Tag: ಎಸ್ ಟಿ ಸೋಮಶೇಖರ್

  • ಸಿದ್ದರಾಮಯ್ಯ ಕಂಡ್ರೆ ಎಸ್.ಟಿ.ಸೋಮಶೇಖರ್​ಗೆ ಕೋಪನಾ? ಭಯಾನಾ?

    ಸಿದ್ದರಾಮಯ್ಯ ಕಂಡ್ರೆ ಎಸ್.ಟಿ.ಸೋಮಶೇಖರ್​ಗೆ ಕೋಪನಾ? ಭಯಾನಾ?

    ಬೆಂಗಳೂರು: ವಿಧಾನಸಭೆಯಲ್ಲಿ ಅವರೆಲ್ಲ ಒಂದೇ ಸಾಲಿನಲ್ಲಿ ಕುಳಿತಿದ್ರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಮೊದಲ ಸಾಲಿನಲ್ಲಿ ಇದ್ದರು. ರಾಜ್ಯಪಾಲರ ಭಾಷಣದ ಬಳಿಕ ಸ್ವಲ್ಪ ಕಾಲ ವಿರಾಮ ಇತ್ತು. ಆಗ ಕೆಲವು ನೂತನ ಸಚಿವರು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಳಿ ಹೋಗಿ ವಿಶ್ ಮಾಡಿ ಬರ್ತಿದ್ರು. ಆದರೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತ್ರ ವೇಯ್ಟಿಂಗ್ ಲಿಸ್ಟ್ ನಲ್ಲಿ ಇದ್ರು. ಸ್ವಲ್ಪ ಹೊತ್ತಿನ ಬಳಿಕ ಸೋಮಶೇಖರ್ ಸಿದ್ದರಾಮಯ್ಯ, ಡಿಕೆಶಿ, ಹೆಚ್‍ಡಿಕೆ ಮಾತನಾಡಿಸ್ತಾರೋ ಇಲ್ವೋ ಅನ್ನೋ ಕುತೂಹಲಕ್ಕೆ ಕಡೆಗೂ ತೆರೆ ಎಳೆದರು.

    ಹೆಚ್.ಡಿ.ಕುಮಾರಸ್ವಾಮಿ ಸದನದಿಂದ ಹೊರಗೆ ಹೋದ್ರು. ಆಗಲೇ ಎಸ್.ಟಿ.ಸೋಮಶೇಖರ್ ತಮ್ಮ ಆಸನದಿಂದ ವಿರೋಧ ಪಕ್ಷದ ಆಸನದ ಕಡೆ ಎದ್ದು ಬಂದ್ರು. ಹೆಚ್.ಕೆ.ಪಾಟೀಲ್‍ಗೆ ಕೈ ಮುಗಿದು ನೇರವಾಗಿ ಡಿಕೆ ಶಿವಕುಮಾರ್ ಬಳಿ ಬಂದ ಎಸ್.ಟಿ.ಸೋಮಶೇಖರ್ ಕೈ ಕುಲುಕಿದ್ರು. ಡಿಕೆಶಿ ಕೂಡ ಎದ್ದು ನಿಂತು ಎಸ್.ಟಿ.ಸೋಮಶೇಖರ್ ತಬ್ಬಿಕೊಂಡು ಬೆನ್ನು ತಟ್ಟಿದ್ರು. ಇದೇ ವೇಳೆ ಬೈರತಿ ಬಸವರಾಜು ಕೂಡ ಇದ್ದರು. ಆದರೆ ಡಿಕೆಶಿಯಿಂದ ತುಸು ಹತ್ತಿರವೇ ಇದ್ದ ಸಿದ್ದರಾಮಯ್ಯ ಕಡೆ ಎಸ್.ಟಿ.ಸೋಮಶೇಖರ್ ನೋಡಲೇ ಇಲ್ಲ. ಬೈರತಿ ಬಸವರಾಜು ಮಾತ್ರ ಹೋಗಿ ಕೈ ಮುಗಿದ್ರೆ, ಡಿಕೆಶಿ ಮಾತನಾಡಿಸಿ ಸೀದಾ ತಮ್ಮ ಆಸನಕ್ಕೆ ಹೊರಟು ಬಿಟ್ಟರು ಎಸ್.ಟಿ.ಸೋಮಶೇಖರ್.

    ಇನ್ನು ಸಿದ್ದರಾಮಯ್ಯ ಕೂಡ ಡಿಕೆಶಿ ಜತೆ ಸೋಮಶೇಖರ್ ಮಾತನಾಡುತ್ತಿರುವಾಗ ಆ ಕಡೆ ನೋಡಲೂ ಹೋಗಲಿಲ್ಲ. ಸುಮಾರು ಎರಡ್ಮೂರು ನಿಮಿಷ ಡಿಕೆಶಿ ನಿಂತುಕೊಂಡೇ ಸೋಮಶೇಖರ್ ಜತೆ ಬೆನ್ನು ತಟ್ಟಿ ಮಾತನಾಡಿದ್ರೂ ತಲೆಕೆಡಿಸಿಕೊಳ್ಳಲಿಲ್ಲ. ಇನ್ನು ಸಿದ್ದರಾಮಯ್ಯ ಹಿಂದಿನ ಸಾಲಿನಲ್ಲಿದ್ದ ಜಾರ್ಜ್, ಬೈರತಿ ಸುರೇಶ್, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ ಅವರು ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದರು. ಒಟ್ಟಾರೆ ಈ ದೃಶ್ಯಾವಳಿಯನ್ನ ನೋಡಿದವರು ಸಿದ್ದರಾಮಯ್ಯ ಕಂಡ್ರೆ ಎಸ್.ಟಿ.ಸೋಮಶೇಖರ್‍ಗೆ ಭಯನೋ..? ಕೋಪನೋ..? ನಿರ್ಲಕ್ಷ್ಯವೋ..? ಅಂತಾ ಪ್ರಶ್ನೆಗಳನ್ನ ಎತ್ತಿದ್ದು ಸುಳ್ಳಲ್ಲ.

  • ಚಾಮುಂಡಿ ದೇವಿ ದರ್ಶನ ಪಡೆದ ಎಸ್.ಟಿ ಸೋಮಶೇಖರ್

    ಚಾಮುಂಡಿ ದೇವಿ ದರ್ಶನ ಪಡೆದ ಎಸ್.ಟಿ ಸೋಮಶೇಖರ್

    ಮೈಸೂರು: ನಗರದ ಚಾಮುಂಡಿಬೆಟ್ಟಕ್ಕೆ ನೂತನ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಿದರು.

    ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಆಗಮಿಸಿ ಚಾಮುಂಡಿ ದರ್ಶನ ಪಡೆದ ಎಸ್.ಟಿ ಸೋಮಶೇಖರ್, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದು, ಇಲಾಖೆ ಅಧಿಕಾರ ವಹಿಸಿಕೊಂಡ ನಂತರವೂ ಟೆಂಪಲ್ ರನ್ ಮಾಡುತ್ತಿದ್ದಾರೆ.

    ಇದೆ ವೇಳೆ ಅರಣ್ಯ ಸಚಿವ ಆನಂದ್ ಸಿಂಗ್ ಮೇಲೆ ಕೇಸ್ ಇರುವ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಆನಂದ್ ಸಿಂಗ್ ಬಗ್ಗೆ ಸಿಎಂಗೆ ಎಲ್ಲಾ ಗೊತ್ತಿದೆ. ಅವರ ಎಲ್ಲ ವಿಚಾರದ ಬಗ್ಗೆ ಸಿಎಂಗೆ ಮಾಹಿತಿ ಇದೆ. ಮಂತ್ರಿ ಆದ ತಕ್ಷಣ ಪ್ರಕರಣಗಳನ್ನ ಮುಚ್ಚಿಹಾಕಲು ಸಾಧ್ಯವಿಲ್ಲ. ಆ ರೀತಿ ಮುಚ್ಚಿ ಹಾಕಿದ್ರೆ ಅಧಿಕಾರಿಗಳಿಗೆ ತೊಂದರೆ ಆಗುತ್ತೆ ಇದೆಲ್ಲಾ ಸಾಧ್ಯವಾಗೋಲ್ಲ ಬಿಡಿ ಅಂತ ಹೇಳಿದರು.

    ಸಚಿವ ಆರ್ ಅಶೋಕ್ ಪುತ್ರನ ಅಪಘಾತ ಪ್ರಕರಣ ವಿಚಾರವಾಗಿ, ಅಪಘಾತ ಪ್ರಕರಣದ ಬಗ್ಗೆ ಅಶೋಕ್ ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಆ ವಿಚಾರದ ನನಗೆ ಬಗ್ಗೆ ಅಷ್ಟಾಗಿ ಮಾಹಿತಿ ತಿಳಿದಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ ಅಂತ ಜಾರಿಕೊಳ್ಳುವ ಪ್ರಯತ್ನ ಮಾಡಿದರು.

  • ನೂತನ ಸಚಿವರ ಪಟ್ಟಿ ರಿಲೀಸ್- ಲಿಸ್ಟ್‌ನಲ್ಲಿ ಎಸ್.ಟಿ.ಸೋಮಶೇಖರ್ ಟಾಪ್

    ನೂತನ ಸಚಿವರ ಪಟ್ಟಿ ರಿಲೀಸ್- ಲಿಸ್ಟ್‌ನಲ್ಲಿ ಎಸ್.ಟಿ.ಸೋಮಶೇಖರ್ ಟಾಪ್

    – ರಾಜಭವನಕ್ಕೆ ಸಚಿವರ ಪಟ್ಟಿ ರವಾನೆ

    ಬೆಂಗಳೂರು: 10 ಜನ ನೂತನ ಸಚಿವರ ಪಟ್ಟಿಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಅವರು ರಿಲೀಸ್ ಮಾಡಿದ್ದು, ಲಿಸ್ಟ್‌ನಲ್ಲಿ ಶಾಸಕ ಎಸ್.ಟಿ.ಸೋಮಶೇಖರ್  ಟಾಪ್‍ನಲ್ಲಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ನೂತನ ಸಚಿವರ ಅಧಿಕೃತ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಿದ್ದಾರೆ. ಉಪ ಚುನಾವಣೆಯಲ್ಲಿ ಗೆದ್ದ ಮಹೇಶ್ ಕುಮಟಹಳ್ಳಿ ಅವರನ್ನು ಬಿಟ್ಟು 10 ಶಾಸಕರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನ ನೀಡಲಾಗಿದೆ. ಈ ಮೂಲಕ  ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಆನಂದ್ ಸಿಂಗ್, ಸುಧಾಕರ್, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಗೋಪಾಲಯ್ಯ, ನಾರಾಯಣಗೌಡ ಹಾಗೂ ಶ್ರೀಮಂತ್ ಪಾಟೀಲ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದನ್ನೂ ಓದಿ: ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    ರಾಜಭವನದಲ್ಲಿ ನಾಳೆ ನೂತನ ಸಚಿವ ಪ್ರಮಾಣ ವಚನ ನಡೆಯುವ ಹಿನ್ನೆಲೆಯಲ್ಲಿ ರಾಜಭವನದ ಹೊರಗೆ ಸಿದ್ಧತೆ ಪ್ರಾರಂಭವಾಗಿದೆ. ರಾಜಭವನದ ಸುತ್ತ ಬ್ಯಾರಿಗೇಡ್ ಅಳವಡಿಸಲಾಗುತ್ತಿದೆ. ಎಲ್‍ಇಡಿ ಪರದೆ ಅಳವಡಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದಾರೆ.

    ಸಿಎಂ ಯಡಿಯೂರಪ್ಪ ಅವರು ಕಳುಹಿಸಿದ ಲಿಸ್ಟ್‌ನಲ್ಲಿ  ಎಸ್.ಟಿ.ಸೋಮಶೇಖರ್ ಟಾಪ್‍ನಲ್ಲಿದ್ದಾರೆ. ಜೊತೆಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ರಮೇಶ್ ಜಾರಕಿಹೊಳಿ ನಂಬರ್ 2 ಸ್ಥಾನದಲ್ಲಿದ್ದಾರೆ. ರಾಜಭವನಕ್ಕೆ ಕಳುಹಿಸಿದ ಪಟ್ಟಿಯಲ್ಲಿ ನಂಬರ್ ಗೇಮ್ ನಡೆದಿ ಎಂಬ ಮಾತುಗಳು ಕೇಳಿ ಬಂದಿದೆ. ಇದನ್ನೂ ಓದಿ:  10+3 ಫಾರ್ಮುಲಾಗೆ ಬ್ರೇಕ್ ಹಾಕ್ತಾ ವಿಶ್ವನಾಥ್ ಚಾರ್ಜ್ ಶೀಟ್

    ಆಪರೇಷನ್ ಕಮಲದ ನಂಬರ್ ಬರೀ 8 ಇದ್ದಾಗ ರಮೇಶ್ ಜಾರಕಿಹೊಳಿ ಟಾಪ್ ಲೀಡರ್. ಆದರೆ 8 ನಂಬರ್ ಇಟ್ಕೊಂಡು ಸರ್ಕಾರ ಬೀಳಿಸಲು ಆಗಿರಲಿಲ್ಲ. ಆಗ ಎಸ್.ಟಿ.ಸೋಮಶೇಖರ್ ಅವರು ಬೆಂಗಳೂರಿನ 4 ಶಾಸಕರ ನೇತೃತ್ವ ವಹಿಸಿದ್ದರು. ಬೆಂಗಳೂರಿನ 4 ನಂಬರ್ ಸಿಕ್ಕಿದ್ದರಿಂದಲೇ ಆಪರೇಷನ್ ಕಮಲ ಸಕ್ಸಸ್ ಆಗಿತ್ತು. ಆ ಕಾರಣಕ್ಕಾಗಿ ಸಿಎಂ ಯಡಿಯೂರಪ್ಪ ಅವರು ಎಸ್.ಟಿ.ಸೋಮಶೇಖರ್ ಅವರನ್ನು ನಂಬರ್ 1 ಸ್ಥಾನಕ್ಕೇರಿಸಿ, ರಮೇಶ್ ಜಾರಕಿಹೊಳಿ ಅವರನ್ನು ನಂಬರ್ 2 ಸ್ಥಾನಕ್ಕೆ ತಳ್ಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಪ್ರತ್ಯೇಕವಾಗಿ ಬಂದ ಆನಂದ್ ಸಿಂಗ್ ಅವರಿಗೆ 3ನೇ ಸ್ಥಾನ, ಸುಧಾಕರ್ ಅವರಿಗೆ 4 ಸ್ಥಾನ ಕೊಡಲಾಗಿದೆ. ನಂತರ ಟೀಂ ಆಧಾರದ ಮೇಲೆ ಸ್ಥಾನ ಕೊಟ್ಟು ರಾಜಭವನಕ್ಕೆ ಪಟ್ಟಿಯನ್ನು ಕಳುಹಿಸಲಾಗಿದೆ ಎನ್ನಲಾಗಿದೆ.

  • ನನ್ಗೆ ಮಂತ್ರಿಗಿರಿ ಸಿಗದಿದ್ರೆ ಆಕಾಶವೇನು ಬೀಳಲ್ಲ: ಹೆಚ್.ವಿಶ್ವನಾಥ್

    ನನ್ಗೆ ಮಂತ್ರಿಗಿರಿ ಸಿಗದಿದ್ರೆ ಆಕಾಶವೇನು ಬೀಳಲ್ಲ: ಹೆಚ್.ವಿಶ್ವನಾಥ್

    -ಸುಧಾಕರ್ ಡಾಕ್ಟರ್, ಲಾಯರ್ ಅಲ್ಲ
    -ಕೊಟ್ಟ ಮಾತು ತಪ್ಪಿದ್ರೆ ಸಿಎಂ ಉತ್ತರ ಕೊಡ್ಬೇಕು
    -ನಮ್ಮದು ಹೋರಾಟ ಮಾರಾಟವಲ್ಲ

    ಮೈಸೂರು: ಸಂಪುಟ ಬಿಕ್ಕಟ್ಟಿನ ಕುರಿತು ಮಾಜಿ ಸಚಿವ ಹೆಚ್.ವಿಶ್ವನಾಥ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಸೋತವರಿಗೆ ಸಚಿವ ಸ್ಥಾನ ಇಲ್ಲ ಸಿಎಂ, ಶಾಸಕರಾದ ಸುಧಾಕರ್ ಮತ್ತು ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಂಪುಟ ವಿಸ್ತರಣೆಯಲ್ಲಿ ನಾವು 17 ಜನರು ಯಾವುದೇ ಗೊಂದಲವನ್ನ ಸೃಷ್ಟಿ ಮಾಡಿಲ್ಲ. ಸಿಎಂ ಗೊಂದಲದಲ್ಲಿದ್ದಾರೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಿಎಂ ಯಡಿಯೂರಪ್ಪ ಸಹ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ನಿಲುವು ಹೊಂದಿದ್ದಾರೆ. ಈ 17 ಜನರಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ನಮ್ಮ ಈ ಹೋರಾಟಕ್ಕೆ ಗೌರವ ನೀಡಬೇಕು. ನಮ್ಮದು ಹೋರಾಟವೇ ಹೊರತು ಮಾರಾಟ ಅಲ್ಲ ಎಂದು ಗುಡುಗಿದರು.

    ಸುಧಾಕರ್ ಡಾಕ್ಟರ್, ನಾನು ಲಾಯರ್. ಸುಪ್ರೀಂಕೋರ್ಟ್ ತೀರ್ಪನ್ನು ನಾನು ಓದಿಕೊಂಡಿದ್ದೇನೆ. ನೀವು ಚುನಾವಣೆಗೆ ನಿಂತು ಪವಿತ್ರರಾಗಿ ಬನ್ನಿ ಎಂದು ಹೇಳಿದೆಯೇ ಹೊರತು ಸೋಲು-ಗೆಲುವಿನ ಬಗ್ಗೆ ಹೇಳಿಲ್ಲ. ಸುಧಾಕರ್ ಡಾಕ್ಟರ್ ಆಗಿದ್ದು, ವಕೀಲರ ಬಳಿ ಜಡ್ಜಮೆಂಟ್ ತರಿಸಿಕೊಂಡು ಓದಿ, ಅರ್ಥಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾನು ಎಲ್ಲ 17 ಜನರೊಂದಿಗೆ ಸಂಪರ್ಕದಲ್ಲಿದ್ದು, ಕೆಲವರು ಎಲ್ಲೋ ಹೋಗಿ ಪಾಠ ಹೇಳಿಸಿಕೊಂಡು ಬಂದು ಮಾತನಾಡುತ್ತಿದ್ದಾರೆ. ಮಂತ್ರಿ, ಸಂಪುಟದ ಬಗ್ಗೆ ಮಾತನಾಡೋದನ್ನು ಬಿಟ್ಟಿದ್ದೇನೆ. ಬಿಜೆಪಿ ಮತ್ತು ಯಡಿಯೂರಪ್ಪ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ. ಇದೇ 17 ಜನರು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ತೆಗೆದಿದ್ದೇವೆ. ಹಾಗಾಗಿ ನಮ್ಮ ಹೋರಾಟಕ್ಕೆ ಒಂದು ಗೌರವ ಕೊಡಬೇಕಿದೆ. ಕೆಲ ಜನ ನಮ್ಮ ರಾಜಕೀಯದ ಹೋರಾಟವನ್ನು ಮಾರಾಟ ಎಂದು ತಿಳಿದುಕೊಂಡಿದ್ದಾರೆ. ನಮ್ಮ ಈ ರಾಜಕೀಯದ ಹೋರಾಟಕ್ಕೆ ಬಿಜೆಪಿ ಹೈಕಮಾಂಡ್ ಮತ್ತು ಯಡಿಯೂರಪ್ಪನವರು ಗೌರವ ಕೊಡಬೇಕು ಎಂದು ಆಗ್ರಹಿಸಿದರು.

    15ರಲ್ಲಿ 12 ಜನರು ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಂತ್ರಿಗಿರಿ ಕೊಡುವಾಗ ಸೋತರು ಎಂಬ ಕಾರಣ ನೀಡಬಾರದು. ಹಾಗಾದ್ರೆ ಲಕ್ಷ್ಮಣ ಸವದಿ ಯಾವ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈಗ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಗಳು. ನಾವೇನು ಡಿಸಿಎಂ ಸ್ಥಾನ ಕೇಳಿಲ್ಲ. ಮಂತ್ರಿಗಿರಿ ಕೊಡಲು ಸೋತರು ಎಂಬ ಕಾರಣಗಳನ್ನು ನೀಡುವುದು ತಪ್ಪು. ಒಂದು ವೇಳೆ ನನಗೆ ಸಚಿವ ಸ್ಥಾನ ಸಿಗದಿದ್ದರೆ ಆಕಾಶ ಬೀಳಲ್ಲ. ಸಚಿವ ಸ್ಥಾನ ಯಾಕೆ ತಪ್ಪಿತು ಎಂಬುವುದಕ್ಕೆ ಯಡಿಯೂರಪ್ಪನವರೇ ಉತ್ತರ ನೀಡಬೇಕು. ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಅಂದ್ರೆ ಅದು ಯಡಿಯೂರಪ್ಪ. ಹಾಗಾಗಿ ಸಿಎಂ ಮೇಲೆ ಈ ಕ್ಷಣಕ್ಕೂ ನಂಬಿಕೆ ಎಂದರು.

  • ಜಾನಪದ ಜಾತ್ರೆಯಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳದ ಅರ್ಹ ಶಾಸಕರು

    ಜಾನಪದ ಜಾತ್ರೆಯಲ್ಲಿ ಸಿಎಂ ಜೊತೆ ವೇದಿಕೆ ಹಂಚಿಕೊಳ್ಳದ ಅರ್ಹ ಶಾಸಕರು

    – ಸಿಎಂ ಮೇಲೆ ಸುಧಾಕರ್, ಎಸ್.ಟಿ ಸೋಮಶೇಖರ್ ಬೇಸರ
    – ಜಾನಪದ ಜಾತ್ರೆಗೆ ಎತ್ತಿನಗಾಡಿಯಲ್ಲಿ ಆಗಮಿಸಿದ ಬಿಎಸ್‍ವೈ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡಬಲ್ ಟೆನ್ಷನ್ ಶುರುವಾಗಿದೆ. ಸಚಿವ ಸ್ಥಾನಕ್ಕಾಗಿ ಒಂದು ಕಡೆ ಸ್ವಾಮೀಜಿಗಳ ಒತ್ತಡ, ಮತ್ತೊಂದು ಕಡೆ ಮಿತ್ರಮಂಡಳಿಯ ಅಸಮಾಧಾನದ ಬಿಸಿದ ತಟ್ಟಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಾನಪದ ಜಾತ್ರೆಗೆ ಅದ್ದೂರಿ ತೆರೆಬಿದ್ದಿದೆ. ಈ ಕಾರ್ಯಕ್ರದಲ್ಲಿ ಸಿಎಂ ಯಡಿಯೂರಪ್ಪ ಅವರ ಮೇಲೆ ಶಾಸಕ ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಅವರು ಹಂಚಿಕೊಳ್ಳದೆ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕರ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ.

    ಎತ್ತಿನ ಗಾಡಿಯಲ್ಲಿ ಜಾನಪದ ಜಾತ್ರೆಗೆ ಆಗಮಿಸಿದ ಸಿಎಂ ಯಡಿಯೂರಪ್ಪ ಅವರನ್ನು ಸಚಿವ ಆರ್.ಅಶೋಕ್ ಬರಮಾಡಿಕೊಂಡರು. ಎರಡು ದಿನಗಳ ಕಾಲ ನಡೆದ ಜಾನಪದ ಜಾತ್ರೆ ಸಮಾರೋಪ ಸಮಾರಂಭದಲ್ಲಿ ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನವನ್ನ ಸಿಎಂ ಯಡಿಯೂರಪ್ಪ ಕಣ್ಣು ತುಂಬಿಕೊಂಡಿದ್ದಾರೆ.

    ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಪ್ರೀತಂ ಗೌಡ, ಎ.ಕೃಷ್ಣಪ್ಪ, ಶಾಸಕರಾದ ಡಾ.ಕೆ.ಸುಧಾಕರ್ ಮತ್ತು ಎಸ್.ಟಿ ಸೋಮಶೇಖರ್ ಸೇರಿದಂತೆ ಸ್ಥಳೀಯ ಪಾಲಿಕೆ ಸದಸ್ಯರು ಮತ್ತು ಸಾವಿರಾರು ಸಾರ್ವಜನಿಕರು ಭಾಗವಹಿಸಿದ್ದರು. ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಸಿಎಂ ಯಡಿಯೂರಪ್ಪ ಅವರು ಜಾನಪದ ತಂಡಗಳ ನೃತ್ಯ ಪ್ರದರ್ಶನ ವೀಕ್ಷಿಸಿದರು.

    ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಕರ್ನಾಟಕ ಜಾನಪದ ಕಲೆಗಳ ಪ್ರಪಂಚ. ಕರ್ನಾಟಕದಲ್ಲಿ ಹಲವಾರು ಕಲೆಗಳ ತವರಾರು ಇವೆ. ಅವುಗಳನ್ನು ಉಳಿಸಿ ಬೆಳಸುವಂತ ಕೆಲಸ ಮಾಡುತ್ತಿದ್ದೇವೆ. ಡೊಳ್ಳು ಕುಣಿತ ಕಂಸಾಳೆ, ನಂದಿ ಧ್ವಜ ನೃತ್ಯ, ಕೋಲಾಟ ಎಲ್ಲಾ ರೀತಿಯ ನೃತ್ಯಗಳು ನಡೆದಿದೆ. ಜಾನಪದ ಕಲಾವಿದರ ಬದುಕಿಗೆ ನೆರವು ಮತ್ತು ಜಾನಪದ ಕಲಾವಿದರಿಗೆ ಮಾಸಾಶನ ನೀಡಲಾಗುತ್ತದೆ ಎಂದು ಹೇಳಿದರು.

  • ಭರ್ಜರಿ ಗೆಲುವಿನ ಖುಷಿಯಲ್ಲಿ ನೂತನ ಶಾಸಕರಿಂದ ರೌಂಡ್ಸ್

    ಭರ್ಜರಿ ಗೆಲುವಿನ ಖುಷಿಯಲ್ಲಿ ನೂತನ ಶಾಸಕರಿಂದ ರೌಂಡ್ಸ್

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಜಯಭೇರಿ ಭಾರಿಸಿದ ನೂತನ ಶಾಸಕರಾದ ಎಸ್.ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ್ದಾರೆ.

    ಕೇವಲ ನೂತನ ಶಾಸಕರು ಮಾತ್ರವಲ್ಲ ಅವರೊಂದಿಗೆ ಕೆಲ ಬಿಜೆಪಿ ನಾಯಕರು ಕೂಡ ಮಠಕ್ಕೆ ಭೇಟಿಕೊಟ್ಟಿದ್ದಾರೆ. ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ನಿರ್ಮಲಾನಂದ ಸ್ವಾಮೀಜಿಗಳು ಇಬ್ಬರು ಶಾಸಕರು ಬೆಂಗಳೂರು ಅಭಿವೃದ್ಧಿಗೆ ಶ್ರಮಿಸಿ ಎಂದು ಆಶೀರ್ವದಿಸಿದರು. ಇದೇ ವೇಳೆ ಮಾಧ್ಯಮಗಳ ಕೊತೆ ಮಾತನಾಡಿ, ಬಿಜೆಪಿ ನೀಡಿರುವ ಮಾತಿನಂತೆ ಗೆದ್ದ ಶಾಸಕರಿಗೆ ಮಂತ್ರಿ ಮಾಡಲಿದೆ ಎಂಬ ವಿಶ್ವಾಸ ಇದೆ ಎಂದು ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ತಿಳಿಸಿದರು.

    ಮಠದಿಂದ ಹೊರಟ ನಂತರ ಸಚಿವ ಸೋಮಣ್ಣ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಶಾಸಕರು ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ ಸೋಮಣ್ಣ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿದೆ. ಸೋತವರನ್ನ ಕೈ ಬಿಡದೆ ಸೂಕ್ತ ಸ್ಥಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

    ಎಸ್.ಟಿ ಸೋಮಶೇಖರ್ ಅವರು 27,686 ಮತಗಳ ಅಂತರದಿಂದ ಗೆಲ್ಲುವ ಮೂಲಕ ಯಶವಂತಪುರದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಬಿಜೆಪಿ ಪರವಾಗಿ 1,44,676 ಮತಗಳು ಬಿದ್ದರೆ, ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಜವರಾಯಿಗೌಡ 1,16,990 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಕೇವಲ 15,707 ಮತಗಳನ್ನು ಪಡೆದಿದೆ. ಕಳೆದ ಚುನಾವಣೆಯಲ್ಲಿ ಸೋಮಶೇಖರ್ 10,711 ಮತಗಳಿಂದ ಗೆದ್ದಿದ್ದರು.

    ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಭೈರತಿ ಬಸವರಾಜ್ 63,405 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿ ಪರವಾಗಿ 1,39,833, ಕಾಂಗ್ರೆಸ್ ಪರವಾಗಿ 76,428 ಮತಗಳು ಚಲಾವಣೆಯಾದರೆ ಜೆಡಿಎಸ್‍ಗೆ 2,048 ಮತಗಳು ಬಿದ್ದಿದೆ. 2018ರ ಚುನಾವಣೆಯಲ್ಲಿ 32,729 ಮತಗಳಿಂದ ಭೈರತಿ ಬಸವರಾಜ್ ಜಯಗಳಿಸಿದ್ದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ನಂದೀಶ್ ರೆಡ್ಡಿ ಅವರಿಗೆ 1,02,675 ಮತಗಳು ಬಿದ್ದಿತ್ತು.

  • ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ಎಸ್.ಟಿ.ಸೋಮಶೇಖರ್

    ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ಎಸ್.ಟಿ.ಸೋಮಶೇಖರ್

    ಬೆಂಗಳೂರು: ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಕಡೆಗೂ ಗೆಲುವಿನ ನಗೆ ಬೀರಿದ್ದಾರೆ.

    ಯಶವಂತಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ 1,44,676 ಮತಗಳನ್ನ ಪಡೆದರು. ಉಪಚುನಾವಣೆಯಲ್ಲಿ ಗೆದ್ದಿರುವ ಯಶವಂತಪುರ ನೂತನ ಶಾಸಕರಾದ ಎಸ್.ಟಿ. ಸೋಮಶೇಖರ್, 2018ರ ಚುನಾವಣೆಗಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸತತ ಮೂರನೇ ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವನ್ನ ಸೋಮಶೇಖರ್ ಸಾಧಿಸಿದರು.

    ಸೋತ ಎರಡನೇ ಸ್ಥಾನದಲ್ಲಿರುವ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ 1,16,990 ಮತಗಳ ಪಡೆದಿದ್ದಾರೆ. ಎಸ್.ಟಿ. ಸೋಮಶೇಖರ್ 27,686 ಮತಗಳ ಅಂತರದಲ್ಲಿ ಗೆಲುವನ್ನ ಸಂಭ್ರಮಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಪಾಳ್ಯ ಠೇವಣಿ ಕಳೆದುಕೊಂಡು 15,707 ಮತಗಳಿಗೆ ತೃಪ್ತಿ ಪಟ್ಟಿದ್ದಾರೆ. ಇಷ್ಟಲ್ಲದೇ ಉಪಚುನಾವಣೆ ಅಭ್ಯರ್ಥಿಗಳ ಬಗ್ಗೆ ನಿರಾಸೆ ತೋರಿ 2,810 ನೋಟಾ ಮತಗಳು ಚಲಾವಣೆಯಾಗಿದೆ.

  • ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    ಫಲಿತಾಂಶಕ್ಕೂ ಮುನ್ನವೇ ಸೋಮಶೇಖರ್ ಅಸಮಾಧಾನ

    – ಅನರ್ಹರಿಗೆ ಮಂತ್ರಿಗಿರಿ ಕೊಡಲ್ಲಾಂದ್ರೆ ಮೊದಲೇ ಹೇಳ್ಬೇಕಿತ್ತು
    – ಬಿಜೆಪಿ ಸರ್ಕಾರ ಆಗೋದು ಬೇಡ ಅನ್ಬೇಕಿತ್ತು
    – ಕಾಂಗ್ರೆಸ್‍ನಲ್ಲಿ ಇದ್ದೀದ್ರೆ ಸಮಾಧಿ ಆಗುತ್ತಿದ್ವಿ

    ಬೆಂಗಳೂರು: ಉಪ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅರ್ನಹ ಶಾಸಕರಿಗೆ ಸಚಿವಸ್ಥಾನ ನೀಡಿದರೆ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗುತ್ತದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಇದನ್ನು ಬಿಜೆಪಿಯವರು ಮೊದಲೇ ಹೇಳಬೇಕಿತ್ತು. ಬಿಜೆಪಿ ಸರ್ಕಾರ ರಚನೆ ಆಗುವುದು ಬೇಡ ಅಂತ ಹೇಳಬೇಕಿತ್ತು. ಸಚಿವಸ್ಥಾನ ನೀಡಿದರೆ ಅಸಮಾಧಾನ ಉಂಟಾಗುತ್ತದೆ ಅಂತ ಹೇಳುವುದಾದರೆ ನಮ್ಮನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು ಎಂದು ಗುಡುಗಿದರು. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    ಶಿವಾಜಿ ನಗರ ಉಪ ಚುನಾವಣೆ ಸ್ಪರ್ಧೆಗೆ ರೋಷನ್ ಬೇಗ್ ಮುಂದಾಗಲಿಲ್ಲ. ರಾಣೇಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ, ಮಂತ್ರಿ ಮಾಡುತ್ತಾರೆ ಎಂಬ ಮಾಹಿತಿ ಇದೆ. ಅನರ್ಹರಿಗೆ ಸಚಿವ ಸ್ಥಾನ ತಪ್ಪುವುದಿಲ್ಲ ಎಂದರು.

    ನಾವು ಕಾಂಗ್ರೆಸ್‍ನಲ್ಲಿ ಇದ್ದಿದ್ದರೆ ಸಮಾಧಿ ಆಗುತ್ತಿದ್ದೇವು. ಈಗ ಸಮಾಧಿಯಿಂದ ಹೊರಗೆ ಬಂದಿದ್ದೇವೆ. ಟೀಕೆ ಮಾಡುವವರು ಮಾಡಲಿ. ನಾವು ಮಾತ್ರ ಚೆನ್ನಾಗಿದ್ದೇವೆ. ನಮ್ಮ ವಿರುದ್ಧ ಕಾಂಗ್ರೆಸ್‍ನವರಿಗೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ಆರೋಪ ಮಾಡಿದರೆ ಏನು ಪ್ರಯೋಜನ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಈ ಹಿಂದೆ ನಾನೊಬ್ಬನೇ ಚುನಾವಣೆ ಎದುರಿಸಿದ್ದೆ. ಆದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯವರನ್ನು ಒಗ್ಗೂಡಿಸಲಾಯಿತು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಯಕರು ಪ್ರಚಾರಕ್ಕೆ ಬಂದಿದ್ದರು. 641 ಬೂತ್‍ಗಳಲ್ಲಿ ಎಲ್ಲ ರೀತಿಯ ಅಧ್ಯಯನ ಮಾಡಿದ್ದೇನೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ.

    ಉಪ ಚುನಾವಣೆ ಫಲಿತಾಂಶದ ಬಳಿಕ ಕ್ಷೇತ್ರದ ವಿವಿಧೆಡೆ ಹೋಗಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಗೆದ್ದವರು ಯಾರೂ ಸೋಮವಾರ ಕ್ಷೇತ್ರ ಬಿಟ್ಟು ಬರುವುದಿಲ್ಲ. ಹೀಗಾಗಿ ಮಂಗಳವಾರ ಬೆಳಗ್ಗೆ ಅನರ್ಹ ಶಾಸಕರೆಲ್ಲರೂ ಒಟ್ಟಾಗಿ ಸೇರುತ್ತೇವೆ ಎಂದು ತಿಳಿಸಿದರು.

    ಒಕ್ಕಲಿಗ ನಾಯಕನಾಗಲು ಪ್ರಯತ್ನ ಮಾಡುವುದಿಲ್ಲ. ಕಾಂಗ್ರೆಸ್‍ನಲ್ಲಿ ಇದ್ದಾಗಲೂ ನಾನು ಪೈಪೋಟಿ ಮಾಡಿಲ್ಲ. ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ. ಈಗ ಸಚಿವ ಆರ್.ಅಶೋಕ್ ಅವರಿಗೆ ಪೈಪೋಟಿ ನೀಡಿ ಒಕ್ಕಲಿಗ ನಾಯಕನಾಗುವ ಆಸೆ ನನ್ನಗಿಲ್ಲ. ಬಿಜೆಪಿಗೆ ಬಂದಿದ್ದೇನೆ. ಇಲ್ಲಿ ಇರುವಷ್ಟು ದಿನ ಪ್ರಾಮಾಣಿಕನಾಗಿ ಇರುತ್ತೇನೆ. ಇಲ್ಲಿಂದ ಬೇರೆ ಕಡೆ ಹೋಗುವ ಯೋಚನೆ ಮಾಡಿಲ್ಲ. ಮಂತ್ರಿ ಮಾಡಿ ಎಂದು ಎಂದಿಗೂ ಕೇಳುವುದಿಲ್ಲ. ಇಂತಹ ಖಾತೆ ಬೇಕು ಅಂತ ಕಂಡಿಷನ್ ಹಾಕಿಲ್ಲ. ಮಂತ್ರಿ ಸ್ಥಾನವನ್ನು ಅವರೇ ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್- ಜೆಡಿಎಸ್ ಒಪ್ಪಂದದ ಆಡಿಯೋ ಈಗಲೂ ನನ್ನ ಬಳಿಯಿದೆ. ಸೂಕ್ತ ಸಮಯ ಬಂದಾಗ ಆಡಿಯೋ ಬಿಡುತ್ತೇಮೆ. ಆ ಲೀಡರ್ ಯಾರು ಅಂತ ಹೇಳುತ್ತೇನೆ. ಮತ್ತೊಂದು ಸುತ್ತಿನ ಆಪರೇಷನ್ ಕಮಲ ಮಾಡುವ ಅವಶ್ಯಕತೆ ಬೀಳಲ್ಲ. 9 ಜನ ಜೆಡಿಎಸ್ ಶಾಸಕರು, 4 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತೇವೆ ಅಂದಿದ್ದಾರೆ. ಆದರೆ ನಾವು ನಮ್ಮ ಕಷ್ಟ ಹೇಳಿದ್ದೇವೆ ಎಂದು ಹೊಸ ಬಾಂಬ್ ಸಿಡಿಸಿದರು.

    ನಮ್ಮ ವಿರುದ್ಧ ಅಪಪ್ರಚಾರ ಮಾಡಿದವರಿಗೆ ದೇವರು ಆರೋಗ್ಯ ಎಲ್ಲವನ್ನೂ ಕೊಟ್ಟು ಒಳ್ಳೆಯದು ಮಾಡಲಿ. ನಾವು ಮೂರ್ನಾಲ್ಕು ತಿಂಗಳು ನೋವು ಅನುಭವಿಸಿದ್ದೇವೆ. ಈ ಎಲ್ಲ ನೋವನ್ನು ರಾಜೀನಾಮೆ ಕೊಡಲು ಮುಂದಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ತಿಳಿಸಿದ್ದೇವೆ ಎಂದರು.

  • ಜೆಡಿಎಸ್ ಅಭ್ಯರ್ಥಿ ದಸರಾದ ಅಂಬಾರಿ ಆನೆ ಇದ್ದಂತೆ: ಮುನಿರತ್ನ ವ್ಯಂಗ್ಯ

    ಜೆಡಿಎಸ್ ಅಭ್ಯರ್ಥಿ ದಸರಾದ ಅಂಬಾರಿ ಆನೆ ಇದ್ದಂತೆ: ಮುನಿರತ್ನ ವ್ಯಂಗ್ಯ

    ಬೆಂಗಳೂರು: ಜೆಡಿಎಸ್ ಅಭ್ಯರ್ಥಿ ಒಂದು ರೀತಿ ದಸರಾದ ಅಂಬಾರಿಯ ಆನೆ ಇದ್ದಂತೆ ಎಂದು ಅನರ್ಹ ಶಾಸಕ ಮುನಿರತ್ನ ವ್ಯಂಗ್ಯವಾಡಿದ್ದಾರೆ.

    ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಅವರ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ವರ್ಷಕ್ಕೊಮ್ಮೆ ದಸರಾ ಅಂಬಾರಿ ಹೊರುವುದಕ್ಕೆ ಆನೆಯನ್ನು ಕರೆದುಕೊಂಡು ಬರುತ್ತಾರೆ. ಬಳಿಕ ದಸರಾ ಮುಗಿದ ಮೇಲೆ ಕಾಡಿಗೆ ಕಳುಹಿಸುತ್ತಾರೆ. ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರ ಪರಿಸ್ಥಿತಿ ಕೂಡ ಅದೇ ಆಗಿದೆ ಎಂದು ಲೇವಡಿ ಮಾಡಿದರು.

    ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರು ಜವರಾಯಿಗೌಡ ಅವರನ್ನು ಕರೆದುಕೊಂಡು ಬರುತ್ತಾರೆ. ಅವರಿಗೆ ಪಕ್ಷದ ಚಿಹ್ನೆ ಕೊಟ್ಟು, ರೌಂಡ್ ಹೊಡೆಸಿ ಮತ್ತೆ ಅವರನ್ನು ಕೈಬಿಡುತ್ತಾರೆ. ಐದು ವರ್ಷಕೊಮ್ಮೆ ಮೆರವಣಿಗೆ ಮಾಡಿದವವರಿಗೆ ಜನ ಮತ ಹಾಕುವುದಿಲ್ಲ. ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ.ಸೋಮಶೇಖರ್ ನಿತ್ಯವೂ ಅಂಬಾರಿ ಹೊರುತ್ತಾರೆ. ಅವರನ್ನು ಕ್ಷೇತ್ರದ ಜನರು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

    ಉಪ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ಗೆಲುವು ಸಾಧಿಸುತ್ತಾರೆ. ಮತ್ತೆ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಮುನಿರತ್ನ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಹಿಂದಿನ ಚುನಾವಣೆ:
    ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು 2013 ಹಾಗೂ 2018ರ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಟಿಸೋಮಶೇಖರ್ ವಿರುದ್ಧ ಸೋತಿದ್ದರು. 2013ರಲ್ಲಿ ಎಸ್.ಸೋಮಶೇಖರ್ 1,20,380 ಮತ ಪಡೆದಿದ್ದರೆ ಜವರಾಯಿಗೌಡ 91,280 ಮತ ಗಳಿಸಿದ್ದರು. ಈ ಮೂಲಕ 29,100 ಮತಗಳ ಅಂತರದಿಂದ ಸೋತಿದ್ದ ಜವರಾಯಿಗೌಡ ಅವರು 2018 ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನೀಡಿ 10,711 ಮತಗಳಿಂದ ಪರಾಭವಗೊಂಡಿದ್ದರು. ಈ ವೇಳೆ ಎಸ್.ಟಿ.ಸೋಮಶೇಖರ್ 1,15,273 ಮತ ಪಡೆದಿದ್ದರೆ ಜವರಾಯಿ ಗೌಡ 1,04,562 ಮತವನ್ನು ಪಡೆದಿದ್ದರು.

    https://www.youtube.com/watch?v=5vkR11RaBS4

  • ಐಟಿ ದಾಳಿ ನೋಟಿಸ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ

    ಐಟಿ ದಾಳಿ ನೋಟಿಸ್: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ

    ಬೆಂಗಳೂರು: ಯಶವಂತಪುರ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರಿಗೆ ಐಟಿ ನೋಟಿಸ್ ಜಾರಿ ಮಾಡಿದ್ದು ಇಂದು ಆದಾಯ ತೆರಿಗೆ ಕಚೇರಿಗೆ ಭೇಟಿ ನೀಡಿ ಮಾಹಿತಿಗಳನ್ನು ನೀಡಿದ್ದಾರೆ.

    ಈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜವರಾಯಿಗೌಡ ಅವರು, ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಪರ ಕೆಲಸ ಮಾಡುವಂತೆ ಕಮಲ ಪಡೆಯ ನಾಯಕರು ಆಫರ್ ಕೊಟ್ಡಿದ್ದರು. ನಿಮ್ಮನ್ನ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುತ್ತೇವೆ, ಬೋರ್ಡ್ ಅಧ್ಯಕ್ಷ ಸ್ಥಾನ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ನಾನು ಪಕ್ಷ ನಿಷ್ಠೆಯಿಂದ ಹೋಗಿಲ್ಲ. ನಾನು ಎರಡು ಬಾರಿ ಸೋತಿರಬಹುದು, ಮತದಾರರನ್ನು ವಂಚಿಸಲ್ಲ ಎಂದು ಹೇಳಿದ್ದಾರೆ.

    ಐಟಿ ಇಲಾಖೆ ನೋಟಿಸ್ ನೀಡಿದ ಹಿನ್ನೆಲೆ ಜವರಾಯಿಗೌಡ ಅವರು ಇಂದು ನಗರದ ಐಟಿ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ವೈಯಕ್ತಿಕ ವಿಚಾರಕ್ಕೆ ಮಾತ್ರ ನೋಟಿಸ್ ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ನೋಟ್ ಬ್ಯಾನ್ ಆದಾಗ ಆಸ್ತಿ ಪಡೆದಿದ್ದೆ. ಅದರ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ಕೇಳಿದರು. ಇಂದು ಕೊಟ್ಟು ಬಂದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.

    ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಬ್ಲ್ಯಾಕ್‍ಮೇಲ್ ಮೂಲಕ ಗುತ್ತಿಗೆದಾರರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾಂಗ್ರೆಸ್‍ನ ಕೆಲ ಜನರಿಗೆ ಗುತ್ತಿಗೆ ನೀಡಿರುವುದು ಗೊತ್ತಾಗಿದೆ. ಅವರನ್ನು ಮಾತ್ರ ಬ್ಲ್ಯಾಕ್‍ಮೇಲ್ ಮಾಡಲಾಗಿದೆ. ಜೆಡಿಎಸ್ ಬೆಂಬಲಿಗರಿಗೆ ಆಮಿಷ ಒಡ್ಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

    59.30 ಕೋಟಿ ರೂ. ಆಸ್ತಿಯ ಒಡೆಯ:
    ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಒಟ್ಟು 59.30 ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಪೈಕಿ ಜವರಾಯಿಗೌಡರ ಚರಾಸ್ತಿ 15.93 ಕೋಟಿ ರೂ. ಇದ್ದರೆ, ಅವರ ಪತ್ನಿ ಗಾಯತ್ರಿ 8.33 ಕೋಟಿ ರೂ. ಹೊಂದಿದ್ದಾರೆ. ಜವರಾಯಿಗೌಡ ಒಟ್ಟು 44.37 ಕೋಟಿ ರೂ. ಸ್ಥಿರಾಸ್ತಿ ಹಾಗೂ ಪತ್ನಿ 85.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು ಸಾಲ 32 ಕೋಟಿ ರೂ. ಹಾಗೂ ಪತ್ನಿ ಹೆಸರಲ್ಲಿ ಒಟ್ಟು 28.18 ಕೋಟಿ ರೂ. ಸಾಲ ಇದೆ ಎಂದು ಅಫಿಡೆವಿಟ್‍ನಲ್ಲಿ ಜವರಾಯಿಗೌಡ ಘೋಷಿಸಿಕೊಂಡಿದ್ದಾರೆ.

    ಹಿಂದಿನ ಚುನಾವಣೆ:
    ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು 2013 ಹಾಗೂ 2018ರ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಎಸ್.ಟಿಸೋಮಶೇಖರ್ ವಿರುದ್ಧ ಸೋತಿದ್ದರು. 2013ರಲ್ಲಿ ಎಸ್.ಸೋಮಶೇಖರ್ 1,20,380 ಮತ ಪಡೆದಿದ್ದರೆ ಜವರಾಯಿಗೌಡ 91,280 ಮತ ಗಳಿಸಿದ್ದರು. ಈ ಮೂಲಕ 29,100 ಮತಗಳ ಅಂತರದಿಂದ ಸೋತಿದ್ದ ಜವರಾಯಿಗೌಡ ಅವರು 2018 ಚುನಾವಣೆಯಲ್ಲಿ ಪ್ರಭಲ ಸ್ಪರ್ಧೆ ನೀಡಿ 10,711 ಮತಗಳಿಂದ ಪರಾಭವಗೊಂಡಿದ್ದರು. ಈ ವೇಳೆ ಎಸ್.ಟಿ.ಸೋಮಶೇಖರ್ 1,15,273 ಮತ ಪಡೆದಿದ್ದರೆ ಜವರಾಯಿ ಗೌಡ 1,04,562 ಮತವನ್ನು ಪಡೆದಿದ್ದರು.