Tag: ಎಸ್ ಟಿ ಸೋಮಶೇಖರ್

  • ಸಿಎಲ್‍ಪಿ ಸಭೆಯಲ್ಲಿ ಜಾರ್ಜ್ ಗೆ ಸೋಮಶೇಖರ್ ಕ್ಲಾಸ್

    ಸಿಎಲ್‍ಪಿ ಸಭೆಯಲ್ಲಿ ಜಾರ್ಜ್ ಗೆ ಸೋಮಶೇಖರ್ ಕ್ಲಾಸ್

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಶಿಸ್ತಿನ ವಿಚಾರ ಪ್ರಸ್ತಾಪಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಬಿಜೆಪಿ ಶಾಸಕರಲ್ಲಿ ಶಿಸ್ತು ಇದೆ. ನಮ್ಮ ಶಾಸಕರು ಹಾದಿ ಬೀದಿಯಲ್ಲಿ ನಿಂತು ಮಾತನಾಡುತ್ತಾರೆ ಎಂದು ಹೇಳಿದರಂತೆ. ಆಗ ಸಚಿವರ ವಿರುದ್ಧ ತಿರುಗಿ ಬಿದ್ದ ಎಸ್.ಟಿ.ಸೋಮಶೇಖರ್ ಅವರು, ನಮ್ಮ ಕಷ್ಟ ನಮಗೆ ಗೊತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಶಾಸಕರನ್ನು ಮೊದಲು ಕೇಳಿ, ಆಮೇಲೆ ಮಾತಾಡಿ ಎಂದು ಕಿಡಿಕಾರಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ನೀವು ಸಚಿವರಾಗಿ ಅರಾಮಾಗಿ ಓಡಾಡಿಕೊಂಡು ಇದ್ದೀರಿ. ನಿಮಗೆ ನಮ್ಮ ಕಷ್ಟ ಎಲ್ಲಿ ಅರ್ಥ ಆಗುತ್ತದೆ. ಸುಮ್ಮನೆ ಮಾತಾಡಬೇಡರೀ ಜಾರ್ಜ್. ನಾನು ಹೇಳಿದ್ದು ಅರ್ಥವಾಯಿತಾ ಎಂದು ಸೋಮಶೇಖರ್ ಅಸಮಾಧಾನ ಹೊರ ಹಾಕಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಬ್ಬರನ್ನೂ ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.

    ಇನ್ನುಮುಂದೆ ಸಿಎಂ ಕುಮಾರಸ್ವಾಮಿ ಅವರು ಎಲ್ಲಾ ಶಾಸಕರಿಗೂ ಸಿಗುತ್ತಾರೆ. ಜಿಲ್ಲಾವಾರು ಶಾಸಕರ ಸಭೆ ಮಾಡಿ ಸಮಸ್ಯೆ ಆಲಿಸುತ್ತಾರೆ. ಯಾವುದಾದರು ಶಾಸಕರಿಗೆ ಸಿಎಂ ಸಿಗದಿದ್ದರೆ ನನ್ನ ಗಮನಕ್ಕೆ ತನ್ನಿ, ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  • “ಸಿದ್ದರಾಮಯ್ಯ ಮೈಸೂರು ಮಾತ್ರ ಉಳಿಸಿಕೊಂಡ್ರು, ನನ್ನ ಜಿಲ್ಲೆ ಬಿಟ್ಟುಕೊಟ್ಟಿದ್ದು ಸರಿಯಲ್ಲ”

    “ಸಿದ್ದರಾಮಯ್ಯ ಮೈಸೂರು ಮಾತ್ರ ಉಳಿಸಿಕೊಂಡ್ರು, ನನ್ನ ಜಿಲ್ಲೆ ಬಿಟ್ಟುಕೊಟ್ಟಿದ್ದು ಸರಿಯಲ್ಲ”

    – ಆಪ್ತರ ಜೊತೆ ಪರಮೇಶ್ವರ್ ಬೇಸರ
    – ಪಕ್ಷದಲ್ಲಿ ನನ್ನ ಮಾತಿಗೆ ಬೆಲೆಯಿಲ್ಲ

    ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‍ಗೆ ಬಿಟ್ಟುಕೊಟ್ಟ ವಿಚಾರವಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.

    ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ವಿಚಾರವಾಗಿ ಜಿ.ಪರಮೇಶ್ವರ್ ಅವರು ನನ್ನ ಜೊತೆಗೆ ಫೋನ್‍ನಲ್ಲಿ ಮಾತನಾಡಿದ್ದಾರೆ. ಸ್ವಲ್ಪ ಬೇಜಾರಿನಿಂದ ಮಾತನಾಡಿದರು. ಆದರೆ ಮೈತ್ರಿ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆ. ಹೀಗಾಗಿ ಹೈಕಮಾಂಡ್ ನಿರ್ಧಾರಕ್ಕೆ ಮಣಿದಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

    ನನ್ನ ಕ್ಷೇತ್ರವನ್ನೇ ಯಾಕೆ ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರವನ್ನು ಮಾತ್ರ ಉಳಿಸಿಕೊಂಡರು. ನನ್ನ ಜಿಲ್ಲೆ ಬಿಟ್ಟುಕೊಟ್ಟಿದ್ದು ಸರಿಯಲ್ಲವೆಂದು ಎಂದು ಜಿ.ಪರಮೇಶ್ವರ್ ಅವರು ಆಪ್ತರ ಮುಂದೆ ಅಸಮಾಧಾನ ಹೊರಹಾಕಿದ್ದಾರೆ ಅಂತ ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಪಕ್ಷದಲ್ಲಿ ನನ್ನ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ. ನನ್ನ ಮೇಲೆ ಈ ಕೋಪವೇಕೆ? ತುಮಕೂರಿನ ಹಾಲಿ ಸಂಸದ ಮುದ್ದುಹನುಮೇಗೌಡ ಅವರು ಚೆನ್ನಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಅವರಿಗೆ ಯಾಕೆ ಅನ್ಯಾಯ ಮಾಡಿದರೋ ಗೊತ್ತಿಲ್ಲ. ಈ ರೀತಿ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಿಡಿಎ ಅಧ್ಯಕ್ಷ ಬೀದೀಲಿ ನಿಂತು ಸಿಎಂ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲು ಆಗುತ್ತಾ- ಪುಟ್ಟರಾಜು ಕಿಡಿ

    ಬಿಡಿಎ ಅಧ್ಯಕ್ಷ ಬೀದೀಲಿ ನಿಂತು ಸಿಎಂ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲು ಆಗುತ್ತಾ- ಪುಟ್ಟರಾಜು ಕಿಡಿ

    – ಕಾಂಗ್ರೆಸ್ ಹೈ ಕಮಾಂಡ್‍ಗೆ ಖಡಕ್ ಸಂದೇಶ ನೀಡಿದ ಜೆಡಿಎಸ್ ಸಚಿವ

    ಮಂಡ್ಯ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಬೀದಿಯಲ್ಲಿ ನಿಂತು ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಮಾತನಾಡಿದರೆ ಸುಮ್ಮನಿರಲು ಆಗುತ್ತಾ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಯಶವಂತಪುರ ಕ್ಷೇತ್ರದ ಶಾಸಕರಾಗಿರುವ ಎಸ್.ಟಿ.ಸೋಮಶೇಖರ್ ವಿರುದ್ಧ ಕಿಡಿಕಾರಿದ್ದಾರೆ.

    ಮೇಲುಕೋಟೆ ಕಲ್ಯಾಣಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು, ಸರ್ಕಾರ ಐದು ವರ್ಷ ಸುಲಲಿತವಾಗಿ ನಡೆಯಬೇಕು ಅಂದ್ರೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ತಮ್ಮ ನಾಯಕರಿಗೆ ಹಾಗೂ ಶಾಸಕರಿಗೆ ಸ್ಪಷ್ಟವಾಗಿ ಸೂಚನೆ ನೀಡಬೇಕು. ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಶಾಸಕರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

    ಎಲ್ಲವನ್ನು ಸರಿ ಮಾಡದಿದ್ದರೆ ಮುಂದಾಗುವ ಅನಾಹುತಕ್ಕೆ ಕಾಂಗ್ರೆಸ್ ಹೊಣೆ ಹೊರಬೇಕಾಗುತ್ತದೆ. ಬಿಜೆಪಿ ಮಾಜಿ ಶಾಸಕ ಯೋಗೇಶ್ವರ್ ಅವರು ಕೆಲವು ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಅವರು ಕಳೆದ ಏಳು ತಿಂಗಳಿನಿಂದ ಪ್ರಯತ್ನಿಸುತ್ತಿದ್ದಾನೆ. ಆದರೆ ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಅವರು ಮೇಲುಕೋಟೆ ಅಭಿವೃದ್ಧಿಯನ್ನು ಹೊತ್ತಿರೋದು ಸಂತಸದ ವಿಚಾರ. ಕಲ್ಯಾಣಿ ಅಕ್ಕಪಕ್ಕದ ವ್ಯಾಪಾರಸ್ಥರನ್ನು ಒಕ್ಕಲೆಬ್ಬೆಸುವುದಿಲ್ಲ. ಅಂಗಡಿ ತೆರವು ಮಾಡಿರುವ ವ್ಯಾಪಾರಸ್ಥರಿಗೆ ತಲಾ 10 ಸಾವಿರ ರೂ. ನೀಡಿ, ಪ್ರತ್ಯೇಕ ಅಂಗಡಿಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.

    ಈ ಧಾರ್ಮಿಕ ಕ್ಷೇತ್ರ ಜನರ ಮನಸ್ಸಿನಲ್ಲಿರುವುದಕ್ಕೆ ಇನ್ಫೋಸಿಸ್ ಸಂಸ್ಥೆಯ ಅಭಿವೃದ್ಧಿ ಸಹಕಾರಿಯಾಗಿದೆ. ಹೀಗಾಗಿ ಈ ಬಾರಿ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಸುಧಾಮೂರ್ತಿ ಅವರು ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಸಿದ್ದರಾಮಯ್ಯನವ್ರ ಬಗ್ಗೆ 4 ಒಳ್ಳೆ ಮಾತಾಡಿದ್ದೆ ಅಷ್ಟೇ, ಜೆಡಿಎಸ್‍ನವ್ರು ಏನ್ ಬೇಕಿದ್ರೂ ಕಾಮೆಂಟ್ಸ್ ಮಾಡ್ಕೊಳ್ಳಲಿ-ಸೋಮಶೇಖರ್

    ಸಿದ್ದರಾಮಯ್ಯನವ್ರ ಬಗ್ಗೆ 4 ಒಳ್ಳೆ ಮಾತಾಡಿದ್ದೆ ಅಷ್ಟೇ, ಜೆಡಿಎಸ್‍ನವ್ರು ಏನ್ ಬೇಕಿದ್ರೂ ಕಾಮೆಂಟ್ಸ್ ಮಾಡ್ಕೊಳ್ಳಲಿ-ಸೋಮಶೇಖರ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಕೆಲಸದ ಬಗ್ಗೆ 4 ಒಳ್ಳೆಯ ಮಾತುಗಳನ್ನು ಆಡಿದ್ದೇನೆ ವಿನಾಃ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅಥವಾ ಎಚ್ ಡಿ ಕುಮಾರಸ್ವಾಮಿ ಅಥವಾ ಜೆಡಿಎಸ್ ಬಗ್ಗೆ ಒಂದೇ ಒಂದು ಪದ ಮಾತಾಡಿಲ್ಲ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜಕೀಯ ಶಕ್ತಿ ಇಲ್ಲದವರಿಗೆ ಸಿದ್ದರಾಮಯ್ಯನವರು ಶಕ್ತಿ ಕೊಟ್ಟಿದ್ದಾರೆ. 4 ಒಳ್ಳೆ ಮಾತನಾಡಲು ಆಗೋದಿಲ್ಲ ಎಂದರೆ ಏನ್ರೀ ನಾವೇನೂ ಮಾತಾನಾಡುವುದೇ ಬೇಡವಾ ಎಂದು ಪ್ರಶ್ನಿಸಿದ ಅವರು, ಅವರ ಪಾರ್ಟಿಯವರು ಏನ್ ಬೇಕಾದ್ರೂ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ರು.

    ಜೆಡಿಎಸ್ ಬಗ್ಗೆ ಅಥವಾ ಎಚ್‍ಡಿ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಅಪ್ಪಿತಪ್ಪಿನೂ ಮಾತಾನಾಡಿಲ್ಲ. ಅವರ ಹೆಸರನ್ನು ಹೇಳಲಿಲ್ಲ. ಸಮ್ಮಿಶ್ರ ಸರ್ಕಾರ ಗೆದ್ದಿದೆ ಅಂತಾನೂ ಮಾತಾಡಿಲ್ಲ. 4-5 ವರ್ಷ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ರು. ಅವರ ಬಗ್ಗೆ 4 ಒಳ್ಳೆಯ ಮಾತನಾಡಿದೆ ಅಷ್ಟೇ. ಅದು ಬಿಟ್ಟು ಸಮ್ಮಿಶ್ರ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಜಡ್ಜ್ ಮಾಡಿಲ್ಲ ಅಂದ್ರು. ಇದನ್ನೂ ಓದಿ: ಕೆಲವರು ಮಗ, ಸೊಸೆಗೆ ಮಾತ್ರ ರಾಜಕೀಯ ಅವಕಾಶ ನೀಡ್ತಾರೆ : ಎಚ್‍ಡಿಡಿಗೆ ಸೋಮಶೇಖರ್ ಟಾಂಗ್

    ಯಾವ ಕಿರುಕುಳನೂ ಇಲ್ಲ. ಅವರ ಪಕ್ಷದ ವಿಚಾರವನ್ನು ನಾನು ಅಪ್ಪಿತಪ್ಪಿನೂ ಮಾತಾಡಿಲ್ಲ. ನಮ್ಮ ಪಕ್ಷದ ಮುಖಂಡರ ಬಗ್ಗೆ ನಾನು ಮಾತಾನಾಡಿರ್ತಿನಿ. ನಾವು ಯಾವತ್ತೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ಮಾತನಾಡುವಷ್ಟು ದೊಡ್ಡವನಾಗಿ ಬೆಳೆದಿಲ್ಲ. ಬೇಕಿದ್ರೆ ಅವರ ಪಕ್ಷದವರು ನಾನು ಮಾತಾಡಿರುವ ಭಾಷಣದ ಕ್ಲಿಪ್ ತರಿಸಿಕೊಂಡು ನೋಡಲಿ ಎಂದು ಸಿಡಿಮಿಡಿಗೊಂಡರು.

    ಬಸವರಾಜ ಹೊರಟ್ಟಿಯವರು 7 ಬಾರಿ ಎಂಎಲ್‍ಸಿ ಆಗಿದ್ದಾರೆ. ಅವರು ಪದೇ ಪದೇ ನನ್ನ ಭಾಷಣದ ಕ್ಲಿಪ್ ಹಾಕಿಕೊಂಡು ನೋಡಲಿ. ಕುಂಬಳಕಾಯಿ ಕಳ್ಳ ಅಂದ್ರೆ ಹೊರಟ್ಟಿಯವರು ಯಾಕೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮುಖಂಡರ ಬಗ್ಗೆ ಹಾಗೂ ಕುಮಾರಸ್ವಾಮಿ ಬಗ್ಗೆ ಎಲ್ಲೂ ಕೂಡ ಒಂದೇ ಒಂದು ಪದ ಮಾತಾಡಿಲ್ಲ. ಬೇರೆ ಪಕ್ಷದ ಬಗ್ಗೆ ಟೀಕೆ ಮಾಡಲು ನಾನು ಇದೂವರೆಗೂ ಹೋಗಿಲ್ಲ. ಹೋಗೋದು ಇಲ್ಲ ಎಂದು ಸ್ಪಷ್ಟಪಡಿಸಿದ್ರು.

    ಯಾವುದಾದ್ರೂ ಮಂತ್ರಿ ಕೇಳಿದ್ರೆ, ಆಯ್ತು ನಮ್ಮಲ್ಲೇ ಮುಖಂಡರುಗಳು ಮಕ್ಕಳು ಕೇಳುತ್ತಾರೆ ಅನ್ನೋ ಭಾವನೆಯಲ್ಲಿ ನಾನು ಹೇಳಿದ್ದೆ ವಿನಹ ದೇವೇಗೌಡ ಫ್ಯಾಮಿಲಿ ಬಗ್ಗೆ ನಾನು ಇದೂವರೆಗೂ ಮಾತಾಡಿಲ್ಲ. ಕಾಂಗ್ರೆಸ್ ನವರೂ ಏನ್ ಬೇಕಿದ್ರೂ ಕಾಮೆಂಟ್ಸ್ ಮಾಡಿಕೊಳ್ಳಲಿ. ನನಗೆ ಒಂದು ಲಿಮಿಟ್ ಇರುತ್ತದೆ. ಆ ಗೆರೆ ದಾಟಿ ನಾನು ಹೋಗುವುದಿಲ್ಲ ಎಂದರು.

    https://www.youtube.com/watch?v=i9skRR-k5h8

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡನೇ ಲಿಸ್ಟ್​ನಲ್ಲೂ ಶಾಸಕ ಸುಧಾಕರ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಡೌಟ್

    ಎರಡನೇ ಲಿಸ್ಟ್​ನಲ್ಲೂ ಶಾಸಕ ಸುಧಾಕರ್‌ಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಡೌಟ್

    – ಹ್ಯಾರಿಸ್, ಸುಬ್ಬಾರೆಡ್ಡಿ, ನನ್ನ ಅಧ್ಯಕ್ಷ ಸ್ಥಾನ ಕ್ಲಿಯರ್- ಸೋಮಶೇಖರ್ ಸ್ಪಷ್ಟನೆ

    ಬೆಂಗಳೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ 5 ನಿಗಮ-ಮಂಡಳಿ ಅಧ್ಯಕ್ಷ ನೇಮಕ ತಡೆ ವಿಚಾರದ ಗೊಂದಲ ಸ್ವಲ್ಪ ಮಟ್ಟಿಗೆ ಶಮನವಾದಂತೆ ಕಾಣುತ್ತಿದೆ. 5 ಸ್ಥಾನಗಳ ಪೈಕಿ 3 ಸ್ಥಾನಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಂಕಿತ ಹಾಕಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

    ಗೃಹ ಕಚೇರಿ ಕೃಷ್ಣದಲ್ಲಿ ಇಂದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಶಾಸಕರು, ನನಗೆ, ಶಾಸಕರಾದ ಹ್ಯಾರಿಸ್, ಸುಬ್ಬಾರೆಡ್ಡಿ ಅವರಿಗೆ ನೀಡಲಾಗಿದ್ದ ನಿಗಮ-ಮಂಡಳಿ ಸ್ಥಾನಕ್ಕೆ ಸಹಿ ಹಾಕಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ಕಳುಹಿಸಿದ್ದೇನೆ ಅಂತ ಸಿಎಂ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಶಾಸಕ ಸುಧಾಕರ್ ಗೆ ಸಚಿವ ಸ್ಥಾನವೂ ಇಲ್ಲ, ಈಗ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಪದವಿಗೂ ಕುತ್ತು

    ಮೊದಲ ಪಟ್ಟಿಯಲ್ಲಿ ಯಾಕೆ ಸಹಿ ಹಾಕಿಲ್ಲ ಎನ್ನುವುದು ಗೊತ್ತಿಲ್ಲ. ಈ ಕುರಿತು ಕುಮಾರಸ್ವಾಮಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮೊದಲ ಪಟ್ಟಿಯಲ್ಲಿ ಹೆಸರು ಬಂದರೇನು, ಎರಡನೇ ಪಟ್ಟಿಯಲ್ಲಿ ಬಂದರೆ ಏನು ವ್ಯತ್ಯಾಸ ಆಗುವುದಿಲ್ಲ. ಸಿಎಂ ಸಹಿ ಹಾಕಿರುವುದಾಗಿ ಹೇಳಿದ್ದಾರೆ. ಆದೇಶ ಬಂದ ಕೂಡಲೇ ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಮೈತ್ರಿ ಮಾಡೋದ್ರಲ್ಲಿ ಜೆಡಿಎಸ್ ಅವರೇ ಬೆಸ್ಟ್: ಸುಧಾಕರ್ ವ್ಯಂಗ್ಯ

    ಉಳಿದ ಎರಡು ಸ್ಥಾನಗಳ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಂತೆ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಹೀಗಾಗಿ ಎರಡನೇ ಪಟ್ಟಿಯಲ್ಲಿಯೂ ಶಾಸಕ ಡಾ.ಸುಧಾಕರ್ ಮತ್ತು ವೆಂಕಟರಮಣ ಅವರಿಗೆ ನೀಡಿದ್ದ ಸ್ಥಾನಗಳಿಗೆ ಸಿಎಂ ಸಹಿ ಹಾಕದೇ ತಡೆಹಿಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಬಿಎಂಪಿ ಮೇಯರ್ ಚುನಾವಣೆಗೂ ರೆಸಾರ್ಟ್ ರಾಜಕೀಯ!

    ಬಿಬಿಎಂಪಿ ಮೇಯರ್ ಚುನಾವಣೆಗೂ ರೆಸಾರ್ಟ್ ರಾಜಕೀಯ!

    ರಾಮನಗರ: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿಯೂ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಬಿಜೆಪಿ ಹೈಜಾಕ್ ಭೀತಿಯಿಂದಾಗಿ ಗುರುವಾರ ರಾತ್ರಿ ಪಾಲಿಕೆಯ ಐವರು ಪಕ್ಷೇತರ ಸದಸ್ಯರನ್ನು ಬಿಡದಿ ಸಮೀಪದ ಈಗಲ್‍ಟನ್ ರೆಸಾರ್ಟ್‍ಗೆ ಕಾಂಗ್ರೆಸ್ ನಾಯಕರು ಕರೆತಂದಿದ್ದಾರೆ.

    ಈ ಬಾರಿಯ ಬಿಬಿಎಂಪಿ ಮೇಯರ್ ಸ್ಥಾನವನ್ನು ಕೈ ತಪ್ಪಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎನ್ನುವ ಭಯ ಕಾಂಗ್ರೆಸ್ ಪಾಳ್ಯದಲ್ಲಿ ಶುರುವಾಗಿದೆ. ಈಗಾಗಲೇ ಪಾಲಿಕೆಯ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಹಲವು ಆಮಿಷಗಳನ್ನು ಒಡ್ಡಿ ಬಿಜೆಪಿ ತನ್ನತ್ತ ಸೆಳೆದುಕೊಂಡಿದೆ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪ. ಹೀಗಾಗಿ ಉಳಿದ ಐವರನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಈ ರೆಸಾರ್ಟ್ ವಾಸದ ಮೊರೆ ಹೋಗಿದೆ.

    ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ನಾಯಕರು ಶಾಸಕರಾದ ಮುನಿರತ್ನ, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್ ಅವರಿಗೆ ಪಕ್ಷೇತರ ಶಾಸಕರನ್ನು ಆಪರೇಷನ್ ನಿಂದ ಬಚಾವ್ ಮಾಡುವ ಹೊಣೆ ನೀಡಿದ್ದಾರೆ. ಬೆಂಗಳೂರಿನಿಂದ ಬಿಡದಿಯ ರೆಸಾರ್ಟ್‍ಗೆ ಆಗಮಿಸಿದ ಪಕ್ಷೇತರ ಕಾರ್ಪೋರೇಟರ್‍ಗಳು ಇಂದು ರೆಸಾರ್ಟ್‍ನಲ್ಲಿ ಕಾಲ ಕಳೆಯಲಿದ್ದಾರೆ. ರೆಸಾರ್ಟ್‍ಗೆ ಆಗಮಿಸುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಕಳೆದ ಮೂರು ವರ್ಷಗಳಿಂದ ನಮಗೆ 7 ಜನ ಬಿಬಿಎಂಪಿ ಪಕ್ಷೇತರ ಸದಸ್ಯರು ಬೆಂಬಲ ನೀಡುತ್ತಿದ್ದರು. ಆದರೆ ಅವರಲ್ಲಿ ಇಬ್ಬರು ಬಿಜೆಪಿಯ ಆಮಿಷದ ಹಿನ್ನೆಲೆಯಲ್ಲಿ ನಮ್ಮನ್ನು ತೊರೆದಿದ್ದಾರೆ. ಅಷ್ಟೇ ಅಲ್ಲದೆ ಉಳಿದಿರುವ ಐವರನ್ನು ಸೆಳೆಯುವ ಯತ್ನಕ್ಕೆ ಬಿಜೆಪಿಯವರು ಕೈಹಾಕಿದ್ದಾರೆ. ಬಿಜೆಪಿಯವರು ನೀಡುತ್ತಿರುವ ಮಾನಸಿಕ ಕಿರುಕುಳದಿಂದ ತಪ್ಪಿಸಲು ಪಾಲಿಕೆ ಸದಸ್ಯರನ್ನು ಇಲ್ಲಿಗೆ ಕರೆತಂದಿದ್ದೇವೆ. ಸದ್ಯಕ್ಕೆ ಬಂದೋಬಸ್ತ್ ಮಾಡಿಕೊಂಡಿದ್ದು, ಚುನಾವಣೆಯ ಸಮಯಕ್ಕೆ ನೇರವಾಗಿ ಬಿಬಿಎಂಪಿ ಕಚೇರಿಗೆ ಹೋಗುತ್ತೇವೆ ಎಂದು ತಿಳಿಸಿದರು.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಪಕ್ಷೇತರ ಸದಸ್ಯರನ್ನು ರೆಸಾರ್ಟ್‍ಗೆ ಕರೆದೊಯ್ಯಲು ಸೂಚನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನೀವು ವೋಟ್ ಹಾಕಿಲ್ಲ, ನಿಮ್ಗೆ ನೀರು ಬಿಡಲ್ಲ- ಕಾಂಗ್ರೆಸ್ ಶಾಸಕನ ವಿರುದ್ಧ ಗಂಭೀರ ಆರೋಪ

    ನೀವು ವೋಟ್ ಹಾಕಿಲ್ಲ, ನಿಮ್ಗೆ ನೀರು ಬಿಡಲ್ಲ- ಕಾಂಗ್ರೆಸ್ ಶಾಸಕನ ವಿರುದ್ಧ ಗಂಭೀರ ಆರೋಪ

    ಬೆಂಗಳೂರು: ಪಕ್ಷಕ್ಕೆ ವೋಟ್ ಹಾಕಿಲ್ಲ. ಹೀಗಾಗಿ ನೀರು ಬಿಡಬೇಡಿ ಎಂದಿದ್ದಾರೆ ಅನ್ನೋ ಗಂಭೀರ ಆರೋಪವೊಂದು ಮೈತ್ರಿ ಸರ್ಕಾರದ ಕಾಂಗ್ರೆಸ್ ಶಾಸಕನ ವಿರುದ್ಧ ಕೇಳಿಬಂದಿದೆ.

    ಯಶವಂತಪುರ ಶಾಸಕ ಎಸ್.ಟಿ ಸೋಮ್ ಶೇಖರ್ ವಿರುದ್ಧ ಈ ಆರೋಪ ಕೇಳಿಬರುತ್ತಿದೆ. ಹೇರೋಹಳ್ಳಿ ವಾರ್ಡ್ ಏರಿಯಾದ ಜನ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡಿಲ್ಲ. ಹೀಗಾಗಿ ಆ ಏರಿಯಾಗೆ ನೀರು ಬಿಡಬೇಡಿ ಅಂತ ಶಾಸಕರು ಕಾರ್ಪೋರೇಟರ್ ರಾಜಣ್ಣಗೆ ತಿಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಹೆರೋಹಳ್ಳಿ ವಾರ್ಡ್ ನ ಏಕದಂತ ಬಡಾವಣೆಗೆ ಕಳೆದು ಐದು ತಿಂಗಳಿಂದ ನೀರಿನ ಪೂರೈಕೆ ಇಲ್ಲ. ಈ ಬಡಾವಣೆಯ ಜನ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಶಾಸಕ ಎಸ್.ಟಿ ಸೋಮ್ ಶೇಖರ್ ಮತ್ತು ಕಾಂಗ್ರೆಸ್ ಕಾರ್ಪೋರೇಟರ್ ನೀರು ಬಿಡುತ್ತಿಲ್ಲ ಎಂದು ಈ ಭಾಗದ ಜನರು ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ.

    ಈ ಆರೋಪ ಕೇಳಿ ಬರುತ್ತಿದ್ದಂತೆಯೇ ಕಾರ್ಪೋರೇಟರ್ ರಾಜಣ್ಣ ಇದನ್ನು ತಳ್ಳಿ ಹಾಕಿದ್ದು, ಈ ಭಾಗದಲ್ಲಿ ಇರುವ ಬಿಜೆಪಿ ಮತ್ತು ಜೆಡಿಎಸ್ ಅವರು ಸುಮ್ ಸುಮ್ನೆ ಆರೋಪ ಮಾಡುತ್ತಿದ್ದಾರೆ. ನನಗೆ ನಮ್ಮ ಶಾಸಕರು ಬೈದಿಲ್ಲ. ನಮ್ಮ ಆತ್ಮಾವಲೋಕನ ಸಭೆಯಲ್ಲಿ ಜನರಿಗೆ ಸ್ಪಂದಿಸು ಅಂತಾ ಹೇಳಿದ್ದಾರೆ. ಆದ್ರೆ ಇದನ್ನು ರಾಜಕೀಯ ಲೀಡರ್ ಗಳು ತಪ್ಪು ಅರ್ಥ ಮಾಡಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಈ ಭಾಗದಲ್ಲಿ ನೀರಿನ ಸಮಸ್ಯೆ ಇದೆ. ನಾಲ್ಕು ತಿಂಗಳಿನಿಂದಲೂ ನೀರಿಲ್ಲ. ಕಾವೇರಿ ಪೈಪ್ ಅಳವಡಿಸಲಾಗುತ್ತಿದೆ. ಅದಕ್ಕೆ ಹದಿನೈದು ದಿನಕ್ಕೊಮ್ಮೆ ನಾನೇ ಟ್ಯಾಂಕರ್ ಮೂಲಕ ನೀರನ್ನ ಏರಿಯಾಗಳಿಗೆ ಪೂರೈಕೆ ಮಾಡುತ್ತಿದ್ದೇನೆ. ಆದರೆ ಸರಿಯಾಗಿ ಟ್ಯಾಂಕರ್ ಗಳಲ್ಲಿ ನೀರು ಬರುತ್ತಿಲ್ಲ ಅಂತ ಜನ ಆರೋಪ ಮಾಡುತ್ತಿದ್ದಾರೆ ಅಂತ ಕಾರ್ಪೋರೇಟರ್ ಹೇಳಿದ್ದಾರೆ.

    ಕಳೆದ ಚುನಾವಣೆಯಲ್ಲಿ ಹೆರೋಹಳ್ಳಿ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಅವರಿಗೆ 183 ಮತ, ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡರಿಗೆ 399 ಮತ ಹಾಗೂ ಬಿಜೆಪಿಯ ಅಭ್ಯರ್ಥಿ ಜಗ್ಗೇಶ್‍ಗೆ 129 ವೋಟ್ ಬಿದ್ದಿತ್ತು. ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಜನ ವೋಟ್ ಮಾಡಿದ್ದಾರೆ. ಕಾಂಗ್ರೆಸ್ಸಿಗೆ ಕಡಿಮೆ ಮತ ಬಿದ್ದಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • `ಕೈ’ ಶಾಸಕರ ಚೇಲಾಗಳ ಗೂಂಡಾಗಿರಿ- ಸಮಾವೇಶಕ್ಕೆ ಜಾಗ ಕೊಡ್ಲಿಲ್ಲವೆಂದು ಕಾಂಪೌಂಡ್ ಒಡೆದು ವ್ಯಕ್ತಿ ಮೇಲೆ ಹಲ್ಲೆ

    `ಕೈ’ ಶಾಸಕರ ಚೇಲಾಗಳ ಗೂಂಡಾಗಿರಿ- ಸಮಾವೇಶಕ್ಕೆ ಜಾಗ ಕೊಡ್ಲಿಲ್ಲವೆಂದು ಕಾಂಪೌಂಡ್ ಒಡೆದು ವ್ಯಕ್ತಿ ಮೇಲೆ ಹಲ್ಲೆ

    ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಚೇಲಾಗಳ ಗೂಂಡಾಗಿರಿ ಮುಂದುವರಿದಿದ್ದು, ಇದೀಗ ಯಶವಂತಪುರ ಶಾಸಕ ಎಸ್‍ಟಿ ಸೋಮಶೇಖರ್ ಚೇಲಾಗಳು ಜಮೀನು ಮಾಲೀಕ ಪುಟ್ಟರಾಜು ಎಂಬವರಿಗೆ ಧಮ್ಕಿ ಹಾಕಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.

    ತಿಗಳರಪಾಳ್ಯದಲ್ಲಿ ಇದೇ ಭಾನುವಾರ ಮನೆ-ಮನೆಗೆ ಕಾಂಗ್ರೆಸ್ ಸಮಾವೇಶಕ್ಕೆ ಜಾಗ ನೀಡುವಂತೆ ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದರು. ಆದ್ರೆ ಪುಟ್ಟರಾಜು ಅವರು 4 ಎಕರೆ ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿದ್ದ ಕಾರಣ ಜಮೀನು ಕೊಡಲ್ಲ ಎಂದಿದ್ದರು. ಇದರಿಂದ ಸಿಟ್ಟುಗೊಂಡ ಶಾಸಕರ ಚೇಲಾಗಳು ಶನಿವಾರ ಖಾಲಿ ಜಾಗಕ್ಕೆ ಹಾಕಿದ್ದ ಕಾಂಪೌಂಡ್ ಒಡೆದು ಹಾಕಿದ್ದಾರೆ. ಅಲ್ಲದೇ ಅಂದೇ ರಾತ್ರಿ ಖಾಲಿ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ಎಂಬವರು ಸೇರಿದಂತೆ ನಾಲ್ವರ ಮೇಲೆ ಎರಗಿ, ಪ್ರಕಾಶ್‍ನನ್ನು ರಸ್ತೆ ತುಂಬೆಲ್ಲಾ ಅಟ್ಟಾಡಿಸಿ ಹೊಡೆದಿದ್ದಾರೆ. ಎದೆಗೆ ಕಲ್ಲಿನಿಂದ ಜಜ್ಜಿ, ತೊಡೆಗೆ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

    ಯಶವಂತಪುರ ಶಾಸಕ ಎಸ್‍ಟಿ ಸೋಮಶೇಖರ್

    ಈ ಕುರಿತು ಹಲ್ಲೆಗೊಳಗಾದ ಪ್ರಕಾಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಮಾವೇಶ ಮಾಡಲು ಜಾಗ ಕೊಡಲ್ಲ ಎಂದಿದ್ದಕ್ಕೆ ಸಿಟ್ಟುಗೊಂಡ ಶಾಸಕ ಸೋಮಶೇಖರ್ ಅವರ ಸುಮಾರು 25-30 ಬೆಂಬಲಿಗರು ಮಚ್ಚು, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ನನ್ನನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಕೂಡಲೇ ನಾನು ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹೊರತು ಈ ಕುರಿತು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಹೇಳಿದ್ದಾರೆ.

    ಪ್ರಕಾಶ್ ಸದ್ಯ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಾಸಕ ಸೋಮಶೇಖರ್ ಅವರು ಯಾವುದೇ ಪ್ರತಿಕ್ರಿಯೆ ನೀಡದೇ, ಅದೇನ್ ಮಾಡ್ಕೋತ್ತಿರೋ ಮಾಡ್ಕೊಳ್ಳಿ ಅಂತ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆ.