Tag: ಎಸ್. ಜಾನಕಿ

  • ಮೊಟ್ಟ ಮೊದಲು ಅವಕಾಶ ಕೊಡಿಸಿದ್ದು ಜಾನಕಮ್ಮ

    ಮೊಟ್ಟ ಮೊದಲು ಅವಕಾಶ ಕೊಡಿಸಿದ್ದು ಜಾನಕಮ್ಮ

    ಬಾಲು ಆಗಲು ಕಾರಣ ಯಾರು ಗೊತ್ತೆ?

    ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಮಣ್ಯಂ ಅವರನ್ನು ಗಾನ ಗಂಧರ್ವ, ಗಾನ ಗಾರುಡಿಗ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಖ್ಯಾತ ಗಾಯಕಿ ಎಸ್.ಜಾನಕಿ ಅಲಿಯಾಸ್ ಎಲ್ಲರ ಪ್ರೀತಿಯ ಜಾನಕಮ್ಮ ಮೊಟ್ಟ ಮೊದಲ ಬಾರಿಗೆ ಅಷ್ಟು ಉದ್ದದ ಹೆಸರನ್ನು ಬಾಲು ಎಂದು ಮಾಡಿದ್ದರು. ಪ್ಲೇ ಬ್ಯಾಕ್ ಸಿಂಗರ್ ಆಗಿ ಮೊದಲ ಹೆಜ್ಜೆಯಿಡಲೂ ಜಾನಕಮ್ಮ ಕಾರಣ. ಅವರಿಂದಲೇ ಇಂದು ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಬಾಲು ಅನೇಕ ಸಾರಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಸಂಗೀತವನ್ನೇ ಉಸಿರಾಗಿಸಿದ್ದ ಎಸ್‍ಪಿಬಿಗೆ ಆಸ್ಪತ್ರೆಯಲ್ಲಿ ನಡೆದಿತ್ತು ಸಂಗೀತ ಥೆರಪಿ

    ಅಪ್ಪನ ಮಾತಿನಂತೆ ಬಾಲು ಸಂಗೀತರಾಗನಾಗಬೇಕು, ಸಿನಿಮಾಕ್ಕಾಗಿ ಹಾಡಬೇಕು, ಆ ಮೂಲಕ ಅಪ್ಪ ಅಮ್ಮನಿಗೆ ಸಹಾಯ ಮಾಡಬೇಕು. ಜೊತೆಗೆ ನನ್ನ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹಠ ಹಿಡಿದಿದ್ದರು. ಅದು ಅಷ್ಟು ಸುಲಭ ಆಗಿರಲಿಲ್ಲ ಅನ್ನೋದು ಕೆಲವೇ ತಿಂಗಳಲ್ಲಿ ಗೊತ್ತಾಯಿತು. ಆದರೂ ಹಿಡಿದ ಹಠವನ್ನು ಬಿಡಲಿಲ್ಲ. ಕಾಲೇಜುಗಳಲ್ಲಿ ಹಲವಾರು ಸಿಂಗಿಂಗ್ ಕಾಂಪಿಟೇಶನ್‍ಗಳಲ್ಲಿ ಹಾಡಿದರು. ಅನೇಕ ಬಹುಮಾನಗಳನ್ನು ಪಡೆದರು. ಆಗ ಒಂದು ದಿನ ಜಾನಕಮ್ಮ ಅದೇ ಒಂದು ಸ್ಪರ್ಧೆಗೆ ಬಂದಿದ್ದರು. ಈ ವೇಳೆ ಬಾಲು ಅವರೊಳಗಿದ್ದ ಪ್ರತಿಭೆಯನ್ನು ಗುರುತು ಹಿಡಿದು, ಬೆನ್ನು ತಟ್ಟಿದ್ದರು.

    ಕಾಲೇಜುಗಳಲ್ಲಿ ಹಾಡುತ್ತಿದ್ದ ಬಾಲು ಅವರಿಗೆ ಮೊಟ್ಟ ಮೊದಲು ಪ್ಲೇ ಬ್ಯಾಕ್ ಸಿಂಗರ್ ಆಗಿ ಎಂದು ಹೇಳಿದ್ದೇ ಜಾನಕಮ್ಮ. ಅಲ್ಲಿವರೆಗೆ ಅದರ ಬಗ್ಗೆ ಕನಸನ್ನೂ ಬಾಲು ಕಂಡಿರಲಿಲ್ಲ. ಎಲ್ಲಿಯ ಸಿನಿಮಾ ಎಲ್ಲಿಯ ನಾನು? ನಂಗ್ಯಾರು ಅವಕಾಶ ಕೊಡುತ್ತಾರೆ? ಯಾರನ್ನು ಹೋಗಿ ಕೇಳಬೇಕು? ಹೀಗೆ ಪ್ರಶ್ನೆಗಳನ್ನು ಇಟ್ಟುಕೊಂಡು ಸುಮ್ಮನೆ ಕುಳಿತಿದ್ದರು. ಆಗ ಜಾನಕಮ್ಮನವರೇ ಶಿಫಾರಸ್ಸು ಮಾಡಿದರು. ಹಲವಾರು ಪರಿಚಿತ ನಿರ್ದೇಶಕರ ಬಳಿ ಬಾಲು ಅವರನ್ನು ಕಳಿಸಿದರು.

    ಆಗ ಎಲ್ಲಾ ನಿರ್ದೇಶಕರು ಹೇಳಿದ್ದು ಒಂದೇ ಮಾತು. ನಿನ್ನ ವಯಸ್ಸು ಚಿಕ್ಕದು, ಓದು ಮುಗಿಸಿಕೊಂಡು ಬಾ. ಆಮೇಲೆ ಅವಕಾಶ ಕೊಡುತ್ತೇವೆ ಎಂದಿದ್ದು. ಆಗ ಬಾಲು ವಯಸ್ಸು ಕೇವಲ ಹದಿನೇಳು ವರ್ಷ ಅಷ್ಟೇ. ಕೊನೆಗೂ ಹದಿನೇಳು ವರ್ಷ ಮುಗಿಯಿತು. ಆದರೆ ಓದು ಅರ್ಧಂಬರ್ಧ ಆಯಿತು. ಕೊನೆಗೆ ಅಪ್ಪನ ಮಾತಿನಂತೆ ಸಂಗೀತದಲ್ಲೇ ಸಾಧನೆ ಮುಂದುವರಿಸಲು ನಿರ್ಧರಿಸಿದರು. 1966 ಆಗಸ್ಟ್ ತಿಂಗಳಲ್ಲಿ ಮೊಟ್ಟ ಮೊದಲ ಬಾರಿಗೆ ಅವರಿಗೆ ಹಿನ್ನೆಲೆ ಗಾಯಕನಾಗಿ ಹಾಡಲು ಅವಕಾಶ ದೊರೆಯಿತು. ಅಂದಿನಿಂದ ಅವರು ಹಿಂದೆ ತಿರುಗಿ ನೋಡಲಿಲ್ಲ. ಏಳು ಬೀಳುಗಳ ಜೊತೆಗೆ ಒಂದೊಂದೇ ಹಾಡಿನಿಂದ ಬೆಳೆಯುತ್ತಾ ಹೋದರು. ಕೊನೆಗೆ ಜಾನಕಮ್ಮನವರ ಜೊತೆಯೇ ನೂರಾರು ಹಾಡುಗಳನ್ನು ಹಾಡಿದರು. ಅವೆಲ್ಲಾ ಸೂಪರ್ ಹಿಟ್ ಆದವು.

  • ಆಸ್ಪತ್ರೆಯಿಂದ ಗಾನಕೋಗಿಲೆ ಡಿಸ್ಚಾರ್ಜ್

    ಆಸ್ಪತ್ರೆಯಿಂದ ಗಾನಕೋಗಿಲೆ ಡಿಸ್ಚಾರ್ಜ್

    ಮೈಸೂರು: ಸೊಂಟ ಮುರಿತಕ್ಕೊಳಗಾಗಿ ಮೈಸೂರಿನ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ದಾಖಲಾಗಿದ್ದ ಗಾನ ಕೋಗಿಲೆ ಎಸ್. ಜಾನಕಿ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ.

    ಡಿಸ್ಚಾರ್ಜ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗಾನ ಕೋಗಿಲೆ, ಕೆಲವು ದಿನಗಳ ಹಿಂದೆ ಮೈಸೂರಿನ ಸ್ನೇಹಿತರ ಮನೆಗೆ ಬಂದಿದ್ದೆ. ಮನೆಯಲ್ಲಿ ಹೊಸ್ತಿಲು ದಾಟುವಾಗ ಎಡವಿ ಬಿದ್ದಿದರಿಂದ ಸೊಂಟದ ಭಾಗದಲ್ಲಿ ನೋವಾಗಿತ್ತು. ಕೂಡಲೇ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಂಟದ ಭಾಗದಲ್ಲಿ ವೈದ್ಯರು ಏನೋ ಬದಲಾವಣೆ ಮಾಡಿದ್ದಾರೆ. ಜಾಯಿಂಟ್ ರೀಪ್ಲೇಸ್ಮೆಂಟ್ ಮಾಡಲಾಗಿದೆ ಎಂದು ತಿಳಿಸಿದರು.

    ಕನ್ನಡ ನಾಡಿನ ಜನರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ. ಕನ್ನಡ ನಾಡಿನ ಮಕ್ಕಳ ಆಶೀರ್ವಾದದಿಂದ ಗುಣಮುಖಳಾಗುತ್ತೇನೆ. ವೈದ್ಯರು ವಿಶ್ರಾಂತಿ ಪಡೆಯಬೇಕೆಂದು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆದು ಗುಣಮುಖಳಾಗುತ್ತೇನೆ ಎಂದು ಆಭಿಮಾನಿಗಳಿಗೆ ಹೇಳಿದರು.

    ಈ ಬಳಿಕ ಮಾತನಾಡಿದ ಆಸ್ಪತ್ರೆಯ ವೈದ್ಯ ನಿತಿನ್, ಕಾಲು ಜಾರಿ ಬಿದ್ದಿದರಿಂದ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದರು. ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೂರು ವಾರಗಳ ಕಾಲ ಅವರು ವಿಶ್ರಾಂತಿ ಪಡೆಯಬೇಕು. ಈ ವಯಸ್ಸಿನಲ್ಲಿ ಸಹಜವಾಗಿ ಇಂತಹ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಅಭಿಮಾನಿಗಳು ಗಾಬರಿ ಪಡುವಂತದ್ದು ಏನು ಇಲ್ಲ ಎಂದು ಸ್ಪಷ್ಟಪಡಿಸಿದರು.

    80 ವರ್ಷದ ಎಸ್. ಜಾನಕಿ ಅವರು ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಜಾನಕಿ ಅವರು ತನ್ನ ವೃತ್ತಿ ಜೀವನದ ಕೊನೆಯ ಹಾಡನ್ನು ಮೈಸೂರಿನಲ್ಲಿ ಹಾಡಿದ್ದರು.

  • ಗಾನಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

    ಗಾನಕೋಗಿಲೆ ಎಸ್.ಜಾನಕಿ ಆಸ್ಪತ್ರೆಗೆ ದಾಖಲು

    ಮೈಸೂರು: ಗಾನಕೋಗಿಲೆ ಎಸ್.ಜಾನಕಿ ಅವರಿಗೆ ಸೊಂಟ ಮುರಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಎಸ್.ಜಾನಕಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆಯೇ ಜಾನಕಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಜಾನಕಿ ಅವರು ಮೈಸೂರಿನಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು.

    ಈ ಸಂದರ್ಭದಲ್ಲಿ ಮನೆಯಲ್ಲಿ ಬಿದ್ದು ಸೊಂಟ ಮುರಿದುಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊಂಟದ ಭಾಗದಲ್ಲಿ ಫ್ರಾಕ್ಚರ್ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.

    ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ.ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಅವರ ಕೊನೆಯ ಗಾಯನ ಕೂಡ ಮೈಸೂರಿನಲ್ಲಿ ಹಾಡಿದ್ದರು.

  • ಗಾಯನಕ್ಕೆ ವಿದಾಯ ಹೇಳಿದ ಗಾನಕೋಗಿಲೆ ಎಸ್.ಜಾನಕಿ

    ಗಾಯನಕ್ಕೆ ವಿದಾಯ ಹೇಳಿದ ಗಾನಕೋಗಿಲೆ ಎಸ್.ಜಾನಕಿ

    ಮೈಸೂರು: ಸಂಗೀತದ ಗಾನ ಕೋಗಿಲೆ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಹಿರಿಯ ಗಾಯಕಿ ಎಸ್. ಜಾನಕಿ ಅವರು ಇಂದು ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಗಾಯನ ನಿಲ್ಲಿಸಿದ್ದಾರೆ.

    ಹೌದು, 80 ವರ್ಷದ ಎಸ್.ಜಾನಕಿ ತಮ್ಮ ಗಾಯನ ವೃತ್ತಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಇಂದು ನಗರದಲ್ಲಿ `ಎಸ್.ಜಾನಕಿ ಮ್ಯೂಸಿಕಲ್ ನೈಟ್’ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕೊನೆಯದಾಗಿ ಹಾಡಿದ್ದಾರೆ. ನಗರದ ಮಾನಸ ಗಂಗೋತ್ರಿ ಮೈದಾನದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ಅನೇಕ ಸಿನಿ, ಸಂಗೀತ ಲೋಕದ ಗಣ್ಯರು ಆಗಮಿಸಿದ್ದಾರೆ.

    ರಾಜವಂಶಸ್ಥೆ ಪ್ರಮೋದಾ ದೇವಿ, ನಟ ರಾಜೇಶ್, ಹಿರಿಯರಾದ ನಟಿ ಜಯಂತಿ, ಭಾರತೀ ವಿಷ್ಣುವರ್ಧನ್, ಹೇಮಾ ಚೌಧರಿ ಸೇರಿದಂತೆ ಹಲವು ಗಣ್ಯರು ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಉದ್ಘಾಟನೆಯ ನಂತರ ಮಾತು ಆರಂಭಿಸಿದ ಗಾಯಕಿ ಎಸ್.ಜಾನಕಿ ಅವರು, ಹಾಡು ನಿಲ್ಲಿಸಿದ್ದೇನೆ. ಮೈಸೂರಿನ ಈ ಕಾರ್ಯಕ್ರಮದ ಮೂಲಕ ನನ್ನ ವೃತ್ತಿ ಜೀವನದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು. ಕಡೆಯ ಕಾರ್ಯಕ್ರಮದಲ್ಲು ತಮ್ಮ ಶಿಸ್ತು ಪ್ರದರ್ಶಿಸಿದ ಎಸ್.ಜಾನಕಿ ಅವರು ಉದ್ಘಾಟನೆಯ ಮಾತುಗಳ ನಂತರ, ಅರೆ ಕ್ಷಣವನ್ನು ವ್ಯರ್ಥ ಮಾಡದೆ ಹಾಡು ಆರಂಭಿಸಿದರು.

    ಗಜಮುಖನನ್ನ ನೆನೆದು, ಪೂಜಿಸಲೇಂದೆ ಹಾಡಿಗೆ ಧ್ವನಿಯಾದ ಜಾನಕಮ್ಮನ ಸ್ವರಕ್ಕೆ ನೆರೆದಿದ್ದವರೇಲ್ಲ ಮೂಕ ವಿಸ್ಮಿತರಾದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಹಿರಿಯ ನಟಿಯರಾದ ಜಯಂತಿ ಹಾಗೂ ಭಾರತಿ, ಎಸ್. ಜಾನಕಿ ಕುರಿತು ಭಾವುಕರಾಗಿ ಮಾತನಾಡಿದ್ರು. ಹಿರಿಯ ನಟ ರಾಜೇಶ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ರಾಜನ್ ಸಹ ವೇದಿಕೆ ಹಂಚಿಕೊಂಡು ಜಾನಕಮ್ಮರನ್ನು ಹಾಡಿಹೊಗಳಿದರು.

    ಅಂತಿಮವಾಗಿ ಸತತ 3 ಗಂಟೆಗಳ ಕಾರ್ಯಕ್ರಮದ ಮೂಲಕ ಎಸ್.ಜಾನಕಿ ತಮ್ಮ ಗಾಯನ ನಿಲ್ಲಿಸಿದರು. ಬಹುತೇಕ ಕನ್ನಡ ಗೀತೆಗಳನ್ನ ಹಾಡಿ ನೆರೆದಿದ್ದವರನ್ನ ರಂಜಿಸಿದ ಜಾನಕಮ್ಮ. ತಮ್ಮ ಮುಗ್ದ ಕಂಠಸಿರಿಗೆ ವಿಶ್ರಾಂತಿ ನೀಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಸುಮಧುರ ಧ್ವನಿಯಾಗಿ ಉಳಿದರು. ವೇದಿಕೆ ಏರಿದ್ದ ಅಭಿಮಾನಿಗಳು ಜಾನಕಮ್ಮರನ್ನ ಸನ್ಮಾನಿಸಿ ಗೌರವಿಸಿದರು. ಮೈಸೂರು ಪೇಟ ತೊಡಿಸಿ, ಹೂವಿನ ಹಾರಗಳೊಂದಿಗೆ, ಬಿಳ್ಕೋಡುಗೆ ನೀಡಿದ್ರು.

    ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ. ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಇದೀಗ ಅವರ ಕೊನೆಯ ಗಾಯನ ಕೂಡ ಮೈಸೂರಿನಲ್ಲಿ ಹಾಡಿದ್ದಾರೆ.

    https://www.youtube.com/watch?time_continue=1789&v=u7hM79uZF_U

  • ಮೈಸೂರಿನಲ್ಲಿ ಗಾಯನ ನಿಲ್ಲಿಸಲಿದ್ದಾರೆ ಗಾನ ಕೋಗಿಲೆ ಎಸ್.ಜಾನಕಿ!

    ಮೈಸೂರಿನಲ್ಲಿ ಗಾಯನ ನಿಲ್ಲಿಸಲಿದ್ದಾರೆ ಗಾನ ಕೋಗಿಲೆ ಎಸ್.ಜಾನಕಿ!

    ಮೈಸೂರು: ಗಾನ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿರುವ ಖ್ಯಾತ ಗಾಯಕಿ ಎಸ್. ಜಾನಕಿ ಅವರು ತಮ್ಮ ಗಾಯನ ಪಯಣದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ.

    ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಅಕ್ಟೋಬರ್ 28 ರಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಜೀವನದ ನಿರಂತರ ಆರು ದಶಕದ ಸಂಗೀತ ಗಾಯನದ ಪಯಣದ ಕೊನೆಯ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.

    ದಕ್ಷಿಣ ಭಾರತದ ಹೆಮ್ಮೆಯ ಗಾಯಕಿ ಎಂದೆ ಹೆಗ್ಗಳಿಕೆಯನ್ನು ಪಡೆದಿರುವ ಎಸ್.ಜಾನಕಿ ಅವರು, “ನನಗೆ ವಯಸ್ಸಾಗಿದೆ. ಇನ್ನು ಮುಂದೆ ನಾನು ಹಾಡುವುದಿಲ್ಲ. ಆದ್ದರಿಂದ ಗಾಯನದಿಂದ ಹಿಂದೆ ಸರಿಯುತ್ತಿದ್ದೇನೆ. ಈ ವಯಸ್ಸಿನಲ್ಲಿ ಹಾಡುವುದನ್ನು ನಿಲ್ಲಿಸುವುದೇ ಸರಿ ಎನಿಸಿದೆ. ಆದ್ದರಿಂದ ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವೇ ನನ್ನ ಕೊನೆಯ ಬಹಿರಂಗ ಗಾಯನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ನಾನು ಇನ್ನು ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಹಾಗೂ ಟಿವಿ, ಪತ್ರಿಕೆಗಳಿಗೆ ಸಂದರ್ಶನವನ್ನು ನೀಡುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

    ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ. ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಇದೀಗ ಅವರ ಕೊನೆಯ ಗಾಯನ ಕೂಡ ಇಲ್ಲಿಯೇ ನಡೆಯಲಿದೆ.

    ಈ ಕಾರ್ಯಕ್ರಮಕ್ಕೆ ತಮಿಳುನಾಡು, ಆಂಧ್ರ ಮತ್ತು ಕೇರಳದಿಂದಲೂ ಅನೇಕ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಈ ಬಾರಿ ರಾಜಮಾತೆ ಪ್ರಮೋದಾದೇವಿ ಅವರಿಂದ ಸನ್ಮಾನವನ್ನು ಸ್ವೀಕರಿಸಲಿದ್ದಾರೆ ಎಂದು ಅಂದಿನ ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

     

    https://www.youtube.com/watch?v=u7hM79uZF_U