Tag: ಎಸ್ ಟಿ ಸೋಮಶೇಖರ್

  • ಸಿಟ್ಟು ಬಿಟ್ಟು ಕೆಲಸ ಮಾಡಿ – ಬಿಎಸ್‍ವೈಯಿಂದ ಜಗ್ಗೇಶ್ ಮನವೊಲಿಕೆ

    ಸಿಟ್ಟು ಬಿಟ್ಟು ಕೆಲಸ ಮಾಡಿ – ಬಿಎಸ್‍ವೈಯಿಂದ ಜಗ್ಗೇಶ್ ಮನವೊಲಿಕೆ

    ಬೆಂಗಳೂರು: ಉಪಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದಲ್ಲಿರುವ ಬಂಡಾಯ ಶಮನಕ್ಕೆ ಸಿಎಂ ಯಡಿಯೂರಪ್ಪ ಪ್ರಯತ್ನಿಸುತ್ತಿದ್ದು, ಇಂದು ಯಶವಂತಪುರದ ಟಿಕೆಟ್ ಆಕಾಂಕ್ಷಿಯಾಗಿದ್ದ ನಟ ಜಗ್ಗೇಶ್ ಅವರನ್ನು ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ.

    ರಾಜ್ಯದಲ್ಲಿ ಉಪಚುನಾವಣಾ ಕಾವು ದಿನೆ ದಿನೆ ಹೆಚ್ಚಾಗುತ್ತಿದೆ. ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸೇರಿರುವ ಅನರ್ಹ ಶಾಸಕರಿಗೆ ಉಪಚುನಾವಣೆ ಟಿಕೆಟ್ ನೀಡಿರುವುದಕ್ಕೆ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿದೆ. ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ ಸೋಮಶೇಖರ್ ಸ್ಪರ್ಧೆಯಿಂದ ನಟ ಜಗ್ಗೇಶ್ ಅಸಮಾಧಾನಗೊಂಡಿದ್ದರು.

    ಈ ವಿಚಾರವಾಗಿ ಜಗ್ಗೇಶ್ ಅವರನ್ನು ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಕರೆಸಿಕೊಂಡ ಸಿಎಂ ಬಿಎಸ್‍ವೈ, ನಮ್ಮ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಜೊತೆ ನಿಂತು ಅವರನ್ನು ಗೆಲ್ಲಿಸುವಂತೆ ಮತ್ತು ಸೋಮಶೇಖರ್ ಮೇಲೆ ಸಿಟ್ಟು ಬಿಟ್ಟು ಕೆಲಸ ಮಾಡುವಂತೆ ಜಗ್ಗೇಶ್ ಅವರಿಗೆ ಸಿಎಂ ಸೂಚಿಸಿದ್ದಾರೆ. ಅಲ್ಲದೇ ಯಶವಂತಪುರದಲ್ಲಿ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವಂತೆ ಹೇಳಿದ್ದಾರೆ.

    ಸಿಎಂ ಭೇಟಿಯ ನಂತರ ಮಾತನಾಡಿದ ಜಗ್ಗೇಶ್, ಉಪಚುನಾವಣೆಯಲ್ಲಿ ಕೆಲಸ ಮಾಡೋಕೆ ಸಿಎಂ ಆದೇಶ ಮಾಡಿದ್ದಾರೆ. ಹಿಂದೆ ಕಡೆಗಳಿಗೆಯಲ್ಲಿ ನಾನು ಯಶವಂತಪುರದ ಅಭ್ಯರ್ಥಿ ಆಗಿದ್ದೆ. 60 ಸಾವಿರ ಮತಕೊಟ್ಟ ಎಲ್ಲರಿಗೂ ಧನ್ಯವಾದಗಳು. ಯಡಿಯೂರಪ್ಪ ಮೂರೂವರೆ ವರ್ಷ ಸಿಎಂ ಆಗಿ ಮುಂದುವರಿಯಬೇಕು. ಅದು ನಮ್ಮ ಧ್ಯೇಯ. ನಮ್ಮ ಮನೆ ಬಿಜೆಪಿ ಭದ್ರವಾಗಿರುತ್ತದೆ. ಅದಕ್ಕಾಗಿ ಸೋಮಶೇಖರ್ ಜತೆ ವೇದಿಕೆ ಹಂಚಿಕೆ ಮಾಡ್ತೇನೆ. ಅವರು ಹಿಂದೆ ನಮ್ಮ ವಿರೋಧಿ ಅಭ್ಯರ್ಥಿಯಾಗಿದ್ರು. ಅವರು ಎದುರಾಳಿಯಾಗಿದ್ದಾಗ ಹೋರಾಟ ಮಾಡಿದ್ದೆ. ಪಕ್ಷದಲ್ಲಿ ಬಂದಾಗ ಅವರ ಹೆಗಲ ಮೇಲೆ ಕೈ ಹಾಕಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ.

    2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಸೋಮಶೇಖರ್ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ 10,711 ಮತಗಳ ಅಂತರದಿಂದ ಜಯಗಳಿಸಿದ್ದರು. ಸೋಮಶೇಖರ್ 1,15,273 ಮತಗಳನ್ನು ಪಡೆದಿದ್ದರೆ ಜೆಡಿಎಸ್ಸಿನ ಜವರಾಯಿ ಗೌಡ 1,04,562 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ನಟ ಜಗ್ಗೇಶ್ ಅವರು 59,308 ಮತಗಳನ್ನು ಗಳಿಸಿದ್ದರು.

  • ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಟ್ವಿಸ್ಟ್-‘ಎಸ್‍ಟಿಎಸ್’ ಫೋನ್ ಕದ್ದಾಲಿಕೆ

    ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಟ್ವಿಸ್ಟ್-‘ಎಸ್‍ಟಿಎಸ್’ ಫೋನ್ ಕದ್ದಾಲಿಕೆ

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರ ಫೋನ್ ಸಹ ಟ್ಯಾಪಿಂಗ್ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.

    ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ಯಾಟೂ ಜಗ್ಗನ ಕೊಲೆಗೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿತ್ತು. ಇದೇ ಎಫ್‍ಐಆರ್ ಎಸ್.ಟಿ.ಸೋಮಶೇಖರ್ ಮೊಬೈಲ್ ನಂಬರ್ ಸೇರಿಸಿ ಟ್ಯಾಪಿಂಗ್ ನಡೆಸಲಾಗಿದೆ. ಕ್ರೈಂ ನಂಬರ್ 03/2019ರ ಎಫ್‍ಐಆರ್ ನಲ್ಲಿ 120 ಗಂಟೆಗಳ ಕಾಲ ಫೋನ್ ಕದ್ದಾಲಿಕೆ ನಡೆದಿದೆ. ಈ ಎಫ್‍ಐಆರ್ ಮೂಲಕ ಹಲವು ಮೊಬೈಲ್ ಗಳ ಟ್ಯಾಪಿಂಗ್ ನಡೆದಿರುವ ಶಂಕೆಗಳು ವ್ಯಕ್ತವಾಗಿವೆ.

    ಹವಾಲಾ ದಂಧೆಕೋರರ ಹೆಸರಲ್ಲಿ ಟ್ಯಾಪಿಂಗ್:
    ಇನ್ನು ಹವಾಲಾ ದಂಧೆಕೋರರ ಹೆಸರಲ್ಲಿ ಮೂವರು ರಾಜಕಾರಣಿಗಳ ಫೋನ್ ಮೇಲೆ ಕಳ್ಳಗಿವಿ ಕೆಲಸ ಮಾಡಿತ್ತು. ಚಿಕ್ಕಪೇಟೆ ಹವಾಲ ದಂಧೆಕೋರರಲ್ಲಿ ಎಂಟಿಬಿ ನಾಗರಾಜ್, ಸುಧಾಕರ್, ರೋಷನ್ ಬೇಗ್ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪಿಎ ಸಂತೋಷ್ ಹೆಸರು ಸೇರಿಸಲಾಗಿತ್ತು. ಈ ಮೂಲಕ ನಾಲ್ವರ ಮೊಬೈಲ್ ಟ್ಯಾಪ್ ಮಾಡಲಾಗಿತ್ತು. ಇದೇ ಹವಾಲಾ ಕೇಸ್‍ನಲ್ಲಿ ನಿರಂತರವಾಗಿ 17 ನಂಬರ್ ಗಳು ಟ್ಯಾಪಿಂಗ್ ಆಗಿದೆ ಎಂದು ತಿಳಿದು ಬಂದಿದೆ.

  • ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಟಿಕೆಟ್ ಏಜೆಂಟ್ ಸೋಮಶೇಖರ್‌ನನ್ನು ಜನಪ್ರತಿನಿಧಿ ಮಾಡಿದ್ದು ಕಾಂಗ್ರೆಸ್ – ರೇವಣ್ಣ ವಾಗ್ದಾಳಿ

    ಬೆಂಗಳೂರು: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಅವರದ್ದು ನಾಲಿಗೆಯಾ ಅಥವಾ ಬೇರೆನಾ? ಬಸ್ ಏಜೆಂಟ್ ಆಗಿದ್ದವರನ್ನು ತಂದು ಕಾಂಗ್ರೆಸ್ ಪಕ್ಷ ಜನನಾಯಕನನ್ನಾಗಿ ಮಾಡಿದೆ. ಮಾತನಾಡುವುದಕ್ಕೂ ಮುನ್ನ ಒಮ್ಮೆ ಅವರು ಬೆಳೆದು ಬಂದ ರೀತಿಯನ್ನು ನೋಡಿಕೊಳ್ಳಲಿ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ತಲಘಟ್ಟಪುರದಲ್ಲಿ ಎಸ್.ಟಿ.ಸೋಮಶೇಖರ್ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾನು ಜನಪ್ರತಿನಿಧಿಯಾಗಿದ್ದು ಹೇಗೆ ಎಂಬುದನ್ನು ಮೊದಲು ಅವರು ಅರಿಯಬೇಕು. ಯಾವುದೇ ಜನನಾಯಕನ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಅವರಿಗೆ ಈ ಸ್ಥಾನ ನೀಡಿದ್ದು, ಪಕ್ಷ, ಜನತೆ. ಅವರ ಮಾತನ್ನು ಧಿಕ್ಕರಿಸಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕೆ ಕಾಂಗ್ರೆಸ್ ಬಿಟ್ಟರು ಎಂದು ಸ್ಪಷ್ಟಪಡಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು ಅನುದಾನ ಕೊಡದಿದ್ದರೆ ನಮ್ಮ ಕ್ಷೇತ್ರ ಅಭಿವೃದ್ಧಿಯಾಗುತ್ತಿರಲಿಲ್ಲ. ಹಣ ಸಿಗುತ್ತಿರಲಿಲ್ಲ ಎನ್ನುತ್ತಿದ್ದವರು ಇಂದು ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮಾತನಾಡುವುದಕ್ಕೂ ಮೊದಲು ಏನಾಗಿದ್ದರು ಎಂಬುದನ್ನು ಅರಿಯಬೇಕು. ಬಿಡಿಎ ಸದಸ್ಯರಾಗಿ, ಅಧ್ಯಕ್ಷತೆಯೇ ಬೇಕು ಎಂದು ಪಟ್ಟು ಹಿಡಿದು, ಪಡೆದಿದ್ದರು. ಬಿಡಿಎನಲ್ಲಿ ಏನೇನು ಮಾಡಿದ್ದೀರಿ ನೋಡಬೇಕಿದೆ. ಗುಂಡೂರಾವ್ ಅವರ ಮಗ ಎಂಬ ಕಾರಣಕ್ಕಾಗಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿಲ್ಲ. ಸಂಘಟನೆ ಮಾಡಿ, ರಾಜ್ಯಾದ್ಯಂತ ಪ್ರಚಾರ ಮಾಡಿ ರಾಜ್ಯಾಧ್ಯಕ್ಷರಾದರು. ಮಾತನಾಡುವ ಮೊದಲು ಹಿಂದೆ ಏನಾಗಿದ್ದೆ ಎಂಬುದನ್ನು ಅರಿಯಬೇಕು. ಒಬ್ಬ ಸಾಮಾನ್ಯ ಟಿಕೆಟ್ ಏಜೆಂಟ್ ಅಗಿದ್ದವರು ಜನಪ್ರತಿನಿಧಿಯಾಗಿ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ ಎಂಬುದನ್ನು ಅರಿಯಬೇಕು ಎಂದರು.

    ಸಿದ್ದರಾಮಯ್ಯ ಸರ್ಕಾರದಲ್ಲಿ ಎಸ್‍ಬಿಎಂ ಮೂವರು ಆಡಿದ ಆಟ ಗೊತ್ತಿಲ್ಲವೇ, ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಆಡಿದ್ದ ಆಟ ನಾವೂ ನೋಡಿದ್ದೇವೆ. ಮೊದಲು ಸಿದ್ದರಾಮಯ್ಯನವರನ್ನು ಹಾಡಿ ಹೊಗಳುತ್ತಿದ್ದವರ ನಾಲಿಗೆ ಈಗ ಏನಾಗಿದೆ? ಎಲ್ಲ ಅಧಿಕಾರ ಅನುಭವಿಸಿ ಈಗ ಬಿಜೆಪಿ ಬಾಗಿಲಿಗೆ ಹೋಗಿ ನಿಂತಿದ್ದೀರಲ್ಲ, ನಿಮಗೇನಾದರೂ ಮಾನ ಮರ್ಯಾದೆ ಇದೆಯಾ? ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಈಗ ಅವರ ವಿರುದ್ಧವೇ ಮಾತನಾಡುತ್ತೀರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರ ಮನೆಗೆ ಬಂದರೆ ನಿಮಗೆ ಸ್ಪೆಷಲ್ ಟ್ರೀಟ್ಮೆಂಟ್ ಸಿಗುತ್ತಿತ್ತು. ಈಗ ಅವರ ಬಗ್ಗೆಯೇ ಮಾತನಾಡುತ್ತೀರಲ್ಲ ನಾಚಿಕೆ ಆಗಲ್ವಾ? ಕೃಷ್ಣ ಭೈರೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂದಿದ್ದರಲ್ಲ ಈಗ ನಿಮ್ಮ ನಾಲಿಗೆಗೆ ಏನಾಗಿದೆ. ಬಹಳ ದಿನ ನಿಮ್ಮ ಆಟ ನಡೆಯುವುದಿಲ್ಲ. ಮುಂದೆ ನಿಮಗೆ ಮಾರಿಹಬ್ಬ ಇದೆ ಎಂದು ಹರಿಹಾಯ್ದರು.

  • ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲಾ: ಸೋಮಶೇಖರ್ ಕಿಡಿ

    ದಿನೇಶ್ ಗುಂಡೂರಾವ್ ಅಯೋಗ್ಯ, ಸಿದ್ದರಾಮಯ್ಯನ ಚೇಲಾ: ಸೋಮಶೇಖರ್ ಕಿಡಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಯೋಗ್ಯ, ಅವನು ಸರಿಯಿದ್ದಿದ್ದರೆ ನಾವೇಕೆ ಪಕ್ಷ ಬಿಡುತ್ತಿದ್ದೇವು? ಅವನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚೇಲಾ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.

    ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ಸೋಮಶೇಖರ್ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಿನೇಶ್ ಗುಂಡೂರಾವ್ ಸಿದ್ದರಾಮಯ್ಯ ಚೇಲಾ, ಬಕೆಟ್. ಅವನು ನಮ್ಮ ಬಗ್ಗೆ ಏನ್ ಮಾತಾಡೋದು? ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ರಿಜ್ವಾನ್ ಅರ್ಷಾದ್‍ದು. ಇದು ಸಿದ್ದರಾಮಯ್ಯನ ಕಾಂಗ್ರೆಸ್ಸಾ? ಓರಿಜನಲ್ ಕಾಂಗ್ರೆಸ್ಸಾ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.

    ದಿನೇಶ್ ಗುಂಡೂರಾವ್ ಅಯೋಗ್ಯ ಅಧ್ಯಕ್ಷ, ಅವನು ಸರಿಯಿದ್ದಿದ್ದರೆ ನಾವೇಕೆ ರಾಜೀನಾಮೆ ಕೊಡುತ್ತಿದ್ದೇವು? ಅವನು ನನ್ನ ಜೊತೆಯಲ್ಲಿ ಸದಸ್ಯ ಆಗಿದ್ದವನು. ರಮೇಶ್ ಕುಮಾರ್ ಮುನಿಯಪ್ಪನ ಸೋಲಿಸಿದರು. ಕೆ.ಎಚ್.ಮುನಿಯಪ್ಪಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಏನು ಕ್ರಮ ಕೈಗೊಂಡರು? ಹರಿಪ್ರಸಾದ್, ಮುನಿಯಪ್ಪ ಹೇಳಿದ್ದು ಸರಿ ಇದೆ. ದಿನೇಶ್ ಗುಂಡೂರಾವ್ ನನ್ನ ಜೊತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗಿದ್ದವನು, ಅವರ ಅಪ್ಪ ಮುಖ್ಯಮಂತ್ರಿ ಆಗಿದ್ದರು ಎಂದು ಅವನು ಇಷ್ಟು ಮೇಲೆ ಬಂದ ಎಂದು ಹರಿಹಾಯ್ದರು.

    ಅವನೇನು ನಮ್ಮ ಬಗ್ಗೆ ಮಾತಾಡೋದು? ಪದೇ ಪದೇ ನಮ್ಮ ಬಗ್ಗೆ ಮಾತಾಡ್ತಾನೆ. ನಮ್ಮ ತಂಟೆಗೆ ಬರೋದು ಬೇಡ. ನಿನಗೆ ಕೆಲಸ ಮಾಡಲು ಬಿಡುವಿಲ್ಲ, ಆ ಯೋಗ್ಯತೆಯಿಲ್ಲ. ನೀನೇನು ಅನರ್ಹರ ಬಗ್ಗೆ ಮಾತನಾಡುತ್ತೀಯಾ ಎಂದು ಏಕವಚನದಲ್ಲಿ ಬೈದು ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿ ಜೊತೆ ಕರೆಯಲ್ಲಿ ಮಾತನಾಡಿದ ಸೋಮಶೇಖರ್ ಅವರು, ಅವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಯಾವ ಪದವನ್ನು ಬಳಕೆ ಮಾಡಬೇಕು ಎಂಬ ಕಾಮನ್ ಸೆನ್ಸ್ ಇಲ್ಲ. ಒಬ್ಬ ಫುಟ್‍ಪಾತ್‍ನಲ್ಲಿ ಮಾತನಾಡುವ ಹಾಗೆ ಮಾತನಾಡುತ್ತಾನೆ. ನಮ್ಮ ಅನರ್ಹತೆಯ ವಿಚಾರ ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದೆ. ಅದನ್ನ ನಾವು ನೋಡಿಕೊಳ್ಳುತ್ತೇವೆ. ಆದೆರೆ ಇವನಿಗೆ ಕೆಪಿಸಿಸಿ ಅಧ್ಯಕ್ಷನಾಗಿ ಮಾಡಲು ಸಾಕಷ್ಟು ಕೆಲಸಗಳಿವೆ. ಅದನ್ನ ಬಿಟ್ಟು ಪದೇ ಪದೇ ರಾಜಕೀಯ ವ್ಯಭಿಚಾರಿ, ದೇಶದ್ರೋಹಿಗಳು ಎಂದು ನಮ್ಮ ಬಗ್ಗೆ ಮಾತನಾಡೋದು ಸರಿಯಲ್ಲ. ಅವನ ಯೋಗ್ಯತೆಗೆ ಕಚೇರಿಯಲ್ಲಿ ಒಬ್ಬ ಅಟೆಂಡರ್ ಕೂಡ ಇವನ ಮಾತು ಕೇಳೋದಿಲ್ಲ. ಇಂಥವನು ನಮ್ಮ ಬಗ್ಗೆ ಮಾತನಾಡುತ್ತಾನೆ. ನಾವು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರಲಿಲ್ಲ. ಕೇವಲ ನಮ್ಮ ಶಾಸಕ ಸ್ಥಾನಕ್ಕೆ ನಾವು ರಾಜೀನಾಮೆ ನೀಡಿದ್ದೇವು. ಆದ್ರೆ ಇವರು ಅದನ್ನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ: ಜಗ್ಗೇಶ್

    ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ: ಜಗ್ಗೇಶ್

    ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಿಸುತ್ತಿದ್ದಂತೆ ಮಾಜಿ ಶಾಸಕ, ನಟ ಜಗ್ಗೇಶ್ ಟಿಕೆಟ್ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ಭೈಎಲೆಕ್ಷನ್ ಬಂತು! 2018ರಲ್ಲಿ ಕಡೆಗಳಿಗೆ ಅಭ್ಯರ್ಥಿಯಾದ ನಾನು ಮಾಜಿ ಶಾಸಕ, ವಿಧಾನ ಪರಿಷತ್ ಸದಸ್ಯ. ತನು, ಮನ, ಧನ ಕಳೆದುಕೊಂಡು 9 ದಿನದಲ್ಲಿ 60,400 ಮತಗಳನ್ನು ಪಡೆದ ಅಭ್ಯರ್ಥಿ ನಾನು. ಮೌನವಾಗಿ ಇರಲೋ… ವಲಸೆ ಬಂದವರಿಗಾಗಿ ನಾನು ಪಕ್ಕ ಸರಿಯಲೋ..? ಇಲ್ಲಾ ಮೌನವಾಗಿ ತ್ಯಾಗಿಯಾಗಲೋ..? ಕಾಡಿನಲ್ಲಿ ಕಳೆದುಹೋದ ಮಗುವಂತಾಗಿರುವೆ ಎಂದು ಬರೆದುಕೊಂಡಿದ್ದಾರೆ.

    ಜಗ್ಗೇಶ್ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ 59,308 ಮತಗಳನ್ನು ಪಡೆದು ಸೋತಿದ್ದರು. ಈ ವೇಳೆ ಭರ್ಜರಿ ಪೈಪೋಟಿ ನೀಡಿದ್ದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್.ಟಿ.ಸೋಮಶೇರ್ 1,15,273 ಮತಗಳನ್ನು ಪಡೆದು ಗೆಲವು ಸಾಧಿಸಿದ್ದರು. ಜೆಡಿಎಸ್‍ನ ಅಭ್ಯರ್ಥಿ 1,04,562 ಮತಗಳನ್ನು ಗಳಿಸಿ ಪರಾಭವಗೊಂಡಿದ್ದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಸೋಮಶೇರ್ ಅವರನ್ನು ಅನರ್ಹಗೊಳಿಸಿರುವ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ.

    ಒಂದು ವೇಳೆ ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ಯಶವಂತಪು ಕ್ಷೇತ್ರದ ಬಿಜೆಪಿ ಎಸ್.ಟಿ.ಸೋಮಶೇಖರ್ ಅವರಿಗೆ ಹೋಗುತ್ತದೆ. ಇದರಿಂದ ತಮ್ಮ ಸ್ಪರ್ಧೆಗೆ ಹಿನ್ನಡೆಯಾಗುತ್ತದೆ ಎನ್ನುವುದು ಜಗ್ಗೇಶ್ ಅವರ ವಿಚಾರವಾಗಿದೆ. ಟಿಕೆಟ್ ತಪ್ಪುತ್ತದೆ ಎನ್ನುವ ಆತಂಕವನ್ನು ಜಗ್ಗೇಶ್ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಕೃಷ್ಣಬೈರೇಗೌಡ ಅತ್ಯಂತ ದೊಡ್ಡ ಕುತಂತ್ರಿ: ಎಸ್.ಟಿ.ಸೋಮಶೇಖರ್

    ಕೃಷ್ಣಬೈರೇಗೌಡ ಅತ್ಯಂತ ದೊಡ್ಡ ಕುತಂತ್ರಿ: ಎಸ್.ಟಿ.ಸೋಮಶೇಖರ್

    ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿಯೇ ಅತ್ಯಂತ ಕುತಂತ್ರ ಮಾಡುವ ವ್ಯಕ್ತಿ ಎಂದರೆ ಅದು ಕೃಷ್ಣಬೈರೇಗೌಡ ಎಂದು ಅನರ್ಹ ಶಾಸಕ ಸೋಮಶೇಖರ್ ಹೇಳಿದ್ದಾರೆ.

    ಸದನದಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರು ಕರ್ನಾಟಕ ರಾಜಕೀಯದಲ್ಲಿಯೇ ಅತ್ಯಂತ ಕುತಂತ್ರ ಮಾಡುವ (ಕನ್ನಿಂಗ್) ವ್ಯಕ್ತಿ. ಲೋಕಸಭಾ ಚುನಾವಣೆಯಲ್ಲಿ ಉದ್ದೇಶಪೂರ್ವಕವಾಗಿ ಅವರನ್ನು ಸೋಲಿಸಿದ್ದಾರೆ ಎಂದು ಆರೋಪ ಮಾಡುತ್ತಾರೆ. ಇದು ಸುಳ್ಳು, ನಾವು ಎಂದಿಗೂ ಅಂತಹ ಯೋಚನೆ ಕೂಡ ಮಾಡಿರಲಿಲ್ಲ ಎಂದು ಹೇಳಿದರು.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡುವ ಚಿಂತನೆ ನಡೆಸಿದ್ದನೆ. ಈ ಸಂಬಂಧ ಕಾರ್ಯಕರ್ತರ ಜೊತೆಗೆ ಸಭೆ ನಡೆಸಿ ದಿನಾಂಕ ನಿಗದಿ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸೋಮಶೇಖರ್ ಬಗ್ಗೆ ಕೃಷ್ಣಬೈರೇಗೌಡ ಹೇಳಿದ್ದು ಏನು? ಲೋಕಸಭೆಗೆ ಸ್ಪರ್ಧಿಸಿ ಕೃಷ್ಣಬೈರೇಗೌಡ ಸಾಲಗಾರನ್ನಾಗಿದ್ದು ಹೇಗೆ?

    ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ನಿರೀಕ್ಷಿತ. ಯಾರನ್ನು ಅನರ್ಹಗೊಳಿಸುತ್ತಾರೆ, ಯಾವ ತೀರ್ಮಾನ ಮಾಡುತ್ತಾರೆ ಅಂತ ಮೊದಲೇ ಗೊತ್ತಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ಟಾಟರ್ಜಿ ಪ್ರಕಾರವೇ ತೀರ್ಮಾನ ಬಂದಿದೆ. ಹೀಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇವು ಎಂದರು.

    ನಾವು ಮುಂಬೈಗೆ ಹೋಗುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ನಮ್ಮ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್ ಎಲ್ಲಾ ಶಾಸಕರು ವಿಷ ಕುಡಿಯುತ್ತಿದ್ದರೆ, ಮೈತ್ರಿ ಪಕ್ಷದ ಜೆಡಿಎಸ್‍ನ ಶಾಸಕರು ಅಮೃತ ಕುಡಿಯುತ್ತಿದ್ದರು. ಇದನ್ನು ನಾಯಕರ ಗಮನಕ್ಕೆ ತಂದಿದ್ದೇವು. ಆದರೆ ಅದನ್ನು ನಾಯಕರು ಪರಿಗಣಿಸಿ, ಸೂಕ್ತ ಕ್ರಮಕೈಗೊಳ್ಳಲಿಲ್ಲ. ನಮ್ಮ ಅಸಮಾಧಾನ ವ್ಯಕ್ತ ಪಡಿಸಿದರೂ ಉಪಯೋಗ ಆಗಲಿಲ್ಲ. ಸಿಎಂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂದು ಕಿಡಿಕಾರಿದರು.

    ವಿಧಾನಸಭೆಯಲ್ಲಿ ಅನೇಕ ನಾಯಕರು ನಮ್ಮ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಮಾಧ್ಯಮಗಳ ಮೂಲಕ ಉತ್ತರ ಕೊಡುತ್ತೇವೆ. ಬಳಿಕ ನಾನು ರಾಜಕೀಯದಿಂದ ದೂರ ಉಳಿಯುವ ನಿರ್ಧಾರಕ್ಕೆ ಬರಲಿದ್ದೇನೆ ಎಂದರು.

  • ಯಾರೇ ಮುಖ್ಯಮಂತ್ರಿಯಾದ್ರೂ ವಾಪಸ್ ಬರುವುದಿಲ್ಲ: ರೆಬೆಲ್ ಶಾಸಕರು

    ಯಾರೇ ಮುಖ್ಯಮಂತ್ರಿಯಾದ್ರೂ ವಾಪಸ್ ಬರುವುದಿಲ್ಲ: ರೆಬೆಲ್ ಶಾಸಕರು

    – ಲೋಕಸಭಾ ಚುನಾವಣೆ ಬಳಿಕ ಮೈತ್ರಿ ಸರ್ಕಾರ ಇರಬಾರದು ಅಂದಿದ್ರು
    – ‘ಕೈ’ ನಾಯಕರ ವಿರುದ್ಧ ಬೈರತಿ ಆರೋಪ

    ಮುಂಬೈ: ನಾವು ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಬರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆ ಆಫರ್ ಬಂದಿದೆ. ಯಾರೇ ಸಿಎಂ ಆದರೂ ನಾವು ವಾಪಸ್ ಬರುವುದಿಲ್ಲ. ನಮ್ಮ ನಿರ್ಧಾರದಲ್ಲಿ ಯಾವ ಬದಲಾವಣೆ ಇಲ್ಲ ಎಂದು ಮೈತ್ರಿ ಸರ್ಕಾರದ ರೆಬೆಲ್ ಶಾಸಕರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

    ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ರಾಕ್ಷಸ ರಾಜಕಾರಣ ನಡೆಯುತ್ತಿದೆ. ರಾಜ್ಯ ರಾಜಕಾರಣಕ್ಕೆ ಒಳ್ಳೆಯದಾಗಬೇಕು. ಮೈತ್ರಿ ನಾಯಕರಿಗೆ ಬುದ್ಧಿ ಕಲಿಸಬೇಕಿದೆ. ನಾವು ದುಡ್ಡು, ಅಧಿಕಾರಕ್ಕೆ ಮುಂಬೈಗೆ ಬಂದಿಲ್ಲ. ತತ್ವ, ಸಿದ್ಧಾಂತದ ಉಳಿವಿಗೆ ರಾಜೀನಾಮೆ ನೀಡಿದ್ದೇವೆ. ಹಣ, ಅಧಿಕಾರದ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಹೇಳಿದರು.

    ರಾಜೀನಾಮೆ ನೀಡಿರುವ ಶಾಸಕರು ಕೋಟಿಗಳಲ್ಲಿ ವ್ಯವಹಾರ ನಡೆಸಿದ್ದಾರೆ ಎಂದು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಹೆಸರಿನಲ್ಲಿ ರಾಕ್ಷಸ ರಾಜಕಾರಣ ನಡೆದಿದೆ. ರಾಜ್ಯದ ಜನರಿಗೆ ಈ ಸರ್ಕಾರದಿಂದ ಯಾವ ಪ್ರಯೋಜನವಾಗಲಿಲ್ಲ ಎಂದು ಕಿಡಿಕಾರಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ, ಶಾಸಕ ಭೈರತಿ ಬಸವರಾಜು ಮಾತನಾಡಿ, ಸರ್ಕಾರ ಪತನವಾದ ಬಳಿಕ ರಾಜ್ಯಕ್ಕೆ ಬಂದು ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸುತ್ತೇವೆ. ನಮ್ಮನ್ನು ಬೆತ್ತಲೆ ಮಾಡಲು ಹೊರಟಿರುವ ಕಾಂಗ್ರೆಸ್‍ನ ನಾಯಕರು ಲೋಕಸಭಾ ಚುನಾವಣೆಯ ಬಳಿಕ ಮೈತ್ರಿ ಸರ್ಕಾರ ಉಳಿಯಬಾರದು ಅಂತ ಹೇಳಿದ್ದರು. ಆದರೆ ಈಗ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಬೆಂಗಳೂರಿಗೆ ವಾಪಸ್ ಬಂದ ಬಳಿಕ ಎಲ್ಲಾ ವಿಚಾರಗಳನ್ನು ಮಾಧ್ಯಮಗಳ ಎದುರು ಬಹಿರಂಗಪಡಿಸುತ್ತೇವೆ. ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. ಆದರೆ ಪಕ್ಷ ನನಗೆ ಕೊಟ್ಟಿದ್ದು ಏನು ಎಂದು ಪ್ರಶ್ನಿಸಿದರು.

    ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ವಿಧಾನಸಭೆಯಲ್ಲಿ ಶಾಸಕರೊಬ್ಬರು ನಾವು ಬದುಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಡಿಯೋ ಮಾಡಿ ಕಳುಹಿಸುವ ಮೂಲಕ ನಾವು ಬದುಕಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತಿದ್ದೇವೆ. ನಾವು ಯಾರ ಗನ್ ಪಾಯಿಂಟ್‍ನಲ್ಲಿ ಇಲ್ಲ. 13 ಶಾಸಕರೂ ಜೀವಂತವಾಗಿದ್ದೇವೆ, ಆರೋಗ್ಯ ವಾಗಿದ್ದೇವೆ. ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ ಎಂದು ಹೇಳಿದರು.

    ಜನ್ಮದಿನದ ಸಂಭ್ರಮ:
    ಇಂದು ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ನಾರಾಯಣಗೌಡ ಅವರ ಜನ್ಮದಿನ. ನಾವು 13 ಶಾಸಕರು ಸೇರಿ ಒಗ್ಗಟ್ಟಾಗಿ ಆಚರಿಸುತ್ತಿದ್ದೇವೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

    ಜೆಡಿಎಸ್ ಶಾಸಕ ಗೋಪಾಲಯ್ಯ ಹಾಗೂ ಬಿ.ಸಿ.ಪಾಟೀಲ್ ಮಾತನಾಡಿ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಮುಂಬೈಗೆ ಬಂದಿರುವ 13 ಶಾಸಕರು ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ನಾಳೆ ನಡೆಯುವ ಅಧಿವೇಶನದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಕಿಡಿಕಾರಿದರು.

  • ಬೆಂಗಳೂರಲ್ಲಿ ಮಧ್ಯರಾತ್ರಿ ಹೈಡ್ರಾಮಾ – ಸೋಮಶೇಖರ್ ಭೇಟಿಯಾಗಲು ಡಿಕೆಶಿ ಯತ್ನ

    ಬೆಂಗಳೂರಲ್ಲಿ ಮಧ್ಯರಾತ್ರಿ ಹೈಡ್ರಾಮಾ – ಸೋಮಶೇಖರ್ ಭೇಟಿಯಾಗಲು ಡಿಕೆಶಿ ಯತ್ನ

    ಬೆಂಗಳೂರು: ಕೇವಲ ಮುಂಬೈನಲ್ಲಿ ಮಾತ್ರವಲ್ಲ ಬೆಂಗಳೂರಲ್ಲಿಯೂ ಸಚಿವ ಡಿಕೆ ಶಿವಕುಮಾರ್ ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ತಡರಾತ್ರಿ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ ವಿಷಯ ತಿಳಿದ ಕೂಡಲೇ ಶಾಸಕರ ಭೇಟಿಗೆ ಪ್ರಯತ್ನಿಸಿದರು. ಸೋಮಶೇಖರ್ ಭೇಟಿಗಾಗಿ 1 ಗಂಟೆ ಕಾಲ ರಸ್ತೆಯಲ್ಲಿಯೇ ನಿಂತು ಕಾದಿದ್ದಾರೆ.

    ಇತ್ತ ಡಿ.ಕೆ.ಶಿವಕುಮಾರ್ ತಮ್ಮ ನಿವಾಸದ ಬಳಿ ಇರುವ ವಿಷಯ ತಿಳಿದ ಎಸ್.ಟಿ.ಸೋಮಶೇಖರ್ ಮಾರ್ಗಮಧ್ಯೆ ರೂಟ್ ಬದಲಿಸಿ ಬೇರೊಂದು ಕಡೆ ತೆರಳಿದರು. ಒಂದು ಗಂಟೆ ಕಾದರೂ ಶಾಸಕರು ಬರದಿದ್ದಾಗ ಡಿ.ಕೆ.ಶಿವಕುಮಾರ್ ಮುಂಬೈನಂತೆ ಇಲ್ಲಿಯೂ ಬರಿಗೈಯಲ್ಲಿ ಹಿಂದಿರುಗಿದರು.

    ರಾತ್ರಿ 11.15ಕ್ಕೆ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಆಗಮಿಸಿದ್ರೆ, ಎಸ್‍ಟಿ ಸೋಮಶೇಖರ್ ತಡರಾತ್ರಿ 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಕರ್ನಾಟಕ ವಸತಿ ಮಹಾಮಂಡಳಿಯ ಚುನಾವಣೆ ಇರುವ ಹಿನ್ನೆಲೆಯಲ್ಲಿ ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಎಸ್.ಟಿ.ಸೋಮಶೇಖರ್ ಆಗಮನಕ್ಕೂ ಮುನ್ನವೇ ವಿಮಾನ ನಿಲ್ದಾಣದಲ್ಲಿ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಾಣಿಸಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಯ್ತು. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳನ್ನು ಕಂಡ ಕೂಡಲೇ ಸೋಮಶೇಖರ್ ಅವರಿಂದ ಎಸ್.ಆರ್.ವಿಶ್ವನಾಥ್ ಅಂತರ ಕಾಯ್ದುಕೊಂಡರು. ಇತ್ತ ಸೋಮಶೇಖರ್ ಕಾರ್ ನ್ನು ಹಿಂಬಾಲಿಸಿಕೊಂಡು ಎಸ್.ಆರ್.ವಿಶ್ವನಾಥ್ ಹೋದರು. ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸುಪರ್ದಿಯಲ್ಲಿಯೇ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

  • ತಡರಾತ್ರಿ ಬೆಂಗ್ಳೂರಿಗೆ ಆಗಮಿಸಿದ ಎಸ್.ಟಿ.ಸೋಮಶೇಖರ್-ಏರ್​ಪೋರ್ಟ್​ನಲ್ಲಿ ಬಿಜೆಪಿ ಶಾಸಕ

    ತಡರಾತ್ರಿ ಬೆಂಗ್ಳೂರಿಗೆ ಆಗಮಿಸಿದ ಎಸ್.ಟಿ.ಸೋಮಶೇಖರ್-ಏರ್​ಪೋರ್ಟ್​ನಲ್ಲಿ ಬಿಜೆಪಿ ಶಾಸಕ

    ಬೆಂಗಳೂರು: ಶನಿವಾರ ರಾಜೀನಾಮೆ ನೀಡಿ ಮುಂಬೈ ಸೇರಿದ್ದ ಯಶವಂತಪುರ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ತಡರಾತ್ರಿ ಸುಮಾರು 1 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು. ಎಸ್.ಟಿ.ಸೋಮಶೇಖರ್ ಆಗಮಿಸುತ್ತಿದ್ದಂತೆ ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಾಣಿಸಿಕೊಂಡರು.

    ವಿಮಾನ ನಿಲ್ದಾಣದಿಂದ ಎಸ್.ಟಿ.ಸೋಮಶೇಖರ್ ಹೊರ ಬರುತ್ತಿದ್ದಂತೆ ಮಾಧ್ಯಮಗಳನ್ನು ಕಂಡ ಕೂಡಲೇ ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡರು. ಇತ್ತ ಸೋಮಶೇಖರ್ ಕಾರ್ ನ್ನು ಹಿಂಬಾಲಿಸಿಕೊಂಡು ಎಸ್.ಆರ್.ವಿಶ್ವನಾಥ್ ಹೋದರು. ಮಾಜಿ ಡಿಸಿಎಂ ಆರ್.ಅಶೋಕ್ ಅವರ ಸುಪರ್ದಿಯಲ್ಲಿಯೇ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಟಿ.ಸೋಮಶೇಖರ್, ನಾನು ಎಲ್ಲಿಯೂ ಹೋಗಿಲ್ಲ. ಈಗ ಬೆಂಗಳೂರಿಗೆ ಬಂದಿದ್ದೇನೆ. ಕೇವಲ ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ನಲ್ಲಿಯೇ ಇದ್ದೇನೆ ಎಂದು ಹೇಳಿದರು. ಇಂದು ಕರ್ನಾಟಕ ವಸತಿ ಮಹಾಮಂಡಳಿ ಚುನಾವಣೆ ಹಿನ್ನೆಲೆ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಅತೃಪ್ತರ ಶಾಸಕರು ತಮ್ಮ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಸುಪ್ರೀಂಕೋರ್ಟ್ ಗೆ ಬುಧವಾರ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್ ಆದೇಶವನ್ನು ನೋಡಿಕೊಂಡು ಅತೃಪ್ತರು ಬೆಂಗಳೂರಿಗೆ ಬರುವ ಕುರಿತು ಪ್ಲಾನ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

  • ಸಿಎಂಗೆ ಖಡಕ್ ಸಂದೇಶ ರವಾನಿಸಿದ ಅತೃಪ್ತ ಶಾಸಕರು

    ಸಿಎಂಗೆ ಖಡಕ್ ಸಂದೇಶ ರವಾನಿಸಿದ ಅತೃಪ್ತ ಶಾಸಕರು

    ಮುಂಬೈ: ರಾಜೀನಾಮೆ ನೀಡಿ ಸೊಫಿಟೆಲ್ ಹೋಟೆಲ್ ನಲ್ಲಿರುವ ಅತೃಪ್ತ ಶಾಸಕರು ಸುದ್ದಿಗೋಷ್ಠಿ ಮೂಲಕ ಸಿಎಂ ಅವರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

    ನಾವೆಲ್ಲ 13 ಶಾಸಕರು ಒಟ್ಟಾಗಿದ್ದೇವೆ. 10 ಶಾಸಕರು ಮುಂಬೈ ಹೋಟೆಲ್ ನಲ್ಲಿದ್ದೇವೆ. ರಾಜೀನಾಮೆಯನ್ನು ಹಿಂಪಡೆಯುವ ಮಾತು ಬರಲ್ಲ. ಈಗಾಗಲೇ ರಾಜೀನಾಮೆ ನೀಡಿದ್ದರಿಂದ ಶಾಸಕಾಂಗ ಸಭೆಗೆ ಹಾಜರಾಗುವದಿಲ್ಲ. ನಾವು ಸಿಎಂ ಬದಲಾವಣೆ ಮಾಡಿ, ಇವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಬೇಡಿಕೆಯನ್ನು ಯಾರ ಮುಂದೆಯೂ ಇಟ್ಟಿಲ್ಲ ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದರು.

    ಹೋಟೆಲ್ ಮುಂಭಾಗದಲ್ಲಿ ಬಂದ 10 ಶಾಸಕರ ಪರವಾಗಿ ಎಸ್.ಟಿ.ಸೋಮಶೇಖರ್ ಮಾತನಾಡಿ, ನಮ್ಮ ನಿರ್ಧಾರ ಅಚಲವಾಗಿದೆ. ಶಾಸಕ ಸ್ಥಾನವೇ ಬೇಡ ಎಂದು ರಾಜೀನಾಮೆ ನೀಡಿದ್ದರಿಂದ ಶಾಸಕಾಂಗ ಸಭೆಗೆ ಹೋಗಲ್ಲ. ರಾಮಲಿಂಗಾ ರೆಡ್ಡಿ, ಮುನಿರತ್ನ ಮತ್ತು ಆನಂದ್ ಸಿಂಗ್ ಬಂದು ನಾಳೆ ನಮ್ಮನ್ನು ಸೇರಿಕೊಳ್ಳಲಿದ್ದಾರೆ. ರಾಜೀನಾಮೆ ಹಿಂಪಡೆದು ಬೆಂಗಳೂರಿಗೆ ಬರುತ್ತಾರೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದೇವೆ ಎಂದರು.

    ಸೋಮಶೇಖರ್ ಹೇಳಿರೋದು ನೂರಕ್ಕೆ ನೂರರಷ್ಟು ಸತ್ಯ. 13 ಶಾಸಕರು ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆ ಬರಲ್ಲ. ಯಾರು ನಮ್ಮ ಹೆಜ್ಜೆಯನ್ನು ಹಿಂದೆ ಇಡಲ್ಲ ಎಂದು ಶಾಸಕ ಬಿ.ಸಿ.ಪಾಟೀಲ್ ತಿಳಿಸಿದರು.