ಬಿಗ್‍ಬಾಸ್ ಮೀನಿ ಸೀಸನ್ ಎಂಟ್ರಿಕೊಟ್ಟಿರುವ ನಟಿ ನಯನ ನಾಗರಾಜ್ ಬರೀ ನಟಿ ಮಾತ್ರ ಅಲ್ಲ. ಉತ್ತಮ ಗಾಯಕಿ ಕೂಡ ಆಗಿದ್ದಾರೆ. ವರ್ಷಗಳ ಹಿಂದೆಯೇ ಲೆಜೆಂಡರಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೊತೆಗೆ ನಯನ ನಾಗರಾಜ್ ಕೋರಸ್ ಹಾಡಿರುವ ಅನುಭವವನ್ನು ಹಂಚಿಕೊಂಡಿದ್ದಾರೆ.
ಮನೆಗೆ ಬರುವ ಸ್ಪರ್ಧಿಗಳನ್ನು ಅಕೂಲ್ ವೆಲ್ ಕಮ್ ಮಾಡುತ್ತಾ ಅವರ ಕುರಿತಾಗಿ ಸ್ಪರ್ಧಿಗಳಿಗೆ ತಮಗೆ ಗೊತ್ತಿರುವ ವಿಚಾರವನ್ನು ಹೇಳುತ್ತಾ ಪರಿಚಯ ಮಾಡಿಸುತ್ತಿದ್ದಾರೆ. ಈ ವೇಳೆ ನಯನಾ ಅವರು ಮಾಡಿರುವ ದೊಡ್ಡ ಸಾಧನೆ ಯಾವುದು ಎಂದರೆ ಏನು ಗೊತ್ತಾ? ಅವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜೊತೆ ಹಾಡು ಹೇಳಿದ್ದಾರೆ ಎಂದು ಅಕೂಲ್ ಹೇಳಿದಾಗ ನಯನ ಎಳೆಎಳೆಯಾಗಿ ಅವರ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ನಾನು ಮಾಡಿದ ತಪ್ಪು ಯಾರು ಮಾಡಬೇಡಿ: ಚಂದನಾ
2014ರಲ್ಲಿ ಇಳಯರಾಜ ಅವರ ಗೌರವಾರ್ಥಕವಾಗಿ ನಡೆದ ಲೈವ್ ಶೋನಲ್ಲಿ ಮೂರು ಹಾಡುಗಳನ್ನು ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ ಜೊತೆಗೆ ಕೋರಸ್ ಹಾಡಿದ್ದೇನೆ. ಕೇಳದೇ ನಿಮಗೀಗ.. ಹಾಡಿಗೆ ನಾವು ಹತ್ತು ಜನ ಕೋರಸ್ ಹಾಡಿದ್ವಿ. ಅವರು ನಮ್ಮ ಜೊತೆಗೆ ಮಾತನಾಡಿ ಪ್ರಶಂಸೆ ವ್ಯಕ್ತಪಡಿಸಿದರು. ನಾವು ಕೋರಸ್ ಹಾಡುತ್ತಾ ಇದ್ದೆವು. ಆಗ ಅವರು ಮಧ್ಯದಲ್ಲಿ ನಿಲ್ಲಿಸಿ ಎಂದು ಹೇಳಿ ಬಂದ್ರು, ನಾವು ಸಂಗೀತಗಾರರು ಎನೋ ತಪ್ಪು ಮಾಡಿದ್ರು ಎಂದು ಅಂದುಕೊಂಡಿದ್ದೇವು. ಆದರೆ ಅವರು ಬಂದು ಕ್ಷಮಿಸಿ ನಾನು ಒಂದು ಬೀಟ್ ತಡವಾಗಿ ಹಾಡಿ ಬಿಟ್ಟೆ ನೀವು ಸರಿಯಾಗಿ ಹಾಡಿದ್ದೀರ ಅಂತ ಹೇಳಿದರು ಎಂದು ಬಿಗ್‍ಬಾಸ್ ಮನೆಯಲ್ಲಿ ನಯನ ನಾಗರಾಜ್ ಹೇಳಿದರು. ಹಾಗೇ ಬಿಗ್‍ಬಾಸ್ ಮನೆಯಲ್ಲಿ ಕೇಳದೇ ನಿಮಗೀಗ.. ಹಾಡನ್ನು ನಯನ ನಾಗರಾಜ್ ಹಾಡಿದರು.
ಸೀಂಗರ್, ಡಾನ್ಸರ್ ಆಗಿರುವ ನಯನ ಮೊದಲ ದಿನವೇ ಸ್ಪರ್ಧಿಗಳಿಗೆ ಮೋಡಿ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈಗಾಗಲೇ ಅವರು ಎಸ್.ಪಿ.ಬಿ ನೆನೆಪುಗಳನ್ನು ಮನೆ ಮಂದಿ ಜೊತೆಗೆ ಹಂಚಿಕೊಂಡಿದ್ದನು ಕೇಳಿ ವೀಕ್ಷಕರು ನಯನ ಅವರನ್ನು ಮೆಚ್ಚಿಕೊಂಡಿದ್ದಾರೆ.
ಬೆಂಗಳೂರು: ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಂದನದ ಗೊಂಬೆ ಲಕ್ಷ್ಮಿ ಅಭಿನಯದ ‘ಮಿಥುನಂ’ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ. ಕೇವಲ ಗಾಯಕರಾಗಿ ಅಲ್ಲದೇ ಎಸ್‍ಪಿಬಿ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಸೇರಿದಂತೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ಎಸ್‍ಪಿಬಿ ನಟಿಸಿದ್ದಾರೆ.
8 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಮಿಥುನಂ ಕನ್ನಡದಲ್ಲಿ ಮಿಥುನನಾಗಿ ತೆರೆಗೆ ಅಪ್ಪಳಿಸಲಿದೆ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಎಸ್‍ಪಿಬಿ ಮತ್ತು ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಶ್ರೀರಮಣ ರಚಿತ ಮಿಥುನಂ ಕಾದಂಬರಿಯನ್ನ ನಿರ್ದೇಶಕ ತನಿಕೆಳ್ಳ ಭರಣಿ ತೆರೆಯ ಮೇಲೆ ತಂದು ಮೋಡಿ ಮಾಡಿದ್ದರು. ಕಾದಂಬರಿ ಆಧಾರಿತ ಈ ಸಿನಿಮಾ ನಾಲ್ಕು ರಾಜ್ಯ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿತ್ತು.
ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯಗಳು ನಡೆದಿವೆ. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ರಾಜ್ಯಾದ್ಯಂತ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ರಿಲೀಸ್ ದಿನಾಂಕ ಅಂತಿಮವಾಗಬೇಕಿದೆ.
ಅನ್‍ಲಾಕ್ ಬಳಿಕ ಕಳೆದ 15 ದಿನಗಳಿಂದ ಚಿತ್ರಮಂದಿರಗಳು ತೆರೆದಿವೆ. ಕೊರೊನಾ ಆತಂಕದ ನಡುವೆಯೂ ಜನರು ಸಹ ನಿಧಾನವಾಗಿ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಪ್ರೇಕ್ಷಕರ ಕೊರತೆ ಹಿನ್ನೆಲೆ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡಗಳು ಹಿಂದೇಟು ಹಾಕುತ್ತಿವೆ. ಹಾಗಾಗಿ ಹಳೆಯ ಸೂಪರ್ ಹಿಟ್ ಫಿಲಂಗಳನ್ನ ರೀ ರಿಲೀಸ್ ಮಾಡಲಾಗುತ್ತಿದೆ. ಕೆಲ ಬೇರೆ ಭಾಷೆಯ ಹೊಸ ಸಿನಿಮಾಗಳನ್ನ ಡಬ್ ಮಾಡಿ ಕನ್ನಡಕ್ಕೆ ತರಲಾಗ್ತಿದೆ. ಈ ಎಲ್ಲ ಬೆಳವಣಿಗೆಗಳ ಹಳೆ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ.
ಚೆನ್ನೈ: ತಮ್ಮ ಗೆಳೆಯ, ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ನೆನಪಿನಲ್ಲೇ ಇರುವ ಸಂಗೀತ ನಿರ್ದೇಶಕ ಇಳಯರಾಜ, ಶನಿವಾರ ರಾತ್ರಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿ ದೀಪ ಹಚ್ಚಿದ್ದಾರೆ.
ಸರ್ಕಾರದ ಸೂಚನೆ ಹಿನ್ನೆಲೆ ಇಳಯರಾಜ ತಮ್ಮ ಪ್ರಾಣ ಸ್ನೇಹಿತನ ಅಂತಿಮ ದರ್ಶನದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ತಿರುವಣ್ಣಾಮಲೈ ದೇವಸ್ಥಾನದಲ್ಲಿ ದೀಪ ಬೆಳಗಿಸಿ ತಮ್ಮ ಗೆಳೆಯನನ್ನು ನೆನೆದಿದ್ದಾರೆ. ಅಲ್ಲದೆ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ, ಸದ್ಗತಿ ದೊರೆಯಲಿ ಎಂದು ಇಳಯರಾಜ ಬೇಡಿಕೊಂಡಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸೆಪ್ಟೆಂಬರ್ 25ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತ್ಯ ಸಂಸ್ಕಾರವನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಹಾಗೂ ಸರ್ಕಾರಿ ಗೌರವಗಳೊಂದಿಗೆ ಶನಿವಾರ ಚೆನ್ನೈನ ಫಾರ್ಮ್ ಹೌಸ್‍ನಲ್ಲಿ ಮಾಡಲಾಯಿತು. ಆದರೆ ಬಹುತೇಕ ಗಣ್ಯರು ಎಸ್‍ಪಿಬಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅದೇ ರೀತಿ ಇಳಯರಾಜ ಸಹ ಹೋಗಲಿಲ್ಲ. ಹೀಗಾಗಿ ದೇವಸ್ಥಾನಕ್ಕೆ ತೆರಳಿ ದೀಪ ಬೆಳಗಿಸಿ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
இசைஞானி இளையராஜா அவர்கள் திரு SP பாலசுப்ரமணியம் அவர்களின் ஆத்மா சாந்தி அடைய திருவண்ணாமலையில் சற்று முன் மோட்ச தீபம்…
ಸಿನಿಮಾ ರಂಗಕ್ಕೆ ಪ್ರವೇಶ ಮಾಡುವುದಕ್ಕೂ ಮುನ್ನವೇ ಇಳಯರಾಜ ಹಾಗೂ ಎಸ್‍ಪಿಬಿ ಸ್ನೇಹಿತರಾಗಿದ್ದರು. ಅಲ್ಲದೆ ಸಿನಿಮಾ ರಂಗಕ್ಕೆ ಬಂದ ನಂತರ ಇಳಯರಾಜ ನಿರ್ದೇಶನದ ಹಲವು ಸಿನಿಮಾಗಳ ಹಾಡುಗಳನ್ನು ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ. ಹೀಗಾಗಿ ಇಳಯರಾಜ ಹಾಗೂ ಎಸ್‍ಪಿಬಿ ಮಧ್ಯೆ ಆಳವಾದ ಸ್ನೇಹವಿತ್ತು.
ಎಸ್‍ಪಿಬಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಶ್ಚರ್ಯ ವ್ಯಕ್ತಪಡಿಸಿದ್ದ ಇಳಯರಾಜ, ಬಾಲು ನೀನೆಲ್ಲಿಗೆ ಹೋದೆ, ಯಾಕೆ ಹೋದೆ? ಬಾಲು ಬೇಗನೆ ಮರಳಿ ಬಾ, ನಿನಗಾಗಿ ನಾನು ಕಾಯುತ್ತಿದ್ದೇನೆ. ಆದರೆ ನೀನು ಕೇಳುತ್ತಿಲ್ಲ. ನೀನು ಹೋಗಿದ್ದೀಯಾ, ಎಲ್ಲಿಗೆ ಹೋದೆ, ಗಂಧರ್ವರಿಗೆ ಹಾಡು ಹೇಳಲು ಹೋದೆಯಾ? ಈಗ ಜಗತ್ತಿನಲ್ಲಿ ನನಗೆ ಏನನ್ನೂ ನೋಡಲು ಆಗುತ್ತಿಲ್ಲ. ಶಬ್ದಗಳನ್ನು ಕಳೆದುಕೊಂಡಿದ್ದೇನೆ, ಏನು ಹೇಳಬೇಕೋ ನನಗೆ ತೋಚುತ್ತಿಲ್ಲ. ಯಾವುದೇ ದುಃಖಕ್ಕೆ ಒಂದು ಮಿತಿಯಿದೆ. ಆದರೆ ಈ ದುಃಖಕ್ಕೆ ಮಿತಿಯಿಲ್ಲ ಎಂದು ಹೇಳಿದ್ದರು.
ಚೆನ್ನೈ: ತಮಿಳು ನಟ ದಳಪತಿ ವಿಜಯ್ ಅಭಿಮಾನಿ ಬಳಗ ದೊಡ್ಡದು. ವಿದೇಶಗಳಲ್ಲಿಯೂ ಅವರ ಫ್ಯಾನ್ಸ್ ಇದ್ದಾರೆ. ವಿಜಯ್ ಸಹ ಅಷ್ಟೇ ಪ್ರೀತಿಯನ್ನು ಅಭಿಮಾನಿಗಳಿಗೆ ತೋರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತಿಮ ದರ್ಶನದ ವೇಳೆ ನಡೆದ ಘಟನೆಯೇ ಸಾಕ್ಷಿಯಾಗಿದೆ.
ದಳಪಥಿ ವಿಜಯ್ ತಮ್ಮ ವಿಶಿಷ್ಟ ನಟನೆ ಮೂಲಕವೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಅಪಾರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಅವರು ಹೋದಲ್ಲೆಲ್ಲ ಜನ ಸಾಗರವೇ ಸೇರುತ್ತದೆ. ಹೀಗೆ ಇತ್ತೀಚೆಗೆ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದಾಗ ಅವರ ಅಂತಿಮ ದರ್ಶನಕ್ಕೆ ವಿಜಯ್ ಸಹ ಹೋಗಿದ್ದರು. ಈ ವೇಳೆ ನಡೆದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಜಯ್ ಎಸ್‍ಪಿಬಿ ಅಂತಿಮ ದರ್ಶನ ಪಡೆದು ಹೊರ ಬರುತ್ತಿದ್ದ ವೇಳೆ ಹೆಚ್ಚು ಗದ್ದಲ ಉಂಟಾಗಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಹೀಗೆ ನೂಕು ನುಗ್ಗಲ ಮಧ್ಯೆ ವಿಜಯ್ ಅವರಿಗೆ ಜಾಗ ಮಾಡಿ ಕೊಡುವ ವೇಳೆ ಅಭಿಮಾನಿಯೊಬ್ಬರ ಚಪ್ಪಲಿ ಕಾಲಿಗೆ ಸಿಕ್ಕಿಕೊಂಡು ಬಿದ್ದಿತ್ತು. ಇದನ್ನು ಕಂಡ ವಿಜಯ್ ಚಪ್ಪಲಿ ಮೇಲಕ್ಕೆ ಎತ್ತಿ ನೀಡಿದ್ದಾರೆ. ಇದು ಅವರ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳ ಕುರಿತು ಥಳಪತಿ ವಿಜಯ್ ಅವರಿಗೆ ಇರುವ ಪ್ರೀತಿ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ (74) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನಡೆಸಲಾಯಿತು. ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನ ರೆಡ್‍ಹಿಲ್ ಫಾರ್ಮ್ ಹೌಸ್‍ನಲ್ಲಿ ಎಸ್‍ಪಿಬಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಎಸ್‍ಪಿಬಿ ಪುತ್ರ ಚರಣ್ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದಾರಾಬಾದ್ ನಿಂದ ಪುರೋಹಿತರ ತಂಡ ಆಗಮಿಸಿತ್ತು.
ಮಂಡ್ಯ: ಗಾನಗಂಧರ್ವ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ನಿಧನದ ಸುದ್ದಿ ಕೇಳಿ ಕರ್ನಾಟಕ ಸೇರದಂತೆ ದೇಶದ ಕೋಟ್ಯಂತರ ಸಂಗೀತ ಪ್ರಿಯರು ದುಃಖಿತರಾಗಿದ್ದಾರೆ. ಎಸ್‍ಪಿಬಿ ಅವರು ಕೇವಲ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೇ ತಮ್ಮ ನಟನೆಯ ಮೂಲಕ ಸಾಕಷ್ಟು ಮಂದಿಯ ಮನ ಗೆದ್ದಿದ್ದಾರೆ. ಇಂತಹ ಕಲಾವಿದರಿಗೂ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೂ ಒಂದು ನಂಟಿದೆ.
ಆಡು ಮುಟ್ಟದ ಸೊಪ್ಪಿಲ್ಲ, ಬಾಲಸುಬ್ರಹ್ಮಣ್ಯಂ ಅವರು ಹಾಡುಗಳನ್ನು ಕೇಳದ ಜನರಿಲ್ಲ. ದೇಶದ ಮೂಲೆ ಮೂಲೆಗಳಲ್ಲೂ ಬಾಲಸುಬ್ರಹ್ಮಣ್ಯಂ ಅವರ ಕಂಠ ಮೆಚ್ಚಿದ ಜನರು ಇದ್ದಾರೆ. ಬಾಲಸುಬ್ರಹ್ಮಣ್ಯಂ ಅವರು ಕೇವಲ ತಮ್ಮ ಕಂಠ ಸಿರಿಯಿಂದ ಮಾತ್ರವಲ್ಲ ತಮ್ಮ ನಟನೆಯಿಂದಲೂ ಸಾಕಷ್ಟು ಚಿತ್ರ ರಸಿಕರನ್ನು ಸೆಳೆದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಎಸ್.ಪಿ.ಬಿ ಅವರು ಎರಡು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅವರೊಂದಿಗೆ ನಟನೆ ಮಾಡಿದ ಮಂಡ್ಯ ಮೂಲದ ವ್ಯಕ್ತಿಗಳು ಅವರ ನಟನೆಯ ಜೊತೆಗೆ ಅವರಲ್ಲಿನ ಗುಣಗಳನ್ನು ನೆನೆಯುತ್ತಿದ್ದಾರೆ. ಆ ಕ್ಷಣಗಳಲ್ಲಿ ಅವರೊಂದಿಗೆ ಇದ್ದ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.
1995 ರಲ್ಲಿ ತೆರೆಕಂಡಿರುವ ಬಾಳೊಂದು ಚದುರಂಗ ಚಲನಚಿತ್ರದಲ್ಲಿ ಎಸ್‍ಬಿ ಬಾಲಸುಬ್ರಹ್ಮಣ್ಯಂ ಅವರು ನಟನೆ ಮಾಡಿದ್ದರು. ಈ ಚಿತ್ರದಲ್ಲಿ ಕುಟುಂಬದರನ್ನು ಕಳೆದುಕೊಂಡು, ಅವರ ಆಶ್ರುತರ್ಪಣ ಬಿಡಲು ಬಾಲಸುಬ್ರಹ್ಮಣ್ಯಂ ಅವರು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಗೆ ಬಂದಿರುತ್ತಾರೆ. ಈ ವೇಳೆ ಜ್ಯೋತಿಷಿ ಭಾನುಪ್ರಕಾಶ್‍ಶರ್ಮ ಅವರು ನಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಸುಬ್ರಹ್ಮಣ್ಯಂ ಅವರು ನಡೆದುಕೊಂಡ ರೀತಿ ಮತ್ತು ಅವರ ಗುಣಗಳನ್ನು ಭಾನುಪ್ರಕಾಶ್ ಶರ್ಮ ಅವರು ನೆನೆಯುತ್ತಿದ್ದಾರೆ. ಇದಲ್ಲದೇ ಮುದ್ದಿನಮಾವ ಚಿತ್ರವೂ ಸಹ ಮಂಡ್ಯದ ಶೂಟಿಂಗ್ ಮಹದೇವಪುರದಲ್ಲಿ ನಡೆದಿದೆ. ಶೂಟಿಂಗ್ ವೇಳೆ ಸಾವಿರಾರು ಜನ ಬಾಲಸುಬ್ರಹ್ಮಣ್ಯಂ ಅವರನ್ನು ನೋಡಲು ಬಂದಿದ್ದನ್ನು ಇಲ್ಲಿನ ಜನರು ಮೆಲುಕು ಹಾಕುತ್ತಿದ್ದಾರೆ. ಇದಲ್ಲದೇ ಪಾಂಡವಪುರ ವ್ಯಾಪ್ತಿಯಲ್ಲಿ ನಡೆದ ಕನ್ನಡ ಜಾತ್ರೆಗೆ ಎಸ್‍ಪಿಬಿ ಅವರು ಕನ್ನಡ ಚಿತ್ರಗೀತೆಗಳನ್ನು ಹಾಡಿ ರಂಜಿಸಿದ್ದರು.
ಗಾನಗಂಧರ್ವ ಬಾಲಸುಬ್ರಹ್ಮಣ್ಯಂ ಅವರ ಗಾಯನ ಎಷ್ಟು ಪ್ರಸಿದ್ಧವೋ ಅಷ್ಟೇ ಅವರ ನಟನೆಯೂ ಸಹ ಪ್ರಸಿದ್ಧಿ ಪಡೆದುಕೊಂಡಿದೆ. ಬಾಲಸುಬ್ರಹ್ಮಣ್ಯಂ ಅವರು ನಮ್ಮಿಂದ ದೂರವಾದ್ರು ಸಹ ಅವರ ಕೊಡುಗೆಗಳು ಮಾತ್ರ ದೂರವಾಗುವುದಿಲ್ಲ.
– ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
– ಆರ್ಕೇಸ್ಟ್ರಾದಿಂದ ಆರ್ಟಿಸ್ಟ್
ಬೆಂಗಳೂರು: `ಎಂದರೋ ಮಹಾನುಭವುಲು’ ನಿರ್ಮಿಸಿದಂತಹ ಸಂಗೀತ ಸೌಧದ ಮೇಲೆ ದಶಕಗಳ ಕಾಲ ರಾರಾಜಿಸಿದವರು ಶ್ರೀಪತಿ ಪಂಡಿತಾರಾಧ್ಯುಲು ಬಾಲಸುಬ್ರಹ್ಮಣ್ಯಂ. ಅಬಾಲ ವೃದ್ಧರನ್ನು ಕಟ್ಟಿ ಹಾಕುವ ಸ್ವರಶಕ್ತಿ ಅವರ ಕಂಠಕ್ಕೆ ಮಾತ್ರವಲ್ಲ, ಅವರ ವ್ಯಕ್ತಿತ್ವಕ್ಕೂ ಇತ್ತು.
ಸಿನಿಮಾ ಇಂಡಸ್ಟ್ರಿಯಲ್ಲಿ ನಟನಾಗಿ ಮೊದಲಿಗೆ ಕಾಣಿಸಿಕೊಂಡರೂ, ನಂತರ ಅವರು ಗಾಯಕರಾಗಿ ಅಜರಾಮರವಾದ ಎಷ್ಟೋ ಹಾಡುಗಳನ್ನು ಆಲಾಪಿಸಿದರು. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೋಜಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ಎಸ್‍ಪಿಬಿ ಹಾಡಿದ ಹಾಡುಗಳು ಚಿರಸ್ಥಾಯಿ ಆಗಿರಲಿವೆ. ಗಾಯಕರಾಗಿ, ನಟರಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ, ಕಿರುತೆರೆ ನಿರೂಪಕರಾಗಿ, ಹೀಗೆ ಬಾಲುಗಾರು ನಿಜಕ್ಕೂ ಬಹುಮುಖ ಪ್ರಜ್ಞಾಶಾಲಿ. ಆದರೆ ಅವರೆಲ್ಲ ಸಾಧನೆಗೆ ಅಡಿಪಾಯ ಹಾಕಿದವರೇ ಅವರ ತಂದೆ. ಅದೂ ಸಹ ಹರಿಕಥೆಗಳ ಮೂಲಕ ಎನ್ನುವುದು ವಿಶೇಷ.
ಎಸ್.ಪಿ.ಬಾಲಸುಬ್ರಹ್ಮಣ್ಯಂ 1946ರ ಜೂನ್ 4ರಂದು ಆಂಧ್ರದ ನೆಲ್ಲೂರು ಜಿಲ್ಲೆಯ ಕೋನೇಟಮ್ಮ ಪೇಟೆಯಲ್ಲಿ ಜನಿಸಿದರು. ತಂದೆ ಸಾಂಬಮೂರ್ತಿ, ತಾಯಿ ಶಕುಂತಲಮ್ಮ, ತಂದೆ ಹರಿಕಥೆ ಹೇಳುತ್ತಿದ್ದರು. ಭಕ್ತಿ ರಸ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಹೀಗಾಗಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತದ ಮೇಲೆ ಆಸಕ್ತಿ ಬೆಳೆಯಿತು. ಐದನೇ ವಯಸ್ಸಿನಲ್ಲಿಯೇ ಭಕ್ತರಾಮದಾಸು ನಾಟಕದಲ್ಲಿ ತಂದೆ ಜೊತೆ ಬಾಲು ನಟಿಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಸೋದರಮಾವನ ಮನೆಯಲ್ಲಿ ಪೂರ್ಣಗೊಳಿಸಿ, ಸ್ಕೂಲ್ ಫೈನಲ್ ಶಿಕ್ಷಣವನ್ನು ಶ್ರೀಕಾಳಹಸ್ತಿಯಲ್ಲಿ ಪೂರೈಸಿದ್ದರು. ಶಾಲೆಯಲ್ಲಿ ಕೇವಲ ಓದಿನಲ್ಲಿ ಮಾತ್ರವಲ್ಲ, ಆಟಗಳಲ್ಲಿಯೂ ಎಸ್‍ಪಿಬಿ ಮೊದಲಿಗರಾಗಿದ್ದರು.
ಶಾಲೆಯಲ್ಲಿ ಹಾಡು, ನಾಟಕಗಳಲ್ಲಿ ಎತ್ತಿದ ಕೈ
ಶ್ರೀಕಾಳಹಸ್ತಿಯ ಬೋರ್ಡ್ ಶಾಲೆಯ ಜಿ.ವಿ.ಸುಬ್ರಹ್ಮಣ್ಯಂ ಎಂಬ ಶಿಕ್ಷಕರು, ಬಾಲು ಅವರಿಂದ ಹಾಡೊಂದನ್ನು ಹಾಡಿಸಿ ರೆಕಾರ್ಡ್ ಮಾಡಿದ್ದರು. ಇದು ಬಾಲುಗಾರು ಅವರಿಗೆ ಮರೆಯಲಾಗದ ಅನುಭೂತಿ. ಮತ್ತೊಬ್ಬ ಶಿಕ್ಷಕರಾದ ರಾಧಾಪತಿ ಪ್ರೋತ್ಸಾಹದಿಂದ ಹಲವು ನಾಟಕಗಳಲ್ಲಿ ನಟಿಸಿದ್ದರು. ತಿರುಪತಿಯಲ್ಲಿ ಪಿಯುಸಿ ಓದುತ್ತಿದ್ದಾಗ ಮದ್ರಾಸ್ ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾದ ನಾಟಕದಲ್ಲಿ ಸ್ತ್ರೀಪಾತ್ರದಲ್ಲಿ ಅಭಿನಯಿಸಿದ್ದರು. ವಿಜಯವಾಡ ಆಕಾಶವಾಣಿಯಲ್ಲಿ ಹಾಡುಗಳನ್ನು ಹಾಡಿದ್ದರು.
ಆರ್ಕೇಸ್ಟ್ರಾದಿಂದ ಆರ್ಟಿಸ್ಟ್
ಎಸ್‍ಪಿ ಬಾಲಸುಬ್ರಹ್ಮಣ್ಯಂ ಪಿಯುಸಿ ಬಳಿಕ ಒಂದು ಆರ್ಕೆಸ್ಟ್ರಾ ಶುರು ಮಾಡಿದ್ದರು. ಗೆಳೆಯರೊಂದಿಗೆ ಆರ್ಕೆಸ್ಟ್ರಾ ಮೂಲಕ ಸ್ಟೇಜ್ ಶೋ ನೀಡುತ್ತಿದ್ದರು. ಅನಂತಪುರದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿ ನಂತರ ಅದು ಹಿಡಿಸದೇ ಮದ್ರಾಸ್‍ಗೆ ತೆರಳಿ ಎಂಜಿಯರಿಂಗ್‍ಗೆ ಪರ್ಯಾಯ ಎನಿಸಿದ್ದ ಎಎಂಐಇಗೆ ಸೇರಿದ್ದರು. ಅಲ್ಲಿ ಓದಿನ ಜೊತೆಗೆ ಸಿನಿಮಾದಲ್ಲಿ ಹಾಡಲು ಪ್ರಯತ್ನ ನಡೆಸಿದ್ದರು. ಒಂದು ವರ್ಷದ ಬಳಿಕ ಮಹ್ಮದ್ ಬಿನ್ ತುಘಲಕ್ ಸಿನಿಮಾದಲ್ಲಿ ನಟನಾಗಿ ಕಾಣಿಸಿಕೊಂಡರು. ಹ್ಯಾಪಿ ಬರ್ತ್ ಡೇ ಟು ಯೂ ಎಂದು ಹಾಡುವ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ದರ್ಶನ ನೀಡಿದ್ದರು.
1964ರಲ್ಲಿ ಮದ್ರಾಸ್ ಸೋಷಿಯಲ್ ಅಂಡ್ ಕಲ್ಚರಲ್ ಕ್ಲಬ್ ನಿರ್ವಹಿಸಿದ ಲಲಿತಾ ಸಂಗೀತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಸ್‍ಪಿಬಿಗೆ ಮೊದಲ ಬಹುಮಾನ ಬಂತು. ಪೆಂಡ್ಯಾಲ, ಘಂಟಸಾಲ ಅವರು ಜಡ್ಜ್‍ಗಳಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಕೋದಂಡಪಾಣಿ, ಎಸ್‍ಪಿಬಿ ಗಾಯನ ಕಂಡು ಮಂತ್ರಮುಗ್ಧರಾಗಿದ್ದರು. ಮುಂದೆ ಎಸ್‍ಪಿಬಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡೋದಾಗಿ ಕೋದಂಡಪಾಣಿ ಮಾತು ನೀಡಿದ್ದರು.
ಎಸ್‍ಪಿಬಿ ಮೊದಲ ಹಾಡು
ಯಾರ ಬಳಿಯೂ ಶಾಸ್ತ್ರೀಯವಾಗಿ ಸಂಗೀತಾಭ್ಯಾಸ ಮಾಡದೇ ಇದ್ದರೂ ಎಸ್‍ಪಿಬಿಗೆ ಜನ್ಮದತ್ತವಾಗಿ ಸಂಗೀತ ಸರಸ್ವತಿ ಒಲಿದಿದ್ದಳು. ಹೀಗಾಗಿ ಸಂಗೀತ ನಿರ್ದೇಶಕ ಕೋದಂಡಪಾಣಿಯವರು ಕೊಟ್ಟ ಮಾತಿನಂತೆ ಎಸ್‍ಪಿಬಿಗೆ ಶ್ರೀಶ್ರೀಶ್ರೀ ಮರ್ಯಾದಾ ರಾಮನ್ನ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದರು. ಏಮಿ ಈ ವಿಂತ ಮೋಹಂ ಎಂಬ ಹಾಡಿಗೆ ಪಿಬಿ ಶ್ರೀನಿವಾಸ್, ಪಿ.ಸುಶೀಲಾ ಅವರೊಂದಿಗೆ ಎಸ್‍ಪಿಬಿ ಧ್ವನಿಯಾದರು. ಈ ಹಾಡು ಮೊದಲ ಟೇಕ್‍ನಲ್ಲೇ ಓಕೆ ಆಗಿದ್ದು ವಿಶೇಷ. ಮುಂದೆ ಎಸ್‍ಪಿಬಿ 40 ಸಾವಿರಕ್ಕೂ ಹೆಚ್ಚು ಹಾಡು ಹಾಡಿ ಗಾನಗಂಧರ್ವರಾಗಿದ್ದು ಇತಿಹಾಸ. ಕೋದಂಡಪಾಣಿ ಅವರು ಇಲ್ಲದಿದ್ದರೆ ಬಾಲು ಎಂಬ ವ್ಯಕ್ತಿ ಇರುತ್ತಿರಲಿಲ್ಲ ಎಂದು ಎಸ್‍ಪಿಬಿ ಅವಕಾಶ ಸಿಕ್ಕಾಗಲೆಲ್ಲಾ ಸ್ಮರಿಸುತ್ತಿದ್ದರು.
ಬೆಂಗಳೂರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯಕ ಮಾತ್ರವಲ್ಲದೆ ನಟ, ಡಬ್ಬಿಂಗ್ ಆರ್ಟಿಸ್ಟ್ ಹೀಗೆ ಬೆಳ್ಳಿ ತೆರೆಯಲ್ಲಿ ಮಿಂಚಿ ನಂತರ ಕಿರುತೆರೆಗೂ ಕಾಲಿಟ್ಟು ಪ್ರಸಿದ್ಧಿ ಪಡೆದಿದ್ದರು. ಎದೆ ತುಂಬಿ ಹಾಡಿದೆನು ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು.
90ರ ದಶಕದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಿರುತೆರೆಗೂ ಎಂಟ್ರಿ ಕೊಟ್ಟರು. ತೆಲುಗಿನ ಪಾಡುತಾ ತಿಯಗಾ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಮನೆಮಾತಾದರು. ಕನ್ನಡದಲ್ಲಿ ಸಹ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಆಗಿ ನಿರೂಪಕನಾಗಿ ಗಮನ ಸೆಳೆದರು. ಈ ಕಾರ್ಯಕ್ರಮಗಳಿಂದ ಅದೆಷ್ಟೋ ಸಂಗೀತ ಪ್ರತಿಭೆಗಳು ಬೆಳಕಿಗೆ ಬಂದವು. ಅಲ್ಲದೆ ಈ ಕಾರ್ಯಕ್ರಮದಿಂದ ಎಸ್‍ಪಿಬಿ ಕನ್ನಡಿಗರ ಮನೆ ಮಾತಾದರು.
ಬಾಲು ಗಾನಕ್ಕೆ ಪ್ರಶಸ್ತಿಗಳ ಸುರಿಮಳೆ
ಎಸ್‍ಪಿಬಿ ಗಾನಕ್ಕೆ ಮಂತ್ರಮುಗ್ಧರಾಗದೆ ಇರುವವರೇ ಇಲ್ಲ ಎನ್ನಬಹುದು. ಬಾಲು ಗಾಯನಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ಶಂಕರಾಭರಣಂ ಸಿನಿಮಾಗೆ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತು.್ತ ಹಿಂದಿಯ ಏಕ್ ದುಜೆ ಕೇಲಿಯೇ ಸಿನಿಮಾ, ಕನ್ನಡದ ಪಂಚಾಕ್ಷರಿ ಗವಾಯಿ, ತೆಲುಗಿನ ರುದ್ರವೀಣ, ತಮಿಳಿನ ಮಿನ್ನರ ಕನ್ನವು ಸಿನಿಮಾಗಳಿಗೂ ರಾಷ್ಟ್ರೀಯ ಪ್ರಶಸ್ತಿ ಅರಸಿ ಬಂದಿತ್ತು. ಮೈನೇ ಪ್ಯಾರ್ ಕಿಯಾ ಚಿತ್ರಕ್ಕೆ ಮೊದಲ ಬಾರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು. ಎನ್‍ಟಿಆರ್ ಪ್ರಶಸ್ತಿ, 8 ನಂದಿ ಪ್ರಶಸ್ತಿಗಳು ದಕ್ಕಿದ್ದವು. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಅದೇಕೋ ಬಾಲು ಹೆಸರನ್ನು ಪ್ರಶಸ್ತಿಗಳಿಗೆ ಪರಿಗಣಿಸಲೇ ಇಲ್ಲ ಎನ್ನುವುದು ಬೇಸರದ ಸಂಗತಿ.
ಬೆಂಗಳೂರು: ಗಾಯಕರಾಗಿ ಬಿಡುವಿಲ್ಲದ ದಿನಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೆಲಸ ಮಾಡುತ್ತಿದ್ದರು.
ಹೌದು ಕೇವಲ ಗಾಯಕರಾಗಿ ಮಾತ್ರವಲ್ಲ ಡಬ್ಬಿಂಗ್ ಆರ್ಟಿಸ್ಟ್ ಆಗಿ, ಕಲಾವಿದರಾಗಿ ಸಹ ಎಸ್‍ಪಿಬಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕೆ.ಬಾಲಂಚಂದರ್ ನಿರ್ದೇಶನದ ಮನ್ಮಥಲೀಲ ಸಿನಿಮಾದಲ್ಲಿ ಕಮಲ್ ಹಾಸನ್ ಗಂಟಲು ಕೈಕೊಟ್ಟ ಹಿನ್ನೆಲೆಯಲ್ಲಿ ಎಸ್‍ಪಿಬಿ ಡಬ್ಬಿಂಗ್ ಆರ್ಟಿಸ್ಟ್ ಆಗಬೇಕಾಯ್ತು. ಮುಂದೆ ರಜಿನಿಕಾಂತ್, ವಿಷ್ಣುವರ್ಧನ್, ಸಲ್ಮಾನ್ ಖಾನ್, ಕೆ.ಭಾಗ್ಯರಾಜ್, ಅನಿಲ್ ಕಪೂರ್, ಗಿರೀಶ್ ಕಾರ್ನಾಡ್, ಜೆಮಿನಿ ಗಣೇಶನ್, ಅರ್ಜುನ್ ಸರ್ಜಾ, ರಘುವರನ್, ಸುಮನ್ ಸೇರಿ ಹಲವರಿಗೆ ಧ್ವನಿ ಆಗಿದ್ದರು.
ದಶಾವತಾರಂ ಸಿನಿಮಾದಲ್ಲಿ ಕಮಲ್ ಹಾಸನ್ ಅವರ ಏಳು ಪಾತ್ರಗಳಿಗೆ ಎಸ್‍ಪಿಬಿ ಡಬ್ಬಿಂಗ್ ಹೇಳಿದ್ದು ವಿಶೇಷ. ಅನ್ನಮಯ್ಯ ಸಿನಿಮಾದಲ್ಲಿ ಸುಮನ್‍ಗೆ ಡಬ್ಬಿಂಗ್ ಹೇಳಿದ್ದ ಬಾಲುಗೆ ಉತ್ತಮ ಡಬ್ಬಿಂಗ್ ಆರ್ಟಿಸ್ಟ್ ಎಂದು ನಂದಿ ಅವಾರ್ಡ್ ನೀಡಲಾಗಿತ್ತು. ಗಾಂಧಿ ಸಿನಿಮಾದಲ್ಲಿ ಲೀಡ್ ರೋಲ್‍ನಲ್ಲಿ ನಟಿಸಿದ್ದ ಕಿಂಗ್ ಬೆನ್‍ಸ್ಲೇಗೂ ಎಸ್‍ಪಿಬಿ ಡಬ್ಬಿಂಗ್ ಹೇಳಿದ್ದರು. ಈ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು.
ಎಸ್‍ಪಿಬಿಯೊಳಗಿನ ನಟ
ತೆರೆ ಹಿಂದೆ ಗಾಯಕನಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೋಟಿ ಕೋಟಿ ಅಭಿಮಾನಿಗಳನ್ನು ರಂಜಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಟನಾಗಿ ಸಹ ಹಲವು ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಕನ್ನಡದಲ್ಲಿ ಬಾಳೊಂದು ಚದುರಂಗ, ತಿರುಗುಬಾಣ, ಸಂದರ್ಭ, ಹುಲಿಯಾ, ಮುದ್ದಿನ ಮಾವ, ನಾನು ನನ್ನ ಹೆಂಡ್ತಿ, ಮಾಂಗಲ್ಯಂ ತಂತುನಾನೇನಾ, ಹೆತ್ತರೆ ಹೆಣ್ಣನ್ನೇ ಹೇರಬೇಕು, ಮಹಾ ಎಡಬಿಡಂಗಿ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗಿನಲ್ಲಿ ಮಿಥುನಂ, ಪವಿತ್ರಬಂಧಂ ಸೇರಿ ನೂರಾರು ಸಿನಿಮಾಮಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಎಸ್‍ಪಿಬಿ ಬಣ್ಣ ಹಚ್ಚಿದ್ದು ತೆಲುಗಿನ ದೇವದಾಸು ಸಿನಿಮಾಗೆ.
ಉಡುಪಿ: ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ ವಿಚಾರ ತಿಳಿದು ಮನಸ್ಸಿಗೆ ಅತೀವ ಖೇದವಾಗಿದೆ. ಸಂಗೀತ ಲೋಕವನ್ನು ಪ್ರೀತಿಸುವ ಎಲ್ಲರಿಗೆ ಇದು ದುಃಖಕರ ವಿಚಾರ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂತಾಪದ ಸೂಚಿಸಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಕುರಿತು ಮಾತನಾಡಿದ ಅವರು, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮನೆಮಾತಾಗಿದ್ದರು. ಕೋಟ್ಯಂತರ ಸಂಗೀತ ರಸಿಕರನ್ನು ಸೃಷ್ಟಿ ಮಾಡಿದ್ದರು. ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾದದ್ದು. ಅವರ ಅನಾರೋಗ್ಯದ ಸಂದರ್ಭ ಕೂಡ ಬಹಳಷ್ಟು ಮಂದಿ ಅವರಿಗಾಗಿ ಪ್ರಾರ್ಥನೆ ಮಾಡಿದ್ದರು ಎಂದು ಸ್ವಾಮೀಜಿ ಹೇಳಿದರು.
ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತೆ ಹುಟ್ಟಿ ಬರಬೇಕು. ಅವರ ಆತ್ಮಕ್ಕೆ ಭಗವಂತ ಸದ್ಗತಿ ದೊರಕಿಸಲಿ. ಅವರ ಕುಟುಂಬಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನು ಸಹಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಪೇಜಾವರಶ್ರೀ ಹೇಳಿದರು.
ಚಿಕ್ಕಮಗಳೂರು: ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ದೇಶದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದು, ತಮ್ಮೊಂದಿಗಿನ ವಡನಾಟವನ್ನೂ ಮೆಲುಕು ಹಾಕುತ್ತಿದ್ದಾರೆ. ಅದೇ ರೀತಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಡಾ.ವೀರಸೋಮೇಶ್ವರ ಶ್ರೀಗಳು ಸಹ ತಮ್ಮ ಬಳಿ ಎಸ್‍ಪಿಬಿ ಹೇಳಿದ್ದ ಗುಟ್ಟಿನ ಕುರಿತು ಹೇಳಿದ್ದಾರೆ.
ಕೊರೊನಾ ಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿರುವ ಶ್ರೀಗಳು ಅಲ್ಲಿಂದಲೇ ಗಾನಗಂಧರ್ವನ ಕುರಿತು ಮಾತನಾಡಿದ್ದಾರೆ. ಎಸ್‍ಪಿಬಿ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನ್ನ ಹೆಸರು ಶ್ರೀಪತಿ ಪಂಡಿತಾರಾಧ್ಯ ಬಾಲಸುಬ್ರಹ್ಮಣ್ಯಂ ಎಂದು, ನಾನು ಆರಾಧಿಸೋದು ವೀರಭದ್ರಸ್ವಾಮಿಯನ್ನು, ನಮ್ಮದು ವೀರಭದ್ರಸ್ವಾಮಿಯನ್ನು ಆರಾಧಿಸುವ ಮನೆತನ ಎಂದು ಹೇಳಿದ್ದರಂತೆ. 2006ರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ ಗುಟ್ಟನ್ನು ರಂಭಾಪುರಿ ಶ್ರೀಗಳು ಇದೀಗ ನೆನೆದಿದ್ದಾರೆ.
ಸೌಜನ್ಯಶೀಲ ಹಿನ್ನೆಲೆಯ ಗಾಯಕ ಬಾಲಸುಬ್ರಹ್ಮಣ್ಯಂ ಅವರ ನಿಧನದ ವಿಷಯ ಕೇಳಿ ಅತ್ಯಂತ ನೋವಾಗಿದೆ. ಎಸ್‍ಪಿಬಿ ಅವರು 15 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಸುಮಧುರ ಕಂಠದಿಂದ ಹಾಡಿದ ಶ್ರೇಯಸ್ಸು ಅವರದ್ದು. ಕನ್ನಡದಲ್ಲಿ ಅವರು ಹಾಡಿದ ಭಕ್ತಿಗೀತೆಗಳು ಜನಮನ ಮುಟ್ಟಿದ್ದು, ನಾವು ಅವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಹಾಡಿದ ಚಿತ್ರಗೀತೆಗಳು ಕೂಡ ಜನರ ಮನಸ್ಸಲ್ಲಿ ಸದಾ ಹಚ್ಚಹಸಿರಾಗಿವೆ ಎಂದಿದ್ದಾರೆ.
ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯರಿಗೆ ಬೋಧಿಸಿದ ಸಿದ್ಧಾಂತ ಶೀಖಾಮಣಿಯ ಶ್ಲೋಕಗಳನ್ನು ರಾಗ-ಲಯ ಬದ್ಧವಾಗಿ ಹಾಡಿ ಅದಕ್ಕೆ ಕನ್ನಡದಲ್ಲಿ ಸರಳವಾಗಿ ಅರ್ಥವನ್ನೂ ಹೇಳಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಾಳೆಹೊನ್ನೂರಿನಲ್ಲಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೂ ಅವರು ಆಗಮಿಸಿದ್ದರು. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದರ್ಶನವನ್ನೂ ಮಾಡಿ ಸಂದರ್ಶನಕ್ಕೆ ಬಂದಾಗ ಗುಟ್ಟಿನ ಮಾತು ಹೇಳಿ ಸಂತೋಷಗೊಳಿಸಿದ್ದರು.
ವೀರಭದ್ರಸ್ವಾಮಿ ನನ್ನ ಆರಾಧ್ಯ ದೈವ. ನಮ್ಮದು ವೀರಭದ್ರಸ್ವಾಮಿಯನ್ನೇ ಆರಾಧಿಸುವ ಮನೆತನ. ನನ್ನ ಹೆಸರು ಶ್ರೀಪತಿ ಪಂಡಿತರಾಧ್ಯ ಬಾಲಸುಬ್ರಹ್ಮಣ್ಯಂ ಇದು ನನ್ನ ಪೂರ್ಣ ಹೆಸರು ಎಂದು ಹೇಳಿದ್ದರು. ಶಿವ ಭಕ್ತರಾದ ಮತ್ತು ವೀರಶೈವ ಪರಂಪರೆಯಲ್ಲಿ ಹುಟ್ಟಿದ ಅವರು ಎಲ್ಲ ವರ್ಗದ ಎಲ್ಲ ಸಮುದಾಯದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅಂತಹ ಶ್ರೇಷ್ಠ ಗಾಯಕರನ್ನು ಈ ನಾಡು ಕಳೆದುಕೊಂಡು ತಬ್ಬಲಿಯಾಗಿದೆ ಕೊರೊನಾ ಸೋಂಕಿನಿಂದ ಬಳಲಿ ಇಂದು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದು ಅತೀವ ದುಃಖ ತಂದಿದೆ. ಅವರ ಪವಿತ್ರ ಆತ್ಮಕ್ಕೆ ಭಗವಂತ ಚಿರಶಾಂತಿ ಅನುಗ್ರಹಿಸಲಿ. ಭಗವಂತ ಅವರ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.