Tag: ಎಸ್.ಪಿ ಬಾಲಸುಬ್ರಹ್ಮಣ್ಯಂ

  • ಕೊರೊನಾ ಮಣಿಸಿದ ಎಸ್‍ಪಿಬಿ- ಆರೋಗ್ಯದಲ್ಲಿ ಚೇತರಿಕೆ

    ಕೊರೊನಾ ಮಣಿಸಿದ ಎಸ್‍ಪಿಬಿ- ಆರೋಗ್ಯದಲ್ಲಿ ಚೇತರಿಕೆ

    – ಕ್ರಿಕೆಟ್, ಫುಟ್‍ಬಾಲ್ ಮ್ಯಾಚ್ ವೀಕ್ಷಣೆ
    – ಎಸ್‍ಪಿಬಿ ಪುತ್ರ ಚರಣ್ ಮಾಹಿತಿ

    ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಕಳೆದ ವಾರಕ್ಕಿಂತ ಈ ವಾರ ತುಂಬಾ ಸುಧಾರಣೆಯಾಗಿದೆ ಎಂದು ಎಸ್‍ಪಿಬಿ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.

    ತಂದೆಯ ಆರೋಗ್ಯದ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ಇಷ್ಟು ದಿನ ಅಪ್‍ಡೇಟ್ ನೀಡದ್ದಕ್ಕೆ ದಯವಿಟ್ಟು ಕ್ಷಮಿಸಿ, ವೀಕೆಂಡ್ ಬಳಿಕ ನಮಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಅವರ ಲಂಗ್ಸ್‍ನಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಆದರೆ ಇನ್ನೂ ಹೆಚ್ಚಿನ ಸುಧಾರಣೆಯಾಗಬೇಕಿರುವುದರಿಂದ ವೆಂಟಿಲೇಟರ್‍ನಲ್ಲಿಯೇ ಇಡಲಾಗಿದೆ. ಖುಷಿಯ ವಿಚಾರ ಎಂಬಂತೆ ಅವರ ಕೋವಿಡ್-19 ವರದಿ ನೆಗೆಟಿವ್ ಬಂದಿದೆ. ಆದರೆ ಕೋವಿಡ್ ವರದಿ ನೆಗೆಟಿವ್ ಪಾಸಿಟಿವ್ ಏನೇ ಇರಲಿ ನಮಗೀಗ ಶ್ವಾಸಕೋಶಗಳು ಬೇಗನೇ ಗುಣಮುಖವಾಗಬೇಕಿದೆ ಎಂದು ತಿಳಿಸಿದ್ದಾರೆ.

    ಶ್ವಾಸಕೋಶಗಳು ಗುಣಮುಖವಾಗುತ್ತಿವೆ. ಆದರೆ ಕೆಲ ಸಮಯವನ್ನು ತೆಗೆದುಕೊಳ್ಳುತ್ತವೆ. ಮತ್ತೊಂದು ವಿಚಾರವೆಂದರೆ ನಮ್ಮ ತಂದೆ, ತಾಯಿಯ ವಿವಾಹ ವಾರ್ಷಿಕೋತ್ಸವವನ್ನು ಕಳೆದ ವಾರ ಸರಳವಾಗಿ ಸೆಲೆಬ್ರೇಟ್ ಮಾಡಿದ್ದೇವೆ. ತಂದೆಯವರು ಅವರ ಐ ಪ್ಯಾಡ್‍ನಲ್ಲಿಯೇ ಕ್ರಿಕೆಟ್ ಹಾಗೂ ಟೆನ್ನಿಸ್ ವೀಕ್ಷಿಸುತ್ತಿದ್ದಾರೆ. ಐಪಿಎಲ್ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಅಲ್ಲದೆ ಬರವಣಿಗೆ ಹಾಗೂ ಮಾತನಾಡುವುದನ್ನು ಮಾಡುತ್ತಿದ್ದಾರೆ. ಫಿಸಿಯೋಥೆರಪಿಯನ್ನು ಸಹ ಮಾಡಲಾಗುತ್ತಿದೆ. ನಿಮ್ಮೆಲ್ಲರ, ಪ್ರೀತಿ, ಕಾಳಜಿ, ಪ್ರಾರ್ಥನೆಗೆ ಧನ್ಯವಾದಗಳು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

     

    View this post on Instagram

     

    A post shared by S. P. Charan/Producer/Director (@spbcharan) on

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಆಗಸ್ಟ್ 24ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.

  • ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ- ಐಸಿಯುನಲ್ಲಿ ಚಿಕಿತ್ಸೆ

    ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ- ಐಸಿಯುನಲ್ಲಿ ಚಿಕಿತ್ಸೆ

    ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ತಿಳಿಸಿದೆ.

    ಎಸ್‍ಪಿಬಿ ಆರೋಗ್ಯ ಸ್ಥಿತಿಗತಿ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಎಂಜಿಎಂ ಹೆಲ್ತ್ ಕೇರ್, ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಆಗಸ್ಟ್ 5ರಂದು ಎಂಜಿಎಂ ಹೆಲ್ತ್ ಕೇರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತಜ್ಞ ವೈದ್ಯರ ತಂಡದ ಅವರ ಆರೈಕೆ ಮಾಡುತ್ತಿದೆ. ಅವರ ಸಲಹೆ ಮೇರೆಗೆ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.

    ಈಗಲೂ ಅವರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಅವರ ಆರೋಗ್ಯದ ಕುರಿತು ನಿಗಾ ವಹಿಸಿದ್ದಾರೆ. ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

    ಆಗಸ್ಟ್‌ 5ರಂದು ಶೀತ ಮತ್ತು ಜ್ವರ ಕಾಣಿಸಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದರಿಂದ ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆಯಿಂದ ಅವರಿಗೆ ಕೋವಿಡ್‌–19 ಸೋಂಕಿನ ಲಕ್ಷಣಗಳಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಕ್ವಾರಂಟೈನ್‌ ಆಗುವಂತೆ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬದ ಸದಸ್ಯರ ಸಲಹೆ ಮೇರೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

    ವಿಡಿಯೋ ಬಿಡುಗಡೆ ಮಾಡಿದ್ದ ಎಸ್‌ಪಿಬಿ ಕಳೆದ ಎರಡು– ಮೂರು ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಶೀತ ಮತ್ತು ಜ್ವರ ಕೂಡ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿಗೆ ಚಿಕಿತ್ಸೆ ಪಡೆಯಲು ಮುಂದಾದೆ. ಪರೀಕ್ಷೆಯ ಬಳಿಕ ಕೊರೊನಾ ಸೋಂಕು ಸಣ್ಣ ಪ್ರಮಾಣದಲ್ಲಿರುವುದು ಗೊತ್ತಾಯಿತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದರು. ಆದರೆ ಕುಟುಂಬದ ಸದಸ್ಯರು ಒಪ್ಪದ ಕಾರಣ ಆಸ್ಪತ್ರೆಗೆ ದಾಖಲಾದೆ. ನನ್ನ ಆರೋಗ್ಯದ ಬಗ್ಗೆ ಯಾರೊಬ್ಬರು ಚಿಂತಿಸಬೇಕಿಲ್ಲ. ನನ್ನ ಆರೋಗ್ಯ ವಿಚಾರಿಸಲು ಮೊಬೈಲ್ ಕಾಲ್‌ ಮಾಡಬೇಡಿ. ಕಾಲ್‌ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಶೀತದ ಹೊರತಾಗಿ ನಾನು ಚೆನ್ನಾಗಿದ್ದೇನೆ. ಜ್ವರವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗುತ್ತೇನೆ ಎಂದು ಹೇಳಿದ್ದರು.

    ಜುಲೈನಲ್ಲಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿ ವೈರಮುತ್ತು ರಚಿಸಿದ್ದ ಹಾಡಿಗೆ ಧ್ವನಿ ನೀಡಿದ್ದರು.

  • ಬಹುಭಾಷಾ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂಗೆ ಕೊರೊನಾ ಪಾಸಿಟಿವ್

    ಬಹುಭಾಷಾ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂಗೆ ಕೊರೊನಾ ಪಾಸಿಟಿವ್

    – ಶೀಘ್ರ ಚೇತರಿಕೆಗೆ ಶ್ರೀರಾಮುಲು ಹಾರೈಕೆ

    ಚೆನ್ನೈ: ಬಹುಭಾಷಾ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಗಾಯಕರೇ ತಿಳಿಸಿದ್ದು, ಆರೋಗ್ಯದ ಬಗ್ಗೆ ಯಾರೂ ಆತಂಕ ಪಡಬೇಡಿ ಎಂದು ಹೇಳಿದ್ದಾರೆ.

    ಈ ಸಂಬಂಧ ಆಸ್ಪತ್ರೆಯಿಂದಲೇ ಫೇಸ್ಬುಕ್ ವಿಡಿಯೋ ಮಾಡಿರುವ ಗಾಯಕ, ಜ್ವರ, ಶೀತ ಹಾಗೂ ಎದೆನೋವು ಕಾಣಿಸಿಕೊಂಡಿದ್ದು, ಹೀಗಾಗಿ ಕೊರೊನಾ ಟೆಸ್ಟ್ ಮಾಡಿಸಿಕೊಂಡೆ. ಈ ವೇಳೆ ವರದಿ ಪಾಸಿಟಿವ್ ಎಂದು ಬಂದಿದೆ. ವೈದ್ಯರು ಮನೆಯಲ್ಲೇ ಐಸೋಲೇಟ್ ಆಗಲು ತಿಳಿಸಿದರು. ಆದರೆ ನಾನು ಚೈಲೂಮೇಡುನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.

    ಸದ್ಯ ಜ್ವರ ಕಡಿಮೆಯಾಗಿದ್ದು, ಸ್ವಲ್ಪ ಶೀತ ಇದೆ. ಇನ್ನೇನು ಎರಡು ದಿನದಲ್ಲಿ ಕಡಿಮೆಯಾಗಬಹುದು. ಸದ್ಯ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದು, ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ತನ್ನ ಸಂಪರ್ಕದಲ್ಲಿದ್ದವರನ್ನು ಈ ಕೂಡಲೇ ಪರೀಕ್ಷೆ ಮಾಡಿಕೊಳ್ಳಲು ವಿನಂತಿಸಿಕೊಂಡಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದಾಗಿ ಎಸ್‍ಪಿಬಿ ತಿಳಿಸಿದ್ದಾರೆ.

    ಗಾಯಕರಿಗೆ ಕೊರೊನಾ ಬಂದಿರುವ ವಿಚಾರವಾಗಿ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ, ಬಹುಭಾಷಾ ಗಾಯಕರಾದ ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮದ್ರಾಸಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಆರೋಗ್ಯದ ಕುರಿತು ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ. ನಮ್ಮೆಲ್ಲರ ಪ್ರೀತಿಯ ಗಾಯಕ, ಶ್ರೀಯುತ ಎಸ್ ಪಿಬಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಅಂತ ಸಚಿವರು ಬರೆದುಕೊಂಡಿದ್ದಾರೆ.

  • ಕಷ್ಟದಲ್ಲಿದ್ದ ಕಲಾವಿದನ ಸಹಾಯಕ್ಕೆ ಬಂದ ಎಸ್‍ಪಿ ಬಾಲಸುಬ್ರಹ್ಮಣ್ಯಂ

    ಕಷ್ಟದಲ್ಲಿದ್ದ ಕಲಾವಿದನ ಸಹಾಯಕ್ಕೆ ಬಂದ ಎಸ್‍ಪಿ ಬಾಲಸುಬ್ರಹ್ಮಣ್ಯಂ

    ರಾಯಚೂರು: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಕಷ್ಟದಲ್ಲಿದ್ದ ರಾಯಚೂರಿನ ಸಂಗೀತ ಕಲಾವಿದನಿಗೆ ಸಹಾಯ ಮಾಡಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಯಚೂರಿನ ತತ್ವಪದ ಗಾಯಕ ದಾದಪೀರ್ ಮಂಜರ್ಲಾಗೆ ಅಗತ್ಯ ವಸ್ತುಗಳ ಕಿಟ್ ನೀಡಿ ಸಹಾಯ ಹಸ್ತ ಚಾಚಿದ್ದಾರೆ. ಈ ಹಿಂದೆ ಕಲಾವಿನೊಂದಿಗೆ ಸಂಪರ್ಕದಲ್ಲಿದ್ದ ಎಸ್.ಪಿ.ಬಾಲಸುಬ್ರಮಣ್ಯಂ ಕಲಾವಿದ ದಾದಪೀರ್ ಕಷ್ಟದಲ್ಲಿದ್ದಾರೆ ಎಂದು ತಿಳಿದು ತಾವೇ ಕಿಟ್ ಕಳುಹಿಸಿಕೊಟ್ಟಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ದಾದಾಪೀರ್ ಮಂಜರ್ಲಾಗೆ ಸ್ಥಳೀಯ ಕಲಾವಿದರು, ಅಭಿಮಾನಿಗಳು ಧನಸಹಾಯ ಮಾಡಿ ಚಿಕಿತ್ಸೆಗೆ ಸಹಕಾರಿಯಾಗಿದ್ದಾರೆ. ಈಗ ಸಂಪೂರ್ಣ ಗುಣಮುಖರಾಗಿರುವ ದಾದಾಪೀರ್ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದ್ದಾರೆ.

  • ಜಯಂತ್ ಕಾಯ್ಕಿಣಿ ವಿರಚಿತ ಕೊರೊನಾ ಜಾಗೃತಿ ಗೀತೆಗೆ ಎಸ್‍ಪಿಬಿ ಧ್ವನಿ

    ಜಯಂತ್ ಕಾಯ್ಕಿಣಿ ವಿರಚಿತ ಕೊರೊನಾ ಜಾಗೃತಿ ಗೀತೆಗೆ ಎಸ್‍ಪಿಬಿ ಧ್ವನಿ

    ಬೆಂಗಳೂರು: ಮಹಾಮಾರಿ ಕೊರೊನಾ ಓಡಿಸಲು ದೇಶಾದ್ಯಂತ ಶತ ಪ್ರಯತ್ನ ನಡೆಯುತ್ತಿದ್ದು, ಚಿತ್ರರಂಗದ ಹಲವರು ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ ಸಿನಿಮಾ ಕಾರ್ಮಿಕರಿಗೆ ಹಾಗೂ ಸರ್ಕಾರಕ್ಕೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ಸಿನಿಮಾ ಗೀತೆ ರಚನೆಕಾರರು ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಅವರು ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ.

    ಹಲವು ನಟ, ನಟಿಯರು ವಿವಿಧ ಬಗೆಯಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅದರಂತೆ ಜಯಂತ್ ಕಾಯ್ಕಿಣಿ ಸಹ ಗೀತೆ ರಚಿಸುವ ಮೂಲಕ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಗೀತೆಯನ್ನು ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಜಯಂತ್ ಕಾಯ್ಕಿಣಿಯವರು ಕೇವಲ ಸಾಹಿತ್ಯ, ಸಿನಿಮಾ ಗೀತೆ ರಚಿಸುವುದು ಮಾತ್ರವಲ್ಲ, ಸಮಾಜದ ಆಗುಹೋಗಗಳ ಕುರಿತು ಸಹ ಆಗಾಗ ಪ್ರತಿಕ್ರಿಯಸುತ್ತಿರುತಾರೆ. ಹಲವು ಸಂದರ್ಭಗಳಲ್ಲಿ ವಿವಿಧ ಸಲಹೆಗಳನ್ನು ಸಹ ನೀಡುತ್ತಾರೆ. ಇನ್ನೂ ಹಲವು ಬಾರಿ ಅವರ ಗೀತೆಗಳ ಮೂಲಕವೇ ಜನರಲ್ಲಿ ಅರಿವು ಮೂಡಿಸುತ್ತಾರೆ. ಅದರಂತೆ ಇದೀಗ ಕೊರೊನಾ ಬಗ್ಗೆ ಜಾಗೃತಿ ಗೀತೆಯನ್ನು ರಚಿಸಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದಾರೆ. ಹೀಗಾಗಿ ಈ ಹಾಡಿಗೆ ಮಹತ್ವ ಇನ್ನೂ ಹೆಚ್ಚಾಗಿದೆ.

    ಸಾಮಾಜಿಕ ಜಾಲತಾಣ ಫೆಸ್ಬುಕ್‍ನಲ್ಲಿ ಹಲವರು ಈ ಕುರಿತು ಕಮೆಂಟ್ ಮಾಡಿದ್ದು, ತುಂಬಾ ಚೆನ್ನಾಗಿ ಹಾಡಿದ್ದೀರಿ ಸರ್, ಜಯಂತ್ ಕಾಯ್ಕಿಣಿಯವರು ಅರ್ಥಗರ್ಭಿತವಾಗಿ ಸಾಹಿತ್ಯ ಬರೆದಿದ್ದಾರೆ. ನೀವೂ ಅದಕ್ಕೆ ನ್ಯಾಯ ಒದಗಿಸಿದ್ದೀರಿ. ಕೇಳಲು ತುಂಬಾ ಚೆನ್ನಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

    ಮತ್ತೊಬ್ಬರು ಕಮೆಂಟ್ ಮಾಡಿ ಜಯಂತ್ ಕಾಯ್ಕಿಣಿಯವರು ತುಂಬಾ ಚೆನ್ನಾಗಿ ಹಾಡು ಬರೆದಿದ್ದಾರೆ. ನೀವು ಸಹ ಅಚ್ಚುಕಟ್ಟಾಗಿ ಹಾಡಿದ್ದೀರಿ. ನೀವು ಹಾಡಿದ ಪವನಿಸು ಪರಮಾತ್ಮ ಶ್ರೀ ವೆಂಕಟೇಶ ನನ್ನ ನೆಚ್ಚಿನ ಗೀತೆ ಎಂದಿದ್ದಾರೆ.

    ಇನ್ನೊಬ್ಬರು ಕಮೆಂಟ್ ಮಾಡಿ, ಅರ್ಥಗರ್ಭಿತ ಸಾಹಿತ್ಯ, ನೀವೂ ತುಂಬಾ ಚೆನ್ನಾಗಿ ಹಾಡಿದ್ದೀರಿ. ಒಳ್ಳೆಯ ಸಂದೇಶವಿದೆ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಎಸ್‍ಪಿಬಿ ಸರ್ ಎಂದು ಕಮೆಂಟ್ ಮಾಡಿದ್ದಾರೆ.

  • ಫೆ.1ರಂದು ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ. ಎಸ್‍ಪಿಬಿಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ

    ಫೆ.1ರಂದು ಹಿನ್ನೆಲೆ ಗಾಯಕ, ಪದ್ಮಭೂಷಣ ಡಾ. ಎಸ್‍ಪಿಬಿಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ

    ಬೆಳಗಾವಿ: ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮೀಜಿಯ 15ನೇ ಪುಣ್ಯಸ್ಮರಣೋತ್ಸವ ಹಾಗೂ 15ನೇ ಶರಣ ಸಂಸ್ಕೃತಿ ಉತ್ಸವ ಸಮಾರಂಭ ಫೆ.1ರಿಂದ 4ರವರೆಗೆ ನಗರದ ಶೂನ್ಯ ಸಂಪಾದನ ಮಠದಲ್ಲಿ ಅತೀ ವಿಜೃಂಭಣೆಯಿಂದ ಜರುಗಲಿದೆ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ ಹೇಳಿದರು.

    ಸಮಿತಿಯ ಅಧ್ಯಕ್ಷ ಈರಣ್ಣಾ ಕಡಾಡಿ ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ 15ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ನಿಮಿತ್ಯ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಫೆ. 1ರಂದು ಸಂಜೆ 5 ಗಂಟೆಗೆ ಶ್ರೀಮಠದಿಂದ ನೀಡುವ 1 ಲಕ್ಷ ನಗದು, ಪ್ರಶಸ್ತಿ ಪತ್ರ ಒಳಗೊಂಡ ಕಾಯಕಶ್ರೀ ಪ್ರಶಸ್ತಿಗೆ ಈ ಬಾರಿ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನೀಡಿ ಗೌರವಿಸಲಾಗುವುದು.

    ಮುಂಜಾನೆ ನಗರದ ವಿದ್ಯಾರ್ಥಿಗಳಿಂದ ಅರಿವು, ಶಿಕ್ಷಣ, ಆರೋಗ್ಯ ಕಾಲ್ನಡಿಗೆ ಜಾಥಾ ಜರುಗಲಿದ್ದು, ನಂತರ ಘಟಸ್ಥಲ ಧ್ವಜಾರೋಹಣ ನಡೆಯಲಿದೆ. ಸಂಜೆ 6 ಗಂಟೆಗೆ ರೈತ ಸಮಾವೇಶ ಜರುಗಲಿದ್ದು, ಸಮಾವೇಶವನ್ನು ಐಎಎಸ್ ಅಧಿಕಾರಿ ಡಾ. ಅಶೋಕ ದಳವಾಯಿ ಉದ್ಘಾಟಿಸುವರು. ದಿವ್ಯ ಸಾನಿಧ್ಯವನ್ನು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಹಾಗೂ ಬೆಳಗಾವಿ ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ ವಹಿಸುವರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ನಡೆಯಲಿದೆ ಎಂದರು.

    ಫೆ. 2ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಮಾವೇಶ ಜರುಗಲಿದ್ದು, ಚಿತ್ರದುರ್ಗದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಮೈಸೂರಿನ ಡಾ. ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮೀಜಿ, ಕಾಗಿನೆಲೆ ಶ್ರೀ ಕನಕ ಗುರುಪೀಠದ ಜಗದ್ಗುರು ನಿರಂಜನಾಂದಪುರಿ ಮಹಾಸ್ವಾಮೀಜಿ, ಹರಿಹರದ ಜಗದ್ಗುರು ವೇಮನಾನಂದ ಮಹಾಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಹಾಗೂ ಜಗದ್ಗುರು ಬಸವಮಾಚಿದೇವ ಮಹಾಸ್ವಾಮೀಜಿ, ಹೊಸದುರ್ಗದ ಭಗೀರಥ ಗುರುಪೀಠದ ಜಗದ್ಗುರು ಡಾ, ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ, ಚಿತ್ರದುರ್ಗದ ಜಗದ್ಗುರು ಡಾ. ಬಸವಕುಮಾರ ಸ್ವಾಮೀಜಿ ಆಗಮಿಸುವರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ ಎಂದು ತಿಳಿಸಿದರು.

    ಫೆ. 3ರಂದು ಸಂಜೆ 6 ಗಂಟೆಗೆ ಶ್ರೀಮಠದಿಂದ ನೀಡುವ ಕಾಯಕಶ್ರೀ ಪ್ರಶಸ್ತಿಯನ್ನು ಮಹಿಳಾ ವಿಜ್ಞಾನಿ ಭಾರತದ ಕ್ಷಿಪಣಿ ಮಹಿಳೆ ಎಂದು ಪ್ರಸಿದ್ಧಿ ಪಡೆದ ಡಾ. ಟೆಸ್ಸಿ ಥಾಮಸ್ ಅವರಿಗೆ ನೀಡಿ ಗೌರವಿಸಲಾಗುವುದು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ. ಫೆ. 4ರಂದು ಮುಂಜಾನೆ ಶ್ರೀಮಠದ ಕರ್ತೃ ಗದ್ದುಗೆಗೆ ಅಭಿಷೇಕ ಹಾಗೂ ಬಿಲ್ವಾರ್ಚನೆ, ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಕುಂಭಮೇಳ, ಮಧ್ಯಾಹ್ನ ಮಹಾಪ್ರಸಾದ ಜರುಗಲಿದೆ.

    ಸಂಜೆ 6 ಗಂಟೆಗೆ ಯುವ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯ ಇಳಕಲ್ ವಿಜಯಮಹಾಂತೇಶ್ವರ ಮಹಾಸಂಸ್ಥಾನಮಠದ ಗುರು ಮಹಾಂತ ಮಹಾಸ್ವಾಮೀಜಿ ವಹಿಸುವರು. ಶಿಗ್ಗಾಂವದ ಶ್ರೀ ಸಂಗನಬಸವ ಸ್ವಾಮೀಜಿ, ಮಹಾಗಾಂವದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಆಗಮಿಸುವರು. ವಿಹಿಂಪ ರಾಷ್ಟ್ರ ಸೇವಕ ಗೋಪಾಲಜೀ ಇವರಿಂದ ಉಪನ್ಯಾಸ ಜರುಗಲಿದೆ. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಗೌರವ ಸನ್ಮಾನ ಜರುಗಲಿದೆ ಎಂದು ತಿಳಿಸಿದರು.

  • ಫೋನ್‌ಗಳನ್ನು ಹೊರಗಿಟ್ಟರೂ, ತಾರೆಯರು ಮೋದಿ ಜೊತೆ ಹೇಗೆ ಸೆಲ್ಫಿ ಕ್ಲಿಕ್ಕಿಸಿದ್ರು: ಎಸ್‌ಪಿಬಿ ಪ್ರಶ್ನೆ

    ಫೋನ್‌ಗಳನ್ನು ಹೊರಗಿಟ್ಟರೂ, ತಾರೆಯರು ಮೋದಿ ಜೊತೆ ಹೇಗೆ ಸೆಲ್ಫಿ ಕ್ಲಿಕ್ಕಿಸಿದ್ರು: ಎಸ್‌ಪಿಬಿ ಪ್ರಶ್ನೆ

    ನವದೆಹಲಿ: ತಮ್ಮ ಭಾವನೆಗಳನ್ನು ಬಹಿರಂಗಪಡಿಸುವ ಮೂಲಕ ಆಗಾಗ ಸುದ್ದಿಯಾಗುವ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಇದೀಗ ಫೇಸ್‌ಬುಕ್ ಪೋಸ್ಟ್ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಬಾಲಿವುಟ್ ನಟ, ನಟಿಯರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಕುರಿತು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಟ, ನಟಿಯರೊಂದಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಹ ಪ್ರಧಾನಿ ಮೋದಿಯವರ ಮನೆಗೆ ತೆರಳಿದ್ದರು. ಆಗ ತಮ್ಮನ್ನು ಇತರ ನಟರಂತೆ ಆಧರಿಸಿಲ್ಲ, ತಾರತಮ್ಯ ಎಸಗಲಾಗಿದೆ ಎಂದು ಪರೋಕ್ಷವಾಗಿ ಎಸ್‌ಪಿಬಿ ಅಸಮಾಧಾನ ಹೊರ ಹಾಕಿದ್ದಾರೆ.

    https://www.facebook.com/SPB/posts/2672550912802732

    ಎಲ್ಲರ ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ಹೊರಗೆ ತೆಗೆದುಕೊಂಡು, ಟೋಕನ್ ನೀಡಿ ಕಳುಹಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಲಿವುಡ್ ತಾರೆಯರಿಗೆ ಮಾತ್ರ ಹೇಗೆ ಮತ್ತು ಏಕೆ ಮೊಬೈಲ್ ಒಳಗೆ ಕೊಂಡೊಯ್ದು, ಸೆಲ್ಫಿ ತೆಗೆಯಲು ಅನುಮತಿ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ. ಎಸ್‌ಪಿಬಿಯವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.

    ರಾಮೋಜಿ ರಾವ್ ಅವರಿಗೆ ನಾನು ಆಭಾರಿಯಾಗಿದ್ದೇನೆ. ಏಕೆಂದರೆ ಇವರಿಂದಲೇ ನಾನು ಅಕ್ಟೋಬರ್ 29ರಂದು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಮನೆಯಲ್ಲಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ನಾನು ಹಾಜರಾಗಲು ಸಾಧ್ಯವಾಯಿತು. ಮನೆಯ ಆವರಣದೊಳಗೆ ಪ್ರವೇಶಿಸುವುದಕ್ಕೂ ಮುನ್ನ ನಮ್ಮ ಸೆಲ್‌ಫೋನ್‌ಗಳನ್ನು ಭದ್ರತಾ ಸಿಬ್ಬಂದಿ ಬಳಿ ನೀಡಲಾಯಿತು. ಇದಕ್ಕೆ ಪ್ರತಿಯಾಗಿ ಟೋಕನ್‌ಗಳನ್ನು ನೀಡಲಾಯಿತು. ಆದರೆ ಆ ದಿನ ಪ್ರಧಾನ ಮಂತ್ರಿಯೊಂದಿಗೆ ನಟ, ನಟಿಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದನ್ನು ನೋಡಿ ದಿಗ್ಬ್ರಾಂತನಾದೆ. ಥಿಂಗ್ಸ್ ದ್ಯಾಟ್ ಮೇಕ್ ಯು ಗೋ ಹೂಂ????? ಎಂಬ ಸಾಲುಗಳನ್ನು ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

    ಮಹಾತ್ಮಾ ಗಾಂಧೀಜಿಯ 150ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸಲು ಹಾಗೂ ಅಭಿಯಾನವನ್ನು ಉತ್ತೇಜಿಸಲು ‘ಚೇಂಜ್ ವಿಥಿನ್’ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಏರ್ಪಡಿಸಿದ್ದರು. ಇದರಲ್ಲಿ ಶಾರುಖ್ ಖಾನ್, ಅಮಿರ್ ಖಾನ್ ಹಾಗೂ ಚಿತ್ರೋದ್ಯಮದ ಹಲವು ಗಣ್ಯರು ಸೇರಿದಂತೆ ತಾರೆಯರು ಭಾಗವಹಿಸಿದ್ದರು.

    ದಕ್ಷಿಣ ರಾಜ್ಯಗಳ ಏಕೈಕ ಪ್ರತಿನಿಧಿಯಾಗಿ ತೆಲುಗು ನಿರ್ಮಾಪಕ ದಿಲ್ ರಾಜು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ರಾಮ್ ಚರಣ ಅವರ ಪತ್ನಿ ಹಾಗೂ ಉದ್ಯಮಿ ಉಪಾಸನಾ ಕಾಮಿನೇನಿ ಈ ಕುರಿತು ಧ್ವನಿ ಎತ್ತಿ ದಕ್ಷಿಣ ರಾಜ್ಯಗಳಿಗೆ ಮಾನ್ಯತೆ ನೀಡಿಲ್ಲ ಎಂದು ಪ್ರಶ್ನಿಸಿದ್ದರು. ಈ ಕುರಿತು ಚಿತ್ತ ಹರಿಸುವಂತೆ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದರು.

  • ಚಿನ್ನ, ಪ್ಲಾಟಿನಂಗಿಂತಲೂ ನೀರು ಅಮೂಲ್ಯ, ಅದನ್ನು ಉಳಿಸಿ: ಎಸ್‍ಪಿಬಿ ಮನವಿ

    ಚಿನ್ನ, ಪ್ಲಾಟಿನಂಗಿಂತಲೂ ನೀರು ಅಮೂಲ್ಯ, ಅದನ್ನು ಉಳಿಸಿ: ಎಸ್‍ಪಿಬಿ ಮನವಿ

    ಚೆನ್ನೈ: ದೇಶದಲ್ಲಿ ಹಲವೆಡೆ ಸರಿಯಾದ ಮಳೆಯಿಲ್ಲದೆ ಜನರು ಬರದಿಂದ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಚಿನ್ನ, ಪ್ಲಾಟಿನಂಗಳಿಗಿಂತ ನೀರು ಅಮೂಲ್ಯವಾದದ್ದು, ಅದನ್ನು ಮಿತವಾಗಿ ಬಳಸಿ, ಉಳಿಸಿ ಎಂದು ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಮನವಿ ಮಾಡಿದ್ದಾರೆ.

    ತಮಿಳಿನ `ಗೂರ್ಖಾ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್‍ಪಿಬಿ ನೀರಿನ ಮಹತ್ವದ ಬಗ್ಗೆ ಹಾಗೂ ನೀರನ್ನು ಮಿತವಾಗಿ ಬಳಸಬೇಕೆಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಬಳಿ ಮನವಿ ಮಾಡಿಕೊಂಡರು. ಹಾಗೆಯೇ ಚಿನ್ನ, ಪ್ಲಾಟಿನಂಗಿಂತಲೂ ನೀರು ಅತ್ಯಮೂಲ್ಯವಾದದ್ದು. ಜೀವಿಸಲು ನೀರು ಬೇಕು. ನೀರಿಗೆ ನಾವು ಬೆಲೆಕಟ್ಟಲು ಸಾಧ್ಯವಿಲ್ಲ. ಚೆನ್ನೈ ಅಂತಹ ಮಹಾನಗರಗಳಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ದೇಶದ ಹಲವೆಡೆ ಜನರು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ ಎಂದರು.

    ಹಾಗೆಯೇ ಇಂದು ನಾನು ಮನೆಯಲ್ಲಿ ಅರ್ಧ ಬಕೆಟ್ ನೀರಿಗಾಗಿ ಅರ್ಧ ಗಂಟೆ ಕಾಯುವಂತಾಯಿತು. ಕೊನೆಗೆ ಸ್ಥಾನಕ್ಕೆ ನೀರಿಲ್ಲದಂತಾಯಿತು ಎಂದು ತಾವು ನೀರಿಗಾಗಿ ಎದುರಿಸಿದ ಪರಿಸ್ಥಿತಿಯನ್ನು ಹಂಚಿಕೊಂಡರು.

    ಇಂದು ಹನಿ ನೀರಿಗಾಗಿ ಅದೆಷ್ಟೋ ಜನರು ಪರದಾಟುತ್ತಿದ್ದಾರೆ. ಇಂದು ನೀರಿನ ಸಮಸ್ಯೆ ಕಾಡುತ್ತಿರುವುದಕ್ಕೆ ನಾವುಗಳೇ ಕಾರಣ. ನೀರನ್ನು ಸುಮ್ಮನೆ ಪೋಲು ಮಾಡುವುದನ್ನು ಬಿಡಿ. ನೀರನ್ನು ಉಳಿಸಲು ಕೆಲವು ಸರಳ ವಿಧಾನಗಳು ನಮ್ಮೆಲ್ಲರಿಗೂ ಗೊತ್ತಿರುತ್ತದೆ. ಆದರೆ ನಾವು ಅದನ್ನು ಪಾಲಿಸುವುದಿಲ್ಲ. ಪ್ರತಿದಿನ ನಾನಾ ರೀತಿಯ ಬಟ್ಟೆಗಳನ್ನು ಧರಿಸುವುದನ್ನು ಬಿಟ್ಟು, ವಾರಕ್ಕೆ ಕೇವಲ ಎರಡು ಜೊತೆ ಬಟ್ಟೆ ಧರಿಸಿ. ಇದರಿಂದ ಬಟ್ಟೆ ತೊಳೆಯಲು ಖರ್ಚಾಗುವ ಅನಗತ್ಯ ನೀರು ಉಳಿಯುತ್ತದೆ. ನೀರನ್ನು ಮಿತವಾಗಿ ಬಳಿಸಿ ಎಂದು ಕಳವಳ ವ್ಯಕ್ತಪಡಿಸಿದರು.

    ಚೆನ್ನೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ ನೀರಿನ ಸಮಸ್ಯೆಗೆ ಜನರು ತತ್ತರಿಸಿ ಹೋಗಿದ್ದಾರೆ. ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಅಲ್ಲದೆ ಕುಡುಯುವ ನೀರಿನ ಸಮಸ್ಯೆ ಕಾಡುತ್ತಿದ್ದು, ಎರಡು ದಿನಕೊಮ್ಮೆ ಅಥವಾ ವಾರಕ್ಕೊಮ್ಮೆ ಟ್ಯಾಂಕರ್ ಗಳಲ್ಲಿ ಎಲ್ಲೆಡೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಚೆನ್ನೈನ ದೊಡ್ಡ ದೊಡ್ಡ ಐಟಿ ಕಂಪನಿಗಳಿಗೂ ನೀರಿ ಅಭಾವದ ಬಿಸಿ ಮುಟ್ಟಿದ್ದು, ಹೊರರಾಜ್ಯಗಳಿಂದ ಕೆಲಸಕ್ಕೆ ಬಂದ ಸಿಬ್ಬಂದಿಗಳಿಗೆ ನೀರು ಪೂರೈಸಲಾಗದೆ ರಜೆ ನೀಡಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]