Tag: ಎಸ್ ಟಿ ಸೋಮಶೇಖರ್

  • ಪಾದರಾಯನಪುರ ಆಗುತ್ತಾ ಮೈಸೂರಿನ ನರಸಿಂಹರಾಜ ಕ್ಷೇತ್ರ?: ಎಸ್‍ಟಿಎಸ್ ಆತಂಕ

    ಪಾದರಾಯನಪುರ ಆಗುತ್ತಾ ಮೈಸೂರಿನ ನರಸಿಂಹರಾಜ ಕ್ಷೇತ್ರ?: ಎಸ್‍ಟಿಎಸ್ ಆತಂಕ

    ಮೈಸೂರು: ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಣಕ್ಕೆ ತರಲು ಮೈಸೂರಿನ ನರಸಿಂಹರಾಜ ಕ್ಷೇತ್ರವನ್ನು ಲಾಕ್‍ಡೌನ್ ಮಾಡುವ ಅವಶ್ಯಕತೆ ಇದೆ ಎಂದು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ನರಸಿಂಹರಾಜ ಕ್ಷೇತ್ರ ಬೆಂಗಳೂರಿನ ಪಾದರಾಯನಪುರ ಆಗುತ್ತಾ ಎಂಬ ಆತಂಕ ವ್ಯಕ್ತಪಡಿಸಿದರು. ನರಸಿಂಹರಾಜ ಕ್ಷೇತ್ರದಲ್ಲಿ ಹೆಚ್ಚಿದ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಿವೆ. ಯಾಕಂದರೆ ಅಲ್ಲಿನ ಜನರು ಪರೀಕ್ಷೆಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ನರಸಿಂಹರಾಜ ಕ್ಷೇತ್ರವನ್ನು ಲಾಕ್ ಡೌನ್ ಮಾಡುವ ಸಾಧ್ಯತೆ ಎಂದರು.

    ಕ್ಷೇತ್ರದಲ್ಲಿ ಸಮುದಾಯ ಹರಡುವಿಕೆ ಆಗಿದೆ. ಸಂಪೂರ್ಣ ಕ್ಷೇತ್ರವನ್ನು ಮಿನಿ ಲಾಕ್ ಡೌನ್ ಮಾಡುವ ಅವಶ್ಯಕತೆ ಇದೆ. ಈ ಭಾಗದಲ್ಲಿ ಸೊಂಕಿತರು ಹಾಗೂ ಸಾವಿನ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿನ ಜನರು ಪರೀಕ್ಷೆ ಮಾಡಿಸಿಕೊಳ್ಳಲು ಬರುತ್ತಿಲ್ಲ. ನಮ್ಮ ಅಧಿಕಾರಿಗಳಿಗೆ ಸಹಕಾರ ನೀಡುತ್ತಿಲ್ಲ. ಹೀಗಾಗಿ ಅಲ್ಲಿನ ಶಾಸಕರು ಇತರ ಮುಖಂಡರೊಂದಿಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

    ಇದೇ ವೇಳೆ ಕೊರೊನಾ ವಿಚಾರದಲ್ಲಿ ಅವ್ಯವಹಾರ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು. ರೆಸಾರ್ಟ್‍ನಲ್ಲಿ ಕುಳಿತು ಆರೋಪಗಳನ್ನು ಮಾಡಬೇಡಿ. ವಿಧಾನಸೌಧಕ್ಕೆ ಬನ್ನಿ ನಿಮಗೆ ಬೇಕಾದ ದಾಖಲೆ ಕೊಡುತ್ತೇವೆ ಎಂದು ಸವಾಲೆಸೆದರು.

    ಕೊರೊನಾ ವಿಚಾರದಲ್ಲಿ ಅವ್ಯವಹಾರ ಮಾಡುವವರು ಮನುಷ್ಯತ್ವ ಇಲ್ಲದವರು. ನಾವು ವೆಚ್ಚ ಮಾಡಿರುವುದೇ 550ಕೋಟಿ. ಹೀಗಿರುವಾಗ 2 ಸಾವಿರ ಕೋಟಿ ಅವ್ಯವಹಾರ ಎನ್ನುತ್ತಿದ್ದಾರೆ ಇದು ಹೇಗೆ ಸಾಧ್ಯ? ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಅಂತಾ ವಿರೋಧ ಮಾಡುತ್ತಿದ್ದಾರೆ. ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

  • ಸೋಮಶೇಖರ್ ಹೇಳಿದ್ರೆ ನಾನು ಸ್ಪಷ್ಟೀಕರಣ ಕೊಡಬೇಕಾ: ಜಗದೀಶ್ ಶೆಟ್ಟರ್ ಆಕ್ರೋಶ

    ಸೋಮಶೇಖರ್ ಹೇಳಿದ್ರೆ ನಾನು ಸ್ಪಷ್ಟೀಕರಣ ಕೊಡಬೇಕಾ: ಜಗದೀಶ್ ಶೆಟ್ಟರ್ ಆಕ್ರೋಶ

    – ಯಾವ ಸಚಿವರೊಂದಿಗೂ ಸಭೆ ಸೇರಿಲ್ಲ

    ಹಾಸನ: ಚಿಕ್ಕಮಗಳೂರಿನಲ್ಲಿ ನಾವು ಸಭೆ ಸೇರಿಲ್ಲ ಮಾಧ್ಯಮದವರು ಅರ್ಥ ಮಾಡಿಕೊಳ್ಳಿ ಎಂದು ಜಗದೀಶ್ ಶೆಟ್ಟರ್ ಆಕ್ರೋಶ ಹೊರಹಾಕಿದ್ದಾರೆ.

    ಆರ್.ಅಶೋಕ್ ಹುಟ್ಟುಹಬ್ಬದ ಹಿನ್ನೆಲೆ ಕೆಲ ಸಚಿವರು ಚಿಕ್ಕಮಗಳೂರಿನಲ್ಲಿ ಸಭೆ ಸೇರಿದ್ದರು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು, ಸೋಮಶೇಖರ್ ಹೇಳಿದ್ರೆ ನಾನು ಸ್ಪಷ್ಟೀಕರಣ ಕೊಡಬೇಕಾ? ಸ್ವತಃ ನಾನೇ ಹೇಳುತ್ತಿದ್ದೇನೆ, ನಾವು ಸಭೆ ಸೇರಿಲ್ಲ ಮಾಧ್ಯಮದವರು ಅರ್ಥ ಮಾಡಿಕೊಳ್ಳಿ ಎಂದು ಜಗದೀಶ್ ಶೆಟ್ಟರ್ ಸಿಡಿಮಿಡಿಗೊಂಡಿದ್ದಾರೆ.

    ಚಿಕ್ಕಮಗಳೂರಿನಲ್ಲಿ ನಾವು ಸಭೆ ಮಾಡಿದ್ದೇವೆ ಎಂದು ಯಾರು ಹೇಳಿದ್ದು, ನೀವು ಬಂದಿದ್ರಾ ಅಲ್ಲಿ. ಸೋಮಶೇಖರ್ ಒಪ್ಪಿದ್ರೆ ನಾನು ಸಭೆ ಮಾಡಿದ ಹಾಗಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ನಾನು ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಪ್ರವಾಸ ಮಾಡಿ ಹಾಸನಕ್ಕೆ ಬಂದಿದ್ದೇನೆ. ಈಗ ಮಾಧ್ಯಮದಲ್ಲಿ ಸೃಷ್ಟಿ ಮಾಡಿದ್ದಕ್ಕೆ ಸ್ಪಷ್ಟೀಕರಣ ಕೊಡುವ ಪರಿಸ್ಥಿತಿ ಬಂದಿದೆ. ಇದು ಬಹಳ ಗಂಭೀರವಾದ ಸಮಸ್ಯೆ. ಇದನ್ನು ಮಾಧ್ಯಮದವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

    ನಾವು ಚಿಕ್ಕಮಗಳೂರಿಗೆ ಹೋದಾಗ ಮಂತ್ರಿಗಳು ಬರ್ತಾರೆ. ಮೀಟಿಂಗ್ ಮಾಡ್ತಾರೆ. ಅವರು ಅಲ್ಲಿ ಓಡಾಡಿದಾಗ ಅದನ್ನು ಸಭೆ ಅನ್ನೋದಾದ್ರೆ ಹೇಗೆ. ಸಚಿವ ಆರ್.ಅಶೋಕ್ ನಮ್ಮನ್ನು ಭೇಟಿ ಕೂಡ ಆಗಿಲ್ಲ, ಯಾವ ಸಭೆಯೂ ಆಗಿಲ್ಲ. ಯಾವ ಹುಟ್ಟುಹಬ್ಬ ಏನೂ ನನಗೆ ಗೊತ್ತಿಲ್ಲ. ಏನೂ ಅರ್ಥ ಆಗುತ್ತಿಲ್ಲ. ಎಲ್ಲೂ ಓಡಾಡದೇ ಮನೇಲೆ ಇರಬೇಕಾ ಎಂದು ಸಚಿವ ಜಗದೀಶ್ ಶೆಟ್ಟರ್ ಮಾಧ್ಯಮದವರ ವಿರುದ್ಧವೇ ಕಿಡಿಕಾರಿದ್ದಾರೆ.

  • ಜುಲೈ 3ರಿಂದ ಸಂಜೆ 6 ಗಂಟೆಗೆ ಮೈಸೂರು ಜಿಲ್ಲೆಯಲ್ಲಿ ಎಲ್ಲ ವ್ಯಾಪಾರ ಬಂದ್: ಸೋಮಶೇಖರ್

    ಜುಲೈ 3ರಿಂದ ಸಂಜೆ 6 ಗಂಟೆಗೆ ಮೈಸೂರು ಜಿಲ್ಲೆಯಲ್ಲಿ ಎಲ್ಲ ವ್ಯಾಪಾರ ಬಂದ್: ಸೋಮಶೇಖರ್

    – ಶುಕ್ರವಾರದಿಂದ ಮಾಸ್ಕ್ ಧರಿಸದಿದ್ರೆ 200 ರೂ. ದಂಡ

    ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಸಂಜೆ 6 ಗಂಟೆಯ ನಂತರ ಮೈಸೂರು ಜಿಲ್ಲಾದ್ಯಂತ ಎಲ್ಲ ವ್ಯಾಪಾರ-ವಹಿವಾಟು ಬಂದ್ ಆಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಧಿಕಾರಿಗಳ ಜೊತೆ ಸುಮಾರು ಒಂದು ಗಂಟೆಯ ಕಾಲ ಚರ್ಚೆ ಮಾಡಿದ್ದೇವೆ. ಶುಕ್ರವಾರದಿಂದ ಸಂಜೆ 6 ಗಂಟೆಯ ನಂತರ ಎಲ್ಲ ತರಹದ ವ್ಯವಹಾರಗಳನ್ನು ಕ್ಲೋಸ್ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ ಎಂದರು.

    ಇಷ್ಟು ದಿನ 7.30ರ ನಂತರ ಅಂಗಡಿಗಳನ್ನು ಮುಚ್ಚಬೇಕು ಎಂದು ಹೇಳಲಾಗಿತ್ತು. ಆದರೆ ಈಗ 6 ಗಂಟೆಯಿಂದ ಎಲ್ಲ ವ್ಯಾಪಾರವನ್ನು ಬಂದ ಮಾಡಲಾಗುತ್ತದೆ. ಕೋವಿಡ್ ನಿಯಂತ್ರಣ ಮಾಡಲು, ಜನರ ಓಡಾಟ ನಿಯಂತ್ರಣ ಮಾಡುವ ಸಲುವಾಗಿ ಈ ಕ್ರಮಗೊಳ್ಳಲಾಗಿದೆ. ಶುಕ್ರವಾರದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ಜಿಲ್ಲಾಡಳಿತದ ಜೊತೆಗಿನ ಸಭೆ ಬಳಿಕ ಸೋಮಶೇಖರ್ ಹೇಳಿದರು.

    ಎಲ್ಲ ಎಪಿಎಂಸಿ ಹಾಗೂ ಮಾರುಕಟ್ಟೆಗಳಲ್ಲಿ ಬೆಳಗ್ಗೆ ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ಜೊತೆಗೆ ಅಂತರ ಕಾಯುಕೊಳ್ಳಬೇಕು. ಇನ್ನೂ ಶುಕ್ರವಾರದಿಂದ ಮಾಸ್ಕ್ ಧರಿಸದಿದ್ದರೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ. ಗ್ರಾಮಾಂತರ ಭಾಗದಲ್ಲಿ 100 ರೂಪಾಯಿ ದಂಡ ಹಾಕಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ 55 ವರ್ಷ ಮೇಲ್ಪಟ ಪೊಲೀಸರಿಗೆ ನೆಗಡಿ, ಜ್ವರ ಬಂದಿದ್ದರೆ ಕಡ್ಡಾಯವಾಗಿ ಕೊರೊನಾ ಟೆಸ್ಟ್ ಮಾಡಿಸಬೇಕು. ಮಹಾನಗರ ಪಾಲಿಕೆ ಸಿಬ್ಬಂದಿಗೂ ಟೆಸ್ಟ್ ಕಡ್ಡಾಯವಾಗಿದೆ ಎಂದು ತಿಳಿಸಿದರು.

    ಒಂದು ವಾರದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗದಿದ್ದರೆ ಐದಾರು ಜನರು ಗುಂಪಲ್ಲಿ ನಿಂತು ಮಾತನಾಡುವವರಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳುತ್ತೇವೆ. ಬೆಂಗಳೂರು, ತಮಿಳುನಾಡು, ರಾಜಸ್ಥಾನ, ಆಂಧ್ರ ಪ್ರದೇಶದಿಂದ ಮೈಸೂರಿಗೆ ಬಂದವರಲ್ಲಿ ಕೊರೊನಾ ಪತ್ತೆಯಾಗಿದೆ. ಆದರೆ ಈಗ ಬೆಂಗಳೂರಿನಿಂದ ಹೆಚ್ಚಾಗಿ ಮೈಸೂರಿಗೆ ಬರುತ್ತಿಲ್ಲ ಎಂದು ಸೋಮಶೇಖರ್ ಹೇಳಿದರು.

    ಈ ಕೊರೊನಾ ಸೋಂಕು ಸಮುದಾಯಕ್ಕೆ ಇನ್ನೂ ಹರಡಿಲ್ಲ. ಒಂದೇ ತಂಡದಲ್ಲಿ ಪೊಲೀಸರು ಕೆಲಸ ಮಾಡಿದ್ದರು. ಹೀಗಾಗಿ ಮೈಸೂರಿನಲ್ಲಿ ಅವರಿಗೆ ಕೊರೊನಾ ಬಂದಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕಡಿಮೆ ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಇನ್ನೂ ಎರಡು ದಿನಗಳಲ್ಲಿ ಆರೋಗ್ಯ ಸಿಬ್ಬಂದಿ ಹೆಚ್ಚಿಸುವ ಕಡೆ ಗಮನ ಕೊಡಲಾಗುವುದು ಎಂದು ತಿಳಿಸಿದರು.

  • ಜನ ಹೆಚ್ಚು ಓಡಾಡೋ ಏರಿಯಾಗಳನ್ನು ಲಾಕ್‍ಡೌನ್ ಮಾಡಲಾಗುತ್ತೆ: ಸೋಮಶೇಖರ್

    ಜನ ಹೆಚ್ಚು ಓಡಾಡೋ ಏರಿಯಾಗಳನ್ನು ಲಾಕ್‍ಡೌನ್ ಮಾಡಲಾಗುತ್ತೆ: ಸೋಮಶೇಖರ್

    ಬೀದರ್: ರಾಜ್ಯದಲ್ಲಿ ಜನರು ಹೆಚ್ಚು ಓಡಾಡುವ ಏರಿಯಾಗಳನ್ನು ಲಾಕ್ ಡೌನ್ ಮಾಡಲಾಗುತ್ತೆ. ಆದರೆ ಬೆಂಗಳೂರನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸಿಟಿ ಮಾರ್ಕೆಟ್, ತರಕಾರಿ ಮಾರ್ಕೆಟ್, ದಿನಸಿ ಮಾರ್ಕೆಟ್ ಗಳನ್ನು ಲಾಕ್ ಡೌನ್ ಮಾಡಲಾಗುತ್ತೆ. ಎಲ್ಲಿ ಹೆಚ್ಚು ಪಾಸಿಟಿವ್ ಕೇಸ್ ಬರುತ್ತೆ ಅಲ್ಲಿ ಲಾಕ್ ಡೌನ್, ಸೀಲ್ ಡೌನ್ ಮಾಡಲು ರಾಜ್ಯ ಸರ್ಕಾರ ಮುಂಜಾಗ್ರತೆ ತೆಗೆದುಕೊಂಡಿದೆ ಎಂದರು.

    ಹೊರಗಡೆಯಿಂದ ಬರುತ್ತಿರುವವರಿಗೆ ಸೋಂಕು ಜಾಸ್ತಿಯಾಗುತ್ತಿದ್ದು ಇದನ್ನು ನಿಯಂತ್ರಣ ಮಾಡಲು ಆಗುತ್ತಿಲ್ಲ. ಹೀಗಾಗಿ 15 ದಿನಗಳಿಂದ ರಾಜ್ಯದಲ್ಲಿ ಸೋಂಕು ಜಾಸ್ತಿಯಾಗುತ್ತಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಆರ್ಥಿಕತೆ ಒಂದೇ ನೋಡುತ್ತಿಲ್ಲ. ಜನರ ಆರೋಗ್ಯವನ್ನು ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

  • ಯಲವಾಳ ತೋಟದಲ್ಲಿ ಸಹಕಾರಿ, ಕೃಷಿ ಸಚಿವರಿಂದ ಯೋಗ

    ಯಲವಾಳ ತೋಟದಲ್ಲಿ ಸಹಕಾರಿ, ಕೃಷಿ ಸಚಿವರಿಂದ ಯೋಗ

    ಹಾವೇರಿ: ಕೃಷಿ ಸಚಿವರಾದ ಬಿ.ಸಿ ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸ್ವಗ್ರಾಮ ಯಲವಾಳ ಗ್ರಾಮದ ಕೃಷಿ ಸಚಿವರ ತೋಟದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗ ದಿನಾಚರಣೆಯಲ್ಲಿ ಅಚರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್, ಯೋಗ ಎನ್ನುವುದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡಬಲ್ಲದು. ಋಷಿಮುನಿಗಳು ಈ ಹಿಂದೆ ಆಚರಿಸಿ ಅನುಸರಿಸುತ್ತಿದ್ದ ಯೋಗವನ್ನು ಇಂದಿಗೂ ನಮ್ಮ ದೇಶದಲ್ಲಿ ಪಾರಂಪರಿಕವಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡದೇ ಪ್ರತಿನಿತ್ಯ ವ್ಯಾಯಾಮ ಯೋಗ ಮಾಡುವುದು ಒಳ್ಳೆಯದು. ಯೋಗ ಎಲ್ಲರ ದೈನಂದಿನ ಭಾಗವಾಗಬೇಕು ಎಂದು ಕರೆ ನೀಡಿದರು.

    ಯೋಗಕ್ಕೆ ತನ್ನದೇ ಆದ ಇತಿಹಾಸದ ಜೊತೆಗೂ ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಯೋಗವನ್ನು ಗುರುಗಳಿಂದ ಯೋಗ ಶಾಲೆಯಲ್ಲಿ ಕಲಿಯಬಹುದು. ಕೈಬೆರಳಲ್ಲಿರುವ ಮೊಬೈಲ್‍ನಲ್ಲಿ ಯೋಗ ಕಲಿಸುವ ಅದೆಷ್ಟೋ ಯೋಗದ ವಿಡಿಯೋ ಚಾನೆಲ್‍ಗಳು ಆ್ಯಪ್‍ಗಳು ಸಹ ಲಭ್ಯ. ನಮ್ಮ ನಮ್ಮ ದೇಹಕ್ಕೆ ಅನುಕೂಲಕರವಾಗುವಂತೆ ಆದಷ್ಟು ಮಾರ್ಗದರ್ಶನ ಪಡೆದೇ ಯೋಗವನ್ನು ಅನುಸರಿಸುವುದು ಉತ್ತಮ ಎಂದು ಸಚಿವರು ಸಲಹೆಯಿತ್ತರು.

  • ಸುಧಾಕರ್ ರಾಜ್ಯದಲ್ಲೇ ಅತ್ಯಂತ ಬುದ್ಧಿವಂತ ರಾಜಕಾರಣಿ: ಸಚಿವ ಸೋಮಶೇಖರ್

    ಸುಧಾಕರ್ ರಾಜ್ಯದಲ್ಲೇ ಅತ್ಯಂತ ಬುದ್ಧಿವಂತ ರಾಜಕಾರಣಿ: ಸಚಿವ ಸೋಮಶೇಖರ್

    ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ರಾಜ್ಯದಲ್ಲೇ ಅತ್ಯಂತ ಬುದ್ಧಿವಂತ ರಾಜಕಾರಣಿ ಅಂತ ಚಿಕ್ಕಬಳ್ಳಾಪುರದಲ್ಲಿ ಸಹಕಾರ ಸಚಿವ ಸೋಮಶೇಖರ್ ಹೇಳಿದ್ದಾರೆ.

    ಸಹಕಾರ ಇಲಾಖೆ ಬಿಟ್ಟು ಬೇರೆ ಖಾತೆ ಪಡೆಯೋಣ ಅಂತಿದ್ದೆ, ಆದ್ರೆ ಸಿಎಂ ಬಳಿ ನನಗೆ ಅದೇ ಖಾತೆ ಕೊಡಿಸಿ, ತಮ್ಮ ಜಿಲ್ಲೆಗೆ ಬೇಕಾದ ಕೆಲಸಗಳನ್ನ ನನ್ನಿಂದ ಮಾಡಿಸಿಕೊಳ್ಳೋದು ಅವರ ಬುದ್ಧಿವಂತಿಕೆ ಅಂತ ಹೇಳಿದರು. ಇನ್ನೂ ಸಿಎಂ ಯಡಿಯೂರಪ್ಪನವರ ಬಳಿ ಯಾರೂ ಸಹ ಧೈರ್ಯವಾಗಿ ಮಾತನಾಡಲ್ಲ, ಮಾತನಾಡೋಕೆ ಹಿಂಜರಿತಾರೆ. ಕಾರಣ ಯಡಿಯೂರಪ್ಪನವರಿಗೆ ಕೋಪ ಅಂತ. ಆದರೆ ಸುಧಾಕರ್ ಏನೋ ಮೋಡಿ ಮಾಡಿದ್ದಾರೋ ಗೊತ್ತಿಲ್ಲ. ಅವರು ಮಾತ್ರ ಯಡಿಯೂರಪ್ಪನವರ ಬಳಿ ಧೈರ್ಯವಾಗಿ ಮಾತನಾಡ್ತಾರೆ. ಹಾಗೆ ಕೋವಿಡ್ ವಿಚಾರದಲ್ಲೂ ಸಹ ಸಚಿವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಅಂತಾ ಹಾಡಿ ಹೊಗಳಿದರು.

    ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಹಕಾರ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರನ್ನ ಹಾಡಿ ಹೊಗಳಿದರು. ಇದೇ ವೇಳೆ ಕೋಲಾರ ಡಿಸಿಸಿ ಬ್ಯಾಂಕುಗಳು ಅಕ್ರಮಗಳ ಕೂಟವಾಗಿದ್ದು ತನಿಖೆ ನಡೆಸಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಡಿಕೆಶಿ ಏನಾದ್ರೂ ಸ್ಪೆಷಲ್? ಮಂತ್ರಿಗಳಾಗಿ ನಾವೇ ಐನೂರು ಜನ ಸೇರಿಸಿ ಕಾರ್ಯಕ್ರಮ ಮಾಡೋಕೆ ಆಗಿಲಿಲ್ಲ. ಬೇಕಾದ್ರೆ ಕೋವಿಡ್ ಸೋಂಕಿನ ಭೀತಿ ಮುಗಿದ ನಂತರ ಮಾಡಿಕೊಳ್ಳಲಿ ಯಾರು ಬೇಡ ಅಂತಾರೆ ಅಂದರು.

    ಮತ್ತೊಂದೆಡೆ ನಮ್ಮ ಜೊತೆ ಇರೋವರಿಗೆ ಎಂಎಲ್‍ಸಿ ಸ್ಥಾನ ನೀಡುವಂತೆ ಸಿಎಂ ಬಳಿ ಮನವಿ ಮಾಡಿದ್ದೇವೆ. ಮುನಿರತ್ನಂ ಹಾಗೂ ಪ್ರತಾಪ್ ಗೌಡರದ್ದು ನ್ಯಾಯಾಲಯದಲ್ಲಿ ಕ್ಲಿಯರ್ ಆಗಿದ ನಂತರ ಚುನಾವಣೆ ಎದುರಿಸಬೇಕಾಗುತ್ತೆ. ಆರ್ ಶಂಕರ್ ಹಾಗೂ ರೋಷನ್ ಬೇಗ್ ಗೂ ಸಹ ಎಂಎಲ್‍ಸಿ ಮಾಡುವಂತೆ ಮನವಿ ಮಾಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತನ್ನ ಈಡೇರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ತಾ ಇದ್ದನಾ?- ಎಸ್.ಟಿ.ಸೋಮಶೇಖರ್

    ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ತಾ ಇದ್ದನಾ?- ಎಸ್.ಟಿ.ಸೋಮಶೇಖರ್

    -ತಮ್ಮ ಹೇಳಿಕೆಗಳಿಂದಲೇ ಎಂಟಿಬಿ ಸೋತಿದ್ದು

    ಮೈಸೂರು: ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನುತ್ತಿದ್ದನಾ ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ನಾನು ಸಚಿವನಾಗಿ ಮೂರು ತಿಂಗಳು ಆಗಿದೆ. ಇದುವರೆಗೂ ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ವಿಜಯೇಂದ್ರ ಅವರನ್ನು ಭೇಟಿ ಮಾಡಿ ಅಂತ ಸಿಎಂ ನಮಗೆ ಹೇಳಿಲ್ಲ. ಈ ಹಿಂದೆ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನತಾಯಿದ್ದಾನಾ ಎಂದು ಪ್ರಶ್ನೆ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದು, ಅವರ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದರು.

    ಸಿದ್ದರಾಮಯ್ಯನವರ ಸಂಪರ್ಕದಲ್ಲಿ ಯಾರಿದ್ದಾರೆ ಎಂಬ ಮಾಹಿತಿ ನನಗಿಲ್ಲ. ರಾಜ್ಯಸಭಾ ಮತ್ತು ವಿಧಾನಪರಿಷತ್ ಚುನಾವಣೆಗಳು ಬಂದಿವೆ. ಹಾಗಾಗಿ ಕೆಲ ಕಾರ್ಯಕರ್ತರು ಟಿಕೆಟ್ ನೀಡುವಂತೆ ಮನವಿ ಮಾಡಿಕೊಳ್ಳೋದನ್ನ ಬಂಡಾಯ ಎಂದು ಹೇಳಲು ಸಾಧ್ಯ. ಯಾವುದೋ ಒಂದು ಹಳೆಯ ಫೋಟೋ ತೋರಿಸಿ ಬಂಡಾಯ ಅಂದ್ರೆ ಹೇಗೆ? ಫೋಟೋಗೆ ಸಂಬಂಧಿಸಿದಂತೆ ರಾಮದಾಸ್, ಉಮೇಶ್ ಕತ್ತಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎಂದು ಹೇಳಿದರು.

    ಬಿಜೆಪಿ ಸೇರಿದ 17 ಜನರು ನಾವು ಇಂದಿಗೂ ಒಂದಾಗಿದ್ದೇವೆ. ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ರೋಷನ್ ಬೇಗ್, ಹೆಚ್.ವಿಶ್ವನಾಥ್, ಆರ್.ಶಂಕರ್, ಎಂಟಿಬಿ ನಾಗರಾಜ್ ನಮಗೆ ಒಂದೇ. ವಿಧಾನ ಪರಿಷತ್ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ, ಕೊಟ್ಟ ಮಾತನ್ನು ಸಿಎಂ ಈಡೇರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ ಬೇಸರ ವ್ಯಕ್ತಪಡಿಸಿದ ಸಚಿವರು, ಬಿಜೆಪಿಯಲ್ಲಿ ಯಾರು ಯಾರಿಗೂ ಅಡ್ಡಗಾಲು ಹಾಕಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡಿಯೇ ಎಂಟಿಬಿ ಚುನಾವಣೆಯಲ್ಲಿ ಸೋತರು ಎಂದು ಹೇಳಿದರು.

  • ಬೆಂಗ್ಳೂರಲ್ಲಿ ನಡೆದಿದ್ದು ಅತೃಪ್ತರ ಸಭೆ ಅಲ್ಲ: ಎಸ್.ಟಿ ಸೋಮಶೇಖರ್

    ಬೆಂಗ್ಳೂರಲ್ಲಿ ನಡೆದಿದ್ದು ಅತೃಪ್ತರ ಸಭೆ ಅಲ್ಲ: ಎಸ್.ಟಿ ಸೋಮಶೇಖರ್

    – ಡಿಕೆಶಿ ವಿರುದ್ಧ ಎಸ್‍ಟಿಎಸ್ ಗುಡುಗು

    ಮೈಸೂರು: ಮೊನ್ನೆ ಬೆಂಗಳೂರಿನಲ್ಲಿ ನಡೆದಿರುವ ಬಿಜೆಪಿ ಶಾಸಕರ ಸಭೆ ಅತೃಪ್ತರ ಸಭೆ ಅಲ್ಲ. ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರನಿಗೆ ರಾಜ್ಯಸಭಾ ಟಿಕೆಟ್ ಕೊಡಿಸಲು ಶಾಸಕರ ಒಟ್ಟಾಗಿ ಸೇರಿಸಿದ್ದಾರೆ ಅಷ್ಟೆ. ಈ ಸಭೆ ಸಿಎಂ ವಿರುದ್ಧ ಅಲ್ಲ ಎಂದು ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತಮ್ಮವರ ವಿಧಾನಪರಿಷತ್ ನೇಮಕ ಹಾಗೂ ರಾಜ್ಯಸಭೆ ಟಿಕೆಟ್‍ಗಾಗಿ ಒತ್ತಡ ಹೇರಲು ನಡೆದಿರುವ ಸಭೆ ಇದು. ಈ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಅಲ್ಲಿ ಚರ್ಚೆ ಆಗಿಲ್ಲ ಎಂದರು. ಎಚ್. ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಶಂಕರ್ ಮೂವರಿಗೂ ವಿಧಾನ ಪರಿಷತ್ ನೇಮಕ ಮಾಡಬೇಕು. ಈ ಬಗ್ಗೆ ಸಿಎಂಗೆ ಹೇಳಿದ್ದೇವೆ. ನಾವೆಲ್ಲ ಶಾಸಕರು ಈ ಮೂವರ ಪರ ಇದ್ದೇವೆ ಎಂದು ಸ್ಪಷ್ಟಪಡಿಸಿದರು.

    ಆಪರೇಷನ್ ಕಾಂಗ್ರೆಸ್ ವಿಚಾರದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ಡಿ.ಕೆ. ಶಿವಕುಮಾರ್ ಇನ್ನೂ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರವೇ ಸ್ವೀಕರಿಸಿಲ್ಲ. ಮೊದಲು ಅವರ ಪಕ್ಷದ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳಲಿ. ಆಮೇಲೆ ಉಳಿದದ್ದು ನೋಡಲಿ. ಬಿಜೆಪಿಯಲ್ಲಿ ಅತೃಪ್ತರು, ಅಸಮಾಧಾನಿತರು ಎಂಬುದಿಲ್ಲ ಎಂದು ಹೇಳಿದ್ದಾರೆ.

  • ಮೈಸೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

    ಮೈಸೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

    – ಈ ಹಿಂದಿನಂತೆಯೇ ಲಾಕ್‍ಡೌನ್
    – ರೆಡ್ ಜೋನ್‍ನಲ್ಲಿರುವ ಹಿನ್ನೆಲೆ ಕ್ರಮ

    ಮೈಸೂರು: ಜಿಲ್ಲೆಯಲ್ಲಿ ಯಾವುದೇ ರೀತಿಯ ಲಾಕ್‍ಡೌನ್ ನಿಯಮಗಳ ಸಡಿಲಿಕೆ ಇಲ್ಲ. ಕೇವಲ ಕಂಟೈನ್ಮೆಂಟ್ ಬಡಾವಣೆಗಳಲ್ಲಿ ಮಾತ್ರ ಲಾಕ್ ಡೌನ್ ನಿಯಮ ಅನ್ವಯ ಎನ್ನುವ ಸುದ್ದಿ ಸುಳ್ಳು. ಇಡೀ ಮೈಸೂರು ಜಿಲ್ಲೆಗೆ ಲಾಕ್‍ಡೌನ್ ನಿಯಮ ಅನ್ವಯವಾಗಲಿದ್ದು, ಹಿಂದಿನ ರೀತಿಯಲ್ಲೇ ಜಾರಿಯಲ್ಲಿರುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಕೊರೊನಾ ಪ್ರಕರಣ ಹೆಚ್ಚಿರುವ ಹಿನ್ನಲೆಯಲ್ಲಿ ಮೈಸೂರಲ್ಲಿ ಯಾವುದೇ ಸಡಿಲಿಕೆ ಮಾಡುತ್ತಿಲ್ಲ. ಮೈಸೂರು ರೆಡ್ ಜೋನ್‍ನಲ್ಲಿದ್ದು, ನಿಯಮಗಳಲ್ಲಿ ಯಾವುದೇ ಸಡಿಲಿಕೆ ಮಾಡಬೇಡಿ. ಮೇ 3 ರವರೆಗೂ ಕಠಿಣ ನಿಯಮವೇ ಜಾರಿಯಲ್ಲಿ ಇರಲಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

    ಕಂಟೈನ್ಮೆಂಟ್ ಬಡಾವಣೆಗಳ ಬಿಟ್ಟು ಉಳಿದ ಬಡಾವಣೆಗಳಲ್ಲಿ ನಿಯಮ ಸಡಿಲಿಕೆ ಮಾಡಿಲ್ಲ. ಮೈಸೂರು ನಗರ, ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕಠಿಣ ನಿಯಮ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

  • ಕೊರೊನಾ ಮಧ್ಯೆ ಸಚಿವರ ಕಿತ್ತಾಟ – ಏಕವಚನದಲ್ಲೇ ಸೋಮಶೇಖರ್, ನಾರಾಯಣಗೌಡ ವಾಗ್ವಾದ

    ಕೊರೊನಾ ಮಧ್ಯೆ ಸಚಿವರ ಕಿತ್ತಾಟ – ಏಕವಚನದಲ್ಲೇ ಸೋಮಶೇಖರ್, ನಾರಾಯಣಗೌಡ ವಾಗ್ವಾದ

    ಬೆಂಗಳೂರು: ಸಚಿವರ ಸಭೆಯಲ್ಲಿ ಏರು ಧ್ವನಿಯಲ್ಲಿ, ಏಕವಚನದಲ್ಲೇ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ನಾರಾಯಣಗೌಡ ಕಿತ್ತಾಡಿಕೊಂಡಿದ್ದಾರೆ.

    ವಿಕಾಸಸೌಧದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ಇಬ್ಬರು ಸಚಿವರು ಕಿತ್ತಾಡಿಕೊಂಡಿದ್ದಾರೆ. ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಮಶೇಖರ್ ಹಾಗೂ ನಾರಾಯಣಗೌಡ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಲಾಕ್‍ಡೌನ್ ವಿಚಾರದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಸುಗಮ ಸಾಗಾಟ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಹೋಗೋ, ಬಾರೋ ಎಂದು ಏಕವಚದಲ್ಲಿ ಸಚಿವರು ಜಗಳವಾಡಿದ್ದಾರೆ.

    ಇತ್ತ ನನ್ನ ಇಲಾಖೆಯಲ್ಲಿ ನೀನು ಹಸ್ತಕ್ಷೇಪ ಮಾಡಬೇಡವೆಂದು ನಾರಾಯಣಗೌಡ ಎಚ್ಚರಿಕೆ ಕೊಟ್ಟರೆ, ಅತ್ತ ನಾನು ಸಹಕಾರ ಸಚಿವ. ನನಗೆ ಕೃಷಿ ಉತ್ಪನ್ನಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಈ ವೇಳೆ ಇಬ್ಬರು ಸಚಿವರ ನಡುವಿನ ಕಿತ್ತಾಟವನ್ನು ಇತರೆ ಸಚಿವರು ಮೌನ ಪ್ರೇಕ್ಷಕರಾಗಿ ನೋಡುತ್ತಿದ್ದರು. ಆ ಬಳಿಕ ಇಬ್ಬರನ್ನು ಸಮಾಧಾನಪಡಿಸುವಲ್ಲಿ ಡಿಸಿಎಂ ಅಶ್ವತ್ಥ್‌ನಾರಾಯಣ್ ಹೈರಾಣರಾಗಿದ್ದು, ಸಚಿವರ ನಡುವೆ ಕಿತ್ತಾಟ ಜೋರಾಗುತ್ತಿದ್ದಂತೆ ಸಭಾಂಗಣದ ಬಾಗಿಲನ್ನು ಸಿಬ್ಬಂದಿ ಮುಚ್ಚಿದರು.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್ಥ್‌ನಾರಾಯಣ್, ಇಂದಿನ ಸಭೆಯಲ್ಲಿ ಅಂತದ್ದು ಏನು ಆಗಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಎಲ್ಲದರಲ್ಲೂ ಇರತ್ತೆ ಬಿಡಿ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸೋಮಶೇಖರ್ ಅವರು, ಇದೆಲ್ಲಾ ಸಣ್ಣ ಪುಟ್ಟ ಆಂತರಿಕ ವಿಚಾರವಷ್ಟೇ. ಇಲಾಖೆಯಲ್ಲಿ ಆಂತರಿಕ ವಿಷಯಗಳಲ್ಲಿ ಅಸಮಾಧಾನ ಇದೆ. ಹೀಗಾಗಿ ಸಭೆಯಲ್ಲಿ ಇಬ್ಬರ ನಡುವಿನ ಮಾತಿನ ವಾಗ್ವಾದ ಜೋರಾಯ್ತು ಎಂದು ಕೊನೆಗೂ ಇಬ್ಬರು ಸಚಿವರ ನಡುವಿನ ಅಸಮಾಧಾನವನ್ನ ಸೋಮಶೇಖರ್ ಒಪ್ಪಿಕೊಂಡರು.