Tag: ಎಸ್.ಪಿ ಬಾಲಸುಬ್ರಹ್ಮಣ್ಯಂ

  • ಎರಡು ದೇಹಗಳು ಒಂದೇ ಧ್ವನಿ – ವಿಷ್ಣು, ಎಸ್‍ಪಿಬಿ ಬಾಂಧವ್ಯದ ಬಗ್ಗೆ ಅನಿರುದ್ಧ್ ಮಾತು

    ಎರಡು ದೇಹಗಳು ಒಂದೇ ಧ್ವನಿ – ವಿಷ್ಣು, ಎಸ್‍ಪಿಬಿ ಬಾಂಧವ್ಯದ ಬಗ್ಗೆ ಅನಿರುದ್ಧ್ ಮಾತು

    – ಇಬ್ಬರು ಏಕವಚನದಲ್ಲಿ ಮಾತನಾಡುತ್ತಿದ್ರು
    – ಕಪ್ಪು ಬಣ್ಣ ಹಾಕಿ ಕಂಬನಿ

    ಬೆಂಗಳೂರು: ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಇಂದು ಇಹಲೋಕ ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿರುತೆರೆ ನಟ ಅನಿರುದ್ಧ್ ಅತ್ಯಂತ ಕೆಟ್ಟ ದಿನವಿದು ಎಂದು ಹೇಳುವ ಮೂಲಕ ಕಪ್ಪು ಬಣ್ಣ ಹಾಕಿ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಕೊನೆಯ ಬಾರಿ ಕೊರೊನಾ ಜಾಗೃತಿ ಗೀತೆಗೆ ದನಿಯಾಗಿದ್ರು ಎಸ್‍ಪಿಬಿ

    ನಟ ಅನಿರುದ್ಧ್ ತಮ್ಮ ಫೇಸ್‍ಬುಕ್ ಪ್ರೊಫೈಲ್ ಫೋಟೋವನ್ನು ಡಿಲೀಟ್ ಮಾಡಿ ಕಪ್ಪು ಬಣ್ಣ ಹಾಕುವ ಮೂಲಕ ಎಸ್.ಪಿ.ಬಾಲಸುಬ್ರಹ್ಯಣ್ಯಂ ಅಗಲಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ತಮ್ಮ ಎಸ್‍ಪಿಬಿ ಅವರ ಮಧ್ಯೆ ಇದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

    ಎಲ್ಲರಿಗೂ ನಮಸ್ಕಾರ ಎಸ್‍ಪಿಬಿ ಸರ್ ಇಂದು ನಮ್ಮನೆಲ್ಲಾ ಶಾರೀರಿಕವಾಗಿ ಬಿಟ್ಟು ಹೋಗಿದ್ದಾರೆ. ಇದರಿಂದ ತುಂಬಾ ಬೇಸರ, ದುಃಖ, ಸಂಕಟ ಆಗುತ್ತಿದೆ. ಬಾಲಸುಬ್ರಹ್ಮಣ್ಯಂ ಮತ್ತು ಡಾ.ವಿಷ್ಣುವರ್ಧನ್ ಅವರ ಸಂಬಂಧ ಯಾವ ರೀತಿ ಇತ್ತು ಎಂದು ನಿಮ್ಮೆಲ್ಲರಿಗೂ ಗೊತ್ತಿದೆ. ಅವರಿಬ್ಬರು ತುಂಬಾ ಒಳ್ಳೆಯ ಸ್ನೇಹಿತರು. ಪರಸ್ಪರ ಏಕವಚನದಲ್ಲಿ ಮಾತನಾಡುತ್ತಿದ್ದರು. ಅವರ ಬಾಂಧವ್ಯ ಎರಡು ದೇಹಗಳು ಒಂದೇ ಧ್ವನಿ ಆಗಿತ್ತು ಎಂದು ಹೇಳಿದರು.

    ನನ್ನ ಕೆಲ ಸಿನಿಮಾಗಳಿಗೆ ಅವರು ಧ್ವನಿಯಾಗಿದ್ದುದ್ದು ನನ್ನ ಅದೃಷ್ಟ. ಅಪ್ಪ ಅವರು ಶಾರೀರಿಕವಾಗಿ ಬಿಟ್ಟು ಹೋದ ಮೇಲೂ ಸಹ ಎಸ್‍ಪಿಬಿ ಸರ್ ನಮ್ಮ ಕುಟುಂಬದವರ ಜೊತೆ ತುಂಬಾ ಪ್ರೀತಿಯಿಂದ ಗೌರವದಿಂದ ಇದ್ದರು. 2011ರಲ್ಲಿ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ವಿ. ಆ ಕಾರ್ಯಕ್ರಮದಲ್ಲಿ ಅಪ್ಪ ಅವರನ್ನು ನೆನಪಿಸಿಕೊಂಡು ಅನೇಕ ಹಾಡಗಳನ್ನು ಹಾಡಿದ್ದರು. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಅನಿರುದ್ಧ್ ನೋವಿನಿಂದ ಹೇಳಿದ್ದಾರೆ.

    https://www.facebook.com/Anirudhofficialpage/photos/a.107512207315687/400945701305668/

    ಎಸ್‍ಪಿಬಿ ಸರ್ ಭೇಟಿ ಮಾಡಿದಾಗಲೆಲ್ಲಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಂತಹ ಮಹಾನ್ ವ್ಯಕ್ತಿ, ಗಾಯಕರು ಸಿಗುವುದು ತುಂಬಾನೇ ವಿರಳ. ಎಷ್ಟು ಹಾಡು, ಎಷ್ಟು ಭಾಷೆಯಲ್ಲಿ ಹಾಡಿದ್ದಾರೆ. ಅತ್ಯಂತ ಉನ್ನತ ಮಟ್ಟಕ್ಕೆ ತಲುಪಿರುವ ಗಾಯಕರು. ಅಂತಹ ಗಾಯಕರನ್ನು ಮತ್ತೆ ನೋಡುತ್ತೇವೆ ಎಂದು ನಮಗನಿಸುತ್ತಿಲ್ಲ. ಇವತ್ತು ನಾವು ಅವರನ್ನು ಶಾರೀರಿಕವಾಗಿ ಕಳೆದುಕೊಂಡಿದ್ದೇವೆ. ಹೀಗಾಗಿ ನನಗೆ ಮಾತುಗಳೇ ಬರುತ್ತಿಲ್ಲ ಎಂದು ಭಾವುಕರಾದರು.

    ಎಸ್.ಪಿ.ಬಾಲಸುಬ್ರಹ್ಯಣ್ಯಂ ಹಾಡುಗಳನ್ನು ಕೇಳುತ್ತಲೇ ಬೆಳೆದಿದ್ದೇನೆ. ಅವರ ಹಾಡುಗಳು ಮೂಲಕ ಯಾವಾಗಲೂ ಶಾಶ್ವತವಾಗಿ ಉಳಿದುಕೊಳ್ಳುತ್ತಾರೆ. ಎಸ್‍ಪಿಬಿ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಗೆ ಮೋಕ್ಷ ಸಿಗಲಿ. ತಮ್ಮ ಹಾಡುಗಳ ಮೂಲಕ ಎಸ್‍ಪಿಬಿ ಯಾವಾಗಲೂ ಅಮರರಾಗಿರುತ್ತಾರೆ ಎಂದು ಅನಿರುದ್ಧ್ ಹೇಳಿದರು.

  • ಕಾಫಿನಾಡಲ್ಲಿ ಗಾನಕೋಗಿಲೆ ಎಸ್.ಪಿ.ಬಿ ಹೆಜ್ಜೆ ಗುರುತು

    ಕಾಫಿನಾಡಲ್ಲಿ ಗಾನಕೋಗಿಲೆ ಎಸ್.ಪಿ.ಬಿ ಹೆಜ್ಜೆ ಗುರುತು

    ಚಿಕ್ಕಮಗಳೂರು: ಗಾನ ಕೋಗಿಲೆ, ಸಾವಿರಾರು ಹಾಡುಗಳ ಸರದಾರ, ಸಂಗೀತದ ಮಾಂತ್ರಿಕ, ಸ್ವರಭಾಸ್ಕರ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಹೆಜ್ಜೆ ಗುರುತುಗಳು ಕಾಫಿನಾಡಲ್ಲೂ ಮೂಡಿವೆ.

    ದಂಪತಿ ಸಮೇತ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಶ್ರೀಗಳ ಆಶೀರ್ವಾದ ಪಡೆದಿದ್ದರು. ಕ್ರೇಜಿಸ್ಟಾರ್ ಸ್ಟಾರ್ ರವಿಚಂದ್ರನ್ ಅಭಿನಯದ ಮಾಂಗಲ್ಯಂ ತಂತು ನಾನೇನ, ಜಯಸೂರ್ಯ ಚಿತ್ರದಲ್ಲಿ ಸಾಯಿಬಾಬಾರ ಭಕ್ತನಾಗಿ, ಮಣಿಕಂಠನ ಮಹಿಮೆ, ಬಾಳೊಂದು ಚದುರಂಗ, ತಿರುಗುಬಾಣ, ಮಹಾಯಡಬಿಡಂಗಿ, ಕಲ್ಯಾಣೋತ್ಸವ, ಮುದ್ದಿನ ಮಾವ ಸೇರಿದಂತೆ ವಿವಿಧ ಭಾಷೆಗಳ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.

    ಶಶಿಕುಮಾರ್, ಶೃತಿ ಅಭಿನಯದ ಮುದ್ದಿನ ಮಾವ ಚಿತ್ರದ ಚಿತ್ರೀಕರಣಕ್ಕಾಗಿ ಜಿಲ್ಲೆಯ ಶೃಂಗೇರಿ, ಹೊರನಾಡು, ಕಳಸ ಸೇರಿದಂತೆ ಧಾರ್ಮಿಕ ಹಾಗೂ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದಿದ್ದರು. ಇಲ್ಲಿ ಚಿತ್ರೀಕರಣವೂ ನಡೆದಿತ್ತು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಹಲವು ಸಂಗೀತದ ಕಾರ್ಯಕ್ರಮಗಳನ್ನು ಕಾಫಿನಾಡಿನಲ್ಲಿ ನಡೆಸಿಕೊಟ್ಟಿದ್ದಾರೆ.

    2006ರಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಆವರಣದಲ್ಲಿ ನಡೆದ ಸಂಗೀತದ ಕಾರ್ಯಕ್ರಮಕ್ಕೂ ಅವರು ಆಗಮಿಸಿದ್ದರು. ಆದರೆ ಬಾಳೆಹೊನ್ನೂರಿನಲ್ಲಿ ಭಾರೀ ಮಳೆ ಸುರಿದಿದ್ದರಿಂದ ಅಂದು ಕಾರ್ಯಕ್ರಮ ನಡೆದಿರಲಿಲ್ಲ. ಜನ ಗಾನ ಗಂಧರ್ವನ ನೋಡಲು ಮುಗಿಬಿದ್ದಿದ್ದರು. ಅಂದು ದಂಪತಿ ಸಮೇತ ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದಿದ್ದರು. ಮಠದಲ್ಲಿ ಓಡಾಡಿ ಕಾಲ ಕಳೆದಿದ್ದರು.

  • ಎಸ್‍ಪಿಬಿ ಕಳೆದುಕೊಂಡು ಸಾಂಸ್ಕೃತಿಕ ಲೋಕ ಬಡವಾಗಿದೆ- ಪ್ರಧಾನಿ ಮೋದಿ ಭಾವನಾತ್ಮಕ ಸಂದೇಶ

    ಎಸ್‍ಪಿಬಿ ಕಳೆದುಕೊಂಡು ಸಾಂಸ್ಕೃತಿಕ ಲೋಕ ಬಡವಾಗಿದೆ- ಪ್ರಧಾನಿ ಮೋದಿ ಭಾವನಾತ್ಮಕ ಸಂದೇಶ

    – ರಾಷ್ಟ್ರಪತಿ ಕೋವಿಂದ್, ಅಮಿತ್ ಶಾ ಸಂತಾಪ

    ನವದೆಹಲಿ: ಗಾನಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ದೇಶದ ಗಣ್ಯಾತಿ ಗಣ್ಯರು ಸಂತಾಪ ಸೂಚಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆಕಸ್ಮಿಕ ನಿಧನದಿಂದಾಗಿ ನಮ್ಮ ಸಾಂಸ್ಕೃತಿಕ ಲೋಕ ತುಂಬಾ ಬಡವಾಗಿದೆ. ಭಾರತದಾದ್ಯಂತ ಪ್ರತಿ ಮನೆಯಲ್ಲಿಯೂ ಅವರ ಹೆಸರು, ಸುಮಧುರ ಧ್ವನಿ ಹಾಗೂ ಸಂಗೀತ ದಶಕಗಳಿಂದ ಪ್ರೇಕ್ಷರನ್ನು ಮೋಡಿ ಮಾಡಿತ್ತು. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ನನ್ನ ಸಂದೇಶವಿದೆ. ಓಂ ಶಾಂತಿ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

    ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಸಹ ಟ್ವೀಟ್ ಮಾಡಿದ್ದು, ಸಂಗೀತ ದಂತಕಥೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅತ್ಯಂತ ಸುಮಧುರ ಧ್ವನಿಯನ್ನು ಕಳೆದುಕೊಂಡಿದ್ದೇವೆ. ಸಹಸ್ರ ಅಭಿಮಾನಿಗಳು ಅವರನ್ನು ‘ಹಾಡುವ ಚಂದ್ರ’ ಎಂದೇ ಕರೆಯುತ್ತಿದ್ದರು. ಪದ್ಮ ಭೂಷಣ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅವರ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಲೆಜೆಂಡರಿ ಸಂಗೀತಗಾರ ಹಾಗೂ ಹಿನ್ನೆಲೆ ಗಾಯಕ ಪದ್ಮ ಭೂಷಣ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾವು ತುಂಬಾ ನೋವುಂಟು ಮಾಡಿದೆ. ಸುಮಧುರ ಧ್ವನಿ, ಸಾಟಿಯಿಲ್ಲದ ಸಂಗೀತ ಸಂಯೋಜನೆಗಳ ಮೂಲಕ ಅವರು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ. ಅವರ ಕುಟುಂಬ ಹಾಗೂ ಅಭಿಮಾನಿಗಳೊಂದಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ. ಹೀಗೆ ಹಲವು ಗಣ್ಯರು ಎಸ್‍ಪಿಬಿ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಸಂಗೀತ, ಅವರೊಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಿದ್ದಾರೆ.

  • ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ – ಜಗ್ಗೇಶ್ ಕಂಬನಿ

    ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ – ಜಗ್ಗೇಶ್ ಕಂಬನಿ

    – ಸಾರಾ ಗೋವಿಂದ್, ಕವಿರಾಜ್ ಸಂತಾಪ

    ಬೆಂಗಳೂರು: ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ ಎಂದು ಟ್ವೀಟ್ ಮಾಡುವ ಮೂಲಕ ನಟ ಜಗ್ಗೇಶ್ ಅವರು ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಸ್ವರಭಾಸ್ಕರ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತನ್ನ ಗಾಯನವನ್ನು ನಿಲ್ಲಿಸಿದ್ದಾರೆ. ಈ ಮೂಲಕ 50ಕ್ಕೂ ಹೆಚ್ಚು ವರ್ಷಗಳ ಕಾಲ ತಮ್ಮ ಸಿರಿಕಂಠದ ಮೂಲಕ ನಮ್ಮನ್ನು ರಂಜಿಸಿದ್ದ ಗಾನಚೇತನ ತಮ್ಮ ಗಾಯನವನ್ನು ನಿಲ್ಲಿಸಿದೆ. ಹಲವಾರು ನಟರು ಮತ್ತು ಚಿತ್ರರಂಗದವರು ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಜಗ್ಗೇಶ್ ಗೌರವಾನ್ವಿತ ವಿದಾಯ ನಿಮ್ಮಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆ ಪಡೆದ ಅದೃಷ್ಟವಂತ ನಟರ ಸಾಲಲ್ಲಿ ನಾನು ಒಬ್ಬ. ನೀವು ಕಾಯಕದಲ್ಲಿ ಗಾಯಕ ಆದರೆ ನಿಮ್ಮಲ್ಲಿ ಒಬ್ಬ ಮಾತೃಹೃದಯದ ಭಾವನಾಜೀವಿ ಇದ್ದ. ಮದ್ರಾಸ್ ನಲ್ಲಿ ನಿಮ್ಮಜೊತೆ ಕಳೆದ ಆ ದಿನಗಳು ಮತ್ತೆ ಬರದು. ಮರೆಯಲಾಗದು. ಹೋದಿರಿ ಮತ್ತೆ ಬೇಗ ಬನ್ನಿ ಎಂದಿದ್ದಾರೆ.

    ಜೊತೆಗೆ ಇನ್ನೊಂದು ಟ್ವೀಟ್ ಮಾಡಿದ್ದು, ಯಾರ ಕಣ್ಣು ತಾಕಿತು. ಇನ್ನು ಎಷ್ಟು ಸಾಧಕರು ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು. ವಿಶ್ವಶಾಂತಿ ಭಂಗಕ್ಕೆ ಕೊರೊನಾ ಹರಡಿ ಮಳ್ಳಿಯಂತ ದರಿದ್ರ ದೇಶ ಚೀನವನ್ನು ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು. ನನ್ನ ನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ ಸಾರಾ ಗೋವಿಂದ್ ಅವರು, ಕನ್ನಡ ಚಿತ್ರೋದ್ಯಮಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನ ಸುದ್ದಿ ತಿಳಿದು ದುಃಖವಾಗುತ್ತಿದೆ. ನಟನಾಗಿ ರಾಜಕುಮಾರ್ ಹೇಗೆ ಹೆಸರು ಮಾಡಿದರು ಅದೇ ರೀತಿ ಗಾಯಕರಾಗಿ ಅವರು ಸಹ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದರು. ಇವತ್ತು ನಮ್ಮನ್ನ ಆಗಲಿದ್ದಾರೆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

    https://www.facebook.com/kavi.raj.376258/posts/3715760768457932

    ಜೊತೆಗೆ ಕವಿರಾಜ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ನೆಟ್ ವರ್ಕ್ ಇಲ್ಲದ ಜಾಗದಲ್ಲಿದ್ದು ಬೆಳಗ್ಗೆಯಿಂದ ಡ್ರೈವಿಂಗಿನಲ್ಲಿದ್ದೆ. ದಾರಿಯಲ್ಲಿ ಮೂರು ಟಿವಿಯವರು ಎಸ್‍ಪಿಬಿ ಸಾರ್ ಬಗ್ಗೆ ಬೈಟ್ಸ್ ಕೇಳಿದರು. ಪರಿಸ್ಥಿತಿ ಗಂಭೀರವಾಗಿದೆ ಅಂತಷ್ಟೇ ಗೊತ್ತಿತ್ತು. ಅವರು ಗುಣಮುಖರಾಗಲಿ ಅಂತ ಹಾರೈಸುವ ರೀತಿಯಲ್ಲೇ ಮಾತಾಡಿದೆ. ಟಿವಿಯವರು ವಿಷಯ ಹೇಳಲಿಲ್ಲ. ಸ್ವಲ್ಪ ಹೊತ್ತಿಗೆ ಮೊದಲು ವಿಷಯ ಗೊತ್ತಾಯಿತು. ಅವರಿಲ್ಲ ಅಂತಾ ಈಗಲೂ ಒಪ್ಪಲಾಗುತ್ತಿಲ್ಲ. ಭೂಮಿ ಮೇಲೆ ಹಾಡುಗಳಿರೋವರೆಗೂ ಅವರು ಇರುತ್ತಾರೆ. ಅವರು ಅಜರಾಮರ ಎಂದು ಕಂಬನಿಮಿಡಿದಿದ್ದಾರೆ.

  • ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡ್ತೀನಿ ಅಂದಿದ್ರು ಗಾನ ಗಂಧರ್ವ

    ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡ್ತೀನಿ ಅಂದಿದ್ರು ಗಾನ ಗಂಧರ್ವ

    ಕ್ಷಿಣ ಭಾರತದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಅಂದರೆ ಅದೇನೋ ಪ್ರೀತಿ. ಮುಂದಿನ ಜನ್ಮದಲ್ಲಿ ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ ಎಂದು ಅನೇಕ ಬಾರಿ ಹೇಳಿದ್ದರು. ಇದನ್ನೂ ಓದಿ: ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಒಂದು ದಶಕಗಳ ಕಾಲ ಎದೆತುಂಬಿ ಹಾಡುವೆನು ಕಾರ್ಯಕ್ರಮವನ್ನು ನಡೆಸಿಕೊಂಡವುದರ ಜೊತೆಗೆ ಬೇರೆ ಭಾಷೆಗಳಲ್ಲಿ ಕೂಡ ಸಂಗೀತದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ ತಾವೇ ತೀರ್ಪುಗಾರರಾಗಿ ಹತ್ತು ಹಲವು ಸಂಗೀತದ ಶೋಗಳಲ್ಲಿ ಕುಳಿತಿದ್ದರು. ಈ ವೇಳೆ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಗೀತದ ಸರಿ-ತಪ್ಪುಗಳನ್ನು ತಿದ್ದಿದ್ದಾರೆ. ಈ ಮೂಲಕ ಸಂಗೀತದ ಎಸ್.ಪಿ.ಬಾಲಸುಬ್ರಹ್ಮಣ್ಯಂ ರಾಯಭಾರಿಯಾಗಿ ಮೆರೆದಿದ್ದಾರೆ.ಇದನ್ನೂ ಓದಿ:  ನನ್ನ ಅಪ್ಪನನ್ನು ಬಿಟ್ಟು ಬಿಡಿ – ಐದರ ಬಾಲಕನ ಕಣ್ಣೀರ ಅಭಿನಯಕ್ಕೆ ಚಪ್ಪಾಳೆ ಮೇಲೆ ಚಪ್ಪಾಳೆ

    ಆಂಧ್ರದಲ್ಲಿ ಹುಟ್ಟಿ ಬೆಳೆದರೂ, ನಾನು ಹಿನ್ನೆಲೆ ಗಾಯಕನಾಗಿ ಹಾಡಿನ ಎರಡನೇ ಹಾಡೇ ಕನ್ನಡದಲ್ಲಿ. ಅಲ್ಲಿಂದ ಪ್ರಾರಂಭವಾದ ಈ ಪಯಣ ಇಲ್ಲಿಯವರೆಗೂ ಬಂದಿದೆ. ಕನ್ನಡಿಗರು ನೀಡಿದ ಪ್ರೀತಿ, ವಾತ್ಸಲ್ಯ ನನಗೆ ಬೇರೆ ಯಾರಿಂದಲೂ ಸಿಕ್ಕಿಲ್ಲ. ಮುಂದಿನ ಜನ್ಮದಲ್ಲಿ ನಾನು ಕನ್ನಡ ನಾಡಿನಲ್ಲಿ ಹುಟ್ಟಲು ಇಷ್ಟಪಡುತ್ತೇನೆ ಎಂದು ಎಸ್.ಪಿ.ಬಿ ಸಾಕಷ್ಟು ಬಾರಿ ಹೇಳಿದ್ದರು.

    ಬಾಲಸುಬ್ರಹ್ಮಣ್ಯಂ ಅವರು 2018ರಲ್ಲಿ ತೆರೆಕಂಡ ‘ದೇವದಾಸ್’ಚಿತ್ರದಲ್ಲಿ ನಟಿಸಿದ್ದರು. 1969ರಿಂದ ಇಲ್ಲಿಯವರೆಗೆ ಹಲವು ಭಕ್ತಿ ಪ್ರಧಾನ ಸಾಮಾಜಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಒಂದೇ ದಿನ 17 ಗೀತೆಗಳಿಗೆ ಧ್ವನಿ ನೀಡಿದ್ದರು. ಕನ್ನಡ ಮಾತ್ರವಲ್ಲದೇ ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನ 19 ಗೀತೆಗಳನ್ನು ರೆಕಾರ್ಡ್ ಮಾಡಿದ್ದರು. ಎಸ್.ಪಿ.ಬಿ ನಿರ್ವಹಣೆಯಲ್ಲಿ ಮೂಡಿಬರುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ಇಂದಿಗೂ ಜನ ಮರೆತಿಲ್ಲ.

    ಗಾಯನ ಮಾತ್ರವಲ್ಲದೇ ಅನೇಕ ನಟರಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಧ್ವನಿ ನೀಡಿದ್ದಾರೆ. ಎಲ್ಲಾ ಭಾಷೆಯಲ್ಲೂ ದೊಡ್ಡ ದೊಡ್ಡ ನಟರಿಗೆ ವಾಸ್ ಕೊಟ್ಟಿದ್ದಾರೆ. ಕಮಲ್ ಹಾಸನ್, ರಜಿನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ.ಭಾರ್ಗವ್ ರಾಜ್, ಮೊಹನ್, ಅನಿಲ್ ಕಪೂರ್, ಗಿರೀಶ್ ಕಾರ್ನಡ್, ಜಮಿನಿ ಗಣೇಶನ್, ಅರ್ಜುನ್ ಸರ್ಜಾ, ನಾಗೇಶ್, ಕಾರ್ತಿಕ್, ರಾಘುವೀರನ್‍ಗೆ ಬೇರೆ ಬೇರೆ ಭಾಷೆಗಳಿಗೆ ವಾಯ್ಸ್ ಕೊಟ್ಟಿದ್ದಾರೆ.

  • ಸಹೃದಯಿ ಗಾಯಕ ಎಸ್‍ಬಿಗೆ ದರ್ಶನ್, ನಿಖಿಲ್ ಸಂತಾಪ

    ಸಹೃದಯಿ ಗಾಯಕ ಎಸ್‍ಬಿಗೆ ದರ್ಶನ್, ನಿಖಿಲ್ ಸಂತಾಪ

    ಬೆಂಗಳೂರು: 50ಕ್ಕೂ ಹೆಚ್ಚು ವರ್ಷ ತಮ್ಮ ಹಾಡಿನ ಮೂಲಕ ಜನಮನ ತಣಿಸಿದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಸ್ಯಾಂಡಲ್‍ವುಡ್ ನಟರಾದ ಜಗ್ಗೇಶ್, ಚಾಲೆಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

    40 ಸಾವಿರಕ್ಕೂ ಅಧಿಕ ಹಾಡುಗಳನ್ನೂ ಹಾಡಿದ ಗಾನಕೋಗಿಲೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಈ ಮೂಲಕ ಅಪಾರದವಾದ ಅಭಿಮಾನಿಗಳನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಇಂದು ಮಧ್ಯಾಹ್ನ ಒಂದು ಗಂಟೆಗೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍ಪಿಬಿಯವರು ಕೊನೆಯುಸಿರೆಳಿದಿದ್ದಾರೆ.

    ಎಸ್‍ಪಿಬಿಯವರ ಸಾವಿಗೆ ಸಂತಾಪ ಸೂಚಿರುವ ನಟ ದರ್ಶನ್ ಅವರು, ತಮ್ಮ ಸುಮಧುರ ಕಂಠದಿಂದ 50ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    https://www.facebook.com/iamNikhilGowda/posts/3048374941935346

    ನಿಖಿಲ್ ಕುಮಾರಸ್ವಾಮಿಯವರು, ನಮ್ಮ ದೇಶ ಎಂದೂ ಮರೆಯದ ಶ್ರೇಷ್ಠ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದ ಮೂಲಕ ಸಂಗೀತ ಲೋಕದ ಅಮೂಲ್ಯವಾದ ಕೊಂಡಿ ಕಳಚಿದಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ಅವರ ಅಪಾರ ಅಭಿಮಾನಿಗಳಿಗೆ ಈ ಆಘಾತವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಫೇಸ್‍ಬುಕ್ ಪೋಸ್ಟ್ ಹಾಕಿದ್ದಾರೆ.

  • ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಬಾಲ್ಯದಲ್ಲಿ ಸಂಗೀತ ಕಲಿಯದಿದ್ರೂ ಗೆದ್ದ ಎಸ್‍ಪಿಬಿ – ತಂದೆಯೇ ಪ್ರೇರಣೆ

    ಕ್ಷಿಣ ಭಾರತದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಟರಷ್ಟೆ ಬೇಡಿಕೆ ಹೊಂದಿದ್ದರು. ಬಾಲ್ಯದಲ್ಲಿ ಸಂಗೀತ ಕಲಿಯದಿದ್ದರೂ ತಂದೆಯ ಪ್ರೇರಣೆಯಿಂದ ಇಂದು ಗಾನ ಗಂಧರ್ವರಾಗಿದ್ದರು. ತಮ್ಮ ಸುಮಧುರ ಹಾಡುಗಳಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿಯಲ್ಲಿ ಬಹುಬೇಡಿಕೆಯ ಗಾಯಕರಾಗಿದ್ದಾರೆ. ಇವರು ಸುಮಾರು 50,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇದನ್ನೂ ಓದಿ: ಡಾ.ರಾಜ್‍ಕುಮಾರ್ ಅಂದರೆ ಬಾಲುಗೆ ಜೀವಜ್ಜೀವ ಪ್ರೇಮ

    ಬಾಲ್ಯ-ವಿದ್ಯಾಭ್ಯಾಸ:
    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮೂಲ ಹೆಸರು ಶ್ರೀಪತಿ ಪಂಡಿತಾರಾಧ್ಯಲು ಬಾಲಸುಬ್ರಹ್ಮಣ್ಯಂ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕೊನೇಟಮ್ಮ ಪೇಟಾದಲ್ಲಿ 1946ರ ಜೂನ್ 4ರಂದು ಜನಿಸಿದ್ದರು. ಇವರ ತಂದೆ ಎಸ್.ಪಿ.ಸಾಂಬ ಮೂರ್ತಿ ಹರಿಕಥೆ ಕಲಾವಿದರಾಗಿದ್ದು, ತಾಯಿ ಶಾಕುಂತಲಮ್ಮ. ಇವರ ತಾಯಿ 2019ರಲ್ಲಿ ತೀರಿಕೊಂಡಿದ್ದರು. ಇವರಿಗೆ ಇಬ್ಬರು ಸಹೋದರರು, ಎಸ್.ಪಿ.ಶೈಲಜಾ ಸೇರಿದಂತೆ ಐದು ಸಹೋದರಿಯರಿದ್ದರು.

    ಎಸ್‍ಪಿಬಿ ಚೆನ್ನೈನ ಜೆ.ಎನ್‍ ಯೂಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಕಾಲೇಜ್‍ನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹಾಡುಗಳು ಸ್ಪರ್ಧೆಗಳಲ್ಲಿ ಭಾಗವಹಿ, ಮೊದಲ ಪ್ರಶಸ್ತಿ ಗೆದಿದ್ದರು. ತೆಲುಗು ಸಾಂಸ್ಕೃತಿಕ ಸಂಗೀತ ಸ್ಪರ್ಧೆ 1964ರಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದರು. ಹರಿಕಥೆ ಹೇಳುತ್ತಿದ್ದ ತಂದೆ ಅವರೇ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರೇರಣೆ. ಹಾಡುವುದನ್ನು, ಹಾರ್ಮೋನಿಯಂ, ಕೊಳಲುಗಳನ್ನು ತನ್ನಷ್ಟಕ್ಕೆ ತಾವು ನುಡಿಸುತ್ತಾ ಸಂಗೀತದ ಪರ್ವತವೇ ಆಗಿದ್ದರು.

    ಪ್ರಶಸ್ತಿ ಗೌರವಗಳು-ಪುರಸ್ಕಾರಗಳು
    ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಸಂದಿದೆ. ಅಲ್ಲದೇ 25 ಭಾರಿ ಆಂಧ್ರ ಪ್ರದೇಶ ಸರ್ಕಾರದಿಂದ ನಂದಿ ಪ್ರಶಸ್ತಿ ನೀಡಲಾಗಿದೆ. ನಾಲ್ಕು ಭಾಷೆಗಳಾಗಿ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ಗಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ಹಲವು ವಿಶ್ವ ವಿದ್ಯಾನಿಲಯಗಳಿಂದ ಡಾಕ್ಟರೇಟ್ ಕೂಡ ಪಡೆದುಕೊಂಡಿದ್ದಾರೆ.

  • ಸೆ.4ರಂದೇ ಎಸ್‍ಪಿಬಿ ಕೊರೊನಾ ನೆಗೆಟಿವ್- ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಸೆ.4ರಂದೇ ಎಸ್‍ಪಿಬಿ ಕೊರೊನಾ ನೆಗೆಟಿವ್- ಅಂತಿಮ ದರ್ಶನಕ್ಕೆ ವ್ಯವಸ್ಥೆ

    – ಕೇವಲ ಗಣ್ಯರಿಗೆ ಮಾತ್ರ ಅವಕಾಶ

    ಚೆನ್ನೈ: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಕುರಿತು ನಗರದ ಎಂಜಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 4ರಂದೇ ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು ಎಂದು ಸ್ಪಷ್ಟಪಡಿಸಿದೆ.

    ಎಸ್‍ಪಿಬಿ ಅವರ ಮರಣದ ಬಳಿಕ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆಗಸ್ಟ್ 5ರಂದು ಬಾಲಸುಬ್ರಹ್ಮಣ್ಯಂ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಹಿನ್ನೆಲೆ ಆಗಸ್ಟ್ 14ರಂದು ಅವರ ಸ್ಥಿತಿ ಗಂಭೀರವಾಯಿತು. ಅವರ ಆರೋಗ್ಯವನ್ನು ನುರಿತ ತಜ್ಞ ವೈದ್ಯರು ನೋಡಿಕೊಳ್ಳುತ್ತಿದ್ದರು. ಅಲ್ಲದೆ ತರ್ತು ನಿರ್ವಹಣಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಸೆಪ್ಟೆಂಬರ್ 4ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು ಎಂದು ಆಸ್ಪತ್ರೆ ತಿಳಿಸಿದೆ.

    ಇಂದು ಬೆಳಗ್ಗೆ ಸಹ ತಜ್ಞ ವೈದ್ಯರು ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದರು. ಅವರ ಆರೋಗ್ಯವನ್ನು ಹತೋಟಿಗೆ ತರಲು ತಜ್ಞ ವೈದ್ಯರು ಬಹಳಷ್ಟು ಪ್ರಯತ್ನಿಸಿದರು. ಆದರೆ ಕಾರ್ಡಿಯೋ ರೆಸ್ಪಿರೇಟರಿ(ಹೃದಯ ರಕ್ತನಾಳ) ಅರೆಸ್ಟ್ ನಿಂದಾಗಿ ಇಂದು(ಸೆಪ್ಟೆಂಬರ್ 25) ಮಧ್ಯಾಹ್ನ 1.04ಕ್ಕೆ ಅವರು ಸಾವನ್ನಪ್ಪಿದರು ಎಂದು ತಿಳಿಸಲು ವಿಷಾಧಿಸುತ್ತೇವೆ ಎಂದು ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.

    ಅವರು ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಆಸ್ಪತ್ರೆ ವಿಷಾದ ವ್ಯಕ್ತಪಡಿಸಿದೆ. ಸುದ್ದಿ ಹೊರ ಬೀಳುವುದಕ್ಕೂ ಮುನ್ನ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು. ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದು, ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. 11-30ಕ್ಕೆ ಖ್ಯಾತ ನಿರ್ದೇಶಕ ಭಾರತಿ ರಾಜ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಇದೆ.

    ಎಸ್‍ಪಿಬಿ ಪುತ್ರಿ ಪಲ್ಲವಿ ಹಾಗೂ ನಿರ್ದೇಶಕ ಭಾರತಿ ರಾಜ ಅವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ. ಕೊರೊನಾ ನೆಗೆಟಿವ್ ಹಿನ್ನೆಲೆ ಇಂದು ಸಂಜೆ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಆದರೆ ಕೇವಲ ಗಣ್ಯರಿಗಷ್ಟೇ ದರ್ಶನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಎಂಜಿಎಂ ಆಸ್ಪತ್ರೆ ಮುಂಭಾಗ ಭದ್ರತೆಗಾಗಿ ಬ್ಯಾರಿಕೇಡ್‍ಗಳನ್ನು ಹಾಕಲಾಗಿದೆ.

  • ಎಸ್‍ಪಿಬಿ ಆರೋಗ್ಯ ಮತ್ತಷ್ಟು ಚಿಂತಾಜನಕ

    ಎಸ್‍ಪಿಬಿ ಆರೋಗ್ಯ ಮತ್ತಷ್ಟು ಚಿಂತಾಜನಕ

    ಚೆನ್ನೈ: ಹಿರಿಯ ಗಾಯಕ, ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಲೈಫ್ ಸಪೋರ್ಟ್ ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಎಸ್‍ಪಿಬಿ ಅವರ ಚಿಕಿತ್ಸೆ ಮುಂದುವರಿದಿದೆ.

    ಎಂಜಿಎಂ ಆಸ್ಪತ್ರೆ ಎಸ್‍ಪಿಬಿ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಆಗಸ್ಟ್ 5ರಂದು ಎಸ್‍ಪಿಬಿ ದಾಖಲಾಗಿದ್ದರು. ಎಕ್ಮೋ ಮತ್ತು ಇನ್ನಿತರ ಲೈಫ್ ಸಪೋರ್ಟ್ ಮೇಲೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 24 ಗಂಟೆಯಿಂದ ಎಸ್‍ಪಿಬಿ ಆರೋಗ್ಯ ಕ್ಷೀಣಿಸುತ್ತಿದ್ದು, ಹೆಚ್ಚು ಲೈಫ್ ಸಪೋರ್ಟ್ ಸಾಧನಗಳನ್ನು ಬಳಕೆ ಮಾಡಲಾಗುತ್ತಿದೆ. ಎಂಜಿಎಂ ಆಸ್ಪತ್ರೆಯ ನುರಿತ ವೈದ್ಯರ ತಂಡ ಎಸ್‍ಪಿಬಿ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಹೇಳಿದೆ.

    ಕೆಲವು ದಿನಗಳ ಹಿಂದೆ ವಿಡಿಯೋ ಪೋಸ್ಸ್ ಮಾಡಿದ್ದ ಎಸ್‍ಪಿಬಿ ಪುತ್ರ ಚರಣ್, ಅಪ್ಪನ ಆರೋಗ್ಯ ಸ್ಥಿರವಾಗಿದ್ದು, ವೆಂಟಿಲೇಟರ್ ನಲ್ಲೇ ಇದ್ದಾರೆ. ಉಳಿದೆಲ್ಲ ವರದಿಗಳು ನಾರ್ಮಲ್ ಆಗಿದ್ದು, ಯಾವುದೇ ಇನ್ಫೆಕ್ಷನ್ ಕಂಡು ಬಂದಿಲ್ಲ. ಆದರೆ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ವೃದ್ಧಿಯಾಗಬೇಕಿದೆ. ಇದೀಗ ಅವರು ಕುಳಿತುಕೊಳ್ಳುತ್ತಿದ್ದು, ವೈದ್ಯರ ಸಹಾಯದ ಮೇರೆಗೆ ಪ್ರತಿ ದಿನ 20 ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

    ತಂದೆಯ ಆರೋಗ್ಯ ಸುಧಾರಣೆಯಾಗುತ್ತಿದೆ. ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಸ್ಪತ್ರೆಯಲ್ಲಿ ಆಚರಿಸಿದ್ದಾರೆ. ಈಗ ಆಸ್ಪತ್ರೆಯಲ್ಲೇ ಎಸ್‍ಪಿಬಿ ಟೆನ್ನಿಸ್ ಮತ್ತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಚರಣ್ ತಿಳಿಸಿದ್ದರು.

    ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿವೆ. ಆಗಸ್ಟ್ 24ರಂದು ಎಸ್‍ಪಿಬಿ ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.

  • ಎಸ್‍ಪಿಬಿ ಆರೋಗ್ಯದಲ್ಲಿ ಚೇತರಿಕೆ- ಕುಳಿತುಕೊಳ್ತಾರೆ, ಊಟ ಮಾಡ್ತಾರೆ ಗಾನ ಗಾರುಡಿಗ

    ಎಸ್‍ಪಿಬಿ ಆರೋಗ್ಯದಲ್ಲಿ ಚೇತರಿಕೆ- ಕುಳಿತುಕೊಳ್ತಾರೆ, ಊಟ ಮಾಡ್ತಾರೆ ಗಾನ ಗಾರುಡಿಗ

    – ಇನ್ನೂ ವೆಂಟಿಲೇಟರ್ ನಲ್ಲೇ ಚಿಕಿತ್ಸೆ ಮುಂದುವರಿಕೆ

    ಚೆನ್ನೈ: ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಸ್ವಲ್ಪ ಮಟ್ಟಿಗೆ ಕುಳಿತುಕೊಳ್ಳುವುದು ಹಾಗೂ ಸ್ವಲ್ಪ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಅವರ ಪುತ್ರ ಚರಣ್ ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಮಾಹಿತಿ ನೀಡಿದ್ದು, ಆಪ್ಪನ ಆರೋಗ್ಯ ಸ್ಥಿರವಾಗಿದ್ದು, ವೆಂಟಿಲೇಟರ್‍ನಲ್ಲೇ ಇದ್ದಾರೆ. ಉಳಿದೆಲ್ಲ ವರದಿಗಳು ನಾರ್ಮಲ್ ಆಗಿದ್ದು, ಯಾವುದೇ ಇನ್ಫೆಕ್ಷನ್ ಕಂಡು ಬಂದಿಲ್ಲ. ಆದರೆ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ವೃದ್ಧಿಯಾಗಬೇಕಿದೆ. ಇದೀಗ ಅವರು ಕುಳಿತುಕೊಳ್ಳುತ್ತಿದ್ದು, ವೈದ್ಯರ ಸಹಾಯದ ಮೇರೆಗೆ ಪ್ರತಿ ದಿನ 20 ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಇದು ಅವರಿಗೆ ಒಂದು ರೀತಿಯ ಸವಾಲಾಗಿದ್ದು, ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಅವರಿಗೆ ಶಕ್ತಿ ತುಂಬಿದೆ. ಎಂಜಿಎಂ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್‍ಗಳ ತಂಡ ತುಂಬಾ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದೆ ಹಾಗೂ ನೋಡಿಕೊಳ್ಳುತ್ತಿದೆ. ನಮ್ಮ ತಂದೆಗೆ ಹಾಗೂ ಕುಟುಂಬಕ್ಕೆ ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

     

    View this post on Instagram

     

    A post shared by S. P. Charan/Producer/Director (@spbcharan) on

    ಖುಷಿಯ ವಿಚಾರವೆಂದರೆ ನಿನ್ನೆಯಿಂದ ಆಹಾರ ಸೇವಿಸುತ್ತಿದ್ದು, ಇದು ಅವರಿಗೆ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರಾರ್ಥನೆಗೆ ಮತ್ತೊಮ್ಮೆ ಧನ್ಯವಾದ ಅರ್ಪಿಸುತ್ತೇನೆ ಎಂದು ವಿಡಿಯೋದಲ್ಲಿ ಅವರು ತಿಳಿಸಿದ್ದಾರೆ.

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕಳೆದ 19 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತು. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಅಲ್ಲದೆ ಆಗಸ್ಟ್ 24ರಂದು ಅವರಿಗೆ ಕೊರೊನಾ ನೆಗೆಟಿವ್ ಬಂದಿತ್ತು.