Tag: ಎಸ್.ಆರ್.ಶ್ರೀನಿವಾಸನ್

  • ಬಿಎಸ್‍ವೈರನ್ನು ಹಾಡಿ ಹೊಗಳಿದ ಜೆಡಿಎಸ್ ಶಾಸಕ

    ಬಿಎಸ್‍ವೈರನ್ನು ಹಾಡಿ ಹೊಗಳಿದ ಜೆಡಿಎಸ್ ಶಾಸಕ

    ತುಮಕೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ದಿಟ್ಟನಾಯಕರು. ಅವರು ಯಾವತ್ತೂ ವಚನ ಭ್ರಷ್ಟರಾಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ, ಜೆಡಿಸ್ ಶಾಸಕ ಎಸ್.ಆರ್.ಶ್ರೀನಿವಾಸನ್ ಹಾಡಿ ಹೊಗಳಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಗೊಂದಲಗಳು ಎಲ್ಲ ಪಕ್ಷದಲ್ಲೂ ಇದ್ದದ್ದೇ. ಆದರೆ ಸಿಎಂ ಯಡಿಯೂರಪ್ಪ ಅವರು ಪಕ್ಷಾಂತರಿಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೈಕಮಾಂಡ್ ಟೈಟ್ ಮಾಡಿದ್ದರಿಂದ ತಾತ್ಕಾಲಿಕವಾಗಿ ಅವರಿಗೆ ಹಿನ್ನಡೆಯಾಗಿರಬಹುದು. ಆದರೆ ಕೊಟ್ಟ ಆಶ್ವಾಸನೆಯನ್ನು ಸಿಎಂ ಎಷ್ಟೇ ಕಷ್ಟ ಬಂದರೂ ಈಡೇರಿಸುತ್ತಾರೆ ಎಂದು ಹೇಳಿದರು.

    ಸಿಎಂ ಯಡಿಯೂರಪ್ಪ ಅವರಲ್ಲಿ ದಿಟ್ಟ ನಾಯಕತ್ವ ಇದೆ. ಒಂದು ವೇಳೆ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗದೇ ಇದ್ದರೆ ಅವರ ಜೀವ ಹೋಗಿಬಿಡುತ್ತದೆ. ಅವರಿಗೆ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

    ಬೆಂಗಳೂರಿನಲ್ಲಿ ಗುರುವಾರ ನಡೆದ ಜೆಡಿಎಸ್ ಸಭೆಗೆ ಗೈರಾಗಿದಕ್ಕೆ ಸ್ಪಷ್ಟನೆ ಕೊಟ್ಟ ಎಸ್.ಆರ್.ಶ್ರೀನಿವಾಸ್, ಜೆಡಿಎಸ್ ಕಾರ್ಯಕ್ರಮ ಯಾವತ್ತೂ ತಡವಾಗಿ ಆರಂಭವಾಗುತ್ತದೆ. ಪಕ್ಷದ ನಾಯಕರು ಬೆಳಗ್ಗೆ 9:30 ಗಂಟೆಗೆ ಕಾರ್ಯಕ್ರಮಕ್ಕೆ ಬರುವಂತೆ ಹೇಳಿದರೆ ಕಾರ್ಯಕರ್ತರು 11:30 ಗಂಟೆಗೆ ಬರುತ್ತಾರೆ. ಹಾಗಾಗಿ ನಾನು ಲೇಟಾಗಿ ಹೋಗಿದ್ದೆ. ಅಷ್ಟರಲ್ಲಿ ಕಾರ್ಯಕ್ರಮ ಮುಗಿದಿತ್ತು. ವೇದಿಕೆ ಮೇಲೆ ಹತ್ತಲಿಲ್ಲ. ಹಾಗಂತ ನನಗೆ ಪಕ್ಷದ ವಿರುದ್ಧ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದರು.