅವರ ಹೆಸರನ್ನು ಅಧಿಕೃತಗೊಳಿಸಿದೆ.

    ಕೋಲಾರ ಎಸ್‍ಸಿ ಮೀಸಲು ಕ್ಷೇತ್ರವಾಗಿದ್ದು, ಹಾಲಿ ಸಂಸದ ಕೆಎಚ್ ಮುನಿಯಪ್ಪ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲೇ ಶಾಸಕರು ಬಂಡಾಯ ಭಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ನಲ್ಲೇ ವಿರೋಧಿ ಬಣ ನಿರ್ಮಾಣ ಆಗಿರುವುದರಿಂದ ಟಿಕೆಟ್‍ಗಾಗಿ ತಿಕ್ಕಾಟ ಆರಂಭವಾಗಿದೆ. ಅಲ್ಲದೇ ಚುನಾವಣೆಯ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಕೆಲ ಮುಖಂಡರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದರು.

    2014ರ ಲೋಕಸಭಾ ಚುನಾವಣೆಯಲ್ಲಿ 4,18,926 ಮತ ಪಡೆದಿದ್ದ ಕೆಎಚ್ ಮುನಿಯಪ್ಪ ಎದುರಾಳಿ ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ ಅವರ ವಿರುದ್ಧ 47,850 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಕೋಲಾರ ಕೇಶವ 3,71,076 ಮತಗಳು ಗಳಿಸಿದ್ದರು.